ಗುರುವಾರ, ಜನವರಿ 31, 2019

746. ಮಕ್ಕಳ ಕವನ-11 ಮಕ್ಕಳೇ ಕೇಳಿರಿ

ಮಕ್ಕಳಿಗೆ..

ಕೇಳಿರಿ ಮಕ್ಕಳೆ ಹೇಳುವೆ ನಿಮಗೆ
ಗಿಡಮರ ಕಡಿಯಲು ಬೇಡಿ
ಗಿಡವನು ನೆಟ್ಟು ಗೊಬ್ಬರ ಹಾಕಿ
ನಿತ್ಯವೂ ನೀರನು ನೀಡಿ...
ಲಾಲಾಲಾಲಾ...

ಮಣ್ಣದು  ನಮಗೆ ಅನ್ನವ ನೀಡುವ
ರೈತನ ಬೆಣ್ಣೆಯ ಹಾಗೆ..
ವಿಷವನು ಹಾಕಿ ಮಣ್ಣನು ಕೆಡಿಸಿ
ಪಡುವುದು ಬೇಡ ಬೇಗೆ..//
ಲಾಲಾಲಾಲಾ

ಚಾಕ್ಲೇಟ್ ಲೇಸ್ ಚಿಪ್ಸನು ತಿಂದು
ಪ್ಲಾಸ್ಟಿಕ್ ಬಿಸಾಕದಿರಿ ಬದಿಗೆ..
ಕಸದ ಡಬ್ಬವನು ಉಪಯೋಗಿಸಿ ಎಂದೂ
ಸ್ವಚ್ಛತೆಯಲಿ ಕೈ ಜೋಡಿಸಿ...
ಲಾಲಾಲಾಲಾ..

ಇಂದಿನ ಮಕ್ಕಳು ನಾಳಿನ ಹಿರಿಯರು
ಪಡೆಯಿರಿ ವಿದ್ಯೆಯ ಸರಿಯಾಗಿ
ದೊಡ್ಡ ಗುರಿಯಿರಲಿ, ದೂರದ ಕನಸಲಿ
ಬೆಳೆಯಿರಿ ಸಮಾಜಕೆ ನೆರಳಾಗಿ
ಬೆಳೆಯಿರಿ ಪರೋಪಕಾರಿಗಳಾಗಿ..
ಲಾಲಾಲಾಲಾ..
@ಪ್ರೇಮ್@

745.ಭಾವಗೀತೆ-7 ಕೊಡಗಿನ ಪರಿ

ಕೊಡಗಿನ ಪರಿ

ತಾಯೆ ನಿನ್ನ ಮುನಿಸಿನಲಿ
ಕೊಡಗು ಹೋಯಿತು ಕೊಚ್ಚಿ..
ಜನರ ಜೀವನವಾಯ್ತು ನುಚ್ಚು
ಹೆಣಗಬೇಕಾಯ್ತು ಬದುಕು..//

ಏನೀ ತರ ಪರಿಯ ಮಳೆಯು
ನಿಂತು ನಿಲ್ಲದ ಧರೆಯು
ಉರುಳಿದವು ಮನೆ ಮಠವು
ದಾರಿ, ಬೆಟ್ಟವು ತುಂಡಾದವು//

ನೀರು ಉಕ್ಕಿತು, ಗಾಳಿ ಬೀಸಿತು
ತಿರೆಯು ಶಕ್ತಿಯಲಿ ಸೋತಿತು..
ಪ್ರಾಣಿ ಪಕ್ಷಿ ಜೀವ ಜಂತುವು
ನಿನ್ನ ಪಾದವ ಸೇರಿತು...//

ಮನೆಯು ತೇಲಿತು, ಮನವು ಬಾಡಿತು
ಮಾಡಿದೆಲ್ಲವು ಹೋಯಿತು..
ಚಲನೆ ನಿರಂತರ, ಗಳಿಗೆ ಕ್ಷಣವೂ
ಪ್ರಕೃತಿ ಶಕ್ತಿಯ ತೋರಿತು...//

ಮೌನವಾದ ಮಾತೆಯೂ ಒಮ್ಮೆ
ತನ್ನ ಕೋಪವ ಹೊರಗೆಡಹ್ವಳು
ಮಕ್ಕಳ ತಪ್ಪನು ಕ್ಷಮಿಸಿ ಕೊನೆಯಲಿ
ಚಾಟಿಯಲೆರಡು ಬಿಗಿವಳು...//
@ಪ್ರೇಮ್@
1.2.2019

ಬುಧವಾರ, ಜನವರಿ 30, 2019

744. ಭಾವಗೀತೆ-6 ಮನಸೋತೆ

ಮನಸೋತೆ

ನನ್ನ ಚೆಲುವೆ ನಿನ್ನ ಹಸಿರ ಸಿರಿಗೆ ಮನವ ಸೋತ ರವಿ ನಾನು //
ಬಾನ ಬಯಲಲಿ ಬಂದು
ಇಣುಕಿಣುಕಿ ಹೋಗಲಾರದೆ
ಸಂಜೆವರೆಗೂ ನಿನ್ನ ನೋಡುತಲಿ ಕಾದೆ ನಾನು..

ನೀನು ಸಿಗದೆ ಬೇಸರದಿ
ಶರಧಿಯೊಳಗೆ ಬಿದ್ದುಬಿಟ್ಟೆ ನಾನು..
ನಿನ್ನರಸಿ ಬರುತಲಿರಳು ಸಿಕ್ಕ
ಸಂಧ್ಯೆಯನು ಜಾಡಿಸಿ ಬಿಟ್ಟೆ ನಾನು..

ಬೆಳ್ಳಂಬೆಳಗಿನ ಬಂಗಾರದವರ್ಣದ
ತುಂಬು ಕಿರಣಗಳ ಕಾಂತಿಯ ಬಿಟ್ಟು
ಹೊಳೆವ ನಿನ್ನ ನಗುಮೊಗವನು
ನೋಡಲೆಂದು ಬಂದೆ ನಾನು..//

ಮನದ ತುಂಬ ನಿಂದ ಪೃಥ್ವಿ
ಬರ, ಪ್ರವಾಹದಿ ನೊಂದ ಇಳೆಯೆ
ನನ್ನ ಚೆಲುವೆ ಹಸಿರ ಧರೆಯೆ
ನಿನ್ನ ಮರೆತು ಹೇಗಿರಲೇ..//
@ಪ್ರೇಮ್@
31.01.2019

743. ಭಾವಗೀತೆ-20 ವಜ್ರಕಾಯ

ವಜ್ರಕಾಯ

ನವರಂಧ್ರದ ಕೋಟೆಯಿದು
ನಮ್ಮ ವಜ್ರಕಾಯವಿದು
ಜಗ್ಗದು ಬಿಸಿಗೂ ತಣಿವಿಗೂ..
ಬೇಸರದಿ ಬೆಂಡಾಗಿ, ನಲಿವಲಿ ಕುಣಿದಾಡಿ
ಸಂತಸದಿ ನಲಿದಾಡಿ...

ಖುಷಿಯಲಿ ಹಿಗ್ಗಿ
ಅಳುವಲಿ ಕುಗ್ಗಿ, ದುಃಖದಿ ತಗ್ಗಿ
ಅಧೈರ್ಯದಿ ಬಗ್ಗಿ, ಭಂಡ ಧೈರ್ಯದಿ ನುಗ್ಗಿ...

ಸೋತು, ಗೆದ್ದು, ಎದ್ದು , ಬಿದ್ದು
ಬೈದು, ಬೈಸಿಕೊಂಡು, ದುಡುಕಿ
ಕೊಡವಿ ಮೇಲೆದ್ದು, ಕಲಿತು, ಕಲಿಸಿ
ಕೊಳೆತು, ಕಲೆತು, ತೊಳೆದು, ತುಂಬಿಸಿ...

ಬೆರೆತು, ಬೆರೆಯದೆ, ಸೆಳೆದು, ಸೆಳೆಯದೆ
ಬಾಡಿ, ಬರಡಾಗಿ, ಮುದದಿ ಅಹಂಕಾರದಿ
ಮನದಿ, ಹೃದಯದಿ, ಕರ್ಮ ಮರ್ಮದಿ
ದೇವಗಂಜಿ, ಹಿರಿಯರಿಗೆ ಹೆದರುವ, ಹೆದರದ ದೇಹವಿದು.
@ಪ್ರೇಮ್@
30.1.2019

742. ಮಕ್ಕಳ ಕವನ -10 ಬಟ್ಟೆ

ಬಟ್ಟೆ

ಯೂನಿಫಾರ್ಮು ಶಾಲೆಯೊಳಗೆ
ಅಂಗಿ ಚಡ್ಡಿ ಮನೆಯ ಒಳಗೆ
ಪ್ಯಾಂಟು ಶರ್ಟು ಜಾತ್ರೆಗಳಿಗೆ
ಸೂಟು ಬೂಟು ಮದುವೆಯೆಡೆಗೆ..

ಸಣ್ಣ ಬಟ್ಟೆ ತುಂಬಾ ಬಿಸಿಲಕಾಲಕೆ
ಉಣ್ಣೆ ಸ್ವೆಟರು ಚಳಿಯ ಝಳಕೆ
ಹತ್ತಿ ಬಟ್ಟೆ ಸೆಕೆಯ ಕಡೆಗೆ
ರೈನು ಕೋಟು ಮಳೆಯಾಟಕೆ..

ಗಮ್ ಬೂಟು ಗುಡ್ಡದೆಡೆಗೆ
ಸಾದಾ ಚಪ್ಪಲಿ ತೋಟದೆಡೆಗೆ
ಕೈ ಗಳಲಿ ಗ್ಲೌಸ್ ಗಳು ಸ್ವಚ್ಛತೆಗೆ
ಮಂಕಿ ಕ್ಯಾಪ್ ಕಿವಿಯ ಕಡೆಗೆ..

ಮೊಬೈಲಿಗೂ ಕವರು ಬೇಕು
ಕಾಲುಗಳಿಗೂ ಸಾಕ್ಸ್ ಸಾಕು
ತುಂಬಿಹುದು ಮನೆಯ ರ್ರ್ಯಾಕು
ಎಲ್ಲ ಕಡೆ ಬಟ್ಟೆ ಪ್ಯಾಕು...//

@ಪ್ರೇಮ್@
30.1.2019

742. ಮಕ್ಕಳ ಕವನ -10 ಬಟ್ಟೆ

ಬಟ್ಟೆ

ಯೂನಿಫಾರ್ಮು ಶಾಲೆಯೊಳಗೆ
ಅಂಗಿ ಚಡ್ಡಿ ಮನೆಯ ಒಳಗೆ
ಪ್ಯಾಂಟು ಶರ್ಟು ಜಾತ್ರೆಗಳಿಗೆ
ಸೂಟು ಬೂಟು ಮದುವೆಯೆಡೆಗೆ..

ಸಣ್ಣ ಬಟ್ಟೆ ತುಂಬಾ ಬಿಸಿಲಕಾಲಕೆ
ಉಣ್ಣೆ ಸ್ವೆಟರು ಚಳಿಯ ಝಳಕೆ
ಹತ್ತಿ ಬಟ್ಟೆ ಸೆಕೆಯ ಕಡೆಗೆ
ರೈನು ಕೋಟು ಮಳೆಯಾಟಕೆ..

ಗಮ್ ಬೂಟು ಗುಡ್ಡದೆಡೆಗೆ
ಸಾದಾ ಚಪ್ಪಲಿ ತೋಟದೆಡೆಗೆ
ಕೈ ಗಳಲಿ ಗ್ಲೌಸ್ ಗಳು ಸ್ವಚ್ಛತೆಗೆ
ಮಂಕಿ ಕ್ಯಾಪ್ ಕಿವಿಯ ಕಡೆಗೆ..

ಮೊಬೈಲಿಗೂ ಕವರು ಬೇಕು
ಕಾಲುಗಳಿಗೂ ಸಾಕ್ಸ್ ಸಾಕು
ತುಂಬಿಹುದು ಮನೆಯ ರ್ರ್ಯಾಕು
ಎಲ್ಲ ಕಡೆ ಬಟ್ಟೆ ಪ್ಯಾಕು...//

@ಪ್ರೇಮ್@
30.1.2019

ಮಂಗಳವಾರ, ಜನವರಿ 29, 2019

741. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-30

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-30

    ನಿಮಗೆಲ್ಲಾ  ಋಣಾತ್ಮಕ ಮತ್ತು ಧನಾತ್ಮಕ ಆಲೋಚನೆಗಳ ಬಗ್ಗೆ ಸ್ವಲ್ಪ ಹೇಳೋಣಾಂತ ಈ ವಾರ. ಬದುಕು ಕಟ್ಟುವ ಕಾರ್ಯ ಧನಾತ್ಮಕ ಆಲೋಚನೆಗಳಿಂದಾದರೆ ಬದುಕು ಮುರಿಯುವ ಕಾರ್ಯ ಋಣಾತ್ಮಕ ಆಲೋಚನೆಗಳಿಂದ ಆಗುತ್ತದೆ. ಯಾರಾದರೂ ಉತ್ತಮ ಕಾರ್ಯ ಮಾಡಲು ಹೊರಟರೆ, "ಅವನಿಗೆ ಹುಚ್ಚು ಹಟ, ಅದನ್ನವ ಮಾಡ್ಲಿಕ್ಕುಂಟಾ..." ಹೀಗೆ ಹೇಳುವವರೇ ಹೊರತು ಪ್ರಯತ್ನಿಸು ಎಂದು ಹುರಿದುಂಬಿಸುವವರು ಕಡಿಮೆಯೇ..
    ಧನಾತ್ಮಕವಾಗಿ ಆಲೋಚಿಸುವವನು ಬೆಳೆಯುತ್ತಾ ಹೋಗುವನು. ಋಣ ಎಂದರೇನೇ ಕಳೆ ಎಂದರ್ಥ. ಋಣ ಆಲೋಚನೆಗಳು ಬಂದರೆ ಜೀವನವೂ ಋಣವಾಗುತ್ತಾ, ಏರುವ ಬದಲು ನಾವು ಇಳಿಯಲು ಪ್ರಾರಂಭಿಸುತ್ತೇವೆ. ಮನಗಳನ್ನು, ಕಾರ್ಯಗಳನ್ನು, ಸಾಧನೆಗಳನ್ನು ಗೌರವಿಸಲು, ಉತ್ತೇಜಿಸಲು ಕಲಿಯಬೇಕಿದೆ ನಾವಿನ್ನೂ. ನಾವಿಂದು ದೂರುವುದು, ತಪ್ಪುಗಳನ್ನು ಹುಡುಕುವುದರಲ್ಲೆ ಮೈಮರೆತಿದ್ದೇವೆ. ಬೇರೆಯವರನ್ನು ಹೊಗಳುವುದೆಂದರೆ ನಮಗೆ ಅಲರ್ಜಿ. ಬದಲಾಗಿ ಇತರರ ಬಗ್ಗೆ ಬೇಡದ ಕೀಳು ಮಾತನಾಡುವುದರಲ್ಲೆ ಸಂತಸ ಪಡುವವರು ಅನೇಕರಿಹರು.
   ಅದು ತಪ್ಪು. ಬದಲಾಗಿ ಯಾರೇನೇ ಹೊಸದನ್ನು ಮಾಡಲು ಹೊರಡಲಿ, ನಾವದನ್ನು ಪ್ರೋತ್ಸಾಹಿಸಲು ಕಲಿಯೋಣ. ನಮ್ಮ ಜೀವನದಲ್ಲಿ ಪ್ರತಿಯೊಬ್ಬರಲ್ಲಿ ದೊರೆಯುವ ಒಳ್ಳೆಯತನವನ್ನು ಕಲಿಯೋಣ.
  ನಮ್ಮ ಕೆಟ್ಟ ಗುಣಗಳು ಅನ್ನಿಸಿದ್ದನ್ನು ತೊರೆಯೋಣ. ಇತರರನ್ನು ಗೌರವಿಸಲು ಕಲಿಯೋಣ. ಪ್ರತ್ಯಕ್ಷ ನೋಡಿದರೂ ಪರಾಂಬರಿಸಿ ನೋಡು ಎಂಬ ಗಾದೆಯಂತೆ ಇತರರನ್ನು ಕೆಣಕದೆ, ಅವರನ್ನು ಬದುಕಲು ಬಿಟ್ಟು ನಾವೂ ಬದುಕೋಣ.
ಉದಾತ್ತ ಆಲೋಚನೆಗಳನ್ನು ಬೆಳೆಸಿಕೊಂಡು, ಉದಾತ್ತ ಮಾತುಗಳನ್ನಾಡುತ್ತಾ, ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಂಡು ನಾವೇ ನಮ್ಮ ಜೀವನವನ್ನು ಎತ್ತರೆತ್ತರಕ್ಕೆ ಕೊಂಡೊಯ್ಯೋಣ. ನೀವೇನಂತೀರಿ?
@ಪ್ರೇಮ್@

740.ಭಾವಗೀತೆ-6 ನಗಬೇಡ

ನಗಬೇಡ

ನಗಬೇಡ ನಗಬೇಡ ನಗಬೇಡ ಎಂದೂ
ಕರಿ ಹೃದಯ ಒಳಗಿಟ್ಟು ಭಾವಗಳ ಬದಿಗಿಟ್ಟು...//ನಗಬೇಡ//

ನೋವನ್ನು ಅದುಮಿಟ್ಟು, ಬೇಸರವ ಸರಿಬಿಟ್ಟು
ಬಾಳಿನ ಉಯ್ಯಾಲೆಯ ತೂಗುವುದ ಕೈಬಿಟ್ಟು..
ಮೋಸದ ಬಲೆಯೊಳಗೆ ಬೀಳುತಲಿ ತಲೆಕೊಟ್ಟು
ಹಣದಾಹಕಾಗಿ ಮರ್ಯಾದೆ ಬಲಿಕೊಟ್ಟು//ನಗಬೇಡ//

ವಂಚನೆಯ ಮಾಡುತಲಿ ಪರರನ್ನು ನಿಂದಿಸುತ
ಇತರರಿಗೆ ಉಪಕಾರ ಮಾಡದೆಯೆ ನಲಿಯುತ
ತನ್ನಂತೆ ಪರರೆಂಬ ಮಾತನ್ನು ಅರಿಯದೆಯ
ಇತರರ ಅಣಕಿಸುತ, ತಾನೆಂದು ಮೆರೆಯುತ//ನಗಬೇಡ//

ತಪ್ಪನ್ನು ಮುಚ್ಚುತಲಿ, ಸುಳ್ಳನ್ನು ಅದುಮುತ
ಮನದೊಳಗಿನ ಕೊಳ್ಳಿಯ ನೀರುಣಿಸಿ ತಣಿಸುತ
ಬಯಲಲ್ಲಿ ಆಡುವ ಮಗುವಿನ ಉತ್ಸಾಹದಿ
ನೀನಿಲ್ಲಿ ಬಂದಿಹುದು ಸಾಧನೆಯ ಮಂತ್ರದಿ//ನಗಬೇಡ//

@ಪ್ರೇಮ್@
29.01.19

738. ಆಶಯ

ಕಳೆಯಲಿ

ಹಿರಿ-ಕಿರಿಯರ ಮೊಗದಲಿ
ಮಂದಹಾಸ ಮೂಡಲಿ
ಜನರ ಬಾಳ ಬಂಡಿಯಲ್ಲಿ
ಕಷ್ಟವೆಲ್ಲ ಕಳೆಯಲಿ..

ಭಯದ ವಾತಾವರಣ ಹೋಗಿ
ಸತ್ಯ ಬೆಳಕು ಬೆಳಗಲಿ
ಮನದ ಕಸವನ್ನೆಲ್ಲ ಗುಡಿಸಿ
ಬದುಕ ಕತ್ತಲು ಸರಿಸಲಿ...

ಬೇಧ ಭಾವವೆಲ್ಲ ಅಳಿಸಿ
ಜಾತಿ ಮತವು ತೊಲಗಲಿ
ಮನದ ಪರದೆ ಸರಿಸಿ ಬಂದು
ಪ್ರೇಮ ಕಾವ್ಯ ಚಿಗುರಲಿ..

ದ್ವೇಷವೆಲ್ಲ ಕರಗಿ ಹೋಗಿ
ಸಾಮರಸ್ಯ ಹೆಚ್ಚಲಿ
ನಾಡು ನುಡಿಯ ಗೌರವವು
ಬಳಸಿ, ಉಳಿಸಿ ಉದಿಸಲಿ..
@ಪ್ರೇಮ್@

737. ಗಝಲ್-65

ಉದಾ

ಗಝಲ್

ನನ್ನ ಕಣ್ಣಿನ ಕಾಂತಿ ನೀ ನನ್ನ ಮಗುವೇ
ಬಳಿಗೆ ಬಂದು ಕೂರುತಿ ನೀ ನನ್ನ ಮಗುವೇ//

ಎಲ್ಲ ರಲು ನಾನಿಂದು ನಿನ್ನನೇ ಕಾಣುವೆ
ಆಟ ಪಾಠದಿ ಮುಳುಗಿರುತಿ ನೀ ನನ್ನ ಮಗುವೇ//

ಮೌನ ಬೇಡವೆ ಎಂದೂ ನನ್ನ ಹೃದಯದ ಒಡವೆ
ನನ್ನ ಜೀವದಲೀ ಶಕ್ತಿ ನೀ ನನ್ನ ಮಗುವೇ//

ಬದುಕ ಶೃಂಗಾರವೂ ನೀನೇ ಆಗಿರುವೆ
ಮುದ್ದು ಮೊದ್ದಿನ ಪ್ರೀತಿ ನೀ ನನ್ನ ಮಗುವೇ//

ಬಾಳ ದೀಪವ ಕೈಗಳಲಿ ಬೆಳಗುತಲಿ ಇರುವೆ
ನೂರ್ಕಾಲ ಬಾಳು, ತಾ ಕೀರ್ತಿ ನೀ ನನ್ನ ಮಗುವೇ//

ಗಗನದ ತಾರೆಯಂತೆ ನೀ ಬೆಳಗುವೆ
ಒಳ್ಳೆ ಗುಣಗಳ ಕಲಿಯುತಿ ನೀ ನನ್ನ ಮಗುವೇ//

ರಾತ್ರಿ ಹಗಲು ಎಲ್ಲಾ ಪ್ರೇಮದಿ  ಮನದೊಳಿರುವೆ
ಬೆಳಗುತಿರುವ ಜ್ಯೋತಿ ನೀ ನನ್ನ ಮಗುವೇ//
@ಪ್ರೇಮ್@

736. ಭಾವಗೀತೆ-5. ನೆನಪುಗಳಿಗೆ

ಭಾವಗೀತೆ

ಹೋಗಿ ನೆನಪುಗಳೆ ಹೋಗಿ
ನನ್ನೊಲವ ಬಳಿ ಹೋಗಿ
ನನ್ನ ಹಾಗೆ ಅವಳೆದೆಗೂ
ಕಚಗುಳಿಯ ಹಾಕಿ ತಣಿಸಿ!//

ಮೊದಲ ನಾಚಿಕೆಯ ತಿಳಿಸಿ
ಮೊದಲ ನೋಟವ ಅರಸಿ
ಮೊದಲ ನಗೆಯನು ನೆನೆಸಿ
ಮನದಿ ಪುಳಕವ ತರಿಸಿ...

ಬೇಸರದ ಛಾಯೆಯನು
ಬದುಕಿಂದ ದೂರ ಸರಿಸಿ
ನೋವಿನೆಳೆಗಳಲಿ ನಗುವ
ಎಡೆಬಿಡದೆ ಪೋಣಿಸಿ...

ಮುಖದ ಕಾಂತಿಯ ತರಿಸಿ
ಕಣ್ಣ ಕಿಡಿಯನು ಬೆಳಗಿ
ಮೌನಧಾರೆಯ ಮರೆಸಿ
ಖುಷಿಯ ಕ್ಷಣಗಳ ಬೆಳೆಸಿ...

@ಪ್ರೇಮ್@
30.1.2019

ಭಾವಗೀತೆ

@ಪ್ರೇಮ್@
30.1.2019

ಕವಯತ್ರಿ ಇಲ್ಲಿ ನೆನಪುಗಳ ಹಾರಿ ಬಿಟ್ಟಿದ್ದಾರೆ....ವಿರಹ ಭಾವದಿ ನೊಂದಿರುವ ಅವನೇ ಕವಿತೆಗೆ ನಾಯಕ...

ಹೊರಟು ಬಿಡಿ ನೆನಪುಗಳೇ..ಅವಳೆಲ್ಲೇ ಅಡಗಿದ್ದರೂ ಹುಡುಕಿ...ನಮ್ಮ ಮೊದಲಿನ ಸರಸ, ಸಮಾಗಮದ ಹಳೆಯ ಮಧುರ ನೆನಪುಗಳ ನನ್ನಲ್ಲಿ ಮತ್ತೆ ಮತ್ತೆ ನೆನಪಿಸಿ ರೋಮಾಂಚನ ಉಂಟುಮಾಡುವಿರಲ್ಲ.
ಓ ನೆನಪುಗಳೇ ಅವಳ ಮನವನ್ನೊಮ್ಮೆ ನೀವು ಆಕ್ರಮಿಸಿಕ್ಕೊಂಡು ಅವಳಿಗೆ ಕಚಗುಳಿ ಇಟ್ಟುಬಿಡಿ.....ಅವಳು ಮನಸಾರೆ ನಗಲಿ...

ಮೊದಲು ನಾಚಿಕೆ ಪಟ್ಟ ,ಸಂಕೋಚಪಟ್ಟ ಕ್ಷಣಗಳನ್ನು ನೆನಪಿಸಿ..
ಆ ಬಳಿಕ ಮೊದಲ ನಗುವಿನ ಸಂದರ್ಭವನ್ನು ನೆನಪಿಸಿ ಬಿಡಿ..

ವಿರಸದ ವಿದ್ಯಮಾನಗಳನ್ನಯ ವಿಂಗಡಿಸಿ ಸರಸವನ್ನು ಮಾತ್ರ ನೆನಪಿಸಿ....ನೋವಿನ ಭಾವಗಳಲ್ಲಿ ನಗುವನ್ನೋ ಪೋಣಿಸಿಡಿ...

ಒಟ್ಟಾರೆ ಅವಳು ನಗಬೇಕು, ಅವಳ ಮುಖದ ಕಾಂತಿ ಹೆಚ್ಚಬೇಕು..ಅವಳು ಮೌನ ಮುರಿದು ಮಾತಿಗಿಳಿಯಬೇಕು..ಖುಷಿಯ ಕ್ಷಣಗಳ ಹೊತ್ತು ಹೊರಟು ಬಿಡಿ ನೆನಪುಗಳೇ ಅನಳೂರಿಗೆ...

ಸೊಗಸಾದ ಭಾವಯಾನ...

ಕವಿಭಾವಕ್ಕೆ ಧಕ್ಕೆ ಆದಲ್ಲಿ ಕ್ಷಮಿಸಿ.

*ಶ್ಯಾಮ್ ಪ್ರಸಾದ್*

735. ನಾವು ಬಾಳುವೆವು

ನಾವು ಬಾಳುವೆವು

ಎಡಗಡೆ ಬಲಗಡೆ ಮಕ್ಕಳ ಕಾವು
ಬಿಟ್ಟು ಹೋದಿರಿ ನಮ್ಮನು ತಾವು
ನಿಮ್ಮಯ ನೆನಪಲೆ ನಾವು ಬದುಕುವೆವು
ತಲೆಯನು ಎಂದೂ ಯಾರಿಗೂ ಬಾಗಲಾರೆವು//೧//

ಸಮಾಜ ಏನಾದರೂ ಹೇಳಿಕೊಳ್ಳಲಿ
ಬಾಳುವ ನಿಯಮವು ತಿಳಿದಿದೆ ನಮಗೆ
ಹೆಣ್ಣು ಮಕ್ಕಳು ಯಾರಿಗೇನು ಕಡಿಮೆ
ಬಾಳುವೆ ದುಡಿಯುತ ಮಕ್ಕಳ ಸಾಕುತ//೨//

ನನ್ನಯ ನೋವು ನನಗೇ ಇರಲಿ
ಮಕ್ಕಳ ಜೀವನ ಖುಷಿಯಲಿ ಕಳೆಯಲಿ
ದುಡಿದು ಗಳಿಸುತ ಕಂದರ ಓದಿಸಿ
ತಮ್ಮಯ ಕಾಲಲಿ ತಾವು ನಿಲ್ಲಲಿ//೩//

ಸಮಾಜದಿ ಅವರು ನೀತಿಯ ಕಲಿಯಲಿ
ತಾಯಿಯ ಋಣವ ಪ್ರೀತಿಯಲಿ ತೀರಿಸಲಿ
ಬಡವರಿಗೆಂದೂ ಸಹಾಯ ಮಾಡಲಿ
ನೆಮ್ಮದಿಯಿಂದ ನೋವನು ಮರೆಯಲಿ//೪//
@ಪ್ರೇಮ್@

739. ಕವನ-ಸಹಿಸಿಕೋ

ಸಹಿಸಿಕೋ

ಉರಿದು ಸುಟ್ಟು ತಾನು ಬೆಂಕಿ
ಬೇಯಲದು ಸಹಕಾರಿಯಲ್ಲವೇ?
ತನ್ನ ತಾನೇ ಸುಟ್ಟುಕೊಂಡ
ದೀಪ ಬೆಳಕ ನೀಡದೆ?

ಕಬ್ಬು ತಾನು ಜಜ್ಜಿ ಹೋಗಿ
ಸಿಹಿಯ ನೀರ ನೀಡದೇ?
ಮೀನು, ಕೋಳಿ,ಆಡು, ಕುರಿಯು
ತಾನು ಸತ್ತು ರುಚಿಯ ಕೊಡದೆ?

ತಂಪು ಗಾಳಿ ಸಾಗಿ ಸಾಗಿ
ಜೀವ ಸೆಲೆಗೆ ಉಸಿರು ಕೊಡದೇ?
ಕೆಂಪು ಸೂರ್ಯ ಉದಯಿಸುತ್ತ
ಚಲನಾ ಭುವಿಯ ರಕ್ಷಿಸದೇ?

ಭೂಮಿ ತಿರುಗಿ ಸೂರ್ಯನತ್ತ
ಹಗಲು -ಇರುಳು ತರುವುದು..
ತಾನು ದುಡಿದು ಪರರಿಗೂ
ಸ್ವಲ್ಪ ಸಹಾಯ ಮಾಡ ಬಾರದೇ?
@ಪ್ರೇಮ್@
30.1.2019

ಸೋಮವಾರ, ಜನವರಿ 28, 2019

734. ಭಯ

ಹೊಸಯುಗ

ಭಯವಿಲ್ಲ ಜನರಿಗೆ
ತಮ್ಮ ಹೆತ್ತವರು, ಹಿರಿಯರ ಕಂಡಾಗ
ಭಯವೇ ಇಲ್ಲ ಜನರಿಗೆ
ಭೂತ, ಭವಿಷ್ಯ, ವರ್ತಮಾನಗಳ ಕಡೆಗೆ...

ಭೂತ, ಪ್ರೇತ, ದೆವ್ವಗಳನ್ನಂತೂ
ಈಗ ನಂಬುವವರೇ ಇಲ್ಲ..
ಧಾರಾವಾಹಿ, ಸಿನೇಮಾ, ನಿಜ ಜೀವನದಲ್ಲೂ
ಅವರು ಅದೇ ಪಾತ್ರ ಮಾಡುತಿರುವರಲ್ಲ!!

ಮನಸಿಗೆ ಇದ್ದರೆ ತಾನೇ
ಆ ದೇವನ ಮೇಲೆ ಭಯ?
ಮಾನವನೇ ದೇವನಾದ ಮೇಲೆ
ಅವನಿಗೇಕೆ ದೇವನ ಅಭಯ?

ಕಡಿಯುವವ, ಕೊಲ್ಲುವವ ಕಟ್ಟುವವ,
ಕೆಡಹುವವ ತನಗೆ ತಾನೇ ಆಗಿರಲು
ಇತರ ಜೀವಿಗಳ ಕೀಳಾಗಿ ಕಾಣುತಿರಲು
ಬುದ್ಧಿವಂತ ಪೆದ್ದು ಜೀವಿಗೆ
ಅದೇತಕೆ ತಾನೇ ಬರಬೇಕು ಭಯ?
@ಪ್ರೇಮ್@
28.01.2019

733. ಭಾವಗೀತೆ-4

ಭಾವಗೀತೆ-
ತನ್ನೊಲವ ನೆನೆಯುತ

ಮುಂಗುರುಳ ಸರಿಸುತಲಿ
ಹಿಂದಿಂದೆ ಆಗಾಗ..
ಮುಂದೆ ಮುಂದೆ ಸಾಗುತಿರುವೆ
ಮಂದ ನಗೆಯ ಚೆಲ್ಲುತ..

ಒಡಲ ಹೂವು ತುಟಿಯ ಮೇಲೆ
ಮನದರಸನ ನೆನೆಯುತ..
ಹೃದಯರಾಗ ಹಾಡುತಿಹುದು
ರಾಗರಸವು ಮೂಡುತ...

ಬಳ್ಳಿಯಲ್ಲಿ ಹಬ್ಬಿ ನಗುವ
ಗುಂಪು ಹೂವಿನಂದದಿ
ಹಲ್ಲು ಸಾಲ ಅಂಟಿಕೊಂಡು
ನಗುವು ಮೂಡಿ ಬಂದಿದೆ...

ಮೌನದಗಲ ನೆನಪು ಮಧುರ
ಭಾವನೆಯಲಿ ಸುಖವು ಅಮರ
ನಗೆಯ ಬಾಣ ತಾಗಿ ತಾನು
ನಲ್ಲ ಬರುವ ಮನದ ಬಳಿಗೆ..
@ಪ್ರೇಮ್@
28.01.2019

ಗುರುವಾರ, ಜನವರಿ 24, 2019

732. ಸ್ವಗತ

ಸ್ವಗತ

ಭೂಮಿಗೆ ಹೆಣ್ಣನು ಹೋಲಿಪರಿಹರು
ನಾನಾರಿಗೆ ಜಗದಲಿ ಹೋಲಿಕೆಯೋ..

ಭಾನಿಗೆ ಪುರುಷರ ಹೋಲಿಸಿ ಕರೆವರು
ಜಗದಿ ನಾನಾರಿಗೆ ಹೋಲಿಕೆಯೋ..

ಹೆಣ್ಣೂ ಅಲ್ಲದೆ ಗಂಡೂ ಅಲ್ಲದೆ
ಸೃಷ್ಟಿಯು ದೇವನ ಜಗದೊಳಗೆ

ಮನುಜನ ಹೃದಯದಿ ಅಸೆಯ ಬಿತ್ತಿ
ದೇಹವ ಬದಲಿಸಿ ಪರೀಕ್ಷಿಪುದೇ..

ಮಂಗಳಮುಖಿಯೆಂಬ ನಾಮವ ಕಟ್ಟಿ
ಬದುಕಲು ಬಿಡದೆ, ಬಾಳಲು ಬಿಡದೆ

ಸತಾಯಿಸುವ ಜನಮನ ಹಲವಾರು...
ವಕ್ರ ದೃಷ್ಟಿಯದು ಎದುರಿಸಬೇಕು  ನೂರಾರು..

ಸೃಷ್ಠಿಪ ದೇವನೆ ನಮ್ಮಯ ತಪ್ಪು
ಏನದು ನಮಗೆ ಇನ್ನೂ ತಿಳಿದಿಲ್ಲ..

ನಿನ್ನಲೆ ಜನನ ನಿನ್ನಲೆ ಮರಣ
ಸಮರಸ, ಸಮಾನತೆ ಬೇಕಲ್ಲವೆ ದೇವಾ..
@ಪ್ರೇಮ್@

731. ಹನಿ-26

ನಿನ್ನೊಳಾನು

ಪ್ರಕೃತಿ ತಾಯಿಯೆ
ನಿನ್ನ ಕಂದನು
ನಿನ್ನೊಳಾನು ಕೇಳೆಯಾ?
ನಿನ್ನ ಉದರದಿ
ಜನಿಸಿ ಬಂದಿಹೆ
ನನಗೆ ದಯೆಯ ನೀಡೆಯಾ?
@ಪ್ರೇಮ್@

ಸಲಹೆನ್ನ

ನಿನ್ನಂತೆ ನಾನು
ನಿನ್ನೊಳಗೆ ನಾನು
ನೀ ಬಿಟ್ಟು ಹೋಗಲು
ಪೊರೆವವರಾರು ಮಾತೆ?
@ಪ್ರೇಮ್@

ಬುಧವಾರ, ಜನವರಿ 23, 2019

730. ಏತಕೆ ಬೇಕು?

ಏತಕೆ ಬೇಕು

ಹೃದಯದಿ ದ್ವೇಷವ ಬೆಳೆಸುತಲಿದ್ದು
ಮನದೊಳು ರಕ್ತವು ಕುದಿಯುತಲಿದ್ದು,
ನಾಲಗೆ ಸವಿಯನು ನುಡಿಯದ ಮೇಲೆ
ದೇಹಕೆ ಶೃಂಗಾರವೇತಕೆ ಹೇಳಿ??

ಭಾವನೆ ಹಿತಕರ ಇಲ್ಲದ ಬದುಕಲಿ
ಮನಸಿನ ನೆಮ್ಮದಿ ಕದಲದೆ ಇದ್ದು
ವಿಧವಿಧ ಭಕ್ಷ್ಯವ ಸವಿದರೆ ಏನು
ಮನದಲಿ ಶೃಂಗಾರವಿಲ್ಲದ ಮೇಲೆ!???

ನವಿಲಿನ ನಾಟ್ಯವನಾಡಿದರೇನು!?
ವೇದಿಕೆಯಲಿ ಬೊಗಳೆ ಬಿಗಿದರೆ ಏನು?
ಹೃದಯದಿ ಪ್ರೀತಿ ಇಲ್ಲದ ಮನುಜಗೆ
ಮುಖ-ಬಟ್ಟೆಯ ಶೃಂಗಾರವೇಕೆ?

ನದಿ ಕಡಲನು ಸೇರುವ ತವಕದಿ
ಗುಣಗಳ ಮನದಲಿ ಸೇರಿಸಬೇಕು
ಇತರಗೆ ಕೆಟ್ಟದು ಬಯಸುವ ದೇಹಕೆ
ಬಾಹ್ಯ ಶೃಂಗಾರವು ಬೇಕೇ ಬೇಕೇ?
@ಪ್ರೇಮ್@

ಮಂಗಳವಾರ, ಜನವರಿ 22, 2019

729. ಗುರುಗಳು

ಗುರುಗಳು

ಗುರುವಿನ ಗುರುವೆ ನೀನು
ಸತ್ಯ ಮಾರ್ಗದಿ ನಡೆದು ನಮಗೆ
ದಾರಿಯ ತೋರಿದೆ ವರವೇ..

ಬಡವಗೆ ಸಹಾಯದ ನಿಧಿಯಾದೆ
ಬಲ್ಲವಗೆ ನೀ ಸನ್ಯಾಸಿಯಾದೆ
ಜನಮಾನಸಕೆ ಗುರುವಾದೆ...

ವಿದ್ಯೆಯ ನೀಡಿ ಸಲಹಿದೆಯಾ
ಜ್ಞಾನವ ನೀಡಿ ಬೆಳಗಿದೆಯಾ
ದಾಸೋಹ ನೀಡಿ ಬೆಳೆಸಿದೆಯಾ..

ನಿನ್ನಯ ಮಡಿಲಿನ ಕಂದರು ನಾವು
ನಿನ್ನಯ ಧೂಳಲಿ ನಡೆವರು ನಾವು
ಕೈ ಮುಗಿದು ಬೇಡುವೆವು ಹರಸೆಮ್ಮನು//

@ಪ್ರೇಮ್@

722. ಮಕ್ಕಳ ಕವನ-9

ಗುರುವಿಗೆ ನಮನ

ಓದಲು ತಿದ್ದಲು
ಬರೆಯಲು ಕಲಿಸಿ
ಬುದ್ಧಿಯ ಬೆಳೆಸಿದ
ಗುರುವಿಗೆ ಶರಣು//

ನಡತೆಯ ತಿಳಿಸಿ
ತಪ್ಪಿಗೆ ಗದರಿಸಿ
ಬೆವರನು ಒರೆಸಿದ
ಗುರುವಿಗೆ ನಮನ//

ಬಿದ್ದಾಗ ಎಬ್ಬಿಸಿ
ಓಡಲು ಕಲಿಸಿ
ಜೀವನ ತೋರಿದ
ಗುರುವಿಗೆ ಶರಣು//

ಬದುಕ ಕನಸನು
ನನಸು ಮಾಡಲು
ಸಹಕರಿಸಿದ ದೇವ
ಗುರುವಿಗೆ ನಮನ//
@ಪ್ರೇಮ್@

724.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-29

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-29

ನಮ್ಮನ್ನಗಲಿಯೂ ಅಗಲದೆ ನಮ್ಮೊಂದಿಗೆ ಚಿರಸ್ಥಾಯಿಯಾಗಿರುವ ಧೀರ್ಘಾಯುಷಿ ಸಿದ್ಧಗ೦ಗಾ ಮಠದ ವರಋಷಿ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಈ ಲೇಖನದ ಮೂಲಕ ಒಂದು ನುಡಿನಮನ.
     ಡಾ. ಎ.ಪಿ.ಜೆ ಅಬ್ದುಲ್  ಕಲಾಂ, ಅಟಲ್ ಬಿಹಾರಿ ವಾಜಪೇಯಿ,ಅನ್ನಾ ಹಜಾರೆ, ಮಹಾವೀರ, ಬುದ್ಧ, ಪೈಗಂಬರರು, ಮದರ್ ತೆರೇಸಾ,ಏಸುಕ್ರಿಸ್ತರು, ಸ್ವಾಮಿ ವಿವೇಕಾನಂದರು.. ಹೀಗೆ ಜನರ ಏಳಿಗೆಗಾಗಿ ಶ್ರಮಿಸುವ ಯಾವ ಮಹಾನ್ ನಾಯಕರನ್ನೂ ಜನ ಜಾತಿ, ಬೇಧ, ಬಡವ-ಬಲ್ಲಿದ, ಪುರುಷ-ಮಹಿಳೆ, ಧರ್ಮ-ದೇಶ ಯಾವುದನ್ನೂ ಲೆಕ್ಕಿಸದೆ, ಪಕ್ಷಾತೀತರಾಗಿ ಅವರ ಒಳ್ಳೆಯ ಗುಣಗಳಿಗಾಗಿ ಅವರನ್ನು ಪ್ರೀತಿಸುತ್ತಾ, ಅವರನ್ನು ಎಲ್ಲಾ ಜನರೂ ತಮ್ಮ ನಾಯಕರಾಗಿ ಸ್ವೀಕರಿಸಿ, ತಮ್ಮ ಮನದಲ್ಲಿ ಅಂಥವರಿಗೆ ಒಂದೊಳ್ಳೆ ಸ್ಥಾನ ಕೊಟ್ಟು ಗಟ್ಟಿಯಾಗಿ ಹೃದಯದಲ್ಲಿ ಪ್ರತಿಷ್ಠಾಪಿಸಿ ಬಿಟ್ಟಿರುತ್ತಾರೆ. ದೇಶದ ಅವರನ್ನರಿತ ಕಟ್ಟ ಕಡೆಯ ವ್ಯಕ್ತಿಗೂ ಸಹ ಅವರ ಬಗ್ಗೆ ನಂಬಿಕೆ, ಪ್ರೀತಿ, ಗೌರವವಿರುತ್ತದೆ. ಇಂಥವರದೇ ಸಾಲಿಗೆ ಸೇರುವ ಧೀಮಂತ ವ್ಯಕ್ತಿ ಡಾ. ಶಿವಕುಮಾರ ಸ್ವಾಮೀಜಿಯವರು.

     ಬಡತನದ ಬೇಗೆಯಲ್ಲಿ ಬೇಯುತ್ತಿದ್ದ, ಅಕ್ಷರದ ಕಲಿಕೆಯಲ್ಲೂ ಬಡವಾಗಿದ್ದ, ಬಯಲು ಸೀಮೆಯ ತುಮಕೂರಿನಂಥ ನಾಡಿನಲ್ಲಿ ನೆಲೆನಿಂತು, ವಿದ್ಯಾರ್ಥಿಗಳಿಗಾಗಿ ವಿದ್ಯೆ ದಾನ ಮಾಡಿದ ಗುರು, ಬಡವರ ಬಂಧು, ಊಟ, ಕೈತುತ್ತನ್ನಿತ್ತು ಸಾಕಿದ ದೇವರು ಅವರು. ಹೊಟ್ಟೆ ಹಸಿದವನಿಗೆ ಊಟ, ಮನಸ್ಸು ಹಸಿದವನಿಗೆ ವಿದ್ಯೆ ಕೊಡುವ ಕಾರ್ಯ ಸುಲಭದ ಮಾತಲ್ಲ. ಹಲವಾರು ಜನ ಅವರಿಗೆ ಕೈಜೋಡಿಸಿರಬಹುದು, ಅವರ ಕಾರ್ಯವನ್ನು ಹೊಗಳಿ ಬೆಂಗಾವಲಾಗಿ ನಿಂತಿರಬಹುದು, ಆದರೆ ಏನಾದರಾಗಲಿ, ನನ್ನಿಂದ ಇತರರಿಗೆ ಏನಾದರೂ ಸಿಗಬೇಕು ಎಂಬ ಅವರ ಮನದ ತುಡಿತ ಅವರ ನಾಯಕತ್ವವನ್ನು ಪ್ರೇರೇಪಿಸಿರಬಹುದೇನೋ. ನಾನಿದ್ದೇನೆ ಎಂದು ಬಾಯಿ ಮಾತಲ್ಲಿ ಹೇಳುವುದು ಸುಲಭ, ಅದನ್ನು ಪ್ರತಿನಿತ್ಯ ಕೃತಿಯಲ್ಲಿ ಮಾಡಿ ತೋರಿಸಿದವರು ಈ ಮಹಾನುಭಾವರು. ಕೋಟಿ ಹೃದಯಗಳನ್ನು ಗೆಲ್ಲುವುದು ಸುಲಭದ ಮಾತಲ್ಲ, ಇಂದು ಪಟ್ಟಕ್ಕೇರಿಸಿದ ಜನರೇ ನಾಳೆ ನರಕಕ್ಕೂ ದೂಕಬಹುದು! ಆದರೆ ಈಗಿನ ಕಾಲದಲ್ಲೂ ಜನ ಪಟ್ಟದ ಮೇಲೆ ಕೂರಿಸಿರುವರು ಎಂದರೆ ಅವರ ಹೃದಯ ಸಿರಿವಂತಿಕೆ ಎಷ್ಟರ ಮಟ್ಟಿಗೆ ಇತ್ತೆಂಬುದಕ್ಕೆ ಅದೇ ಸಾಕ್ಷಿ.
   
      ಈಗಿನ ಕಲಿಯುಗದಲ್ಲಿ ನ್ಯಾಯ ನೀತಿಗೆ ಬೆಲೆಯಿಲ್ಲ, ಅನ್ಯಾಯ ಎಲ್ಲೆಡೆ ತಾಂಡವವಾಡುತ್ತಿದೆ, ಕೆಟ್ಟದನ್ನು ಮಾಡಿದವನೇ ಮೆರೆಯುವನು ಎಂದೆನ್ನುವ ಜನ ಇವರನ್ನು ನೋಡಿ ಕಲಿಯಬೇಕು. ಭಾರತದಂತಹ ಸಾಂಸ್ಕೃತಿಕ ಪರಂಪರೆಯ ಭವ್ಯ ಐತಿಹ್ಯವಿರುವ ರಾಷ್ಟ್ರದಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹಗಳಿಗೆ ಕೊನೆಯಿಲ್ಲ! ಭಾರತಕ್ಕೆ ಭಾರತವೇ ಸಾಟಿ ಎಂಬುದನ್ನು ಪರ ದೇಶದಲ್ಲಿ ವಾಸಿಸುತ್ತಿರುವ ಯಾವುದೇ ಭಾರತೀಯರನ್ನು ಕೇಳಿನೋಡಿ, ಹೇಳುತ್ತಾರೆ!
    ಪ್ರಾಣಿ ಪಕ್ಷಿಗಳೂ,ಮನುಜರೂ ತಲೆಬಾಗುವ ಏಕೈಕ ಗುಣ ಪ್ರೀತಿ. ಅದು ಶಿವಕುಮಾರ ಸ್ವಾಮೀಜಿಗಳ ಮೂಲಮಂತ್ರ. ಹೃದಯ ವೈಶಾಲ್ಯತೆ, ಪರೋಪಕಾರ, ಪರರ ಬಗೆಗಿನ ತುಡಿತ, ಪರ ಹಿತ ಇವನ್ನು ಬಯಸುವ ಮಾನವ ದೈವತ್ವಕ್ಕೇರುವನು. ಅದೇ ರೀತಿ ದೈವತ್ವಕ್ಕೇರಿದ ವ್ಯಕ್ತಿ ಡಾ. ಶಿವಕುಮಾರ ಸ್ವಾಮೀಜಿಗಳು.
  
     ರಾಜಕೀಯದ ಗಂಧ ಗಾಳಿಯನ್ನೂ ಶೋಕಿಸಿಕೊಳ್ಳದೆ, ದುಡ್ಡಿಗಾಗಿ ಕಾವಿ ಧರಿಸಿ ಓಡಾಡುತ್ತಾ ಸನ್ಯಾಸತ್ವಕ್ಕೇ ಕಳಂಕ ತರುವ ಈ ಸಮಯದಲ್ಲಿ, ನಿಜವಾದ ಭಕ್ತಿ, ಪೂಜೆ, ಸನ್ಯಾಸತ್ವದ ಕಳೆಯನ್ನು ಎತ್ತಿ ಹಿಡಿದವರು ಅವರು.
   ಸ್ವಾಮಿಗಳ ನಿರ್ಗಮನದಿಂದ ದೇಶ, ರಾಜ್ಯ ತುಂಬಾ ಕಳೆದುಕೊಂಡಿದೆ. ಅಂತಹ ಹಲವಾರು ಹೃದಯಗಳು ಮತ್ತೆ ಮತ್ತೆ ಹುಟ್ಟಿ ಬರಲಿ ಭಾರತದಲ್ಲಿ, ಅಗಲಿದ ಆತ್ಮವು ಶಿವನಲ್ಲಿ ಲಿಂಗೈಕ್ಯವಾಗಲಿ, ಅಲ್ಲಿ ಶಾಂತಿಯಿಂದ ನೆಲೆಸಲಿ ಎಂದು ಶುಭ ಹಾರೈಸೋಣ. ನೀವೇನಂತೀರಿ?
@ಪ್ರೇಮ್@

725. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-28

ಒಂದಿಷ್ಟು ರೀಲ್ಯಾಕ್ಸ್ ತಗೊಳ್ಳಿ-28

ದಯವಿಟ್ಟು ಹಳ್ಳಿಗಳ ಸಣ್ಣ ಸಣ್ಣ ಅಂಗಡಿಗಳಲ್ಲಿ ಅರ್ಜೆಂಟ್ ಅರ್ಜೆಂಟಲ್ಲಿ ಮನೆಗೆ ಬೇಕಾದ ಸಾಮಾನು ಖರೀದಿಸುವವರಿಗೆ ನನ್ನ ಕಿವಿಮಾತು. ಆಹಾರದ ವಸ್ತುಗಳ ಬಳಕೆಯ ಕೊನೆಯ ದಿನಾಂಕವನ್ನು ಮತ್ತೆ ಮತ್ತೆ ಪರೀಕ್ಷಿಸಿ. ಹಾಲು, ಮೊಸರು, ಬನ್ನು, ಬ್ರೆಡ್ಡು, ಚಕ್ಕುಲಿ, ಮಿಕ್ಸರ್... ಹೀಗೆ ಅಂಗಡಿಯಿಂದ ತೆಗೆದುಕೊಂಡು ಹೋಗುವ ಮೊದಲೇ ಅದು ಎಷ್ಟು ದಿನ ಹಳೆಯದು, ಫ್ರೆಶ್ ಸ್ಟೋಕ್ ಇದೆಯೇ ಎಂದು ನೋಡಿ ತೆಗೆದುಕೊಳ್ಳಿ. ಇಲ್ಲದಿದ್ದರೆ ಅದು ಫುಡ್ ಪಾಯಿಸನ್ ಆಗಬಹುದು. ಹೊಟ್ಟೆ, ಜಠರ ಕೆಟ್ಟು ಹೋಗಬಹುದು.
  ಸಿಹಿತಿಂಡಿ ಕೂಡಾ. ಯಾರದೋ ಮನೆಯ, ನಿಮ್ಮ ಮನೆಯ ಕಾರ್ಯಕ್ರಮ ಮುಗಿದ ಬಳಿಕ ಉಳಿದ ಸಿಹಿತಿಂಡಿಯನ್ನು ಹಲವಾರು ದಿನಗಳ ಕಾಲ ಇಟ್ಟು ನಂತರ ತಿನ್ನ ಬೇಡಿ.
ಹೊಟ್ಟೆ ಡಸ್ಟ್ ಬಿನ್ ಅಲ್ಲ, ಅದರ ಕೆಲಸಕ್ಕೆ ಹಿತಮಿತವಾದ ಚೊಕ್ಕಟ ಆಹಾರ ಬೇಕು. ಸಿಕ್ಕಿದ್ದೆಲ್ಲಾ ತಿನ್ನ ಬಾರದು. ರುಚಿ ಇದೆಯೆಂದು ನಿತ್ಯ ಹೋಟೆಲಿನ, ಚಾಟ್ಸ್, ಚಿಪ್ಸ್, ಲೇಸ್ ನಿತ್ಯ ಮಕ್ಕಳಿಗೆ ತೆಗೆದು ಕೊಡುತ್ತಿದ್ದರೆ ಅವರು ಖುಷಿಪಟ್ಟು ತಿನ್ನುವರು. ಆದರೆ ನಿಮ್ಮ ಮಕ್ಕಳಿಗೆ ನೀವೇ ಸ್ಲೋ ಪಾಯಿಸನ್ ಕೊಟ್ಟಂತಾಗುತ್ತದೆ. ಮಕ್ಕಳು ಕೇಳುತ್ತಾರೆಂದು ಕುಡಿಯಲು ಸ್ಪ್ರೈಟ್, ಲೇಸ್ ಕೊಡದಿರಿ. ಮಕ್ಕಳನ್ನು ಸುಮ್ಮನೆ ಕೂರಿಸಲು ಮೊಬೈಲ್, ಐಸ್ ಕ್ರೀಮ್ ಸದಾ ಕೊಟ್ಟು ಬಿಡುವುದೂ ಒಳಿತಲ್ಲ.
  ಟೇಸ್ಟ್ ಪೌಡರ್ ಅಜಿನಮೊಟೋ ಜಠರದ ಹಲವಾರು ರೋಗಗಳನ್ನು ಉಂಟುಮಾಡುತ್ತದೆ. ಮುಂದೊಂದು ದಿನ ಬರೀ ಗಂಜಿ ಕುಡಿಯುವ ಕಾಲ ಬರುವುದಕ್ಕಿಂತ ಮೊದಲು ಎಚ್ಚೆತ್ತುಕೊಳ್ಳಿ. ನಾಲಗೆಯ ದಾಸರಾಗದಿರಿ. ನಮ್ಮ ಆರೋಗ್ಯ ನಮ್ಮ ಕೈಲಿರಲಿ. ನೀವೇನಂತೀರಿ?
@ಪ್ರೇಮ್@

726.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-27

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-27

ಹೊಸ ವರುಷದ ಪ್ಲಾನಿಂಗ್ ಹೇಗಿದೆ? ಬದುಕು ಬದಲಾಗಿದೆಯೇ ಅಂತ ನೀವು ಕೇಳಿದರೆ ಖಂಡಿತಾ ಹೌದೆನ್ನುವೆ. ಕೆಲವು ಗಳಿಸಿದ್ದು, ಕೆಲವು ಕಳೆದುಕೊಂಡದ್ದು. ಹೊಸ ಹೊಸ ಯೋಜನೆಗಳು ಮನದಲ್ಲಿ ಬರದಿರುತ್ತವೆಯೇ? ಅವುಗಳನ್ನು ಸಾಧಿಸಲಾಗದಿದ್ದರೂ ಯೋಜನೆ ಹಾಕದಿರಲಾದೀತೇ? ನನ್ನ ಬ್ಲಾಗ್ http://premaudaykumar.blogspot.com/ ನಿಂದ ಅರವತ್ತು ಭಾವಗೀತೆ ಹಾಗೂ ಕವನಗಳನ್ನು ಒಟ್ಟುಮಾಡಿ ಪುಸ್ತಕ ರೂಪಕ್ಕೆ ಕೊಡುವ ಯೋಜನೆ ಕಾರ್ಯ ರೂಪಕ್ಕೆ ಬಂದಿದೆ. ಒಂಥರಾ ಥ್ರಿಲ್! ಒಂಥರಾ ಖುಷಿ! ಒಂಥರಾ ಭಯ! ಕನ್ನಡ ಸಾರಸ್ವತ ಲೋಕಕ್ಕೆ ನನ್ನ ಮೊದಲ ಕವನ ಸಂಕಲನದ ಬಿಡುಗಡೆಯ ಕೊಡುಗೆ! ಕನ್ನಡಿಗರು ಅದನ್ನು ಹೇಗೆ ಸ್ವೀಕರಿಸುವರೋ ಎಂಬ ತಳಮಳ!
    ಕವನಗಳು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತಿವೆ, ಹಾಡುವಂತಿವೆ ಎಂಬೆಲ್ಲಾ ಅಭಿಪ್ರಾಯ ತಿಳಿದವರಿಂದ ಬಂತು. ಖ್ಯಾತ ಲೇಖಕರೂ, ಕವಿಗಳೂ, ಗುರುಗಳೂ, ಹಾವೇರಿ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾ ಹನಿಹನಿ ಸಾಹಿತ್ಯ ಬಳಗದ ಅಧ್ಯಕ್ಷರಾದ ಶ್ರೀಯುತ ಜೀವರಾಜ್ ಛತ್ರದ ರವರು ಅಂದವಾದ ಮುನ್ನುಡಿಯನ್ನಿತ್ತು ಹರಸಿದರೆ, ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಷತ್ತಿನ ಅಧ್ಯಕ್ಷರಾದ ಶ್ರೀಯುತ ಕುಂದೂರ್ ಅಶೋಕ್ ರವರು ಬೆನ್ನುಡಿಯ ಧಾರೆಯೆರೆದಿರುವರು.
    ನನ್ನ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರೂ, ಶ್ರೀ ಮುಜಿಲ್ನಾಯ ಅನುದಾನಿತ  ಹಿರಿಯ ಪ್ರಾಥಮಿಕ ಶಾಲೆ, ಈದು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಜ್ಞಾನೇಂದ್ರ ಕುಮಾರ್ ಜೈನ್ ರವರೂ, ಹಾಸನದ ಆಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥ ಶಾಸ್ತ್ರ ಉಪನ್ಯಾಸಕರಾದ ಶ್ರೀಯುತ ಸಿ.ಬಿ. ಮಹೇಶ್ವರಪ್ಪನವರು ನನ್ನ ಪ್ರೌಢಶಾಲಾ ಕನ್ನಡ ಅಧ್ಯಾಪಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿ ಶ್ರೀಯುತ ಚೇತನ್ ಸೋಮೇಶ್ವರ ಸರ್ ನನ್ನ ಪಿಯುಸಿಯ ಕನ್ನಡದ ಗುರುಗಳು. ಈ ಮೂರೂ ಜನರ ಆಶೀರ್ವಚನದ ನುಡಿಗಳು ಈ ಪುಸ್ತಕಕ್ಕೆ ಹರಿದು ಬಂದಿದೆಯೆನ್ನಲು ಸಂತಸವಾಗುತ್ತಿದೆ.
   ಹಾಗೆಯೇ ಪತ್ರಿಕಾ ಬಳಗದ ಸನ್ಮಿತ್ರರಾದ ಅಣ್ಣ ಅನಂತ್ ಭಟ್ ಹುದಂಗಾಜೆ, ರಾಧಾಕೃಷ್ಣ ಉಳಿಯತ್ತಡ್ಕ, ಲಕ್ಷ್ಮಿ  ಮಚ್ಚಿನ, ಮನು ಬಳಂಜ ಮೊದಲಾದವರ  ಹಿತನುಡಿಗಳೊಂದಿಗೆ ನಿಮ್ಮ ಕೈಸೇರಲಿದೆ.
   'ಭಾವ ಜೀವದ ಯಾನ,' ಎಂಬ ಹೆಸರನ್ನು ಹೊತ್ತ ಈ ಪುಸ್ತಕ 'ಭಾವನೆ ಮತ್ತು ಬದುಕಿನ ಮಧ್ಯೆ ಸಮ್ಮಿಲನ' ಎಂಬ ಟ್ಯಾಗ್ ಲೈನಿನೊಂದಿಗೆ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 18.1.2019 ಹದಿನೆಂಟು ಜನವರಿಯಂದು ಲೋಕಾರ್ಪಣೆಗೊಳ್ಳಲಿದೆ.
     ದೆಹಲಿ ಕನ್ನಡ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು, ಇಸ್ರೇಲಿನ ತುಳು ಕೂಟದ ಶ್ರೀಯುತ ರಾಜೇಶ ಶೆಟ್ಟಿ ಮಡಂತ್ಯಾರ್ ಅವರು, ಹೆಸರಾಂತ ಕವಿಗಳಾದ ಸುರೇಶ್ ನೆಗಳಗುಳಿಯವರು, ಮನುವೈದ್ಯರವರು, ಪ್ರಕಾಶ್ ಜಿಂಗಾಡೆಯವರು, ಸುಳ್ಯದ ಸಾಹಿತ್ಯ ಪೋಷಕರೂ, ಗುರುಗಳೂ, ಸಮಾಜ ಸೇವಕರೂ ಆದ ಚಂದ್ರಶೇಖರ ಪೇರಾಲ್ ರವರು.. ಹೀಗೆ ಹಲವಾರು ಹೃನ್ಮನಗಳು ಹೃದಯದುಂಬಿ ಹರಸಿರುವ ಈ ಪುಸ್ತಕದಲ್ಲಿ ಎಂತಹ ಕವನಗಳಿವೆ? ಯಾವ ಯಾವ ಭಾವಗೀತೆಗಳಿವೆ ಎಂದು ತಿಳಿಯ ಬೇಕಾದರೆ ಇನ್ನೂ ಹತ್ತು ದಿನ ಕಾಯಬೇಕಾಗಿದೆ! ಈಗಾಗಲೇ ಇನ್ನೂರೈವತ್ತು ಪುಸ್ತಕ ಅಡ್ವಾನ್ಸ್ ಬುಕ್ಕಿಂಗ್ ಆಗಿರುವುದು ಸಂತಸದ ವಿಷಯ!
    ನಿಮಗೂ ಬೇಕೆನಿಸುತ್ತಿದೆಯೇ.. ಖಂಡಿತಾ ಸಿಗಲಿದೆ..ಕಾಯ್ದಿರಿಸಿ, ಒಂದು ಈಮೇಲ್ ಸಂದೇಶ ಅಷ್ಟೇ! ಅಥವಾ ಮುಖ ಪುಟದಲ್ಲಿ ಪ್ರೇಮ್ ಉದಯ್ ಕುಮಾರ್ ಎಂದು ಹುಡುಕಿ...ಓದಿ ನೋಡಿ, ಹಾಡಿ, ಆನಂದಿಸಿ.. ಕವಿತೆಗಳ ಸಂಕಲನ... ನಿಮಗಾಗಿ..ನಿಮ್ಮ ಓದಿಗಾಗಿ...ತುಂಬಾ ಅಪ್ ಸೆಟ್ ಆದಾಗ ಓದಿ ಹಗುರಾಗಿ ರಿಲ್ಯಾಕ್ಸ್ ಗಾಗಿ.. ಏನಂತೀರಿ?
@ಪ್ರೇಮ್@
premauday184@gmail.com

727. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-26

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-26

ನವವರುಷದ ನವೀನ ಹಾರೈಕೆ ನುಡಿಗಳು

ನಲಿಯುತಿರಲಿ ನಿತ್ಯ ಮನ
ನವೀನವಾಗಲಿ ಜೀವನ//

ನವವರುಷದ ನವದಿನಗಳಲಿ
ನಗೆಗಡಲಲಿ ತೇಲಿಸಲಿ,
ನೆನೆದ ಕನಸು ನನಸಾಗಲಿ
ನಂಬಿಕೆ ನಾಶವಾಗದಿರಲಿ//

ನೋವು ಕಡಿಮೆಯಾಗಲಿ
ನೋಟ ಅಂದವಾಗಿರಲಿ
ನುಡಿಯು ಶುಭ್ರವಾಗಿರಲಿ
ನವ್ಯ ನಡತೆ ನಮ್ಮದಾಗಲಿ//

ನಮನ ಹರಿದು ಬರುತಲಿರಲಿ
ನೋವು ದೂರವಾಗಲಿ
ನೊಂದ ಮನವ ಸಂತೈಸಲಿ
ನಾಡು ಬೆಳಗಿ ಸಾಗಲಿ//

ನೀರು ಶುದ್ಧ ದೊರಕಲಿ
ನಾಯಿಯ ನಿಷ್ಠೆ ಬರಲಿ
ನೋಟು ಬದಲಾಗದಿರಲಿ
ನೊಂದ ಮನಕೆ ಶಾಂತಿ ಸಿಗಲಿ//

ನಲಿವು ತುಂಬಿ ಬರಲಿ
ನಗೆಯ ಚಿಲುಮೆ ಚಿಮ್ಮಿ ಬರಲಿ
ನುಡಿಯು ಸತ್ಯ ನುಡಿಯಲಿ
ನಡೆಯು ಮುಕ್ತವಾಗಿರಲಿ//

ನಾಮ ಸ್ಮರಣೆಯಾಗಲಿ
ನವ್ಯ ಬಾಳು ಬೆಳಗಲಿ
ನವ್ಯ ಕಾರ್ಯ ಸಾಗಲಿ
ನಮ್ಮಿಂದ ತಪ್ಪು ಆಗದಿರಲಿ//

ನವಿಲ ಹಾಗೆ ಕುಣಿಯಲಿ
ನೇರ ನುಡಿಯು ಬೆಳಗಲಿ
ನಿಸರ್ಗ ಪ್ರೀತಿ ಹೆಚ್ಚಲಿ
ನೂರಾರು ಆಸೆ ಪೂರೈಸಲಿ//

ನಬದಿ ಹೊಸತನ ಮೂಡಲಿ
ನಯನದಿ ಮಿಂಚು ಸುಳಿಯಲಿ
ನಕ್ಕು ಮನವು ಹಗುರವಾಗಲಿ
ನವ ವರುಷ ನವ ಚೇತನ ತರಲಿ..

ನವ ವರುಷವು ಎಲ್ಲರಿಗೂ ಸವಿನೆನಪು, ಸವಿಬಾಳು ತರಲಿ, ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಅದರತ್ತ ಮುನ್ನಡೆಯೋಣ ಎನ್ನುತ್ತಾ, ಭವ್ಯ ಬಾಳಿಗೆ ಬಂದ ವರುಷದ ದಿನಗಳು ಸಂತಸ ತರಲಿ ಎಂಬ ಹಾರೈಕೆಯೊಂದಿಗೆ,

@ಪ್ರೇಮ್@
premauday184@gmail.com