ಶುಕ್ರವಾರ, ಆಗಸ್ಟ್ 21, 2020

ಹನಿಗವನ-ಧರೆ-ರವಿ

ಧರೆ-ರವಿ

ರಹಸ್ಯವಿಹುದೇ 
ಧರೆ-ರವಿಯರ
ಪ್ರೇಮದ ನಡುವೆ?
ನಮಗೇಕೆ ಬೇಕು
ಎನ್ನುವಿರಾ 
ಅದರ ಗೊಡವೆ?
ಹಸಿರಿದ್ದರಲ್ಲವೇ
ಭೂ ದೇವಿಗೆ
ನಿಜದ ಒಡವೆ?
@ಪ್ರೇಮ್@
21.08.2020

ಮಂಗಳವಾರ, ಆಗಸ್ಟ್ 18, 2020

ಗಝಲ್-208

ಗಝಲ್-209

ಮೋಹದ ಮೋಡಿಯು ಮಾಯವು ನೋಡಾ..
ಮೋದದ ಬದುಕದು ಮೋಸವು ನೋಡಾ..

ನ್ಯಾಯದ ಮನವದು ಉತ್ತಮ ಕಾಣಾ
ಅನ್ಯಾಯ ಶಿರದಲಿ ಪಾಪವು ನೋಡಾ..

ಭಾರವು ಕೆಡುಕದು ತಲೆಯಲಿ ಎಂದಿಗೂ
ಪರರನು ನೋಡಿ ಬೇಸರಿಪೆವು ನೋಡಾ..

ಜಾತಿ ಮತ ಪಂಥ ಕುಲಗಳನೇಕ
ಒಂದೇ ಹರಿಯುವ ರಕುತವು ನೋಡಾ.. 

ಪ್ರೇಮದಿ ಬದುಕಲು ಮಾರ್ಗವು ಹಲವಿದೆ
ಪ್ರೀತಿಯ ನುಡಿಗೆ ತಲೆ ಬಾಗುವುದು ನೋಡಾ..
@ಪ್ರೇಮ್@13.08.2020

ನೆನೆದಾಗ

ನೆನೆದಾಗ

ಗೆಳತೀ ಮಳಿ ನೀರು ಸುರಿಯುವಾಗ
ಧೋ ಎಂದು ಹರಿಯುವಾಗ
ನಿನ ನೆನಪ ಕಾಡಕತ್ತೈತೀ..
ನಿನ ಮ್ಯಾಲ ಪ್ರೀತಿ ಉಕ್ತೈತಿ..

ಆ ದಿನದ ನೆನಪು ಬಹಳ
ಜಾರಿ ಸೋಕಿದ್ದೆ ನೆಲ
ನಾ ಎತ್ತಿ ಕೆಸರ ಒರೆಸಲು
ನಾಚ್ಕೇಲಿ ನಿನ್ನ ಕೆನ್ನೆ ಕೆಂಪಾಗಲು..

ಹಸಿರಿನ ಗದ್ದೀ ಬದಿಗೆ
ನಾವಿಬ್ರೇ ಹೋಗಿ ನಿಂತು
ನಾ ನಿನ್ನ ಎತ್ತೀ ಹಿಡಿದಾಗ
ಕಣ್ಣೆರಡು ಒಂದಾಗಿ ಲೋಕ ಮರೆತಾಗ...

ಹೊಳಿಯ ಬಂಡೆಯ ಮ್ಯಾಲೆ
ನನ್ ಮ್ಯಲೆ ನೀ ಕೂತು
ಮುಂದಿನ ದಿನವ ನೆನೆಯುತ್ತಾ
ಕೈಕೈಯ ಹಿಡಿದು ನಾವು ಹೊಳೆಯ ದಾಟುತ್ತಾ..
@ಪ್ರೇಮ್@
18.07.2020

ಚುಟುಕು-ಬದುಕು

ಚುಟುಕು

ಬದುಕು

ಅಂತರಂಗ ಬಹಿರಂಗದೊಳಗಿನ ಭಾವ ರಂಗು
ತರಂಗಾಂತರಂಗದಂತಹ ಅಲೆಯ ಸೊಬಗು
ಮನದೊಳಗೆಲ್ಲ ಹತ್ತು ಹಲವು ಕನಸುಗಳ ಮೆರಗು
ಜೀವನವಿಡೀ ಪ್ರತಿ ಕ್ಷಣವೂ ಕತ್ತಿಯ ಅಲಗು!
@ಪ್ರೇಮ್@
17.08.2020

ಚುಟುಕು-ದಾಟಿ

ಚುಟುಕು

ದಾಟಿ

ದೂರ ದಾರಿ ದಾಟಿ ದಣಿದು
ದೂರಿ ಪರರ ದಾರ ಹೆಣೆದು
ದೂಡಿ ಹಿಂದೆ ಓಡಿ ಮುಂದೆ
ದೂರ ಸಾಗೆ ತಿರುಗಿ ಹಿಂದೆ!
@ಪ್ರೇಮ್@
18.08.2020

ಸೋಮವಾರ, ಆಗಸ್ಟ್ 17, 2020

ಬದುಕು

ಚುಟುಕು

ಬದುಕು

ಅಂತರಂಗ ಬಹಿರಂಗದೊಳಗಿನ ಭಾವ ರಂಗು
ತರಂಗಾಂತರಂಗದಂತಹ ಅಲೆಯ ಸೊಬಗು
ಮನದೊಳಗೆಲ್ಲ ಹತ್ತು ಹಲವು ಕನಸುಗಳ ಮೆರಗು
ಜೀವನವಿಡೀ ಪ್ರತಿ ಕ್ಷಣವೂ ಕತ್ತಿಯ ಅಲಗು!
@ಪ್ರೇಮ್@
17.08.2020

ಶನಿವಾರ, ಆಗಸ್ಟ್ 15, 2020

ಹನಿ

ಹನಿ

ಪರಲೋಕಕ್ಕೆ ಹೋಗಿದ್ದೆ
ನಿನ್ನೆ ಕನಸಿನಲ್ಲಿ!
ರಂಬೆ ಊರ್ವಶಿ ಮೇನಕೆಯರಿದ್ದರು
ಮೇಕಪ್ ರೂಮಿನಲ್ಲಿ!!!
@ಪ್ರೇಮ್@
16.08.2020

ಹನಿ

ಹನಿ

*ಪಕ್ಕದ್ಮನೆಯವಳೇ ಸಿಕ್ಕಿದ್ದೇ*
*ಹೇಳಲು ಶುಭಾಶಯ?*
*ಅವಳ ಗಂಡನೊಡನೇಕೆ *ಮಾಡಿಕೊಳ್ಳಲಿಲ್ಲ*
*ಶುಭಾಶಯಗಳ ವಿನಿಮಯ?*
@ಪ್ರೇಮ್@

ಶಿಕ್ಷಕರ ಗೋಳು

ಶಿಕ್ಷಕರ ಗೋಳು

 ಕೇಳು ಮಗುವೇ ಶಿಕ್ಷಕರ ಈ ಗೋಳು
ಕೆಸರಲ್ಲಿ ಜಾರಿ ಬಿದ್ದು ಸೊಂಟ ಹಾಳು
ಒಂದೊಂದು ಮನೆಗೆ ಮೈಲಿಗಟ್ಟಲೆ ನಡೆದು ಸಾಗಿ
ನಾಯಿ ಓಡಿಸಿಕೊಂಡು ಬಂದು ಬೀಳ ಹೋಗಿ

ಬಾಯಿ ಮೂಗಿಗೆ ಮಾಸ್ಕು,
ಬಿಸಿ ನೀರಿಗೆ ಬ್ಯಾಗಲಿ ಫ್ಲಾಸ್ಕು ಕಾಲಲಿ ಜಾರುವ ಚಪ್ಪಲಿ
ಮಳೆಗೆ ಕೊಡೆ ಹೇಗೆ ಹಿಡಿಯಲಿ?

ಕೈಲೊಂದು ಫೈಲು ಜೊತೆಯಲಿ
ಗ್ಲೌಸಿನೊಳಗೆ ಮೊಬೈಲ ಹೇಗೆ ಒತ್ತಲಿ
ಪಾಠ ಮಾಡಬೇಕಂತೆ ಮನೆ ಮನೆಯಲಿ
ಬಸ್ಸಿಲ್ಲ, ದಿನಕೆ ಐದಾರು ಮೈಲಿ ಹೇಗೆ ಸಾಗಲಿ?

ಕರಿಹಲಗೆಯಿಲ್ಲ, ಸೀಮೆ ಸುಣ್ಣವೂ ಇಲ್ಲ
ಸರಿ ಹೊತ್ತಿಗೆ ಊಟ ಮಾಡಲಾಗುತ್ತಿಲ್ಲ
ಗಾಳಿ ಮಳೆಗೂ ರಕ್ಷಣೆಯಿಲ್ಲ
ರೆಡ್ ಅಲರ್ಟ್ ನಮಗಿಲ್ಲ
ಹೋಮ್ ಕ್ವಾರೆಂಟೈನ್, ರೆಸ್ಟ್ ಇಲ್ವೇ ಇಲ್ಲ

ಶನಿವಾರವೂ ರಜಾ ಇಲ್ಲ
ದಾಖಲಾತಿ ಆಂದೋಲನ ಆಗಬೇಕಲ್ಲ!
ಮನೆಯೊಳಗೂ ಆನ್ ಲೈನ್ ಕ್ಲಾಸಲ್ಲ!
ಶಿಕ್ಷಕರ ಪಾಡು ದೇವರೇ ಬಲ್ಲ!
@ಪ್ರೇಮ್@
12.08.2020

ಹನಿ

ಹನಿ
ನಳಪಾಕಕ್ಕಿಂದು ಪ್ರಾರಂಭ
ತಿಂದವನಿಗೆ ಭಯದಾರಂಭ!
ಅಡಿಗೆ ಮನೆಯೊಳು ಸೌಂಡು
ಗಂಡಸರಿಗಿಲ್ಲ ಪ್ರತಿದಿನದ ಬಾಂಡು!!
@ಪ್ರೇಮ್@

ಹನಿ

ಇಂದಿನ ಮಕ್ಕಳಿಗೆ
ಬೇಕಿಲ್ಲ ಊಟ ತಿಂಡಿ
ಕೊಡಿ ಕೈಗೆ ಮೊಬೈಲಲಿ
ಓಡುವ ಆಟದ ಉಗಿಬಂಡಿ!!
@ಪ್ರೇಮ್@
12.08.2020

ಹನಿ

ಹನಿ
ಕರೆವರು ಎದುರಲ್ಲಿ
ಬನ್ನಿ ನಮ್ಮ ಮನೆಗೆ
ಹೋದ ಮೇಲೆ ತಿಳಿವುದು
ಯಾಕಾದರೂ ಹೋದೆವೋ ಅಲ್ಲಿಗೆ!!
ಬಾಯಿಗೆ ಬೀಗ ಹಾಕಿ
ಹೋಗಿ ಬರಬೇಕು ಮೆಲ್ಲಗೆ!!!
@ಪ್ರೇಮ್@
13.08.2020

ಕಿಡಿಹನಿ

ಕಿಡಿ ಹನಿ

ಇಂದು ಸ್ವಾತಂತ್ರ್ಯ 
ದಿನಾಚರಣೆಯಂತೆ!
ಒಂಟಿಯಾಗಿರುವವರಿಗೆ ಮಾತ್ರ
ಜಂಟಿಯಾದವರಿಗಲ್ಲ!
ಒಬ್ಬರಿಂದಿನ್ನೊಬ್ಬರಿಗೆ
ವಿಮುಕ್ತಿ ಸಿಗಬೇಕಲ್ಲ
ಸಂಸಾರ ಬಂಧನದಿಂದ!!
@ಪ್ರೇಮ್@
15.08.2020

ಏಕೀತರ

ಏಕೀತರ

ನಿನ್ನೆಯಿದ್ದ ದೇಶಭಕ್ತಿ ಇಂದಿಲ್ಲವೇಕೆ?
ಒಂದೇ ದಿನಕ್ಕದನು ಮಿತಿಗೊಳಿಸಿದುದೇಕೆ?
ನಿನ್ನೆ ಕೈಲಿದ್ದ ಬಾವುಟ ಕಸದ ಬುಟ್ಟಿ ಸೇರಿದ್ದೇಕೆ?
ನಿನ್ನೆ ಮಾತ್ರ ತ್ರಿವರ್ಣದ ಧಿರಿಸೇತಕೆ?

ಭಾರತಾಂಬೆಯ ಅದ್ಭುತ ಕಿಡಿಗಳಲ್ಲವೇ ನಾವು?
ದೇಶಭಕ್ತಿಯ ಕಿಚ್ಚು ಪ್ರತಿಕ್ಷಣ ಉಕ್ಕಬೇಕಲ್ಲವೇ?
ಮಾತೆಯಾಗಿ ಜೀವ ಬಲಿದಾನಕೆ  ಸಿದ್ಧರಿರಬೇಕು.
ದೇಶ ಕಾಯುವ ಯೋಧರಿಗೆ ಜೊತೆಯಾಗಬೇಕು.

ಮನದಲಿ ದೇಶಪ್ರೇಮ ನಿತ್ಯವಿರಬೇಕು
ತಂದೆ ತಾಯಿಯನೂ ಅಂತೆಯೇ ಗೌರವಿಸಬೇಕು.
ಅವರ ವೃದ್ಧಾಶ್ರಮಕೆ ದೂಕುವ ನಾವು
ಭಾರತ ಮಾತೆಯ ಅದಾವ ಪರಿಯಲಿ ನೋಡಿಕೊಳ್ಳಬಲ್ಲೆವು?

ನಮ್ಮ ಮೇಲೇ ನಮಗಿಲ್ಲ ಕಾಳಜಿ
ಮೊಬೈಲಿಗೆ ಕೊಡುವಷ್ಟು ಸಮಯ ಮಕ್ಕಳಿಗೆ ಕೊಡಲಾರೆವು
ಮನೆಮಂದಿಯ ಜೊತೆ ಕುಳಿತು ಹರಟಲಾರೆವು
ಸರ್ವಂ ಸಾಮಾಜಿಕ ಜಾಲತಾಣಮಯ
ದೇಶಭಕ್ತಿಯೂ ಕೂಡಾ!
ಮುಂದೊಂದು ದಿನ ಆನ್ ಲೈನಿನಲೇ ಧ್ವಜ ಹಾರಿಸುವೆವೇನೋ!

ಭಾರತಮಾತೆ ಅದೆಂದು ಹೇಳಬಲ್ಲಳು ನಾ ಧನ್ಯೆಯೆಂದು?
ಪ್ರತಿ ಭಾರತೀಯನ ಮನ ಉದ್ಧಾರವಾಗುವುದೆಂದು?
ತನ್ನ ಕಾರ್ಯಗಳ ತಾನೇ ಮಾಡುತ ಮುಂದುವರೆವುದೆಂದು?
ಸಮಯ ನುಂಗುವ ಮೊಮೈಲಿನಾಟದ ಹುಚ್ಚನು ಕಡೆಗೊಳಿಸುವುದೆಂದು?
@ಪ್ರೇಮ್@
16.08.2020

ಶುಕ್ರವಾರ, ಆಗಸ್ಟ್ 7, 2020

ಮನದ ಮಾತು

ಹಾಯ್ ಎಲ್ಲಾರ್ಗೂ... ಮನದ ಮಾತಿಗೆ ಸ್ವಾಗತ.. ಸುಮ್ನೆ ಓದ್ನೋಡಿ..

  ಮಳೆ ಜೋರಾಗ್ ಸುರೀತಿದೆ. ಅಮ್ಮ, ಅಪ್ಪನ್ ಸುತ್ತ ಮೂರ್ನಾಲ್ಕು ಮಕ್ಳು ಒಲೆ ಬುಡದಲ್ ಕೂತು ಮನೇಲೇ ಮಾಡಿದ ಹಲಸಿನ್ ಹಪ್ಳ ಸುಟ್ ಕೊಂಡ್ ತಿಂತಾ ಅಜ್ಜಿ ಕತೆ ಕೇಳೋ ಕಾಲವಂತೂ ಈಗಿಲ್ಲ. ಈಗೇನಿದ್ರೂ ಏಕಾಂತವಾಗಿ ಒಂದ್ ಲ್ಯಾಪ್ ಟಾಪೋ, ಕಂಪ್ಯೂಟರೋ ಇಟ್ಕೊಂಡು, ಅದ್ನೇ ನೋಡ್ತಾ, ಪಕ್ಕದಲ್ಲಿರೋ ಮೊಬೈಲ್ ತೆಗ್ದು ಒಮ್ಮೆ ಎಫ್ ಬಿ, ಮತ್ತೊಮ್ಮೆ ವಾಟ್ಸಪ್, ಮಗದೊಮ್ಮೆ ಟ್ವಿಟರ್, ಇನ್ನೊಮ್ಮೆ ಇನ್ ಸ್ಟ್ರಾಗ್ರಾಂ, ಮೆಸೆಂಜರ್, ಶೇರ್ ಚಾಟ್ ಹೀಗೆ ಜೀವನದಲ್ಲಿ ಕೂತಲ್ಲೇ ತಲೆ ಎತ್ತದೆ, ಯಾರ್ನೂ ನೋಡ್ದೆ ತಾನೇ ತಾನಾಗಿ ಮಜಾ ತಗೊಳ್ಳೋ ಕಾಲ ಬಂದ್ಬಿಟ್ಟಿದೆ.
     ಈಗಂತೂ ಯಾರು ಯಾರ ಸುದ್ದಿಗೂ ಇಲ್ಲ, ಪಕ್ಕದ್ ಮನೆಯವ್ರ ಜೊತೆ ಜಗಳವಾಡೋ ಕಾಲಾನೂ ಎಂದೋ ಹೋಯ್ತು. ಈಗಂತೂ ಪಕ್ಕದ್ ಗೋಡೆಯಿಂದಾಚೆ ಯಾರಿದ್ದಾರೆ, ಯಾರ್ ಬರ್ತಾರೆ, ಯಾರ್ ಹೋಗ್ತಾರೆ, ಯಾರ್ ಸಾಯ್ತಾರೆ ಅಂತಾನೂ ಗೊತ್ತಾಗಲ್ಲ! ಮಾತು, ಕತೆ, ಹರಟೆ ಅನ್ನೋದು ಮರ್ತೇ ಹೋಗಿದೆ ಜನರಿಗೆ. ಅದೇನಿದ್ರೂ ಈಗ ರಿಟನ್ ಚಾಟ್, ವಾಯ್ಸ್ ಚಾಟ್, ವಿಡಿಯೋ ಕಾಲಲ್ಲೇ. ಜನ ಮೊಬೈಲೆಂಬ ಸಣ್ಣ ಸಾಧನಕ್ಕೆ ಎಷ್ಟು ಅಂಟಿ ಬಿಟ್ಟಿದ್ದಾರಂದ್ರೆ ಅಪ್ಪ, ಅಮ್ಮ, ಮಕ್ಳು ಸಂಸಾರ ಯಾರನ್ ಬೇಕಾದ್ರೂ ಬಿಟ್ಟು ಒಬ್ರೇ ಮೊಬೈಲ್ ಜೊತೆ ಬದ್ ಕ್ತಾರೆ. ಮೊಬೈಲ್ ನೋಡ್ವಾಗ ತಮ್ ಮಕ್ಳೇ ಡಿಸ್ಟರ್ಬ್ ಅನ್ನಿಸ್ತಾರೆ. ಗಂಡ ಹೆಂಡತಿ ಎಷ್ಟೇ ಕ್ಲೋಸ್ ಇದ್ರೂ ಒಬ್ರ ಮೊಬೈಲ್ ಮತ್ತೊಬ್ರು ನೋಡೋದ್ ಅಪರಾಧ! ಓಹೋ..ಕಾಲ ಕೆಟ್ಹೋಗಿದ್ಯೋ? ಸಮಯ ಬದಲಾಗಿದ್ಯೋ, ಜನಾ ಕೆಟ್ಹೋಗಿದ್ದಾರೋ? ಜನರೇಶನ್ ಬದಲಾಗಿದ್ಯೋ ಒಂದೂ ತಿಳೀತಿಲ್ಲ. ಕಾಲಾನೇ ಕೊರೋನ ರೂಪ್ದಲ್ ಬಂದು ನಿಮ್ ನಿಮ್ ಮನೆಗಳಲ್ಲಿ, ನಿಮ್ದೇ ಸಂಸಾರದ್ ಜೊತೆ ಸುಖವಾಗಿರಿ ಅಂತ ಬುದ್ಧಿ ಕಲಿಸ್ಬೇಕೇನೋ?

 ಮುಂದಿನ ಜನರೇಶನ್ ಮಕ್ಳಿಗೆ ನಾಲ್ಗೆ ತಿರುಗೋದೇ ಕಷ್ಟವೇನೋ. ಕೂತಲ್ಲಿಗೇ ಎಲ್ಲ ಬಂದೂ ಕೈ ಕಾಲೂ ತಮ್ಮ ಶಕ್ತಿಯನ್ನು ಕಳ್ಕೊ ಬಹುದೇನೋ. ಮೊಬೈಲ್, ಕಂಪ್ಯೂಟರ್ ನೋಡಿ ನೋಡಿ ಕಣ್ಣಿನ ಪವರ್ ಹೋದ್ರೆ, ಒತ್ತಿ ಒತ್ತಿ ಬೆರಳುಗಳಿಗೂ ರೋಗ ಬರ್ತದಂತೆ. ಮತ್ತೆ ಮನೋರೋಗ! ಎಲ್ಲಾ ನ್ಯೂಸ್ ಗಳ ನೋಡಿ, ಓದಿ! ಮತ್ತೆ ಸರಿಯಾದ ಊಟ ತಿಂಡಿ ಇಲ್ದೇ ಆರೋದ್ಯದಲ್ಲಿ ಏರ್ ಪೇರು. ತಿಂದ್ರೆ ಕರಗೋಲ್ಲ, ಜಾಸ್ತಿ ತಿಂದ್ರೆ ಬೊಜ್ಜು ಬರತ್ತೆ! ಮದ್ದು ಹಿಡಿಸೋಲ್ಲ! ಹಿಂಗಾದ್ರೆ ಹೆಂಗೇ?  ಕಲಿಗಾಲ ಅಂದ್ರೆ ಇದೇಯೇನೋ, ಸೃಷ್ಟಿಯ ವಿನಾಶ ಕಾಲವೇನೋ. ನೀವೇನಂತೀರಿ?
@ಪ್ರೇಮ್@
08.08.2020

ಆಟಿ ಬಂತು

ಆಟಿ ಬಂತು

ಆಚರಣೆ ಹಬ್ಬಗಳ ಬದಿಗಿರಿಸಿ
ಪ್ರಕೃತಿ ವಸ್ತುಗಳ ಪ್ರೋತ್ಸಾಹಿಸಿ
ನೈಸರ್ಗಿಕ ತಿನಿಸುಗಳ ಪುಷ್ಠೀಕರಿಸಿ
ರೋಗರುಜಿನಗಳಿಂದ ದೂರವಿರಿಸೊ ಆಟಿ ಬಂತು!

ಪತ್ರೊಡೆ, ಹಲಸಿನ ಬೀಜಗಳ ಊಟ
ಚೆಕ್ಕೆ ಕಹಿ ಔಷಧಿಗಳ ಕಾಟ
ಹಿರಿಯರ ನೆನಪಿನ ರಸದೂಟ
ಹಳೆ ಸಂಪ್ರದಾಯಗಳ ನೆನಪಿಸುವ ಆಟಿ ಬಂತು.

ಆಟಿ ಕಳೆಂಜನ ನಲಿವಿನ ನೋಟ
ಮಳೆಯಲ್ಲು ಬೆಳೆವ ಅಣಬೆಯ ಹುಡುಕಾಟ
ಕಳಲೆ, ಕೆಸುಗಳ ಸಿಹಿ, ಕಾರದೂಟ
ಮಕ್ಕಳೊಡನೆ ತವರಲಿ ಕಳೆವ ಆಟಿ ಬಂತು..

ಹಬ್ಬ ಹರಿದಿನಗಳ ದೂಡಿ ಬಂತು
ಹಲವು ಕಾರ್ಯಕ್ರಮಗಳ ಮುಂದೋಡಿಸಿ ಬಿಡ್ತು
ದೈವ ದೇವ ಕಾರ್ಯಗಳ ಬೇಡವೆಂದಿತು
ಹಿರಿಯರ ಸೇವೆಗಷ್ಟೆ ಮೀಸಲಾದ ಆಟಿ ಬಂತು..
@ಪ್ರೇಮ್@
20-07-2020

ಗುರುವಾರ, ಆಗಸ್ಟ್ 6, 2020

ಟಂಕಾಗಳು

ಟಂಕಾಗಳು

ಟಂಕಾ-1

ಮಾತೆಯೆಂದರೆ 
ಮುತ್ತಲ್ಲವು ಅವಳು
ಮಾಣಿಕ್ಯವಲ್ಲ
ನಿಧಿ ಧನವೂ ಅಲ್ಲ
ಸರ್ವಕ್ಕಿಂತ ಮಿಗಿಲು!

2. ಟಂಕಾ

ಮನುಜನ ಗುಣವೇ
ಪರೋಪಕಾರ ಮಾಡಿ
ಜನಮನದಿ
ಸದಾ ನೆಲೆಯೂರುವ
ದಿನಪನ ಹಾಗೆಯೇ
ಬೆಳಕ ನೀಡಬೇಕು!
@ಪ್ರೇಮ್@
05.08.2020

ಹಾಯ್ಕುಗಳು

ಹಾಯ್ಕುಗಳು

1. ಕೆಂಪಾದವಲ್ಲ
      ಭೂತಾಯ ಕಣ್ಣುಗಳು
           ಮಳೆ ಸುರಿಸಿ!!!

2. ಪುಟ್ಟ ಕಂದನ
        ನಗುವ ಕೇಕೆಯಲಿ
             ಜಗ ಮರೆತೆ!!!

3. ಅಮ್ಮನ ಕರ
      ಪಾತ್ರೆಯನು ಉಜ್ಜಿದ
        ಗಡಸು ಧ್ವನಿ!

4. ಇಳೆ ತಂಪಾಗೆ
       ಮೇಘ ರಾಜನ ನೃತ್ಯ
         ಸ್ತಬ್ಧವಾಯಿತು!!!
@ಪ್ರೇಮ್@
06.08.2020

ಮಂಗಳವಾರ, ಆಗಸ್ಟ್ 4, 2020

ನನ್ನ ಭಾರತ

ನನ್ನ ಭಾರತ

ನನ್ನ ಭಾರತ ಹಸಿರ ಸೀರೆಯ ಹೊದ್ದು ಮಲಗಿದೆಯೇ?
ನನ್ನ ದೇಶವು ದೇಶ ಭಕ್ತರ ಉಡಿಯ ತುಂಬಿದೆಯೇ?

ಶಿರದಿ ಹಿಮಾಲಯ ಗಂಗೆಯುಕ್ಕುವ ಜಲ ಶುದ್ಧಿಯಾಗಿದೆಯೇ?
ಕಾಲ ತೊಳೆಯಲು ಮಹಾ ಸಾಗರ ಉಕ್ಕಿ ಹರಿದಿದೆಯೇ?

ಮಾತೆ ಗೌರವ ಉಳಿಸೆ ಹೆಮ್ಮಕ್ಕಳ ಮಾನ ಕಾಪಾಡಿದೆಯೇ?
ಜಾತಿ ಮತ ಪಂಥಗಳ ಸಂಕೋಲೆ ಕಿತ್ತು ಹಾಕಿದೆಯೇ?

ಹಲವು ಭಾಷೆ ನುಡಿ ಲಿಪಿಗಳೆಲ್ಲವು ಒಂದನ್ನೇ ಸಾರಿವೆಯೇ?
ಮೋಸ ವಂಚನೆ ಹೊಟ್ಟೆಕಿಚ್ಚದು ಬಹು ದೂರ ಓಡಿವೆಯೇ?

ಗಾಂಧಿ ತಾತನ ರಾಮರಾಜ್ಯವು ಎಲ್ಲೆಲ್ಲು ಕಾಣುವುದೇ?
ದಾಸ್ಯವೆಂಬ ಸಂಕೋಲೆ ಮುರಿದು ಸರ್ವ ಸ್ವಾತಂತ್ರ್ಯ ಬಂದಿದೆಯೇ?

ಉರಿವ ಮನಗಳ ತಣಿಸಿದ ಉಸಿರೊಂದೆ ಆಗಿದೆಯೇ?
ಪ್ರೇಮ ಪ್ರೀತಿ ಶಾಂತಿ ಭಕ್ತಿಯ ಕೀರ್ತಿ ಸಾರುತಿವೆಯೇ?
@ಪ್ರೇಮ್@
04.08.2020

ಸೋಮವಾರ, ಆಗಸ್ಟ್ 3, 2020

ಮನಸಿನ ಮಾತು ಓದ್ನೋಡಿ

  ಮನದ ಮಾತು

ಸುಮ್ನೆ ಓದ್ನೋಡಿ...

ಈ ಪ್ರಪಂಚದ ಮನುಷ್ಯರಲ್ಲಿ ಯಾರೂ ಪರ್ಫೆಕ್ಟ್ ಅಲ್ಲ ನೆನಪಿರಲಿ. ಒಬ್ಬ ನೇರ ನುಡಿಯವನಾದರೆ ಮತ್ತೊಬ್ಬ ಅಂಜುಬುರುಕ. ಒಬ್ಹ ಹೃದಯ ಶ್ರೀಮಂತ ಬಡವನಾದರೆ ಮತ್ತೊಬ್ಬ ಗುಣದಲ್ಲಿ -ಬಡವ. ಒಬ್ಬ ಉತ್ತಮ ಸಂಪತ್ತು , ನಡತೆಯಿರುವವ ರೋಗಿ. ಉತ್ತಮ ಟ್ಯಾಲೆಂಟ್ ಪಡೆದವ ಅಹಂಕಾರಿ! ಗರ್ವಿ, ಯಾರನ್ನೂ ತಿದ್ದದ ಮನೋವಿಕಾರಿ, ಮತ್ತೊಬ್ಬ ಸರಳ ಸುಂದರ ದೈವೀ ಗುಣ ಸಂಪನ್ನ, ಒಬ್ಬ ಗಾಂಧಿಯಾದರೆ ಮತ್ತೊಬ್ಬ ಬೋಸ್! ಯಾರನ್ನೂ ಸರಿ ಎನ್ನುವಂತಿಲ್ಲ, ಒಂದಲ್ಲ ಮತ್ತೊಂದು ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನ! ಅದೇ ವ್ಯಕ್ತಿಗತ ಬದಲಾವಣೆ. ಇದನ್ನೇ ಗುಣ ಅಂತಾರೆ!
   ಆ ಗುಣದಿಂದ್ಲೇ ನಾವು ಮನುಷ್ಯರನ್ನ ಅಳೆಯೋದು! ಹೇ ಅವ್ಳು ನಂಗೆ ತುಂಬಾ ಇಷ್ಟ ಆಗ್ ಬಿಟ್ಳು ಕಣೋ ಅನ್ನೋಕೆ, ಅವಳ್ನ ಅಬ್ಸರ್ವ್ ಮಾಡಿದಾಗ ಕಂಡ ಅವಳ ಗುಣಾನೇ ಸಾಕ್ಷಿ. ಚೆನ್ನಾಗಿರೋ ಹುಡ್ಗೀರು ಎಲ್ಲಾ ಕಡೆ ಸಿಗ್ತಾರೆ. ಚೆನ್ನಾಗಿರೋ ಹಾರ್ಟ್ ಸಿಗೋದ್ ಕಷ್ಟ ಇದೆ. ನಾವ್ ಲೈಫ್ ಲಾಂಗ್ ಅಂಥ ಹಾರ್ಟ್ ಗಾಗಿ ಹುಡುಕಾಡ್ತಿರ್ತೇವೆ. 
   ನಾವ್ ಹುಡುಕಿ ಬಿಟ್ರಂತೂ ಪ್ರಪಂಚಾನೇ ಮರ್ತು ಲವ್ವಲ್ ಮುಳುಗಿ ಹೋಗ್ತೇವೆ. ಅಲ್ಲೇನಾದ್ರೂ ಎಡವಟ್ಟಾದ್ರೆ ಹೃದಯ ಒಡ್ಕೊಳತ್ತೆ. ಅಳ್ತೇವೆ. ಬಾರ್ ಕಡೆ ವಾಲ್ತೇವೆ. ಪ್ರಪಂಚದಲ್ಲಿ ನನ್ ಗಾಗಿ ಇದೊಂದೇ ಹಾರ್ಟಿತ್ತು, ಅದ್ನ ದೇವ್ರು ಕಿತ್ಕೊಂಬಿಟ್ಟಾಂತ ದೇವರ್ನೇ ಬೈತೇವೆ.
   ಆದ್ರೆ ದೇವ್ರು ನಮ್ ಲೈಫ್ ನ ನಾವೇ ಕಟ್ಕೊಳ್ಳೋಕ್ ಬಿಡಲ್ಲ, ಅವ್ನೇನಿದ್ರೂ ಗಾಡ್ ಫಾದರ್ ತಾನೇ? ತನ್ ಮಕ್ಳ ಲೈಫಿಗೆ ತಾನೇ ಏನೋ ಲೆಕ್ಕಾಚಾರ ಹಾಕಿರ್ತಾನೆ. ಅದರ ಪ್ರಕಾರಾನೇ ನಡೆಸ್ತಾನೆ ಕೂಡಾ. ಅವನ್ ಲೆಕ್ಕಾಚಾರ ಏನೋ ಚೆನ್ನಾಗೇ ಇರುತ್ತೆ..ಆದ್ರೆ ನಾವ್ ಅದ್ನ ಸ್ವೀಕರಿಸೋಕೆ ರೆಡಿ ಇರಲ್ಲ, ಒಪ್ಕೊಳೋಲ್ಲ ಅಷ್ಟೆ. ಹಠಮಾರಿಗಳು ನಾವು!
   ಆದ್ರೆ, ನಾವ್ ದೇವರ್ ಮಾತ್ ಕೇಳಿ ಹಠ ಮಾಡದೆ ದೇವರ್ ಹೇಳಿದ ಹಾಗೇ ಬದುಕಿದ್ರೆ ಬದ್ಕಲ್ಲಿ ಆರೋಗ್ಯವಾಗಿ ಬಿಂದಾಸ್ ಆಗಿರ್ತೀವಿ ಅನ್ನೋದಂತೂ ಸತ್ಯ! ನಲ್ವತ್ ವರ್ಷಕ್ಕೇ ಗಡ್ಡ ಮೀಸೆ ಹಣ್ಣಾಗಿ ಟೆನ್ಶನ್ ತಗೊಂಡು ಮುದ್ಕನ್ ತರ ಬಾಳೋ ಬದ್ಲು ದೇವರ್ ಮಾತ್ ಕೇಳಿ. ಅರ್ವತ್ತಾದ್ರೂ ಹುಡ್ಗನ್ ಥರಾ ಯಂಗ್ ಅಂಡ್ ಎನರ್ಜೆಟಿಕ್ ಆಗಿರ್ತೀರಾ. 

   ಭೂಮಿಗ್ ಬಂದ್ ಮೇಲೆ ಸಂಸಾರದ್ ಜವಾಬ್ದಾರಿ ನಿಭಾಯಿಸ್ಲೇ ಬೇಕು. ಎಲ್ಲಾರ್ಗೂ ಅವರ್ದೇ ಆದ ಟೆನ್ಶನ್, ಕೆಲಸಗಳಿರುತ್ತೆ. ಅದ್ನ ಮಾಡ್ಲೇ ಬೇಕು. ಯಾರು ಯಾರ್ ಕೈಲಿ ತಪ್ಪಿಸ್ಕೊಂಡ್ರೂ, ಕೋರ್ಟು, ಕೇಸಲ್ಲಿ ಪುಸ್ಕ ಆದ್ರೂ ದೇವರ ಅಟೆಂಡೆನ್ಸ್ ರಿಜಿಸ್ಟಾರ್ ನಲ್ಲಿ ದಾಖಲಾಗೇ ಇರ್ತೀರಾ. ಮಗಾ ಈ ದಿನಾ ನಿನ್ನ ಭೂಮಿಗ್ ಕಳ್ಸಿದ್ದೀನಿ ಇಂಥವರ್ ಮನೆಗೆ, ಇಷ್ಟ್ ದಿನ ಇದ್ದು, ಅಲ್ಹೋಗಿ, ಇಲ್ಹೋಗಿ ತಲೆ, ಹೊಟ್ಟೆ ಕೆಡಿಸ್ಕೊಂಡ್ ಇಂಥ ದಿನ ಭೂಮಿಯಿಂದ ಹೊರಟ್ಬಿಡು ಅಂತ ರೆಕಾರ್ಡ್ ಬರ್ದು  ,ಮೊದ್ಲೇ ಜಾತ್ಕ ಮಾಡಿ  ಕಳಿಸ್ಕೊಟ್ಟಿರ್ತಾರೆ. ಮಡದಿ, ಮಕ್ಳು ಬದ್ಕಿಸೋದಕ್ಕೆ ಹಣ ಖರ್ಚು ಮಾಡ್ತಾರೆ, ನೋಡ್ಕೋತಾರೆ. ಆದ್ರೇನು? ವ್ಯಾಲಿಡಿಟಿ ಮುಗ್ದಾಗ ಉಸಿರು ಬಂದಾಗ್ಲೇ ಬೇಕು, ಹಾರ್ಟ್ ರೆಸ್ಟ್ ತಗೊಳ್ಳೇ ಬೇಕು. ನೀವೇನಂತೀರಾ?
@ಪ್ರೇಮ್@
04.08.2020

ಭಾನುವಾರ, ಆಗಸ್ಟ್ 2, 2020

ವಚನಗಳು

ವಚನಗಳು

ಬೆನ್ನ ಹಿಂದೆ, ಮುಂದೆ ಹುಟ್ಟಿದ
ಸಹೋದರರ ರಕ್ಷಿಸಿ ದೇವಾ
ರಕ್ತ ಹಂಚಿ ಹುಟ್ಟದಿದ್ದರೂ ಸಹೋದರನಂತೆ ರಕ್ಷಿಸುವ ಮನವ ಸದಾ ಹೆಚ್ಚು ಕಾಲ ಬಾಳುವಂತೆ ಹರಸಿ ಈಶಾ..

ವಚನ-2

ಮಾತಿರದ ಮೌನದಲೂ ಪ್ರೀತಿಯಿರುವ ಸಂಬಂಧಗಳ ಮದ ಮತ್ಸರ ಲೋಭಗಳಿಂದ ದೂರವಿರಿಸಿ ಕಾಪಾಡಬೇಕು ನೀನೇ ಜಗದ ಈಶಾ...
@ಪ್ರೇಮ್@
03.08.2020

ಎಡ್ಡೆಪು

ಎಡ್ಡೆಪು

ಸಜ್ಜಿಗೆ ಬಜಿಲ್ ಲ ಬೊರ್ಚಿಗೆ ಅಜ್ಜೆರೆಗಗ್ಯರೆ ಕೂಲಿಜ್ಜಿಗೆ
ಬಜ್ಜಿದ ಒಟ್ಟಿಗೆ ಮಜ್ಜಿಗೆ ಪಾಡಿನ ಬಜಿಲವು  ರುಚಿ ಭಾರಿಗೆ!

ಕಜ್ಜಾಯ ದೀಂಡಲ ನಂಜಿದ ಮನಸ್ ಡ್
ತಿಂದ್ಂಡ ಉಡಲ್ ಗ್ ಸೇರಂದ್ ಗೆ
ಲಜ್ಜೆ ದಾಂತಿನ ಪಜ್ಜಿ ಉಸುರುಲೆನ್
ಮೆಚ್ಚಾಯರೆಗ್ ಏರೆಗ್ಲಾ ಆವಂದ್ ಗೆ!

ಮಂಜು ಬೂರುನ ಪನಿತಾತ್ ಮೋಕೆಗ್ ಲಾ
ಮೂಜಗ ಕಾಪುಂಡು ಕಾತರಡ್!
ಗಂಜಿದ ಬಟ್ಟಲ್ ಡಿತ್ತಿನ ನೀರ್ ಲ ಬಂಜರ ಮಲ್ಪುಂಡು  ಬಡವುನು ಒರಕ್
ಮೂಜಿ ಕಾಸ್ ಬೆಲೆ ದಾಂತಿನ ಬದ್ ಕ್ ಗ್
ಆಜಿ ಮೂಜೈತ ಲೆಕ್ಕಾಚಾರ!
ನಾಚಿಕೆ ಮರತ್ ದ್ ಕಲ್ಪುನ ತೂಲೆ
ಕಲಿಯುಗ ಉಂದು ಪೊಸತ್ ನ್ ಕಲ್ಪುಲೆ..

ಪೂಜಿದ್ ನಿಂಗುನ ಗುಣ ಅವ್ ಪೋವಡ್
ಪಟ್ಟೊಂದು ಬದುಕುನ ಮನಸ್ ಬರಡ್
ಪರತ್ ಲ ಪೊಸತ್ ಲ ಒಟ್ಟಿಗೆ ಸೇರ್ ದ್
ಪೊಸ ಪೊಸ ಆವಿಷ್ಕಾರೊಲು ಆವಡ್..

ಪುರ್ಪದ ಪುರಾಲ್ ದ ಲೆಕ್ಕೊನೆ ನಮ್ಮ
ಪುದರ್ ಲ ಪೋವಡ್ ಪರವೂರುದಂಚಿ
ಪರಬೆರೆ ಬಾಯಿಡ್ ಆಶೀರ್ವಾದದ ವರ ಬರಡ್
ನನೊರಿ ತೂಯೆಡ ಖುಷಿ ಕೊರಡ್
ನನೊರ ಬನ್ನಗ ಶಾಂತಿಲ ಬರಡ್
ಮೋಕೆದ ಉಡಲ್ ಡ್ ನೆಮ್ಮದಿ ಒರಿಯಡ್ .
@ಪ್ರೇಮ್@
02.08.2020

ಗಝಲ್-201

ಗೆಳೆಯರ ದಿನದ ಪ್ರಯುಕ್ತ

ಗಝಲ್

ಅಂಧಕಾರದ ಲೋಕದಲಿರುವ ಕುರುಡನಿಗೆ ಜಾರಿ ಕಾಣಿಸುವವ ಗೆಳೆಯ
ಮದ ಮೋಹ ಮತ್ಸರವ ತೊಡೆದು ಹಾಕಿಸುವವ ಗೆಳೆಯ

ಮಾನಿನಿಯ ಮರೆಯಲು ಸಹಕರಿಸಿ ಜೀವಕ್ಕೆ ದಾರಿ ತೋರುವವ
ಮೋಹ ಪಾಶದಿ ಸಿಲುಕಿದವನಿಗೆ ಮುಕ್ತಿ ಕರುಣಿಸುವವ ಗೆಳೆಯ

ಮಂಕು ಬುದ್ಧಿಗೆ ನೀರು, ಆಹಾರ ಹಾಕಿ ಸರಿಮಾಡುವವ
ಮಂದಾರದ ಮನದಲಿ ಸಹಕಾರ ನೀಡಿ ರಕ್ಷಿಸುವವ ಗೆಳೆಯ

ನಾವಿಕನಿಲ್ಲದ ಹಡಗಿನಲಿ ಒಬ್ಬಂಟಿಗನಾಗಿ ಚಲಿಸುವವನಿಗೆ ಜೊತೆಯಾದವ
ನಗರ ಹಳ್ಳಿಯಲೂ ನಂಬಿಗನಾಗಿದ್ದು,  ನಗೆಗಡಲಲಿ ತೇಲಿಸುವವ ಗೆಳೆಯ!

ನೋವುಂಡ ಮನಕೆ ನಲಿವಿನ ಸಾಂತ್ವನದ ಕಷಾಯ ನೀಡುವವ
ನರಕದಂಥ ಬದುಕಲಿ ಸದಾ ನಾಕದಂದದಿ ಬದುಕಿಸುವವ ಗೆಳೆಯ

ನೀರಿನಂಥ ಪರಿಶುದ್ಧ ಸಂಬಂಧ, ಸಕ್ಕರೆಯಂಥ ಸಿಹಿಗುಣದವ
ನಿರ್ವಿಕಾರ ಭಗವಂತನ ಮತ್ತೊಂದು ರೂಪವಾಗಿ ಬಂದವ ಗೆಳೆಯ.

ನಾದ ಹೊಮ್ಮಿಸಿ, ನೆರಳು ನೀಡಿ ನಿಜದಿ ಸಲಹುವವ 
ನಂಜಿನುರಿಯಲು ನಾಚಿ ನೀರಾಗಿಸಿ ನೂಲು ತೆಗೆವವ ಗೆಳೆಯ!

ನೇಪಥ್ಯಕೆ ಸರಿದಿಹ ಹಲ ಸಂಬಂಧಗಳ ಒಂದುಗೂಡಿಸುವವ
ತನ್ನ ನೇರ ನುಡಿಯಿಂದ  ಪ್ರೀತಿ ಪಡೆಯುವವ ಗೆಳೆಯ..
@ಪ್ರೇಮ್@
02.08.2020

ಶನಿವಾರ, ಆಗಸ್ಟ್ 1, 2020

ದಶಕ-1

ದಶಕ-1

ಮಗಳದು ಬಂದಳು ಮನೆಯನು ತುಂಬಲು
ಗೆಜ್ಜೆಯ ನಾದದಿ ಎಲ್ಲರಿಗೂ ತಂಪನು ತಂದಳು
ತಾ ನಗುತ ನಗಿಸುತಲಿ ಮನವನು ಕದ್ದಳು

ರಂಪವ ಮಾಡುತ ಜಡೆಯನು ಎಳೆದಳು
ಕೆಂಪನೆ ಕಣ್ಣಲಿ ಮುತ್ತನು ಸುರಿದಳು
ತಂದೆಯ ತಾಯಿಯ ಹೆಸರನು ಮೆರೆದಳು
ಶಾಲೆಗೂ ಮನೆಗೂ ತಾನೇ ಕೀರ್ತಿಯನು ತಂದಳು

ಮಗನಂತೆಯೇ ಮಗಳೂ ಚೆನ್ನಾಗಿ ಸಾಕಿ ಬೆಳೆಸಿರಿ
ಮಗಳೂ ಬಾಳನು ಬೆಳಗಿಸಬಲ್ಲಳೆಂಬುದ ಅರಿಯಿರಿ..
@ಪ್ರೇಮ್@
01.08.2020

2 ಟಂಕಾಗಳು

ಎರಡು ಟಂಕಾಗಳು

1. 

ಹಟ ತೊಟ್ಟಿಹೆ
ಮಾಡಿಯೇ ತೀರುವೆನು
ಗುರಿಯೆಡೆಗೆ
ನನ್ನ ಪಯಣ ಶುರು
ನಾನೊಬ್ಬನೇ ಹೋಗುವೆ.

2.

ಮನದಲಿದೆ
ನಾನು ಏನಾಗಬೇಕು
ಹೃದಯದಲಿ
ಇಲ್ಲವಲ್ಲ ಕಲ್ಮಶ
ಸಾಧಿಸಿಯೇನು ಏನೂ!
@ಪ್ರೇಮ್@
22.06.2020

ಲೇಖನ

ನನಗಿಷ್ಟವಾದ ಪುರಾಣದ ಸ್ತ್ರೀ ಪಾತ್ರ

       ಪುರಾಣಗಳು ನಮ್ಮಜೀವನವನ್ನು ತಿದ್ದಿಕೊಳ್ಳಲಿಕ್ಕಿರುವ ಪುರಾವೆಗಳು. ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳ ವ್ಯತ್ಯಾಸ ತಿಳಿಸಿ ಬದುಕನ್ನು ಹೇಗೆ ಸ್ವೀಕರಿಸಬೇಕೆನುವ ತಂತ್ರಗಳನ್ನು ಅಲ್ಲಿನ ಪ್ರತಿಯೊಂದು ಪಾತ್ರಗಳೂ ನಮಗೆ ಕಲಿಸಿ ಕೊಡುತ್ತವೆ. ಅಂತಹ ಮಹಾನ್ ಪಾತ್ರಗಳಲ್ಲಿ ರಾಮಾಯಣದ ಊರ್ಮಿಳೆಯ ಪಾತ್ರ ನನಗೆ ತುಂಬಾ ಹಿಡಿಸಿದ ಪಾತ್ರ.
    ರಾಣಿಯಾಗಿದ್ದರೂ ರಾಣಿ ಪಟ್ಟ ಸಿಗದ, ಐಶ್ವರ್ಯವಿದ್ದರೂ ಅನುಭವಿಸಲಾಗದ, ಗಂಡನಿದ್ದರೂ ಒಂಟಿಯಾಗಿ ಬದುಕಿದ, ಅರಮನೆಯಲ್ಲೂ ನೆಮ್ಮದಿ ಕಾಣದ ತಬ್ಬಲಿ ಬದುಕು ಊರ್ಮಿಳೆಯದ್ದು. 
     ರಾಮ, ಲಕ್ಷ್ಮಣ, ಸೀತೆಯರನ್ನು ಹೊಗಳಿ ಪೂಜಿಸುವವರೇ ಎಲ್ಲರೂ. ತನ್ನ ಜೀವಮಾನವಿಡೀ ತ್ಯಾಗಮಯಿಯಾಗಿ ಬದುಕಿದ ಊರ್ಮಿಳೆ ಯಾರ ಕಣ್ಣಿಗೂ ಬೀಳಲೇ ಇಲ್ಲ. 

   ವನವಾಸದಲ್ಲೂ ಸೀತೆಯೊಡನೆ ರಾಮನಿದ್ದ. ಆದರೆ ಲಕ್ಷ್ಮಣ ತನ್ನ ಜೀವನವಿಡೀ ರಾಮ-ಸೀತೆಯರ ರಕ್ಷಣೆಯಲ್ಲಿ ತೊಡಗಿದ್ದನೇ ಹೊರತು ತನ್ನ ಸತಿಗೇನು ಬೇಕು, ಅವಳ ಆಸೆಗಳೇನು, ತನ್ನ ನಿರೀಕ್ಷೆಗಳೇನು, ಆಸೆಗಳೇನು ಎಂಬ ಯಾವುದನ್ನೂ ಯಾವತ್ತೂ ಆಲಿಸುವತ್ತ ಗಮನವೇ ಕೊಡಲಿಲ್ಲ. ತನ್ನ ಆಸೆ, ಆಕಾಂಕ್ಷೆಗಳನ್ನೆಲ್ಲಾ ಬದಿಗೊತ್ತಿ ತನ್ನ ಜೀವನವನ್ನೇ ತ್ಯಾಗಕ್ಕೆ  ಮುಡಿಪಾಗಿಟ್ಟ ಊರ್ಮಿಳೆಗೆ ಹ್ಯಾಟ್ಸಪ್.
   @ಪ್ರೇಮ್@
13.07.2020

ಶಿಶುಗೀತೆ-ತಮ್ಮ

ತಮ್ಮ

ನನ್ನ ತಮ್ಮ
ತರಲೆ ತಿಮ್ಮ
ಓಡೊ ಗುಮ್ಮ
ಹೆದರೊ ಪಮ್ಮ

ನಾಯಿ ನೋಡಲು
ಅಳುತ ಇರಲು
ತಿಂಡಿ ತರಲು
ಬಳಿಗೆ ಬರಲು..

ಮನೆಯ ಚೋರ
ಆಟದ ಪೋರ
ತುಂಟ ಕುವರ
ಅಮ್ಮನ ಚಕೋರ

ಜಾಣ ಮರಿ
ಪಾಠ ಬರಿ
ಎನಲು ಉರಿ
ಕೋಣ ಮರಿ..

ಊಟ ಬೇಡ
ಓದು ಬೇಡ
ಪೆಟ್ಟು ಬೇಡ
ಹಾಲು ಬೇಡ

ಮೊಬೈಲು ಬೇಕು
ಟಿವಿ ಬೇಕು
ತಿಂಡಿ ಬೇಕು
ಚೂರು ಸಾಕು!
@ಪ್ರೇಮ್@
07.07.2020

ಆಹ್ಲಾದ-ಶರ ಷಟ್ಪದಿ

ಆಹ್ಲಾದ(ಶರ)

ವರುಣನ ಕೃಪೆಯದು
ಕರುಣೆಯ ಬೀರಿದೆ
ತರುಲತೆ ನಗುತಲಿ ನಾಟ್ಯವಿದೆ..
ಚರಾಚರ ತನ್ನ 
ಮರದಲು ವರವನು
ಹರನನೆ ನೆನೆಯುತ ಸಾಗುತಿದೆ .

ಭರದಲಿ ಬಾಗಿದೆ 
ಗಿರಗಿರ ತಿರುಗಿದೆ
ಕರದಲಿ ಪುಷ್ಪವ ಹಿಡಿದಂತೆ..
ತರತರ ಬಣ್ಣದ 
ಭರವಸೆ ತಂದಿದೆ
ಮನಸನು ಬಳಿಯಲಿ ಹಿಡಿದಂತೆ..

ಪರಿಸರ ಶುದ್ದಿಯು
ಉರಿಸದು ಮನವನು
ಹರಸುತ ಸರ್ವರ ಬೇಸರವ...
ಪರಿಪರಿಯಲಿ ಕಸ 
ಸುರಿಯುತ ಜನಗಳು
ಪೊರೆವವಗೆ ಗದರುತ ಸಾಗುವರು..
@ಪ್ರೇಮ್@
04.07.2020

ಭಾವಗೀತೆ-ಸಮಾಗಮ

ಭಾವಗೀತೆ

ಸಮಾಗಮ

ಸಮಾಗಮ ಪದದ ನಿಜ ಅರ್ಥ ಅರಿತೆನು
ಜೊತೆಯಲಿ ಕಲೆತು ಬೆರೆತು ಹೋಗುತ
ಒಲುಮೆಯೆನುವ ಭಾವವ ತಿಳಿದೆನು
ನಿನ್ನಲೊಂದಾಗಿ ವೀಣೆ ನುಡಿಸುತ..

ಮಧುರ ಮಮತೆಯೇ ಒಡಲ ಹಣತೆಯೇ
ಸ್ನೇಹದ ಸಿರಿ ಚಿಗುರು ನೀ
ಅಧರ ಸವಿಯನು ನೀಡೊ ಜಲಧಿಯೇ
ಪ್ರೇಮದ ಮಿರಿ ಮಿಂಚು ನೀ..

ಅಮೃತ ಸಿಂಚನ ನಗೆಯ ಹೂರಣ
ಮಿಳಿತವಾಗಿದೆ ಹೊಳೆಯೊ ಕಣ್ಣಲಿ
ಆವೃತ ಕವಚವು ಬಾಳ ಹಣ್ಣಿಗೆ
ಸುಲಲಿತವಾಗಿದೆ ದಾರಿ ಎದೆಯಲಿ..

ನವ್ಯ ಕಾವ್ಯವು ಉಕ್ಕಿ ಬಂದಿದೆ
ಭವ್ಯ ಶಕ್ತಿಯ ನೋಟದಿ
ಸವ್ಯಸಾಚಿಯೆ ಸ್ಪರ್ಶ ಮಾತ್ರಕೆ
ಹಿತವು ಎನಿಸಿದೆ ಭವದಿ..
@ಪ್ರೇಮ್@
24.06.2020

ಹನಿಗವನ

ಹನಿ ಗವನ
ಹನಿಹನಿಯಾಗಿ ಸುರಿಯತಲಿ ಬಂದೆ
ಹನಿಸುತ ಜಲಧಾರೆಯನು ನಿಂದೆ
ಹಣಕೆ ಬೆಲೆಯಿಲ್ಲ ನನ್ನಲಿ ಸದಾ
ಕಣಕಣದಿ ಜಲ ಆಮ್ಲ ಬೆಸೆದಿಹುದು ಕಂದಾ..

ನೀರೆನುವೆ ಉದಕವೆನುವೆ
ಜಲ ನಾನು ಸುರಿಯುವೆ
ಗಟ್ಟಿಯಾಗಲು ಮಂಜಿನ ಗೆಡ್ಡೆ 
ಕಾಣದಾಗಲು ನೀರಾವಿ ಗುಡ್ಡೆ...
@ಪ್ರೇಮ್@
14.07.2020

ನಮನ

ನಮನ

ನಮನ ನಮನ ಗುರುದೇವಗೆ
ನಮನ ನಮನ ಮಹಾದೇವಗೆ..

ನಮನ ನಮನ ಗಣಾಧೀಶಗೆ
ನಮನ ನಮನ ಸಿರಿದೇವಿಗೆ
ನಮನ ನಮನ ಹರಿಹರನಿಗೆ
ನಮನ ನಮನ ಸುಬ್ರಹ್ಮಣ್ಯಗೆ

ನಮನ ನಮನ ಶ್ರೀಲಕ್ಷ್ಮಿಗೆ
ನಮನ ನಮನ ಶ್ರೀ ಶಾರದೆಗೆ
ನಮನ ನಮನ ಜೈ ಭವಾನಿಗೆ..
ನಮನ ನಮನ ಅನ್ನಪೂರ್ಣೆಗೆ

ನಮನ ನಮನ ಅಯ್ಯಪ್ಪಗೆ.
ನಮನ ನಮನ ಸಾಯಿಸಂತಗೆ
ನಮನ ನಮನ ಗುರುರಾಯಗೆ.
ನಮನ ನಮನ ಆಂಜನೇಯಗೆ
ನಮನ ನಮನ ಕವಿಹೃದಯಕೆ..

ನಮನ ನಮನ ಸಿರಿ ಪಾದಕೆ
ನಮನ ನಮನ ನಾಗಬ್ರಹ್ಮಗೆ
ನಮನ ನಮನ ಶನಿದೇವಗೆ.
ನಮನ ನಮನ ನಮ್ಮ ಕಾಯ್ವಗೆ..

ನಮನ ನಮನ ಮಾತಾಪಿತೃಗೆ
ನಮನ ನಮನ ಹಿರಿ ಮನಸಿಗೆ
ನಮನ ನಮನ ವೀರ ಯೋಧಗೆ
ನಮನ ನಮನ ಧೀರ ರೈತಗೆ..
@ಪ್ರೇಮ್@
11.07.2020

ಹನಿಗವನ

ಹನಿಗವನ

ತಲೆಯ ನೀರು ಕಾಲಿಗೆ

ಮದುವ ಹೀರಿದ್ದ
ಮಗ ನಂದನ
ಮಮತೆಯ ಮಾತೆಯ
ಬಳಿ ಸುಳ್ಳು ಹೇಳಿದ
ಪಿತನ ಬಳಿ ಹೇಳಲಾಗದು
ಕಾರಣ ಪಿತ ಮದಿರೆ
ಕುಡಿಯುವುದರಲಿ ಎತ್ತಿದ ಕೈ
ಸುಳ್ಳು ಹೇಳುವುದರಲೂ
ಪಳಗಿದ ಜೀವವದು!
@ಪ್ರೇಮ್@
29.06.2020

ಚುಟುಕು

ಚುಟುಕು

ಪ್ರಿಯೆಗೆ..

ಮಂದಾರ ಪುಷ್ಪ ನೀನೇ ಪ್ರಿಯೆ
ಮಂಗಳ ವಾದ್ಯ ಘೋಷವೂ ಸಿಹಿಯೆ
ಮುಂಬರುವ ಸುಖ ದು:ಖಗಳ ಕಡಿವಾಣ
ನನ್ನ ಬಾಳಿನ ಸ್ವಾತಂತ್ರ್ಯದ ಮಹಾದಾನ..
@ಪ್ರೇಮ್@
15.07.2020

ದಶಕ

 ದಶಕಗಳು

ದಶಕ ಎನ್ನುವ ಹೊಸ ಸಾಹಿತ್ಯ ಪ್ರಕಾರವ ಸೃಷ್ಟಿಸೋಣ. ಇದೇ ಗುಂಪಿನಲ್ಲಿ ಮೊದಲ ಬಾರಿಗೆ. 

ದಶಕಗಳು ಹೇಗಿರಬೇಕೆಂದರೆ

1. ಹತ್ತು ಸಾಲುಗಳಿರಬೇಕು.
2. ಆದಿ ಅಥವಾ ಅಂತ್ಯ ಪ್ರಾಸಗಳಿರಬೇಕು.
3. 4+4+2 ಸಾಲುಗಳ ವಿಂಗಡಣೆ.
4. ಒಂದು ಕತೆ/ಘಟನೆ/ವ್ಯಕ್ತಿ/ಸಂದರ್ಭದ ಕುರಿತು ಬರೆಯಬೇಕು.
5. ಕೊನೆಯ ಎರಡು ಸಾಲು ಪಂಚಿಂಗ್ ಆಗಿದ್ದು ಸಮಾಜ ತನ್ನನ್ನು ತಾನು ತಿದ್ದಿಕೊಳ್ಳುವಂತಿರಬೇಕು.
6. ಕೊನೆಯ ಎರಡು ಸಾಲಿನಲ್ಲಿ ಅಂತ್ಯ ಪ್ರಾಸ ಕಡ್ಡಾಯ.
7. ಪ್ರತಿ ಸಾಲಿನಲ್ಲಿ 15-20 ಅಕ್ಷರಗಳಿರಲೇ ಬೇಕು.
8. ಹೊಸತನದ ಬರವಣಿಗೆಯಿರಲಿ.
@ಪ್ರೇಮ್@
01.08.2020