ಮಂಗಳವಾರ, ಸೆಪ್ಟೆಂಬರ್ 22, 2020

ಕವಿಗಳಿಗೆ ಟಿಪ್ಸ್

ಸಾಹಿತ್ಯದ ಬಗ್ಗೆ

4ಸಾಲು ಚುಟುಕು.

2 ಸಾಲು ದ್ವಿಪದಿ

3 ಸಾಲು ತ್ರಿಪದಿ
ಅರ್ಥ ಗರ್ಭಿತವಾಗಿ ಕೆಲವು ವಚನಗಳನ್ನೂ ತ್ರಿಪದಿಗಳಲ್ಲೆ ಬರೆಯಬಹುದು. ಅಂಕಿತವಿರಬೇಕು.

5-8 ಸಾಲು ಹನಿಗವನ

9-15 ಸಾಲು ಇನಿಗವನ

16, 18, 20, 22, 24 ಸಾಲು ಕವನ

25< ನೀಳ್ಗವನ

ಕತೆಯಾಧಾರಿತ- ಕಥನ ಕವನ

5-7-5 ಪದ, 3 ಸಾಲು ಹಾಯ್ಕು

ದ್ವಿಪದಿಯ ಶೇರ್ ಗಳು, ಕಾಫಿಯಾ, ರಧೀಫ್ ನೊಂದಿಗೆ-ಗಝಲ್

ದಿನಕರ ದೇಸಾಯಿ ವರಸೆ ಚುಟುಕುಗಳು ನಾಲ್ಕೈದು ಪದಗಳ ನಾಲ್ಕು ಸಾಲು, ಕೊನೆಯ ಸಾಲು ಪಂಚಿಂಗ್ ಇರಲೇ ಬೇಕು.

ದುಂಡಿ ರಾಜ್ ಸ್ಟೈಲಿನ ಚುಟುಕುಗಳು 2-3 ಪದಗಳ 4ಸಾಲು, ಪಂಚಿಂಗ್.

ಭಕ್ತಿ ಪ್ರಧಾನ ಗೀತೆಗಳು ಭಕ್ತಿಗೀತೆ, ಹಾಡುತ್ತಾ ಕುಣಿಯಬಹುದಾದವುಗಳು ಭಜನೆ. ಭಕ್ತಿಯೇ ಮೈವೆತ್ತಂಥದ್ದು , ಅನುಭವಿಸಿ ಬರೆದಂಥದ್ದು ಭಕ್ತಿ ರಚನೆ, ಕೀರ್ತನೆಗಳು.

ದೇಶಾಭಿಮಾನದಲಿ ದೇಶ ರಾಜ್ಯಕ್ಕಾಗಿ ಬರೆದ ಗೀತೆಗಳು ದೇಶ ಭಕ್ತಿ ರಚನೆಗಳು.

ಒಂದು ಘಟನೆ, ವ್ಯಕ್ತಿಯ ಸುತ್ತ ಹಾಡುವಂತೆ ಹೆಣೆದ ಉದ್ದ ಪದ್ಯಗಳು ಲಾವಣಿಗಳು.

ಒಂದು ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಬರೆಯುವುದು ಬಂಡಾಯ ಕಾವ್ಯ.

ಭಾವನೆಗಳೇ ಮೂಲವಾದದ್ದು ನವೋದಯ , ನವ್ಯ ಕಾವ್ಯ.

ಮಾಡರ್ನ್ ಆಗಿ ಬರೆಯುವಂಥದ್ದು ಕಾಂಟೆಂಪರರಿ ಸ್ಟೈಲ್.

ಪುಟ್ಟದಾದ ಕತೆ ನ್ಯಾನೋ ಕತೆ. 5-6 ವಾಕ್ಯದೊಳಗಿನದ್ದು.

ಒಂದೆರಡು ಪುಟಗಳ ಕತೆ ಸಣ್ಣ ಕತೆ.

4-10 ಪುಟಗಳ ಕತೆ ನೀಳ್ಗತೆ.

50 ಪುಟ ದಾಟಿದ ಕತೆ ಕಾದಂಬರಿ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಚಾರಿತ್ರಿಕ, ವೈಚಾರಿಕ, ನೈಜ ಘಟನೆ ಆಧಾರಿತ, ಹಾರರ್, ಟ್ರ್ಯಾಜಿಡಿ ಕೊನೆಯಲ್ಲಿ ಬೇಸರದ ಛಾಯೆ,  ಕಲ್ಪನಾತೀತ ಇತ್ಯಾದಿ.

ಮಕ್ಕಳ ಬಗ್ಗೆ, ಮಕ್ಕಳಿಗಾಗಿ ಬರೆದ ಮೇಲಿನ ಯಾವುದೇ ಸಾಹಿತ್ಯ ಪ್ರಕಾರ ಶಿಶು ಸಾಹಿತ್ಯ.

ಸರಿಯಾದ ಭಾಷಾ ಛಂದಸ್ಸು, ಮಾತ್ರಾ ಗಣ, ಅಕ್ಷರ ಗಣದ  ನಿಯಮಗಳನ್ನು ಅನುಸರಿಸಿ ರಗಳೆ, ವೃತ್ತ, ಕಂದಪದ್ಯ, ಷಟ್ಪದಿ ರಚಿಸಬಹುದು.

ಇತರರ ಕತೆ, ಕವನ ಓದಿ ಅದರ ಓರೆ ಕೋರೆಗಳ ಬಗೆಗೆ ತಮ್ಮ ಅಭಿಪ್ರಾಯ ದಾಖಲಿಸುವುದು ವಿಮರ್ಶೆ.

ತಮ್ಮದೇ ಜೀವನದ ಘಟನೆಗಳನ್ನು ತಾನೇ ಬರೆದು ಪ್ರಕಟಗೊಳಿಸುವುದು ಆತ್ಮಕತೆ.(ಆಟೋ ಬಯಾಗ್ರಫಿ)

ನಿಮ್ಮ ಜೀವನದ ಘಟನೆಗಳನ್ನಾಧರಿಸಿ ನಿಮ್ಮ ಬಗ್ಗೆ ಇತರರು ಬರೆಯುವುದು ಬಯಾಗ್ರಫಿ.

ಪ್ರತಿನಿತ್ಯ ನಿಮ್ಮ ಜೀವನದ ಆಗು ಹೋಗುಗಳನ್ನು ನೀವು ದಾಖಲಿಸಿ ಬರೆಯುವುದು ಡೈರಿ.

ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮೂಲಕ ಮಾತನಾಡಿಸುವುದು ನಾಟಕ.

ನಾಟಕದ ನಡುವೆ ಪದಗಳ ಸೇರಿಸುವುದು ಗೀತಾ ನಾಟಕ, ರೂಪಕ.

ಕತೆ ಮತ್ತು ಹಾಡು ಒಟ್ಟಿಗೆ ಒಂದಾದ ಮೇಲೊಂದು  ಹೆಣೆದು ಕತೆ ಕಟ್ಟುವುದು ಕಥಾ ರೂಪಕ.

ದೇವರ ಬಗೆಗೆ 40 ಸಾಲುಗಳಲ್ಲಿ ಬರೆದು ಸ್ತುತಿಸುವುದು ಚಾಲೀಸ್.

ಯಾವುದೇ ವಿಚಾರದ ಬಗ್ಗೆ ಅಭಿಪ್ರಾಯ ದಾಖಲಿಸುತ್ತಾ ಹೋಗುವುದು ಸರಳ ಭಾಷೆಯನ್ನು ಬಳಸುತ್ತಾ, ಇದು ಲೇಖನ.

ಮನದ ಭಾವನೆಗಳಿಗೆ ಹಾಡಿನ ರೂಪ ಕೊಟ್ಟು ಬರೆಯುವುದು 14-20 ಸಾಲು ಭಾವಗೀತೆ.

ಒಂದು ವಿಷಯದ ಮೇಲೆ ಲಘುವಾಗಿ ಬರೆದೂ, ಕಾಮಿಡಿಯಾಗಿ ಸತ್ಯವನ್ನು ಅದು ಇದ್ದ ಹಾಗೆಯೇ ಹೇಳಿ ಸಮಾಜ ತಿದ್ದುವಂಥ ಬರಹ ಲಘು ಬರಹ, ಲಘು ಪ್ರಬಂಧ.

ಪೀಠಿಕೆ, ಪ್ರಸ್ತಾವನೆ, ವಿಷಯ 
ವಿಸ್ತಾರ, ಮುಕ್ತಾಯ(ಕಂಕ್ಲೂಶನ್) ಕೊಟ್ಟು, ಉದಾಹರಣೆಗಳ ಸಹಿತ ಬರೆಯುವುದು ಪ್ರಬಂಧ, ಲಲಿತ ಪ್ರಬಂಧ.

ಸಂಗೀತ ಕಲಿತವರಿಗಾಗಿಯೇ ಹಾಡಲು ಬರೆಯುವುದು ವರಸೆಗಳು, ಸುಳಾದಿ, ಉಗಾಭೋಗ.

ಕವನವೂ ಅಲ್ಲದ ಲೇಖನವೂ ಅಲ್ಲದ ನೇರನುಡಿ ವಚನ.

ನಾಲ್ಕೇ ಸಾಲುಗಳಲ್ಲಿ ಹೇಳುತ್ತಾ ಹೋಗುವ ಕವನಗಳು ಚೌಪದಿಗಳು.

ಕವನ ಸಾಲಿನ ಕೊನೆಯಲ್ಲಿ ಒಂದೇ ಸೌಂಡ್, (ಪದೋಚ್ಛಾರ) ಕನ್ನಡದಲ್ಲಿ ಆದರೆ ಒಂದೇ ಅಕ್ಷರ  ಬಂದರೆ ಅಂತ್ಯ ಪ್ರಾಸ.

ಕವನದ ಮೊದಲಲ್ಲಿ ಒಂದೇ ಅಕ್ಷರ ಬಂದರೆ ಆದಿಪ್ರಾಸ.

ಕವನದ ನಡುವಿನಲ್ಲಿ ಒಂದೇ ಸ್ವರ ಸಹಿತ ವ್ಯಂಜನಾಕ್ಷರ ಮತ್ತೆ ಮತ್ತೆ ಬಂದರೆ ಮಧ್ಯ ಪ್ರಾಸ.
ಇದಕ್ಕೆ ಶಬ್ದಾಲಂಕಾರ ಎನ್ನುವರು.

ಒಂದೇ ಪದವನ್ನು ಬೇರೆ ಬೇರೆ ಅರ್ಥ ಬರುವಂತೆ ಬಳಸುವ ಕೌಶಲ್ಯ ಅರ್ಥಾಲಂಕಾರ.

ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿದೆ ಎನ್ನುವುದನ್ನು ಹಾಗೆ, ಅಂತೆ,ಅಂತೆಯೇ, ತೆರದಿ ಮೊದಲಾದ ಪದ ಬಳಸಿ ಬಿಂಬಿಸುವುದು ಉಪಮಾಲಂಕಾರ.

ಸಂಬಂಧವೇ ಇಲ್ಲದ ಎರಡು ವಸ್ತು, ಭಾವಗಳನ್ನು ಒಂದಕ್ಕೊಂದು ಹೋಲಿಸಿ, ಒಂದು ವಸ್ತುವೇ ಇನ್ನೊಂದು ಎನ್ನುವ ಭಾವ ಬಿಂಬಿಸಿದರದು ರೂಪಕ.

ಜೀವವಿಲ್ಲದ ವಸ್ತುಗಳಿಗೆ ಸಜೀವಿಗಳ ಗುಣವನ್ನು ಸಾಂಕೇತಿಸಿ ಹೇಳಿದರೆ ಅದು ಪರ್ಸಾನೀಫಿಕೇಶನ್.

ಇಡೀ ಒಂದು ಸಂವತ್ಸರವೋ, ಒಂದು ಜನರೇಶನ್ ಬಗ್ಗೆ ಕುರಿತು ಪೂರ್ತಿ ಬೆಳಕು ಚೆಲ್ಲಿ ಬರೆದರದು ಮಹಾಕಾವ್ಯ, ಖಂಡಕಾವ್ಯ.

ಒಂದು ಸ್ಥಳವನ್ನು ಭೇಟಿ ಮಾಡಿ ಅಲ್ಲಿನ ವಿಶೇಷತೆಗಳ ಬಗ್ಗೆ ಬರೆದರೆ ಪ್ರವಾಸ ಕಥನ.

ಒಂದೇ ಹೆಸರಿನಡಿ, ಒಂದೇ ವಿಷಯದ ಮೇಲೆ,  ನಿಗಧಿತ ಪದಗಳಲ್ಲಿ ಬರೆಯುತ್ತಾ ಹೋದರೆ ಅದು ಅಂಕಣ ಬರಹ.

ಪತ್ರಿಕೆಗಳಿಗಾಗಿ, ಸಾಮಾಜಿಕ ಮಾಧ್ಯಮಗಳಿಗಾಗಿ ನಡೆದ ಘಟನೆ, ಕಾರ್ಯಕ್ರಮಗಳ ಬಗ್ಗೆ ಪ್ರತ್ಯಕ್ಷ ಕಂಡು, ಅದನ್ನು  ಚಿಕ್ಕದಾಗಿ ಬರೆದರೆ ಅದು ವರದಿ.

ಈ ರೀತಿ ಕಾವ್ಯದ ವಿವಿಧ ಸ್ತರಗಳ ಬಳಸಿ ಬರೆಯಿರಿ. ಉತ್ತಮ ಕವಿಗಳಾಗಿ, ಕಾದಂಬರಿಕಾರರಾಗಿ, ಲೇಖಕರಾಗಿ, ಕಾದಂಬರಿಗಾರರಾಗಿ, ವಚನಕಾರರಾಗಿ,ಪತ್ರಕರ್ತರಾಗಿ, ವರದಿಗಾರರಾಗಿ,ಬರಹಗಾರ, ಲೇಖಕರಾಗಿ, ಅಂಕಣಕಾರರಾಗಿ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸೇವೆಯನ್ನು ಕರ್ನಾಟಕಕ್ಕೆ ನೀಡೋಣ.
@ಪ್ರೇಮ್ @

ಗಝಲ್-ಗೈರ್ ಮುರದ್ದಫ್ ನ ಇನ್ನೊಂದು ಆಯಾಮ ಹಾಗೂ ಜುಲ್ ಕಾಫಿಯಾ ಗಝಲ್

ಗಝಲ್-ಗಝಲ್-ಗೈರ್ ಮುರದ್ದಫ್ ನ ಇನ್ನೊಂದು ಆಯಾಮ ಹಾಗೂ ಜುಲ್ ಕಾಫಿಯಾ ಗಝಲ್

ಗಗನದೆತ್ತರಕೆ ಏರುವ ತುಡಿತ
ಮನಸ್ಸಿನಾಳಕೆ ಇಳಿಯುವ ಮಿಡಿತ

ಇರಲಾರೆ ನೋವಿನರಿವ ಬಿಟ್ಟು
ಚೇತನಕ್ಕೆ  ಕಲಿಯುವ ಕೆರೆತ!

ಭವಿಷ್ಯದ ಬಗೆಗೊಂದು ನೋಟ
ಆತ್ಮ ಜ್ಞಾನ ಹೆಚ್ಚಿಸಿಕೊಳ್ಳುವ ನೆಗೆತ!

ಇತರರ ಮಾತ ಕೇಳಿ ಬೇಸರ
ಬೇಡ ಪರರೆದುರು ಬಗ್ಗುವ ತುಳಿತ!

ಮಂದಿರದ ದೇವರಲೂ ಬೇಡಿಕೆ
ನಿತ್ಯ ಮಾಡೆನ್ನ ಜೀವನವ ಹರಿತ!

ಭಾವಗಳ ಮೇಳೈಕೆ, ಒದ್ದಾಟ ಒಳಗೊಳಗೆ 
ಕುದುರೆಯಂತೆ ಸಾಗಿದೆ ತನುವ ಕುಣಿತ!

ಶುದ್ಧ ಪ್ರೇಮವ ಅನುಭವಿಸಿದವನೇ ಜಾಣ
ಮಾಡುವೆ ಶಿವನಿಗೆ ಜೀವವ ಅರ್ಪಿತ!
@ಪ್ರೇಮ್@
22.09.2020

ಸೋಮವಾರ, ಸೆಪ್ಟೆಂಬರ್ 21, 2020

ಕವನ ತೆರೆ-ಹೆಣ್ಣು

ತೆರೆ-ಹೆಣ್ಣು


ತೆರೆತೆರೆಯುತ ತೆರೆಗಳು ತೆರಳಲು
ತವರಿನ ದಡದೆಡೆ ತೇರಂತೆ
ತರತರ ಗಾತ್ರದ ನೀರಿನ ಬಂಡೆಯು
ತೊರೆ ನದಿ ಸೇರಿದ ಹಾಗಂತೆ!

ತರುಲತೆ ಬಳ್ಳಿಯು ನೋಡುತ ನಕ್ಕವು
ದೂರದ ಗುಡ್ಡದ ತುದಿಯಲ್ಲಿ
ತೋರುತ ಬಿಳಿನೊರೆ ಜಾರುತ ಬರಲು
ಭೋರ್ಗರೆತವು ಸಾಗರಿ ಹೃದಯದಲಿ..

ಮರಳಿನ ಕಣಗಳು ನೃತ್ಯವನಾಡುತ
ತೆರೆಗಳ ಒಳಗೆ ಸೇರಿರಲು
ಕಪ್ಪೆ ಚಿಪ್ಪು ನಕ್ಷತ್ರ ಮೀನು
ಶಂಖವು ದಡದೆಡೆ ಜಾರಿರಲು..

ತಿರೆಗದು ಸಂತಸ ಮರಳಿನ ರಾಕ್ಷಸ
ರಾಶಿಯ ತೆರದಿ ಬಿದ್ದಿರಲು
ಚಂದ್ರನು ಕಾಣಲು ತೆರೆಗಳು ಮೇಲೇರಲು
ಸೂರ್ಯನು  ದಿಗಂತದಿ ಮುಳುಗಿರಲು...

ತೊರೆಯವು ತೆರೆಗಳು ಕಡಲನು ಎಂದಿಗೂ
ಬಿಡವವು ಭೂಮಿಯ ಸ್ಪರ್ಶವನು
ಹೆಣ್ಣದು, ತವರು ದಡದಲಿ ಅದಕೆ
ತವಕಿಪುದು ತಾ ಮುಟ್ಟಲು ಇಳೆಯನ್ನು!!
@ಪ್ರೇಮ್@
21.09.2020

ಮಂಗಳವಾರ, ಸೆಪ್ಟೆಂಬರ್ 15, 2020

ಬದುಕು

ಬದುಕು

ಭ್ರಮೆಯಲಿ ಬದುಕುವ ಬದುಕದು ಬಾಡುವ ಸುಮದಂತಲ್ಲವೇ ಬುವಿಯಲ್ಲಿ?
ಬಂಧನ ಬೇಡವು ಬೇಸರ ಬರದಿರೆ ಭಯವದು ಬರಬಾರದು ಬದುಕಿನಲಿ..

ಬಾಡದೆ ಇರಲಿ ಹೂವಿನ ಹಾಗೆ ಭವಿತವ್ಯದ ಭಂಡಾರ ಕನಸುಗಳು
ಭೋರ್ಗರೆಯುವ ಜಲಧಿಯ ತೆರದಿ ಬೊಬ್ಬಿರಿಯುತಲಿವೆ ಭಾವಗಳು!

ಬೇರಿನ ತುದಿಯದು ನೀರಾಹಾರವ ಹೀರುವ ಹಾಗಿದೆ ಜೀವನ ಕ್ಷಣವು
ಬೇಗೆಯು ನಿತ್ಯವೂ ಬೆಂಬಿಡದೆ ಕಾಡಿದೆ ಬಾಳಿಲಿ ಬೇಕದು ಸಂಯಮವು..

ಬೀಜವ ಹಾಕಿ ಗಿಡವನು ನೆಟ್ಟೊಡೆ ಹಣ್ಣನು ಸೇವಿಪರುಂಟೇನು ಜಗದಲಿ?
ಬೇರಿನ ಮೇಲೆ, ಕೆಳಗಡೆ ಕೂಡ, ಗೊಬ್ಬರ ನೀರನು ಹಾಕುವುದಲ್ಲದೆ ಪಾಲನೆ ಪೋಷಣೆ ಕಲಿ ರೈತನಲಿ!

ಬವಣೆಯು ಇರದೆ ಬದಲಾವಣೆ ಇರದು ಭವದ ಭಾಗ್ಯದ ಬಲೆಯಲ್ಲಿ
ಬೂರುಗ ಹೂವಿನ ಹಾಗೆಯೇ ಪರಿಮಳ ಸಮಾಜ ಸೇವೆಯ ಕೈಯಲ್ಲಿ..

ಬೊಗಳೆಯ ಬಿಡುತಲಿ ಬೇಡುವ ಜನರದು ಬಳಗವೇ ಇಹುದು ನಾಡಿನಲಿ
ಬೇಸರಗೊಳ್ಳದೆ ಪ್ರೀತಿಯ ಮನದಲಿ ಬಾಳಲು ಕಲಿ ನೀ ಬದುಕಿನಲಿ..
@ಪ್ರೇಮ್@
14.09.2020

ಶಿಶುಗೀತೆ-ವರ್ಣ ಮಾಲೆ

ಶಿಶುಗೀತೆ

ವರ್ಣ ಮಾಲೆ

ಅರಸನ  ಹಾಗೆ
ಆಟಕೆ ಹೋಗೋ
ಇಲಿಯನು ಕಂಡು
ಈಟಿಯ ತಾರೋ

ಉದ್ದದ ಈಟಿಯ
ಊರುತ ಬಾರೋ
ಋಷಿಯಂತೆ ಕುಳಿತು
ಎಲೆಗಳ ಮರೆಯಲಿ

ಏರು ತಗ್ಗಿನಲಿ
ಐದಾರು ದಿಕ್ಕಿನಲಿ
ಒಲವಲಿ ಬದುಕುತ
ಓಡಲು ಬಿಡದೆ

ಔಷಧ ಹಾಕಿ
ಅಂಗಳದಿ ಹುಡುಕಿ
ಅಃ ಇಲಿಯ ಹಿಡಿದೇ ಬಿಟ್ಟೆ!
@ಪ್ರೇಮ್@
10.09.2020

ಶನಿವಾರ, ಸೆಪ್ಟೆಂಬರ್ 12, 2020

ಜಡೆಕವನ- ನೋಟ

ನೋಟ

ನಗರವ ನೋಡಲು ಹೊರಟನು ಹಳ್ಳಿಯ ಗಮಾರ
ಗಮಾರಗೆ ತಿಳಿಯದು ನಗರದ ನೋಟ

ನೋಟವ ನೋಡುತ ದಿಕ್ಕೆಟ್ಟು ನಿಂತ
ನಿಂತನು ಸುತ್ತಲು ಓಡುವ ಗಾಡಿಯು

ಗಾಡಿಯ ಶಬ್ದದಿ ಕಿವಿ ಮುಚ್ಚಿಕೊಂಡನು
ಮುಚ್ಚಿಕೊಂಡನು ತನ್ನ ಮೂಗನೂ ಧೂಳಿಗೆ

ಧೂಳ ಹತ್ತಿ ಕುಳಿತಿದ್ದವು ಗಿಡಮರ ಎಲ್ಲವೂ
ಎಲ್ಲವೂ ಹೊಸದು ನೋಟವು ಸಾಲದು

ಸಾಲದು ಜೇಬಲಿ ಕುಳಿತಿಹ ದುಡ್ಡದು!
ದುಡ್ಡೆ ದೊಡ್ಡಪ್ಪ ನಗರದ ಜೀವನ

ಜೀವನ ಹಳ್ಳಿಯಲಿ ಬಲು ಸುಂದರ
ಸುಂದರ ಪರಿಸರ ಪರಿಶುದ್ಧ ಜಲವು

ಜಲಮಾಲಿನ್ಯವು ನಗರದ ಕೊಳೆ  ಹೊಳೆಯು
ಹೊಳೆಯುತಲಿಹುದು ಕಟ್ಟಡದ ಬಣ್ಣದ ಬೆಳಕು

ಬೆಳಕು ಬೇಕೇ ಬದುಕಲಿ ನಗರಕೆ ನುಗ್ಗು
ನುಗ್ಗುತ ಕತ್ತೆಯ ತರದಲಿ ದುಡಿಯುತ

ದುಡಿಯುತ ದುಡ್ಡನು ತಾ ಕೂಡಿಡುತ
ಕೂಡಿಟ್ಟ ದುಡ್ಡಲಿ ತನ್ನೂರಿಗೆ ಬಂದು
ಬಂಧು ಬಳಗವ ಸೇರಿ ಸಂತಸದಿ ಜೀವಿಸು..
@ಪ್ರೇಮ್@
12.09.2020

ಶುಕ್ರವಾರ, ಸೆಪ್ಟೆಂಬರ್ 11, 2020

ನ್ಯಾನೋ ಕತೆ-ಕಾರಣ

ನ್ಯಾನೋ ಕತೆ

ಕಾರಣ

       ನವನೀತ  ಸಾಯಲು ಕಾರಣ? ಕೇವಲ ಒಂದು ಲಕ್ಷ ರೂಪಾಯಿಗಳು. ಅದೇಕೆ? ಆತ ಕುಡಿತ ಕಲಿತಿದ್ದ. ಕುಡಿಯುವವರೆಲ್ಲ ಸಾಯುವರೇ? ಅವನು ಪರೋಪಕಾರಿ, ಸ್ನೇಹಿತರಿಗೂ ಕುಡಿಸುತ್ತಿದ್ದ. ಅದಕ್ಕೆ ಕಾರಣ? ಅವನ ಚಿಂತೆ. ಚಿಂತೆಗೆ ಕಾರಣ? ಹೆಂಡತಿ ತನ್ನ ಒಂಟಿಯಾಗಿಸಿ ತವರಿಗೆ ಹೋದುದು. ಹೋಗಲು ಕಾರಣ? ಅವಳ ಹಳೆಯ ಹುಡುಗ. ಯಾರ ಸಾವಿಗೆ ಯಾರೋ ಕಾರಣರು!!!
@ಪ್ರೇಮ್@
11.09.2020

ಗುರುವಾರ, ಸೆಪ್ಟೆಂಬರ್ 10, 2020

ನ್ಯಾನೋ

ನ್ಯಾನೋ ಕತೆ

 ವಿಧಿಲಿಖಿತ

     ಇದ್ದ ತಮ್ಮಿಬ್ಬರು ಮಕ್ಕಳಾದ ಲಿಲ್ಲಿ ಮತ್ತು ರೋಸಾಳನ್ನು ಅಮ್ಮ ಮಾರ್ಗರೇಟ್ ತಾನು ಹೊಟ್ಟೆ ಬಟ್ಟೆ ಕಟ್ಟಿ ಎರಡು ಕಣ್ಣುಗಳಂತೆ ಸಾಕುತ್ತಿದ್ದರು. ವಿದ್ಯಾಭ್ಯಾಸಕ್ಕೆಂದು ಮನೆಯಿಂದ ಹೊರ ಹೋದ ರೋಸಾಳ ಬಗೆಗೆ ಹಲವಾರು ಕನಸು ಕಂಡಿದ್ದರು. ಅವಳು ತನ್ನ ಅಂಕಲ್ ಮನೆಗೆ ಹೋಗಿ ಅಚಾನಕ್ ಆಗಿ ಅಪಘಾತವೊಂದಕ್ಕೆ ಸಿಲುಕಿ, ಅಂಕಲ್, ರೋಸಾ ಇಬ್ಬರೂ ಅಪಘಾತಕ್ಕೀಡಾಗಿ ತಮ್ಮ ಬದುಕನ್ನೇ ಕಳೆದುಕೊಂಡಾಗ ಮಾರ್ಗರೆಟ್ ರ ಕನಸುಗಳು ಭಗ್ನವಾಗುವುದರ ಜೊತೆಗೆ ತನ್ನ ಒಂದು ಕಣ್ಣನ್ನು ಕಳೆದುಕೊಂಡ ಅನುಭವವಾಯ್ತು.
@ಪ್ರೇಮ್@
10.09.2020

ಮಂಗಳವಾರ, ಸೆಪ್ಟೆಂಬರ್ 8, 2020

ಗಝಲ್

ಗಝಲ್

*ಹಿಂದೊಂದು ಮುಂದೊಂದು ಮಾತಿಗೆ ಬಣ್ಣ ಹಚ್ಚುವವರೇ ಈಗ*
ಕವಲೊಂದು ಇದೆ ಬದುಕಿನಲಿ ಎಂದು ಮರೆತವರೇ ಈಗ!!

ತನುವೆರಡು ಮನವೊಂದೆ ಎಂದು ಬದುಕುವರು ನಾಲ್ಕುದಿನ
ಭಾವನೆಗಳ ಕಸದಂತೆ ಗುಡಿಸಿ ಒಗೆದು ಬಿಡುವವರೇ ಈಗ..

ಮಾತಿಗೆ ಮಾತು ಬೆಳೆಸುತ ತನ್ನತನವನು ಊರುವವರು
ತಾನು ಆಡಿದ ಮಾತನೆ ಸರ್ವರೂ ಕೇಳಬೇಕೆನುವವರೇ ಈಗ..

ನಡೆವ ಹಾದಿಯಲಿ ಕಲ್ಲು ಮುಳ್ಳುಗಳುಂಟು ಜಗದಲಿ
ಏರು ತಗ್ಗುಗಳನರಿಯದೇ ಅಹಂಕಾರ ದರ್ಪ ತೋರುವವರೇ ಈಗ..

ಮೋಸದಾಟದಲಿ ಬಲಿ ಬೀಳಿಸುವ ಸ್ನೇಹಿತ ಬಂಧುಗಳು ಬಳಿಯಲಿ
ನೀಲಿ ಸಾಗರದಂದದಿ ಪ್ರೇಮ ಬಲೆಯನು ಬೀಸುವವರೇ ಈಗ..
@ಪ್ರೇಮ್@
08.09.2020

ಶನಿವಾರ, ಸೆಪ್ಟೆಂಬರ್ 5, 2020

ಚುಟುಕು

ಚುಟುಕು

ಮಾತಿನಲೆ ಮನೆಕಟ್ಟಿ ಮೌನದಲೆ ಧನ ತುಂಬಿ
ಬಂದ ಹೋದವನಿಗೆ ಏನನೂ ಕೊಡ ತಂಬಿ
ಸಿರಿವಂತನಾಗಬೇಕೆಂಬ ಬಯಕೆಯನು ತಾ ತುಂಬಿ
ಕದ್ದೆಣಿಸ ಹೊರಟವ ಜೈಲಿನ ಕಂಬಿ!!!
@ಪ್ರೇಮ್@
05.09.2020

ಗಝಲ್-ಶಿಕ್ಷಕರಿಗಾಗಿ

ಗುರುವಿಗರ್ಪಿತವಾದ ಗಝಲ್

ವಿದ್ಯಾ ಬುದ್ಧಿಯ ಕಲಿಸುವ ಕಾಯಕ ನಡೆಸುವ ಗುರುವಿಗೆ ನಮನಗಳು..
ತನ್ನ ಕಲಿಕೆಯ ಪರರಿಗೆ ಹಂಚುತ ಸುಖವನು ಕಾಣುವ ಅರಿವಿಗೆ ನಮನಗಳು..

ಪರಿಸರದೆಲ್ಲೆಡೆ ಸರ್ವರಲ್ಲಿ ಬುದ್ಧಿವಂತನು ಎನಿಸಿಕೊಂಡಿಹ ಜೀವಿಯಿದು
ಸರಿ ತಪ್ಪುಗಳನು ತಿದ್ದಿ ತೀಡುವ ಕಾರ್ಯನಿರತರಿಗೆ ನಮನಗಳು..

ಸರ್ವರ ಕಂದರ ತನ್ನ ಕಂದರೆಂದೇ ಸಲಹುವ ಹೃದಯದ ವೈಶಾಲ್ಯ
ಮಗುವಿನ ಕಲಿಕೆಗೆ ತನ್ನ ಜೀವನವ ಒರೆ ಹಚ್ಚಿದ ತ್ಯಾಗಿಗೆ ನಮನಗಳು..

ಬಿಸಿಲು, ಮಳೆ, ಗಾಳಿಯ ಲೆಕ್ಕಿಸದೆ ಜ್ಞಾನವ ಹಂಚುವ ಕಾರ್ಯವದು
ಕಲ್ಲನು ಕೆತ್ತಿ  ಕೊರೆದು ಶಿಲೆಯಾಗಿಸೊ ಕೆಲಸದ ತ್ಯಾಗಿಗೆ ನಮನಗಳು.

ಜೀವನ ಬಹುಮಹಡಿ ಕಟ್ಟಡಕೆ ತಲಪಾಯ ಹಾಕುವ ಕೈಗಳು ನಮ್ಮದಲ್ಲವೇ?
ಜೇಬಲಿ ಹಣವಿಲ್ಲದೆಯೇ ತಿಳಿದುದ ಹೇಳುತ ಸರಿದಾರಿಯಲಿ ಶಿಷ್ಯರ ನಡೆಸುವಗೆ ನಮನಗಳು..

ಸಾಮಾನ್ಯ ಬಾಳುವೆ ನಡೆಸುತ ಪರರಿಗೆ ಮಾದರಿಯಾಗಿಹ ಜೀವಗಳು
ಉಪಕಾರಕೆ ಹೆಸರಾದ, ಹಲ ಮನಗಳಿಗೆ ಒಳಿತನು ಬಯಸುವ ಕರುಣಾ ಮೂರ್ತಿಗಳಿಗೆ ನಮನಗಳು.

ಬಡವ ಬಲ್ಲಿದರೆಂಬ ಬೇಧವಿಲ್ಲದೆಯೇ ಬೋಧಿಸೊ ಕಾಯಕೆ ಕರ ಮುಗಿವೆ
ಮೇಲು ಕೀಳೆನುವ ಭಾವವ ಬಿಸುಟು ಒಂದಾಗಿ ಕಾಣುವ ಕಣ್ಣಿಗೆ ನಮನಗಳು..

ನಲಿವಿನ ಕ್ಷಣಕೆ ಪ್ರಾರ್ಥನೆ ಹಾಡುತ ಹಲವು ಮನಕೆ ಖುಷಿ ಕೊಡುವಾಟವಿದು
ತಾಯಿಯ ಬಳಿಕ ಮಗುವನು ಬೆಳೆಸುವ ಧೀಮಂತ ಹೃದಯದ ನೆನಪಿಗೆ ನಮನಗಳು..

ಜಾತಿ ಮತದ ಬಿರುಕನು ತಡೆಯುವ ವೀಣಾಪಾಣಿಯ ಮಕ್ಕಳಿವರು.
ಕಲಾಂ, ಅಂಬೇಡ್ಕರ್, ಜಿನ, ಬುದ್ಧ ವಿವೇಕರ ನುಡಿಗಳ ನುಡಿಯುವ ನಾಲಗೆಗೆ ನಮನಗಳು.

ಕಿರಿಯರಿಗೆ ತಿಳಿ ಹೇಳುತ ಹಿರಿಯರ ಮಾರ್ಗದರ್ಶನ ಪಡೆಯುವ ಮಹಾನ್ ಚೇತನಗಳು
 ದೇಶೋದ್ಧಾರಕೆ ಭದ್ರ ಬುನಾದಿಯ ಪ್ರೇಮದಿ ಹಾಕುವ ಮನಗಳಿಗೆ ನಮನಗಳು!!
@ಪ್ರೇಮ್@
05.09.2020

ಮಂಗಳವಾರ, ಸೆಪ್ಟೆಂಬರ್ 1, 2020

ಗಣಮಾಮ ಬಂದ

ಗಣ ಮಾಮ ಬಂದ

ಗಣ ಮಾಮ ಬಂದ
ಕಾಯಿ ಕಡುಬು ತಂದ
ಕಬ್ಬು ಬೆಲ್ಲ ಸವಿದ
ಪಂಚ ಕಜ್ಜಾಯ ತಿಂದ

ಪೂಜೆ ಮಾಡಿಸಿ ಮೆರೆದ
ಬಣ್ಣದ ಕಾಗದದಿ ಸಿಂಗರಿಸಿಕೊಂಡ
ಬಾಳೆಯ ಬದಿಯಲ್ಲಿರಿಸಿದ
ಮಾವಿನ ಎಲೆಯ ತೋರಣ ನೋಡಿದ

ಲಡ್ಡು ಪಾಯಸ ಪರಿಮಳ ಸವಿದ
ಉಳಿದುದ ನಮಗೆ ಪ್ರಸಾದ ನೀಡಿದ
ಹೂವು ಹಣ್ಣನು ಎದುರಿಗಿಸಿಕೊಂಡ
ಕಣ್ಣನು ತೆರೆದು ಮುದವನು ನೀಡಿದ

ತಾಯಿಯ ಜೊತೆಯಲಿ ತಾ ಕುಳಿತ
ಗಂಗೆಯ ನೋಡುವ ಆಸೆಯಲಿದ್ದ
ಪೂಜೆಯ ಪಡೆದು ಹರಸುತ ನಡೆದು
ನೀರಿನ ಹೊಂಡದಿ ಮುಳುಗೇ ಬಿಟ್ಟ..
@ಪ್ರೇಮ್@
24.08.2020

ಮತ್ತು-ಮುತ್ತು

ಹನಿಗವನ

ಮತ್ತು-ಮುತ್ತು

ನಾನು ಮತ್ತು ನನ್ನ ಮತ್ತು
ಕಾಣದೆ ಸೇರಿ ಪಡೆದು ಮುತ್ತು
ಮತ್ತು ಮೆತ್ತಗಾಗದೆ ಅನಾಮತ್ತಾಗಿ
ಮುತ್ತು ತುತ್ತಾಗದೆ ಹಸಿವಾಗಿ
ತಲೆಸುತ್ತು  ಬಂದು ಮೆತ್ತೆಯಲಿ
ಹತ್ತಾರು ಜನರ ಮಧ್ಯದಲಿ
ಮತ್ತಾರು ನೋಡಲು ಕತ್ತಲಲಿ
ಮತ್ತಲಿ ಮುತ್ತಿನ ಮೊತ್ತವೇ?
ಹೊತ್ತು ತರಬೇಕು ತುತ್ತು!
@ಪ್ರೇಮ್@
26.08.2020

ಮತ್ತೆ ಬರಲಿ

ಮತ್ತೆ ಬರಲಿ

ಅಮ್ಮನ ಕೈಯಲಿ ಎಣ್ಣೆಯ ತಿಕ್ಕಿಸಿ
ತೊಡೆಯಲಿ ಕುಳಿತು ಸ್ನಾನವ ಮಾಡುವ
ಮುಗ್ದ ಮನದ ಸ್ನಿಗ್ಧ ನಗುವಿನ
ಬಾಲ್ಯವು ಮತ್ತೆ ನಮಗೆ ಬರಲಿ..

ನಾಯಿಗೂ ಬೆಕ್ಕಿಗೆ ಬೇಧವನರಿಯದೆ
ನಿಶ್ಕಲ್ಮಶ ಪ್ರೀತಿಯ ತೋರುತ ಬದುಕುವ
ಆಟವನಾಡುತ ಪ್ರೀತಿಯ ಪಡೆಯುವ
ಸುಂದರ ಬಾಲ್ಯವು ಮತ್ತೊಮ್ಮೆ ಬರಲಿ..

ಕಿಲಕಿಲ ನಗುವಲೆ ನೋವನು ಮರೆಸುವ
ಬಲಾಬಲ ತೋರದೆ ನೆಮ್ಮದಿ ಉಳಿಸುವ
ಆಗಿನ ಬೇನೆಯ ತಕ್ಷಣ ಮರೆಯುವ
ಹೂವಿನಂಥ ಬಾಲ್ಯವು ಮತ್ತೆ ಬರಲಿ..

ನಗುವಿಗೂ ಅಳುವಿಗೂ ಅಂತರ ತಿಳಿಯದ
ಗೆಳೆಯ ಶತೃವಿನ ಗೊಂದಲ ತಾರದ
ಮಾತಾ ಪಿತೃಗಳೆ ದೇವರು ಎನುವ
ಮಂದಾರ ಬದುಕು ಮತ್ತೊಮ್ಮೆ ಬರಲಿ..
@ಪ್ರೇಮ್@
26.08.2020

ಮನೆ-ಕಿರುಗತೆ

ಮನೆ


ತನ್ನ ಮನೆ ಅರಮನೆಯಂತಿರಬೇಕೆಂಬುದೇ ಅವಿನಾಶನ ಕನಸಾಗಿತ್ತು. ಅದಕ್ಕವನು ತನ್ನೆಲ್ಲಾ ಗಳಿಕೆಯನ್ನು ಖರ್ಚು ಮಾಡದೆ ಸಂಗ್ರಹಿಸತೊಡಗಿದ. ಕದ್ದು, ಕಟಿಟಿಟ್ಟು ಮಡದಿ ಮಕ್ಕಳಿಗೆ ಸರಿಯಾಗಿ ಊಟವನ್ನೂ ಕೊಡದೆ ಗಳಿಸಿ ಬ್ಯಾಂಕಿನಲ್ಲಿಟ್ಟ ಹಣದ ಹೆಚ್ಚಿನ ಪಾಲು ಇನ್ಕಂ ಟ್ಯಾಕ್ಸ್ ರೂಪದಲ್ಲಿ ಸರಕಾರ ಸೇರಿತು. 

ನೀತಿ-ಕೊಟ್ಟದ್ದು ತನಗೆ, ಕಟ್ಟಿಟ್ಟದ್ದು ಪರರಿಗೆ!
@ಪ್ರೇಮ್@
28.07.2020

41

ಜೀವನದ ತೊಳಲಾಟಕೆ ಕೊನೆಯೆಂದು?

     ಒಂದು ಕ್ಷಣ ಖುಷಿಯಾದರೆ ಮರುಕ್ಷಣವೇ ನೋವು, ಕಷ್ಟ ಸಂಕಷ್ಟದಲ್ಲಿ ಬೆಂದು ಹೈರಾಣಾಗುವ ಜೀವನವಿದು. ಹೋರಾಟದ ಬವಣೆ. ಮೈಯೆಲ್ಲಾ ರಕ್ತಸಿಕ್ತವಾಗಿ, ಕೈಕಾಲುಗಳಲ್ಲಿ ಶಕ್ತಿ ಕಳೆದುಕೊಂಡು ಕೆಸರು ಮಣ್ಣಿನಲ್ಲಿ ಬಿದ್ದು ಹೋದರೂ ಸಹ ಎದುರಾಳಿಯೊಡನೆ ಗೆಲ್ಲ ಬೇಕಾದರೆ ಮತ್ತೆ ಹೇಗಾದರೂ ಇದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಹೋರಾಡಬೇಕು. ಇಲ್ಲವೇ ಹತನಾಗಬೇಕು. ಸೋಲೊಪ್ಪಿಕೊಂಡು ಬದುಕುವ ಬದುಕಿಗಿಲ್ಲಿ ಸ್ಥಾನವೇ ಇಲ್ಲ, ನೆಲೆಯೂ ಇಲ್ಲ. 

     ಇಲ್ಲಿ ನಾನು ನಾನಲ್ಲ, ನೀನು ನೀನಲ್ಲ, ನಾನು ನನಗಾಗಿ ಬದುಕುತ್ತಿಲ್ಲ, ಯಾರೂ ತನಗಾಗಿಯೂ ಇಲ್ಲ,  ಯಾರಿಗಾಗಿಯೂ ಬದುಕುತ್ತಿಲ್ಲ, ಆದರೂ ಸಾವು ಯಾರಿಗೂ ಬೇಡ. ಸ್ವಾರ್ಥವೇ ಇಲ್ಲ ಎನುವವನಿಗೂ ಸಾವು ಬೇಡ. ಇಲ್ಲಿ ಎಲ್ಲವೂ ಇದೆ, ಜನಕ್ಕೆ ಎಲ್ಲವೂ ಬೇಕು. ಧನ, ಧಾನ್ಯ, ಐಶ್ವರ್ಯ, ಕನಕ, ವಜ್ರ, ವೈಡೂರ್ಯ, ಆಸ್ತಿ, ಹಣ, ಬೇಕು ಬೇಡದ ವಸ್ತುಗಳು, ತಿನಿಸುಗಳು, ಪೇಯಗಳು, ಹೆಣ್ಣು, ಹೊನ್ನು, ಮಣ್ಣು ಎಲ್ಲವೂ ಎಷ್ಟಿದ್ದರೂ ಬೇಕು! ಆದರೆ ಜೀವ ಭಯದ ಮುಂದೆ ಯಾರಿಗೂ ಏನೂ ಬೇಡ! ಜೀವವೊಂದುಳಿದರೆ ಸಾಕು ಅಷ್ಟೆ! 
      "ನಾನು ಸುರಕ್ಷಿತ" ಎಂಬ ಅನಿಸಿಕೆ ಇಲ್ಲಿ ಯಾರಲ್ಲೂ ಇಲ್ಲ . ಕಾರಣ ಯಾರಿಗೆ ಯಾರ ಮೇಲೂ ನಂಬಿಕೆಯಿಲ್ಲ! ದೇವರ ಮೇಲೂ ಇಲ್ಲ. ಯಾರೂ ತಮ್ಮತನ ಬಿಟ್ಟು ಕೊಡಲಾರರು. ಇಂದು ಈ ಕ್ಷಣ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿ ಮರುಕ್ಷಣವೇ ಬೇರೆ ಯಾರೋ ಆಗಬಲ್ಲ, ತಿರುಗಿ ನಿಲ್ಲಬಲ್ಲ, ತನ್ನವರೆನಿಸಿಕೊಂಡವರೇ ತನ್ನ ಮರ್ಯಾದೆ ತೆಗೆಯಬಲ್ಲರು! ಮನೆಯೊಳಗೂ ಜಗಳ, ಮನದೊಳಗೊಂದು ಕದನ, ಹಾಹಾಕಾರ! ನಿತ್ಯವೂ ಸಮರದೊಂದಿಗಿನ ಸಮರಸದ ಬದುಕು. ಅದರೆಡೆ ರಸವೇ ಜನನ, ವಿರಸವೇ ಮರಣ ಸಮರಸವೇ ಜೀವನವೆನುತ ಗಾದೆಕಟ್ಟಿ ಬದುಕುವ ಮನಗಳು! ವಿರಸವಿಲ್ಲದ ಜೀವನವಿದೆಯೇ. ಪರರ ಮಾತನು ಒಪ್ಪಿ, ಅವರು ಹೇಳಿದಂತೆ ನಡೆದರೆ ವಿರಸ ಬರದು, ನೀವಾಗಿ ನೀವು ನಿಮ್ಮ ಯೋಚನೆ, ಆಲೋಚನೆಗಳನ್ನು ಅನುಷ್ಠಾನಗೊಳಿಸಲು ಸ್ವತಂತ್ರವಾಗಿ ಮುನ್ನುಗ್ಗಿದಿರೋ ಅಲ್ಲೇ ವಿರಸದ ಪ್ರಾರಂಭ! 
    ಬದುಕಿಗೊಂದು ಅರ್ಥ ಹುಡುಕದೆ ಸುಮ್ಮನೆ ಬದುಕಿದವನ ಬದುಕು ವ್ಯರ್ಥವೆಂದು ತಿಳಿದು ಅರ್ಥ ಹುಡುಕ ಹೋದವ ತಲೆಕೆಡಿಸಿಕೊಂಡು ತನ್ನ ಬದುಕಿನ ಸರ್ವ ನಲಿವುಗಳ ಕಳೆದುಕೊಂಡು ಯಾವ ಅರ್ಥವನ್ನೂ ಕಂಡುಕೊಳ್ಳಲಾಗದೆ ಮುಪ್ಪಡರಿ, ದೇಹ ರೋಗ ರುಜಿನಗಳಿಗೆ ತುತ್ತಾಗಿ ಕಡೆಗೊಂದು ದಿನ ಸರ್ವ ಜೀವಿಗಳಂತೆ ಅವನದೂ ಅವಸಾನವೇ ಆಗುವುದು.
     ಈ ಜಗದಲಿ ಹುಟ್ಟು ಸಾವು ಸಾಧಾರಣ ಸಂಗತಿಗಳು. ಅದು ಜೀವಿಗಳಿಗೂ, ಮಾನವನಿಗೂ. ಜೀವಿಗಳು ಜೈವಿಕ ಕ್ರಿಯೆಗಳಾದ ಪಚನ, ಬೆಳವಣಿಗೆ, ಹಸಿವು, ನಿದ್ರೆ, ವಿಶ್ರಾಂತಿ, ವಂಶಾಭಿವೃದ್ಧಿ, ಚಲನೆ ಇವಿಷ್ಟಕ್ಕೆ ತಮ್ಮ ಬದುಕನ್ನು ಮುಡಿಪಾಗಿಸಿಕೊಂಡಿವೆ. ಆದರೆ ಮಾನವನೆಂಬ ಮೆದುಳು ಬೆಳೆದ ಜೀವಿ ತಾನು ತನಗೆ ದೊರೆತ ಶಕ್ತಿಯಿಂದ ಅದೇನನ್ನೋ ಮಾಡ ಹೋಗಿ, ಏನೇನೋ ಮಾಡಿ, ಕೊನೆಗೆ ಸಾಧನೆ ವಿಫಲವಾಯಿತೆನುತ ಮಾಡಿದ ಸಾಧನೆಯನ್ನೆಲ್ಲ ಮರೆತು ತಾನೇ ತನ್ನ ಜೀವನವನ್ನು ಕೊನೆಗೊಳಿಸುವನು, ಅಥವಾ ಬೇರೆ ಯಾರೋ ಅದಕ್ಕೆ ಕಾರಣರಾಗುವರು. ಕೆಲವು ಸಲ ವಿಧಿಯೇ ಕಾರಣವಾಗಲೂಬಹುದು. 
      ಪ್ರತಿ ಕ್ಷಣವೂ ಸತ್ಯ, ಸುಳ್ಳು, ನಂಬಿಕೆ, ಮೋಸ, ವಂಚನೆ, ನೋವು, ಅಹಂಕಾರ, ದುರಾಸೆ, ದಯೆ, ಕರುಣೆ, ಆನಂದ, ಕೋಪ, ರೌದ್ರ, ಭಯ, ಪ್ರೀತಿ, ಮೊದಲಾದ ಹಲವಾರು ಗುಣಗಳನ್ನು ಭಾವನೆಗಳ ಮೂಲಕ ವ್ಯಕ್ತಪಡಿಸುತ್ತಾ, ಅವುಗಳನ್ನೆ ಸದ್ಗುಣ, ದುರ್ಗುಣಗಳೆಂಬ ಎರಡು ಗುಂಪುಗಳೊಳಗೆ ತುರುಕುತ್ತಾ, ಧರ್ಮ-ಅಧರ್ಮಗಳೆಂಬ ಕಾರ್ಯ ಮಾಡುತ್ತಾ, ಮಾಡಬಾರದೆಂಬುದನ್ನು ಸರ್ವರಿಗೆ ಹೇಳುತ್ತಾ ತಾನದನ್ನೇ ಮಾಡುತ್ತಾ ಬದುಕುವ ಜೀವಿಗಳೇ ಮಾನವರು. ಇಲ್ಲಿ ದುರಾತ್ಮನೂ, ಧರ್ಮಾತ್ಮನೂ, ಹಠಮಾರಿಯೂ, ದುರಹಂಕಾರಿಯೂ, ಸದಾ ಹಸನ್ಮುಖಿಯೂ ಎಲ್ಲರೂ ಬಾಳಿಯೇ ಸಾಯುವರು!
    ಉತ್ತಮನೆನಿಸಿಕೊಂಡವನಿಗೆ ಪರೀಕ್ಷೆ, ನೋವು, ಸಂಕಟ, ಹೋರಾಟಗಳೇ ಹೆಚ್ಚು. ಅಧರ್ಮಿಗೆ ಕ್ಷಮೆಗಳು ಸಿಗುವುದೇ ಹೆಚ್ಚು. ಅಹಂಕಾರಿಗೆ ಬೇಕಾದುದೆಲ್ಲ ಸಿಗುತ್ತದೆ! ವಿಲನ್ ಹೀರೋ ಆಗಬಲ್ಲ! ಹೀರೋ ವಿಲನ್ ಕೂಡಾ ಆಗಬಲ್ಲ!ಬದುಕೊಂದು ಕ್ಷಣಗಳ ಸಂತೆ. ಆ ಸಂತೆಯಲ್ಲಿ ನಮ್ಮ ವ್ಯಾಪಾರ ಎಂದು ಮುಗಿವುದೋ ತಿಳಿಯದು. ಎಲ್ಲರೂ ಅವರವರ ವ್ಯಾಪಾರದಲ್ಲಿ ತಲ್ಲೀನರು. ನಿನಗಾಗಿ ನೀ ಬದುಕು. ಪರರ ಗಮನ ನಿನಗೆ ಬೇಡ. ಹೋರಾಡಿ ಮಡಿಯುವವರೆಗೆ ಹೋರಾಡುತ್ತಾ ಬಾಳು. ಕೊನೆಗೊಂದು ದಿನ ಹೋಗಲೇ ಬೇಕಿದೆ. ಯಾರೂ ನಿನ್ನ ಜೊತೆಗೆ ಬರರು. ಮುಂದಿನ ಜನ್ಮದಲಿ ಏನಾಗುವುದೋ, ಹೇಗಿರುವುದೋ ಯಾರಿಗೆ ಗೊತ್ತು? ಈ ಜನುಮ ಸಿಕ್ಕಿದೆ ನಮಗೆ, ನಮ್ಮ ಮನಸ್ಸು ಹೇಳಿದಂತೆ ಮೂರು ಕ್ಷಣವಾದರೂ ಸಂತಸ, ನೆಮ್ಮದಿಯಿಂದ ಪರರ ಬದುಕಲು ಬಿಟ್ಟು, ಪ್ರೀತಿ ಹಂಚಿ ನಾವೂ ನೆಮ್ಮದಿಯಿಂದ  ಸುಖವಾಗಿ ಬದುಕೋಣ. ಅಷ್ಟೆ ಸಾಕು. ನೀವೇನಂತೀರಿ?
@ಪ್ರೇಮ್@
01.09.2020

ನೆನಪು ..

ನೆನಪು...

ಒಂಟಿ ನಾನು ಗುಂಪು ನೀನು
ಆದರೂನು ಬೇರೆಯೇನು?
ನೀನೆ ನಾನು ನಾನೆ ನೀನು
ಜಗದಿ ಕವಿಯ ಸಖ್ಯವೇನು?

ಮರೆತು ಮರೆಯೆ ಒಡನಾಟ ನೂರು
ಅನುದಿನವು ಓದುವ ಸಾಹಿತ್ಯ ನೂರು
ಚಂದಿರನಂಗಳದಿ ತುಣುಕು ಪ್ರೇಮ
ಜಾರಿ ಹಾರಿ ಸವಿಯೊ ಗಾನ..

ಮೌನ ಕದದ ಬೇರು ವಿರಳ
ಕವಿಯ ಪದದ ಆಳ ಬಹಳ
ನಗು ಮೊಗದ ಹಿರಿಯ ಕಿರಿಯ
ತಿದ್ದಿ ತೀಡೊ ಮನವು ಸನಿಹ..

ಸಂಗಮವೆ ಸಾಕ್ಷಿ ನೋವ ಮರೆವು
ಹಂಗಾಮಿ ನಾನು ಪದದ ಕರೆಯು
ಸಾಹಿತ್ಯ ಸೇವೆಗಾಗಿ ಮುಡಿಪು
ಕನ್ನಡವು ತಾನೆ ಸದಾ ನೆನಪು..
@ಪ್ರೇಮ್@
01.09.2020