*ನಾನವಳಲ್ಲ....ಅವನೂ ಅಲ್ಲ..*
ಲಿಪ್ ಸ್ಟಿಕ್ ಹಚ್ಚಿ ತುಟಿಗಳ ಕೆಂಪಾಗಿರಿಸಿಹೆ
ಸೀರೆ ಚೂಡಿದಾರಗಳ ತೊಟ್ಟು ಹೈ ಹೀಲ್ಡ್ ಚಪ್ಪಲಿಗಳ ಧರಿಸಿರುವೆ
ಮುಖಕೆ ಶೃಂಗಾರದ ಬಣ್ಣ ಬಳಿದಿರುವೆ
ನಾನವಳಲ್ಲ...ನಾನವನೂ ಅಲ್ಲ!!
ಬದುಕ ಸಾಗಿಸಲು ಹಲವರಲಿ ಬೇಡುತಿಹೆ
ಕಾಡಿ ಸತಾಯಿಸುವೆ ಧನಿಕರ ಪೀಡಿಸುತಿಹೆ
ಚಪ್ಪಾಳೆಯ ತಟ್ಟಿ ಹುಡುಗರ ಕರೆಯುತಿಹೆ
ನಾನೇನೂ ಬಿಕ್ಷುಕನಲ್ಲ, ಬಿಕ್ಷುಕಿಯೂ ಅಲ್ಲ..
ಮದುವೆಯೆಂಬುದೆನ್ನ ಹಣೆಯಲಿ ಬರೆದಿಲ್ಲ!
ಹೆಣ್ಣೂ ಅಲ್ಲ ಗಂಡೂ ಅಲ್ಲದಂತೆ ದೇವ ಸೃಷ್ಠಿಸಿಹನಲ್ಲ
ಅದ್ಯಾವ ಜನ್ಮದ ನನ್ನ ಪಾಪವೋ ನಾ ಕಾಣೆ!
ಜಗದ ಹಲವು ಕಷ್ಟ ಸಂಕಟಗಳಿಂದ ದೂರವೇ ಉಳಿದಿಹೆನಲ್ಲ!
ಬದುಕ ದಾರಿಯ ನಾನು ಚೆನ್ನಾಗೇ ಹಿಡಿದಿಹೆನಲ್ಲ!
ಶಾಲೆ ಕಲಿತು ಹಲ ಮಕ್ಕಳಿಗೆ ಕಲಿಸುತಿಹೆನಲ್ಲ!
ಹಲವರನು ಕೆಲಸಕಿಟ್ಟು ನಿತ್ಯ ಸಂಬಳವ ಕೊಡುತಿಹೆನಲ್ಲ!
ಮಹಾರಾಣಿ ನಾನಲ್ಲ, ಮಹಾರಾಜನೂ ಅಲ್ಲ!
ದೇಹವೆಂತಿದ್ದರೇನಂತೆ ಈ ಜಗದಲಿ?
ಸುಖ ಕಷ್ಟಗಳಿಹವು ಇಲ್ಲಿ ಸರ್ವರ ಬಾಳಿನಲಿ
ಮನವೆನ್ನ ತುಡಿಯುತಿದೆ ಮಾಡಲು ಹಲವರಿಗೆ ಸಹಾಯವಿಲ್ಲಿ
ಒಳ್ಳೆಯತನಕೆ ಮನದಲಿ ಜಾಗವಿದ್ದು, ಬಾಳುತಿಹುದಿಲ್ಲಿ!
ಕನಸುಗಳನೇಕ ನನ್ನಲೂ ಇವೆಯಲ್ಲವೇ?
ಸಾಧಿಸುವೆನೆಂಬ ಛಲವೂ ನನಗೆ ಬೇಕಲ್ಲವೇ?
ನನ್ನ ಕಾರ್ಯ ನಾ ಮಾಡದೆ ಪರರ ಮೇಲೇಕೆ ಕೋಪ ಕಕ್ಕಲಿ?
ಸರ್ವ ಭಾರತಾಂಬೆಯ ಮಕ್ಕಳೆಲ್ಲ ನನ್ನ ಗೆಳೆಯರೇ ಆಗಲಿ!
ನಾ ಸಾಧಿಸಲು ಹೊರಟಿರುವೆ ನನ್ನ ಗುರಿಯನ್ನು!
ಭಾರತಾಂಬೆಯ ಹಲವು ಮಕ್ಕಳಿಗೆ ನೀಡುವೆ ಕಸುಬನ್ನು
ಧರೆಯಲಿ ಉಳಿಸಲಿರುವೆ ನನ್ನ ಮುದ್ದಾದ ಹೆಸರನ್ನು
ಮುಂದಿನ ಜನಾಂಗಕೆ ಬಿಟ್ಟು ಹೋಗುವೆ ಉತ್ತಮ ಕಾರ್ಯವನು..
@ಪ್ರೇಮ್@
13.03.2021