ನೀವೊಂದು ಬಾರಿ ನೋಡಲೇ ಬೇಕು ಈ ನಾಯಿ ಹಾಸ್ಟೆಲ್..
ತನ್ನ ಜೀವನದಲ್ಲಿ ಏನಾದರೂ ಒಳ್ಳೆಯ ಕಾರ್ಯ ಮಾಡಬೇಕು ಅನ್ನಿಸಿ ಅನಾಥ ಮಕ್ಕಳಿಗಾಗಿ, ವೃದ್ಧರಿಗಾಗಿ, ವಿಧವೆಯರಿಗಾಗಿ, ಭಿಕ್ಷುಕರಿಗಾಗಿ ಆಶ್ರಮಗಳನ್ನು ತೆರೆದು, ಅವರ ಸೇವೆ ಮಾಡುವ ನಿಜವಾದ ಉತ್ತಮ ವ್ಯಕ್ತಿಗಳು ಒಂದೆಡೆಯಾದರೆ, ದುಡ್ಡಿಗಾಗಿ ಅದನ್ನು ನಡೆಸುವ ಕೆಲವರೂ ಇದ್ದಾರೆ. ಆದರೆ ಯಾರಿಂದಲೂ ಯಾವುದೇ ಪ್ರತಿಫಲ ಬಯಸದೆ, ತನ್ನ ಜೀವನವನ್ನೇ ಬೀದಿ ನಾಯಿಗಳ ಜೀವನಕ್ಕೆ ಮುಡಿಪಾಗಿಟ್ಟ ಅತಿ ವಿರಳ ಗುಣದ ಯುವಕನೋರ್ವ ಇಲ್ಲಿದ್ದಾರೆ. ಹೌದು, ನೀವು ನಂಬಲೇ ಬೇಕು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ಬಳಿಯ ಸುಮ್ಮ ಬಂಡಸಾಲೆ, ಪೆಜತ್ತ ಗುರಿ ಇಲ್ಲಿನ ವೀರು ಅಲಿಯಾಸ್ ವಿರಂಜಯ ಹೆಗ್ಗಡೆ ಅವರೇ ಈ ಅನಾಥ ನಾಯಿಗಳ ಆಶ್ರಮ ನಡೆಸುತ್ತಿರುವ ಮಹಾನುಭಾವ.
"ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್" ಎಂಬ ಹೆಸರಿನಿಂದ ಈ ಶ್ವಾನಾಶ್ರಮ ನಡೆಸಲ್ಪಡುತ್ತಿದೆ. ಆದರೂ ಇದು ವಿರoಜಯ ಹೆಗ್ಗಡೆ ಅವರ ಪ್ರಾಣಿ ಪ್ರೀತಿಯ ದ್ಯೋತಕವಾಗಿ ನಡೆದು ಬಂದ ದಾರಿ ಆಗಿದೆ. ಒಂದಲ್ಲ, ಎರಡಲ್ಲ, ವಿವಿಧ ತಳಿಯ, ಹೆಚ್ಚಾಗಿ ಬೀದಿ ನಾಯಿಗಳನ್ನೂ ಸೇರಿ ಇನ್ನೂರ ಅರವತ್ತಕ್ಕಿಂತಲೂ ಹೆಚ್ಚು ನಾಯಿಗಳಿವೆ ಇಲ್ಲಿ!
ಬೀದಿ ನಾಯಿ ಎಂದರೆ ಕಲ್ಲು ಹೊಡೆದು ಓಡಿಸುವ ನಾವು ಈ ಯುವಕನ ಔದಾರ್ಯತೆಗೆ ಮೆಚ್ಚಲೇ ಬೇಕು. ಕಾರಣ ಪ್ರತಿದಿನ 25 ಕಿ. ಗ್ರಾಂ. ಅಕ್ಕಿಯಂತೆ ದಿನಕ್ಕೆ ಎರಡು ಸಲ ಮೊಸರು ಕಲೆಸಿ ಊಟ ಕೊಡಲಾಗುತ್ತದೆ. ನಡು ನಡುವೆ ಸಣ್ಣ ಮರಿಗಳಿಗೆ ಬಿಸ್ಕೆಟ್, ಜಾತಿ ನಾಯಿಗಳಿಗೆ ಪೆಡಿಗ್ರಿ , ಆರೋಗ್ಯ ಸರಿ ಇಲ್ಲದ ನಾಯಿಗಳಿಗೆ ಮದ್ದಿನ ಜೊತೆ ಅದಕ್ಕೆ ಬೇಕಾದ ಆಹಾರ ಕೊಡುತ್ತಾರೆ. ಅದನ್ನು ನೋಡಿಕೊಳ್ಳಲು ಮೂರು ನಾಲ್ಕು ಜನರಿರುವರು. ಅವರಿಗೆ ಪ್ರತಿ ತಿಂಗಳಿಗೂ ಸಂಬಳ ಪಡೆಯುವ ಕರ್ತವ್ಯ ಕೂಡಾ ಇದಾಗಿದೆ. ಇದನ್ನೆಲ್ಲ ವಿರoಜಯ ಅವರೇ ಖುದ್ದಾಗಿ ಮುಂದೆ ನಿಂತು ನೋಡಿಕೊಳ್ಳುತ್ತಾರೆ.
ಇಂತಹ ಪ್ರಾಣಿ ಪ್ರೇಮ ಎಲ್ಲಿ ಕಾಣುವಿರಿ ನೀವು? ಬೀದಿ ನಾಯಿಗಳಿಗಾಗಿ ತನ್ನ ಬದುಕನ್ನೇ ಮುಡಿಪಾಗಿ ಇಟ್ಟ ಜನರನ್ನು? ಖಾಯಿಲೆಯ ಹಾಗೂ ದಿಕ್ಕಿಲ್ಲದ ಸಣ್ಣ ಮರಿಗಳಿಗೆ ,ಯಾರಾದರೂ ದಾರಿಯಲ್ಲಿ ಎಸೆದು ಹೋದ, ಅಪಘಾತವಾದ ಹಲವಾರು ನಾಯಿಗಳಿಗೆ ಆಶ್ರಯ ಕೊಟ್ಟು ತಮ್ಮ ದುಡಿತದಲ್ಲಿ ಸಾಕುವ ಜನರನ್ನು ಈ ಕಾಲದಲ್ಲಿ? ಎಷ್ಟೇ ಕೋಟಿ ಹಣವಿದ್ದರೂ ಮಕ್ಕಳು, ಮೊಮ್ಮಕ್ಕಳು ಮರಿ ಮಕ್ಕಳ ಕಾಲಕ್ಕೂ ದುಡಿಯದೆ ತಿನ್ನುವ ಹಾಗೆ ಮಾಲ್, ಹೋಟೆಲ್, ವ್ಯಾಪಾರ ಎಂದು ವ್ಯಾಪಾರಿ ಮನೋಭಾವ ಹೊತ್ತು ಬದುಕುವ ಜನರೇ ಹೆಚ್ಚಾಗಿ ಇರುವ ಈ ಕಾಲದಲ್ಲಿ ಇವರೊಬ್ಬ ತುಂಬಾ ದಯಾಮಯಿ ವ್ಯಕ್ತಿ ಅನ್ನಿಸುವುದಿಲ್ಲವೇ? ತನ್ನ ಮನೆಯ ಸುತ್ತಮುತ್ತ ಜಾಗದಲ್ಲೇ ನಾಯಿಗಳನ್ನು ಸಾಕುತ್ತಿರುವ ಇವರಿಗೆ ಹಲವು ದಾನಿಗಳು ಉದಾರ ನೆರವು ನೀಡಿದ್ದಾರೆ. ನಾಯಿಗಳ ಗೂಡುಗಳನ್ನು ಕಟ್ಟಲು, ಎಲ್ಲಾ ನಾಯಿಗಳಿಗೆ ಕೆಂಪು ಅಕ್ಕಿ ಅಥವಾ ಕುಚ್ಲಕ್ಕಿ ಅನ್ನ ಕೊಡುವ ಕಾರಣ ಕೆಲವರು ಅನ್ನಕ್ಕೆ ಬೇಕಾದ ಅಕ್ಕಿ, ಬ್ರೆಡ್, ಮೊಸರು, ತಮ್ಮ ಹುಟ್ಟು ಹಬ್ಬವನ್ನು ಅಲ್ಲಿಗೆ ಏನಾದರೂ ಕೊಡುವ ಮೂಲಕ ಆಚರಿಸಿಕೊಂಡ ಮಹನೀಯರು ಕೂಡಾ ಇದ್ದಾರೆ. ಅವರೆಲ್ಲರನ್ನೂ , ಅವರ ಸಹಕಾರಗಳನ್ನು ವಿರಂಜಯ ಹೆಗ್ಗಡೆ ಅವರು ನೆನೆಯಲು ಮರೆಯುವುದಿಲ್ಲ.
ಇಲ್ಲಿನ ನಾಯಿಗಳಿಗೆ ಸ್ವಾತಂತ್ರ್ಯವೂ ಇದೆ. ಸಂಜೆ ಸ್ವಲ್ಪ ಹೊತ್ತು ಅಲ್ಲೇ ತಿರುಗಾಡಿ ಬರಬಹುದು. ಆದರೆ ಕೆಲವು ಮನುಷ್ಯರ ಹಾಗೇ ಈ ನಾಯಿಗಳಿಗೆ ಶಿಸ್ತು ಕೂಡಾ ಇದೆ. ಸಣ್ಣ ಮರಿಗಳು ಗೂಡಿನಿಂದ ಹೊರ ಬಂದರೆ ಸಿಕ್ಕಿ ಸಿಕ್ಕಿದಲ್ಲಿ ಓಡುವುದಿಲ್ಲ. ಒಂದೋ ಬೇರೆ ದೊಡ್ಡ ನಾಯಿಗಳು ಕಚ್ಚುತ್ತವೆ ಎಂದೋ, ತನ್ನ ಜಾಗ ಇದೇ ಎಂದೋ ಮತ್ತೆ ಬಂದು ಗೂಡು ಸೇರುತ್ತವೆ. ಹೊಸದಾಗಿ ಬಂದ ಮರಿಗಳು ಓಡಿದರೆ ಅಲ್ಲಿರುವ ಜನ ಮತ್ತೆ ಅವುಗಳನ್ನು ನಾಯಿ ತನ್ನ ಮರಿಗಳನ್ನು ಹಿಡಿದು ತರುವ ಹಾಗೆ ಕುತ್ತಿಗೆಯ ಹಿಂಭಾಗದಲ್ಲಿ ಹಿಡಿದು ತಂದು ಗೂಡಿಗೆ ಬಿಡುತ್ತಾರೆ.
ಹೊಸಬರು, ಬೇರೆ ಹೊಸ ನಾಯಿಗಳನ್ನು ಕಂಡಾಗ, ಹಸಿವಾದಾಗ ಆ ನಾಯಿಗಳ ಗಲಾಟೆ ಮೇರೆ ಮೀರುತ್ತದೆ. ಒಂದು ನಾಯಿ ಕಿರುಚಲು ಶುರುವಿಟ್ಟರೆ ಸಾಕು ಕೆಲವೊಮ್ಮೆ ಎಲ್ಲಾ ನಾಯಿಗಳೂ ಒಟ್ಟಿಗೆ ಬೊಗಳುತ್ತವೆ. ಅದನ್ನು ಯಾವುದೇ ಕಿರಿ ಕಿರಿ ಇಲ್ಲದೆ ಸಹಿಸಿ ಎಲ್ಲಾ ನಾಯಿಗಳನ್ನು ಒಂದೇ ರೀತಿಯಾಗಿ ಇಲ್ಲಿ ನೋಡಿಕೊಳ್ಳಲಾಗುತ್ತದೆ.
ಇಲ್ಲಿನ ದೊಡ್ಡ ನಾಯಿಗಳಿಗೆ ಹೆಸರುಗಳಿವೆ. ಎಲ್ಲಾ ದೊಡ್ಡ ನಾಯಿಗಳನ್ನು ಆಯಾ ಹೆಸರಿನಿಂದಲೇ ಕರೆಯಲಾಗುತ್ತದೆ. ಹಾಗೆಯೇ ಖಾಯಿಲೆಯ ನಾಯಿಗಳನ್ನು ಬೇರೆಯೇ ಕೋಣೆಯಲ್ಲಿ ಇರಿಸಿ ಅವುಗಳಿಗೆ ಹೆಚ್ಚು ಸಮಯ, ಬೇರೆಯೇ ಊಟ, ಮದ್ದು ಕೊಟ್ಟು ನೋಡಿಕೊಳ್ಳಲಾಗುತ್ತದೆ. ಇಲ್ಲಿರುವ ನಾಯಿಗಳಲ್ಲದೇ ಬೇಕೆಂದರೆ ಊರಿನ ಎಲ್ಲಾ ಸಾಕಿರುವ ಹೆಣ್ಣು ಬೀದಿ (ಲೋಕಲ್) ನಾಯಿಗಳಿಗೂ ಉಚಿತವಾಗಿ ಸಂತಾನ ಹರಣ ಚಿಕಿತ್ಸೆಯನ್ನು ಉಚಿತವಾಗಿ ತಿಂಗಳಿಗೆ ಒಮ್ಮೆ ಇವರು ಕೊಡಿಸುತ್ತಾರೆ.
ನಾಯಿಯೊಂದು ಖಾಯಿಲೆ ಬಂದು ಇಲ್ಲಿ ಸತ್ತರೆ ಅದರ ಸಂಸ್ಕಾರ ಮಾಡಿ ಅದರ ಫೋಟೋ ತೆಗೆದು "ಮಿಸ್ಸಿಂಗ್" ಅಂತ ಫ್ಲೆಕ್ಸ್ ನಲ್ಲಿ ಹಾಕಿ ಇಡುತ್ತಾರೆ, ಇಲ್ಲಿ ನಾವು ಇವರ ಪ್ರಾಣಿ ಪ್ರೀತಿಯನ್ನು ನೆನೆಯಬಹುದು. ಯಾವುದೇ ಪ್ರಶಸ್ತಿಗಳ ಹಿಂದೆ ಹೋದವರು ಇವರಲ್ಲ. ಇವರು ಉತ್ಕಟ ಪ್ರಾಣಿ ಪ್ರೇಮಿ. ಮನುಷ್ಯರ ಹಾಗೆಯೇ ಇಲ್ಲಿ ಭಾವನಾತ್ಮಕ ಸಂಬಂಧ ನಾಯಿಗಳೊಂದಿಗೆ ವಿರಂಜಯರಿಗೆ ಇದೆ. ಹಾಗಾಗಿ ನಾಯಿಗಳೂ ಎಲ್ಲೇ ಹೋದರೂ ಮತ್ತೆ ತಿರುಗಿ ಇಲ್ಲೇ ಬರುತ್ತವೆ. ಹೇಳಿ ಕೇಳಿ ನಾಯಿ ಮನುಷ್ಯರಿಗಿಂತಲೂ ನಿಯತ್ತಿನ ಪ್ರಾಣಿ. ಈಗ ಲೋಕಲ್ ತಳಿಯ ಬೆಕ್ಕುಗಳನ್ನು ಉಳಿಸಲು ಅವುಗಳನ್ನೂ ಕೂಡಾ ಸಾಕಲಾಗುತ್ತಿದೆ.
ಪ್ರತಿ ನಾಯಿಯನ್ನು ಸಹ ಪ್ರತಿದಿನ ಸ್ನಾನ ಮಾಡಿಸುತ್ತಾರೆ. ಅವುಗಳು ಇರುವ ಜಾಗವನ್ನು ತೊಳೆದು ಬೆಳಗ್ಗೆ ಹಾಗೂ ಸಾಯಂಕಾಲ ಶುದ್ಧಗೊಳಿಸಲಾಗುತ್ತದೆ. ಕೆಲವು ಸಲ ಮಲ, ಮೂತ್ರ, ವಾಂತಿ ಅಲ್ಲೇ ಮಾಡಿಕೊಳ್ಳುವ ನಾಯಿಗಳನ್ನು ಬೇರೆಯೇ ಕಟ್ಟಿ ಶುಚಿಯಾಗಿ ಇಡಲಾಗುತ್ತದೆ. ಒಟ್ಟಿನಲ್ಲಿ ಇಲ್ಲಿನ ನಾಯಿಗಳು ಶುದ್ಧವಾಗಿ ಇರುತ್ತವೆ. ಮಾತ್ರವಲ್ಲ ಆಗಾಗ ಇಲ್ಲಿ ನಾಯಿಗಳಿಗೆ ರೇಬೀಸ್ ವಿರುದ್ಧ, ಬೇರೆ ಬೇರೆ ರೋಗಗಳ ವಿರುದ್ಧ ಲಸಿಕೆಗಳನ್ನು ಕೂಡಾ ನೀಡಲಾಗುತ್ತದೆ. ಈ ಪ್ರಾಣಿಗಳ ಆರೋಗ್ಯಕ್ಕಾಗಿ ಪಶು ವೈದ್ಯರು ನಿರಂತರ, ನೇರ ಸಂಪರ್ಕದಲ್ಲಿಯು, ಆಗಾಗ ಅಲ್ಲಿಗೆ ಕರೆತಂದು ಸದಾ ಅವುಗಳ ಆರೋಗ್ಯದ ಬಗ್ಗೆ ಗಮನ ಕೊಡುತ್ತಾರೆ. ಅವರ ಆಟೋ ರಿಕ್ಷಾವನ್ನು ಪೆಟ್ ಆಂಬುಲೆನ್ಸ್ ಆಗಿ ಬಳಸಲಾಗುತ್ತದೆ. ಅದರಲ್ಲಿ ನಾಯಿಗಳನ್ನು ದೂರದ ಊರಿನ ಆಸ್ಪತ್ರೆಗಳಿಗೆ ಕೊಂಡೊಯ್ದು ಆಪರೇಶನ್, ಹಾಗೂ ವಿವಿಧ ಚಿಕಿತ್ಸೆ ಕೊಡಿಸಲಾಗುತ್ತದೆ.
ಇಲ್ಲಿ ಇನ್ನೊಂದು ವಿಶೇಷತೆ ಇದೆ. ಎಲ್ಲಾ ನಾಯಿಗಳ ಗುಣ ಒಂದೇ ಆಗಿಲ್ಲ. ನಾಯಿ ಭಾಷೆಯನ್ನು ಅರಿಯುವುದು ಬೇರೆಯೇ ಇದೆ. ನಾಯಿಗಳ ಮುಖದ ಆಕಾರವನ್ನು ನೋಡಿ ಅವುಗಳ ಭಾವನೆಗಳನ್ನು ಓದುವ ಒಂದು ಚಾರ್ಟ್ ಇಲ್ಲಿನ ಗೋಡೆಯ ಮೇಲಿದೆ. ಕೆಲವು ನಾಯಿಗಳಿಗೆ (ಬೀದಿ ನಾಯಿ ಆದ ಕಾರಣವೋ ಏನೋ) ಬೆಳಿಗ್ಗೆ ಸಂಜೆ ಊರಿನ ರಸ್ತೆಯಲ್ಲಿ ಒಂದು ರೌಂಡ್ ಓಡಿ ಒಂದೆರಡು ಹತ್ತಿರದ ಮನೆಗೆ ಹೋಗಿ ಬಂದರೆ ಸಮಾಧಾನ. ಇಲ್ಲಿ ಅದಕ್ಕೂ ಅವಕಾಶ ಇದೆ. ಕೆಲವು ನಾಯಿಗಳಿಗೆ ಅವರು ಒಮ್ಮೆ ತನ್ನನ್ನು ಎತ್ತಿಕೊಂಡರೆ ಇಷ್ಟ. ಇನ್ನು ಕೆಲವು ನಾಯಿಗಳಿಗೆ ಇವರು ಬೆನ್ನ ಮೇಲೆ ಕೈಯಾಡಿಸಿದರೆ ಖುಷಿ. ಮತ್ತೆ ಕೆಲವು ನಾಯಿಗಳ ಬಳಿ ಅವರು ಮಾತನಾಡಿದರೆ ಅವುಗಳಿಗೆ ನೆಮ್ಮದಿ! ನಾಯಿಗಳು ಅವರ ಆಟೋದ ಮುಂದೆ ಬಂದು ನೃತ್ಯ ಮಾಡುವುದು ನೋಡಲು ಚಂದ. ಎಲ್ಲಾ ನಾಯಿಗಳನ್ನು ಕೂಡಾ ತನ್ನ ಮನೆಯ ಸದಸ್ಯರಂತೆ ಕಾಣುತ್ತಾರೆ ಅವುಗಳ ಭಾವನೆಯನ್ನು ಅರಿತ ವಿರಂಜಯ ಹೆಗ್ಗಡೆ ಅವರು.
ನಿಮಗೆ ಏನಾದರೂ ಅಲ್ಲಿಂದ ನಾಯಿ ಮರಿಗಳು ಬೇಕೆಂದರೆ ಚೆನ್ನಾಗಿ ಸಾಕುವವರಿಗೆ ಯಾವುದೇ ಹಣ ಕೊಡದೇ ತರುವ ಅವಕಾಶವೂ ಇದೆ.ಚೆನ್ನಾಗಿ ಸಾಕಿದರೆ ಆಯಿತು. ನಿಮ್ಮ ಮನೆಯಲ್ಲಿ ನಾಯಿ ತುಂಬಾ ಮರಿ ಹಾಕಿದೆ ಎಂದರೆ ಅಲ್ಲಿ ಬಿಟ್ಟು ಬರಲೂ ಬಹುದು. ದೊಡ್ಡ ಸಾಕು ನಾಯಿಗಳನ್ನು ಅಲ್ಲಿ ಬಿಟ್ಟು ಬರಲು ಈಗ ಅವಕಾಶ ಇಲ್ಲ ಕಾರಣ ಅಲ್ಲಿ ಜಾಗದ ಕೊರತೆ ಇದೆ. ಆದರೂ ರೋಗ ಪೀಡಿತ, ಅಪಘಾತವಾದ, ಅನಾಥ, ಸಣ್ಣ ಮರಿಗಳನ್ನು ಇಲ್ಲಿ ತೆಗೆದು ಇರಿಸಿಕೊಂಡು ಸಲಹಲಾಗುತ್ತದೆ.
ಹಲವಾರು ಉತ್ತಮ ತಳಿಯ ನಾಯಿಗಳೇ ಅಲ್ಲದೆ ಲೋಕಲ್ ನಾಯಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ . ರೋಗಗ್ರಸ್ತ ಹಾಗೂ ಅನಾಥ ನಾಯಿ ಮರಿಗಳಿಗೆ ಇದೊಂದು ಆಶ್ರಯ ತಾಣವಾಗಿ ಬೆಳೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನ ಯುವಕರು ದುಡಿಯುವುದರ ಜೊತೆಗೆ, ಉತ್ತಮ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರೂ ಇದ್ದಾರೆ ಎಂಬುದಕ್ಕೆ ವಿರಂಜಯ ಹೆಗ್ಗಡೆ ಅವರು ಉತ್ತಮ ಉದಾಹರಣೆ. ಜೈನ ಧರ್ಮದ ಅಹಿಂಸಾ ತತ್ವವನ್ನು ಸರಿಯಾಗಿ ಪಾಲಿಸುವ ಕಾರ್ಯವಿಲ್ಲಿ ನಡೆದಿದೆ ಎಂದು ಹೇಳಬಹುದು. ಹಾಗೆಯೇ ಇಲ್ಲಿನ ನಾಯಿಗಳಿಗೆ ಯಾವುದೇ ಮಾಂಸಾಹಾರಕ್ಕೆ ಅವಕಾಶ ಇಲ್ಲ.
ಇಂತಹ ಅಪರೂಪದ ನಾಯಿಗಳ ಆಶ್ರಮಕ್ಕೆ ಒಮ್ಮೆ ನೀವು ಭೇಟಿ ಕೂಡಲೇ ಬೇಕು. ಶೃಂಗೇರಿಯಿಂದ ಕಾರ್ಕಳಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಮಾಳ ಗೇಟ್ ಕಳೆದು ಸ್ವಲ್ಪ ದೂರಕ್ಕೆ ಇದೆ ಸುಮ್ಮ ಬಂಡಸಾಲೆ. ಅಲ್ಲೊಂದು ಟೆನ್ನಿಸ್ ಕೋಚಿಂಗ್ ಸೆಂಟರ್ ಕೂಡಾ ಇದೆ. ಅಲ್ಲದೆ ರಾಜ್ಯ ಮಟ್ಟದಲ್ಲಿ ಆಡ ಬಹುದಾದ ಉತ್ತಮ ಒಳಾಂಗಣ ಟೆನ್ನಿಸ್ ಕೋರ್ಟ್ ಕೂಡಾ ಇಲ್ಲಿದೆ. ರಜಾ ದಿನ ಹಾಗೂ ಆದಿತ್ಯವಾರ ಇಲ್ಲಿ ಕೋಚಿಂಗ್ ಕೂಡಾ ಕೊಡಲಾಗುತ್ತದೆ. ವಿರಂಜಯ ಅವರು ಉತ್ತಮ ಟೆನ್ನಿಸ್ ಆಟಗಾರರೂ ಹೌದು. ಹಿರಿಯರಿಗೆ ಹಾಗೂ ಮಕ್ಕಳಿಗೂ ಇಲ್ಲಿ ಟೆನ್ನಿಸ್ ಆಟವನ್ನು ಹೇಳಿ ಕೊಡಲಾಗುತ್ತದೆ. ಹಾಗೆಯೇ ಧರ್ಮಸ್ಥಳದಿಂದ ಉಡುಪಿ , ಕಾರ್ಕಳ ಮಾರ್ಗದಿಂದ ಬರುವವರು ಬಜಗೋಳಿಯಲ್ಲಿ ಬಲಕ್ಕೆ ತಿರುಗಿ ಕುದುರೆಮುಖ ರಸ್ತೆಯಲ್ಲಿ ಒಂದೆರಡು ಕಿಲೋ ಮೀಟರ್ ಮುಂದೆ ಸಾಗಬೇಕು. ಅಲ್ಲಿಯೇ ಪಕ್ಕದಲ್ಲಿ ಅಂದರೆ ಮಂಗಳೂರು - ಸೋಲಾಪುರ ಹೈ ವೇ ಯಿಂದ ಎರಡು ಕಿ.ಮೀ ಒಳಗೆ ಸಾಗಿದರೆ ಮುಡ್ರಾಲು ದುರ್ಗಾ ಪರಮೇಶ್ವರಿ ದೇವಸ್ಥಾನ ಇದೆ. ತುಂಬಾ ಸುಂದರವಾದ ಪ್ರಶಾಂತ ಪ್ರದೇಶವಿದು. ಹಸಿರು ಪ್ರಕೃತಿಯ ಮಡಿಲು. 9611944763 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ವಿರಂಜಯ ಹೆಗ್ಗಡೆ ಅವರು ಸಂಪರ್ಕಕ್ಕೆ ಸಿಗುತ್ತಾರೆ. https://youtu.be/C87mhXwdIyU ಇಲ್ಲಿ ಸ್ಥಳೀಯ ವಾರ್ತಾ ವಾಹಿನಿ ನೀಡಿದ ಸುದ್ದಿ ಮಾಹಿತಿ ಯು ಟ್ಯೂಬ್ ನಲ್ಲಿಯು ನೋಡಲು ಲಭ್ಯವಿದೆ. ಧರ್ಮಸ್ಥಳ, ಶೃಂಗೇರಿ, ಉಡುಪಿ, ಕಾರ್ಕಳ ಪ್ರವಾಸ ಬರುವವರು ತಪ್ಪದೆ ಒಮ್ಮೆ ಭೇಟಿ ಕೊಡಬಹುದಾದ ಜಾಗವಿದು. ಮನುಜರಂತೆ ಪ್ರಾಣಿಗಳೂ ಪ್ರೀತಿಗೆ, ಶಿಸ್ತಿಗೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಣ್ಣಾರೆ ಕಂಡು ಹೋಗುವ ಅವಕಾಶ ನಿಮ್ಮದಾಗಲಿದೆ. ಮಿಸ್ ಮಾಡಿಕೊಳ್ಳದೇ ಒಮ್ಮೆ ವಿರಂಜಯ ಹೆಗ್ಗಡೆ ಅವರ ಪ್ರಾಣಿ ಪ್ರೇಮ ನೋಡಿದರೆ ಮನ ಹರ್ಷಿತಗೊಳ್ಳುತ್ತದೆ. ಸಹಾಯ ಮಾಡುವ ಮನಸ್ಸಿದ್ದರೆ ಅದಕ್ಕೂ ಅವಕಾಶ ಇದೆ. ಮನುಷ್ಯರಿಗೆ ಅನಾಥಾಶ್ರಮ ಕಟ್ಟಿ ಅದನ್ನು ಸರಿಯಾಗಿ ನೋಡಿಕೊಳ್ಳುವುದೇ ಕಷ್ಟ ಆಗಿರುವ ಈ ಕಾಲದಲ್ಲಿ ಬೀದಿ ನಾಯಿಗಳಿಗೆ ಆಶ್ರಮ ಕಟ್ಟಿ ಅವುಗಳನ್ನು ನೋಡಿಕೊಳ್ಳುವ ಕಾರ್ಯ ಸಾಧಾರಣದ್ದೇ? ಇವರ ಕಾರ್ಯಕ್ಕೆ ನಾವು ಮೆಚ್ಚಲೇ ಬೇಕಲ್ಲವೇ? ನೀವೇನಂತೀರಿ?
@ಹನಿಬಿ0ದು@
23.10.2021