ಬುಧವಾರ, ನವೆಂಬರ್ 9, 2022

ಗಝಲ್

ಗಝಲ್

ಹಸಿರ ಹೊದ್ದು ಮಲಗಿರುವ ಕನ್ಯೆಯಿವಳು ನೀ ಯಾರೇ?
ಬಸಿರಲಿ ಜೀವಿಗಳ ಹೊತ್ತು ಸಾಕುವವಳು ನೀ ಯಾರೇ ?

ಬವಣೆಯ ಬದುಕನು ಒಪ್ಪಿ ಅಪ್ಪಿಕೊಂಡಿರುವಳು ಧರೆ
ಬದಲಾವಣೆ ಮಾಡುವ ಮನುಜರ ಹೊತ್ತವಳು ನೀ ಯಾರೇ?

ಗುಂಡಿ ಕೊರೆದು ನಿನ್ನೆದೆಯ ನೆತ್ತರ ಕುಡಿವವರ ಬೆಳೆಸುತಿರುವವಳು ಬುವಿ
ಗಂಡಿಯೊಳಗೂ ಜೀವಿಗಳಿಗೆ ಆಶ್ರಯವಿತ್ತವಳು ನೀ ಯಾರೇ?

ಗುಂಡು ಗುಂಡಾಗಿ ದುಂಡಾಗಿ ಬೆಳೆದವಳು ಪೃಥ್ವಿ
ಗಂಡಸರಿಗೂ ತಲೆ ತಗ್ಗಿಸದೆ ರವಿಯ ಕಿರಣದಿ ಬೆಳೆಯುವವಳು ನೀ ಯಾರೇ?

ಮಂಡಿಯೂರಿ ಬೇಡುತಿಹೆ ಧರಣಿ ದೇವಿಯೇ ಹೆಚ್ಚಿಸದಿರು ಮನುಜರನು
ಹೆಂಡ ಕುಡಿದು ಬುದ್ಧಿ ಹಾಳುಮಾಡಿಕೊಂಡವರ ಪ್ರೇಮದಿ ಪೊರೆವವಳು ನೀ ಯಾರೇ?
@ಹನಿಬಿಂದು@
09.11.2022

ಮಂಗಳವಾರ, ನವೆಂಬರ್ 8, 2022

ಗಝಲ್

ಗಝಲ್
ತನ್ನ ಉದ್ಧಾರವಾಗಬೇಕಿದೆ, ಆತ್ಮ ವಿಮರ್ಶೆ ಮಾಡಬೇಕಿದೆ ಮನವೇ
ಸರ್ವ ಬಂಡೆಗಲ್ಲುಗಳ ನಡುವೆ ನೀರಾಗಿ ಹರಿಯಬೇಕಿದೆ 
ಮನವೇ

ಬಿರುಗಾಳಿಗೆ ಎದುರಾಗಿ ಸಾಗಬೇಕಿದೆ, ತರಗೆಲೆಯ ತೆರದಿ ಜಾರುತ್ತಾ ಬೀಳುತ್ತಾ, ಓಡುತ್ತಾ
ಸರ್ವರ ಜೊತೆಗೆ ಒಂದಾಗಿ ಬೆರೆತು ಬಾಳ ಬೇಕಿದೆ ಮನವೇ..

ಅಕ್ಕರೆಯ ಸಕ್ಕರೆಯು ಒಂದೆರಡು ದಿನಕ್ಕೆ ಮಾತ್ರ ಮೀಸಲು
ಅತಿಯಾದರೆ ಅಮೃತವೂ ವಿಷವೇ, ತಿಳಿಯಬೇಕಿದೆ ಮನವೇ

ಮೋಸ, ವಂಚನೆ, ಹಗೆ, ಹೊಟ್ಟೆಕಿಚ್ಚಿನ ಜಾಲತಾಣಗಳಿಹವು
ಬದುಕ ಮೊಬೈಲ ಆ್ಯಪ್ ಗಳನು ಬಳಸುವುದ ಅರಿಯಬೇಕಿದೆ ಮನವೇ..

ಕಣ್ಣು ಕೋರೈಸುವ ಕಡೆ ಎಲ್ಲಾ ಜಗಮಗ ಬೆಳಕು, ತಳುಕು, ಮೆಲುಕು
ನೂಕುವರು ಪಾತಾಳಕೆ ಬಡವನ, ಸೆಟೆದು ನಿಲ್ಲಬೇಕಿದೆ ಮನವೇ..

ಪ್ರೀತಿ, ಸ್ನೇಹ, ಜಾಣ್ಮೆಯಿಂದಲಷ್ಟೆ ಗೆಲ್ಲಬಹುದು ಹೃದಯಗಳ ಧರೆಯಲಿ
ಪ್ರೇಮ ಭರಿತ ಹೃದಯವನು ಸರಿಯಾಗಿ ಓದ ಬೇಕಿದೆ ಮನವೇ..
@ಹನಿಬಿಂದು@
09.11.2022