ಪ್ರೀತಿ
ನನ್ನ ನಿನ್ನ ನಡುವೆ ಬಂಧ
ಕಣ್ಣ ಸಂಚು ಮಾಡಿತು
ಸಣ್ಣ ಸಣ್ಣ ನೋಟವಿಂದು
ಬಣ್ಣದರ್ಥ ಕೊಟ್ಟಿತು
ನಿನ್ನೆ ಯಾರೋ ಇದ್ದವರು
ಮುನ್ನ ಒಟ್ಟು ಸೇರಲು
ಸುಣ್ಣದಂಥ ಬಿಳಿಯ ಪ್ರೀತಿ
ಮಣ್ಣ ಮೇಲೆ ಮೂಡಲು
ಭಿನ್ನ ಭಾವ ಬದಿಗೆ ಸರಿಸಿ
ತನ್ನ ನೋವ ಬೆರೆಸಿ
ಜ್ಞಾನ ಧಾರೆ ಹೆಚ್ಚಿಸುತ್ತಾ
ಹೃಣ್ಮನಗಳ ಸೇರಿಸಿ
ರನ್ನ ಮುದ್ದು ಆತ್ಮೀಯತೆ
ಪುಣ್ಯ ಕಾರ್ಯ ಮಾಡುತ
ಹೆಣ್ಣ ಜನ್ಮ ಸಾರ್ಥಕ್ಯದ
ಹೊನ್ನ ಭಾವ ಮೂಡುತ
@ಹನಿಬಿಂದು@
06.12.2025
ಶನಿವಾರ, ಡಿಸೆಂಬರ್ 6, 2025
ಭಾವಗೀತೆ
ಅಮ್ಮ
ಅಮ್ಮ
ಆಕಾಶದ ಎತ್ತರಕ್ಕೆ ಬೆಳೆಯಬಹುದೇ ಯಾರಾದರೂ
ಅದು ನೀನೇ... ನೀನೇ..ತೋರಿಸಿರುವೆ ಖದರು...
ಮರುಗಿರಲಿ ಕೊರಗಿರಲಿ ಬೆಂದು ಬಾಡಿರಲಿ
ಒಳಗೊಳಗೇ ನೋವ ನುಂಗಿ ಮುಖದ ನಗುವಿನಲಿ
ಹಗಲು ರಾತ್ರಿ ದುಡಿದು ಗಳಿಸಿ ಮಕ್ಕಳಿಗಾಗಿ
ಕೈ ಕಾಲನು ಸವೆಸಿ ಕಠಿಣ ಪರಿಶ್ರಮಿಯಾಗಿ
ನೀನೆಂದರೆ ದೇವಿ ನೀನೆಂದರೆ ಮಾಯೆ
ನಿನ್ನುಸಿರೇ ನಮ್ಮ ದಾರಿ ದೀಪ ಛಾಯೆ..
ನನ್ನುಸಿರಲಿ ನಿನ್ನಿಸಿರಿದೆ ನನ್ನ ಬಾಳು ನೀನೇ
ರಕ್ತವೂ... ಮಾಂಸವೂ.. ಎಲ್ಲವೂ ನಿನ್ನದೇ
ತಟ್ಟಿದ ಮೈ ಮನಗಳು ಬೆಳೆದಿವೆ ನಿನ್ನಿಂದಲೇ..
ಬೇರು ನಿನ್ನಲಿ ಇಳಿದು ಹೋಗಿದೆ ಮಗುವಿಂದಲೇ
ನೀನಿದ್ದರೆ ನನಗೆ ಬಲ ನಿನ್ನಿಂದಲೇ ನನಗೀ ಛಲ
ನೀನಿದ್ದರೆ ದೈವೀ ಕಳೆ ನಾನೇನೇ ನಿನ್ನ ಬೆಳೆ
ಈ ಹಾಡು ನಿನಗಾಗಿ. ಒಡೆದ ಕೈ ಕಾಲಿಗಾಗಿ
ಕಷ್ಟದ ಬೆನ್ನತ್ತಿರುವ ನಿನ್ನೀ ನೋವಿಗಾಗಿ
@ಹನಿಬಿಂದು@
07.11.2025
ಶುಕ್ರವಾರ, ಡಿಸೆಂಬರ್ 5, 2025
ತುಳು
ಮಣೆ
ನೆಲಟ್ಟ್ ಕುಲ್ಲು ಪಂದ್ ಪಂಡ ಬಿನ್ನಗ್ ಅತ್ತ್ಗೆ ಮಲ್ಲ ಮರ್ಯಾದಿ
ಅವ್ವೇ ಬತ್ತಿನಾಯಗ್ ಕುಲ್ಲೆರೆ ಮಣೆ ಕೊರುಂಡ ಅವ್ವೆಗೆ ಪಿರಾಕ್ದ ಜನಕ್ಲೆ ಮರ್ಯಾದಿ
ಬತ್ತಿ ಕೂಡ್ಲೆ ಚಾ ತಿಂಡಿ ಅತ್ತ್ ಕೊರಿಯೆರೆ
ಒಂಜಿ ಗ್ಲಾಸ್ ನೀರ್ ಬೆಲ್ಲದ ತುಂಡು ತಿನಿಯರೆ!
@ಹನಿಬಿಂದು@
05.12.2025
ಸೋಮವಾರ, ಡಿಸೆಂಬರ್ 1, 2025
ಚಳಿಯ ಕಚಗುಳಿ
ಜಡೆಗವನ
ಚಳಿಯ ಕಚಗುಳಿ
ಚಳಿಯೇ ನೀನೆಲ್ಲಿದ್ದೆ ನನ್ನ ಎಬ್ಬಿಸಿ ತಟ್ಟಲು
ತಟ್ಟುತ್ತಾ ಮಲಗಿಸಿದರೂ ತಾಯಿ ಚಳಿ ಬಿಡದು
ಬಿಡದೆ ಕಾಡುತಿಹೆ ನೀ ನನ್ನ ಬೇತಾಳನಂತೆ ಇಂದು
ಇಂದಿಲ್ಲಿ ನಾಳೆ ಅದೆಲ್ಲಿಗೆ ನಿನ್ನ ಸವಾರಿ ದೊರೆಯೇ
ದೊರೆ ಮಗನೂ ಹೆದರುವನು ನಿನ್ನೀ ಆರ್ಭಟಕೆ
ಆರ್ಭಟ ಮಿಂಚು ಮಳೆ ಗುಡುಗಿಲ್ಲದೆ ನೀ ಕೊರೆವೆ
ಕೊರೆದು ಗಡ್ಡ ಮನ ಮೈ ಕೈಯ ನಡುಗಿಸುವೆ
ನಡುಗುವ ಕೈಗಳಿಂದ ನಾನೆಂದೂ ಬರೆಯಲಾರೆ
ಬರೆಯಬಿಡು ಚಳಿಯೇ ನೀ ದೂರ ಓಡಿಬಿಡು
ಓಡುತ್ತಾ ಹೋದೇಯ ಮತ್ತೆ! ಸ್ವಲ್ಪ ಇಲ್ಲೇ ಇರು ಬಿಸಿಲ ಧಗೆ ತಾಳಲಾರೆ
ತಾಳು ತಾಳು ಮಳೆಯೂ ಬೇಕು, ನೀನೂ ಬೇಕು
ಬೇಕಾಗಿರುವುದು ಏಕೆಂದರೆ ಗಿಡ ಮರಗಳ ಹೂವು ಅರಳಿಸಿ ಹಣ್ಣು ತರಿಸಲು!!!
@ಹನಿಬಿಂದು@
01.12.2025