ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
2018ನೇ ಹೊಸ ವರ್ಷಕ್ಕೆ ಸ್ವಾಗತ ಹಾಗೂ ಶುಭಾಶಯಗಳನ್ನು ಕೋರುತ್ತಾ ಎಷ್ಟೇ ಹೊಸ ವರ್ಷಗಳು ಬಂದರೂ, ಈ ಸಮಾಜ ಮಹಿಳೆಯೊಬ್ಬಳನ್ನು ತನ್ನಷ್ಟಕ್ಕೆ ತಾನಾಗಿ ಬದುಕಲು ಬಿಡುವುದಿಲ್ಲ. ಇದು ನನಗಾದ ನೈಜ ಅನುಭವ. ಅದನ್ನು ನಾನು ಹೇಳಲೇ ಬೇಕು.
ನನ್ನಷ್ಟಕ್ಕೇ ನಾನು ನನ್ನ ಐದು ವರ್ಷದ ಮಗಳೊಂದಿಗೆ ಇರುತ್ತೇನೆ. ಅವಳ ಓದು- ಬರಹದೊಂದಿಗೆ ನನ್ನ ಒಂದಿಷ್ಟು ಅಲ್ಪ ಓದು-ಬರವಣಿಗೆ. ಮತ್ತೆ ಮಾಮೂಲಿ ಅಡಿಗೆ-ಮನೆ, ತೊಳೆಯುವ,ಗುಡಿಸುವ ಕೆಲಸ. ನಾನು,ಶಾಲೆ,ಮನೆ,ಮಗಳು, ಸ್ವಲ್ಪ ಮೊಬೈಲ್ ವಾಟ್ಸಪ್,ಫೇಸ್ಬುಕ್,ನನ್ನ ಕವನಗಳು ಇದಿಷ್ಟೆ ನನ್ನ ಪ್ರಪಂಚ. ಹೀಗಿರುವಾಗ ನಾನು ಹೇಗಿದ್ದೇನೋ ನೋಡಲು ನನ್ನ ತಮ್ಮ ನಮ್ಮ ಮನೆಗೆ ಬಂದ. ಯಾವುದೋ ಕೆಲಸ ನಿಮಿತ್ತ ಆ ಕಡೆ ಬರಲಿಕ್ಕಿದ್ದವನು ಬಂದ. ಆ ರಾತ್ರಿ ನಿಲ್ಲಲು ಹೇಳಿದೆ. ತುಂಬಾ ದಿನಗಳ ಬಳಿಕ ಮಾತುಕತೆ,ಹರಟೆಯ ಬಳಿಕ ಮಲಗಿದೆವು. ರಾತ್ರಿ 11:30ಗಂಟೆಗೆ ಪಕ್ಕದ ಮನೆಯ "ಒಳ್ಳೆಯ ಪರೋಪಕಾರಿ" ಎನಿಸಿಕೊಂಡ ಮನುಷ್ಯ ಅವನ ಹೆಂಡತಿಯೊಡನೆ ಸೇರಿ,ಅವಳ ಸೋದರ ಸಂಬಂಧಿಗೆ ನನ್ನ ಗಂಡನ ಮೊಬೈಲ್ ಸಂಖ್ಯೆಯನ್ನು ಪುಕ್ಕಟೆಯಾಗಿ ನೀಡಿ, ಅವನ ಕಿವಿಗೆ ಅದೇನು ತುರುಕಿ ಬಿಟ್ಟರೇನೋ!
ನಮ್ಮ ಪರಿಚಯವೇ ಇಲ್ಲದ ಆತ ಈ ಪಾಪಿಗಳ ಕೃತ್ಯದಲ್ಲಿ ಸಹಾಯಕನಾಗಿ ಬಂದ. ಅರ್ಧ ರಾತ್ರಿಯಲ್ಲಿ ಸತ್ತು ಹೋದ ತನ್ನ ತಂದೆಯ ಮೊಬೈಲ್ ನಿಂದ ಕರೆಮಾಡಿ,ಹೆಸರು ಹೇಳದೆ,"ನಿಮ್ಮ ಮನೆಯಲ್ಲಿ ಬೇರೊಬ್ಬ ಯಾರೋ ಗಂಡಸು ಬಂದು ಇದ್ದಾನೆ" ಎಂದು ಹೇಳಿ ಫೋನ್ ಕಟ್ ಮಾಡಿ ಇಟ್ಟು ಬಿಟ್ಟ. ಅವನು ಮತ್ತೆಂದೂ ಕಾಲ್ ರಿಸೀವ್ ಮಾಡಲೇ ಇಲ್ಲ. ಟ್ರೂ ಕಾಲರ್ ನಲ್ಲಿ ನೋಡಿದಾಗ ಸತ್ತು ಹೋದ ಅವನ ತಂದೆಯ ಹೆಸರು,ಸರ್ ನೇಮ್ ಗೊತ್ತಾಯಿತು!
ಪೊಲೀಸ್,ಕಂಪ್ಲೆಂಟ್ ಎಲ್ಲಾ ಏಕೋ ಸರಿಕಾಣಲಿಲ್ಲ. ಬಿಲ್ಡಿಂಗ್ ಹೆಸರೂ ಹಾಳು ಅಂದುಕೊಂಡೆ. ನಮ್ಮ ಕಾಂಪೌಂಡ್ನಲ್ಲಿ ನಾಲ್ಕು ಜನ ನನ್ನಂತೆಯೇ ಶಿಕ್ಷಕಿಯರಿದ್ದಾರೆ. ನನಗಾದ ಪರಿಸ್ಥಿತಿ ಅವರಿಗೂ ಬರದಿರಲಿ ಎಂದುಕೊಂಡು ಅವರನ್ನು ಎಚ್ಚರಿಸಲು ಕಾಂಪೌಂಡ್ ಮಹಿಳೆಯರ ಬಳಗಕ್ಕೆ" ಹೀಗೊಬ್ಬ ಇದ್ದಾನೆ,ನಿಮ್ಮ ಮನೆ,ಗಂಡ,ಕುಟುಂಬಕ್ಕೂ ಫೋನ್ ಹೋದೀತು ಜೋಕೆ" ಎಂದೆ. ಅಷ್ಟೆ!
ಫೋನ್ ಮಾಡಿಸಿದವಳೂ ಅದನ್ನು ನೋಡಿದಳು! ಅವಳ ಕುಟುಂಬದ ಹೆಸರಾಗಿತ್ತು ಅದು ಆ ಸರ್ನೇಮ್! ಗಂಡನಿಗೆ ಚೆನ್ನಾಗಿ ಕುಡಿಸಿ, ಸುಮ್ಮನೆ ಕುಳಿತಿದ್ದ ನನ್ನ ಗಂಡನನ್ನು 'ಸರ್, ನಿಮ್ಮಲ್ಲಿ ಮಾತನಾಡಲಿಕ್ಕಿದೆ'ಎಂದು ಹೇಳಿ, ಮುಂದೆ "ಏಯ್! ಅಂಥ ಮಗನೆ,ಇಂಥ ಮಗನೆ,ನನ್ನ ಹೆಂಡತಿಯ ಕುಟುಂಬದ ಸುದ್ದಿ ತೆಗೆಯೋಕೆ ನಿನಗೆಷ್ಟೋ ಧೈರ್ಯ?" ಎಂದು ದೊಡ್ಡ ಜಗಳ! ಏನೂ ಅರಿಯದ ನನ್ನ ಗಂಡ ಕಕ್ಕಾಬಿಕ್ಕಿ!
ನಾನು ಮಧ್ಯೆ ಹೋಗಿ,
ಮನೆ ಮಾಲೀಕರನ್ನು ಕರೆದು ಕುಡುಕನನ್ನು ಹೇಗೆ ಹೇಗೋ ಸಮಾಧಾನ ಮಾಡಲು ಹೋದರೆ ನನ್ನ ಮೇಲೇನೇ ಎಗರಾಡ ಬೇಕೇ?
'ಪರವೂರು,ಪರಮ ಕಷ್ಟ' ಎಂಬ ಗಾದೆ ನನಗೆ ಸರಿಯಾಗಿ ಅನ್ವಯಿಸುತ್ತದೆ. ಹೊಟ್ಟೆ ಪಾಡಿಗಾಗಿ ಎಲ್ಲೆಲ್ಲೋ ಕೆಲಸ ಮಾಡುತ್ತಾ ಬದುಕುತ್ತಾ,ಯಾರಿಗೆ ಏನೂ ತೊಂದರೆ ಮಾಡದೆ ತಾನಾಯಿತು, ತನ್ನ ಕೆಲಸವಾಯಿತು ಎಂದು ನಾವು ನಮ್ಮಷ್ಟಕ್ಕೆ ಬದುಕುತ್ತಿದ್ದರೂ ಹಲವಾರು ಕೆಲಸವಿಲ್ಲದ ಜನಗಳು ನಮ್ಮ ನೆಮ್ಮದಿಯನ್ನು ಕಿತ್ತುಕೊಂಡು ನಮ್ಮ ಬಾಳಿಗೇ ಮುಳ್ಳಿಡುವ ರಾಕ್ಷಸರು ರಾಮಾಯಣ ಕಾಲದಲ್ಲಿ ಮಾತ್ರವಲ್ಲ! ಈಗಿನ ವೈಜ್ಞಾನಿಕ, ತಾಂತ್ರಿಕ ಯುಗದಲ್ಲೂ ಇದ್ದಾರೆ!
ಬೇರೆ ಬೇರೆ ಊರುಗಳಲ್ಲಿ ಬದುಕುತ್ತಿರುವ ದುಡಿಯುವ ಮಹಿಳೆಯರೇ ಹುಷಾರ್! ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಫಾಲೋ ಮಾಡುವ ಇಂಥ ರಾಕ್ಷಸರು ನಿಮ್ಮ ಊರಲ್ಲೂ ಇರಬಹುದು! ಎಚ್ಚೆತ್ತುಕೊಳ್ಳಿ!
ಹೆಣ್ಣು ಕಲಿತು ಶಾಲೆ ಕಲಿಸಬಲ್ಲವಳಾದರೂ ಅವಳನ್ನು ಕಿತ್ತು ತಿನ್ನುವ ರಾಕ್ಷಸರಿರುವ ವರೆಗೂ ಭಾರತ ಮುಂದುವರೆಯುತ್ತಲೇ ಇರಬೇಕಾಗುತ್ತದೆ, ನೀವೇನಂತೀರಿ?
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ