9.ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ಮುಂದಿನವಾರ 8ಕ್ಕೆ ಮಹಿಳಾ ದಿನಾಚರಣೆ. ಮಹಿಳೆಯರಾದುದಕ್ಕೆ ಹೆಮ್ಮೆ ಪಡೋಣ, ಮಹಿಳಾ ದಿನಾಚರಣೆಯ ಆಚರಣೆ ಹೆಂಡ-ಗುಂಡು-ತುಂಡಿನೊಂದಿಗಿರದೆ ಅಪ್ಪಟ ಭಾರತೀಯ ಶೈಲಿಯಲ್ಲಿರಲಿ, ಅದರೊಂದಿಗೆ ಸಾಧ್ಯವಾದಷ್ಟು ಸಮಾಜದಲ್ಲಿ ತುಳಿತಕ್ಕೊಳಗಾದ, ಬೇರೆಯವರಿಂದ ಜರ್ಜರಿತವಾದ ಮಹಿಳೆಯರಿಗೆ ಸಾಂತ್ವನ ಸಿಗುವ ರೀತಿಯಲ್ಲಿರಲಿ.
ಆಧುನಿಕ ಮಹಿಳೆ ಎಂದಾಗ ಕುಡಿದು ಮತ್ತೇರಿಸಿ, ಅರ್ಧಂಬರ್ಧ ತುಂಡು ಬಟ್ಟೆ ಹಾಕಿ, ತುಟಿಗೊಂದು ಐವತ್ತು ಗ್ರಾಂ ಲಿಪ್ ಸ್ಟಿಕ್ ಬಳಸಿ, ಮೇಕಪ್ ನಲ್ಲಿ ಮುಖ ಬದಲಿಸಿ, ಪೆನ್ಸಿಲ್ ಹೀಲ್ಸ್ ಧರಿಸಿ ಹೋಗುವುದೆಂದು ಅರ್ಥವಲ್ಲ, ಅದು ಮಾಡರ್ನಿಟಿ ಎನಿಸಿ ಕೊಳ್ಳಲಾರದು. ಮಾಡರ್ನ್ ಆಲೋಚನೆಗಳಿರಬೇಕು, ಉದಾತ್ತ ಮನೋಭಾವನೆಗಳಿರಬೇಕು, ಉತ್ತಮ ಧ್ಯೇಯಗಳಿರಬೇಕು, ಒಳ್ಳೆಯ ಆರೋಗ್ಯ ಸಂಪತ್ತು ನಮ್ಮದಾಗಿರಬೇಕು.
ಮೊನ್ನೆ ಮೊನ್ನೆ ತನ್ನ ಜೀವನವನ್ನು ಕೊನೆಗೊಳಿಸಿದ ನಟಿ ಶ್ರೀದೇವಿಯವರಿಗೆ ಶ್ರದ್ಧಾಂಜಲಿಯನ್ನಿಡುತ್ತಾ ಅವರ ಮೃತದೇಹ ಪರೀಕ್ಷೆಯಲ್ಲಿ ದೇಹದಲ್ಲಿ ಆಲ್ಕೋಹಾಲ್ ಪ್ರಮಾಣವಿರುವುದು ತಿಳಿದು ಬಂದಿದೆಯೆಂದು ಪತ್ರಿಕೆಗಳು, ವಿವಿಧ ಸುದ್ದಿ ಮೂಲಗಳು ಬಿತ್ತರಿಸುತ್ತಿವೆ. ನಾವು 'ಕೆಟ್ಟದರಿಂದ ದೂರ ಇರು' ಎಂಬ ನೀತಿಯನ್ನು ನಮಗಾಗಿ ಪಾಲಿಸುತ್ತಾ, ನಮ್ಮ ಮನೆ, ನಮ್ಮ ಮಕ್ಕಳು, ನನ್ನ ವ್ಯಾಪಾರ, ನನ್ನ ಜೀವನ, ನಮ್ಮ ಮನೆ, ನಮ್ಮ ದೈನಂದಿನ ಕೆಲಸಗಳು ಅದರೊಡನೆ ಒಂದಿಷ್ಟು ದೈವಭಕ್ತಿ, ಸಮಾಜ ಸೇವೆ, ದೇಶ ಸೇವೆ, ಹಿರಿಯರ ಸೇವೆ-ಅವರಿಗೆ ಸಹಕಾರ, ಮಕ್ಕಳ ಕಲಿಕೆ ಹೀಗೆ ದಿನ ಕಳೆದರೆ ಯಾರಿಗೆ ಯಾರೂ ಕಂಟಕರಾಗಲಾರರು.
ಈಗಿನ ಕಾಲದಲ್ಲಿ ನಾವೆಷ್ಟು ಬ್ಯುಸಿ ಅಂದರೆ ಯಾರಿಗೂ ಯಾರನ್ನೂ ನೋಡಲು, ಮಾತನಾಡಲು, ಹರಟೆ ಹೊಡೆಯಲು ಸಮಯ ಇಲ್ಲ. ಬೆಳಗ್ಗೆ-ರಾತ್ರಿ ಓಡುತ್ತಿರುವಂತೆ ಭಾಸವಾಗುತ್ತದೆ.ನಮ್ಮ ನಮ್ಮ ಕಾರ್ಯದಲ್ಲಿ ನಾವು ತಲೆ ಎತ್ತಿ ಮಾತನಾಡುತ್ತಿಲ್ಲ, ಒಂದು ನಿಮಿಷವೂ ಮುಖ್ಯ ನಮಗೆ! ಈ ಜಂಜಾಟದ ಬದುಕಿನಲ್ಲಿ ನಮ್ಮನ್ನು ನಾವು ಕಳೆದು ಕೊಳ್ಳ ಬಾರದಲ್ಲವೇ?
ನಮ್ಮ ಗುರಿ, ನಮ್ಮ ಬದುಕಿನ ಮುಂದಿನ ದಿನಗಳ ಬಗ್ಗೆ ಯೋಚಿಸಿ ಅದಕ್ಕಾಗಿ ಮಪನ್ನಡೆಯುವುದು ಸೂಕ್ತ ಕ್ರಮ. ಆದರೆ ನಮ್ಮ ಮಕ್ಕಳನ್ನೂ ಗಮನಿಸಿಕೊಳ್ಳ ಬೇಕು. ಮಾಧ್ಯಮಗಳ ಹಾವಳಿಯಿಂದ ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರೀತಿ-ಪ್ರೇಮಗಳು ಇಂದು ಆರು-ಏಳನೇ ತರಗತಿಯಲ್ಲೆ ಪ್ರಾರಂಭವಾಗಿವೆ! ಅದು ಮುಂದಿನ ವಿದ್ಯಾಭ್ಯಾಸ, ಬದುಕು, ಬೆಳವಣಿಗೆಗೆ ಮಾರಕವಾಗಬಾರದಷ್ಟೆ!
ಸರಿಯಾಗಿ ಗಮನಿಸಿ, ನಮ್ಮ ಮಕ್ಕಳೊಂದಿಗೆ ನಾವು ಕುಳಿತು ನೋಡುವುದು ಒಂದಕ್ಕಿಂತ ಹೆಚ್ಚು ಮದುವೆ ಆದವರ ಧಾರಾವಾಹಿಗಳು, ಚಾಕು-ಚೂರಿಯಿಂದ ಇರಿದು, ಬಂಧೂಕಲ್ಲಿ ಶೂಟ್ ಮಾಡಿ ಸಾಯಿಸುವ ಫಿಲಂ ಗಳು! ನಮಗೆ ಸರಿ-ತಪ್ಪು ತಿಳಿದಿದೆ! ಆದರೆ ಬೆಳೆಯುವ ಮಕ್ಕಳು ಅದನ್ನು ನೋಡಿ ಅದೇ ಜೀವನ ಎ೦ದುಕೊಳ್ಳುತ್ತಾರೆ! ಮೊನ್ನೆ ಮೊನ್ನೆ ಸುಳ್ಯದಲ್ಲಿ ಹಗಲಲ್ಲೆ ನಡೆದ ವಿದ್ಯಾರ್ಥಿನಿಯ ಹತ್ಯೆಗೂ ಇದೇ ಕಾರಣವಾಗಿರಲೂ ಬಹುದು! ಮಾಧ್ಯಮಗಳ ಪ್ರಭಾವ ಇರದೆ ಯಾರಿಗೂ ವಿದ್ಯಾರ್ಥಿಗಳ ವಿಷಯದಲ್ಲಿ ಆ ಊಹೆ ಕೂಡಾ ಸಾಧ್ಯವಿಲ್ಲ! ತನಗೆ ದಕ್ಕದ ಹುಡುಗಿ ಬದುಕಿರಬಾರದು ಎಂಬ ಭಾವ, ಕಾರ್ಕಳದಲ್ಲೊಬ್ಬ ತನ್ನ ಹೆಂಡತಿಯ ಕಾಲುಗಳನ್ನೆ ಕಡಿದ ಭೂಪ! ಹೇಯ ಕೃತ್ಯಗಳೆಂದರೆ ಇದೇ ಅಲ್ಲವೇ?
ಹೆಂಡತಿಯಾದರೂ ಮಗಳಾದರೂ, ಪ್ರೇಯಸಿಯಾದರೂ ತಪ್ಪು ಮಾಡಿದವರನ್ನು ಶಿಕ್ಷಿಸಲು ನ್ಯಾಯಾಲಯಗಳಿಲ್ಲವೇ? ನಂಬಿಕೆ ಇಲ್ಲ ಜನರಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ! ಹಾಗೆಯೇ ತಾಳ್ಮೆಯೂ ಇಲ್ಲ, ಬುದ್ಧಿಯೂ ಕೈಲಿಲ್ಲ! ಹಿಂದು-ಮುಂದಿನ ಯೋಚನೆಗಳು, ಹೆತ್ತವರ ,ಹಿರಿಯರ ಬಗ್ಗೆ ಕಾಳಜಿ, ಆಲೋಚನೆಗಳು, ಅವರ ತ್ಯಾಗದ ಬಗೆಗಿನ ಜ್ಞಾನವಿಲ್ಲ! ನಾನು, ನನ್ನದು, ನನ್ನ ಪ್ರಪಂಚ ಅಷ್ಟೆ! ಬದುಕು ಮೊಬೈಲ್ ಪರದೆಗಿಂತ ಚಿಕ್ಕದಾಗುತ್ತಿದೆ, ತಂತ್ರಜ್ಞಾನ ಟಿವಿ ಪರದೆಯಂತೆ ದೊಡ್ಡದಾಗುತ್ತಿದೆ. ನೈತಿಕತೆ ಸಾಯುತ್ತಿದೆ, ಸತ್ಯ ಸತ್ತು ಸುಳ್ಳು ನಮ್ಮನ್ನಾಳಲು ಬರುತ್ತಿದೆ. ನಾವಾಗಿ ನಾವು ಎಚ್ಚೆತ್ತು ಬದುಕಿದರೆ ಮಾತ್ರ ಮಹಿಳಾ ದಿನಾಚರಣೆ ಅರ್ಥಪೂರ್ಣವಾದೀತು. ನೀವೇನಂತೀರಿ?
@ಪ್ರೇಮ್@