ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-8
ಮಹಿಳೆಯರೇ, ನಿಮ್ಮ ಗಂಡನಿಗೆ ಕೆಟ್ಟ ಚಟಗಳಿವೆ, ದುಡಿದುದನ್ನು ಮನೆಗೆ ವ್ಯಯಿಸದೆ ಚಟಗಳಿಗೇ ದಾಸನಾದ ಗಂಡ ಅದಕ್ಕೇ ವ್ಯಯಿಸುತ್ತಾನೆಂದು ನಿಮಗೆ ಅನ್ನಿಸುತ್ತದೆಯೇ? ಅಕ್ಕ,ತಂಗಿ,ಗೆಳತಿಯರು, ಬಂಧುಗಳನ್ನು ನೋಡಿ 'ನನಗೂ ಅವಳಂಥ ಗಂಡ ಸಿಗಬೇಕಿತ್ತು, ನನ್ನ ಜೀವನ ಸರಿಯಿಲ್ಲ' ಎಂದು ಹಲವಾರು ಬಾರಿ ಅನ್ನಿಸಿರಬಹುದು. ಆದರೆ ಹಾಗೆ ಕೊರಗಬೇಕೆಂದಿಲ್ಲ, ಬದಲಾಗಿ ಬೇಡದ್ದನ್ನು ದ್ವೇಷಿಸುವ ಬೆಂಕಿಯುಂಡೆಗಳಾಗಿ! ಕೆಲವರಿಗೆ ಕೆಲವನ್ನು ತಡೆಯಬೇಕೆನಿಸಿದರೂ ತಡೆಯಲು ಸಾಧ್ಯವಾಗದೇ ಇರಬಹುದು! ಕುಟುಂಬ, ಸಮಾಜ ಗಂಡನ್ನೇ ನಾಯಕನನ್ನಾಗಿ ಮಾಡಿದೆ, ಅದಕ್ಕೆ ಪ್ರತಿಯೊಂದು ಮಹಿಳೆ ತಲೆಬಾಗಿ ಬದುಕಲೇ ಬೇಕು. ರಸ್ತೆಯಲ್ಲಿ ಯಾರದೋ ಬೈಕ್ ಬಂದರೆ ಅಡ್ಡ ಹಾಕಿ ಹತ್ತಿಕೊಂಡು ಹೋಗುವ ಸ್ವಾತಂತ್ರ್ಯ ಗಂಡಸರಿಗೆ ಮಾತ್ರ ಇದೆ ಈ ದೇಶದಲ್ಲಿ!
ನಾಲ್ಕು ಜನ ಗಂಡಸರು ಒಟ್ಟಾಗಿ ಧಾಳಿ ಮಾಡಿದರೆ ಎಲ್ಲರನ್ನು ಒಟ್ಟಾಗಿ ತಡೆಯುವಷ್ಟು ಶಕ್ತಿ ಆ ಸೃಷ್ಠಿಯೇ ನಮಗೆ ಒದಗಿಸಿ ಕೊಡಲಿಲ್ಲ! ಇದು ನಮ್ಮ ಮಿತಿಯಾದರೂ ನೆನಪಿಡಿ, ಶಕ್ತಿಗಿಂತ ಯುಕ್ತಿ ಮೇಲು!
ಗಂಡ ಸತ್ತರೂ ನಾನೇನೂ ಸಮಾಜದಲ್ಲಿ ಕಡಿಮೆಯಿಲ್ಲ ಎಂದು ಬದುಕುತ್ತಾ, ಮಕ್ಕಳನ್ನೂ ಸಾಕುತ್ತಾ ಬದುಕುತ್ತಿರುವ ದಿಟ್ಟ ಮಹಿಳೆಯರು ಸಮಾಜದಲ್ಲಿ ಹಲವಾರು ಧೀರ ಮಹಿಳೆಯರಿದ್ದಾರೆ!! ಆದರೆ ಹೆಂಡತಿ ಸತ್ತ ಬಳಿಕ ಮಕ್ಕಳಿಗಾಗಿ ತನ್ನ ಜೀವನ ಸವೆಸಿ ಬೆಳೆಸುತ್ತಿರುವ ಗಂಡಸರು ಲಕ್ಷಕ್ಕೊಬ್ಬರು ಸಿಗಬಹುದು ಅಷ್ಟೆ! ಅಲ್ಲೆ ಮಹಿಳೆಯ ದಿಟ್ಟ ಶಕ್ತಿ ಬೆಳಕಿಗೆ ಬರುತ್ತದೆ!
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆಯೂ ಮಹಿಳೆಯೊಬ್ಬಳಿದ್ದೇ ಇರುತ್ತಾಳೆ! ಮಹಿಳೆಯರಿಲ್ಲದೆ ಪುರುಷರ ಜೀವನ ಬರಡು, ಮಹಿಳೆಯರಿಗೆ ಪುರುಷರ ಅಗತ್ಯ ಎಷ್ಟಿದೆಯೋ,ಅಷ್ಟೆ ಅಗತ್ಯ ಜೀವನದಲ್ಲಿ ಪುರುಷರಿಗೂ ಇದೆ. ಪರಸ್ಪರ ಅವಲಂಬನೆ ಪ್ರಕೃತಿ ಸಹಜ ಧರ್ಮ. ಪ್ರೀತಿ-ಪ್ರೇಮ ಜೀವನದ ಅವಿಭಾಜ್ಯ ಅಂಗ. ಹಿರಿಯರು ಅದಕ್ಕೇ ಮದುವೆಯಂಥ ಕಟ್ಟುಪಾಡುಗಳನ್ನು ತಂದು ಗಂಡು-ಹೆಣ್ಣನ್ನು ಜೋಡಿ ಮಾಡಿ ಒಟ್ಟಿಗೆ ಬದುಕಲು ದಾರಿ ಮಾಡಿ ಬಿಟ್ಟಿರುವರು. ಅಂಥ ಮದುವೆಯಲ್ಲಿ ಗೊತ್ತಿದ್ದೋ ಇಲ್ಲದೆಯೋ ಸರಿಯಾದ ವ್ಯಕ್ತಿ ಬದುಕಿನಲ್ಲಿ ಸಿಗದಿದ್ದರೆ ಬದುಕು ಹಾಳಾಗಿ ಹೋಯಿತು, ಬದುಕು ಮುಗಿದೇ ಹೋಯ್ತು ಅಂತ ಕೊರಗುತ್ತೇವೆ. ಆದರೆ ಒಂದು ಮಾತು ನೆನಪಿಡಬೇಕು, ಜೀವನದ ಅರ್ಧ ಭಾಗವನ್ನು ತಂದೆ ತಾಯಿಯರೊಡನೆ ಓದು-ಆಟ-ಪಾಠ-ಕೆಲಸದಲ್ಲಿ ಕಳೆದ ನಮಗೆ ಜೀವನದ ಅರ್ಧದಲ್ಲಿ ಬಂದ ಗಂಡ ಬದುಕು ಬರಡಾಗಿಸಲು ನಾವೇಕೆ ಬಿಡಬೇಕು? ನಮ್ಮ ಜೀವನಕ್ಕೆ ಸಂಗಾತಿ ಬೇಕು, ಸಂಗಾತಿ ಸಂಗಾತಿಯಾಗಿರಬೇಕೇ ಹೊರತು ಒರಟ, ಕಟುಕನಾಗಿರಬಾರದು. ನಮ್ಮ ಕನಸುಗಳನ್ನು ಮುರಿಯುವ, ನಮ್ಮ ಆಸೆಗಳಿಗೆ ತಣ್ಣೀರೆರಚುವವ ಉತ್ತಮ ಸಂಗಾತಿಯಾಗಲು ಎಂದೂ ಸಾಧ್ಯವಿಲ್ಲ! ಹಾಗಂತ ಎಲ್ಲ ಹೆಣ್ಣು ಮಕ್ಕಳಿಗೂ ನನಗೆ ಬೇಡವೆನಿಸಿದ ಸಂಬಂಧವನ್ನು ಕಿತ್ತೊಗೆಯಲೂ ಸಾಧ್ಯವಿಲ್ಲ ಅಲ್ಲವೇ? ಕಾನೂನು ಕಟ್ಟಳೆಗಳಿಗೆ ತಲೆಬಾಗಿ, ಮಕ್ಕಳಿಗಾಗಿ ತುಟಿಕಚ್ಚಿ ನೋವು ಸಹಿಸಿ ಬದುಕದೆ ವಿಧಿಯಿಲ್ಲ ನೂರಾರು ಬಾರಿ!! ಸಮಾಜದಲ್ಲಿ ಮಹಿಳೆಯೊಬ್ಬಳು ತನಗಾಗಿ ಅಲ್ಲದೆ ಇತರರಿಗಾಗಿ ಬದುಕಬೇಕಾಗುತ್ತದೆ. ಮಾನ ಮರ್ಯಾದೆಗಾಗಿ ಅಂಜಿ, ತಂದೆ-ತಾಯಿಯರ ಮಾನ ಉಳಿಸಲು, ಮಕ್ಕಳ ಜೀವನ ರಕ್ಷಿಸಲು ನಮ್ಮನ್ನು ನಾವು ಧಾರೆಯೆರೆದು, ನಮ್ಮ ಜೀವನವ ಬರಡಾಗಿಸಿ, ಇತರರಿಗಾಗಿ ನಮ್ಮ ಬದುಕನ್ನು ಬಲಿಕೊಟ್ಟು, ಸತ್ತಂತೆ ಬದುಕಬೇಕಾದ ಸಂದರ್ಭಗಳು ಬರಲೂ ಬಹುದು! ನಮ್ಮೆಲ್ಲ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿಯೋ, ಗಾಳಿಗೆ ತೂರಿಯೋ ಇತರರಿಗಾಗಿ ಬದುಕಬೇಕು, ವಿಧಿಯಿಲ್ಲ! ಆದರೆ ಆ ಬದುಕನ್ನು ಬರಡಾಗಿಸದೆ ಸಂತಸದಿ ಬಾಳ್ವೆ ನಡೆಸುವ ಸೂತ್ರ ನಮ್ಮೊಳಗೇ ಇದೆ.
ನಾವು ಆಲೋಚನೆ ಮಾಡಿದಂತೆ ನಮ್ಮ ಬದುಕಿರುತ್ತದಂತೆ. ನಮ್ಮ ಬದುಕನ್ನು ರೂಪಿಸಲು ಬೇರೆಯವರಿಗೆ ಬಿಡಬಾರದು, ನಾವೇ ನಮ್ಮ ಜೀವನದ ರೂವಾರಿಗಳಾಗಬೇಕು, ಬದುಕಲು ಒಳ್ಳೆಯದಾದ ನೂರೆಂಟು ದಾರಿಗಳಿವೆ. ಹಸಿದ ರಣಹದ್ದುಗಳ ಕಣ್ಣಿಗೆ ಬೀಳದೆ, ನಮ್ಮ ಜೀವನದ ನಾವೆಯನ್ನು ಸಲೀಸಾಗಿ ಮುಂದೊಯ್ಯುವ ಕ್ಯಾಪ್ಟನ್ ಗಳು ನಾವೇ ಆದಾಗ ಮಾತ್ರ ಹೆಣ್ಣು ಅಬಲೆಯಲ್ಲ ಸಬಲೆಯೆಂದು ತೋರಿಸಬಹುದು.
'ನನ್ನ ಜೀವನ ಮುಗಿಯಿತೆಂದು ' ತಲೆ ಕೆಳಗೆ ಹಾಕದೆ, ನಾನೀಗ ಕೆಸರಿನ ಕಮಲ,ಚೆನ್ನಾಗಿ ಅರಳಿ ನಗಬೇಕೆಂಬ ಸಂಕಲ್ಪ ನಾವೇ ತೊಡಬೇಕು. 'ನನ್ನ ಬದುಕಿನ ನೈದಿಲೆಯನ್ನರಳಿಸಲು ಯಾರೂ ಬರದಿದ್ದರೆ ಬೇಡ ನಾನೇ ಅರಳುತ್ತೇನೆ, ತಂದೆಯಾಗಿ ಮೇಲೆ ಆ ದೇವನಿರುವನು' ಎಂದುಕೊಂಡು ಬದುಕಿನ ಹುಟ್ಟು ಹಾಕಿದವರಾರೂ ಇದುವರೆಗೂ ಸೋತಿಲ್ಲ!
ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳೋಣ. ಅಕ್ಷರವನ್ನೆ ಕಲಿಯದ ಸಾಲು ಮರದ ತಿಮ್ಮಕ್ಕ,ನರಸಮ್ಮ ನಮಗೆ ದ್ರೋಣಾಚಾರ್ಯರಂಥ ಗುರುಗಳಾಗಲಿ. ನಾವೇನೂ ಕಡಿಮೆಯಿಲ್ಲ, ಮಹಿಳೆಯರು ಮನಸ್ಸು ಮಾಡಿದರೆ ಒಂದು ಸಂಸಾರವನ್ನು ಸಾಗರ ಮಾಡಲೂ ಬಹುದು, ಮೆಗಾ ಸೀರಿಯಲ್ ಗಳಲ್ಲಿ ಮಾಡುವಂತೆ ಹಾಳು ಮಾಡಿ ನುಂಗಿ ನೀರು ಕುಡಿಯಲೂ ಬಹುದು! ಆದರೆ ಒಳಿತಿನ ಕಡೆ ಮನವಿರಲಿ! ತಾವೂ ಬದುಕಿ, ಇತರರ ಬದುಕಿಗೂ ಸಾಧ್ಯವಾದರೆ ಆಸರೆಯಾಗೋಣ. ಇಲ್ಲದಿದ್ದರೆ ನಮ್ಮ ಬದುಕನ್ನಾದರೂ ಉತ್ತಮವಾಗಿ ಕಟ್ಟಿಕೊಂಡು ಮನುಷ್ಯತ್ವದಿಂದ ಮನುಷ್ಯರಾಗಿ ಬದುಕೋಣ. ನಮ್ಮ ಸುತ್ತಲಿನವರೊಡನೆ ಅತ್ತೆ- ಸೊಸೆಯರಂತೆ ಕಾದಾಡದೆ ತಾಯಿ-ಮಗಳಂತೆ ಬದುಕಲು ನಮಗೆ ಸಾಧ್ಯವಿಲ್ಲವೇ? ಇಂದೇ ಪ್ರಯತ್ನಿಸೋಣ,ನೀವೇನಂತೀರಿ?
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ