ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-13
ದೇವರೇ ಸ್ಪರ್ಧಿಸಬೇಕಿದೆ ಮಾನವರ ನಡುವೆ
ಗಣಪತಿ ಹಬ್ಬ ಗೌರಿ ಹಬ್ಬ ಅಂತ ಚೌತಿ ಈಗಷ್ಟೆ ಮುಗಿದರೂ ಕೆಲವು ಕಡೆ ಪೂಜಿಸಲಿಟ್ಟ ಗಣಪತಿಗೆ ಇನ್ನೂ ಗಂಗೆಯನ್ನು ಸೇರುವ ಭಾಗ್ಯ ಬಂದಿಲ್ಲ! ಮತ್ತಷ್ಟು ಕಡೆ ಗಂಗೆಯೊಡನೆ ಗಣಪ ಸೇರಿದರೂ ಗಂಗೆಯೊಡನೆ ವಿಲೀನವಾಗುವ ಭಾಗ್ಯ ಗಣೇಶನ ಮೂರ್ತಿಗಿಲ್ಲ! ಅದು ವಿಲೀನವಾಗಲು ನಾವು ಬಳಸಿದ ರಾಸಾಯನಿಕಗಳು ಕರಗಲು ಬಿಡಬೇಕಲ್ಲಾ.
ಅಷ್ಟೇ ಏಕೆ ವಿವಿಧ ಊರಿನ ಗಣೇಶ ಚತುರ್ಥಿ ಆಚರಣೆ ಹಾಗೂ ಅಷ್ಟಮಿಯ ಮೊಸರು ಕುಡಿಕೆ ಆಚರಣೆಗಳ ಪ್ರಚಾರಕ್ಕಾಗಿ ಅಲ್ಲಲ್ಲಿ ಶ್ರೀ ಗಣೇಶ ಹಾಗೂ ಶ್ರೀಕೃಷ್ಣರ ಫೋಟೋಗಳನ್ನು ಹಾಕಿ ಕಾರ್ಯಕ್ರಮಕ್ಕೆ ಶುಭ ಕೋರುವುದು ಸಂಪ್ರದಾಯ. ಹಾಗೆಯೇ ಆಹ್ವಾನ ಪತ್ರಿಕೆಗಳನ್ನೂ ಕಟೌಟ್ ನಲ್ಲೆ ಹಾಕುವ ಕ್ರಮವೀಗ ಬಂದಿಗೆ. ಆ ಗಣಪ, ಕೃಷ್ಣರನ್ನು ನೋಡುವಾಗ "ಅಯ್ಯೋ ಪಾಪ" ಅನ್ನಿಸದೆ ಇರದು. ಕಾರಣ ಅವರು ಜುವೆಲ್ಲರಿ, ಬಟ್ಟೆ ಅಂಗಡಿಗಳ ಜಾಹಿರಾತಿನ ತರುಣಿಯರ ಮುಂದೆ 'ನಾವೂ ಇದ್ದೇವೆ ಇಲ್ಲಿ' ಎಂಬಂತೆ ಹೋರಾಡಬೇಕಿದೆ!!!
ಅಯ್ಯೋ... ಅಷ್ಟೆನಾ.. ಗಣಪತಿಯನ್ನು ಕುಳ್ಳಿರಿಸಿದಲ್ಲಿ ಕಂಠ ಪೂರ್ತಿ ಕುಡಿದು ಬಂದು ಕುಳಿತ ಸ್ಥಿರವಿಲ್ಲದ ಮಗಾನ್ ಭಕ್ತರು.. ಅಲ್ಲೂ ಒಂದೇ ಊರಿನಲ್ಲಿ ರಾಜಕೀಯ ಡೊಂಬರಾಟ. ಒಂದೆಡೆ ಕಾಂಗ್ರೆಸ್ ಗಣಪ, ಮತ್ತೊಂದೆಡೆ ಬಿಜೆಪಿ ಗಣಪ! ಗಣಪ ಒಂದೇ, ಜನರ ಪಕ್ಷಗಳು, ಊರಿನ ಒಗ್ಗಟ್ಟನ್ನು ಒಡೆಯುತ್ತಿವೆ ಈಗಿನ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಗುಂಪುಗಳು. ಬಾಲಗಂಗಾಧರ ತಿಲಕರು ಭಾರತೀಯರನ್ನು ಒಗ್ಗೂಡಿಸಿ, ಅವರಿಗೆ ದೇಶಭಕ್ತಿಯ ಬಗ್ಗೆ ತಿಳಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಲು ಗಣಪತಿ ಉತ್ಸವವನ್ನು ಅವರು ಬಳಸಿಕೊಂಡಿದ್ದರು. ಈಗೇನಾದರೂ ತಿಲಕರು ಬದುಕಿದ್ದಿದ್ದರೆ ಈಗಿನ ರಾಜಕೀಯ ಡೊಂಬರಾಟದ ಗಣಪನ ನೋಡಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೇನೋ..
ಗಣಪನ ಮೆರವಣಿಗೆ ಭಕ್ತಿ ಭಾವ ತುಂಬಿದ ಭಜನೆಯೊಂದಿಗೆ ಸಾಗುವುದರ ಬದಲಾಗಿ ಡಿಜೆ ಪದ್ಯಗಳೊಡನೆ ಸಾಗುತ್ತದೆ, ಅಲ್ಲೂ ಕುಡಿದು ಕುಣಿಯುವ ಗಂಡಸರ ಗುಂಪು ಒಂದು ಕಡೆಯಾದರೆ, ಕೈ ಕೈ ಹಿಡಿದು ಮೈಗೆ ಮೈ ಅಂಟಿಸಿ ನಡೆವವರು ಮಧ್ಯದಲ್ಲಿ, ಮತ್ತೊಂದು ಕಡೆ ಸಮವಸ್ತ್ರ ಧರಿಸಿದ ನೃತ್ಯಗಾರರು, ಮುಂದೆ ಮಜಾಕ್ಕಾಗಿ ನಡೆಯುವ ಹುಡುಗಿಯರು.. ಅಲ್ಲಿ ಭಕ್ತಿಯ ಲೇವ ಲೇಶವೂ ಇಲ್ಲ. ಪಾಪ ಗಣಪತಿ!!
ಹೌದು, ನಮ್ಮ ಸಂಸ್ಕೃತಿಯನ್ನು ನಾವೇ ಹಾಳು ಮಾಡಿದರೆ ಉಳಿಸಿ ಬೆಳೆಸುವವರು ಯಾರು? ಅಪ್ಪನಿಲ್ಲದೆ ಹುಟ್ಟಿದ ದೇವರು ಗಣಪ ಎಂದು ಹೀಯಾಳಿಸಿದ ಹಿಂದೂಗಳನ್ನೂ ನೋಡಿದ್ದೇನೆ. ಜನರೇಕೆ ಹೀಗೆ? ಕಾಲ ಬದಲಾದದ್ದೋ... ಮನಗಳು ಬದಲಾದದ್ದೋ.. ಆ ಗಣಪನಿಗೇ ಗೊತ್ತು..ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ