ಗಝಲ್-42
ಜಗದೊಳಗೆ ಅತಿಯಾದ ನೋವನನುಭವಿಸಿ ನಿನ್ನ ಭುವಿಗೆ ತಂದಿರುವುದನ್ನ ಮರೆತೆಯಾ..
ಎದೆ ಹಾಲ ಕುಡಿವಾಗಲೂ ಮಗುವಿಗೆ ನೋವಾಗದಿರಲೆಂದು ಮೆತ್ತಗೆ ಹಿಡಿಯುತ್ತಿದ್ದುದನ್ನ ಮರೆತೆಯಾ...
ಮನವೇಕೋ ಭಾರವಾಗಿದೆ ಭಾವನೆಗಳ ಕಟ್ಟೆಯೊಡೆದಿದೆ..
ಪುಸ್ತಕದ ಭಾರವನೂ ನಾನೇ ಹೊತ್ತು ನಿನ್ನ ಶಾಲೆಯವರೆಗೂ ಬಿಡುತ್ತಿದ್ದುದನ್ನ ಮರೆತೆಯಾ...
ಬಿಸಿ ಬಿಸಿ ಊಟವನೇ ನನ್ನ ಮಗನುನಲಿ ಎಂದೆಣಿಸಿಕೊಂಡಿದ್ದೆ.
ಪ್ರತಿದಿನ ಬಿಸಿ ಹೊಸರುಚಿಯನು ತಯಾರಿಸಿ ಶಾಲೆಗೋಡಿ ಬಂದು ನಿನಗೆ ತಿನಿಸಿದ್ದನ್ನ ಮರೆತೆಯಾ...
ನನಗೆ ಬಟ್ಟೆಯಿರದಿದ್ದರೂ ಮಗುವಿಗಿರಲೆಂದು ಹೊಸದನ್ನ ಕೊಂಡದ್ದು
ಹಣವಿರದಿದ್ದರೂ ಒಡವೆ ಅಡವಿಗಿಟ್ಟು ಕೇಳಿದ್ದ ಕೊಡಿಸಿದ್ದನ್ನ ಮರೆತೆಯಾ...
ಅಪ್ಪನೊಡನೆ ವಾಗ್ಯುದ್ಧ ನಿನಗಾಗಿ ಪ್ರತಿನಿತ್ಯ ಮಾಡಿದ್ದೆ
ನೀನೇ ಸರಿಯೆಂದು ವಾದಿಸುತಲಿ ನಿನ್ನ ಕಡೆಗೆ ಮಾತನಾಡಿದ್ದನ್ನ ಮರೆತೆಯಾ..
ಜ್ವರ ಬಂದು ಮಲಗಿರಲು ನಾ ನಿದ್ದೆಗೆಟ್ಟು ಚಡಪಡಿಸಿದ್ದೆ
ಊಟ ಬಿಟ್ಟು ಸಾವಿರ ದೇವರಲ್ಲಿ ನಿನಗಾಗಿ ಪ್ರಾರ್ಥಿಸಿ ಕಣ್ಣೀರು ಹಾಕಿದ್ದನ್ನ ಮರೆತೆಯಾ..
ಆಟವಾಡಿ ಬಿದ್ದು ಗಾಯಗೊಂಡು ಬಂದಿದ್ದೆ
ಪ್ರೀತಿಯುಕ್ಕಿ,ಕರುಣೆ ಬಂದು ಆಟವಾಡಿಸಿದ ಶಿಕ್ಷಕರ ದೂಷಿಸಿದ್ದನ್ನ ಮರೆತೆಯಾ..
ಮಗನೆಂಬ ಮೋಹದಿ ಬಂಧುಗಳ ಮನೆಗೂ ಕಡಿಮೆ ಹೋಗುತಲಿದ್ದೆ
ಜೀವಕ್ಕೆ ಜೀವಕೊಟ್ಟು ನಿನ್ನ ಸಾಕಿದ್ದನ್ನ ಮರೆತೆಯಾ..
ನನಗೇನೋ ವಯಸ್ಸಾಯಿತು, ಕಾಡು ಕರೆಯಿತು, ನಾಡು ದೂಡಿತು
ನಿನಗೂ ವಯಸ್ಸಾಗುತಲಿದೆ, ನಿನಗೂ ಮಗನಿರುವುದನ್ನ ಮರೆತೆಯಾ..
ನನ್ನೆಲ್ಲಾ ಪ್ರೀತಿಯನು ಧಾರೆಯೆರೆದು ಮೀಯಿಸಿ ನಿನಗೆ ನೋವಾಗದಂತೆ ಬೆಳೆಸಿದ್ದೆ.
ನನ್ನ ಪ್ರೇಮವ ಪ್ರೀತಿ ಕೊಡುವವಳು ಬಂದಾಗ ಭಾಗಮಾಡಿದ್ದನ್ನು ಮರೆತೆಯಾ...
ನೀನಿಂದು ಹೊರಟಿರುವೆ ನನ್ನ ವೃದ್ಧಾಶ್ರಮದೆಡೆಗೆ ಬಿಡಲೆಂದು
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬುದನ್ನ ಮರೆತೆಯಾ..
@ಪ್ರೇಮ್@