ಗಝಲ್-59
ಮೌನದಲೂ ಮಾತನಾಡುತಲಿದ್ದ ನೀನೇಕೆ ನನ್ನತೊರೆದೆ?
ಕಣ್ಣ ನೋಟದಲೆ ಎಲ್ಲ ಹೇಳುತಲಿದ್ದ ನೀನೇಕೆ ನನ್ನ ತೊರೆದೆ?
ಬದುಕು ಬರಡಾಗುವುದೆಂಬ ಚಿಂತೆಯೇ ಇಲ್ಲ ನನಗೆ
ಮನಸ ಮಲ್ಲಿಗೆಯಾಗಿ ಮುಡಿಸಿದ್ದ ನೀನೇಕೆ ನನ್ನ ತೊರೆದೆ?
ವನದ ತುಂಬೆಲ್ಲ ಕೈಕೈ ಹಿಡಿದು ಓಡಾಡಿದ್ದ ನೆನಪಿನ್ನೂ ಮಾಸಿಲ್ಲ
ಮನಬಂದಂತೆ ವರ್ತಿಸುತ ನಗಿಸುತ್ತಿದ್ದ ನೀನೇಕೆ ನನ್ನ ತೊರೆದೆ?
ದೇವರಲಿ ನನ್ನ ಭವಿಷ್ಯಕ್ಕಾಗಿ ಹರಕೆ,ಪೂಜೆಯ ಕೊಟ್ಟಿದ್ದೆ
ಭವಿಷ್ಯವ ಮರೆತು, ದೇವಾಲಯದಲಿ ಇದ್ದಂತಿದ್ದ, ನೀನೇಕೆ ನನ್ನ ತೊರೆದೆ?
ನನ್ನ ಒಂದು ಕರೆಗಾಗಿ, ಸಲಹೆಗಾಗಿ, ಪದಕ್ಕಾಗಿ ಕಾಯುತಲಿದ್ದೆ
ದೇವರೆದುರೆ ಜತೆಗಿರುವೆನೆಂದು ಆಣೆಯ ಮಾಡಿದ್ದ ನೀನೇಕೆ ನನ್ನ ತೊರೆದೆ?
ಕಷ್ಟ ಸುಖವ ಹಂಚಿಕೊಳ್ಳಲು ದೇವಿಯೇ ನಿನ್ನ ಕಳುಹಿಸಿಹಳೆಂದುಕೊಂಡಿದ್ದೆ.
ಹೇಳಿ ಕೇಳಿ ನನ್ನ ಬಗ್ಗೆ ತಿಳಿದಿದ್ದ ನೀನೇಕೆ ನನ್ನ ತೊರೆದೆ?
ಬಾಳು ಕೊಡುವೆ, ಮಮತೆಯಿಂದ ಸಾಕುವೆನೆಂದು ಭಾಷೆಯಿತ್ತಿದ್ದೆ.
ಬರಿಯ ಪ್ರೀತಿ-ಪ್ರೇಮವನು ಬರೆದಿದ್ದ ನೀನೇಕೆ ನನ್ನ ತೊರೆದೆ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ