ಸೋಮವಾರ, ಡಿಸೆಂಬರ್ 31, 2018

669. ನವವರುಷಕೆ

ನವವರುಷದ ನವೀನ ಹಾರೈಕೆ ನುಡಿಗಳು

ನಲಿಯುತಿರಲಿ ನಿತ್ಯ ಮನ
ನವೀನವಾಗಲಿ ಜೀವನ//

ನವವರುಷದ ನವದಿನಗಳಲಿ
ನಗೆಗಡಲಲಿ ತೇಲಿಸಲಿ,
ನೆನೆದ ಕನಸು ನನಸಾಗಲಿ
ನಂಬಿಕೆ ನಾಶವಾಗದಿರಲಿ//

ನೋವು ಕಡಿಮೆಯಾಗಲಿ
ನೋಟ ಅಂದವಾಗಿರಲಿ
ನುಡಿಯು ಶುಭ್ರವಾಗಿರಲಿ
ನವ್ಯ ನಡತೆ ನಮ್ಮದಾಗಲಿ//

ನಮನ ಹರಿದು ಬರುತಲಿರಲಿ
ನೋವು ದೂರವಾಗಲಿ
ನೊಂದ ಮನವ ಸಂತೈಸಲಿ
ನಾಡು ಬೆಳಗಿ ಸಾಗಲಿ//

ನೀರು ಶುದ್ಧ ದೊರಕಲಿ
ನಾಯಿಯ ನಿಷ್ಠೆ ಬರಲಿ
ನೋಟು ಬದಲಾಗದಿರಲಿ
ನೊಂದ ಮನಕೆ ಶಾಂತಿ ಸಿಗಲಿ//

ನಲಿವು ತುಂಬಿ ಬರಲಿ
ನಗೆಯ ಚಿಲುಮೆ ಚಿಮ್ಮಿ ಬರಲಿ
ನುಡಿಯು ಸತ್ಯ ನುಡಿಯಲಿ
ನಡೆಯು ಮುಕ್ತವಾಗಿರಲಿ//

ನಾಮ ಸ್ಮರಣೆಯಾಗಲಿ
ನವ್ಯ ಬಾಳು ಬೆಳಗಲಿ
ನವ್ಯ ಕಾರ್ಯ ಸಾಗಲಿ
ನಮ್ಮಿಂದ ತಪ್ಪು ಆಗದಿರಲಿ//

ನವಿಲ ಹಾಗೆ ಕುಣಿಯಲಿ
ನೇರ ನುಡಿಯು ಬೆಳಗಲಿ
ನಿಸರ್ಗ ಪ್ರೀತಿ ಹೆಚ್ಚಲಿ
ನೂರಾರು ಆಸೆ ಪೂರೈಸಲಿ//

671. ನ್ಯಾನೋ ಕತೆ-1

ನವೋದಯ

ತನಗ್ಯಾರೂ ಇಲ್ಲವೆಂದು ತಾನು ಚೆನ್ನಾಗಿಲ್ಲವೆಂದು ಯಾವಾಗಲೂ ಯೋಚಿಸುವ ಸುಂದರ ತನಗೆ ತನಗೆ ಆ ಹೆಸರಿಟ್ಟವರ ಶಪಿಸುತ್ತಿದ್ದ! ತನ್ನ ಜೀವನದಿ ತನಗಾರೂ ಇಲ್ಲವೆಂದರಿತು ಸಾಯಲೆಂದು ಹೋದಾಗ ಶಬ್ದ ಕೇಳಿ ಭೂತವೆಂದು ತಿಳಿದು ರಾತ್ರಿ ಓಡಿ ಬಂದ! ಅದೊಂದು ಎತ್ತು ಪ್ಲಾಸ್ಟಿಕ್  ನ ಮೇಲೆ ಮೂತ್ರ ಮಾಡುತ್ತಿದ್ದ ಶಬ್ದವಾಗಿತ್ತು! ಓಡುವ ರಭಸದಲ್ಲಿ ತನ್ನಂತೆಯೇ ಸಾಯಲು ಬಂದ ಸುಶೀಲೆಗೆ ಡಿಕ್ಕಿ ಹೊಡೆದ! ನವ ಪ್ರೇಮ ಚಿಮ್ಮಿತು! ಬಾಳಲಿ ನವೋದಯವಾಯಿತು!
@ಪ್ರೇಮ್@

668. ಆ ದಿನಗಳು

ಆ ದಿನಗಳು

ಸುಪ್ತ ಭಾವಗಳು ಮಲಗಿರಲು,
ಎದೆಕದವ ಗಟ್ಟಿ ಬಿಗಿದಿರಲು,
ಮುಸುಕಿನೊಳಗೆ ಮನ ಮಲಗಿರಲು,
ಆಗಮನ ಸ್ನೇಹಿತನ ಆ ಸಂಜೆಯೊಳು//೧//

ಬಳಿಗೆ ಬಂದ ಕ್ಷಣ ಕಣ್ಣೀರುರುಳಲು
ಪರಿತಪಿಸುತ ಕಷ್ಟಗಳ ಹಂಚಿಕೊಳ್ಳಲು
ನಾನಿನಗೆ ಜತೆಯಾಗಿರುವೆ ಎನಲು
ಧೈರ್ಯದಿ ಬದುಕಲಿ ಮುನ್ನಡೆಯಲು//೨//

ಮನಸೋತು ಮಮತೆಯ ಗರಿಬಿಚ್ಚಲು
ಕೋಗಿಲೆಯ ತೆರದಿ ಮನ ಹಾಡಲು
ಮೆದುಳಿನ ಶಕ್ತಿಯು ತಾ ಮರಳಲು
ನಿರಾಳತೆಯಲಿ ಉಸಿರಾಟ ಪ್ರಾರಂಭಿಸಲು//೩//

ಎದೆಗೂಡಿನಲಿ ರಾಗ ತಾ ಕುಣಿದಿರೆ
ಹಣೆಯಲಿಹ ಬರಹವು ಕೈಲಿ ಬರೆ
ಮೆದುಳಿನ ಯೋಚನೆಗೆ ಜೀವ ತೆರೆ
ಕವನವಾಗಿ ಹೊಮ್ಮಲು ಜೀವ ಸೆರೆ//೪//

ಬಂತು ನನ್ನ ಮಗುವಿನಂದದಿ ಕವನ
ತಂತು ಜನಕೆ ಖುಷಿ-ಖುಷಿಯ ಕ್ಷಣ!
ಸೆರಗ ಹಿಡಿಯುತ ಕುಣಿದು ಹೃನ್ಮನ
ಜೋಕಾಲಿಯಂದದಿ ಜೀಕಿ ಅನುದಿನ//೫//

ಕಾವ್ಯ ಸಾಗರ ಅವನಿಗಿಳಿಯಿತು!
ದೀಪೋತ್ಸವದ ಬೆಳಕ ಬೆಳಗಿತು!
ನವಿಲು ಕುಣಿದು ನಾಟ್ಯವಾಡಿತು
ಹೊಸ ವರುಷ ಬರಲು ಹೊತ್ತಿಗೆಯಾಯಿತು//೬//

ಸಡಗರದಿ ಬಾಳ ನೌಕೆ ಸಾಗಲು
ಮುಂದೆ ದಾರಿಯ ದೇವ ತೋರಲು
ಬಿಡುಗಡೆಯ ದಿನವು ಬೇಗನಿರಲು
ಆಹ್ವಾನವಿಹುದು ನೀವೂ ಬರಲು//೭//
@ಪ್ರೇಮ್@

ಭಾನುವಾರ, ಡಿಸೆಂಬರ್ 30, 2018

667. ನ್ಯಾನೋ ಕತೆ- 3

ನ್ಯಾನೋ ಕತೆ -10

ಖುಷಿ

  ಮದುವೆಯಾಗಲು ಹಲ ವರುಷ ಕಾದ ಸವಿತಾಗೆ ಹುಡುಗನೊಬ್ಬ ಬಂದು ನೋಡಿ, ಒಪ್ಪಿ ಮದುವೆಯಾಗಿ, ಮನೆಯಲ್ಲೆ ಇದ್ದು ಖುಷಿಕೊಟ್ಟ ಗಳಿಗೆ ಮರೆಯಲಾರದ್ದು! ಒಂದು ವರುಷದ ಬಳಿಕ ತಾನು ತಾಯಿಯಾಗಲಿದ್ದೇನೆಂಬ ಖುಷಿ, ಆರು ತಿಂಗಳಿನ ಗರ್ಭಿಣಿಯನ್ನು ಬಿಟ್ಟು ಹೋದ ಗಂಡ ಹತ್ತು ವರುಷಗಳಾದರೂ ಹಿಂದೆ ಬರದಾಗ ಉಳಿಯಲೇ ಇಲ್ಲ ಬಾಳಲ್ಲಿ!! ಮಗುವಿಗಾಗಿ ಬದುಕುವುದೇ ಜೀವನವಾಯ್ತು!

@ಪ್ರೇಮ್@
31.12.2018

666.ಚುಟುಕುಗಳು

ಚುಟುಕು

ಆಟ ಆಡಬಹುದು
ಇದ್ದರೆ ಬಾಲು!
ಆಟವಾಡುತ್ತಲೇ ಇದ್ದು
ಓದದೆ ಇರಲು,
ಹಾಳಾಗುವುದಿಲ್ಲವೇ ಬಾಳು?

2. ನಾನಾರೆಂದು ಕೇಳದಿರು,
ನಾನಾರೆಂದು ಬಾಳದಿರು,
ನೀನಾರೆಂದು ಜನ
ಹೇಳುವಂತೆ ಬಾಳುತಿರು!
@ಪ್ರೇಮ್@

665. ಗಝಲ್-63

ಗಝಲ್-63

ಕ್ಯಾಲೆಂಡರ್  ಬದಲಾದಂತೆ ಬದಲಾಗುವ ಮನವೂ ಬೇಕಾಗಿದೆ.
ಸತ್ತು ಹೋದ ಕರುಳಿಗೆ ಹೊಸ ಭಾವವೂ ಬೇಕಾಗಿದೆ//

ಮಾತು ಮುತ್ತಿನಂತಿದ್ದು, ಇತರರ ನಗಿಸಬೇಕಿದೆ
ನವನವೀನ ಕಲ್ಪನೆ,ಉತ್ತಮ ನೋಟವೂ ಬೇಕಾಗಿದೆ//

ಮೊಬೈಲ್, ಕಂಪ್ಯೂಟರ್, ವಾಟ್ಸಪ್, ಮುಖಪುಟಗಳು ಇರಲಿ
ಪಕ್ಕದಲಿ ಇರುವವರೊಡನೆ ಮಾತಿನ ಶಬ್ದವೂ ಬೇಕಾಗಿದೆ//

ಲೋಕಕೆ ನೀನೇನಾದರೇನು ಫಲ ಗುರುವೆ?
ಬದಿಯವನಿಗೆ ಅಳು ಬಂದಾಗ ಒರೆಸುವ ಸಹಾಯ ಹಸ್ತವೂ ಬೇಕಾಗಿದೆ//

ಹಿರಿಯರೊಡನೆ ಬಳಗದೊಡನೆ ಹರಟೆ -ಮಾತು ಬೇಕು
ಪುಸ್ತಕಗಳ ಮಸ್ತಕದಲಿ ತುಂಬಿಸಿಕೊಳ್ಳೋ ನಯನವೂ ಬೇಕಾಗಿದೆ//

ಡಿಜೆ ಹಾಡು, ಹಾಟು ಡ್ರಿಂಕ್ಸ್, ತುಂಡು ಬಟ್ಟೆ ಬಿಡಬೇಕಲ್ಲವೇ?
ದೀನ,ರೋಗಿ, ಅಂಧ ಜನಕೆ ಪ್ರೇಮ ಧಾರೆಯೆರೆವ ಹೃದಯವೂ ಬೇಕಾಗಿದೆ//
@ಪ್ರೇಮ್@

ಗುರುವಾರ, ಡಿಸೆಂಬರ್ 27, 2018

664. Wishes to manu

Wishes to brother Manu..

Once Nehru said to Great Ambedkar
He was the modern Manu of India
My wishes to your bright future
Be the technical Manu of India...

Catch all your dreams and make them as apps..
Kick all your worries as antivirus kicks..

Write as much as google information
Eat very less to be healthy, wealthy digestion...

Be peaceful as Gandhiji's rules..
Be strong, revolutionary as Bhagat Singh for mistakes..

Be courageous and powerful like a lion...
Be calm and work as an ant to reach your goal..

Here are the bunch of wishes for your birthday....
Make this moment an awesome by setting new goal today...

Polish your mind, wipe out all tears..
Live for you, not at all for others..

Love your life, reach your goals..
Catch your lifemate, reach your dreams...

Wish you many more happy returns of the day brother Manu... Stay blessed...
@Prem@

ಬುಧವಾರ, ಡಿಸೆಂಬರ್ 26, 2018

663. ಭಾರತಾಂಬೆ

ಭಾರತಾಂಬೆ

ಮಡಿಲೊಳಿಟ್ಟು ನನ್ನ ಪೊರೆವ ತಾಯಿ ಭಾರತಾಂಬೆ..
ಮಹಡಿ ಮೇಲೆ ಬದುಕುವಂತೆ ಬಾಳು ಕೊಟ್ಟೆ ತಾಯೇ..//ಪ//

ನಿನ್ನೊಳಿರುವ ಜೀವಿಯೊಳು ನಾನು ಒಂದು ತೃಣ,
ನಿನ್ನೊಡನೆ ನನ್ನ ಕ್ಷಣವು ಎಂದೂ ರಸದೌತಣ!//

ಬೆರಗುಗೊಂಡು ಕುಳಿತುಬಿಟ್ಟೆ, ನಿನಗೆ ನೀನೆ ಸಾಟಿ!
ಪೊರೆಯುತಿಹೆ ನಿತ್ಯ ನೀನು ಜನರ ಕೋಟಿ ಕೋಟಿ!!//

ಮಗುವಿಗದು ತಾಯಿ ಪ್ರೀತಿ ಪ್ರತಿಕ್ಷಣವೂ ಬೇಕು..
ಲಾಲನೆ, ಪಾಲನೆ, ಪೋಷಣೆಗೆ ನೀನೆ ನನಗೆ ಸಾಕು//

ಗಂಗೆ ಯಮುನೆ ಕಾವೇರಿ ನಿನ್ನ ಕಾಲ ಕೆಳಗೆ..
ಕಿರೀಟದಂತೆ ಹಿಮಾಲಯವು ಭಾರತೀಯರ ಕಾವಲಿಗೆ...//

ಹಚ್ಚ ಹಸಿರು ಪೈರ ಸಾಲು ಕೈಯ ಬೀಸಿ ಕರೆಯೇ..
ಗುಡ್ಡ ಬೆಟ್ಟ ಗಿರಿಯ ಸಾಲು ಕೂಡಿ ಬದುಕೆ ಸವಿಯೇ//

ವಿವಿಧತೆಯಲಿ ಏಕತೆಯ ಮಂತ್ರವಿಲ್ಲಿ ಬೇಕು.
ನಿಮ್ಮ ಹಾಗೆ ನೀವು ಬದುಕಿ, ಅದುವೆ ನಮಗೆ ಸಾಕು//

ಹೊನ್ನ ಗಿರಿಯ ಮುಕುಟದಲ್ಲಿ ಚಿನ್ನ ಬಣ್ಣ ಬೇಕೇ?
ತಾಯ ರಕ್ಷಣೆಯಲಿ ಪಣವ ತೊಟ್ಟ ಯೋಧ ಪಡೆಯು ಸಾಕೇ//
@ಪ್ರೇಮ್@

664. ಗಝಲ್-61

ಗಝಲ್-62

ಪೊರೆವ ದೇವಿ, ಕ್ಷಮೆಯ ಮಾತೆಯು ನಮ್ಮ ತಾಯಿ ಭಾರತಿ
ನಲಿವ ಹೃದಯ, ಒಲವ ಧಾರೆಯು ನಮ್ಮ ತಾಯಿ ಭಾರತಿ//

ಕರುಣೆ ಕಡಲು, ಸಿರಿಯ ಒಡಲು ಮಾತೆ ನಿನ್ನದು
ಹರಸೊ ಕರವು, ಮೆರೆಸೋ ಗಂಗೆಯು ನಮ್ಮ ತಾಯಿ ಭಾರತಿ//

ಸಾಗರದ ಅಲೆಯು, ರಮೆಯ ಒಲವು ನಿನ್ನದೇ ಅಲ್ಲವೇ?
ನಗುವ ನಯನ, ತಂಪು ಹನಿಯು ನಮ್ಮ ತಾಯಿ ಭಾರತಿ//

ಮಾತೆ ನೀನು ಕ್ಷಮಯಾ ಧರಿತ್ರಿ ಎಲ್ಲರಿಗೂ ಯಾವಾಗಲೂ
ಪದದ ಭರಣಿ, ಮಕ್ಕಳ ಕಣ್ಮಣಿಯು ನಮ್ಮ ತಾಯಿ ಭಾರತಿ//

ಆರಿಸದ ಆವರಿಸಿದ ಭಾವ ನಿನ್ನದಲ್ಲವೇ?
ಬದುಕ ಪದರ, ದಯೆಯ ಪಕಳೆಯು ನಮ್ಮ ತಾಯಿ ಭಾರತಿ//

ಉದರದಲ್ಲಿ ಧರಿಸಿ ನಮ್ಮ ಪೊರೆವ ಮಾತೆ ನೀನಲ್ಲವೇ?
ಧರಣಿ ಅರಸಿ, ಆನಂದದ ಒರತೆಯು ನಮ್ಮ ತಾಯಿ ಭಾರತಿ//

ಪ್ರೀತಿಯಿಂದ ಜನರ ಸಾಕಿ ಪೊರೆಯೊ ದೇವಿ ನೀನಲ್ಲವೇ?
ಪ್ರೇಮ ಮೂರ್ತಿ, ಭಕ್ತಿಗೆ ಸ್ಫೂರ್ತಿಯು ನಮ್ಮ ತಾಯಿ ಭಾರತಿ//
@ಪ್ರೇಮ್//

665. ಗಝಲ್-62

ಗಝಲ್-62

ಕೋತಿಯಂತೆ ಆಡುತಿಹೆವು ಕ್ಷಮಿಸು ನಮ್ಮ ಮಾತೆಯೇ
ಕಸವ ನಿನಗೆ ಚೆಲ್ಲುತಿಹೆವು, ಕ್ಷಮಿಸು ನಮ್ಮ ಮಾತೆಯೇ//

ವಿಷವ ಮಣ್ಣಿಗೆ, ಗಾಳಿಗೆ,ನೀರಿಗೆ, ಸುರಿಯುತಿಹೆವು
ರಾಸಾಯನಿಕವ ಬಳಸುತಿಹೆವು, ಕ್ಷಮಿಸು ನಮ್ಮ ಮಾತೆಯೇ//

ಚಿಕ್ಕ ಪುಟ್ಟ ಪ್ರಾಣಿ, ಪಕ್ಷಿ, ಕೀಟಗಳ ಕೊಲ್ಲುತಿಹೆವು
ಮರಗಳನು ಕಡಿಯುತಿಹೆವು ಕ್ಷಮಿಸು ನಮ್ಮ ಮಾತೆಯೇ//

ನರ ನಾಡಿಗಳಲಿ ರೋಗಗಳನು ತುಂಬಿಕೊಳುತಲಿಹೆವು,
ಹೊಸ ಆವಿಷ್ಕಾರ ಮಾಡುತಲಿಹೆವು, ಕ್ಷಮಿಸು ನಮ್ಮ ಮಾತೆಯೇ//

ಗದ್ದೆಗೆ ಬಂದ ಒಳ್ಳೆ-ಕೆಟ್ಟ ಹುಳಗಳನೆಲ್ಲ ಸಾಯಿಸುತಿಹೆವು
ಕಪ್ಪೆ, ಎರೆಹುಳವನೂ ಸೇರಿಸಿಹೆವು, ಕ್ಷಮಿಸು ನಮ್ಮ ಮಾತೆಯೇ//

ಪ್ಲಾಸ್ಟಿಕ್, ಫೈಬರ್, ಸಿಎಫ್ ಸಿ ಕಂಡುಹಿಡಿದು ಬಳಸುತಿಹೆವು
ನಿನ್ನ ಮೇಲೆ ಎಸೆಯುತಿಹೆವು, ಕ್ಷಮಿಸು ನಮ್ಮ ಮಾತೆಯೇ//

ಪ್ರೀತಿಯಿಂದ ವಿದ್ಯೆ, ಊಟ, ಆಸರೆ ಕೊಟ್ಟು ಕಾಯುತಿರುವೆ
ದೇಶ ಪ್ರೇಮದಲೆ ಕೊಳ್ಳೆ ಹೊಡೆಯುತಿಹೆವು, ಕ್ಷಮಿಸು ನಮ್ಮ ಮಾತೆಯೇ//

@ಪ್ರೇಮ್@

ಮಂಗಳವಾರ, ಡಿಸೆಂಬರ್ 25, 2018

660. ನರ್ತಕಿಯ ಬದುಕು

ನರ್ತಕಿಯ ಬದುಕು

ನಗುವೆ, ನಕ್ಕು ನಗುತ ಕುಣಿವೆ
ಮನದೊಳಿದೆ ಹಲವಾರು ಗೊಡವೆ
ಜನ ತಣಿದು ಸಂತಸ ಪಡುವರು
ನಮ್ಮ ನೋವಿಗೆ ಅವರೇಕೆ ಮರುಗುವರು?//

ಹಣೆಗೆ ತಿಲಕ ಕೈ ತುಂಬ ಬಳೆ
ಮನದೊಳಗೆ ಕರಗಲಾರದ ಕೊಳೆ
ಬೈತಲೆ ಶೃಂಗಾರ ಕೊರಳಲ್ಲಿ ಬಂಗಾರ
ಬದುಕದು ಕಷ್ಟಗಳ ಮಹಾ ಆಗರ//

ಏನಾದರಾಗಲಿ ಬಂದವರ ಖುಷಿಗೊಳಿಸೆ
ನಮ್ಮ ನೋವನ್ನು ನಾವು ಮರೆವುಗೊಳಿಸೆ
ಹಚ್ಚುವೆವು ಬಣ್ಣ ಮುಖದ ತುಂಬೆಲ್ಲ
ಹಲವಾರು ಬಣ್ಣವಿಲ್ಲದ ಲೋಕ ಬದುಕಲೆಲ್ಲ..//

ಮಣಿ ಮಿಶ್ರಿತ ಮಿರಮಿರ ಹೊಳೆವ ಬಟ್ಟೆ
ಬಾಳು ಸರಿಯಾಗಿರದೆ ಕಣ್ಣೀರ ಕಟ್ಟೆ..
ನಮ್ಮ ನೋಡೆ ಜನಕೆ ಮಹದಾನಂದ
ಬಳಿ ಬರಲು ಕಾಯುತಿಹೆವು ಖುಷಿಯೆಂಬ ಆನಂದ...//

ಕಣ್ಣು, ತುಟಿ, ದೇಹ ಚಲನೆಯಲಿ ಜನಕೆ ಸಂತಸ
ಸಮಯ ಮುಗಿದ ಬಳಿಕ ಮನೆಯಲಿ ಇಲ್ಲ ಸಂತಸ..
ಕರಗಿ ಕರದಲಿ ನೃತ್ಯ ಹೆಜ್ಜೆಯು
ಮನಕೆ ಮುದವದು ಗೆಜ್ಜೆ ನೃತ್ಯವು..//
@ಪ್ರೇಮ್@

661. ಗಝಲ್

ಗಝಲ್-59

ಮೌನದಲೂ ಮಾತನಾಡುತಲಿದ್ದ ನೀನೇಕೆ ನನ್ನತೊರೆದೆ?
ಕಣ್ಣ ನೋಟದಲೆ ಎಲ್ಲ ಹೇಳುತಲಿದ್ದ ನೀನೇಕೆ ನನ್ನ ತೊರೆದೆ?

ಬದುಕು ಬರಡಾಗುವುದೆಂಬ ಚಿಂತೆಯೇ ಇಲ್ಲ ನನಗೆ
ಮನಸ ಮಲ್ಲಿಗೆಯಾಗಿ ಮುಡಿಸಿದ್ದ ನೀನೇಕೆ ನನ್ನ ತೊರೆದೆ?

ವನದ ತುಂಬೆಲ್ಲ ಕೈಕೈ ಹಿಡಿದು  ಓಡಾಡಿದ್ದ ನೆನಪಿನ್ನೂ ಮಾಸಿಲ್ಲ
ಮನಬಂದಂತೆ ವರ್ತಿಸುತ ನಗಿಸುತ್ತಿದ್ದ ನೀನೇಕೆ ನನ್ನ ತೊರೆದೆ?

ದೇವರಲಿ ನನ್ನ ಭವಿಷ್ಯಕ್ಕಾಗಿ ಹರಕೆ,ಪೂಜೆಯ ಕೊಟ್ಟಿದ್ದೆ
ಭವಿಷ್ಯವ ಮರೆತು, ದೇವಾಲಯದಲಿ ಇದ್ದಂತಿದ್ದ, ನೀನೇಕೆ ನನ್ನ ತೊರೆದೆ?

ನನ್ನ ಒಂದು ಕರೆಗಾಗಿ, ಸಲಹೆಗಾಗಿ, ಪದಕ್ಕಾಗಿ ಕಾಯುತಲಿದ್ದೆ
ದೇವರೆದುರೆ ಜತೆಗಿರುವೆನೆಂದು ಆಣೆಯ ಮಾಡಿದ್ದ ನೀನೇಕೆ ನನ್ನ ತೊರೆದೆ?

ಕಷ್ಟ ಸುಖವ ಹಂಚಿಕೊಳ್ಳಲು ದೇವಿಯೇ ನಿನ್ನ ಕಳುಹಿಸಿಹಳೆಂದುಕೊಂಡಿದ್ದೆ.
ಹೇಳಿ ಕೇಳಿ ನನ್ನ ಬಗ್ಗೆ ತಿಳಿದಿದ್ದ ನೀನೇಕೆ ನನ್ನ ತೊರೆದೆ?

ಬಾಳು ಕೊಡುವೆ, ಮಮತೆಯಿಂದ ಸಾಕುವೆನೆಂದು ಭಾಷೆಯಿತ್ತಿದ್ದೆ.
ಬರಿಯ ಪ್ರೀತಿ-ಪ್ರೇಮವನು ಬರೆದಿದ್ದ ನೀನೇಕೆ ನನ್ನ ತೊರೆದೆ?

@ಪ್ರೇಮ್@

662. You...

You..

My voice
My noise...

My hope..
My life...

My nature
My future..

My lover
My power..

My darling
My thinking..

My best...
My last..

My success..
My weakness...

My charger..
My builder..

My fuel..
My jewel...

My poem..
My foam..

My love...
My dove..

My heart..
My sweet..

My care taker..
My heart holder..

My god..
My shade..

My baby
My hobby..

My honey..
My bunny...

My pleasure..
My treasure..

My dream..
My beam..

My ray..
My way..
@prem@

ಸೋಮವಾರ, ಡಿಸೆಂಬರ್ 24, 2018

662. ತಾಯಿ ಭಾರತಿ

ತಾಯಿ ಭಾರತಿ

ತಾಯಿ ನಿನಗೆ ಮಕ್ಕಳಿಂದ ಗೆಲುವಿನಾರತಿ
ದೇಶ ದೇಶ ಸುತ್ತಿದರೂ ನಮ್ಮ ತಾಯಿ ಭಾರತಿ//

ಬದುಕಲದು ಬೇಕು ನಮಗೆ ನಿತ್ಯ ನಿನ್ನ ಲೀಲೆ
ನೀನು ನೀರು ಆದಾಗಲೆ ನಾನು ಬೆಳೆವ  ನೈದಿಲೆ//

ಮನದ ಮನೆಯ ಮಹಲಿನಲಿ ನೀನೆ ನೆಲೆಸಿಹೆ
ಸ್ವಚ್ಛ ಹೃದಯ ಸೂಕ್ಷ್ಮ ಬುದ್ಧಿ ನೀನೆ ನೀಡಿಹೆ//

ಹಿಮಾಲಯವು ನೇರ ನಿಂತು ನಿನ್ನ ಸಲಹಿದೆ
ಗಂಗೆ, ಸಿಂಧು, ಬ್ರಹ್ಮಪುತ್ರ ನದಿಯ ಹರಿಸಿದೆ//

ಪರ್ವತಗಳು ಸಾಲು ನಿನಗೆ ಮಾಲೆಯಾಗಿದೆ
ಹಸಿರು ವನದ ಗಿಡಮರಗಳು ಧಿರಿಸ ನೀಡಿದೆ//

ಅಮ್ಮನೆಂಬ ಮಮತೆಯಿಂದ ಕೋಟಿ ಕೋಟಿ ಜನರಿಹರು
ತಮ್ಮ ಹೆಜ್ಜೆ  ಹೋದಲೆಲ್ಲ ನಿನ್ನ ಹೆಸರ ನೆನೆಸುತಿಹರು//

ನಮ್ಮ ದೇಶ ನಮಗೆ ಹಮ್ಮೆ, ನಾವು ನಿನ್ನ ಮಕ್ಕಳು
ಯಾವ ಪುಣ್ಯವೋ ಕಾಣೆ ತಾಯಿ ನಮಗೆ ಸಿಕ್ಕಳು//

@ಪ್ರೇಮ್@

ಭಾನುವಾರ, ಡಿಸೆಂಬರ್ 23, 2018

659. ಸರಿಯೇನಮ್ಮಾ

ಕವನ

ಅಮ್ಮಾ ಸರಿಯೇನಮ್ಮಾ

ಭೂಮಿಗೆ ಬಂದ ತಕ್ಷಣವೇ ನನ್ನ ಬಾಳು ಸುಟ್ಟೆಯಲ್ಲ
ನಿನ್ನ ಸಂತೋಷಕೆ ನನ್ನ ಬಾಳು ಬಲಿಯಾಯಿತಲ್ಲ
ಅಮ್ಮ ಅಪ್ಪನೆಂದು ಕರೆಯಲೂ ಅವಕಾಶ ಕೊಡಲಿಲ್ಲವಲ್ಲ
ನಾನೇನು ತಪ್ಪು ಮಾಡಿದ್ದೆನಮ್ಮ ,
ನೀ ಹೇಳೆ ಇಲ್ಲವಲ್ಲ?

ಕೈ ಕಾಲುಗಳಿಲ್ಲದ, ಕಣ್ಣು ಕಿವಿಗಳಿಲ್ಲದವರೂ ಬದುಕುತ್ತಿರುವರು
ನನಗೆಲ್ಲವೂ ಸರಿಯಾಗಿಹುದು, ಎಲ್ಲರೂ ಇರುವರು
ನನ್ನ ಹೆತ್ತು ಹೊರಬೇಕಾದವರೇ ನನ್ನ ತೆಗೆದು ನೀರಿಗೆಸೆದಿಹರು
ಕೊಡದಿರಲಿ ನನ್ನಂತೆ ಬಾಳ ನಿಮ್ಮ ಮಕ್ಕಳಿಗೆ ಆ ದೇವರು..

ಬೇಡವಾದೆನು ನಾನು ನನ್ನ ಹೆತ್ತಬ್ಬೆ, ಅಪ್ಪನಿಗೆ
ಬಿಸಾಕಿ ಹೋಗಿಬಿಟ್ಟರು ಕರುಣೆಯೇ ಇಲ್ಲದೆ ನನ್ನ ನೀರಿಗೆ
ಹೆದರಿ ಅದೆಷ್ಟು ಬೇಸರ ಪಟ್ಟಳೋ ನನ್ನ ಮಾತೆ ಮರ್ಯಾದೆಗೆ
ಅವಳಿಗೆ ನಾ ಬೇಡವಾದೆ, ಸಮಾಜವೇ ಹೆಚ್ಚೆನಿಸಿರಬೇಕು ಕೊನೆಗೆ...

ನೀನೊಮ್ಮೆ ನಿನ್ನ ಹೃದಯದ ಬಳಿ ಕೇಳಿ ನೋಡಮ್ಮಾ
ನೀ ಮಾಡಿದ್ದು ಕರುಳ ಬಳ್ಳಿಯ ಬಿಸುಟಿಹುದು ಸರಿಯೇನಮ್ಮಾ
ನಾ ಮಾಡಿದ ತಪ್ಪೇನು ಅರಿಯದೇ ಹೋದೆನಲ್ಲಮ್ಮಾ..
ನನ್ನಷ್ಟೆ ಮುದ್ದಾದ ಮಗುವೊಂದು ನಿನಗೆ ಬೇಕೆನಿಸದೇ ಅಮ್ಮಾ...
@ಪ್ರೇಮ್@

658. ಹಾಯ್ಕುಗಳು

ಹಾಯ್ಕುಗಳು

1. 
ನಾನೇ ದೊಡ್ಡವ
ಎಂದು ಮೆರೆದವನು
ಇಂದು ಎಲ್ಲಿಹ?

2.
ನಮ್ಮ ಮನೆಯು
ಮೇಲಿಹುದು ಗೆಳೆಯ
ಇದು ಮಾದರಿ

3.
ಮನವೇ ಏಕೆ
ಬರಿದಾಗಿಹೆ ಇಂದು
ಕಲಿ ಸ್ವಲ್ಪ ನೀ..

4.
ಜನಪದರ
ಬುದ್ಧಿಮತ್ತೆಯ ಬಗ್ಗೆ
ಅರಿತವರಾರು?

5.
ನಾನೇ ಎನಲು
ತಂದುದು ಏನಿದೆಯೋ
ಮನುಜಾ ನೀನು...

6.
ಬಲ್ಲವ ನೀನೇ
ನಮ್ಮಯ ಬದುಕಿನ
ನಾಳೆಯ ಬಗ್ಗೆ...

7.
ಇಂದು ಇಲ್ಲಿಹೆ
ನಾಳೆ ಎಲ್ಲೇ ಇರಲಿ
ಪ್ರೀತಿಯಿರಲಿ..
@ಪ್ರೇಮ್@

ಗುರುವಾರ, ಡಿಸೆಂಬರ್ 20, 2018

657. ಧರಣಿಗೆ ಶರಣು

ಧರಣಿಗೆ ಶರಣು

ಹಸಿರ ಸೀರೆಯುಟ್ಟು, ಕೇಸರಿ ಹಣೆಯ ಬೊಟ್ಟು
ನಾದ ನಿನಾದ ಸೊಂಪಿಗೆ ಪಕ್ಷಿ ಕಲರವ ಗಾನ
ನೆಮ್ಮದಿ ಬೇಕೆನಲು ಕಾನನದ ಗಾಢ ಮೌನ//

ಹರಿವ ತೊರೆ,ಧುಮ್ಮಿಕ್ಕುವ ಜಲಪಾತದ ತಳುಕು
ಕೊರೆವ ಚಳಿ,ಯತುಗಳ ಚಿಗುರುವ ಝಳಕು.
ಕುಸುಮ, ಗಿರಿಶಿಖರಗಳಂದ ನೋಟವೆನ್ನ ಸಾಲದು
ಅಂದವ ವರ್ಣಿಸಲು ನನ್ನ ಜೀವನವೇ ಕಿರಿದು//

ಚೆಲುವೆ ಧರಣಿಯ ಸರ ಪಕ್ಷಿಗಳ ಸಾಲು
ಬರುವ ರವಿಯು ನಿನ್ನ ನೋಡೆ ದಿನಾಲು
ಮರ,ಬಂಡೆ,ಕಡಲ ಜಲ ರಾಶಿ ನಿಸರ್ಗಕೆ ಕಾವಲು
ಸರ್ವರ ರಕ್ಷಣೆಗಿಹುದು ಹಿಮಾಲಯದ ಸಾಲು..//

ರಂಗಿನಾಟ ಪಶು-ಪಕ್ಷಿ-ಪ್ರಾಣಿ ಕೀಟ ಸಂಪತ್ತಿಗೆ
ಮೋಜಿನಾಟ ಮಾನವ ಜನಕೋಟಿ ಕುಲಕೆ
ಧರಣಿ ಮಾತೆಯೆ ನಿನ್ನೊಲವಿಗೆ, ಗೆಲುವಿಗೆ ಶರಣು
ಸಾಲವು ನೋಡಿ, ಸವಿಯಲು ನನ್ನೆರಡು ಕಣ್ಣು...//

ದಿಗಂತದೆಡೆಗೆ ಬಾಗಿಹುದು ನಿನ್ನ ಕಮಾನು
ಆಕಾಶಕಿಡಬಲ್ಲನೇ ಏಣಿಯ ಬುದ್ಧಿಜೀವಿ ಮನುಜನು?
ನಿನಗೆ ನೀನೇ ಸಾಟಿ ಇಳೆ ದೇವಿ ತಾಯೇ!
ಗ್ರಹಿಸಲಾರೆನು ಮನದಿ ಅವನಿ ನಿನ್ನ ಮಾಯೆ!!//

@ಪ್ರೇಮ್@

656. ನೆನಪು

ನೆನಪು

ದಟ್ಟ ಹಸಿರಿನ  ಪಚ್ಚೆ ಸಿರಿ ಕಾನನದ
ನಡುವೆ ಕೊರೆದು ಜನರೇ ನಿರ್ಮಿಸಿದ
ರಸ್ತೆಯೊಳು ಬಸ್ಸಿನಲಿ ನಾನು ಕುಳಿತಿದ್ದೆ
ನಿನ್ನೊಡನೆ ಸವಿ ಕನಸ ಪೋಣಿಸುತಲಿ ಇದ್ದೆ//

ಒಂದಲ್ಲ ಒಂದು ಸಿಹಿದಿನವು ಬರಲಿ
ನಾವಿಬ್ಬರೇ ಕೈ ಹಿಡಿದು ಓಡಾಡುತಿರಲಿ
ತನುಮನವು ಹಿತವಾಗಿ ಸುಖದಿ ತೇಲುತಲಿರಲಿ
ನನ್ನ ದೇಹದ ಕಣ ಕಣವೂ ನವಿರೇಳುತಲಿರಲಿ//

ನಿನ್ನೊಲುಮೆ ಪಡೆವಂಥ ಕಾತರವು ಎನಗೆ
ಪ್ರೀತಿ ಮಾರ್ಗಕೆ ಮೈಮನದಾತುರದ ಎಡೆಗೆ
ನೀ ಬಾಳಿನಲಿ ಬರುವ ಕನಸದದು ನಿರಂತರ
ನಿನ್ನೊಡನೆ ಕಳೆದ ಕ್ಷಣ ಕ್ಷಣವು ಅಜರಾಮರ!//

ನೆನಪ ಮೂಟೆಯ ಬಿಚ್ಚಿ ಹರಟು ನನಗಿಷ್ಟ
ನೀ ಬರದಿರೆ ಬಾಳು ಆಗುವುದು ಸಂಕಷ್ಟ!
ನಮ್ಮಿಬ್ಬರನು ಕರೆದಿಹುದು ಆ ಸುಂದರ ಬೆಟ್ಟ,
ನೀ ಬಂದರೆ ಬಾಳಲಿ ನನಗಿಲ್ಲವು ಕಷ್ಟ!//

ಮನದಿ ಹೃದಯದಿ ಜಾಗವೆಲ್ಲಿದೆ ಹೇಳು?
ನೀನೆ ಆವರಿಸಿರುವೆ  ನರನಾಡಿಗಳಲು
ದೂರ ಹೋಗುವೆ ಹೇಗೆ ಬಂಧಿಸಿರುವೆನು ನಿನ್ನ
ನನ್ನ ಪ್ರೀತಿಯ ಪಾಶ ಬಿಡಬಹುದೆ ನಿನ್ನ?//
@ಪ್ರೇಮ್@

655. ಜೀವ-ಭಾವ

ನನ್ನ ಜೀವ-ಭಾವಕ್ಕೆ

ಭಾವನೆಯ ಭರಪೂರದಿ ಭರಿಸಿಹ ಭಾವಸಿರಿಯೇ
ಭಾವೈಕ್ಯತೆಯಿಂದಲಿ ಬದುಕುವುದ ಬಿಡಬೇಡ..

ಭಾವಿಸದಿರು ನೀನು ಬಾಳಲಿ  ಬವಣೆಯೇ ಭವನ,
ಬಗೆಬಗೆಯ ಜೀವನವಿದು ಭಾವಗಳ ಮಿಲನ..

ಭೋರ್ಗರೆಯುವ ಶರಧಿ ಭಯವುಕ್ಕಿ ಹರಿದಂತೆ
ಭಾವಗಳೆ ಮೈದುಂಬಿ ಭವ್ಯತೆಯ ಮೆರೆದಂತೆ..

ಭೈರವಿಯ ಸ್ತುತಿಸುತ್ತ ಭಜನೆಯನು ಮಾಡುತ್ತಾ
ಭಾರತದ ಕೀರ್ತಿಯನು ಭೀಮನಂತೆ ಸಾರುತ್ತಾ..

ಬೀಳಿಸದೆ ಜೀವನವ ಬಿಂಬಿಸುತ ಭಾವಗಳ
ಬಿರುಬಿಸಿಲಿನ ಬಿರುಸಿಗೂ ಬೆಂಡಾಗದೆ ಬಳಲಿ...

ಬರಸಿಡಿಲಿನಾರ್ಭಟಕೆ ಬಳಗವನು ತೊರೆಯದೇ
ಬಾರೆನುತ ಕಷ್ಟಗಳ ಭಯವ ತೊರೆದು ಹೆದರದೇ..

ಬೇಧ ಭಾವವ ಮಾಡಿ ಬೇತಾಳದಂತಾಗದೇ
ಬೆಂಬಿಡದ ಪ್ರಯತ್ನದಲಿ ಯಶದಿ ಹಿಂದುಳಿಯದೇ..

ಭುವನೇಶ್ವರಿಯ ನೆನೆದು ಭವ ಸಾಗರವ ದಾಟಿ
ಬಹಳ ಬಯಕೆಯ ಬರಗಾಲದೆಡೆ ಬಿಸುಟು...

ಬೋಧಿಸತ್ವನ ಹಾಗೆ ಸತ್ಯ ಮಾರ್ಗದಿ ನಡೆದು
ಬಕ ಪಕ್ಷಿಯ ತೆರದಿ ಬಡ ಜೀವದಲಿ ನಡೆದು..

ಭಾವನೆಯು ಬೆಂಬಿಡದ ಬಳಗವಾಗಿರಲು ..
ಭಯದ ಮಾತೇಕಿನ್ನು ಬೆಂಗಾವಲಾಗಿರಲು..

@ಪ್ರೇಮ್@

654. ಬರಬಾರದೇ

ಬರಬಾರದೇ

ಬರುವೆನು ಎಂದವ ಬರದೆಯೇ ಹೋದೆಯಾ
ಭಯವದು ನನ್ನನು ಕಾಡುವುದು..
ನೀರಿನ ನೆಪದಲಿ ನೋಡಲು ಬಂದೆನು
ನಿನ್ನಯ ನೆನಪಲಿ ಬಂದಿಹೆನು...

ಆರದ ಆವಿಯ ಮನದಲಿ ತುಂಬಿಸಿ
ಇನಿಯನಿಗಾಗಿ ಕಾದಿಹೆನು..
ಮೋಡಿಯ ಮಾಡಿ ಮಾತನು ಕೊಟ್ಟು
ಬರದೆಯೆ ಮೋಸವ ಮಾಡಿಹನು..

ಕೊಡವದು ಖಾಲಿ ಮನವೂ ಖಾಲಿ
ಮೈಮನ ನಿನ್ನಯ ನೆನಪಲ್ಲಿ..
ಬಿಳಿಯಾಗಿಹುದು ತನುಮನವೆಲ್ಲ
ಬಿಳುಪದು ನಿನ್ನಯ ನೆನಪಲ್ಲಿ..

ಬದುಕೇ ಬಂಗಾರ ನಿನ್ನಾಗಮನದಿ
ಬಂದು ಬಿಡು ನೀ ನನ್ನೆಡೆಗೆ
ಕಾದಿಹೆ ನಿನಗೆ ದಿನವಿಡಿ ಮನದ
ದಣಿವನು ಮರೆತು ನಾನಿಲ್ಲಿ..
@ಪ್ರೇಮ್@

653. ಜೀಕುತಿಹೆ ಜೀವನದುಯ್ಯಾಲೆ

ಜೀವನದುಯ್ಯಾಲೆಯ ಜೀಕುತಿಹೆ...

ಮೇಲಕೂ ಕೆಳಕೂ ಜಗ್ಗುತಿದೆ
ನಿಲ್ಲದೆ ಕ್ಷಣವೂ ಉರುಳುತಿದೆ
ನಿನ್ನನೂ ಜೊತೆಯಲೆ ಒಯ್ಯುತಿದೆ
ಜೀವನದುಯ್ಯಾಲೆ ಜೀಕುತಿದೆ//

ಮರಕದು ಕಟ್ಟಿದೆ  ಹಗ್ಗದ ತುದಿಯ
ನೀನದು ಕುಳಿತಿಹೆ ಹಲಗೆಯ ಮೇಲೆಯೆ
ಮರವನು ನಂಬಿ ಹಗ್ಗವು ಬದುಕಿದೆ
ಹಗ್ಗವ ನಂಬಿ ನೀನು ಜೀಕುತ ಕುಳಿತಿಹೆ..//

ಮರವದು ಬದುಕಿದೆ ಭೂಮಿಯ ನಂಬಿ
ಧರಣಿಯು ಇಹಳು ಸೂರ್ಯನ ನಂಬಿ..
ಬದುಕದು ಹಾಗೆಯೇ ನಂಬಿಕೆ ಇರಲಿ
ಒಬ್ಬರಿಗೊಬ್ಬರ ಸಹಾಯವಿರಲಿ..//

ಬಾಳದು ಹೋಗಲು ಮೇಲೂ ಕೆಳಕೂ
ಹೆದರದಿರು ನೀ ಕಷ್ಟಕೂ, ದು:ಖಕೂ..
ಹಿಗ್ಗದಿರು ನೀ ಖುಷಿಗೂ, ಸುಖಕೂ
ಇಂದಿರೆ ಕೆಳಗೆ ನಾಳೆ ಏರಬಲ್ಲೆ ತುದಿಗೂ//

ಭೂಮಿಯು ವಿಶಾಲ, ಬಾನೂ ಅಗಲ
ಬದುಕಲು, ಸಾಧಿಸಲು ಹುಡುಕು ನಿನ್ನ ಬಯಲ
ಕಟ್ಟಿಕೊ ಗಟ್ಟಿ ಮರಕೆ ಹಗ್ಗದ ತುದಿಯ
ಸೇರಲು ದುಡಿ ನೀ, ಬಾಳಿನ ಗುರಿಯ//

ಅವನಿಗೆ ಬಂದಿಹೆ ಸಾಧಿಸು ಗೆಳೆಯ
ಯಾರೂ ಮಾಡದ ಕೆಲಸವ ಇನಿಯ
ಮಾಡಿಹ ಕೆಲಸವ ವಿಭಿನ್ನದಿ ಮಾಡು
ನಿನ್ನಯ ಹೆಸರು ಮೇಲೇರುವುದು ನೋಡು//
@ಪ್ರೇಮ್//

651. ನಟೇಶನಿಗೆ ನಮನ

ನಟೇಶನೆ  ನಮನ ನಿನಗೆ

ನಮ್ಮಯ ಕಾಯ್ವ ನಟೇಶಗೆ ನಮನ
ನಲಿವಿನ ನಯನದಿ ನೀ ಸುರಿಸು ನಟನ..
ನ್ಯಾಯದಿ ಬದುಕುವಗೆ ನೆಮ್ಮದಿ ನೀಡು
ನಂಬಿ ಬಂದವರಿಗೆ ವರ ಕೊಟ್ಟು ಕಾಪಾಡು..

ಹಾವನು ಕೊರಳಿಗೆ ಸುತ್ತಿಹ ಶಿವನೆ
ಕಲೆಯನು ಅವತಾರದಿ ಬಿಂಬಿಸಿದವನೆ
ಭಕುತರ ಹೃದಯದಿ ನೆಲೆಸಿಹ ದೇವನೆ
ಭಕ್ತಿಯ ಮನದಿ ಬೇಡುವೆ ನಿನ್ನನೆ..

ಭಯದ ಬದುಕು ಎಂದಿಗೂ ಆಗದು
ಭವಿಷ್ಯಕೆ ಉತ್ತಮ ಕಾರ್ಯವ ಮಾಡುವುದು..
ಪ್ರೀತಿಯ ಹಂಚಿ ನೀತಿಯಲಿ ಬಾಳುವ
ಸರ್ವರೂ ಚೆನ್ನಾಗಿ ಬಾಳಲು ಹರಸುವ..

ಮನೆಮನ ಬೆಳಗಲಿ, ಭಕುತಿಯು ಮೆರೆಯಲಿ
ಜಗದಗಲದಿ ನಿನ್ನ ಕೀರ್ತಿಯು ಹರಿಯಲಿ.
ಅವನಿಯ ಹಸಿರು ಎಲ್ಲೆಡೆ ಬೆಳೆಯಲಿ..
ಮುಂದಾಲೋಚನೆ ಕಾರ್ಯಕೆ ಬರಲಿ..
@ಪ್ರೇಮ್@

650. ಹೊರಡಲುಂಟು

ಹೊರಡಲುಂಟು...

ಬಳಸು ಆರೋಗ್ಯಕೆಲ್ಲ ಮಾತ್ರೆ ಮದ್ದಿನಂತೆ ಊಟ
ಆಗ ಇರದು ನಿನಗಾವುದೇ ರೋಗಗಳ ಕಾಟ!

ಸಿಕ್ಕಿದ್ದೆಲ್ಲ ತಿಂದು ಹೊಟ್ಟೆ ಕೆಡಿಸಿಕೊಳ್ಳೊ ಬದಲು
ಅಲ್ಪ ತಿಂದು ನಿರೋಗಿಯಾಗಿ ಬದುಕುವುದೇ ಮೇಲು..

ನಾನು ನೀನು ನನ್ನ ನಿನ್ನ ಎಂಬುದೇನು ಇಲ್ಲ,
ಸರ್ವವನ್ನು ಕಾಯಲಿಕ್ಕೆ ಮೇಲೊಬ್ಬನಿರುವನಲ್ಲ!

ಏನೆ ತಿಂದು ಏನೆ ಕೊಟ್ಟು ಬೆಳೆದರೇನು ಫಲ
ಒಂದು ದಿನ ಬಿಟ್ಟು ಹೋಗಬೇಕು ನೆಲ!

ಆಸ್ತಿ -ಪಾಸ್ತಿ ಮೇಲು- ಕೀಳು ಪ್ರತಿಯೊಂದೂ ತೊರೆದು
ಸಾಗಬೇಕು ಜನರ ನಡುವೆ ಚಟ್ಟವನ್ನು ಹಿಡಿದು..

ಯಾತ್ರೆಯಿಹುದು ಭೂಮಿಯಿಂದ
ಕೈಲಾಸದ ಕಡೆಗೆ
ಸಾಗಲಿಹುದು ಬಂದಲ್ಲಿಂದ ದೇವನ ಕಾಲ ಕೆಳಗೆ..

ದಾನ-ಧರ್ಮ ನಮ್ಮ ಕಾಯ್ವ ಐಶ್ವರ್ಯದ ವಿಧಿಯು
ಮಾನ-ಪ್ರಾಣ ಬೇಕಾಗಿಹ ಧನ ಸಂಪತ್ತು ನಿಧಿಯು..

ಬ್ರಹ್ಮ ಬರೆದ ಹಾಗೆ ಬದುಕೊ
ನಟರಲ್ಲವೆ ನಾವು?
ಬರಲಾರೆದೆ ಪ್ರತಿ ಹೃದಯಕೂ ಒಂದು ದಿನ ಸಾವು ..

ಮೇಲೇನಿದೆ, ಕೆಳಗೇನಿದೆ ನೋಡಿದವ ಯಾರು?
ನಿನ್ನಂತೆಯೆ ನಾನಲ್ಲವೆ, ಯಾಕೆಮಗೆ ಬೇಜಾರು?

ಮತ್ಸರವು ನಮಗೇತಕೆ ನಮ್ಮಯ ದಿನ ನಾಲ್ಕು..
ಹಾರಾಡುತ ಬಾಳನ್ನು ಕಳೆದುದು ಅದು ಸಾಕು...
@ಪ್ರೇಮ್@

ಸೋಮವಾರ, ಡಿಸೆಂಬರ್ 17, 2018

649. ಭಾವ ಬಳ್ಳಿ ಬೆಳೆಯಲಿ

ಭಾವ ಬಳ್ಳಿ ಬೆಳೆಯಲಿ

ಕಣ್ಣ ನೀರು ಕರಗಲಿ
ಕಂದಕವು ತೊಲಗಲಿ
ಮನದ ದುಗುಡ ದೂರ ಹೋಗಿ
ಮನದ ಭಾವ ಬೆಳೆಯಲಿ..

ಕನಸು ನನಸಿಗೆ ಬರಲಿ
ವದನ ನಗೆಯ ಸ್ಫುರಿಸಲಿ
ಭೂಮಿತಾಯ ವೇದನೆಗೆ
ಜೀವ ಕಣ್ಣೀರು ಹರಿಸಲಿ..

ವಿನಯತೆಯು ಬೆಳಗಲಿ
ಶಾಂತಿ ಮಂತ್ರ ಮೊಳಗಲಿ
ವೀರ ಮನದ ಯೋಧರಿಗೆ
ಗೌರವಾರ್ಪಣೆ ಮೂಡಿ ಬರಲಿ..

ಆನಂದ ಭಾಷ್ಪ ಚಿಮ್ಮಲಿ
ಪ್ರೀತಿಯುದಕ ಹೊಮ್ಮಲಿ
ಹೃದಯಗಳು ಒಟ್ಟು ಸೇರಿ
ಮನವು ಶಾಂತಿ ಗಳಿಸಲಿ...
@ಪ್ರೇಮ್@

ಶನಿವಾರ, ಡಿಸೆಂಬರ್ 15, 2018

648. ಬಾಳು

ಶ್ವಾನ

ನಿತ್ಯ ನಿಯಮ ನೀತಿ ನಿಯತ್ತು ಬೇಕೆ?
ನೋಡಿರೊಂದು ನಾಯಿಮರಿಯ ಸಾಕಿ..
ನಿಜವ ನುಡಿವೆ ನೂರುಪಟ್ಟು, ಸಂಶಯ ಯಾಕೆ?
ನೋಡು ನೋಡುತ್ತಿರುವಂತೆ ಶ್ವಾನ ಬರುತಿರುವುದು ಜೋಕೆ!

ನೀಡಿದವಗೆ ನೆಮ್ಮದಿಯ ನೀಡದಿರದು ಪ್ರಾಣಿ
ನಾಡಿಮಿಡಿತ ಇರುವವರೆಗೆ ಮನುಜರೆಂಬ ವಾಣಿ!
ನಡುವೆ ಹೆಣವು ನೆನೆದ ಗುಣವ ಹೊರದ ಮೂರ್ಖ
ನೋವಿನಲ್ಲು ನಗುವ ದೇವದೂತ ಗೂರ್ಖ!

ನಗೆಗಡಲಲಿ ತೇಲಬೇಕು ನಗುವ ಬಾಳ ಬಾಳಬೇಕು
ನಲ್ಮೆಯ ಗುಣ ಬೆಳೆಸಿಕೊಂಡು ನಾಟ್ಯವಾಡೆ ಬದುಕಬೇಕು...
ನಾಳೆ ಚಿಂತೆ ನಮಗೇತಕೆ?ನಾಮ ಹಾಕಿ ಬದುಕಬೇಕೆ?

ನೋಡಿಕೊಳಲು ದೇವನಿಹನು ನ್ಯಾಯ ನೀತಿ ಧರ್ಮವಿರಲು..
ನಿಯತ ನೀರ ಬಳಸುವಂತೆ ನೋಟದಲ್ಲು ನೋವು ನಗಲಿ..

ನಂದಿಯಂತೆ ಪರರ ಹಿತವ ನೂರು ಜನಕೆ ಬಯಸಿ ಬರುವ
ನಾಗ ದೇವರಂತೆ ಬಂದು ನವ್ಯ ಪದದ ಗೂಡು ಕಟ್ಟಿ..

ನವೋದಯವ ನಡುವೆ ತಂದು  ಕಾಲ ಯಾವುದಾದರೇನು?
ಖುಷಿಯ ಬಾಳು ಬೆಳಗುತಿರಲಿಕಸುವು ಎದ್ದು ನಗುತಲಿರಲಿ..
@ಪ್ರೇಮ್@

ಶುಕ್ರವಾರ, ಡಿಸೆಂಬರ್ 14, 2018

647. ನಾನೇ ಉಳಿದೆ

ನಾನೇ ಕಾರಣ

ದುಡಿದಿದ್ದ ಇಡಲಿಲ್ಲ ಕೂಡಿ
ಆಗಿನ್ನೂ ಯೌವನದಲ್ಲಿದ್ದೆ ನೋಡಿ
ಸಾಕಿದೆನು ಮಕ್ಕಳ ಬೇಡಿ
ಕಸಿದುಕೊಂಡರೆಲ್ಲ ನನ್ನ ಕಾಡಿ..

ಈಗೆನಗೆ ಮುದಿ ವಯಸ್ಸು
ಮಕ್ಕಳಿಗೂ ಕಳೆಯಿತು ಹದಿವಯಸ್ಸು!
ಶಕ್ತಿಯಿಲ್ಲ ಕೈಕಾಲ ನರಗಳಲಿ
ಮಕ್ಕಳ ಸಮಯವೆಲ್ಲ ಮೊಬೈಲಲಿ..

ಸಾಕುವರೆಂಬ ಭರವಸೆ ನಮಗಿಲ್ಲ
ಯಾರು ಯಾರನ್ನೂ ಕಾಯುವ ಹಾಗಿಲ್ಲ
ಬಲವಿದ್ದಷ್ಟು ದಿನ ಬದುಕುವ ಛಲ
ರಟ್ಟೆಯೊಳಗಿಲ್ಲ ಕಸುವು ಅಗೆಯಲು ನೆಲ!

ಬದುಕ ಬವಣೆ ಸಾಕಾಗಿ ಹೋಯಿತು
ಮನ ದೇವನ ಸೇರಲು ಕಾತರಿಸಿತು
ಮಕ್ಕಳಿಗೆ ಹಿರಿಯರ ನುಡಿ ಬೇಡವಾಯಿತು
ನನ್ನ ಬಾಳು ಹೀಗೇ ಮತ್ತೆ ಒಂಟಿಯಾಯಿತು..
@ಪ್ರೇಮ್@

646. We are together

Missing in the life

Nearer the cute way..
Coming close by day..
Moments are precious
Sent together by us..

Each moment we are together
Physically mentally we gather
No questions of going far
My life's shining star..

Missing is the word so pain
Feel always you are mine
As the sunflower turns to sun
My heart's search has begun

Each time we will be nearer
Amazing feel still brighter
Yes no thanks are died
Only "we" is the word remind..

-@prem@

645. ಎಲ್ರೂ ಒಂದೇ

ಎಲ್ರೂ ಒಂದೇ..

ಅವ್ವಾ..ನಿನ್ನ ಹೊಟ್ಯೊಳಗ ಕಳ್ದ
ದಿನಗಳೇ ಚಂದಾ...
ತೇಲಾಡ್ತಾ ಓಲಾಡ್ತಾ..
ಸಿಕ್ದಂಗೆಲ್ಲಾ ಒದೀತಾ...
ಅಂಧಕಾರದ್ ಕೂಪ್ವಾದ್ರೂ..
ಅಲ್ಲೇ ಚೆನ್ನಾಗಿತ್ತಾ..

ಒಂಭತ್ ತಿಂಗ್ಲು ಆರಾಮಾಗೇ
ಕಳ್ದೋಯ್ತು ಜೀವ್ನಾ...
ತೊಂಬತ್ ವರ್ಷ ಬದ್ಕಿದ್ರೂ
ಸಿಗ್ವಲ್ದು ಆ ಪಾವ್ನಾ..
ನಿನ್ ಊಟ ನಂಗಿಟ್ಟು
ಕೊಟ್ಟೆ ನಂಗ್ ಜನನ...

ಹೊರಗ್ಬಂದು ನಾ ಕಂಡೆ
ಜಾತಿ ಮತ ಕ್ವಾಟೆ..
ಅವ ಹಿಂದು ಇವ ಮುಸ್ಲಿಂ..
ಕ್ರೈಸ್ತ, ಜೈನ, ಬೌದ್ಧ..
ಸಾರಿಹರು ಎಲ್ರೂನು..
ಪ್ರೀತಿಯದೇ ಮಂತ್ರ...

ಜನಕ್ಯಾಕೋ ಗೊತ್ತಾಗೋಲ್ಲ
ಪ್ರೀತಿಯೇ ಬಾಳಿನ್ ಮಂತ್ರ..
ಹಣ ಆಸ್ತಿ ಧನಕಾಗೆ
ಕಿತ್ತಾಡ್ಕೊಂಡ್ ಕುಂತ್ರಾ?
ಬುವಿಯಾಗೆ ಬದ್ಕೋರು
ಹೋರಾಟಕ್ ನಿಂತ್ರಾ..?

ನಂದೇನು ನಿಂದೇನು?
ಎಲ್ಲಾ ಮೇಲ್ನವ್ನ್ಂದೇ..
ಸಾಯೋ ಕಾಲಕ್ ಬರ್ಲಾರ್ದೂ
ನಾವ್ ಕೂಡಿಟ್ಟ ಕಂತೇ..
ಬಿಸಿಲಾದ್ರೂ ಮಳಿಯಾದ್ರೂ
ಬದ್ಕ್ ಮಾತ್ರ ಒಂದೇ..

ಹೆಸ್ರಿರ್ಲಿ ನೆಲದಾಗೆ..
ಗಾಂಧಿ ಬಹದ್ದೂರಂಗೆ..
ಧನ ಕನಕ ಶೋಕಿಗೆ..
ಬಾಳು ಬರಡಾದಂಗೆ..
ನಾನ್ಹೆಚ್ಚೋ ನೀನ್ಹೆಚ್ಚೋ
ತಲುಪೋ ಗುರಿಯೊಂದೇ..
@ಪ್ರೇಮ್@

ಗುರುವಾರ, ಡಿಸೆಂಬರ್ 13, 2018

644. ಸಿಧ್ಧನಾಗು ಗೆಳೆಯ

ಸಿದ್ಧನಾಗು ಗೆಳೆಯ

ನಿದ್ದೆ ಬಂದು ಕನಸಿನಲ್ಲಿ ನಾನು ಸುತ್ತುತ್ತಿದ್ದೆ,
ಸದ್ದೆ ಇಲ್ಲದಂತೆ ಹೋಗಿ ಜಾರಿ ಬಿದ್ದಿದ್ದೆ!
ಮುದ್ದೆ ತರುವ ನಾಗ ಬಂದು ನನ್ನ ನೋಡಿ!
ಬುದ್ಧಿಯುಲ್ಲ! ನಿಮ್ಮ ಮಗನ ಒಮ್ಮೆ ಬಂದು ನೋಡಿ!

ಎದ್ದೆನೆಂದು ಅಂದುಕೊಂಡು ಬರಲೆ ಇಲ್ಲ ಅಮ್ಮ!
ಒದ್ದು ಕರೆದುಕೊಂಡು ಬರಲು ಗಾಳಿಮಾತು ತಮ್ಮ!
ಹದ್ದು ಬಂದ ಹಾಗೆ ಬಂದ ದೇವ ನನ್ನ ಬಳಿಗೆ!
ಪೆದ್ದು, ಊಹಿಸುತ್ತ ಹೆದರಿಕೊಂಡ ಮನುಜ ಮಾಡಬಹುದು ಸುಲಿಗೆ!

ಗುದ್ದು ಕೊಡುವರೆಂದು ಬಗೆದೆ ಅಪ್ಪ ಅಲ್ಲಿ ಬಂದು,
ಸದ್ದೆ ಇಲ್ಲ ಯಾರದ್ದೂನು, ನನಗೆ ನಾನೇ ಸಿಂಧು!
ಮುದ್ದು ಮನಸ ಪ್ರೀತಿ ನನದಾಗಿ ಬರುವಳೇನೋ, ಕಾದೆ!
ರದ್ದಿಯಂತೆ ಮಾಡಿ ಬಾಳ ದೂರ ಓಡಿ ಹೋದೆ!

ಬುದ್ಧಿ ಇರಲಿ ಸದಾ ಕೈಲಿ ಬರಲಾರರು ಯಾರೂ..
ಬಿದ್ದ ನಮ್ಮ ಮೇಲಕೆಂದು ಎತ್ತಲಾರ ದೇವ್ರೂ..
ಸಿದ್ಧನಾಗು, ನಿನ್ನ ಬಾಳ ಬಂಡಿ ನೀನೆ ಎಳೆಯೆ ಜೋರು,
ಗುದ್ದಿ ,ಮುದ್ದಿನಿಂದ ಬರುವ ಕೈ ಹಿಡಿಯಲು ಬೆವರು...

ಇದ್ದುದೆಲ್ಲ ಕಳೆದುಕೊಂಡು ಬದುಕಲೇನು ಫಲ..
ಬಿದ್ದು ಹೋಗುವೆ ಒಂದು ದಿನ ಸಾಧಿಸು ನಿನ್ನ ಛಲ!
ಮದ್ದು ಮಾತ್ರೆ ತಿಂದು ಬೆಳೆವ ಜೀವವಿದು ಗೆಳೆಯ,
ನಿದ್ದೆಗಾಗಿ ಹೋಗೋ ಮೊದಲೆ ಬರಲೆಬೇಕು ವಿಜಯ!

@ಪ್ರೇಮ್@

643. ಮನುಜಾ

ಮನುಜಾ...

ಅಪಕಾರ ಮಾಡಿರುವೆ ಉಪಕಾರ ನೀಡಿದೆನಗೆ
ಅವ್ಯವಸ್ಥೆಗೆ ದೂಕಿರುವೆ ವ್ಯವಸ್ಥೆಯೊಳಗೆ ತಂದ ನನಗೆ..
ಅಪಹರಣ ಮಾಡಿರುವೆ ನನ್ನ ಸ್ವಚ್ಛ ಹಸಿರನು
ಅಜಗಜಾಂತರಕೀಡಾಗಿಸಿದೆ ನನ್ನೀ ಉಸಿರನು..

ಅಪರೂಪದ ಪಶುಪಕ್ಷಿಗಳ ಬದುಕಲು ಬಿಡದೆ,
ಅಹಾರದಲಿ ವಿಷ ಬೆರೆಸಿ ಬದುಕಲೂ ಕೊಡದೆ,
ಅರೆವಳಿಕೆಯಂದದಿ ಖಾಯಿಲೆಗಳ ತರಿಸಿ
ಅದರಿಂದ ನಿತ್ಯ ಕಣ್ಣೀರ ಹನಿಹನಿದು ಸುರಿಸಿ..

ಅಪಕಾರ ಒಳಿತಲ್ಲ ಅವಸರವು ನಿನಗೇಕೆ?
ಅವಸಾನ ಕೊನೆಗೆ ಹೋಗುವಗೆ ಧನ ಪೂರ ಬೇಕೆ?
ಅನವರತ ನೆನೆಯೆನ್ನ ಆರೋಗ್ಯವಾಗಿರುವೆ
ಅಗಣಿತ ಮನಗಳಿಗೆ ನೀ ನೆರಳಾಗಿ ಬಾಳುವೆ...

ಅಖಂಡ ಭೂಮಿಗೆ ಮಾನವನಾಗಿ ಅವತರಿಸಿರುವೆ
ಅಪರಾಧಿಯಾಗಿರದಿರೆ ಅಚ್ಚುಕಟ್ಟಾಗಿ ನೀ ಬಾಳುವೆ..
ಅಂಕೆಯಿಲ್ಲದ ಹಣ ಒಡವೆ ಅತಿಯಾಸೆಯೇಕೆ..
ಅರಸಾಗಿ ಹಸಿರ ಬೆಳೆಸುತ ಬದುಕಬಾರದೇಕೆ?
@ಪ್ರೇಮ್@

642. ನಾ ಬದುಕ ಬೇಕಿದೆ..

ನಾನು ಬದುಕಬೇಕಿದೆ

ಸತ್ತವ ಸಾಯಲಿ, ಮರವುರುಳಿ ಬೀಳಲಿ,
ನಿತ್ಯ ನರಕದಲಿ ಬಾಳುವ ಪಿಳ್ಳೆಗಳು ಸಾಯಲಿ..
ಕನಸುಗಳು ಸಾವಿರವಿಹವು ನನಸಾಗಿಸುವ ಛಲವಿದೆ,
ಆತ್ಮವಿಶ್ವಾಸವಿರದಿರೂ, ದುಡ್ಡಿದೆ, ನಾನು ಬದುಕ ಬೇಕಿದೆ...

ಅತಿ ಚಿಕ್ಕ ಪ್ರಾಣಿಯದು ಬದುಕಿಯೇನು ಫಲ..
ಮನುಜಗಲ್ಲವೆ ಇಳೆ ಸುಖಿಸಲಿಕ್ಕೇನು ಛಲ...
ನಿನ್ನಂತೆ ನಾನೆನುವರು..ಅದು ಹೇಗೆ ಸಾಧ್ಯವಿದೆ?
ಸಿರಿವಂತ ನಾನು, ಐಶಾರಾಮಿಯಾಗಿ ಬದುಕಬೇಕಿದೆ...

ನೀತಿ,ನಿಯಮ,ಒಲವು,ಪ್ರೀತಿ, ನಂಬಿಕೆ ಬರಿಯ ಮಾತುಗಳು..
ಬರೀ ಇದ ನಂಬಿ ನೀ ನಡೆದರೆ ಬೀಳುವವು ಬಾಳಲಿ ತೂತುಗಳು.
ಬಾಳು ಬೆಳಗಿ ಆನಂದಿಸಲು ನೋಟುಗಳು ಬೇಕಾಗಿದೆ..
ಜಾಗ ಬದಲಿಸಿ ,ನನ್ನ ತಡೆಯದಿರಿ, ನಾ ಬದುಕ ಬೇಕಿದೆ..

ನ್ಯಾಯ, ಧರ್ಮ, ಪಾಪ,ಪುಣ್ಯ ಕತೆ,ಕವನಗಳಿಗಷ್ಟೆ ಮೀಸಲು
ನಿಜ ಜೀವನದಿ ನೀನು ಸಿದ್ಧನಾಗಿರು ಸಿಕ್ಕಿದೆಡೆ ಬಾಚಲು..
ಕೈ ಚಾಚಲು ಹೋಗದಿರು, ನೀ ಗೌರವ ಪಡೆಯಲು ಸ್ವಲ್ಪ ಕೊಡುವುದಿದೆ..
ಸತ್ಯದ ಬಾಯಿ ಮುಚ್ಚಿ, ನ್ಯಾಯದ ಕಣ್ಣು ಕಟ್ಟಿ, ನಾ ಬದುಕಬೇಕಿದೆ..

ಹಣ ಧನ ಹೆಂಡವಲ್ಲದೆ ಇನ್ಯಾವುದು ಮಾಡೀತು ನಮ್ಮ ಕಾರ್ಯ?
ಭೂಮಿ ತಿರುಗುವುದ ನಿಂತರೆ ಬರುವನೆ ನಮ್ಮೆಡೆಗೆ ಸೂರ್ಯ?
ಇತರರ ನೋಡದಿರು, ದೃಷ್ಟಿ ಮೇಲಿರಬೇಕಿದೆ,
ಉನ್ನತ, ಉದಾತ್ತ  ನಾಯಕನಾಗಿ ನಾ ಬದುಕಬೇಕಿದೆ..
@ಪ್ರೇಮ್@