ಸೋಮವಾರ, ಜುಲೈ 27, 2020

1506. ಇದೆ ಇಲ್ಲಗಳ ನಡುವೆ

ಇದೆ ಇಲ್ಲಗಳ ನಡುವೆ

ರಸ್ತೆಯಲಿ ಜಾಗವಿದೆ
ಚಲಿಸಲು ಧೈರ್ಯವಿಲ್ಲ!
ಬಂಧುಗಳ ನೆನಪಾಗುತ್ತಿದೆ
ಹೋಗಿ ಬರಲಾಗುತ್ತಿಲ್ಲ!

ಅಡಿಗೆ ಮಾಡುವ ಮನಸ್ಸಿದೆ
ತಿನ್ನಲು ಬರುವವರಿಲ್ಲ!
ಸಭೆ ಮಾಡಿ ಮಾತನಾಡಬೇಕಿದೆ
ಮುಖ ನೋಡಲು ಆಗುತ್ತಿಲ್ಲ!

ನೋವಿಗೆ ಸ್ಪಂಧಿಸುವ ಮನವಿದೆ
ಹತ್ತಿರ ಹೋಗುವಂತಿಲ್ಲ!
ಪಕ್ಕದ ಮನೆಯವರೊಡನೆ ಹರಟೆ ಹೊಡೆಯಬೇಕಿದೆ
ಯಾರೂ ಬಾಗಿಲು ತೆಗೆಯುತ್ತಿಲ್ಲ!

ಜೀವ ಭಯ ಮನುಜನ ಕಾಡಿದೆ
ಹತ್ತಿರ ಬರುವ ಧೈರ್ಯವಿಲ್ಲ!
ಕೊರೋನಾ ಎಲ್ಲೆಲ್ಲು ಹರಡಿದೆ
ಯಾರ ಕಣ್ಣಿಗೂ ಕಾಣುತ್ತಿಲ್ಲ!

ಜ್ಯೋತಿಷಿಗಳ ಬಳಿ ಮಂತ್ರವಿದೆ
ಕೊರೋನ ಓಡಿಸುವ ತಂತ್ರವಿಲ್ಲ
ಆಯುರ್ವೇದ ಶಕ್ತಿ ಭಾರತದಲ್ಲಿದೆ
ಅಧಿಕೃತಗೊಳಿಸುವ ಸರಕಾರವಿಲ್ಲ

ಸರಕಾರದ ಹಣ ಪೋಲಾಗುತ್ತಿದೆ
ಬಡವರಿಗೆ ತಿನ್ನಲು ಊಟವಿಲ್ಲ
ಸಿರಿವಂತರು ಆರಾಮಾಗಿ ತಿರುಗಾಡುತಿಹರು
ಬಡವರಿಗೆ ಸಾಮಾನು ತರುವ ವ್ಯವಸ್ಥೆಯಿಲ್ಲ..

ಹೂವು ಹಣ್ಣು ತರಕಾರಿಗಳಿವೆ
ಕೊಳ್ಳುವ ಜನರಲಿ ಹಣವಿಲ್ಲ
ಮಹಡಿ ಮೇಲೆ ಬದುಕುತಿಹೆವು
ಕನಸುಗಳ ನನಸಿನ ಬೆಂಬಲವಿಲ್ಲ

ಮಾಸ್ಕ್ ,ಸ್ಯಾನಿಟೈಸರ್ ಬಳಸುತಿಹೆವು.
ಅದರಲೂ ಕೊಳಕು, ರಾಸಾಯನಿಕವಿದೆಯೆಂದು ಅರಿತಿಲ್ಲ!
ಸೊಗಸಾದ ಹಸಿರು ಕಣ್ಣ ಮುಂದಿದೆ
ಸುತ್ತಾಡಲು, ತಿರುಗಾಡಲು ಅನುಮತಿಯಿಲ್ಲ!

ಕೂಡಿ ಬಾಳುವ ಆಸೆಯಿಹುದು
ಹೆಚ್ಚು ಜನ ಕೂಡುವಂತಿಲ್ಲ
ಸಾಮಾಜಿಕ ಅಂತರ ಬೇಕಿಹುದು
ಅಂಗಡಿಗಳಲಿ ಪಾಲಿಸಲಾಗುತ್ತಿಲ್ಲ!

ಕೈ ಕುಲುಕುವ ಅಭ್ಯಾಸವಿಹುದು
ಎರಡು ಗಜಕ್ಕಿಂತ ಹತ್ತಿರ ಬರುವಂತಿಲ್ಲ.
ಪಾಸಿಟಿವ್ ಚಿಂತನೆಯಿರಬೇಕು
ಪಾಸಿಟಿವ್ ರಿಸಲ್ಟ್ ಬರುವಂತಿಲ್ಲ!

ಪ್ರೀತಿ ಹಂಚಿ ಬದುಕಬೇಕು
ಮನೆಯಿಂದ ಹೊರಗೆ ತೆರಳುವಂತಿಲ್ಲ
ಈಗ ಕೆಲಸ ಬೇಕಾಗಿದೆ
ಯಾರೂ ಬರಲು ಕರೆಯುತ್ತಿಲ್ಲ..

ಮಕ್ಕಳಿಗೆ ಶಾಲೆ, ಗೆಳೆಯರು ಬೇಕಾಗಿದೆ
ಹೊರಹೋಗಲು ಪೋಷಕರು ಬಿಡುತ್ತಿಲ್ಲ
ಮಾತು ಮೌನ ಒಂದಾಗಿದೆ
ಕೊರೋನಕ್ಕೆ ಇನ್ನೂ ಸುಸ್ತಾಗಿಲ್ಲ

ಜೆಸಿಬಿ ಕಾರ್ಯ ಸ್ಥಗಿತವಾಗಿದೆ
ಮಣ್ಣಿನ ಸವೆತ ನಿಲ್ಲುತ್ತಿಲ್ಲ
ಹಸಿರು ಗಿಡ ನೆಟ್ಟಾಗಿದೆ
ಗೊಬ್ಬರ ತರಲು ಹೋಗುವಂತಿಲ್ಲ!
ಕೊರೋನ ರೋಗ ಗುಣವಾಗುತ್ತದೆ
ಖಾಯಿಗೆ ಕಡಿಮೆಯಾಗಲು ಯಾವುದೇ ಮದ್ದಿಲ್ಲ

ದೇವರು ತನ್ನಾಟ ತೋರಿಸಿಯಾಗಿದೆ
ಮಾನವ ದ್ವೇಷ ಮರೆಯುತ್ತಿಲ್ಲ
ಪ್ರಕೃತಿ ತನ್ನನು ಸರಿದೂಗಿಸಿ ಕೊಳ್ಳುತ್ತಿದೆ
ನೀಚ ಮಾನವನಿಗೆ ಅರ್ಥವಾಗುತ್ತಿಲ್ಲ!
@ಪ್ರೇಮ್@
28.07.2020

ಕೃತಿಗಳ್ಳ ಸ್ನೇಹಿತರಿಲ್ಲವೆಂಬ ಆಶಯವಿದೆ
ಮತ್ತೆಲ್ಲೋ ಪ್ರಕಟಿಸಿದರೆ ಗೊತ್ತಾಗೋದಿಲ್ಲ😃😃

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ