ಕುದುರೆಮುಖ
ಸತ್ಯ ಘಟನೆ
2004ನೇ ಇಸವಿ ಮಾರ್ಚ್ ತಿಂಗಳ ಹತ್ತನೇ ತಾರೀಖು. ನಾನಾಗ ಸಿಇಟಿ ಬರೆದು ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಬೈಲು ಇಲ್ಲಿಗೆ ಸೇವೆಗೆ ಸೇರಿದೆ. ಮೈಸೂರಿನ ದೀಪಾನಗರದ ದೀಪಾಶಾಲೆಯಲ್ಲಿ ಕೆಲಸಮಾಡುತ್ತಿದ್ದ ನನಗೆ ಹಳ್ಳಿಯ ಶಾಲೆ, ಏನೋ, ಹೇಗೋ ಎಂಬ ಆತಂಕ ಒಂದೆಡೆಯಾದರೆ ಉಳಿಬೈಲು ಎಂಬ ಊರೆಲ್ಲಿದೆ ಎಂಬ ಮ್ಯಾಪ್ ಕೂಡಾ ನನ್ನ ಬಳಿ ಇರಲಿಲ್ಲ! ಬಂಟ್ವಾಳ ತಾಲೂಕು ಎಂದ ಮೇಲೆ ಮೊದಲು ಬಂಟ್ವಾಳಕ್ಕೆ ಹೋಗೋಣ ನಂತರ ಹುಡುಕಿದರಾಯ್ತು ಎಂದು ಕುದುರೆಮುಖದಿಂದ ನಾನೂ ಅಮ್ಮ ಹೊರಟು ಕಾರ್ಕಳ ತಲುಪಿದೆವು. ಅಲ್ಲಿಂದ ಮೂಡಬಿದಿರೆಗೆ ಬಂದೆವು. ತದನಂತರ ಬೇರೆ ಬಸ್ಸಿನಲ್ಲಿ ಬಂದು ಬಂಟ್ವಾಳದಲ್ಲಿ ಇಳಿದೆವು. ಬಿಇಓ ಕಛೇರಿ ಎಲ್ಲಿದೆಯೆಂದು ಕೇಳಿದರೆ ಯಾರಿಗೂ ಗೊತ್ತಿರಲಿಲ್ಲ. ಪುಣ್ಯಕ್ಕೆ ಸಿಕ್ಕ ಯಾರೋ ಒಬ್ಬರು ಶಿಕ್ಷಕರು ಅದು ಇಲ್ಲಿಲ್ಲ, ಬಿ.ಸಿ.ರೋಡಿಗೆ ಹೋಗಿ ಎಂದರು.
ತಕ್ಷಣ ರಿಕ್ಷಾ ಹತ್ತಿ ಬಿ. ಸಿ.ರೋಡ್ ತಲುಪಿದರೆ ಅಲ್ಲಿಂದಲೂ ಒಂದು ಕಿಲೋ ಮೀಟರ್ ದೂರವೇ ಹೋಗಬೇಕಾಯಿತು. ಪುನ: ಬಿ.ಸಿ ರೋಡಿಗೆ ಬಂದು ಉಳಿಬೈಲು ಎಂಬ ಊರಿನ ಬಸ್ಸಿಗಾಗಿ ಯಾರ ಬಳಿ ಕೇಳಿದರೂ ಗೊತ್ತಿಲ್ಲ ಎಂಬ ಉತ್ತರವೇ ಬಂತು. ಅಪರಿಚಿತ ಊರು, ಜನರಾರಿಗೂ ಗೊತ್ತಿಲ್ಲ, ಯಾರೋ ಹೇಳಿದರು ಕಕ್ಯಪದವು ರೂಟಲ್ಲಿದೆಯೆಂದು. ಸುಮಾರು ಎರಡು ಗಂಟೆಗಳ ಕಾಲ ಕಾದ ಬಳಿಕ 'ಉಳಿ' ಎಂಬ ಬೋರ್ಡ್ ಹೊತ್ತ ಕೆಎಸ್ಸಾರ್ಟಿಸಿ ಬಸ್ಸೊಂದು ಬಂತು. 'ಏನಾದರಾಗಲಿ ದೇವರೇ!' ಎಂದು ಆ ಬಸ್ಸಿಗೆ ಹತ್ತಿ ಕುಳಿತಾಯ್ತು. ಮತ್ತೊಂದು ಹದಿನೈದು ನಿಮಿಷದ ಬಳಿಕ ಬಸ್ಸು ಹೊರಟಿತು. ಕುದುರೆಮುಖದಲ್ಲಿ ಕೂಲ್ ಕೂಲಾಗಿದ್ದ ನಾವು ಆ ರಣ ಬಿಸಿಲಿಗೆ ಫ್ರಿಜ್ಜಿನಿಂದ ತೆಗೆದ ಐಸ್ ಕ್ರೀಮ್ ನಂತಾಗಿದ್ದೆವು. ಅಂತೂ ಇಂತೂ ಮಧ್ಯಾಹ್ನ ಒಂದು ಗಂಟೆಗೆ ನಾವು ಕಕ್ಯಪದವು ಎಂಬ ಊರು ತಲುಪಿದೆವು. ಕಂಡಕ್ಟರಿಗೆ 'ಉಳಿಬೈಲು ಎಂಬ ಊರಿಗೆ ಈ ಬಸ್ಸು ಹೋಗುವುದಿಲ್ಲವೇ?' ಎಂದಾಗ ಉತ್ತರ ಕರ್ನಾಟಕದ ಅವನು 'ನನಗಿಲ್ಲಿ ಯಾವ ಬೈಲೂ ತಿಳಿಯದು, ಈ ಬಸ್ಸು ಉಳಿಯವರೆಗೆ ಹೋಗುತ್ತದೆ, ಇಳಿದು ಯಾರನ್ನಾದರೂ ಕೇಳಿ' ಎಂದ. ಸರಿಯೆಂದು ಕೊನೆಯ ಸ್ಟಾಪಲ್ಲಿ ಇಳಿದೆವು. ಅಲ್ಲಿ ಕೇಳಿದಾಗ "ಉಳಿಬೈಲಿಗೆ ಬಸ್ಸಿಲ್ಲ, ರಿಕ್ಷಾದಲ್ಲಿ ಹೋಗಿ" ಎಂದರು. ಅರ್ಧ ಗಂಟೆ ಕಾದ ಬಳಿಕ ರಿಕ್ಷಾವೊಂದು ಬಂತು. ನೂರು ರೂಪಾಯಿ ಕೊಟ್ಟು ಉಳಿಬೈಲು ಶಾಲೆಯನ್ನು ತಲುಪುವಾಗ ಎಂಟು ಗಂಟೆಗಳ ಜರ್ನಿ ಮುಗಿದಿತ್ತು! ಬಿಸಿ ಊಟದ ಅಡಿಗೆಯವರು ಊಟ ಮುಗಿಸಿ ಪಾತ್ರೆ ತೊಳೆಯುತ್ತಿದ್ದರು!!
ಶಿಕ್ಷಕರೊಬ್ಬರು ನನ್ನನ್ನು ಎಲ್ಲಾ ತರಗತಿಗಳಿಗೆ ಕರೆದುಕೊಂಡು ಹೋದರು. "ಇವರು ಪ್ರೇಮಾ ಅಂತ, ನಿಮಗೆ ಬಂದ ಹೊಸ ಟೀಚರ್, ಕುದುರೆಮುಖದವರು" ಎಂದು ನನ್ನನ್ನು ಮಕ್ಕಳಿಗೆ ಪರಿಚಯಿಸಿದರು. ನಾಲ್ಕನೇ ತರಗತಿಯಲ್ಲೊಬ್ಬ ತುಂಟ, ಬುದ್ಧಿವಂತ ವಿದ್ಯಾರ್ಥಿಯಿದ್ದ. ನಿತಿನ್ ಅಂತ. (ಈಗ ಅದೇ ಊರಿನಲ್ಲಿ ಬ್ಯುಸಿನೆಸ್ ಮ್ಯಾನ್ ಅವನು! ) ಅವನು ಕೇಳಿದ, "ಸರ್ , ನೀವು ಹಾಗೇಕೆ ಹೇಳುವುದು ಹೊಸ ಮೇಡಂಗೆ, ಅವರ ಮುಖ ಚೆನ್ನಾಗಿ, ಸರಿಯಾಗಿಯೇ ಇದೆಯಲ್ಲ" ಎಂದು! ಅವನ ಆ ಮುಗ್ಧ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗುವ ಸರದಿ ನನ್ನದು! ಕುದುರೆಮುಖ ಎಂಬ ಊರಿದೆ ಎಂದು ಅವನಿಗೆ ಅರ್ಥ ಮಾಡಿಸುವಲ್ಲಿ ನನಗೆ ಸಾಕು ಸಾಕಾಗಿ ಹೋಗಿತ್ತು! ಅಂದೇ ನಾನು ಮತ್ತೆ ಕುದುರೆಮುಖಕ್ಕೆ ವಾಪಸ್ ಹೋಗಬೇಕಿತ್ತು!!!!
@ಪ್ರೇಮ್@
25.12 2020
🦄🐴🦄🐴🦄🐴🦄🐴
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ