ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 188
ಈ ಬದುಕು ನಿತ್ಯ ಹೋರಾಟ. ಮನೆಯ ಒಳಗೂ, ಮನೆಯ ಹೊರಗೂ, ಕಚೇರಿಗಳಲ್ಲಿಯೂ, ಹಾಗೆಯೇ ನಿತ್ಯ ಹೋಗುವ ಶಾಲೆ, ಕಾಲೇಜು, ಅಂಗಡಿಗಳು, ಒಟ್ಟಾಗುವ ಸಂಬಂಧಿಕರು , ಸ್ನೇಹಿತರ ಜೊತೆ, ಪಕ್ಕದ ಮನೆಯವರ ಜೊತೆಗೂ ನಿತ್ಯ ಹೋರಾಟ. ಅಷ್ಟೇ ಯಾಕೆ ತನ್ನ ಆತ್ಮ, ತನ್ನ ದೇಹದ ಅಂಗಾಂಗಗಳು, ತನ್ನ ಆಲೋಚನೆಗಳ ಜೊತೆಗೆ ಪ್ರತಿನಿತ್ಯ ಹೋರಾಟ. ಇದನ್ನೇ ಬದುಕು ಎಂದು ಕರೆಯುತ್ತಾರೆ. ಶ್ರೀಮಂತನಿಗೆ ಆರೋಗ್ಯದ ಸಮಸ್ಯೆ, ಬಡವನಿಗೆ ಹಣದ ಸಮಸ್ಯೆ, ಮಧ್ಯಮ ವರ್ಗದವನಿಗೆ ಬದುಕು ಸಾಗಿಸುವುದೇ ಸಮಸ್ಯೆ! ಹೀಗೆ ಸಮಸ್ಯೆಗಳಿಲ್ಲದ ಯಾವ ಬದುಕು ಕೂಡ ಇಲ್ಲ ಅಲ್ಲವೇ?
ಹುಟ್ಟಿನಿಂದ ಸಾಯುವವರೆಗೂ ಕೂಡ ಸಮಸ್ಯೆಗಳ ನಡುವೆಯೇ ಬಾಳು. " ಹೊಂದಾಣಿಕೆ" ಎಂಬ ಹಣೆಪಟ್ಟಿ ಕಟ್ಟಿಕೊಂಡು ಎಲ್ಲರ ಜೊತೆಗೂ ಒಂದಷ್ಟು, ಮತ್ತೊಂದಷ್ಟು ಒಂದಾಗಿ ಒಪ್ಪಿಕೊಂಡು ಬದುಕುವ ನಾವು ಅಕ್ಷರಶ: ತ್ಯಾಗಿಗಳು. ನಮ್ಮನ್ನು ಕೆಲವರು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವಂತಹ ಮೇಧಾವಿಗಳು. ಇವರಿಗೆ ಬದುಕಿನಲ್ಲಿ ತನ್ನತನ , ಹಾಗೆ ತಾನೇ ಮೇಲು ಎಂಬ ಅಹಂ ಕೂಡ ಇರುತ್ತದೆ. ಉಳಿದವರನ್ನು ತಮ್ಮ ಕೆಲಸದವರ ಹಾಗೆ ಪ್ರತಿನಿತ್ಯ ಕಾಣುತ್ತಾರೆ. ಯಾರೇ ಸಿಗಲಿ ಅವರನ್ನು ಯಾವುದೇ ಗೌರವ ಕೊಡದೆ ತಮ್ಮ ಮನೆಯ ಕೂಲಿಗಳ ಹಾಗೆ ಸತ್ಕರಿಸುವ ಗುಣ ಕೆಲವರದ್ದು. ತನ್ನಲ್ಲಿರುವ ದುಡ್ಡಿನ ಮದದಿಂದಾಗಿ ಎಲ್ಲರನ್ನೂ ತಮ್ಮ ಕೆಲಸಕ್ಕಾಗಿ ಬಿಟ್ಟಿಯಾಗಿ ಬಳಸಿಕೊಳ್ಳುತ್ತಾರೆ ಇನ್ನು ಹಲವರು. ತಾನು ಅಂದುಕೊಂಡವ ತನ್ನ ಕೆಲಸಕ್ಕಾಗಿ ಸಿಗದೇ ಇದ್ದರೆ ಅವನನ್ನು ಸಾಯಿಸಲಿಕ್ಕು ಹಿಂದೆ ಮುಂದೆ ನೋಡದ ಜನರು ಕೂಡಾ ಇರುತ್ತಾರೆ ಆದರೆ ಅವರ ಜೀವನದಲ್ಲೂ ಕೆಲವೊಂದು ಋಣಾತ್ಮಕ ಅಂಶಗಳಿರುತ್ತವೆ, ಸಿಗದ ಪ್ರೀತಿ, ಕಳೆದುಕೊಂಡ ತಾಯಿ, ತಂದೆಯ ಅನಾರೋಗ್ಯ, ಮಕ್ಕಳ ಅಗಲುವಿಕೆ, ಸಂತಸವೆಲ್ಲದ ಬದುಕು, ಬೇಕು ಎನಿಸಿದ್ದು ಸಿಗದೇ ಇರುವಾಗ ಆಗುವ ನೋವು , ಎಲ್ಲರೂ ತಮ್ಮನ್ನು ತೀರಾ ತುಚ್ಚ ದೃಷ್ಟಿಯಿಂದ ಕಾಣುವುದು ಇತ್ಯಾದಿ. ಆಗ ಅರಿವಿಗೆ ಬರುವ ನೋವಿನ ಅಂಶ, ನೋವು ಕೋಪವಾಗಿ ಮಡುಗಟ್ಟಿ ಇನ್ಯಾರದೋ ಮೇಲೆ ತೋರಿಸಿಕೊಂಡು ಕೂಗಾಡುವುದು, ಒದರಾಡುವುದು ಮಾಡುತ್ತಿರುತ್ತಾರೆ. ಇವೆಲ್ಲವೂ ಮಾನವನ ಬದುಕಿನ ವಿವಿಧ ಮುಖಗಳು.
ಅತಿ ಹೆಚ್ಚು ಜನ ತಮ್ಮ ಬದುಕಿನಲ್ಲಿ ಅವಿವಾಹಿತರಾಗಿ ಉಳಿಯಲು ಇದೇ ಕಾರಣ. ಹಾಗೆಯೇ ವಿವಾಹಿತರಾದವರು ವಿಚ್ಛೇದನ ಪಡೆಯಲು ಕೂಡ ಇಂತಹ ಕಾರಣಗಳು ಇರುತ್ತವೆ. ತನ್ನತನ ಬಿಟ್ಟು ಕೊಡದೆ ಇರುವ ಗುಣ, ಹಠ, ತಾನು ಮಾಡಿದ್ದೆ ಸರಿ ಎನ್ನುವ ಭಾವನೆ, ತಮ್ಮದೇ ವಾದ ಗೆಲ್ಲಬೇಕು ಎಂಬ ಪರಿ, ಪರರಿಗೆ ನೋವು ಕೊಡುವ ಸ್ಯಾಡಿಸ್ಟ್ ಗಳ ಜೊತೆಗಿನ ಕಷ್ಟದ ಬದುಕು, ಮನೆಯ ಹೊರಗೆ ತುಂಬಾ ಚೆನ್ನಾಗಿದ್ದು, ಮನೆಯ ಒಳಗೆ ತನ್ನ ಕುಟುಂಬವನ್ನು ದುಃಖದಲ್ಲಿ ತೋಯಿಸುವ, ನೋಯಿಸುವ, ಬೇಯಿಸುವ ಜನರ ಜೊತೆಗೆ ಸಾಕಷ್ಟು ಹೊಂದಾಣಿಕೆ ನಡೆಸಿಕೊಂಡು ಬದುಕುವ ಕೆಲಸ ಇದೆಯಲ್ಲ ಅದು ತುಂಬಾ ಕಷ್ಟ. ಅನುಭವಿಸಿದವರಿಗೇ ಗೊತ್ತು ಅಲ್ಲವೇ?
ಮನುಷ್ಯ ಮನುಷ್ಯನಾಗಿರಬೇಕು. ಅವನಿಗೆ 'ಮನುಷ್ಯತ್ವ' ಎಂಬ ಒಂದು ಭಾವ ಕೂಡ ಇರಬೇಕು. ಇದು ಇಲ್ಲದಂತಹ ಮನುಷ್ಯರು ನಮ್ಮೊಂದಿಗೆ ಹಲವಾರು ಜನರಿದ್ದಾರೆ . ಮನುಷ್ಯತ್ವ ಇರುವ ಮನುಷ್ಯರು ಮನುಷ್ಯತ್ವ ಇಲ್ಲದ ಮನುಷ್ಯರ ಜೊತೆಗೆ ಹೊಂದಿಕೊಂಡು ಬಾಳುವ ಕೆಲಸ ಕೂಡ ತುಂಬಾ ನೋವಿನ ಸಂಗತಿಯಾಗಿದೆ. ಮಾನವತೆ, ದಯೆ, ದಾನ, ಕರುಣೆ, ಪ್ರೀತಿ, ಅನುಕಂಪ, ಗೌರವ, ಕಾಳಜಿ , ಸಮಯ ಮೀಸಲು, ಮುದ್ದು, ನಲಿವು, ಸಹಕಾರ, ಸಹಾಯ, ಸಹಯೋಗ, ಸಹಕಾರ, ಸಹಬಾಳ್ವೆ, ಸಪೋರ್ಟ್ ಇವುಗಳನ್ನೆಲ್ಲ ನೀಡಿ ನಮ್ಮೊಂದಿಗೆ ಬದುಕುವವರು ತುಂಬಾ ಕಡಿಮೆ. ನಾವು ಅದನ್ನು ಕೊಟ್ಟರೂ ನಮಗೆ ತಿರುತಿರುಗಿ ನೋವನ್ನೇ ಕೊಡುವಾಗ ಅಂತವರ ಜೊತೆ ಜೀವನಪೂರ್ತಿ ಹೊಂದಾಣಿಕೆ ಮಾಡಿಕೊಂಡು ಬದುಕುವಂತಹ ಚಾಕಚಕ್ಯತೆ, ತಾಳ್ಮೆ, ತ್ಯಾಗ ಗುಣ ಎಲ್ಲರಿಗೂ ಇರುವುದಿಲ್ಲ.
ಕೆಲವೊಂದು ಸಲ ಕೆಲವೊಂದು ಜನರಿಗೆ ಎಲ್ಲಾ ಸಮಸ್ಯೆಗಳು ನನ್ನಿಂದಲೇ ಪ್ರಾರಂಭವಾಗುತ್ತಿದೆ, ನಾನು ಈ ಸಮಸ್ಯೆಗಳ ಮೂಲ, ನನ್ನ ಆಲೋಚನೆಗಳನ್ನು ನಾನು ಬದಲಾಯಿಸಿಕೊಂಡರೆ ಎಲ್ಲರಿಗೂ ನೆಮ್ಮದಿ ಸಿಗುತ್ತದೆ ಎನ್ನುವ ಒಂದು ಚಿಕ್ಕ ಅಂಶ ಒಳ್ಳೆಯದೇ. ಇಡೀ ಬದುಕಿನಲ್ಲಿ ಕುಟುಂಬ ಸಮೇತರಾಗಿ ಅವರು ನೋವನ್ನು ಅನುಭವಿಸುತ್ತಿರುತ್ತಾರೆ. ನಮ್ಮ ಒಂದು ಸಣ್ಣ ನಿರ್ಧಾರ ಕೂಡ ನಮ್ಮೊಂದಿಗೆ ಬಾಳುವವರಿಗೆ ಕಷ್ಟ ಕೊಡಬಾರದು. ಹಾಗೆಯೇ ಅವರ ಪ್ರತಿಯೊಂದು ಮಾತುಗಳು ಮತ್ತು ಕೃತಿಗಳು ಅವರ ಜೊತೆಗಿರುವ ಇತರರಿಗೆ ನೋವು ತರಬಾರದು. ಈ ಒಂದು ನಿಯಮವನ್ನು ಎಲ್ಲರೂ ರೂಪಿಸಿಕೊಂಡಿದ್ದೆ ಆದರೆ ಎಲ್ಲರ ಬದುಕು ಕೂಡ ನೆಮ್ಮದಿಯಿಂದ, ಸಂತಸದಿಂದ ಕೂಡಿರುತ್ತದೆ ಅಲ್ಲವೇ?
ಮೊದಲನೆಯದಾಗಿ ನಮ್ಮ ತಲೆಯಲ್ಲಿ ಇರುವಂತಹ ಹೆಡ್ ವೈಟನ್ನು ತೆಗೆದು ಹಾಕಬೇಕು. ಯಾಕೆಂದರೆ ನಾವಿಲ್ಲಿ ಬಂದು ಎಷ್ಟೇ ಸಾಧಿಸಿದರು ಕೂಡ, ಎಷ್ಟು ಕೋಟಿ ಹಣ ಮಾಡಿಟ್ಟರು ಕೂಡ, ಎಷ್ಟು ಕುಟುಂಬಗಳನ್ನು ಸಾಕಿದರು ಕೂಡ, ಎಷ್ಟು ಜನಕ್ಕೆ ತುತ್ತನ್ನು ಇತ್ತರೂ ಕೂಡ, ಜನ ನಾವು ಕೊಡಲಿ ಎಂದು ಕಾಯುವವರೆ ಹೊರತು ತಮಗೆ ಬೇಕಾದ ಕೆಲಸಗಳನ್ನು ತಾವೇ ಮಾಡಿಕೊಳ್ಳಲಾರರು. ಸರಕಾರದ ಉಚಿತ ಸವಲತ್ತುಗಳು ಕೂಡಾ ಹಾಗೆಯೇ. ದುರ್ಬಳಕೆ ಆಗಬಾರದು. ಸರಕಾರದಿಂದ ಹಲವು ಸವಲತ್ತುಗಳು ಸಿಗುತ್ತವೆ ಎಂದು ದುಡಿದ ಹಣವನ್ನು ಕುಡಿತಕ್ಕೆ ಬಳಸಿ ಕೊಳ್ಳುವುದು, ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಇರುವ ಬಿಪಿಎಲ್ ಪಡಿತರ ಚೀಟಿಯನ್ನು ಸಿರಿವಂತರು ಲಂಚ ಕೊಟ್ಟು ಮಾಡಿಸಿಕೊಳ್ಳುವುದು, ಯಾರದೋ ಮನೆಯ ಶೌಚಾಲಯ ತೋರಿಸಿ, ತನ್ನ ಮನೆಯ ಶೌಚಾಲಯ ಎಂದು ಹೊಸ ಶೌಚಾಲಯಕ್ಕೆ ಸರಕಾರದ ಹಣ ಪಡೆಯುವುದು, ದನದ ಕೊಟ್ಟಿಗೆ ನಿರ್ಮಾಣಕ್ಕೆ ಹಣ ಪಡೆದು ಮನೆಯಲ್ಲಿ ಒಂದು ಹೊಸ ಕೋಣೆ ನಿರ್ಮಿಸುವುದು, ಸುಳ್ಳು ಸಾಕ್ಷಿ ಒದಗಿಸಿ ಸರಕಾರದ ಹಣ ಪಡೆಯುವುದು ಇವೆಲ್ಲ ಮಾನವತೆಯ ಲಕ್ಷಣಗಳಲ್ಲ, ಅಲ್ಲವೇ? ಬಿಟ್ಟಿ ಕೊಡುತ್ತಾರೆ ಎಂದರೆ ಊಟಕ್ಕೂ ಹಲವಾರು ಸಾವಿರ ಜನ ಸೇರುತ್ತಾರೆ. ಅದೇ ಯಾರಿಗಾದರೂ ಸಹಾಯ ಬೇಕು ಎನ್ನುವ ಪ್ರಸಂಗ ಬಂದರೆ ಅಲ್ಲಿ ಒಂದಿಬ್ಬರು ಕೂಡ ಇರುವುದಿಲ್ಲ. ಇದು ಮಾನವತೆಯ ಲಕ್ಷಣವೇ?
ನಾವು ಯಾರಿಗೂ ಏನನ್ನು ಮಾಡಲು ಆಗದೆ ಇದ್ದರೂ ಪರವಾಗಿಲ್ಲ, ಪರರಿಗೂ, ನಮ್ಮವರಿಗೂ ಕೆಟ್ಟದು ಮಾಡದೇ ಇರೋಣ. ಕೆಟ್ಟದನ್ನು ಬಯಸದೆ ಇರೋಣ. ನಮ್ಮ ಹೊಟ್ಟೆಕಿಚ್ಚು ನಮ್ಮನ್ನೇ ಸುಡುತ್ತದೆ. ಅದು ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಜನರಿಗೆ ಬೇಸರ ತರುತ್ತದೆ, ಸಂಬಂಧಗಳು ಬಿರುಕು ಬಿಡಲು ಕಾರಣವಾಗುತ್ತದೆ. ಇದರ ಜೊತೆ ಮಾನವ ಗುಣದಲ್ಲಿ ನಂಬಿಕೆ ಇರಬೇಕು. ನಂಬಿಕೆ ಇರದ ಸಂಬಂಧ ಒಡೆದ ಹಾಲಿನಂತೆ. ಅದು ಎಂದಿಗೂ ಸರಿ ಆಗದು.
ಮಾನವರ ಮಾನವತೆ ಕಡಿಮೆಯಾಗಿ, ಪ್ರಾಣಿಗಳಿಗಿಂತ ಕಡೆಯಾಗಿ, ಪಶುತ್ವವೂ ಹೋಗಿ, ಮೃಗತ್ವ ಬಂದಿದೆ. ಕೆಲವು ಮೃಗಗಳೂ ಮನುಷ್ಯನಷ್ಟು ಕೆಟ್ಟದಾಗಿ ವರ್ತಿಸಲಾರವು. ಅದರ ಜೊತೆ ವಿಪರೀತ ಕುಡಿತ, ಜೂಜು, ಹುಚ್ಚಾಟ, ಕುಣಿತಗಳು ತಮ್ಮ ಜೀವ ಹಾಗೂ ಜೀವನ ಎರಡರ ಜೊತೆಗೆ ತಮ್ಮೊಂದಿಗೆ ಬದುಕುವ ಇತರರ ಬಾಳನ್ನು ಸಹ ಹಾಳು ಮಾಡಿ ನೆಮ್ಮದಿಯೇ ಇಲ್ಲದ ಹಾಗೆ ಮಾಡುತ್ತವೆ. ಮುಂದಿನ ಜನಾಂಗ ಹಾಗೂ ಈಗಿರುವ ಜನರು, ಯಾವುದೂ ಬೇಡ, ಒಂದಷ್ಟು ಮಾನವತೆ ಕಲಿತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಜೊತೆ ಬಾಳುವ ಇತರರಿಗೆ, ಗೆಳೆಯರಿಗೆ, ಕುಟುಂಬದ ಸದಸ್ಯರಿಗೆ, ಬಂಧುಗಳಿಗೆ ಅಷ್ಟೇ ಸಾಕು. ನೀವೇನಂತೀರಿ?
@ಹನಿಬಿಂದು@
10.06.2023