ಮಂಗಳವಾರ, ಜೂನ್ 3, 2025

ಕಲಿತು ಕಲಿಸಬೇಕಿದೆ ನಾವು


ಕಲಿತು ಕಲಿಸಬೇಕಿದೆ ನಾವು


ಬದುಕೆಂದರೆ ಒಂದು ದಿನದ ಆಟವಲ್ಲ. ಅದು ಆಟಗಳ ಜೊತೆಗೆ ಗುದ್ದಾಟವೂ ಇರುವ ಏಳು-ಬೀಳುಗಳ ಸರಮಾಲೆ.ಆದರೆ ಇಲ್ಲಿ ನೆಮ್ಮದಿ ಎಂಬುದು ಬಡವ ಶ್ರೀಮಂತ ಯಾರಿಗೂ ಇಲ್ಲ. ಬಡವ ಹಣದಲ್ಲಿ ಬಡವನಾದರೆ, ಹಣದಲ್ಲಿ ಶ್ರೀಮಂತ ಎನಿಸಿಕೊಂಡವ ಗುಣದಲ್ಲಿ ಬಡವ. ಅಷ್ಟೇ ಅಲ್ಲ, ನೆಮ್ಮದಿಯಲ್ಲಿ ಎಲ್ಲರೂ ಬಡವರೇ. ಶ್ರೀರಾಮ,ಶ್ರೀಕೃಷ್ಣ,ಏಸುಕ್ರಿಸ್ತ,ಶಿವ,ಭರತ ಚಕ್ರವರ್ತಿ,ಗಣಪತಿ ಎಲ್ಲರ ಅವತಾರಗಳನ್ನು ಒಮ್ಮೆ ಅವಲೋಕಿಸಿದರೆ ತಿಳಿಯುತ್ತದೆ. ಮಹಿಳೆಗೂ ಇದು ತಪ್ಪಿದ್ದಲ್ಲ.ಸೀತೆ,ದ್ರೌಪದಿ,ಕುಂತಿ,ಊರ್ಮಿಳಾ,ಮಂಡೋದರಿ,ಕೈಕೇಯಿ ಎಲ್ಲರೂ ರಾಣಿಯರೇ ಆಗಿದ್ದರೂ ಕೂಡಾ ಬದುಕ ರುಚಿ ಸಂತಸದಿ ಸವಿಯಲು ಅವರಿಗೆ ಸಿಕ್ಕಿತ್ತೇ? ಬದುಕು ಯಾರೋ ಕಟ್ಟಿಕೊಟ್ಟ ಹಣದ ಗಂಟಲ್ಲ, ಬದಲಾಗಿ ಯಾರೋ ಮಾಡಿಟ್ಟ ಹೊಲ. ಅಲ್ಲಿ ಸಮತಟ್ಟು ಮಾಡಲು ಕಷ್ಟವಿದೆ. ಅಗೆದು,ಉಳುಮೆ ಮಾಡಿ,ಮಣ್ಣು ಹದಮಾಡಿ,ಉತ್ತು,ಬಿತ್ತಿ,ಕಳೆ ತೆಗೆದು, ನಾಟಿ ಮಾಡಿ,ಹಗಲು ರಾತ್ರಿ ದುಡಿದು ಬೆವರು ಸುರಿಸಿದರೆ ಮಾತ್ರ ನೆಮ್ಮದಿಯ ಬೆಳೆ ಸಿಕ್ಕೀತು.ಅದಕ್ಕೆ ಬೆಲೆಯೂ ಬಂದೀತು.ಯಾರೋ ಮಾಡಿಟ್ಟ ಹೊಲಕ್ಕೆ ಲಗ್ಗೆ ಇಡಲು ಸಾಧ್ಯವಿಲ್ಲ. ಇಟ್ಟರೂ,ಮುಂದೆಯೂ ಅದೇ ರೀತಿ ಕಾಳಜಿ, ಕೆಲಸ ಜಾಗೃತಿ ಬೇಕು.

ಭೂಮಿಗೆ ಬಂದ ಪ್ರತಿಯೊಬ್ಬನೂ ಬದುಕಿನಲ್ಲಿ ನೆಮ್ಮದಿಯನ್ನೇ ಹುಡುಕುತ್ತಾನೆ.ಅದಕ್ಕಾಗಿಯೇ ಹಲವಾರು ಕೆಲಸ ಕಾರ್ಯಗಳು ಕೂಡ.ನೆಮ್ಮದಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೊಂದು ಖಾಯಿಲೆ,ಮಗದೊಂದು ಸಾವಿನ ನೋವು,ಸಂಕಟ.ಹೀಗೆ ಕಷ್ಟ ಸುಖಗಳು ಒಂದರ ಹಿಂದೆ ಬೇವು ಬೆಲ್ಲದ ತೆರದಿ ನುಗ್ಗುತ್ತಾ ಬರುತ್ತವೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುಂದೆ ಹೋಗುವವ ಜಾಣ.ಎಲ್ಲರೂ ಕಲಿಕೆಯಲ್ಲಿ ಎಷ್ಟೇ ಜಾಣರಾದರೂ ಬದುಕಿನ ಶಾಲೆಯಲ್ಲಿ ದಡ್ಡರೇ.ಅಲ್ಲಿ ಜಾಣ ಅನ್ನಿಸಿಕೊಳ್ಳುವವ ಕೋಟಿಗೊಬ್ಬ.ಅವನನ್ನು ಎಲ್ಲರೂ ಇಷ್ಟ ಪಟ್ಟು ಮೇಲಿಡುತ್ತಾರೆ.ದೇವರ ಹಾಗೆ ಪೂಜಿಸುತ್ತಾರೆ.ಆದರೆ ಒಂದು ದಿನ ಅವನನ್ನೂ ಕೂಡಾ ಜನ ಕೆಳಗೆ ದೂಕಿ ಅವನ ಮೇಲೆ ನಡೆಯುತ್ತಾರೆ ಎಂಬುದು ಕಟು ಸತ್ಯ. ಅಲ್ಲೂ ಹೋರಾಟವೇ.ಉತ್ತಮವಾಗಿ ದುಡಿದು,ಮಕ್ಕಳಿಗೆ ಬೇಕಾದಷ್ಟು ಆಸ್ತಿ ಮಾಡಿ ಇಟ್ಟ ಸಿರಿವಂತ ಮಕ್ಕಳು ಹಿರಿ ವಯಸ್ಸಿನಲ್ಲಿ ರೋಗಿ ಆದ ಪೋಷಕರನ್ನು ವಿಷ ಹಾಕಿ ಸಾಯಿಸಲು ಕೂಡಾ ಹೆದರುವುದಿಲ್ಲ. ಅಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅಂತಹ ಪೈಶಾಚಿಕ ಬುದ್ಧಿಯುಳ್ಳವರು ನಾವು ಕೂಡಾ ಆಗಿದ್ದೇವೆ, ನಮ್ಮ ಮುಂದಿನ ಜನಾಂಗವನ್ನು ಶಿಸ್ತು, ಸಂಯಮಗಳ ಬದುಕಿನ ಪಾಠ ಕಲಿಸದೇ ಕೇವಲ ಓದು, ಬರಹ, ಹಣದ ದಾಹ ಕಲಿಸಿ, ವೈದ್ಯ, ಇಂಜಿನಿಯರ್ ಮಾಡಿ ಹಣದ ರಾಕ್ಷಸರನ್ನಾಗಿ ಬೆಳೆಸಿ ಬಿಟ್ಟಿದ್ದೇವೆ.ನಾವು ಹೇಗೆ ನಮ್ಮ ಮಕ್ಕಳು ನಮ್ಮ ಹಾಗೆ ಬಡವರಾಗಿ ಬದುಕಬಾರದು, ಅವರಿಗಾಗಿ ನಾವು ಏನಾದರೂ ಮಾಡಿ ಇಟ್ಟಿರಬೇಕು ಎಂದು ಆಸೆ ಪಟ್ಟು, ವ್ಯಾಪಾರದ ಮೊರೆ ಹೋಗಿದ್ದೆವೋ ಹಾಗೆ ನಮ್ಮ ಮಕ್ಕಳು ಬದುಕನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ.

ಬದುಕು ಎಂದರೆ ಎಲ್ಲವನ್ನೂ ಬದಿಗೊತ್ತಿ, ಕೆಲಸ ಮಾಡಿ ಹಣ ಮಾಡುವುದು,ಮಕ್ಕಳನ್ನು ಓದಿಸುವುದು,ಶಾಪಿಂಗ್,ಬೇಕಾದ್ದು ಕೊಳ್ಳುವುದು ಎಂಬ ಪಾಠ ನಮ್ಮನ್ನು,ಹಿರಿಯರನ್ನು ನೋಡಿ ಆ ಮಗು ಕಲಿತ ಪಾಠ.ಅದಕ್ಕೆ ಮಕ್ಕಳನ್ನು ಬೆಳೆಸುವಾಗ ಪ್ರತಿ ಪೋಷಕರು ನೀತಿ,ಪುರಾಣ,ಅಜ್ಜಿ ಕತೆಗಳು ಇವುಗಳ ಮೂಲಕ ನೀತಿ ಕಲಿಸಬೇಕಲ್ಲವೇ?ಇಂದಿನ ಕಾಲದಲ್ಲಿ ಈ ಪಾಠ ಹೇಳಬೇಕಾದ ಅಜ್ಜಿಯರು ಒಂದು ಕಡೆ ಹೊರಗೆ ದುಡಿತ, ಸುಸ್ತು,ಇಲ್ಲದೆ ಹೋದರೆ ಟಿವಿ,ಮೊಬೈಲ್ಗಳಲ್ಲಿ ತಾವೇ ಮುಳುಗಿ ಹೋಗಿರುವುದು ವಿಪರ್ಯಾಸ.ಹಿರಿಯರು ಫ್ರೀ ಇದ್ದರೆ ಮಕ್ಕಳೇ ಮೊಬೈಲ್,ಲ್ಯಾಪ್ಟಾಪ್,ನೋಟ್ ಪ್ಯಾಡ್ಗಳಲ್ಲಿ,ಗೇಮ್ಸ್ನಲ್ಲಿ ಮುಳುಗಿ ಹೋಗಿರುತ್ತಾರೆ.ಎಷ್ಟು ಎಂದರೆ ಹತ್ತನೇ ತರಗತಿ ಪರೀಕ್ಷೆಯ ಭಾಷಾ ಉತ್ತರ ಪತ್ರಿಕೆಯ ಹದಿನೈದು ಪುಟಗಳಲ್ಲಿಯು ಒಬ್ಬ ವಿದ್ಯಾರ್ಥಿ 'ಮೋಯೆ ಮೋಯೆ' ಎಂಬ ಪದವನ್ನು ಕನಿಷ್ಠ 500 ಬಾರಿ ಬರೆದಿಟ್ಟಿದ್ದಾನೆ ಎಂದರೆ ಅವನ ಭಂಡ ಧೈರ್ಯ, ಅವನಿಗೆ ತರಗತಿಯಲ್ಲಿ ಸಿಕ್ಕ ಪಾಠವನ್ನು ಅವನು ಕೇರ್ಲೆಸ್ ಮಾಡಿದ್ದು,ಪೋಷಕರ ಮಾತನ್ನು ಕೇಳದೆ ಇದ್ದುದು,ತನ್ನ ಮುಂದಿನ ಬದುಕಿನ ಬಗ್ಗೆ ಕನಸುಗಳು,ಶ್ರಮ, ಗುರಿ, ಸತ್ಯ,ನ್ಯಾಯ-ನಿಷ್ಠೆಯಿಲ್ಲದೆ ಇರುವುದು ಕಾಣುತ್ತಿಲ್ಲವೇ? ಬರೆಯಲು ಬಾರದೆ ಇದ್ದವನು ಅದು ಹೇಗೋ ಒಂದಷ್ಟು ಪ್ರಶ್ನೆಗಳಿಗೆ ಆದರೂ ಕಷ್ಟಪಟ್ಟು ಅಲ್ಪ ಸ್ವಲ್ಪ ಸರಿ ಉತ್ತರ ಬರೆದಾನು.ಇದು ಏನು ಮಾಡಿದರೂ ಕೇಳದ ಮರ್ಕಟ ಬುದ್ಧಿಯಲ್ಲವೇ? ಈ ಮೊಂಡುತನ ಸರಿಪಡಿಸಲು ಸಾಧ್ಯ ಇಲ್ಲವೇ? ಹೇಗೆ?

ಒಂದೇ ಉತ್ತರ. ನಮಗೂ, ನಮ್ಮ ಮಕ್ಕಳಿಗೂ ಇಂದು ತಾಳ್ಮೆ ಇಲ್ಲವಾಗಿದೆ.ಬಸ್ಸ್ಟಾಪ್ನಲ್ಲಿ ನಿಂತು ಬಸ್ ಕಾಯುವ ವ್ಯವಧಾನ,ಬಸ್ಸ್ಟಾಂಡಿನವರೆಗೆ ನಡೆದುಕೊಂಡು ಹೋಗುವ ತಾಳ್ಮೆ,ಧೈರ್ಯ,ಶಕ್ತಿ,ಬಸ್ಸಿನ ಒಳಗೆ ಒಬ್ಬರಿಗೆ ಮತ್ತೊಬ್ಬರ ಜೊತೆ ಹೊಂದಾಣಿಕೆ ಇವೆಲ್ಲ ಕಲಿಕೆಗೆ ಅವಕಾಶ ಮಾಡಿ ಕೊಡುತ್ತವೆ.ಇವನ್ನೆಲ್ಲ ನಾವು ಕಷ್ಟ ಎನ್ನದೆ ನಾವೇ ಕಾಲೇಜಿನವರೆಗೆ, ಶಾಲೆಯವರೆಗೆ ಪಿಕ್ಅಪ್ ಡ್ರಾಪ್, ಇಲ್ಲವೇ ಸ್ಕೂಲ್ ವ್ಯಾನು, ಬಸ್ಸು,ಕಾರು,ರಿಕ್ಷಾಗಳ ನೀಡಿದ ಕಾರಣವಿದು. ಯಾವುದರ ಪರಿವೆಯೂ ಆ ಮಗುವಿಗೆ ಇಲ್ಲ. ಒಂದು ಬಸ್ ಹೋದರೆ ತಾಳ್ಮೆಯಿಂದ ಇನ್ನೊಂದು ಬಸ್ ಬರುವವರೆಗೆ ಕಾಯಬೇಕು,ಅಥವಾ ಬೇರೆ ರೂಟ್ನಲ್ಲಿ ಹೋಗುವ ಬಸ್ ಹಿಡಿದು ಅರ್ಧದಲ್ಲಿ ಮೊದಲು ಹೋದ ಬಸ್ ಅನ್ನು ಕ್ಯಾಚ್ ಮಾಡಬಹುದು ಮೊದಲಾದ ಲಾಜಿಕ್ ಆಲೋಚನೆಗಳನ್ನು ಅವರ ಮನಸ್ಸಿನ ಒಳಗೆ ಬರಲು ನಾವು ಅವಕಾಶ ಕೊಟ್ಟಿದ್ದರೆ ತಾನೇ?

ನಮ್ಮ ಮಕ್ಕಳನ್ನು ನಮ್ಮೊಂದಿಗೆ ಇಟ್ಟು, ನಮ್ಮ ಆಚಾರ ಕಲಿಸಿ ಬೆಳೆಸುವ ಕ್ರಮವೂ ಈಗಿಲ್ಲ, ಅದೆಲ್ಲೋ ದೂರದ ರೆಸಿಡೆನ್ಶಿಯಲ್ ಸ್ಕೂಲ್. ಕಾರಣ ವಿದ್ಯೆ ಚೆನ್ನಾಗಿ ಕೊಡಬೇಕು. ಹೇಗೆ?ಮುಂದೆ ಒಳ್ಳೆ ಕಾಲೇಜಿನಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಸೀಟು ಸಿಗುವ ಹಾಗೆ ಹೈ ಫೈ ಆಂಗ್ಲ ಮಾಧ್ಯಮದ,ಸಿಬಿಎಸ್ಈ,ಐಸಿಐಸಿಈ, ಅದಕ್ಕಿಂತಲೂ ಮೇಲಿನ ಇಂಟರ್ ನ್ಯಾಶನಲ್ ಸ್ಕೂಲ್ ಸೆಲೆಕ್ಟ್ ಮಾಡಿ ಓದಿಸಬೇಕು. ಕೆಲಸ ಸಿಕ್ಕಿದರೆ ಆಯ್ತು. ಪೋಷಕರು ಖುಷಿ,ಕೈ ತುಂಬಾ ಸಂಬಳ. ವರ್ಷಕ್ಕೆ ಇಂತಿಷ್ಟು ಲಕ್ಷಗಳ ಅಗ್ರೀಮೆಂಟು.ಜೀವನ ನಿರ್ವಹಣೆ ಗೊತ್ತಿಲ್ಲ, ಉತ್ತಮ ಗುಣಗಳನ್ನು ಕಲಿತೇ ಇಲ್ಲ. ಬರೀ ಸಿಈಟಿಗೆ ರೆಡಿ ಮಾಡಿದ್ದು ಬಿಟ್ಟರೆ ಗುಣಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ.ಹಾಗಾಗಿಯೇ ಇಂದಿನ ಮೆಡಿಕಲ್, ಇಂಜಿನಿಯರಿಂಗ್, ಎಂಬಿಎ ಮೊದಲಾದ ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಡ್ರಗ್ ಅಡಿಕ್ಟ್ಸ್!!!ಕಾರಣ? ಸಿಗದ ಪ್ರೀತಿ!!uಸಿಗದ ನೆಮ್ಮದಿ ಒಂದೇ!ಸಮಯ ಕಳೆಯಲು ಇಲ್ಲದ ಉತ್ತಮ ಹವ್ಯಾಸಗಳು, ಗೊತ್ತಿಲ್ಲದ ನೀತಿ ಪಾಠಗಳು!ಕಲಿಕೆ ಕೂಡಾ ಈಗ ವ್ಯಾಪಾರ. ಹವ್ಯಾಸಕ್ಕಾಗಿ ಹಾಡು, ನೃತ್ಯ, ಯಕ್ಷಗಾನ, ಚಿತ್ರಕಲೆ ಯಾವುದನ್ನು ಕಲಿಯಬೇಕು ಅಂದುಕೊಂಡರೂ ಎಲ್ಲಾ ಕ್ಲಾಸ್ಗಳು. ಒಂದಷ್ಟು ಎಕ್ಸ್ಟ್ರಾ ಸಮಯ, ಹಣ ಇಷ್ಟೇ. ಹಣವಿದ್ದರೆ ಹೊಸ ಕಲಿಕೆ ಇಂದು.ಬಡವ ಎಲ್ಲದರಲ್ಲೂ ಹಿಂದೆ ಎನ್ನುವಂತಾಗಿದೆ ಈ ಕಾಲ.

ಮಕ್ಕಳಿoದು ಹಿರಿಯರ ಬಳಿ ಮಾತನಾಡಲು ಕಲಿತಿಲ್ಲ,ಅವರಿಗೆ ಹಿರಿಯರನ್ನು ಸಂಬೋಧಿಸಲು ತಿಳಿದಿಲ್ಲ. ಅಜ್ಜ ಅಜ್ಜಿಯರ ಜೊತೆ ಮನಬಿಚ್ಚಿ ಮಾತನಾಡಲು ಮಾತೃ ಭಾಷೆಯನ್ನು ನಾವುಗಳು ಕಳಿಸಿ ಕೊಟ್ಟಿದ್ದರೆ ತಾನೇ?ಎಡ-ಬಲ ಎಂದರೇನು ಅವರಿಗೆ ತಿಳಿಯಬೇಕಾದರೆ ಹೊರದೇಶದ ಭಾಷೆ ಬೇಕು. ಇನ್ನು ಈ ನೆಲದ ಸಂಸ್ಕೃತಿ ಹೇಗೆ ತಾನೇ ತಿಳಿಯಬಲ್ಲರು! ಅಷ್ಟೇ ಅಲ್ಲ,ಭಾಷಾ ಕಲಿಕೆ ಒಂದೆಡೆಗಿರಲಿ, ಜನರ ಸ್ನೇಹದ ಬದಲು ಕಂಪ್ಯೂಟರ್, ಮೊಬೈಲ್ ಗೀಳು ಹೆಚ್ಚಿದೆ.ಇನ್ನು ಕೆಲವರು ಇಂಜಿನಿಯರ್ಗಳಾಗಿ ಮನೆಯಲ್ಲೇ ಕುಳಿತು ಕೆಲಸ.ಅವರ ನಿದ್ದೆಗೂ ಕೆಲಸಕ್ಕೂ ಸಮಯದ ಪರಿವೆಯೇ ಇಲ್ಲ.ಕೈ ತುಂಬಾ ಸಂಬಳ.ಆದರೇನು? ಮನೆಗೆ ಯಾರು ಬಂದರು, ಯಾರು ಹೋದರು, ಬಂಧುಗಳಾರು-ಇವನ್ನೆಲ್ಲ ನೋಡಲು ಸಮಯ ಇಲ್ಲವೇ ಇಲ್ಲ. ಇನ್ನು ಹತ್ತಿರದ ಮನೆಗೆ ಹೋಗಿ ಅಲ್ಲಿನ ಜನರೊಡನೆ ಮಾತುಕತೆ,ಮಕ್ಕಳೊಂದಿಗೆ ಆಟ ಇವೆಲ್ಲಾ ಈಗ ಹಳೇ ಚಾಳಿ ಬಿಡಿ.

ಅಲ್ಲಲ್ಲಿ ಒಂದೆರಡು ಉತ್ತಮ ಗುಣದ ಶಿಕ್ಷಕರು,ವೈದ್ಯರು,ಇತರ ಜನರು,ಬಂಧುಗಳ ಮೇಲೆ ಪ್ರೀತಿ ಇರುವ ಹಿರಿ ಕಿರಿಯರು,ಸಹಾಯ ಪಡೆದುದನ್ನು ಮರೆಯದ ಉದಾತ್ತ ಮನಸುಗಳು,ಸಮಾಜ ಸೇವೆಯ ತುಡಿತವಿರುವ ಹೃದಯಗಳು,ಪರರಿಗೆ ನೋವನ್ನು ಕೊಡಲು ಬಯಸದೆ ಬದುಕುವ ಹೆಮ್ಮೆಯ ಜೀವಿಗಳು, ತಾನು ಇನ್ನು ಸ್ವಲ್ಪ ಕಾಲ ಮಾತ್ರ ಬದುಕುವುದು ಎಂದು ತಿಳಿದಿದ್ದರೂ ನಗುತ್ತಾ, ಇತರರಿಗೆ ಧೈರ್ಯ ತುಂಬುವ ಜೀವಗಳು ಭೂಮಿಯ ಮೇಲೆ ಇನ್ನೂ ಇರುವರು. ಇವರಿಂದಲೇ ಮಳೆ,ಬೆಳೆ ಸರಿಯಾಗಿ ಆಗುತ್ತಾ ಇರುವುದೋ ಏನೋ?

ಅಷ್ಟೇ ಅಲ್ಲದೆ ಕುಡಿತದ,ಅಮಲು ಪದಾರ್ಥಗಳ ಮತ್ತಿನಲ್ಲಿ ಮತ್ತೂ ಹಣ ಕೇಳಿ,ಕೊಡದಿರುವ ಪೋಷಕರನ್ನು ಕಡಿದು ಕೊಂದು,ಅವರಲ್ಲಿದ್ದ ಹಣವನ್ನೆಲ್ಲ ನುಂಗಿ ನೀರು ಕುಡಿದು,ತದನಂತರ ತನ್ನ ಬದುಕನ್ನು ಹಾಳುಮಾಡಿಕೊಂಡು ಕೊನೆಗೊಳಿಸುವ ಮಕ್ಕಳೂ ಇದ್ದಾರೆ.ಕುಡಿತದ ಮತ್ತಿನಲ್ಲಿ ಹೆಣ್ಣನ್ನು ಕೊಲೆ ಮಾಡಿ ಸುಖಿಸುವ ಮಾನವ ರಾಕ್ಷಸರು, ಮಕ್ಕಳನ್ನು ದೈವಕ್ಕೆ ಬಲಿ ಕೊಡುವಂತಹ ಮೂಢ ನಂಬಿಕೆಗಳಿನ್ನೂ ನಮ್ಮ ಸಮಾಜದಲ್ಲಿ ಇದ್ದೇ ಇವೆ. ಬಾಲ್ಯವಿವಾಹ,ಕೆಲವೊಂದು ಕೆಟ್ಟ ಆಚರಣೆಗಳು.ಗಂಡು ಮಕ್ಕಳಿಗೆ ಶ್ರೇಷ್ಠ ಸ್ಥಾನ ಮಾನ, ಹೆಣ್ಣು ಅಡುಗೆ ಮನೆಗೆ ಸೀಮಿತ,ಇವೇ ಮುಂತಾದ ಸಾಮಾಜಿಕ ಧೋರಣೆಗಳು ಎಲ್ಲಾ ಕಡೆ ಸರಿ ಸಮನಾಗಿ ಬದುಕಲೂ ಬಿಡಲಾರವು. ತಾನೇ ಮೇಲೆಂದು ಸಮಾಜದಲ್ಲಿ ಬೀಗುವ ಗಂಡು. ಅವರನ್ನೇ ನಂಬಿರುವ ಮಹಿಳೆಯರು ಈಗಲೂ ಇದ್ದಾರೆ. ಅವರಿಗೆ ಒಂಟಿಯಾಗಿ ಬದುಕಲು ಆಗದು. ಜೊತೆ ಕಲಿತು,ಕಲೆತು ಅಭ್ಯಾಸ.ನಾವು ಎಚ್ಚೆತ್ತು ನಡೆದಾಗ ಮಾತ್ರ ಪ್ರತಿಯೊಬ್ಬರ ಬದುಕು ಸರಿಯಾದೀತು. ನಮ್ಮ ಮುಂದಿನ ಜನಾಂಗವನ್ನು ಕೂಡಾ ನಾವೇ ಸರಿಪಡಿಸಿ ಶುದ್ಧಗೊಳಿಸಿ ಇಡಬೇಕಿದೆ. ಇಲ್ಲದೆ ಹೋದರೆ ಗಾಳಿ, ನೀರು, ಶಬ್ಧ, ಮಣ್ಣು ಮಲಿನ ಆದ ಹಾಗೆ ಮನಸ್ಸುಗಳು ಕೂಡಾ ಮಲಿನ ಆಗುವುದರಲ್ಲಿ ಎರಡು ಮಾತಿಲ್ಲ. ನೀವೇನಂತೀರಿ?

@ಹನಿಬಿಂದು@

17.04.2024