ಜವಾಬ್ದಾರಿ....
ಒಂದು ಹಳ್ಳಿಯ ತುದಿಯಲ್ಲಿ ಚಿಕ್ಕ ಮನೆ ಒಂದಿತ್ತು. ಆ ಮನೆಯಲ್ಲಿ ಕಮಲಾ ಎಂಬ ವೃದ್ಧೆ ವಾಸಿಸುತ್ತಿದ್ದಳು. ವಯಸ್ಸು ಅರವತ್ತನ್ನು ದಾಟಿದ್ದರೂ ಕಮಲಾ ಚುರುಕುತನ ಕಳೆದುಕೊಂಡಿರಲಿಲ್ಲ. ಆಕೆಯ ಜೊತೆ ಇದ್ದದ್ದು ಹತ್ತು ವರ್ಷದ ಮೊಮ್ಮಗಳು ಶಶಿಕಲಾ. ಕಣ್ಣಿನಲ್ಲಿ ಕುತೂಹಲ, ಮನಸ್ಸಿನಲ್ಲಿ ಕನಸುಗಳಿಂದ ತುಂಬಿದ ಹುಡುಗಿ.ಅಜ್ಜಿ ಸಾಕಿದ ಮೊಮ್ಮಗಳು!
ಶಶಿಕಲಾಳ ತಾಯಿ ವಿಮಲಾ. ಕಮಲೆಯ ಏಕೈಕ ಮಗಳು. ವಿಮಲಾ ಯೌವನದಲ್ಲೇ ಗಂಡನನ್ನು ಕಳೆದುಕೊಂಡು, ಬದುಕಿನ ಹೊರೆ ಹೊತ್ತು ನಗರಕ್ಕೆ ತೆರಳಿದ್ದಳು. “ಹೊಸ ಬದುಕು ಕಟ್ಟಿಕೊಳ್ಳಬೇಕು” ಎಂಬ ಆಶಯದಲ್ಲಿ ಕೆಲಸ ಹುಡುಕಿಕೊಂಡಿದ್ದಳು. ನಗರ ಜೀವನದಲ್ಲಿ ಶೋಕಿ ವ್ಯಕ್ತಿ ನವೀನ ದಾಸ ವಿಮಲೆಯ ಬದುಕಿಗೆ ಕಾಲಿಟ್ಟ. ಅವನ ಸಿಹಿ ಮಾತುಗಳಿಗೆ ಮತ್ತು ಹಣಕ್ಕಾಗಿ ಮೋಹಗೊಂಡು ವಿಮಲಾ ತನ್ನ ಮಗಳು ಶಶಿಕಲಾಳ ಕಡೆ ಗಮನ ಕೊಡದೆ ಹೋದಳು. ಅಜ್ಜಿಯ ಮನೆಗೆ ಬಿಟ್ಟು ಬಂದಿದ್ದ ಮಗಳನ್ನು ತಿಂಗಳಿಗೆ ಒಂದು ಬಾರಿ ಹಣ ಕೊಟ್ಟು, ವರ್ಷಕ್ಕೆ ಎರಡು ಬಟ್ಟೆ ತಂದು ಕೊಟ್ಟು ತನ್ನ ಕರ್ತವ್ಯ ಮುಗಿಸಿದಂತಾಗುತ್ತಿದ್ದಳು.
ಕಮಲೆಗೆ ಶಶಿಕಲಾ ಜೀವಕ್ಕಿಂತ ಪ್ರಿಯಳು. ಆದರೆ ಆ ಪ್ರೀತಿ ಮಮತೆಯ ರೂಪದಲ್ಲಿಗಿಂತ ಶಿಸ್ತು ಮತ್ತು ಕೆಲಸದ ರೂಪದಲ್ಲೇ ತೋರುತ್ತಿತ್ತು. “ಏ ಶಶಿಕಲೆ, ನೀರು ತಂದುಕೊಡು, ಹಸುಗಳಿಗೆ ಹುಲ್ಲು ಹಾಕು! ಮನೆಯಲ್ಲಿ ಕೊಂಚ ಅಚ್ಚು ಮಾಡು!” ಎಂದು ದಿನವೂ ಕಮಲಾ ಶಶಿಕಲಾಳನ್ನು ಕರೆದಾಡುತ್ತಿದ್ದಳು. ಶಶಿಕಲಾ ಮೌನವಾಗಿ ಕೆಲಸ ಮಾಡುತ್ತಿದ್ದರೂ ಅಜ್ಜಿಯ ಪ್ರೀತಿಯ ಅಂತರಾಳವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಕಮಲೆಯ ಬೈಗುಳದೊಳಗೆ ಮಮತೆ ತುಂಬಿಕೊಂಡಿತ್ತು — “ಈ ಹುಡುಗಿಯನ್ನು ನಾನು ಸಾಕದಿದ್ದರೆ ಯಾರು ನೋಡಿಕೊಳ್ಳುತ್ತಾರೆ?” ಎಂಬ ಕಳಕಳಿ ಕೂಡಾ ಇತ್ತಾದರೂ ಕೆಲಸವೇನೂ ಕಡಿಮೆ ಮಾಡಿಸಿಕೊಳ್ಳುತ್ತಿರಲಿಲ್ಲ. ಅಪ್ಪ ಇಲ್ಲದ ಅನಾಥ ಹೆಣ್ಣು ಮಗು, ಮುಂದಿನ ಖರ್ಚುಗಳು ತನ್ನ ಮೇಲೆ ಬರುವವೊ ಎಂಬ ತಾತ್ಸಾರವೋ ಎನ್ನುವಂತೆ ಶಶಿಕಲಾಳನ್ನು ಸಾಕುತ್ತಿದ್ದಳು.
ವರ್ಷಗಳು ಕಳೆಯುತ್ತಾ ಹೋದವು. ಶಶಿಕಲಾ ಹದಿನಾರು ವರ್ಷದಾಗುತ್ತಿದ್ದಂತೆ ಕಮಲೆಯ ಆರೋಗ್ಯ ಕುಸಿಯತೊಡಗಿತು. ಒಂದು ಸಂಜೆ ಶಶಿಕಲಾ ಅಜ್ಜಿಗೆ ಕಾಫಿ ಕೊಟ್ಟಾಗ, ಕಮಲಾ ನಿಧಾನವಾಗಿ ಹೇಳಿದಳು — “ನಿನ್ನ ತಾಯಿ ನನ್ನ ಮಾತು ಕೇಳಿ ಮನೆಗೆ ಬಂದ್ರೆ ನನಗೆ ಚೇತರಿಸಿಕೊಳ್ಳುವ ವಿಶ್ವಾಸ ಬರುತ್ತದೆ, ಆದರೆ ಆಕೆ ಲೋಕದ ಮೋಹದಲ್ಲಿ ಮುಳುಗಿದ್ದಾಳೆ.” ಅಷ್ಟರಲ್ಲಿ ವಿಮಲಾಳ ಬದುಕಿನಲ್ಲಿ ಬದಲಾವಣೆ ಬಂತು. ಶೋಕಿ ಹೊತ್ತ ಆಕೆಯ ಪ್ರಿಯಕರ ಮತ್ತೊಬ್ಬ ಹುಡುಗಿಯ ಜೊತೆ ತೆರಳಿಬಿಟ್ಟ. ಆಘಾತಗೊಂಡ ವಿಮಲಾ ತನ್ನ ತಪ್ಪು ಅರಿತುಕೊಂಡಳು. “ನಾನು ತಾಯಿಯಾಗಿ ನನ್ನ ಕರ್ತವ್ಯ ಮರೆಯುತ್ತಿದ್ದೆ,” ಎಂದುಕೊಂಡು ತಕ್ಷಣ ಹಳ್ಳಿಗೆ ಬಂದು ತಾಯಿಯ ಮನೆ ತಲುಪಿದಳು. ಅಲ್ಲಿ ಕಮಲಾ ಹಾಸಿಗೆಯಲ್ಲೇ ಅಸ್ವಸ್ಥಳಾಗಿದ್ದಳು. ಮಗಳನ್ನು ನೋಡಿ ಕಣ್ಣೀರು ಹಾಕುತ್ತಾ “ಈಗ ಬುದ್ದಿ ಬಂತೇ ನಿನಗೆ?” ಎಂದು ನಗುತ್ತಾ ಆ ಮೊಮ್ಮಗಳ ಕಡೆ ನೋಡುತ್ತಾಳೆ. ಆ ದಿನದಿಂದ ವಿಮಲಾ ತನ್ನ ಮಗಳ ಬದುಕನ್ನು ಬದಲಿಸುವ ನಿರ್ಧಾರ ಕೈಗೊಂಡಳು.
ಹಳ್ಳಿಯ ಸರಕಾರಿ ಶಾಲೆಯಲ್ಲಿ ಓಡುತ್ತಿದ್ದ ತನ್ನ ಮಗಳನ್ನು ವಿಮಲಾ ನಗರಕ್ಕೆ ಕರೆತಂದು ಅಲ್ಲಿಯ ಉತ್ತಮ ಶಾಲೆಗೆ ಸೇರಿಸಿದಳು. ಹಳ್ಳಿಯ ಶಾಲೆಯಿಂದ ಆರಂಭವಾದ ಪಾಠದ ಹಾದಿ ನಗರಕ್ಕೆ ತಲುಪಿತು. ಶಶಿಕಲಾ ಹಗಲು ಓದಿನಲ್ಲಿ, ರಾತ್ರಿ ತಾಯಿಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಳು. ಕಷ್ಟದ ಜೀವನವನ್ನು ಎದುರಿಸುತ್ತಾ, ವರ್ಷಗಳ ಪರಿಶ್ರಮದ ಫಲವಾಗಿ ಶಿಕ್ಷಕಿಯಾಗಿ ನೇಮಕವಾಯಿತು. ಆ ದಿನ ತಾಯಿಯ ಕಣ್ಣಲ್ಲಿ ತೃಪ್ತಿಯ ಕಣ್ಣೀರು ಕಾಣಿಸಿಕೊಂಡಿತ್ತು.
ಆದರೆ ಕಮಲಾ ಆ ಸಂತೋಷವನ್ನು ನೋಡಲಿಲ್ಲ. ಶಶಿಕಲಾ ಕಾಲೇಜು ಮುಗಿಸುತ್ತಿದ್ದ ಸಮಯದಲ್ಲಿ ಕಮಲಾ ಈ ಲೋಕ ತ್ಯಜಿಸಿದಳು. ಅಜ್ಜಿಯ ಅಂತ್ಯಕ್ರಿಯೆಯ ದಿನ ಶಶಿಕಲಾ ನಿಂತು ಕಣ್ಣೀರಿನಿಂದ ಹೇಳಿದಳು — “ಅಜ್ಜಿ, ನಿನ್ನ ಕಠಿಣ ಪ್ರೀತಿಯೇ ನನಗೆ ಬಲ ಕೊಟ್ಟಿತು.ಇನ್ಯಾರು ನನಗೆ?" ಎಂದು ಅಳುತ್ತಿದ್ದಳು.
ಶಶಿಕಲಾಳ ಮದುವೆಯನ್ನು ವಿಮಲಾ ಸರಳ ರೀತಿಯಲ್ಲಿ ಮಾಡಿಸಿದಳು. ಮಗಳ ಬಾಳು ಹಾದಿಯ ಮೇಲೆ ನಿಂತು ತಾನು ಶಾಂತಿಯನ್ನು ಹುಡುಕತೊಡಗಿದಳು. ಕೆಲವು ವರ್ಷಗಳ ನಂತರ ವಿಮಲಾ ಮತ್ತೊಬ್ಬ ವಿನೋದ್ ಎನ್ನುವವನನ್ನು ಮದುವೆಯಾಗಿ ಹೊಸ ಬದುಕು ಪ್ರಾರಂಭಿಸಿದಳು. ಈ ಬಾರಿ ಅದು ಪ್ರೇಮಕ್ಕಿಂತಲೂ ಶಾಂತಿಯ ಬದುಕು. ವಿನೋದ್ ಕೂಡಾ ಬೇರೆ ಹೆಣ್ಣಿನಿಂದ ಮೋಸಕ್ಕೆ ಒಳಗಾಗಿದ್ದವನು. ವಿಮಲಾಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದನು.
ಶಶಿಕಲಾ ತನ್ನ ತಾಯಿಯ ಹೊಸ ಬದುಕನ್ನು ನೋಡಿ ನಗುತ್ತಿದ್ದಳು. ಮನೆಯಲ್ಲಿ ಕಮಲೆಯ ನೆನಪು, ವಿಮಲೆಯ ಪಾಠ ಮತ್ತು ತನ್ನ ಪರಿಶ್ರಮ ಈ ಮೂರು ತಲೆಮಾರಿನ ಕಥೆ ಒಂದು ವೃತ್ತದಂತೆ ಪೂರ್ಣಗೊಂಡಿತು.
ಆ ಮನೆಯಲ್ಲಿ ಇಂದು ಹಳೆಯ ಗೋಡೆಗಳ ನಡುವೆಯೂ ಒಂದು ಮಾತು ಕೇಳಿಸುತ್ತಿದೆ —
“ಪ್ರೀತಿ ಬಾಯಲ್ಲಿ ಹೇಳುವದಲ್ಲ, ಬದುಕಿನಲ್ಲಿ ತೋರಿಸುವುದು ಮುಖ್ಯ.ಇದನ್ನರಿತು ಬಾಳು."
@ಹನಿಬಿಂದು@
14.10.2025
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ