ಶುಕ್ರವಾರ, ಜನವರಿ 1, 2021

ನೀನೇನು

ನೀನೇನು?

ತಿನ್ನುವ ಅನ್ನವದು ರೈತನ ಕೊಡುಗೆ
ಉಡುವ ಬಟ್ಟೆ ನೇಕಾರನಿಂದಾದ ಉಡುಗೆ
ಕೆಲಸ ಮಾಡಲದು ಶಕ್ತಿ ದೇಹ ಮನದ ಬೆಸುಗೆ
ದಿನ ನಿತ್ಯ ಸಾವಿನೆಡೆಗೆ ನಮ್ಮ ನಡಿಗೆ
ಹೋಗಲುಂಟು ಕೊನೆಗೊಮ್ಮೆ ದೇವನ ಪಾದದಡಿಗೆ..

ಒಂದೇ ಕೈಯಲ್ಲಿ ಚಪ್ಪಾಳೆ ಸಾಧ್ಯವೇ
ಸಂಘ ಜೀವಿಗೆ ಒಗ್ಗಟ್ಟು ಬೇಡವೇ?
ತಮ್ಮ ತಮ್ಮೊಳಗೆ ಜಗಳವದು ತರವೇ?
ಹಂಚಿ ತಿಂದೊಡೆ ಉಣಿಸು ರುಚಿಯಲ್ಲವೇ?
ಕೂಡಿ ಬಾಳಲು ಬದುಕು ಹಿತವಲ್ಲವೇ?

ಕೂಡಿ ಬಾಳಿದರೆ ಉಂಟಾಗ ಸ್ವರ್ಗ ಸುಖವದು
ಜತೆಗೂಡಿ ಒಂದಾದಾಗ ಹೆಚ್ಚಾಗುವುದು ಶಕ್ತಿಯದು
ನಾವೆಲ್ಲ ಒಂದಾಗಿರಲು ಪರ ಶಕ್ತಿ ದಣಿವುದು
ನಾನೇನು ನೀನೇನು ಎನವ ಜೀವ ಮಣಿವುದು..
ನಾವೆಲ್ಲ ಒಂದೆನುತ ಹೋರಾಡಲು ಗೆಲುವದು..

ಒಗ್ಗಟ್ಟಿನಲ್ಲಿಹುದು ಸಾಂಘಿಕ ಶಕ್ತಿಯದು
ಬಗ್ಗಿದವನಿಗೆ ಗುದ್ದು ಹೆಚ್ಚು ನೇರವಾಗಿ ನಿಲ್ಲುವುದು
ಕುಗ್ಗಿ ಬಾಳದಿರು ಜಗದಲಿ, ಮೋಸ ಕಳ್ಳತನ ಬಿಡುವುದು
ಮೊಗ್ಗಿನಂದದಿ ಅರಳಿ ಪರಿಮಳವ ಬೀರುವುದು
ಹಿರಿಯ ತಲೆಗಳಿಗೆಂದೂ ಗೌರವವ ನೀಡುವುದು..

ಮನೆಯಲ್ಲು ಕಛೇರಿಯಲೂ ಒಗ್ಗಟ್ಟಾಗಿ ಬಾಳಿ ನೋಡು
ಪ್ರೀತಿಯನು ಸಕಲರಿಗೆ ಸರಿಯಾಗಿ ನೀಡು
ಯಾರೂ ತುಂಡರಿಸರು ನಿಮ್ಮ ಸರಳ ಜಾಡು
ಸಕಲ ಮಾನವರನು ಒಂದಾಗಿಸುವ ಕಾರ್ಯ ಮಾಡು
ಬದುಕಾಗುವುದು ಆಗ ಸುಂದರವಾದ ಬೀಡು..
@ಪ್ರೇಮ್@
21.12.2020
🤝🤝🤝🤝🤝🤝

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ