ಬುಧವಾರ, ಮಾರ್ಚ್ 31, 2021

ಶಾಯಾರಿಗಳು

ಶಾಯರಿಗಳು

1.  ಸಿಕ್ಕಿತೊಂದು ಹೊಸದಾದ ನೌಕರಿ
ಹೊಸ ಪ್ಯಾಂಟು ಶರ್ಟು ತಗೊಂಡೆ ರೀ
ಸೂಟ್ ಕೇಸ್ ಹಿಡಿದು ಗತ್ತಿನಿಂದ ಹೊರಟೆ ಕಣ್ರೀ
ಅಲ್ಲಿ ಮಾಡಬೇಕಿದ್ದುದು ಅಜ್ಜಿಯ ಚಾಕ್ರೀ..

2.  ಅರ್ಜಿ ಹಾಕಿದೆ ಬೇಕಂತ ಹೊಸ ನೌಕರಿ
ಕರೆಬಂತು - ' ಬೆಂಗಳೂರಿಗೆ ಬರ್ರಿ '
ಹೋಗಲಿಕ್ಕೆ ಒಂದು ಪೈಸೆ ದುಡ್ಡೇ ಇಲ್ಲರೀ
ಹಾಗಾಗಿ ಹೊಸ ನೌಕರಿ ಬಿಟ್ ಬಿಟ್ಟೆ ಕಣ್ರೀ..
@ಪ್ರೇಮ್@
01.04.2021

ಮಂಗಳವಾರ, ಮಾರ್ಚ್ 30, 2021

ಹಾಸ್ಯ ಕವನ

ಅಡಿಗೆ ಭಟ್ಟರ ಕಷ್ಟ

ಫೂ ಫೂ ಒಲೆಯನು ಊದುತ ಕೆಟ್ಟೆ
ಕಣ್ಣಲಿ ನೀರು ಪಾತ್ರೆಯ ತಳ ಸುಟ್ಟೆ
ಕೆಲಸವು ಸರಿಯಾಗಿ ಸಿಗದೆ ನಾ ಕೆಟ್ಟೆ
ಈರುಳ್ಳಿ ಜೊತೆಗಿನ ಜೀವನ ಮುಡಿಪಿಟ್ಟೆ!


ಅನ್ನ ಹುಳಿಯೂ ಸಾಂಬಾರ್ ಪಲ್ಯ
ಊಟದ ಕೊನೆಗೆ ಬೇಕದು ವೀಳ್ಯ
ತಿಂದು ತೇಗುವನು ಉಂಡರು  ಮಲ್ಯ
ಕಂದ ನೀನೇನಾದರು ನಮ್ಮ ಕಷ್ಟ ಬಲ್ಯ?

ಹೋಳಿಗೆ ಲಾಡು ಪಾಯಸದೂಟ
ಹೋದವ ಬಂದವ ಎಲ್ಲರ ನೋಟ!
ದುಡ್ಡನ್ನು ಕೊಡದೆ ಬಹಳವೇ ಕಾಟ!
ಆಸ್ವಾದಿಸಲಾಗದು ಹುಡುಗಿಯರ ಮೈಮಾಟ!

ಬೆಂದು ಹೋಗುತಲಿರುವೆ ಸೆಕೆಯ ಕಾಲದಲಿ
ಯಾರಲಿ ತೋಡಲಿ ನನ್ನಯ ಅಳಲಿಲ್ಲಿ
ಕಾರ್ಯಕ್ರಮದಲ್ಲಿ ಓಡಾಡುವ ಜನರಿಲ್ಲಿ
ಹೊಟ್ಟೆ ಪಾಡಿನ ಕಾರ್ಯ ನನಗಿಲ್ಲಿ
ಎಂದು ಸಿಗುವಳು ನನಗೆನ್ನ ಪ್ರೀತಿಯ ಸಿಲ್ಲಿ?
@ಪ್ರೇಮ್@
31.03.2021

ಭಾನುವಾರ, ಮಾರ್ಚ್ 28, 2021

ಬೆರೆಯಲಿ ಸರ್ವ ಸಮವಾಗಿ


*ಶೀರ್ಷಿಕೆ:  ಬೆರೆಯಲಿ ಸರ್ವ ಸಮಾನವಾಗಿ*

ಹೋಳಿಯ ದಿನವದು ಬರಾಲದು ಸಡಗರ
ಕೋಳಿಯ ಹಾಗೆ ಹಾರುವ ಆತುರ
ಬಣ್ಣವ ಹಿಡಿಯಿತು ನಡೆಯುತ ಮುಂದಿನ
ಹಾದಿಗೆ ಹೆಜ್ಜೆಯ ಹಾಕುವ ಅನುದಿನ..

ಸರ್ವ ಬಣ್ಣವು ಸೇರಲಿ ಒಂದೆಡೆ
ಪರ್ವ ಕಾಲದಿ ಕೂಡಲಿ ಮನದೆಡೇ
ಗರ್ವ ಮರೆತು ಒಂದಾಗಲಿ ಹಲವೆಡೆ
ದರ್ಪ ತೋರದೆ ಉಳಿಯಲಿ ಸರ್ವೆಡೆ

ಕರ್ಮ ಕಾರ್ಯವ ಧರ್ಮದಿ ಮಾಡಲಿ
ಹರ್ಷ ತರುತಲಿ ನೆಮ್ಮದಿ ನೀಡಲಿ
ನಿರ್ವಹಿಸುವ ಕೆಲಸವ ಚೆನ್ನಾಗಿ ಮಾಡಲಿ
ಧರ್ಮದ ನಡುವಿನ ದ್ವೇಷವ ದೂಡಲಿ

ಕೆಂಪು ಹಸಿರು ಹಳದಿ ಹಸಿರೆನುತ
ಕಪ್ಪು ಬಿಳಿಯ ಗುಲಾಬಿ ನೀಲಿಯತ್ತ
ಹಲವು ಜಾತಿ ಧರ್ಮವು ಸೇರುತ
ಹಚ್ಚ ಹಸಿರಿನ ದೇಶವು ಭಾರತ!

ಹಿಮಾಲಯ ತುದಿಯಲಿ ಬಿಳಿಯ ಹಿಮವು
ಸಾಗರದಲೆಯಲಿ ನೀಲಿಯ ಘಮವು
ರವಿಯುದಯದಿ ಕೇಸರಿ ಕುಂಕುಮ ಲೇಪನ
ಸಂಜೆಯ ಸಂಧ್ಯೆಯ ಕೆಂಪಿನ ಹೂರಣ!

ಬಣ್ಣ ಬಣ್ಣಗಳ ಆಟವ ನೋಡುತ
ಕಣ್ಣ ಮಿಟು ಕಿಸದೆ ಆಟವನಾಡುತ
ಮಗುವಿನ ಮುಗ್ಧತೆ ಬರಲಿ ಹಾಡುತ
ನೋವಲು ಬದುಕು ಸಾಗಲಿ ನಗುತ..
@ಪ್ರೇಮ್@
28.03.2021

ಗುರುವಾರ, ಮಾರ್ಚ್ 25, 2021

ಶಿಲೆಗಳು ಸಂಗೀತ ಹಾಡಿದೆ

ಶಿಲೆಗಳು ಸಂಗೀತ ಹಾಡಿವೇ


ಹಾಡಿದೆ ಹಾಡಿವೆ ಶಿಲೆಗಳು ಸಂಗೀತ ಹಾಡಿದೆ
ನುಡಿದಿದೆ ನುಡಿದಿದೆ  ಇತಿಹಾಸವನು ನುಡಿದಿದೆ//

ರಾಜರ ಕಾರ್ಯಕೆ ಪೌರುಷ ಸ್ಥೈರ್ಯಕೆ ನಾನಾದೆ
ನೋಡಲು ಬನ್ನಿರಿ ನನ್ನಯ ಧೈರ್ಯವ ಎನ್ನುತ್ತಿದೆ
ಸವಿಯನು  ಆಡಿ ನೆಮ್ಮದಿ ನೀಡಿ
ಧೈರ್ಯವ ತುಂಬುತ ಮನದಲಿ ಹೀಗೇ...ಹಾಡಿದೆ..//


ಕಲ್ಲನು ಕೊರೆದು ಕನ್ನಡಿ ಮಾಡಿ
ಅಂದವ ತುಂಬಿ ಜೋಡಿಸಿ ಕೂಡಿ
ನಗುತಲಿ ನಿಂತಿಹ ದರ್ಪಣ ಸುಂದರಿ ನಾನಾದೆ..
ನೋಡಿರಿ ನನ್ನಯ ಅಂದದ ಚೆಲುವನು ನೀವಾಗಿ...ಹಾಡಿದೆ...//

ರಾಣಿಯ ನೃತ್ಯ ನೋಡಲು ಬೇಕು
ರಾಜನ ಬುದ್ಧಿ ಕಲಿಯಲು ಬೇಕು
ಪ್ರಜೆಗಳ ಹಿತವದು ರಾಜರ ಧರ್ಮವು ನೀ ಕೇಳು...
ಎಲ್ಲಕು ದೇವರ ಭಕ್ತಿಯೇ ಎಂದಿಗೂ ಮೇಲೂ...ಹಾಡಿದೆ...//
@ಪ್ರೇಮ್@
25.03.2021

ಶನಿವಾರ, ಮಾರ್ಚ್ 13, 2021

ನಾನವಳಲ್ಲ..ಅವನೂ ಅಲ್ಲ..

*ನಾನವಳಲ್ಲ....ಅವನೂ ಅಲ್ಲ..*


ಲಿಪ್ ಸ್ಟಿಕ್ ಹಚ್ಚಿ ತುಟಿಗಳ ಕೆಂಪಾಗಿರಿಸಿಹೆ
ಸೀರೆ ಚೂಡಿದಾರಗಳ ತೊಟ್ಟು ಹೈ ಹೀಲ್ಡ್ ಚಪ್ಪಲಿಗಳ ಧರಿಸಿರುವೆ
ಮುಖಕೆ ಶೃಂಗಾರದ ಬಣ್ಣ ಬಳಿದಿರುವೆ
ನಾನವಳಲ್ಲ...ನಾನವನೂ ಅಲ್ಲ!!

ಬದುಕ ಸಾಗಿಸಲು ಹಲವರಲಿ ಬೇಡುತಿಹೆ
ಕಾಡಿ ಸತಾಯಿಸುವೆ ಧನಿಕರ ಪೀಡಿಸುತಿಹೆ
ಚಪ್ಪಾಳೆಯ ತಟ್ಟಿ ಹುಡುಗರ ಕರೆಯುತಿಹೆ
ನಾನೇನೂ ಬಿಕ್ಷುಕನಲ್ಲ, ಬಿಕ್ಷುಕಿಯೂ ಅಲ್ಲ..

ಮದುವೆಯೆಂಬುದೆನ್ನ ಹಣೆಯಲಿ ಬರೆದಿಲ್ಲ!
ಹೆಣ್ಣೂ ಅಲ್ಲ ಗಂಡೂ ಅಲ್ಲದಂತೆ ದೇವ ಸೃಷ್ಠಿಸಿಹನಲ್ಲ
ಅದ್ಯಾವ ಜನ್ಮದ ನನ್ನ ಪಾಪವೋ ನಾ ಕಾಣೆ!
ಜಗದ ಹಲವು ಕಷ್ಟ ಸಂಕಟಗಳಿಂದ ದೂರವೇ ಉಳಿದಿಹೆನಲ್ಲ!

ಬದುಕ ದಾರಿಯ ನಾನು ಚೆನ್ನಾಗೇ ಹಿಡಿದಿಹೆನಲ್ಲ!
ಶಾಲೆ ಕಲಿತು ಹಲ ಮಕ್ಕಳಿಗೆ ಕಲಿಸುತಿಹೆನಲ್ಲ!
ಹಲವರನು ಕೆಲಸಕಿಟ್ಟು ನಿತ್ಯ ಸಂಬಳವ ಕೊಡುತಿಹೆನಲ್ಲ!
ಮಹಾರಾಣಿ ನಾನಲ್ಲ, ಮಹಾರಾಜನೂ ಅಲ್ಲ!

ದೇಹವೆಂತಿದ್ದರೇನಂತೆ ಈ ಜಗದಲಿ?
ಸುಖ ಕಷ್ಟಗಳಿಹವು ಇಲ್ಲಿ ಸರ್ವರ ಬಾಳಿನಲಿ
ಮನವೆನ್ನ ತುಡಿಯುತಿದೆ ಮಾಡಲು ಹಲವರಿಗೆ ಸಹಾಯವಿಲ್ಲಿ
ಒಳ್ಳೆಯತನಕೆ ಮನದಲಿ ಜಾಗವಿದ್ದು, ಬಾಳುತಿಹುದಿಲ್ಲಿ!

ಕನಸುಗಳನೇಕ ನನ್ನಲೂ ಇವೆಯಲ್ಲವೇ?
ಸಾಧಿಸುವೆನೆಂಬ ಛಲವೂ ನನಗೆ  ಬೇಕಲ್ಲವೇ?
ನನ್ನ ಕಾರ್ಯ ನಾ ಮಾಡದೆ ಪರರ ಮೇಲೇಕೆ ಕೋಪ ಕಕ್ಕಲಿ?
ಸರ್ವ ಭಾರತಾಂಬೆಯ ಮಕ್ಕಳೆಲ್ಲ ನನ್ನ ಗೆಳೆಯರೇ ಆಗಲಿ!

ನಾ ಸಾಧಿಸಲು ಹೊರಟಿರುವೆ ನನ್ನ ಗುರಿಯನ್ನು!
ಭಾರತಾಂಬೆಯ ಹಲವು ಮಕ್ಕಳಿಗೆ ನೀಡುವೆ ಕಸುಬನ್ನು
ಧರೆಯಲಿ ಉಳಿಸಲಿರುವೆ ನನ್ನ ಮುದ್ದಾದ ಹೆಸರನ್ನು
ಮುಂದಿನ ಜನಾಂಗಕೆ ಬಿಟ್ಟು ಹೋಗುವೆ ಉತ್ತಮ ಕಾರ್ಯವನು..
@ಪ್ರೇಮ್@
13.03.2021

ಗುರುವಾರ, ಮಾರ್ಚ್ 4, 2021

ಭಕ್ತಿಗೀತೆ

ಭಕ್ತಿಗೀತೆ

ಹರಡಿಸೆನ್ನ ಬೆಳಕೇ

ಎಲ್ಲಿ ಬೆಳಕೊ ಅಲ್ಲಿ ಬದುಕು ಉಳಿವುದಮ್ಮ
ನಮ್ಮ ಭಯದ ಭಾವವಲ್ಲಿ ಕರಗಿ ಹರಿವುದಮ್ಮ...//ಪ//

ರವಿಯು ಬರಲು ಪ್ರಾಣಿ ಪಕ್ಷಿ ಕರೆವುದಮ್ಮ
ನಿತ್ಯ ಉಷೆಯಾರತಿ ನೋಡೆ ಮನವು ತಣಿವುದಮ್ಮ//

ಹಸಿರ ಎಲೆಯ ತುದಿಯ ಬಿಂದು ಕುಣಿವುದಮ್ಮ
ಹೊಸತು ದಿನದ ಉದಯ ನೋಡಿ ಮನವು ನಲುವುದಮ್ಮ//

ಕೆಲಸ ಮಾಡೊ ಹೊತ್ತು ತಿರುಗಿ ಬರುವುದಮ್ಮ
ನಮಗೆ ಹೊಸ ದಿನದ ಮಹತ್ವವನು ತರುವುದಮ್ಮ//

ಹರಡಲೆಂದೂ ನನ್ನ ಗುಣವೂ ಬೆಳಕಿನ ಹಾಗೆ
ಸರ್ವ ಮನಕೆ ನಗುವ ತರುವ ಸೂರ್ಯನ ಹಾಗೆ//
@ಪ್ರೇಮ್@
05.03.2021