ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮೇ 11, 2026

ಮಾನವ... ಕೇಳು..

ಮಾನವ... ಕೇಳು.. .

ನಾ ನಿನ್ನ ಕೂಸು
ನೀ ಎನ್ನ ತಂದೆ.. 
ನಿನ್ನ ಮೆದುಳ ಶಕ್ತಿಯಿಂದ ನನ್ನ ಪಡೆದೆ 
ತಂತ್ರಜ್ಞಾನ ನಾನು, 
ವಿದ್ಯುತ್ ಇಲ್ಲದೆ ಹೋದರೆ ನಾನಿಲ್ಲ

ನೀನಿಲ್ಲದಿದ್ದರೂ ಬದುಕಬಲ್ಲೆ ನಾನು
ಸಾವಿರ ಜನ ಮಾಡುವ ಕಾರ್ಯ ಒಬ್ಬನೇ ಬಿಸಾಕಬಲ್ಲೆ ಮಾಡಿ
ನನ್ನ ಆರಂಭ, ಅಂತ್ಯಕ್ಕೆ ನೀ ಬೇಕು ಅಷ್ಟೇ.. 

ನಿನ್ನೆಲ್ಲಾ ಕಾರ್ಯಗಳನ್ನು ನನ್ನಿಂದ ಮಾಡಿಸಿಕೊಳ್ಳುವೆಯಲ್ಲ
ನನಗೆ ನಿನ್ನಂತೆ ದಯ ದಾಕ್ಷಿಣ್ಯವಿಲ್ಲ
ಸಂಬಂಧಗಳ ಬಂಧುವಿಲ್ಲ
ರಕ್ತ ಸಂಬಂಧವೂ ಇಲ್ಲ
ಗೆಳೆಯ, ಕುಲದವ ಎಂಬ ಭಾವವೂ ಇಲ್ಲ

ಜಾತಿ ಮತ ನನಗಿಲ್ಲ
ಯಾವ ಜಾತಿಯವ ಸ್ವಿಚ್ ಹಾಕಿದರೂ ಕಾರ್ಯ ನಿರ್ವಹಿಸುವೆ
ಕೇಳು ಮಾನವ ನಿನ್ನಂತೆ ಕಚ್ಚಾಡಲಾರೆ

ಮುನ್ನುಗ್ಗಿ ಹೋಗುವ ಹಂಬಲ ನನಗಿಲ್ಲ
ನನ್ನದೇ ವೇಗದಲಿ ಮುಂದುವರೆವವ ನಾನು

ತಾಂತ್ರಿಕತೆ ಕಲಿತೆ ನನ್ನ ಮೇಲೆ ಪ್ರಯೋಗಿಸಿದೆ, 
ನೆನಪಿಡು, ಅತಿಯಾದರೆ ಅಮೃತವೂ ವಿಷವಲ್ಲವೇ? 
ಬದುಕು ಸಾಧ್ಯವೇ ನಾನಿಲ್ಲದೆ ನಿನಗೆ? 
ಹೆಚ್ಚು ಅವಲಂಬಿಸಬೇಡ, ಸಾವೇ ಕೊನೆಗೆ.. 

ಆಟ ಆಡಬಲ್ಲೆ ನಿನ್ನೊಂದಿಗೆ, ಸೋಲಲಾರೆ
ನೆನಪಿರಲಿ ನೀ ನನ್ನ ಬಿಡಲಾರೆ, ಬಿಟ್ಟು ಬದುಕಲಾರೆ.. 
@ಹನಿಬಿಂದು@
11.05.2026

ಭಾನುವಾರ, ಮಾರ್ಚ್ 22, 2026

ಸಾವಿತ್ರಿ ಫುಲೆ

ಸಾವಿತ್ರಿ ಫುಲೆ 

ಅಕ್ಷರದ ಮೊದಲ ಮಾತೆ! ಎಲ್ಲರ ಸ್ಮರಣೀಯ ದಾತೆ 
ಪಕ್ಷ ರಹಿತ ಕಲಿಕೆ ಕಾರ್ಯ ನಡೆಸಿ ಮನವ ಗೆದ್ದ ಪ್ರೀತೆ//

ಸರ್ವ ಮನುಜ ಮಹಿಳೆಯರ ಉದ್ಧಾರಕೆ ದುಡಿದ ಗೀತೆ
ಗಂಡು ಹೆಣ್ಣು ಒಂದೇ ಎಂಬ ಕಾರ್ಯಕೆ ಅಣಿ ಇತ್ತ ಸೀತೆ//

ಅಕ್ಷರಗಳ ಓದಿ ತಿದ್ದಿ ಜ್ಞಾನಕೆ ಗುರಿ ಕೊಟ್ಟ ನೀರೆ
ಸಕಲ  ಮಂದಿ ಎದೆಯೊಳಗೆ ದೀವಿಗೆ ಹಚ್ಚಿಿಟ್ಟ ಧೀರೆ//

ಓದು ಬರಹ ಮುಖ್ಯವೆಂದು ಸಾರಿ ಸಾರಿ ಕೂಗಿರುವ ನಾರಿ
ಕಷ್ಟವ ಬದಿಗೊತ್ತಿ ಮಹಿಳಾ ಸಾಕ್ಷರತೆಗೆ ಪುಟವಿಟ್ಟ ದಾರಿ//

ಸಾವು ಗೆಲ್ಲಿಸಿ ಬಂದಂತಹ ಸಾವಿತ್ರಿಯಂತ ವೀರ ಮಾತೆ
ನಾವು ನೀವು ಎಲ್ಲರೂ ಪೂಜಿಸಬೇಕಾದ ಅಕ್ಷರ ದಾತೆ//
@ಹನಿಬಿಂದು@
22.03.2026
 

ಸೋಮವಾರ, ಫೆಬ್ರವರಿ 9, 2026

ಮುಟ್ಟನ್ನು ಮೆಟ್ಟಿ ನಿಲ್ಲೋಣ

ಮುಟ್ಟನು ಮೆಟ್ಟಿ ನಿಲ್ಲೋಣ

ಬನ್ನಿರಿ ನಾರೀ ಶಕ್ತಿ ಮಣಿಗಳೆ
ಮುಟ್ಟಿನ ಗುಟ್ಟನು ಕೇಳೋಣ..
ಕಷ್ಟದ ದಿನಗಳ ಸುಲಭದಿ ಎದುರಿಸೋ
ನೈಸರ್ಗಿಕ ಕ್ರಿಯೆಯನು ತಿಳಿಯೋಣ..//ಬನ್ನಿರಿ//

ಹುಡುಗಿಯು ಮಹಿಳೆ ಆಗುವ ಕಾಲಕೆ
ಅಂಡಾಣು ಬಿಡುಗಡೆ ಸಹಜವದು
ರಕುತದ ರೂಪದಿ ದೇಹವ ತ್ಯಜಿಸೆ
ಮೂರ್ನಾಲ್ಕು ದಿನಗಳ ಕಾಲವದು..//ಬನ್ನಿರಿ//

ಹಿರಿಯರು ಹೊರಗಡೆ ಕೂರಿಸಿ ಬಿಟ್ಟರು
ದೇಹಕೆ ವಿಶ್ರಾಂತಿ ಸಿಗಲೆಂದು
ಕಾಯದ ಸ್ವಚ್ಛತೆ ಬೇಕದು ಎಂದಿಗೂ
ಬಳಸಿರಿ ಶುದ್ಧ ಬಟ್ಟೆಯನು//ಬನ್ನಿರಿ//

ಹೆದರುತ ಕುಳಿತು ಬೇಸರ ಪಡದಿರು
ಸರ್ವ ಹೆಣ್ಣಿಗೂ ಬರುವುದದು
ಮದುವೆಯ ಬಳಿಕ ವೀರ್ಯಾಣು ಸೇರಿ
ಸಂತಾನ ಅಭಿವೃದ್ಧಿ ಆಗುವುದು//ಬನ್ನಿರಿ//

ಮೆನ್ ಸ್ಟುರಲ್ ಕಪ್ಪೋ ನ್ಯಾಪೀ ಪ್ಯಾಡೋ
ಉಪಯೋಗ ನೀ ಕಲಿ ನಿತ್ಯಕ್ಕೆ
ಸ್ವಚ್ಚ ಅಂಗಗಳ ಇಡುತಲಿ ಕಾಪಾಡು
ಆರೋಗ್ಯ ಮುಖ್ಯವು ದೇಹಕ್ಕೆ//ಬನ್ನಿರಿ//

ಹುಡುಗರು ಕೂಡ ತಾಯಿ, ಸಹೋದರಿ
ಮನಗಳ ಅರಿತು ಸಹಕರಿಸಿ
ಮುಟ್ಟಿನ ದಿನದಲಿ ಕೆಲಸವ ಹಂಚುತ
ವಿಶ್ರಾಂತಿ ನೀಡಿರಿ ಮನೆಯಲ್ಲಿ..//ಬನ್ನಿರಿ//

ಮುಟ್ಟದೆ ಇರಲು ಕಾರಣವಿಲ್ಲ
ವಿಜ್ಞಾನದ ಪುರಾವೆ ಇದಕ್ಕಿಲ್ಲ
ಕಬ್ಬಿಣದಂಶ ಕಡಿಮೆ ಆಗಲು
ದೇಹವು ಸುಸ್ತಿಗೆ ಜಾರುವುದಲ್ಲ//ಬನ್ನಿರಿ//

ಹೊಟ್ಟೆಯ ನೋವು ನರಗಳ ಸೆಳೆತ
ನಡೆಯಲು ಕಾಲದು ಎಳೆಯುವುದು
ಪ್ರೀತಿ ಆಪ್ತತೆ ಇರಲು ಮನಸಿಗೆ
ಖುಷಿಯಲಿ ಎಲ್ಲಾ ಮರೆಯುವುದು//ಬನ್ನಿರಿ//

ಬದುಕಿನ ಒಂದು ಸಹಜ ಪ್ರಕ್ರಿಯೆ
ಹೆದರಲೇ ಬೇಡಿ ಮಹಿಳೆಯರೇ
ತಿಂಗಳಿಗೊಮ್ಮೆ ಬರುವ ಮುಟ್ಟನು
ಮೆಟ್ಟಿ ನಿಲ್ಲೋಣ ಲಲನೆಯರೇ//ಬನ್ನಿರಿ//
@ಹನಿಬಿಂದು@
14.03.2024

ಜನ ಗಣತಿ

ಜನಗಣತಿ

ಲೆಕ್ಕಾಚಾರವು ಬೇಕಾಗಿತ್ತು ಭಾರತೀಯರ ಅಂದು 
ಏಳ್ಗೆಗಾಗಿ ಸರ್ವರ ಉತ್ತಮ ದೇಶದ ಬಂಧು
ಅದುವೇ ಯೋಜನೆಗಳ ಹಾಕಿಕೊಳ್ಳಲು ಸಿಂಧು
ಜನಮನಗಳ ಲೆಕ್ಕವಿದು ಮಾಡುತ್ತಿರುವೆವು ನಾವೂ ಇಂದು 

ಗಂಡೆಷ್ಟು ಹೆಣ್ಣೆಷ್ಟು, ಕಲಿತವರೆಷ್ಟು ಅವಿದ್ಯಾವಂತರೆಷ್ಟು
ಬಡವರೆಷ್ಟು ಸಿರಿವಂತರೆಷ್ಟು ಮನೆ ಇಲ್ಲದವರು, ಇರುವರೆಷ್ಟು
ಕೃಷಿಕರೆಷ್ಟು ಸರಕಾರಿ ಉದ್ಯೋಗಿಗಳೆಷ್ಟು
ನಾವೆಷ್ಟು ನೀವೆಷ್ಟು ಜನಸಂಖ್ಯೆಯೆಷ್ಟು?

ಲೆಕ್ಕಾಚಾರದ ಪಟ್ಟಿ ಬರೆಯುತ್ತಿದ್ದುದು ಅಂದಲ್ಲಿ
ಇಂದಿಲ್ಲಿ ಮೊಬೈಲ್ ಫೋನುಗಳ ಹಾವಳಿ
ಸರ್ವ  ವರ್ಗಗಳ ನುಂಗಿ ಬಿಟ್ಟಿದೆ ತಾ ಮರೆಯುತ್ತಾ ಇಲ್ಲಿ
ಅಲ್ಪ ಕಾಗದದ ಕಾರ್ಯ ಉಳಿದುದೆಲ್ಲ ಅಂತರ್ಜಾಲದಲಿ

ಲೆಕ್ಕ ಬೇಕಾಗಿದೆ ನಿಜ ಬಡವ ಬಲ್ಲಿದರದ್ದು
ಬಿಟ್ಟು ಬಿಡೋಣ ಜಾತಿ ಮತಗಳ ಸದ್ದು 
ಒಂದಾಗಿ ಬಾಳೋಣ ಇಲ್ಲಿ ನಾವೆಲ್ಲಾ ಒಂದು
ಭಾರತೀಯರು ಒಗ್ಗಟ್ಟಿನಲ್ಲಿ ಬದುಕೋಣ ಎಂದು....
@ಹನಿಬಿಂದು@
09.02.2026

ಶುಕ್ರವಾರ, ಜನವರಿ 30, 2026

ಗಾಂಧಿ ತಾತಗೆ

ಗಾಂಧಿ ಕೇಳು...

ಗಾಂಧಿ ತಾತ ನೀನು ಹುಟ್ಟಿ  ಏನೋ ಮಾಡಿದೆ
ಮಂದಿ ನಿನ್ನ ಹೆಸರು ಹೇಳಿ ಅನ್ಯಾಯ ಬೆಳೆಸಿದೆ
ರಸ್ತೆಗಳಿಗೂ ಕೆಲಸಗಳಿಗೂ ನಿನ್ನ ಹೆಸರಿದೆ
ಆದರೇನು ಸರಿಯಾದ ಕಾರ್ಯ ನಡೆಯದಾಗಿದೆ

ನಿನ್ನ ಜನುಮದಿನದಂದು ಸ್ವಚ್ಛತೆಯು ಸಾಗಿದೆ
ಮರುದಿನವೇ ಕಸದ  ರಾಶಿ ಅಲ್ಲೇ ಬಿದ್ದಿದೆ
ನಿನ್ನ ನಡೆಯ ಜನರು ಎಲ್ಲ ಆಡುತಿರುವರು
ನೀನು ಹೇಳಿ ಕೊಟ್ಟ ಕಾರ್ಯ ಮಾಡಲೊಲ್ಲರು

ನಿನ್ನ ಹೆಸರಲ್ಲೆಲ್ಲ ತಾವು ಹಣವ ಗಳಿಸುತ
ತಮ್ಮ ತಮ್ಮ ಜೇಬು ಭರ್ತಿ ಮಾಡಿ ನಗುವ ಚೆಲ್ಲುತ
ತಿಂದು ಉಳಿದುದಲ್ಲಲ್ಲೆಸೆದು ಮುಂದೆ ಸಾಗುತ 
ಸ್ವಚ್ಛ ಎಂದು ಗಿಡ ಮರಗಳ ಕಡಿ ಕಡಿದು ಎಸೆಯುತ...

ಪ್ಲಾಸ್ಟಿಕ್ ರಾಕ್ಷಸನ ಬಳಸುತಲೆ ಬಾಳುವರು
ರಸ್ತೆ ರಸ್ತೆಗಳಿಗೂ ಅದನು ಬಿಸಾಕಿ ಬಿಡುವರು
ಯಾರೋ ಬಂದು ಎಲ್ಲ ಎತ್ತಿ ಫೋಟೋ ತೆಗೆವರು
ಎಸೆವ ಜನಕೆ ಇಲ್ಲಿ ಯಾರೂ ಏನೂ ಹೇಳರು

ಚಾಕಲೇಟು ಚಿಪ್ಸ್ ತಿನುವ ಮಕ್ಕಳಿರುವರು
ತಿಂದು ಕಸವ ಅಲ್ಲೇ ಸುರಿದು ಮುಂದೆ ಸಾಗುವರು
ಯಾರಿಗಿಲ್ಲಿ ಯಾರು ಹೇಳು ಯಾರು ಕೇಳುವರು
ತಾನೇ ಎನುತ ಎಲ್ಲಾ ಕಡೆಯು ತಾವೇ ಮೆರೆವರು

ಬದುಕ ಜಾಲದಲ್ಲಿ ನಿನ್ನ ಮಾತು ಮರೆತರು
ಹೆಂಡ ಬಿಯರ್ ಹಾಟ್ ಇಲ್ಲದೆ ಪಾರ್ಟಿ ಮಾಡರು
ತುಂಡು ತಿಂದು ತೇಗಿ ಬಳಿಕ ಪ್ರಾಣಿ ಹಿಂಸೆ ಎನುವರು 
ತಮ್ಮ ಬದುಕು ಸರಿಯಾಗಿದೆ ಅಂದು ಕೊಂಡರು

ನಿನ್ನ ಪದವ ಗಾಳಿಗೆಲ್ಲೋ ತೂರಿ ಆಗಿದೆ
ತಾನೇ ದೇವರೆನುತ ಇಂದು ಬಾಳು ಸಾಗಿದೆ
ನೀನು ಇಲ್ಲಿ ಹೆಸರಿಗಷ್ಟೇ ರಾಜಕೀಯ ಮಾಡಲು
ನಿನ್ನ ನಾಮ ಬೇಕಿಹುದು ಹಲವು ಆಟವಾಡಲು..
@ಹನಿಬಿಂದು@
30.01.2026

ಸೋಮವಾರ, ಜನವರಿ 26, 2026

ಪೋಷಕ ವಾತ್ಸಲ್ಯ

ಪೋಷಕ ವಾತ್ಸಲ್ಯ

ಕೌಸಲ್ಯೆ ಮಾತ್ರವಲ್ಲ ಪ್ರತಿ ತಾಯ ವಾತ್ಸಲ್ಯ
ಪುತ್ರ ಪುತ್ರಿ ಮನೆ ಹಿರಿಯರಿಗೆ
ಭವಿಷ್ಯತ್ತಿನ ಯೋಚನೆ, ಯೋಜನೆ ವೈಶಾಲ್ಯ
ಉಸ್ತುವಾರಿ ಜೊತೆ ಹಣ ಸಕಲರಿಗೆ..

ರಕ್ಷಣೆಯ ಹೊಣೆ ಹೊತ್ತ ಮಾತಾಪಿತರ ನೀತಿ
ಭಕ್ಷಣೆಗೆ ತಂದಿತ್ತರೂ ಒಣ ಭೀತಿ
ಅಗತ್ಯಕ್ಕೆ ತಕ್ಕಂತೆ ಬೇಕಾದುದೆಲ್ಲ ಒದಗಿಸುವ ಸ್ಪೂರ್ತಿ
ದುಡಿತವೆಲ್ಲ ಮಕ್ಕಳಿಗೆ, ಕುಟುಂಬ ಪ್ರೀತಿ

ನಿರ್ಲಕ್ಷ್ಯವಿಲ್ಲ ಇಲ್ಲಿ ಪೋಷಣೆ ಗಮನ ಆರೈಕೆ
ಸೂಕ್ತ ವ್ಯವಸ್ಥೆ ನಿತ್ಯ ಒದಗಿಸುವರು
ಕಲ್ಪಿಸುತ ಸೌಲಭ್ಯಗಳ ಖರ್ಚು ವೆಚ್ಚ ಭರಿಸಿ
ಹಿಂದಿನ ಮುಂದಿನ ನಾಳೆಗಳ ಯೋಜಿಸುವರು

ಸವಾಲುಗಳು ಅದೆಷ್ಟೋ ಮನುಷ್ಯ ಬದುಕ ನೋವುಗಳೋ 
ಆದರೂ ನಿರ್ಮಿಸುತ ಕನಸ ಮಹಲುಗಳ
ಸಂಪನ್ಮೂಲಗಳ ಕೊರತೆ ಇರಬಹುದು ಅಲ್ಲೆಲ್ಲೋ
ಕುಟುಂಬದ ಸಹಭಾಗಿತ್ಯ ಪ್ರೀತಿ ಬಯಸುವ ಜೀವಗಳು
@ಹನಿಬಿಂದು@
08.12.2025




ಬುಧವಾರ, ಡಿಸೆಂಬರ್ 10, 2025

ಗುಪ್ತ ಗಾಮಿನಿ

ಗುಪ್ತಗಾಮಿನಿ 

ಮನದ ಮೂಲೆಯಲೆಲ್ಲೋ ಭೀಕರ ಪ್ರವಾಹ
ಗೀಚಿದ ಕಾದಂಬರಿಯ ಸಹಸ್ರ ಸಾಲುಗಳಂತೆ!
ಗುಪ್ತಗಾಮಿನಿಯಾಗಿ ಹರಿದು ಹೋಗುತಲಿದೆ 
ಭಾವನೆಗಳ ಕಡಲಿನ ಆಳದ ದೈತ್ಯ ಅಲೆಗಳಂತೆ 

ಅಂದವರು ಇಂದ್ಯಾರೋ ಬದುಕ ಗುಳ್ಳೆಯೊಳಗೆ 
ಮುಂದಿನ ಕ್ಷಣಗಳ ಲೆಕ್ಕವಿಟ್ಟವರಿಹರೇ ಇಲ್ಲಿ !
ಸಂದುಗೊಂದಿನ ಮುರುಕು ದಾರಿಯ ಚಲನೆಯಲಿ 
ಮೂಕವಾಗಿ ಹಾಡುತಿಹ ಗಾನ ಕೋಗಿಲೆ ಗಂಟಲಲಿ!

ರೈಲು ಬಸ್ಸು ಕಾರು ಸೈಕಲ್ ವಿಮಾನದಲ್ಲಾದರೇನು
ತಲುಪುವ ಕೊನೆಯ ಗಮ್ಯವು ಸರಿಯೇ ಇಲ್ಲದಿರಲು !
ನಾವೆಯಿದು ತುಂಬಿಹುದು ರಾಶಿ ರಾಶಿ ಕಸ ಕಡ್ಡಿಗಳನ್ನ
ಮಾನವತೆಯ ಸವಿ ಭಾವಗಳ ತುಂಬಿಕೊಳದಿರಲು!!

ಮಳೆ ಗಾಳಿ ಚಳಿ ಬಿಸಿಲು ಗುಡುಗು ಏನಿದ್ದರೇನಂತೆ
ತಲೆಯೊಳಗೆ ಒಂದಿಷ್ಟು ನವ ಕನಸುಗಳು ಬೇಕಲ್ಲವೇ?
ಶಿಲೆಯಾದರೂ  ಕೆತ್ತಿದ ಸಾವಿರ ಏಟು ತಿಂದು ಬಂದಿಹುದು
ಇಳೆಯೊಳಗಿನ ಸದ್ದು ಗದ್ದಲವಿರದ ಮನಕೆ ಬೆಲೆ ಬೇಡವೆ!
@ಹನಿಬಿಂದು@
11.12.2025


ಶುಕ್ರವಾರ, ನವೆಂಬರ್ 28, 2025

ಇಂದು

ಇಂದು

ಒಂದು ಎರಡು ಸಾಲದು
ಬಂದು ಬರಡು ಆಗದು
ಸಿಂಧುವಿನ ಚಿಲುಮೆಯಿದು
ಮುಂದೆ ದಾರಿ ತಿಳಿಯದು

ನಂದು ನಿಂದು ಬಗೆಯದು
ಸಂದು ಗೊಂದು ತುಂಬದು
ಕಂದು ಬಣ್ಣ ಕಾಫಿಯದ್ದು
ಮಿಂದು ಆರೋಗ್ಯವೆಂದೂ ಕೆಡದು

ಗೊಂದು ಅಂಟಿ ಬಿಡುವುದು
ನೊಂದು ಸಾವು ಸಲ್ಲದು
ತಂದು ಸುರಿದು ಮುಗಿಯದು
ದುಂದು ವೆಚ್ಚ ಮಾಡಬಾರದು

ಬಂದು ನೋಡು ತಿಳಿವುದು
ಬಿಂದು ಇಲ್ಲದೆ ಏನಿಹುದು
ಮಂದ ಬುದ್ಧಿ ಇರಬಾರದು
ಅಂದು ಬದುಕು ನಿರಾಳವಿಹುದು

ಅಂದುಕೊಂಡೆ ಬಾಳುತಿಹುದು
ಇಂದು ಜನರ ಜ್ಞಾನ ಬೆಳೆದು
ಹಿಂದು ಮುಂದು ಗಮನಿಪುದು
ಎಂದೂ ಬುದ್ದಿ ಬಳಸುವುದು
@ಹನಿಬಿಂದು@
29.11.2025



ಮಂಗಳವಾರ, ಆಗಸ್ಟ್ 12, 2025

ಸಾಲ

*ಸಾಲ*

ಸಾಲದ ಸಾಲದಲ್ಲಿ ಮುಳುಗದಿರು ತಮ್ಮಾ
ಸೋಲು ಅನುಭವಿಸುವೆ ಶಾಪ ಬಿದ್ದು ತಿಮ್ಮ
ಸಾಲ ಪಡೆದುಕೊಂಡು ಕೊಡಲಾಗದ ಸ್ಥಿತಿ ತಲುಪುವೆ 
ಕೇಳಿದಾಗ ನುಣುಚಿಕೊಳ್ಳಲು ಆರಂಭಿಸುವೆ 

ಮತ್ತೆ ಮತ್ತೆ ಕೇಳುವನು ಕೊಟ್ಟ ಆ ಪುಣ್ಯವಂತ
ಕೊಡದೆ ಹೋದರೆ ಬಿಡಲಾರ ಮಹಾ ಬುದ್ಧಿವಂತ
ಕೊಟ್ಟವ ಕೋಡಂಗಿ ಈಸ್ಕೊಂಡವ ಈರಬದ್ರನಂತೆ 
ಅದು ಹಳೇ ಗಾದೆ ಈಗ ಹೊಸತಿಹುದಂತೆ 

ಸೈಬರ್ ಕಳ್ಳರು ಬಹಳ ಹೆಚ್ಚಿಹರಂತೆ
ಕುಳಿತಲ್ಲಿಂದಲೇ ನಮ್ಮ ಖಾತೆಗೆ ಕನ್ನ ಹಾಕುವರಂತೆ
ಬ್ಯಾಂಕಲ್ಲಿ ಕಾಸಿಡುವ ಕಾಲ ಇಂದಲ್ಲವಂತೆ
ಇನ್ಕಮ್ ಟ್ಯಾಕ್ಸ್ ನವರಿಗೂ ಅದು ಗೊತ್ತಾಗುವುದಂತೆ

ಮನೆಯಲ್ಲಿ ಇಟ್ಟರೆ ನೋಟು ಬ್ಯಾನು 
ಬ್ಯಾಂಕ್ ನಲ್ಲಿ ಇಟ್ಟರೆ ಟ್ಯಾಕ್ಸ್ ವ್ಯಾನು
ದುಡ್ಡಿದ್ದವನೇ ಈಗ  ದೊಡ್ಡಪ್ಪನಂತೆ
ಆದರೆ ಅದನ್ನಿಡಲು ಜಾಗವೇ ಇಲ್ವಂತೆ!

ಮೂಟೆ ಮೂಟೆ ಬಿಸಾಕಿದರು ನೋಟು ಬ್ಯಾನ್ ಸಮಯದಲ್ಲಿ
ಒಂದೆರಡು ಲಕ್ಷ ಯಾರ ಕೈಲೂ ಇಲ್ಲ ಇಲ್ಲಿ
ಯಾವುದೇ ಬ್ಯಾಂಕ್ ಅಲ್ಲಲ್ಲಿ ಮುಳುಗಲಿ 
ಎಲ್ಲರ ಲಕ್ಷಗಳು ತೊಳೆದು ಹೋಯ್ತಲ್ಲಿ !!

ಮನೆಯಲ್ಲೂ ಭಯ ಬ್ಯಾಂಕಲ್ಲೂ ಭಯ
ದುಡ್ಡಿಲ್ಲದವನಿಗೆ ಎಲ್ಲಾದರೇನು ಯಾಕೆ ಭಯ?
ದುಡಿದದ್ದು ಬದುಕಲು, ವ್ಯಾಪಾರ ಲಾಭವೀಗ!!
ಅಲ್ಲೂ ಉಂಟಂತೆ ಕಾಂಪಿಟೇಶನ್ ಬಹಳವೀಗ!!

ದುಡ್ಡಿದ್ದರೆ ತಾನೇ ಟೆನ್ಶನ್ ಭಯ ಗಾಬರಿ
ನಮ್ಮಲ್ಲಿ ಏನಿಲ್ಲದಾಗಲೂ ಟೆನ್ಶನ್ ಬರೋಬರಿ!!
ಮದುವೆ ಆಗಿಲ್ಲ ಮನೆ ಕಟ್ಲಿಲ್ಲ ಕೆಲಸ ಸಿಕ್ಕಿಲ್ಲ
ಮತ್ತೆ ಯಾವಾಗ ಉತ್ತರ ಈ ಪ್ರಶ್ನೆಗಳಿಗೆಲ್ಲ?

ಮತ್ತೆ ಕೊನೆಗೆ ಓಡಿ ಪಡೆಯಬೇಕು ಸಾಲ
ಪರರಿಗೆ ತಿನ್ನಿಸದೆ ಇದ್ದರೂ ಕಟ್ಟಬೇಕಲ್ಲ ಕೋಲ 
ನನ್ನದಲ್ಲದಿದ್ದರೂ ಇಹರು ಮನೆಯಲ್ಲಿ ಮಡದಿ ಮಕ್ಕಳು
ಹಣವಿಲ್ಲದೆ ಸಾಲ ಮಾಡಿ ನಾ ಹಲವರ ಬಾಯಿಗೆ ಸಿಗಲು!

ಕೆಲಸವಿಲ್ಲ , ಮನೆಯಲ್ಲಿ ಬೇಕಾದ್ದು ಕೊಳ್ಳಲು ಹಣವಿಲ್ಲ
ಕಳ್ಳತನ ಮಾಡುವಂತಹ ಕಲೆಗಳನು ಅರಿತಿಲ್ಲ
ದುಡಿದರೂ ಸಂಬಳ ಪರರಂತೆ ಸಾಲುತ್ತಿಲ್ಲ
ಫ್ರೀ ಬಸ್ ಹಣ ಇದ್ದರೂ ಬದುಕು ನಡೆಯುತ್ತಿಲ್ಲ!!!

ಸಾಲವೇ ಎಲ್ಲಾ ನಿನ್ನಿಂದಲೇ ಬದುಕೆಲ್ಲ..!!
ಹಿಂದೆ ಪಡೆದವನಿಗೆ ಕೊಡಲು ಧನವಿಲ್ಲ
ಬ್ಯಾಂಕ್ ಲೋನ್ ಕೊಳ್ಳಲು ಅಡವಿಡಲು ಏನಿಲ್ಲ
ದುಡ್ಡಿದ್ದವನಲ್ಲಿ ಪಡೆದರೆ ನಿತ್ಯ ಕೇಳುತಿಹನಲ್ಲ! 
@ಹನಿಬಿಂದು@
13.08.2025

ಸೋಮವಾರ, ಆಗಸ್ಟ್ 11, 2025

ಮನಕೆ ಮಾತು

ಮನಕೆ ಮಾತು

ಸೋಲಿಗೆ ಸೋಲದೆ ಇರೋಣ ಎಂದಿಗೂ
ಸೋಲು ನಮ್ಮ ಸೋಲಿಸುವ ಮೊದಲು
ಸೋಲನ್ನು ಸೋಲಿಸಿ ಗೆದ್ದು ತೋರಿಸೋಣ

ಸೋಲಿಗೆ ತಲೆ ಬಾಗದೆ ಸೋಲು ಸೋಲಿಸಿದೆ ಎಂದು ತಾ ಮೆರೆಯದಿರಲಿ
ಸೋಲನ್ನು ಸೋಲಿಸಿ ಸೋಲಿಗೆ ಸೋಲನು ಉಣಬಡಿಸಿ
ಸೋಲಿಗೂ ಸದಾ ಸೋಲಿಹುದು 
ಎನುವ ಸತ್ಯವ ಸಾರಿ ಬಿಡೋಣ

ಸೋಲು ನಮ್ಮ ಸೋಲಿಸುವ ಮೊದಲೇ
ನಾವು ಸೋಲನು ಸೋಲಿಸಿ ಗೆದ್ದು ತೋರಿಸೋಣ
ಸೋಲು ಗೆದ್ದೆನೆಂದು ಬೀಗುವ ಮೊದಲು ನಾವೇ ಸೋಲನು ಸೋಲಿಸಿ ಗೆಲುವ ಪಡೆದವರು ಎಂದು ಬೀಗಿ ಬಿಡೋಣ

ಸೋಲಿಗೆ ಸೋತು ಸುಣ್ಣವಾಗದೆ
ಸೋಲಿಗೆ ಅಂಜದೆ ಅಳುಕದೆ
ಸೋಲನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ
ಸೋಲನ್ನು ಹತ್ತಿ ಗೆಲುವನ್ನು ಮುಟ್ಟಿ ಬಿಡೋಣ

ಮನವೇ ನೀ ಸೋಲಿಗೆ ಸೋತರೆ ಸೇರುವೆ ಸೋತವರ ಸಾಲಿಗೆ
ಸೋಲು ನಮ್ಮ ಸೋಲಿಸುವ ಮೊದಲೇ
ಸೋಲಿಗಿಂತ ವೇಗವಾಗಿ ಓಡಿ ಸೋಲ ಸೋಲಿಸಿ ಮುಂದಾಗೋಣ
ಸೋಲು ಸೋತು ಹಿಂದಕ್ಕೋಡಿ ಹೋಗಲಿ
ಗೆಲುವಿನ ಬಾವುಟ, ಬಹುಮಾನ ಎಲ್ಲವೂ ನಮ್ಮದಾಗಲಿ..

ಸೋಲು ಸೋತು ದೂರ ಓಡಲಿ
ಗೆಲುವು ಪ್ರೀತಿಯಿಂದ ಬಿಗಿದಪ್ಪಿಕೊಳ್ಳಲಿ...
@ಹನಿಬಿಂದು@
10.08.2021

ಶನಿವಾರ, ಆಗಸ್ಟ್ 9, 2025

ಸೋದರನ ಕರೆ

ಭ್ರಾತೃತ್ವ ಬಂಧ 

ಸಹೋದರನ ಕರೆ

ತಂಗಿಯೇ ಬಳಿಯೇ ಇರಲಾರೆನು ನಿತ್ಯವೂ 
ಬೆಳೆಯಲು ಬೇಕು ನಮ್ಮ ಬಾಳು ಕ್ಷಣ ಕ್ಷಣವೂ
ಗಳಿಕೆಯು ಇರಲು ಸಂಬಂಧ ಸುಸೂತ್ರ
ಮಿಳಿತದ ಭಾವಕೆ  ಭ್ರಾತೃತ್ವ ಸ್ತೋತ್ರ//

ಕಾಣದ ಕೈಗಳ ಪ್ರೀತಿಯೂ ಇಹುದು
ದೂರದಿ ಸಂತೈಕೆಯ ಭಾವವೂ ನೆನಪಿಹುದು 
ಭಾರದ ಹೃದಯದಿ ಕಾಯಕ ಹಲವೆಡೆ
ರಕ್ಷೆಯು ಕೈಯಲಿ ಬಿಡದು ಕೆಡುವೆಡೆ..//

ಮನದಲಿ ನೆನಪು ಹೆಣಗದ ಹಾಗೆಯೇ
ಕನಸಲು ಬಯಸುವೆ ಒಳ್ಳೆಯ ಬಗೆಯೇ
ನೀನೆನಗೆ ನಾ ನಿನಗೆ ಸೋತಾಗ ಗೆದ್ದಾಗ
ಬೀಸಣಿಗೆ ಸೆಕೆಯಲಿ ಬಾಳಲಿ ಬಿದ್ದಾಗ//

ಒಳ್ಳೆಯತನ ನಮ್ಮುಸಿರ ಪವಿತ್ರ ಬಂಧವು
ರಕ್ಷಣೆಯ ನೀಡುವಲಿ ಸರ್ವ ಸ್ವಾತಂತ್ರ್ಯವು
ಭಾರತದ ಭವದ ಭಾವವಿದು ಬಾಡದಿರಲಿ
ಭವ್ಯ ಬದುಕಿನ ಬಳುವಳಿಯು ಬಸವಳಿಯದಿರಲಿ ..//
@ಹನಿಬಿಂದು@
10.08.2025

ಕಾಗುಣಿತ ಕವನ

ಗುಣಿತಾಕ್ಷರ ಕವನ

ಒಂದಾಗಿ ಬಾಳೋಣ

ಬರವಣಿಗೆಯ ಹೃದಯವ ಹೊತ್ತು
ಬಾರೆಯ ಎಂದಿದೆ ಮನದ ಮುತ್ತು
ಬಿರಿದಿದೆ ಸುಂದರ ಭಾವದ ಮಣಿತುತ್ತು
ಬೀಸಣಿಗೆಯಂತೆ ಬೀಸುತಿದೆ ಪ್ರೇಮ ಕಸರತ್ತು//

ಬುಗಿಲೆದ್ದಿದೆ ಆನಂದದ ಕಿರುನಗೆ
ಬೂರುಗ ಹಸಿರಿನ ಮೈಮನ ಬೆಸುಗೆ
ಬೃಂದಾವನದಲಿ ಹಾರುವ ಚಿಟ್ಟೆಯ ಸಲುಗೆ
ಬೆನಕನ ರಕ್ಷೆಯು ನಮ್ಮಯ ಉಸಿರಿಗೆ//

ಬೇಸಿಗೆ ಬಿಸಿಲಿನ ಉರಿಯಲು ಚಳಿಯು
ಬೈಸಿಕಲಲಿ ಜೊತೆಯಲಿ ಸಾಗಿದ ಸವಿಯು
ಬೊಮ್ಮನ ವರವದು ಸಿಕ್ಕಿದ ಖುಷಿಯು
ಬೋರೆಂದು ಸುರಿವ ಮಳೆಹನಿಯ ಮಧುರತೆಯು 

ಬೌ ಬೌ ಎನುವ ನಾಯಿಯ ನಿಷ್ಠೆಯುಲಿ
ಬಂಗಾರದ ಮನದ ಬದುಕಿನ ನೋಟದಲಿ
ಬ: ಕಷ್ಟಗಳ ಎದೆಗುಂದದೆ ಎದುರಿಸುತಲಿ ಬದುಕೋಣ
@ಹನಿಬಿಂದು@
09.08.2025

ಶನಿವಾರ, ಮೇ 3, 2025

ಬಾಳು

ಬಾಳು

ಭಾವವೆಲ್ಲ ಸತ್ತ ಮೇಲೆ ಭಾವನೆಗೆಲ್ಲಿ ಜಾಗ
ಮಾನವೆಲ್ಲ ಹೋದ ಮೇಲೆ ಪ್ರಾಣಕ್ಕೆಲ್ಲಿ ವೇಗ
ತ್ರಾಣವೆಲ್ಲ ಬಿಸಿಯಾಗಿ ಬದುಕಲೆಲ್ಲಿ ತ್ಯಾಗ
ಜಾಣ ದದ್ದನಾದ ಮೇಲೆ ಅವನೇನು ಭಾಗ


ಮನದ ನೋವು ಓದಲಿಕ್ಕೆ ಲಿಪಿಯು ಇಹುದೇ ಜಗದಿ
ಕನಸು ನನಸು ಆಗಿದ್ದರೆ ಕಷ್ಟ ಇರದೆ ಭವದಿ
ವಿವಿಧ ವೇಷ ಹೊರಗಡೆಗೆ ಮನದ ಒಳಗೆ ಬೆತ್ತಲೆ
ಬಂದ ದಿನದ ಹೋಗೋ ದಿನದ ನಡುವೆ  ನಾಲ್ಕು ಕ್ಷಣಗಳೇ

ಆಚೆ ಈಚೆ ಸುತ್ತಲೂನು ಹಣದ ಆಸೆ ಒಂದಿದೆ
ಧನ ಧಾನ್ಯ ಹೆಣ್ಣು ಹೊನ್ನು ಸರ್ವರಿಗೂ ಬೇಕಾಗಿದೆ
ತಾನು ತನ್ನದು ತನ್ನವರಿಗೆ ಎನುವ ಮಾತು ಮಾತ್ರ
ಹೋಗೋ ದೇಹ ಸಾಧನೆಯ ಮರೆತರೇನು ಸೂತ್ರ....
@ಹನಿಬಿಂದು@
25.04.2025

ಶನಿವಾರ, ಏಪ್ರಿಲ್ 19, 2025

ಬದುಕು ಇಷ್ಟೇ

ಅದೇಕೋ ನನ್ನ ಹುಡುಗ ಮೌನಿಯಾಗಿದ್ದಾನೆ
ಅವನು ಮಾತನಾಡಲಿ ಎಂದು ನಾನು
ನಾನು ಮಾತನಾಡಲಿ ಎಂದು ಅವನು
ಇಬ್ಬರೂ ಒಬ್ಬರನ್ನು ಒಬ್ಬರು ಕಾಡುತ್ತಲೇ ಇದ್ದೇವೆ

ಮನದಾಳದಲ್ಲಿ ಏಕಮುಖ ಸಂಭಾಷಣೆ ನಡೆಯುತ್ತಲೇ ಇದೆ
ಅಹಂ ಅಡ್ಡ ಬರುತ್ತದೆ ನಾನೇ ಏಕೆ ಮಾತನಾಡಿಸಲಿ
ಅವನ ಧೋರಣೆ ಹಾಗಲ್ಲ ಅನಿಸುತ್ತೆ
ಕೆಲಸದ ನಡುವೆ ಸಮಯ ಇಲ್ಲ
ತಲೆಯಲ್ಲಿ ನನಗೊಬ್ಬಳು ಕಾಯುತ್ತಾ ಇದ್ದಾಳೆ ಎಂದು ನೆನಪಿದ್ದರೆ ತಾನೇ

ಎಲ್ಲೋ ಹೇಗೋ ಇರುತ್ತಾಳೆ ಬಿಡು
ನನ್ನ ಬಿಟ್ಟು ಅದೆಲ್ಲಿ ಹೋಗ್ತಾಳೆ
ನನ್ನ ಹುಚ್ಚಿ ತರಹ ಪ್ರೀತಿಸುತ್ತಾಳೆ
ನಾನೇ ಅಲ್ಲವೇ ಅವಳಿಗೆ ಬದುಕು ಕೊಟ್ಟವನು
ಬೇಕು ಬೇಕೆಂದಾಗ ಬೇಕಾದುದೆಲ್ಲವನ್ನೂ ಅವಳ ಮುಂದೆ ಸುರಿದು ಅವಳ ಮನಸ್ಸನ್ನು ತಣಿಸಿದವನು
ಅವಳ ಪ್ರೀತಿ ಗೆದ್ದವನು
ಇಂತಹ ನನ್ನ ಬಿಟ್ಟು ಅವಳೆಲ್ಲಿ ತಾನೇ ಹೋಗಲು ಸಾಧ್ಯ ಅಲ್ಲವೇ! 

ನನಗೋ ಆತಂಕ... ಇವನಿಗೆ ಬೇರೆ ಯಾರಾದರೂ ಸಿಕ್ಕಿರಬಹುದೇ?
ನನಗಿಂತ ಅಂದಗಾರ್ತಿ !
ಹಣ ನೋಡಿ, ಅಂದ ನೋಡಿ, ಗುಣ ನೋಡಿ! 
ಇವನ ಒಳ್ಳೆಯತನವನ್ನು ನೋಡಿ!
ನನ್ನ ಇವನು ಮರೆತು ಹೋಗಿರಬಹುದೇ!

ಮತ್ತೆ ಹೃದಯಕ್ಕೆ ನಾನೇ ಸಾಂತ್ವನ ಹೇಳುವ ಕಾರ್ಯ ನನ್ನದು
"ಇಲ್ಲ ಆತ ನನ್ನವನು. ಮಾತನಾಡದ ಮಾತ್ರಕ್ಕೆ ಆತ ನನ್ನ ಬಿಟ್ಟು ಬೇರೆಲ್ಲಿ ಹೋಗಲು ಸಾಧ್ಯ? 
ನನ್ನ ಬಿಟ್ಟು ಈ ಲೋಕದಲ್ಲಿ ಅವನಿಗೆ ನನ್ನಷ್ಟು ಪ್ರೀತಿ ಕೊಡುವವರು ಯಾರು!

ನನ್ನೊಳಗೆ ಅವನು, ಅವನೊಳಗೆ ನಾನು!
ನಾನು ಅವನು ಹಗಲು ಇರುಳಲ್ಲ! 
ನಾನು ಅವನು ರೈಲು ಪಟ್ಟೆಗಳೂ ಅಲ್ಲ
ನಾನು ಅವನೆಂದರೆ ಹೃದಯ - ಬಡಿತ!
ಹೃದಯ ಬಡಿಯದೆ ಇದ್ದೀತೆ! ಬಡಿತ ಇರದೆ ಹೃದಯಕ್ಕೆ ಬೆಲೆಯೇ 

ಅವನು ಅವನೇ 
ನಾನು ನಾನೇ 
ನಾನೆಂದರೆ ಅವನೇ.. ಅವನೆಂದರೆ ನಾನೇ
ನನಗೆ ಅವನು ಅವನಿಗೆ ನಾನು
ಮಾತನಾಡಲಿ, ಮೌನವಾಗಿರಲಿ
ಕೋಪಗೊಳ್ಳಲಿ, ರಾಜಿಯಾಗಲಿ

ಪ್ರೀತಿಯಲ್ಲಿ ಕೋಪ, ತ್ಯಾಗ ,ನೋವು ,ಅಪ್ಪುಗೆ ,ಸಾಂತ್ವನ ,ಒಂಟಿತನ, ಗಟ್ಟಿತನ , ಹಿರಿತನ, ಗೆಳೆತನ, ನಂಬಿಕೆ, ಸತ್ಯ, ಜಗಳ, ಮುದ್ದು, ಮುನಿಸು ಎಲ್ಲವೂ ಇದ್ದರೇನೇ ಚಂದ! 
ಪ್ರಪಂಚದಲ್ಲಿ ಒಂದು ಬಿಡಿಸಲಾಗದ ಬಿಡಲಾಗದ ಹಿತಕರ ಸಂಬಂಧ
ಅದು ನೋವು ತರುವ ಸಂಬಂಧ ಆಗಿರಬಾರದು
ಹಾಗಿದ್ದರೆ ಅದು ಪ್ರೀತಿಯಲ್ಲ ಬಂಧನ

ಬಂಧನ ಮಧುರವಾಗಿದ್ದರೆ ಮಾತ್ರ ಅದು ಪ್ರೇಮ ಬಂಧನ!
ಇಲ್ಲದೆ ಹೋದರೆ ಅದು ಆತ್ಮ ಬಂಧನ!
ಹಲವು ಸಂಬಂಧಗಳಿಲ್ಲಿ  ಭೂಮಿಯಲ್ಲಿ ಆತ್ಮ ಬಂಧನದಲ್ಲೇ ಬದುಕುತ್ತಿವೆ
ಸಮಾಜಕ್ಕಾಗಿ, ಹಿರಿಯರಿಗಾಗಿ, ಮಕ್ಕಳಿಗಾಗಿ, ಕುಟುಂಬಕ್ಕಾಗಿ
ಮತ್ತೆ ಪ್ರೀತಿ? ನಂಬಿಕೆ? ಅರಿವು?
ಅವೆಲ್ಲ ಗಾಳಿಗೆ ತೂರಿ ಆಗಿದೆ! 
ಏಕೆ? ಉತ್ತರ ಇಲ್ಲ! ಜೊತೆಯಾಗಿಯೇ ಇದ್ದೇವಲ್ಲ! ಸಮಾಜದಲ್ಲಿ ಮರ್ಯಾದೆಗೆ ಅಷ್ಟು ಸಾಕು! ಅಷ್ಟೇ! ಗಂಡ! ಯಜಮಾನ, ಸಹಧರ್ಮಿಣಿ ಆಕೆ! 

ಮತ್ತೆ ಪ್ರೀತಿ, ನಂಬಿಕೆ, ಅಪ್ಪುಗೆ
ಕೇಳಬೇಡಿ, ಅದು ಅವರ ಬದುಕು
ಪರರ ಚಿಂತೆ ನಮಗೇಕೆ ಬೇಕು
ಮಾತನಾಡುವ ನಾವು ನಮ್ಮ ಬಗ್ಗೆ

ನನಗೆ ಅವನು ಅವನಿಗೆ ನಾನು
ಕಷ್ಟದಲ್ಲೂ, ಸುಖದಲ್ಲೂ
ಮತ್ತೆ ಮಾತಿನಲ್ಲೂ, ಮೌನದಲ್ಲೂ
ಅಷ್ಟೇ ಅಲ್ಲ. ಇಂದೂ. ನಾಳೆಯೂ
ಬೇರು, ಮರ ಬಳ್ಳಿ, ಹೂವು, ಕಾಯಿ, ಹಣ್ಣು???
ಎಲ್ಲಾ ಒಂದೇ.. ಪ್ರೀತಿ. ನಂಬಿಕೆ ಅಷ್ಟೇ!
ಮತ್ತೇನಿದೆ ಈ ಜಗದಲ್ಲಿ ಮಣ್ಣು!
@ಹನಿಬಿಂದು@
20.04.2025

ಶುಕ್ರವಾರ, ಏಪ್ರಿಲ್ 11, 2025

ನಾನೇ ನೀನು

ನಾನೇ ನೀನು

ನಿತ್ಯ ನೆನಪು ಮಾಡಿಕೊಂಡು
ಸತ್ಯವೆಲ್ಲ ಹೇಳಿಕೊಂಡು
ಮಿಥ್ಯವಿರದ ಸ್ತುತ್ಯಾರ್ಹ ಬದುಕು ನಮ್ಮದು

ನಾನೇ ನೀನು ಎಂದುಕೊಂಡು
ನನಗೆ ನೀನೆ ಅಂದುಕೊಂಡು
ಬಾಳು ನಡೆಸೋ ಧೈರ್ಯ ಸದಾ ನಮ್ಮದು

ಅವರು ಇವರು ಇದ್ದರೇನು
ಕೊಡುವರೇನೋ ಬರುವರೇನು
ನಾಲ್ಕು ಮಾತು ಸರಳ ನಗುವು ಅಷ್ಟೇ ನಮ್ಮದು

ನೂರಾರು ಯೋಜನೆಗಳು
ಸಾವಿರಾರು ಕಾರ್ಯಗಳು
ನಡುವೆ ಪ್ರೀತಿ ರೀತಿ ನೀತಿ ನಮ್ಮದು

ರಾಜ್ಯ ಜಿಲ್ಲೆ ಎಲ್ಲೆ ಮೀರಿ
ರಾಷ್ಟ್ರ  ದೇಶ ಒಂದೇ ಎನುವ
ಸಾಮರಸ್ಯದ ಜೀವ ಎರಡು ಜನರದು

ಸಿಹಿಯ ಮಾತು ಸವಿಯ ನೋಟ
ಕೆಲಸದಲ್ಲಿ ಒಂದೇ ಕೂಟ
ಸರ್ವ ಹಿತವ ಬಯಸುವಂಥ ಭಾವ ನಮ್ಮದು

ನಾನು ನೀನು ಬೇರೆ ಅಲ್ಲ
ಪ್ರೇಮವೆಂಬ ಕೊಂಡಿ ಎಲ್ಲಾ
ಒಟ್ಟು ಸೇರಿ ಜಗವ ಗೆಲುವ ಪಯಣ ನಮ್ಮದು
@ಹನಿಬಿಂದು@
10.04.2025

ಶುಕ್ರವಾರ, ಮಾರ್ಚ್ 14, 2025

ಶಾಲೆ ಬೇಕು

ಶಾಲೆ ಬೇಕು

ಕಲಿಕೆಗೆ ಮೂಲದ ಬೇರನು ಉಳಿಸಲು
ಜ್ಞಾನದ ಕವಲಿನ ಸಾರವ ಗಳಿಸಲು
ಹರಿಸುತ ವಿದ್ಯೆಯ ಸಾಗರ ಸೇರಲು
ವಿಶ್ವದ ಜನತೆಗೆ ಸಹಾಯ ಮಾಡಲು 

ಜಾತಿ ಧರ್ಮಗಳು ಒಂದೇ ಎನಲು
ನೀತಿ ನಿಯಮಗಳ ಪಾಲಿಸಿ ಬದುಕಲು
ಹಿರಿಯರು ಹೇಳಿದ ಮಾರ್ಗದಿ ನಡೆಯಲು
ಕಿರಿಯರ ತಿದ್ದುತ ಸಂಸ್ಕೃತಿ ಕಲಿಸಲು 

ಮೋಸ ವಂಚನೆಯ ಹಾದಿಯ ಬಿಡಲು
ನಾಡು ನುಡಿಗಳ ಹಾಡನು ಹಾಡಲು
ಕಾಡು ಮೇಡುಗಳ ನಿತ್ಯವೂ ಬೆಳೆಸಲು
ಪ್ರತಿ ಕಾರ್ಯದಲಿ ವಿಜ್ಞಾನವ ಮಿಳಿಸಲು

ಹೊಸ ಹೊಸ ಕಲಿಕೆಗೆ ಪ್ರೋತ್ಸಾಹ ನೀಡಲು
ಹಳೆ ಆಲೋಚನೆಗಳ ಸತ್ಯವ ಅರಿಯಲು
ಒಳ್ಳೆಯ ಗುಣಗಳ ಪಾಲಿಸಿ ಸಲಹಲು 
ಆರೋಗ್ಯ ಭಾಗ್ಯ ನೆಮ್ಮದಿ ಹುಡುಕಲು

ಶಿಕ್ಷಕ ಗುರುಗಳ ಗೌರವ ಏರಲು
ರಕ್ಷಕ ಪೋಷಕರ ಮಹತ್ವ ತಿಳಿಸಲು
ಭಕ್ಷಕರಾಗದೆ ಸಮಾಜದಿ ಬಾಳಲು
ಮಾನವತೆ ಅನುಸರಿಸಿ ಬೆಳೆದು ನಗಲು 

ಮುಂದೆ ಹೇಗೆ ಎಲ್ಲವ ತಿಳಿಸಲು
ಹಿಂದಿನ  ಅಸ್ಮಿತೆ ಸಿಂಹಾವಲೋಕನ ಮಾಡಲು
ಬದುಕಿನ ರಥದ ಚಕ್ರವ ಎಳೆಯಲು
ಸಿಡುಕಿನ ಗುಣವನು ಕಳೆಯುತ ನಡೆಯಲು

ಅಕ್ಷರ ತಿದ್ದುತ ಪಾಠವ ಕಲಿಯಲು
ತಕ್ಷಣ ಆತುರ ಮಾಡದೆ ತಡೆಯಲು
ಮೋಕ್ಷ ಪ್ರಾಪ್ತಿಯ ಮಾರ್ಗ ಹುಡುಕಲು
ಸಾಕ್ಷಿ ಸಮೇತ ಚೆನ್ನಾಗಿ ಉಸಿರಾಡಲು

ಸರ್ವರ ಜೊತೆಯಲಿ ಒಂದಾಗಿ ಬಾಳಲು
ಗರ್ವದ ಗುಣವನ್ನು ಮರೆತು ಬೆರೆಯಲು
ಕರ್ಮದ ಹಾದಿಯ ಹಿಡಿದು ಸಾಗಲು
ಸತ್ವಯುಕ್ತ ಕ್ಷಣಗಳಲ್ಲಿ ಯುಕ್ತಿಯಿಂದ ನೆಲೆಸಲು
@ಹನಿಬಿಂದು@
04.03.2025
 






ಪ್ರೀತಿ

ಪ್ರೀತಿ

ಪ್ರೀತಿ ಹೂ ಅರಳಿಸಿದ ಬಾಳ ಬೆಳಕು ನೀಡಿದ
ಮೊಗ್ಗನ್ನು ಹೂವಾಗಿಸಿ ಮೊಗೆ ಮೊಗೆದು ಜೇನ ಹೀರಿದ
ಕಾಣದ ಕನಸಿನ ಲೋಕಕ್ಕೆ ಎತ್ತಿ ಕೊಂಡೇ ಹೊತ್ತೊಯ್ದ
ನನ್ನೆದೆಯ ಕೋಣೆಯ ಬಾಗಿಲು ತಟ್ಟಿ ಒಳಹೊಕ್ಕು ಬೀಗ ಹಾಕಿದ
ನಿಶೆಯ ನಶೆಯಲಿ ಮೈ ಮರೆವ ನಶೆಯ ಹಚ್ಚಿಸಿದ

ಕಾದಾರಿದ ನೀರಿನ ದಾಹವನು ತಣಿಸಿದ
ಒಳಗೂ ಹೊರಗೂ ಹೊಕ್ಕಿ ಹಕ್ಕಿಯಂತಾದ
ಸುಖದ ಸುಪ್ಪತ್ತಿಗೆಯಲಿ ತೇಲಾಡಿದ 
ಅನುಭವಗಳ ಗರಿಗೆದರಿಸಿ ಹಾರಾಡಿಸಿದ

ಮುತ್ತನಿತ್ತು ಮತ್ತು ಬರಿಸಿ ಮುದ್ದಾಡಿದ
ಮತ್ತೆ ಮತ್ತೆ ಬೇಕೆನುವ ಸುಖವ ನೀಡಿದ
ಬತ್ತಳಿಕೆಯ ಬಾಣಗಳನ ಹೂಡಿ ಗೆದ್ದ
ಸುತ್ತ ಮುತ್ತ ಸುಳಿದು ಬಂದು ಜೊತೆಯಾದ

ಮೌನದಲ್ಲು ಮಾತನಾಡಿ ಹೃದಯ ಗೆದ್ದ 
ಸೌಜನ್ಯದ ಗುಣವ ತೋರಿ ಮನವ ಕದ್ದ
ಗೌರವಯುತ ಮಾತಿನೊಡನೆ ನಗೆಯು ಸಿದ್ದ
ಹೌಹಾರದೆ ಹನಿಯ ಜಗದ ಒಳಗೆ ಬಂದ
@ಹನಿಬಿಂದು@
11.03.2025

ಚಿಟ್ಟೆಯಾಗ ಬೇಕಿದೆ

ಚಿಟ್ಟೆಯಾಗ ಬೇಕಿದೆ

ಚಿಟ್ಟೆಯಾಗಬೇಕಿದೆ ಮೈ ಮನಗಳಿಂದು
ಅಟ್ಟದ ಮೇಲೆ ನಡೆಯುತ ಬೆಂದು
ಕಷ್ಟದ ಹಾದಿಯ ತಿಳಿಯುತ ನಿಂದು
ಬೆಟ್ಟದ ಹಾಗೆ ಕಠಿಣ ಬದುಕ ಸಿಂಧು! 

ಮೊಟ್ಟೆಯ ಹಾಕುವ ಕೋಳಿಯ ತೆರದಿ 
ಕೆಟ್ಟರೂ ಸರಿ ಪಡಿಸುತ ಭವ ಭರದಿ
ಸುಟ್ಟರೂ ಭಾವವ ಅತ್ತಿತ್ತ ಮಂದಿ
ಜುಟ್ಟನು ಹಿಡಿದು ಜಗ್ಗಿದರೂ ಹಿಂಡಿ 

ಪೆಟ್ಟನು ತಿನ್ನುವ ಶಿಲೆಗಳ ಹಾಗೆ
ಭಟ್ಟನು ಪೂಜಿಪ ಮೂರ್ತಿಯ ಹಾಗೆ
ರಟ್ಟೆಯ ಬಲವು ಉಡುಗುವವರೆಗೆ
ನೆಟ್ಟಗೆ ನಿಲ್ಲಲು ಶಕ್ತಿಯಿರುವವರೆಗೆ

ಕೆಟ್ಟರೂ ಕೆಡದ ಬಾಳಿನ ಕಡೆಗೆ
ದಿಟ್ಟಿಸಿ ನೋಡುತ ಭವಿಷ್ಯದೆಡೆಗೆ
ಉಟ್ಟ ಬಟ್ಟೆಯಲೇ ದುಡಿಯುವವಗೆ
ಪುಟ್ಟ ಕಂದನ ಆಸಕ್ತಿಯ ಹಾಗೆ
@ಹನಿಬಿಂದು@
10.03.2025

ಒಂದು ರಾತ್ರಿ

ಒಂದು ರಾತ್ರಿ

ಬಂತು ಬಂತು ಮಳೆ ಬಂತು
ಜೊತೆಯಲಿ ಗಾಳಿಯನು ತಂತು 
ಹರಡಿದ ಬಟ್ಟೆಯು ಜಾರಿತು ಕೆಳಗೆ
ಬಿಡಿಸಿಟ್ಟ ಮಂದರಿ ಹಾರಿತು ಹೊರಗೆ

ಗುಡು ಗುಡು ಸಿಡಿಲು ಬಡಿಯುತಲಿರಲು
ಸುಡು ಸುಡು ಕಾಫಿಯ ಕುಡಿಯುತಲಿರಲು
ಬದಿಯಲಿ ಮಕ್ಕಳು ಕುಳಿತಿರಲು
ಗಡಿಗೆಯ ತುಂಬಾ ಗೆಣಸಿನ ಹೋಳು 

ಚಪ್ಪರಿಸಿ ತಿಂದರು ಎಲ್ಲಾ ಮಕ್ಕಳು
ಕಥೆಯನು ಹೇಳುತ ಅಜ್ಜಿಯೂ ನಕ್ಕಳು
ಕಥೆಯು ತಾ ಕೊನೆಯತ್ತ ಬಂತು
ಗೆಣಸಿನ ಹೋಳು ಮುಗಿದಾಯ್ತು

ಕಾಫಿಯ ಲೋಟವ ತೊಳೆದಾಯ್ತು
ಕರೆಂಟು ಹೋಗಿ ಟೈಮಾಯ್ತು 
ಮಲಗಲು ಸೆಕೆಯೂ ಬಿಡದಾಯ್ತು
ಬಾಗಿಲು ತೆಗೆಯಲು ಭಯವಾಯ್ತು
@ಹನಿಬಿಂದು@

ಗುರುವಾರ, ಡಿಸೆಂಬರ್ 26, 2024

ಅವನು



ಅವನು


ಬಳೆ ಮಾರಿ, ಗುಜಿರಿ ಹೆಕ್ಕಿ
ವಿಂಗಡಿಸಿ ರಾಶಿ ಹಾಕಿ
ಪಿನ್ನು, ಗೊಂಬೆ, ಪೇಪರ್
ಬಟ್ಟೆ -ಬರೆ , ಮೀನು-ಮಾಂಸ
ಪಾತ್ರೆ - ಪಗಡಿ ತಿಂಡಿ - ಗಿಂಡಿ
ಏನಾದರೂ ಸರಿ ಕೂಲಿ ಕಾರ್ಯ
ಆದರೂ ಆದೀತು ಬಾಳಿಗೆ!

ಮಾರಿ, ದುಡಿದು, ದಣಿದು
ಬೆವರಿಳಿಸಿ ಹಗಲು ಇರುಳು
ಕಾಯಕದಿ ದೇಹ ದಂಡಿಸಿ
ಎಲ್ಲರೂ ಮಾಡುವುದು
ಹೊಟ್ಟೆ ಬಟ್ಟೆ ಕುಟುಂಬಕ್ಕಾಗಿ

ದಂಧೆ ಕೊಲೆ ಕಳ್ಳತನ
ಪರ ನಾರಿಯ ಮಾನಭಂಗ
ನಾಯಿ ಬೆಕ್ಕಿನ ಪ್ರಾಣಭಂಗ 
ಎಲ್ಲವೂ ಯಾಕಾಗಿ ಜಗದಿ
ಕುಟುಂಬದ ಹಿತಕ್ಕಾಗಿ

ಪರರ ಹಿಂಸಿಸಿ ಭಂಜಿಸಿ
ಇತರರ ಕದ್ದು ಒದ್ದು ಬಿದ್ದು
ಪೆಟ್ಟು ತಿಂದು. ಕೊಟ್ಟು ಪಡೆದು
ಹಲವರಿಗೆ ಮನ ನೋಯಿಸಿ ಬೈದು
ತಾ ಮೂರು ಹೊತ್ತು ತಿಂದು 
ತಿನ್ನದೆಯೇ ಮನೆಗೆ ತಂದು
ಬಿಸಾಕಿ ಹೊಸಕಿ ಕೆದಕಿ
ತದುಕಿ ಹೇಗೋ ಬದುಕಿ

ಮತ್ತೇಕೆ  ಇದೆಲ್ಲಾ ಗೋಳು?
ಒಂಟಿ ಜೀವಕ್ಕೆ ಕಷ್ಟವೇ ಬಾಳು
ಎಲ್ಲವೂ ಹೊಟ್ಟೆಗಾಗಿ 
ಕುಟುಂಬದ ಜವಾಬ್ದಾರಿಗಾಗಿ
@ಹನಿಬಿಂದು@
14.10.2024