ಬುಧವಾರ, ಫೆಬ್ರವರಿ 23, 2022

ಅಜ್ಞಾನದ ಜ್ಞಾನ

ಜ್ಞಾನದ ಅಜ್ಞಾನ

ಜ್ಞಾನವೆನಗಿಹುದು ಎಂಬ ಅಜ್ಞಾನದಿ ಬದುಕುವರು
ಜ್ಞಾನವಿಲ್ಲದ ಕಡು ಮೂರ್ಖ ಜನರು
ಜ್ಞಾನಗಳಿಸಲು ಹಲವು ಪುಸ್ತಕಗಳನೋದಿ 
ಜೊತೆಗೊಂದಷ್ಟು ದೇಶಗಳ ಸುತ್ತಿ
ಮೆದುಳ ಶಕ್ತಿಯನು ಬೆಳೆಸಬೇಕಲ್ಲವೇ?

ಅಜ್ಞಾನದ ಕತ್ತಲೆಯ ಹೊಡೆದೋಡಿಸುವುದು ಜ್ಞಾನದ ತಿಮಿರ
ಸುಜ್ಞಾನದ ಅರಿವ ಬೆಳೆಸುವುದು ಅಜ್ಞಾನಿಗೆ ಜ್ಞಾನ ಸಾಗರ
ಜ್ಞಾನವಂತಗೆ ಜ್ಞಾನವನು ಧಾರೆ ಎರೆವುದು ಸುಜ್ಞಾನದ ಹೊಳೆಯೇ
ಅಜ್ಞಾನಿಯ ಗರ್ವವ ತಗ್ಗಿಸಿ ಜ್ಞಾನದ ಸಿಹಿ ಹಂಚುವುದು ತಿಳಿವೆ..

ಜ್ಞಾನ ಅಜ್ಞಾನದ ಮುಖಗವಸಿನ ಅಡಿಯಲಿ ಬೆಂದು ಹೋಗುತ್ತಿದೆ
ಜ್ಞಾನ ಕರೋನ ವೈರಸ್ ನಂತೆ ತಲೆ ಮರೆಸಿ ಯಾರಿಗೂ ಕಾಣ ಸಿಗದೆ ಸುತ್ತಾಡುತ್ತಿದೆ

ಜ್ಞಾನವ ಕಟ್ಟಿ ಹಾಕಲಾಗಿದೆ ಅಜ್ಞಾನದ ಅಂಧಕಾರದ ಕೂಪದಲಿ
ಜ್ಞಾನವ ಬಂಧಿಸಲಾಗಿದೆ ಅಜ್ಞಾನವೆಂಬ ಜೈಲಿನಲಿ
ಜ್ಞಾನವ ಕಣ್ಣಿಗೆ ಬಟ್ಟೆ ಕಟ್ಟಿದ ಕುರುಡು ನ್ಯಾಯಾಲಯದ ಒಳಗೆ ಕಟ್ಟಿ ಹಾಕಲಾಗಿದೆ
ಜ್ಞಾನಕ್ಕೆ ಇಲ್ಲದೆ ಬೆಲೆ ಅಜ್ಞಾನ ಎಂಬ ರಾಜಕೀಯ ನಮ್ಮನ್ನು ಆಳಲು ಬಿಡಲಾಗಿದೆ..
@ಪ್ರೇಮ್@
23.02.2022

ಬುಧವಾರ, ಫೆಬ್ರವರಿ 9, 2022

116

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -116

ಟೆನ್ಷನ್! ಎಲ್ ಕೆ ಜಿ ಮಗುವಿನಿಂದ ಹಿಡಿದು ನಾಳೆ ಸಾಯೋ ಹಣ್ಣು ಹಣ್ಣು ಮುದುಕರ ವರೆಗೂ ಬದುಕಲ್ಲಿ ಮರೆತು ಹೋಗಿರುವುದು ನಗು, ಬೆರೆತು ಹೋಗಿರುವುದು ಟೆನ್ಷನ್. ಆ ಟೆನ್ಷನ್ ಕಡಿಮೆ ಆಗದೆ ಇರಲು ಕೂಡು ಕುಟುಂಬದ ಅವನತಿ ಕಾರಣವಾಗಿದೆ. ಅಲ್ಲಿ ಹಂಚಿ ತಿನ್ನುವುದು, ಸಹಕಾರ, ಕೂಡಿ ಬಾಳುವ ಗುಣ, ಹಿತ ಮಿತ ಎಲ್ಲವೂ ಇತ್ತು. ಈಗ ಎಲ್ಲವೂ ಇದೆ, ಹಣ, ಐಷಾರಾಮಿ ಬದುಕು, ವ್ಯಾಪಾರ ಎಲ್ಲಾ ಇದೆ, ಬುದ್ಧಿ ಇಲ್ಲ! ಆರೋಗ್ಯ ಇಲ್ಲ, ನೆಮ್ಮದಿ ಇಲ್ಲ. 
ಮನೆಗಳು, ಕಾರುಗಳು ವಿಶಾಲವಾಗುತ್ತ ಹೋದಂತೆ ಮನಗಳು, ಹೃದಯಗಳು ಸಂಕುಚಿತ ಗೊಂಡಿವೆ. ಮಹಿಳೆಯರನ್ನು ಕಾಣುವ ನೋಟವೂ, ಗೋವುಗಳನ್ನು ಕಾಣುವ ನೋಟವೂ ಬದಲಾಗಿದೆ. ಹಲವರಿಗೆ ದೇವರ ಗುಡಿಯಲ್ಲಿ ಭಕ್ತಿಯ ಭಾವ ಮರೆತು,  ಹೆಣ್ಣಿನೊಡನೆ ತನ್ನ ದೈಹಿಕವಾದ ದಾಹ ತೀರಿಸುವ ಕೇಂದ್ರ ಅದಾಗಿದೆ. ಆ ನಿಟ್ಟಿನಲ್ಲಿ ಹಣ ಕೇಳುವ ಕೆಲಸದಲ್ಲಿ ಹಣ ಕೀಳುವ ಉದ್ಯೋಗಗಳು ಹಲವಾರು ಸೃಷ್ಟಿ ಆಗಿವೆ. ಕೆಲವು ಡಾಕ್ಟರ್ ಗಳು, ಲಾಯರ್ ಗಳು, ಸರಕಾರಿ ಅಧಿಕಾರಿಗಳು ಅಮಾಯಕ ಜನರನ್ನು ಹಗಲು ದರೋಡೆ ಮಾಡಿದರೆ, ಸೈಬರ್ ಕಳ್ಳರು ಕಲಿತ, ಹಣ ಇರುವವರನ್ನು ಬೋಳಿಸಿ ಬಿಡುತ್ತಾರೆ. ಆಸ್ಪತ್ರೆಯಲ್ಲಿ ಇರುವ ಅಮಾಯಕ ರೋಗಿಗಳ ಹೆಸರಿನಲ್ಲೂ ಹಣದ ಹೊಳೆ ಹರಿದು ಅದು ಮತ್ತೆಲ್ಲೋ ಹೋಗುತ್ತದೆ. ಒಟ್ಟಾರೆ ಜನಕ್ಕೆ ತಮ್ಮ ಖಜಾನೆ ಭರ್ತಿ ಆದರೆ ಸಾಕು. ಹೆಸರು ಯಾರದೋ. 
ಇನ್ನು ಸರಕಾರದಿಂದ ಬರುವ ಸೂರಿನ ಯೋಜನೆ ಮನೆ ಇಲ್ಲದವರ ಬದಲು ಮೊದಲೇ ಮನೆ ಕಟ್ಟಿ, ಬಾಡಿಗೆ ಕೊಡಲಿರುವ ಮನೆಯ ಓನರ್ ಗೆ ಹೋಗುತ್ತದೆ. ಮನೆ ಇಲ್ಲದವ ಬಾಡಿಗೆ ಮನೆಯಲ್ಲಿಯೇ ಕೊಳೆಯುವಂತೆ ಆಗಿದೆ. ಸರಕಾರಿ ನೌಕರರಿಗೆ ಇರುವ ಕ್ವಾರ್ಟರ್ಸ್ ಗಳು ಯಾರೋ ಪರಿಚಯ, ಇನ್ಫ್ಲುಯೆನ್ಸ್ ಇರುವವರ ಪಾಲಾಗುತ್ತವೆ. ಅಲ್ಲದೆ ಅವುಗಳ ಪರಿಸ್ಥಿತಿ ಕೂಡಾ ಕೆಲವು ಕಡೆ ಮನುಷ್ಯ ವಾಸಕ್ಕೆ ಯೋಗ್ಯವಾದ ಹಾಗಿಲ್ಲ. 
ಇದರ ನಡುವೆ ಖಾಸಗಿ ಕಂಪನಿಗಳಲ್ಲಿ ಕೆಲಸದ ಒತ್ತಡ ಇದ್ದರೆ ಸರಕಾರಿ ಕಚೇರಿಗಳಲ್ಲಿ ಶಾಲೆಗಳಲ್ಲಿ ಕೆಲಸಕ್ಕಿಂತಲೂ ಹೆಚ್ಚು ರೆಕಾರ್ಡ್ ಬರೆದು ಸಬ್ಮಿಟ್ ಮಾಡುವ, ಅಪ್ಲೋಡ್ ಮಾಡುವ ಹೊರೆ. ಇದ್ದವ ಕೊಡಲ್ಲ, ಕೊಡಬೇಕು ಎನ್ನುವವನ ಬಳಿ ಇಲ್ಲ. ಹೀಗಿರಲು ಕೊನೆಯಲ್ಲಿ ಒಂದು ದಿನ ಬದುಕು ಎಂದರೆ ಇಷ್ಟೇ ಅನ್ನಿಸಿದಾಗ ಇಷ್ಟೇನಾ ಅನ್ನಿಸಿದಾಗ ಸಾವು ಬರಲಿ ಎಂಬ ಭಾವದಿಂದ ಸಾವನ್ನು ಇದಿರುಗೊಳ್ಳಲು ತಯಾರಿ ನಡೆಸುವುದೇ ಜೀವನ. 
ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಹೌದು ಗೆಳೆಯರೇ, ವಿಧಿ ನಡೆಸಿದಂತೆಯೇ ನಡೆಯುವುದೇ ಹೊರತು ಎಷ್ಟು ಹಣ ಮಾಡಿ ಕೂಡಿಟ್ಟರೂ ವಿಧಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎಂಬ ಸತ್ಯವನ್ನು ರಾಮು, ಪುನೀತ್ ರಾಜಕುಮಾರ್ ಇವರ ಸಾವು ನಮ್ಮೆದುರು ಎಚ್ಚರಿಸಿ ಸಾರಿ ಸಾರಿ ಹೇಳಿತು. ಇವರಲ್ಲಿ ಪ್ರಪಂಚದ ಯಾವ ಮಹಾನ್ ಡಾಕ್ಟರ್ ಆಗಿದ್ದರೂ ಸರಿ, ಅವರನ್ನು ಕರೆಸಿ ಟ್ರೀಟ್ಮೆಂಟ್ ತೆಗೆದುಕೊಳ್ಳುವಷ್ಟು ಹಣವಿತ್ತು. ಆದರೆ ವಿಧಿ ಅವರ ಬಾಳಿನಲ್ಲಿ ಆಟವಾಡುವುದನ್ನು ಬಿಡಲಿಲ್ಲ. ಇದು ಅವರ ಬಾಳಿಗೆ ಮಾತ್ರ ಅನ್ವಯ ಅಲ್ಲ. ನಮ್ಮ ಬಾಳಲ್ಲೂ ಕೂಡಾ. ನಿಮ್ಮ ಕನಸು ಏನೇ ಇರಲಿ ನೀವು ಸಾಗುವುದು ವಿಧಿಯ ದಾರಿಯಲ್ಲೇ ಅಲ್ಲವೇ? 

ಬದುಕು ನಿಂತ ನೀರಲ್ಲ ಹರಿಯುವ ನದಿ. ಸೂರ್ಯ ಚಂದ್ರರಿಗೂ ಗ್ರಹಣವಿದೆ. ನಮ್ಮ ಬದುಕಲ್ಲಿ ಇರದೇ ಇರಲು ಸಾಧ್ಯವೇ? ಮಾನವನಾದ ಮೇಲೆ ಕಣ್ಣೀರು ಹಾಕದೆ ಬದುಕಿದ ಜೀವಿ ಇರುವುದೇ? ಒಂದು ವೇಳೆ ಸಿರಿವಂತರಿಗೆ ಕಷ್ಟಗಳೇ ಇಲ್ಲ ಎಂದಾದರೆ ನಾಡಿನ ಗತ ಮುಖ್ಯಮಂತ್ರಿಗಳ ಮೊಮ್ಮಗಳು ತನ್ನನ್ನು ತಾನೇ ಸಾಯಿಸಿ ಕೊಲ್ಲುವ ಸಂದರ್ಭ ಬರುತ್ತಿತ್ತೆ? ಇಡೀ ಕಾಫಿ ಬ್ಯುಸಿನೆಸ್ ನ ಮಾಲೀಕ ಸಾಯುತ್ತಿದ್ದರೆ? ಖಂಡಿತ ನೆಮ್ಮದಿ ಹಣದೊಡನೆ ಇಲ್ಲ, ಹೃದಯ ಮನಸ್ಸು, ಆಲೋಚನೆಗಳ ಜೊತೆಗೆ ಇದೆ. ಅಲ್ಲವೇ?

ಮನೆ, ತೋಟ, ಅಂಗಡಿ ಎಲ್ಲಾ ಸುಟ್ಟು ಹೋದರೂ ಜನ ಬದುಕುತ್ತಾರೆ, ಮತ್ತೆ ಮೊದಲಿಂದ ಜೀವನ ಕಟ್ಟುತ್ತಾರೆ. ಅದು ಅವರ ಮಾನಸಿಕ ಸಾಮರ್ಥ್ಯ, ಧೈರ್ಯ. ಬದುಕಲ್ಲಿ ರ್ಯಾಂಕ್ ಗಿಂತಲೂ, ಡಿಗ್ರೀಗಿಂತಲೂ ಮುಖ್ಯವಾಗಿ ಬೇಕಾದದ್ದು ಇದೇ ಅಲ್ಲವೇ? ಹಾಗಾಗಿ ಅಕ್ಷರ ಜ್ಞಾನ ಇಲ್ಲದ ಹಲವಾರು ಮಂದಿ ಕೊಟ್ಯಾಧೀಶರಾಗಿ ಮೆರೆಯುತ್ತಿದ್ದಾರೆ. ಅಕ್ಷರದ ಹಲವಾರು ಡಿಗ್ರಿ ಪಡೆದ ಮೊದಲ ರ್ಯಾಂಕ್ ಸ್ಟೂಡೆಂಟ್ಸ್ ಕೆಲಸ ಸಿಗದೇ ಅಳೆಯುವುದು ಅದರ ಜೊತೆಗೆ ಬದುಕು ಸಾಗಿಸಲು ಸಾಧ್ಯ ಆಗದೆ ಸಾಯುತ್ತಿದ್ದಾರೆ. ನಮ್ಮಲ್ಲಿ ವಿಲ್ ಪವರ್ ಹೆಚ್ಚಿಸಿ ಕೊಳ್ಳೋಣ. ಪ್ರೀತಿ, ಧೈರ್ಯ, ತಾಳ್ಮೆ ಗಳಿಸಿ ಸಂತಸದಿಂದ, ನೆಮ್ಮದಿ, ತೃಪ್ತಿಯಿಂದ ಬಾಳೋಣ. ಉತ್ತಮ ಆರೋಗ್ಯಕ್ಕಾಗಿ ಆ ದೇವರಲ್ಲಿ ನಿತ್ಯ ಬೇಡೋಣ. ನೀವೇನಂತೀರಿ?
@ಪ್ರೇಮ್@

117

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -117

ನಮ್ಮ ಮಕ್ಕಳನ್ನು ನಾವು ತುಂಬಾ ಚೆನ್ನಾಗಿ ಸಾಕುತ್ತಿದ್ದೇವೆ. ಕಾರಣಗಳು ಹಲವು. ಮೊದಲನೆಯದು ನಾನು ಕಷ್ಟ ಪಟ್ಟಿದ್ದು ಅದು ನನಗೇ ಸಾಕು, ನಮ್ಮ ಮಗುವಿಗೆ ಬೇಡ ಎಂದೋ, ನಮ್ಮ ಮಗು ಸಿರಿವಂತರ ಮಕ್ಕಳ ಹಾಗೆ ಬೆಳೆಯಲಿ ಎಂದೋ, ನಮ್ಮ ಮಗು ಯಾರಿಗಿಂತ ಏನು ಕಡಿಮೆ ಎಂದೋ, ಮಕ್ಕಳು ತಪ್ಪು ಮಾಡದೇ ಇನ್ಯಾರು ಮಾಡುವರು ಎಂದೋ, ಮಗು ಅಲ್ವಾ ಇರಲಿ, ಎಂದು ಅದು ಕೇಳಿದ್ದನ್ನೆಲ್ಲಾ ತೆಗೆದು ಕೊಟ್ಟು ಅವರ ಮೆದುಳನ್ನು ನಿಷ್ಕ್ರಿಯಗೊಳಿಸುವವರು ನಾವೇ. 

ಕಾಲ ಬದಲಾಗಿದೆ,ಡಿಜಿಟಲ್  ಪ್ರಪಂಚ ಚಿಕ್ಕದಾಗಿದೆ,ಮೊಬೈಲ್ ನಲ್ಲಿ ಕೆಲಸ ಮಾಡಲು ಮಕ್ಕಳು ಹಿರಿಯರಿಗಿಂತ ಹೆಚ್ಚು ಕಲಿತಿದ್ದಾರೆ. ಇನ್ನು ಹಾಡು, ನೃತ್ಯ, ಭಾಷಣ, ಸಂಭಾಷಣೆ, ನಟನೆ ಎಲ್ಲದರಲ್ಲೂ ಹಿರಿಯರನ್ನು ಮೀರಿಸಿ ಬೆಳೆದಿದ್ದಾರೆ ಮಕ್ಕಳು. ಹಾಗಿರುವಾಗ ಕಲಿಸುವ ವಿಧಾನವೂ ಬದಲಾಗ ಬೇಕು ಎಂದು ಡಿಜಿಟಲೀಕರಣಗೊಳಿಸಿ ಆಯಿತು. ಶಿಕ್ಷಕರ ಮಾತನ್ನೇ ಕೇಳದ ಮಕ್ಕಳು ಎಷ್ಟು ಹೊತ್ತು ಸ್ಕ್ರೀನ್ ಅಥವಾ ಕಂಪ್ಯೂಟರ್ ನೋಡಿಯಾರು? ಅದು ಕೂಡಾ ನೂಡಲ್ಸ್ ತಿನ್ನುವ ಮಕ್ಕಳಿಗೆ ಗಂಜಿ ಕೊಟ್ಟ ಹಾಗೆಯೇ. ಈಗಿನ ಮಕ್ಕಳಿಗೆ ಮಾಡಿ ಕಲಿ ಎನ್ನುವ ಗಾಂಧೀಜಿ ಅವರ ಕೆಲಸ ಆಧಾರಿತ ಕಲಿಕೆ ಬೇಕು. ಬರೀ ಓದು, ಬರಹದ ಹೊರತಾಗಿ ಬೇರೇನೂ ಇಲ್ಲದ ಶಿಕ್ಷಣ ಬೋರಿಂಗ್ ಅವರಿಗೆ. ಪ್ರೊಜೆಕ್ಟ್ ವರ್ಕ್ ಬೇಗ ಮುಗಿಸುವರು. ಇದಕ್ಕೆ ಬೆಸ್ಟ್ ಅಂದರೆ ಡ್ರಾಯಿಂಗ್, ಪೈಂಟಿಂಗ್, ಪಾಟರಿ, ನೂಲುವುದು, ಮರಗೆಲಸ, ಎಲೆಕ್ಟ್ರಿಕಲ್ ಕೆಲಸಗಳು, ಪ್ಲಂಬಿಂಗ್ , ಆರ್ಕಿಟೆಕ್ಚರ್ ಇತ್ಯಾದಿ. 

ಮಕ್ಕಳ ಗಮನ ಯಾವುದರ ಮೇಲಿದೆ ಎಂಬ ಗಮನ ಪೋಷಕರಿಗೆ ಇಲ್ಲವಾದರೆ ಮಕ್ಕಳು ಬೇಡದ ವಿಷಯಗಳಿಗೆ ತಮ್ಮ ಗಮನ ಕೊಟ್ಟು ಜೀವನ ಹಾಳು ಮಾಡಿಕೊಳ್ಳುವುದು ಗ್ಯಾರೆಂಟಿ. ಪೋಷಕರು ಮಕ್ಕಳಿಗೆ ಬೇಕು ಬೇಕೆಂದುದನು ಅಂಗಡಿಯಿಂದ ಕೊಂಡು ತಂದು ಕೊಟ್ಟರೆ ಅವರಿಗೆ ಕಷ್ಟದ ಪರಿಸ್ಥಿತಿ ಹೇಗೆ ತಾನೇ ಅರ್ಥ ಆದೀತು? ತರಗತಿಯಲ್ಲಿ ಪ್ರತಿ ನೋಟ್ ಪುಸ್ತಕದ ಪುಟ ಹರಿಯುವಾಗ "ಇದರಲ್ಲಿ ನನ್ನ ತಂದೆಯ ಬೆವರಿನ ಹಣವಿದೆ" ಎಂದು ಅರಿತ ಮಗ ಅಥವಾ ಮಗಳು ಮತ್ತೆ ಇನ್ನೆಂದೂ ಪುಟವನ್ನು ಹರಿದು ಉಂಡೆ ಕಟ್ಟಿ ಕಸದ ಡಬ್ಬಿಗೆ ಬಿಸಾಕುವಾಗ ಯೋಚನೆ ಮಾಡುತ್ತಾರೆ. ಆದರೆ ಆ ಆಲೋಚನೆಯನ್ನು ಮಕ್ಕಳಲ್ಲಿ ಬಿತ್ತುವಲ್ಲಿ ನಾವು ವಿಫಲರಾಗಿದ್ದೇವೆ ಅಲ್ಲವೇ?

ಮಕ್ಕಳನ್ನು ನಾವು ಹೋಟೆಲ್ ಗೆ ಊಟಕ್ಕೆ ಕರೆದುಕೊಂಡು ಹೋಗುತ್ತವೆ. ಅವರಿಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡ್ತೇವೆ. ಅವರು ಸ್ವಲ್ಪ ತಿಂದು 'ಸಾಕು ' ಎಂದ ಕೂಡಲೇ ಆಯಿತು ಎಂದು ಒಪ್ಪಿ ಬಿಲ್ ಕೊಟ್ಟು ಬರುತ್ತೇವೆ. ಈಗಿನ ಅಮ್ಮಂದಿರಿಗೆ ಡಯೆಟ್ ರೋಗ ಶುರು ಆಗಿರುವ ಕಾರಣ ಮಕ್ಕಳ ಊಟ ಅವರು ತಿನ್ನಲಾರರು. ಮತ್ತೆ ಆಹಾರದ ಮಹತ್ವ  ಹೆಚ್ಚಿನವರಿಗೆ ತಿಳಿದಿದ್ದರೆ ತಾನೇ? ಅದು ಹಣದ ಮದವೋ, ಸಿರಿವಂತಿಕೆಯ ಅಮಲೋ ಗೊತ್ತಿಲ್ಲ, ಅರ್ಧ ತಿಂದು ಬರುವುದೇ ಸ್ಟೈಲ್ ಅಂದುಕೊಂಡ ಅದೆಷ್ಟೋ ಜನ ಊಟ ಹಾಳು ಮಾಡಿ ಅದೆಷ್ಟೋ ಜನರ ಹೊಟ್ಟೆಗೆ ಕಲ್ಲು ಹಾಕುತ್ತಿದ್ದಾರೆ.  ಒಂದು ತರಕಾರಿಯನ್ನು ಬೆಳೆಸಿ ಸಾರಿಗೆ ಹಾಕುವವರೆಗಿನ ಕಷ್ಟ ರೈತನಿಗೆ ಗೊತ್ತು. ಗಿಡಕ್ಕೆ ನೀರುಣಿಸಿ, ಗೊಬ್ಬರ ಹಾಕಿ, ಪ್ರತಿದಿನ ಪೋಷಣೆ ಮಾಡಿ, ಗಮನಿಸಿ, ಕೀಟಗಳಿಂದ ರಕ್ಷಿಸಿ, ಜೋಪಾನವಾಗಿ ಕಿತ್ತು ಗಾಡಿಯಲ್ಲಿ ಸಾಗಿಸಿ ಅಂಗಡಿಗೆ ತಲುಪಿಸುವ ಕಾರ್ಯ ಸುಲಭದ್ದಲ್ಲ. ಇದನ್ನೆಲ್ಲ ಮಕ್ಕಳಿಗೆ ತಿಳಿಸಿ ಹೇಳಿದರೆ ಅವರು ಊಟ ಮಾಡುವಾಗ ರೈತರ ಬಗ್ಗೆ ಯೋಚಿಸುತ್ತಾರೆ. ಆಗ ಊಟ ವೇಸ್ಟ್ ಮಾಡಲಾರರು. 

ಒಬ್ಬರ ಬಳಿ ಮಕ್ಕಳು ಮತ್ತೊಬ್ಬರು ಮಕ್ಕಳು ಜಗಳ ಮಾಡಿಕೊಳ್ಳುತ್ತಾರೆ. ಹೆಚ್ಚು ಬೈಗುಳದ ಪದಗಳು "ನಿನ್ನಪ್ಪ, ನಿನ್ನಜ್ಜಿ "ಎಂದೇ ಇರುತ್ತವೆ. ಆ ರೀತಿ ತಂದೆ ಹಾಗೂ ಹಿರಿಯರಿಗೆ ಬೇಡದ ಮಾತುಗಳನ್ನು ಹೇಳದೆ ಪ್ರತಿಯೊಬ್ಬರ ಹಿರಿಯರಿಗೂ ಗೌರವ ಕೊಡಬೇಕು ಎನ್ನುವ ಭಾವ ಅವರಲ್ಲಿ ಬಂದಲ್ಲಿ ಅವರು ಯಾವ ಹಿರಿಯರಿಗೂ ಎದುರಾಗಿ ಏನೂ ಮಾತನಾಡಲಾರರು. ಹಿರಿಯರು ಮಕ್ಕಳ ಎದುರು ಗಲಾಟೆ ಮಾಡಿಕೊಂಡು ತಮ್ಮ ಕೋಪ ಕಂಟ್ರೋಲ್ ಮಾಡಲು ಸಾಧ್ಯ ಆಗದೇ ಇದ್ದು, ಬೇಡದ ಪದಗಳನ್ನು ಅವರ ಮುಂದೆ ಬಳಸಿದರೆ ಅವುಗಳನ್ನೇ ಮಕ್ಕಳು ಬಳಸುವರು. ಕನ್ನಡ ಚಿತ್ರರಂಗವೂ ಅಷ್ಟೆ ಕೆಟ್ಟದಾಗಿ ಹೋಗಿದೆ, ಈ ಕೆಟ್ಟ ಪದಗಳ ಬಳಕೆಯಲ್ಲಿ. ಎಷ್ಟೇ ಕಟ್ ಮಾಡಿದರೂ ಬೇಡದ ಪದಗಳ ಬಳಕೆ, ಕುಡಿತ, ಕುಣಿತ, ಹೆಣ್ಣು ಮಕ್ಕಳೊಡನೆ ಅಸಭ್ಯ ವರ್ತನೆ ಇಂದಿನ ಸಿನೆಮಾಗಳಲ್ಲಿ ಸರ್ವೇ ಸಾಮಾನ್ಯ. 

ಚಿಕ್ಕ ಮಕ್ಕಳು ಇದನ್ನು ನೋಡಿ ಬೇಗನೆ ಅದೇ ಜೀವನ, ನಾವೂ ಹಾಗೆಯೇ ಮಾತನಾಡಬೇಕು ಎಂದು ಅಂದುಕೊಂಡು ಅಲ್ಲಿದ್ದ ಭಾಷೆ , ಪದಗಳ ಬಳಕೆಗೆ ಪ್ರಾರಂಭಿಸುತ್ತಾರೆ. ಕೆಲವೊಂದು ಧಾರಾವಾಹಿಗಳ ನೋಡಿ ಹಲವಾರು ಮಹಿಳೆಯರು ಆಸ್ತಿಗಾಗಿ ತಮ್ಮ ಮನೆ ಒಡೆದಂತೆ. ಮಾಧ್ಯಮಗಳು ಮಕ್ಕಳ ಮೇಲೆ ಬಹಳ ಪರಿಣಾಮ ಬೀಳುತ್ತವೆ. ನಾವೇ ಯೂ ಟ್ಯೂಬ್ ತೋರಿಸಿ ಊಟ ಮಾಡಲು ಕಲಿಸುತ್ತೇವೆ. ತಂದೆ ತಾಯಿಯರು ತಪ್ಪುವುದು ಇಲ್ಲೇ. ಮಗು ಸುಮ್ಮನಿರಲು ಅವರ ಕೈಗೆ ಮೊಬೈಲ್ ಕೊಟ್ಟು ಬಿಡುವುದು. ಶಾಲೆಗೆ ಬರುವ ವೇಳೆಗೆ ಅವರು ಮೊಬೈಲ್ ನಲ್ಲಿ ಅದೇನು ಅವರ ವಯಸ್ಸಿಗೆ ಬೇಡವೋ ಅದೆಲ್ಲಾ ನೋಡಿ ಆಗಿರುತ್ತದೆ. ಒಂದನೇ ತರಗತಿಗೆ ಬಂದಾಗ ಗಂಡು ಮಗುವೊಂದು ಒಂದು ಚೀಟಿಯಲ್ಲಿ, ಐ ಲವ್ ಯು ಎಂದು ಬರೆದ ಚೀಟಿಯನ್ನು ಟಾಯ್ಲೆಟ್ ರೂಮಿನಲ್ಲಿ ಇನ್ನೊಂದು ಹೆಣ್ಣು ಮಗುವಿಗೆ ನೀಡುವುದನ್ನು, ಅದನ್ನು ನೋಡಿ ಅದೇ ತರಗತಿಯ ಮತ್ತೊಂದು ಮಗು "ಅದು ಈಗ ಅಲ್ಲ, ನೀನು ಅವಳಿಗೆ ಕಾಲೇಜಿಗೆ ಹೋಗುವಾಗ ಕೊಡಬೇಕು" ಎನ್ನುವುದನ್ನು ನಾನು ನೋಡಿದ್ದೇನೆ. 
ಶಾಲೆಯಲ್ಲಿ ಏನೇನು ಒಳ್ಳೆಯ ಗುಣಗಳನ್ನು, ಕಲಿಕೆಯನ್ನು ಕಲಿಯಬೇಕು ಎಂದು ನಾವು ಅಂದುಕೊಳ್ಳುತ್ತೇವೆಯೋ ಅದನ್ನು ಮಕ್ಕಳು ಕಲಿಯುವುದಿಲ್ಲ. ಬದಲಾಗಿ ಏನು ಕಲಿಯಬಾರದು ಅದನ್ನು ಮಾಧ್ಯಮಗಳ ಸಹಾಯದಿಂದ ಬೇಗನೆ ಕಲಿತಿರುತ್ತಾರೆ. ಹುಡುಗಿ, ಮದುವೆ, ಪ್ರೀತಿ ಇದೆಲ್ಲ ಜೀವನದಲ್ಲಿ ಆಟದ ಹಾಗೆ ಎಂದು ಅಂದುಕೊಳ್ಳುತ್ತಾ, ಮುಂದೆ ಅದನ್ನೇ ಮಾಡುತ್ತಾ ಹೋಗುತ್ತಾರೆ. ಪೋಷಕರು ತಮ್ಮ ಗಂಡಾಗಲೀ, ಹೆಣ್ಣಾಗಲೀ ಮಕ್ಕಳನ್ನು ಗಮನಿಸದೆ ಇದ್ದರೆ ಹನ್ನೆರಡು ಹದಿಮೂರು ವರ್ಷದ ಹೆಣ್ಣು ಮಕ್ಕಳು ತಮ್ಮ ಬೆತ್ತಲೆ ಫೋಟೋ ತೆಗೆದು ಅದು ಯಾರಿಗೋ ಪರಿಚಯ ಇಲ್ಲದವರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕಳಿಸಿದ ಸುದ್ದಿಯನ್ನು ನಾವು ಓದುತ್ತೇವೆ! ಗಂಡು ಮಕ್ಕಳು ರಮ್ಮಿ ಯಂತಹ ಆಟಗಳಿಗೆ ತಂದೆ ತಾಯಿಯರ ಬ್ಯಾಂಕ್ ಖಾತೆಯಿಂದ ಹಣ ಹಾಕುವುದು, ಆನ್ ಲೈನ್ ನಲ್ಲಿ ಲಕ್ಷ ಗಟ್ಟಲೆ ಹಣದ ವಸ್ತುಗಳಿಗೆ ಆರ್ಡರ್ ಮಾಡುವುದು ಮತ್ತು ಆ ಹಣ ತಂದೆಯ ಖಾತೆಯಿಂದ ಕಟಾವಣೆ ಆಗುವುದು ಇದೆಲ್ಲ ನಡೆಯುತ್ತದೆ. 

ನಾವು ಇಷ್ಟೆಲ್ಲಾ ದುಡಿಯುವುದು ಮಕ್ಕಳಿಗೇ ಆದರೂ ಮಕ್ಕಳನ್ನು ನೋಡಿಕೊಳ್ಳಲು ನಮಗೆ ಸಮಯ ಇಲ್ಲದಷ್ಟು ದುಡಿತ ಅವರ ಬದುಕನ್ನು ಹಾಳು ಮಾಡುತ್ತದೆ. ಇಂದು ಪೋಷಕರು ಮಕ್ಕಳಿಗೆ ಕೊಡ ಬೇಕಾದುದು ಸಮಯ ಮತ್ತು ಪ್ರೀತಿ. ಶಾಲೆಗೆ ಬರುವಾಗ ಹಣ ಕೊಟ್ಟು ಅವನು ಅಂಗಡಿಗೆ ಹೋಗಿ ಬೇಕಾದ್ದು ತಿಂದು, ಯಾರ್ ಯಾರಿಗೋ ತಿನ್ನಿಸಿ ಹಾಳಾಗುವಂತೆ ಮಾಡುವುದು ಕೂಡ ಪೋಷಕರೇ. ಅವರ ಮುದ್ದು ಮುಂದೊಂದು ದಿನ "ನೀ ಕೊಡದೆ ಹೋದರೆ ನಾ ಸಾಯುವೆ" ಎಂಬಲ್ಲಿ ವರೆಗೆ ಕರೆದುಕೊಂಡು ಹೋಗುತ್ತದೆ. 

ಅತಿಯಾದ ಮುದ್ದು, ಅತಿಯಾದ ಹೊಗಳಿಕೆ, ಅತಿಯಾದ ಶಿಕ್ಷೆ , ಅತಿಯಾದ ಜಾಲ ತಾಣಗಳ ಬಳಕೆ, ಅತಿಯಾದ ಟಿವಿ ವೀಕ್ಷಣೆ ಯಾವುದೂ ಒಳ್ಳೆಯದಲ್ಲ. ಎಲ್ಲದಕ್ಕೂ ಸಮಯ ಸಂದರ್ಭ ಬೇಕು. 'ಇಂತಿಷ್ಟು ಸಮಯ' ಎಂದು ನಿಗದಿ ಪಡಿಸಿದಾಗಲೇ ಸ್ವಯಂ ಶಿಸ್ತು ಬೆಳೆಯುವುದು. ಇದೆಲ್ಲ ಜವಾಬ್ದಾರಿ ಪೋಷಕರಾದ ನಮ್ಮ ಮೇಲಿದೆ ಅಲ್ಲವೇ? ನೀವೇನಂತೀರಿ?
@ಪ್ರೇಮ್@
05.02.2022