ಬುಧವಾರ, ಫೆಬ್ರವರಿ 9, 2022

116

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -116

ಟೆನ್ಷನ್! ಎಲ್ ಕೆ ಜಿ ಮಗುವಿನಿಂದ ಹಿಡಿದು ನಾಳೆ ಸಾಯೋ ಹಣ್ಣು ಹಣ್ಣು ಮುದುಕರ ವರೆಗೂ ಬದುಕಲ್ಲಿ ಮರೆತು ಹೋಗಿರುವುದು ನಗು, ಬೆರೆತು ಹೋಗಿರುವುದು ಟೆನ್ಷನ್. ಆ ಟೆನ್ಷನ್ ಕಡಿಮೆ ಆಗದೆ ಇರಲು ಕೂಡು ಕುಟುಂಬದ ಅವನತಿ ಕಾರಣವಾಗಿದೆ. ಅಲ್ಲಿ ಹಂಚಿ ತಿನ್ನುವುದು, ಸಹಕಾರ, ಕೂಡಿ ಬಾಳುವ ಗುಣ, ಹಿತ ಮಿತ ಎಲ್ಲವೂ ಇತ್ತು. ಈಗ ಎಲ್ಲವೂ ಇದೆ, ಹಣ, ಐಷಾರಾಮಿ ಬದುಕು, ವ್ಯಾಪಾರ ಎಲ್ಲಾ ಇದೆ, ಬುದ್ಧಿ ಇಲ್ಲ! ಆರೋಗ್ಯ ಇಲ್ಲ, ನೆಮ್ಮದಿ ಇಲ್ಲ. 
ಮನೆಗಳು, ಕಾರುಗಳು ವಿಶಾಲವಾಗುತ್ತ ಹೋದಂತೆ ಮನಗಳು, ಹೃದಯಗಳು ಸಂಕುಚಿತ ಗೊಂಡಿವೆ. ಮಹಿಳೆಯರನ್ನು ಕಾಣುವ ನೋಟವೂ, ಗೋವುಗಳನ್ನು ಕಾಣುವ ನೋಟವೂ ಬದಲಾಗಿದೆ. ಹಲವರಿಗೆ ದೇವರ ಗುಡಿಯಲ್ಲಿ ಭಕ್ತಿಯ ಭಾವ ಮರೆತು,  ಹೆಣ್ಣಿನೊಡನೆ ತನ್ನ ದೈಹಿಕವಾದ ದಾಹ ತೀರಿಸುವ ಕೇಂದ್ರ ಅದಾಗಿದೆ. ಆ ನಿಟ್ಟಿನಲ್ಲಿ ಹಣ ಕೇಳುವ ಕೆಲಸದಲ್ಲಿ ಹಣ ಕೀಳುವ ಉದ್ಯೋಗಗಳು ಹಲವಾರು ಸೃಷ್ಟಿ ಆಗಿವೆ. ಕೆಲವು ಡಾಕ್ಟರ್ ಗಳು, ಲಾಯರ್ ಗಳು, ಸರಕಾರಿ ಅಧಿಕಾರಿಗಳು ಅಮಾಯಕ ಜನರನ್ನು ಹಗಲು ದರೋಡೆ ಮಾಡಿದರೆ, ಸೈಬರ್ ಕಳ್ಳರು ಕಲಿತ, ಹಣ ಇರುವವರನ್ನು ಬೋಳಿಸಿ ಬಿಡುತ್ತಾರೆ. ಆಸ್ಪತ್ರೆಯಲ್ಲಿ ಇರುವ ಅಮಾಯಕ ರೋಗಿಗಳ ಹೆಸರಿನಲ್ಲೂ ಹಣದ ಹೊಳೆ ಹರಿದು ಅದು ಮತ್ತೆಲ್ಲೋ ಹೋಗುತ್ತದೆ. ಒಟ್ಟಾರೆ ಜನಕ್ಕೆ ತಮ್ಮ ಖಜಾನೆ ಭರ್ತಿ ಆದರೆ ಸಾಕು. ಹೆಸರು ಯಾರದೋ. 
ಇನ್ನು ಸರಕಾರದಿಂದ ಬರುವ ಸೂರಿನ ಯೋಜನೆ ಮನೆ ಇಲ್ಲದವರ ಬದಲು ಮೊದಲೇ ಮನೆ ಕಟ್ಟಿ, ಬಾಡಿಗೆ ಕೊಡಲಿರುವ ಮನೆಯ ಓನರ್ ಗೆ ಹೋಗುತ್ತದೆ. ಮನೆ ಇಲ್ಲದವ ಬಾಡಿಗೆ ಮನೆಯಲ್ಲಿಯೇ ಕೊಳೆಯುವಂತೆ ಆಗಿದೆ. ಸರಕಾರಿ ನೌಕರರಿಗೆ ಇರುವ ಕ್ವಾರ್ಟರ್ಸ್ ಗಳು ಯಾರೋ ಪರಿಚಯ, ಇನ್ಫ್ಲುಯೆನ್ಸ್ ಇರುವವರ ಪಾಲಾಗುತ್ತವೆ. ಅಲ್ಲದೆ ಅವುಗಳ ಪರಿಸ್ಥಿತಿ ಕೂಡಾ ಕೆಲವು ಕಡೆ ಮನುಷ್ಯ ವಾಸಕ್ಕೆ ಯೋಗ್ಯವಾದ ಹಾಗಿಲ್ಲ. 
ಇದರ ನಡುವೆ ಖಾಸಗಿ ಕಂಪನಿಗಳಲ್ಲಿ ಕೆಲಸದ ಒತ್ತಡ ಇದ್ದರೆ ಸರಕಾರಿ ಕಚೇರಿಗಳಲ್ಲಿ ಶಾಲೆಗಳಲ್ಲಿ ಕೆಲಸಕ್ಕಿಂತಲೂ ಹೆಚ್ಚು ರೆಕಾರ್ಡ್ ಬರೆದು ಸಬ್ಮಿಟ್ ಮಾಡುವ, ಅಪ್ಲೋಡ್ ಮಾಡುವ ಹೊರೆ. ಇದ್ದವ ಕೊಡಲ್ಲ, ಕೊಡಬೇಕು ಎನ್ನುವವನ ಬಳಿ ಇಲ್ಲ. ಹೀಗಿರಲು ಕೊನೆಯಲ್ಲಿ ಒಂದು ದಿನ ಬದುಕು ಎಂದರೆ ಇಷ್ಟೇ ಅನ್ನಿಸಿದಾಗ ಇಷ್ಟೇನಾ ಅನ್ನಿಸಿದಾಗ ಸಾವು ಬರಲಿ ಎಂಬ ಭಾವದಿಂದ ಸಾವನ್ನು ಇದಿರುಗೊಳ್ಳಲು ತಯಾರಿ ನಡೆಸುವುದೇ ಜೀವನ. 
ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಹೌದು ಗೆಳೆಯರೇ, ವಿಧಿ ನಡೆಸಿದಂತೆಯೇ ನಡೆಯುವುದೇ ಹೊರತು ಎಷ್ಟು ಹಣ ಮಾಡಿ ಕೂಡಿಟ್ಟರೂ ವಿಧಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ ಎಂಬ ಸತ್ಯವನ್ನು ರಾಮು, ಪುನೀತ್ ರಾಜಕುಮಾರ್ ಇವರ ಸಾವು ನಮ್ಮೆದುರು ಎಚ್ಚರಿಸಿ ಸಾರಿ ಸಾರಿ ಹೇಳಿತು. ಇವರಲ್ಲಿ ಪ್ರಪಂಚದ ಯಾವ ಮಹಾನ್ ಡಾಕ್ಟರ್ ಆಗಿದ್ದರೂ ಸರಿ, ಅವರನ್ನು ಕರೆಸಿ ಟ್ರೀಟ್ಮೆಂಟ್ ತೆಗೆದುಕೊಳ್ಳುವಷ್ಟು ಹಣವಿತ್ತು. ಆದರೆ ವಿಧಿ ಅವರ ಬಾಳಿನಲ್ಲಿ ಆಟವಾಡುವುದನ್ನು ಬಿಡಲಿಲ್ಲ. ಇದು ಅವರ ಬಾಳಿಗೆ ಮಾತ್ರ ಅನ್ವಯ ಅಲ್ಲ. ನಮ್ಮ ಬಾಳಲ್ಲೂ ಕೂಡಾ. ನಿಮ್ಮ ಕನಸು ಏನೇ ಇರಲಿ ನೀವು ಸಾಗುವುದು ವಿಧಿಯ ದಾರಿಯಲ್ಲೇ ಅಲ್ಲವೇ? 

ಬದುಕು ನಿಂತ ನೀರಲ್ಲ ಹರಿಯುವ ನದಿ. ಸೂರ್ಯ ಚಂದ್ರರಿಗೂ ಗ್ರಹಣವಿದೆ. ನಮ್ಮ ಬದುಕಲ್ಲಿ ಇರದೇ ಇರಲು ಸಾಧ್ಯವೇ? ಮಾನವನಾದ ಮೇಲೆ ಕಣ್ಣೀರು ಹಾಕದೆ ಬದುಕಿದ ಜೀವಿ ಇರುವುದೇ? ಒಂದು ವೇಳೆ ಸಿರಿವಂತರಿಗೆ ಕಷ್ಟಗಳೇ ಇಲ್ಲ ಎಂದಾದರೆ ನಾಡಿನ ಗತ ಮುಖ್ಯಮಂತ್ರಿಗಳ ಮೊಮ್ಮಗಳು ತನ್ನನ್ನು ತಾನೇ ಸಾಯಿಸಿ ಕೊಲ್ಲುವ ಸಂದರ್ಭ ಬರುತ್ತಿತ್ತೆ? ಇಡೀ ಕಾಫಿ ಬ್ಯುಸಿನೆಸ್ ನ ಮಾಲೀಕ ಸಾಯುತ್ತಿದ್ದರೆ? ಖಂಡಿತ ನೆಮ್ಮದಿ ಹಣದೊಡನೆ ಇಲ್ಲ, ಹೃದಯ ಮನಸ್ಸು, ಆಲೋಚನೆಗಳ ಜೊತೆಗೆ ಇದೆ. ಅಲ್ಲವೇ?

ಮನೆ, ತೋಟ, ಅಂಗಡಿ ಎಲ್ಲಾ ಸುಟ್ಟು ಹೋದರೂ ಜನ ಬದುಕುತ್ತಾರೆ, ಮತ್ತೆ ಮೊದಲಿಂದ ಜೀವನ ಕಟ್ಟುತ್ತಾರೆ. ಅದು ಅವರ ಮಾನಸಿಕ ಸಾಮರ್ಥ್ಯ, ಧೈರ್ಯ. ಬದುಕಲ್ಲಿ ರ್ಯಾಂಕ್ ಗಿಂತಲೂ, ಡಿಗ್ರೀಗಿಂತಲೂ ಮುಖ್ಯವಾಗಿ ಬೇಕಾದದ್ದು ಇದೇ ಅಲ್ಲವೇ? ಹಾಗಾಗಿ ಅಕ್ಷರ ಜ್ಞಾನ ಇಲ್ಲದ ಹಲವಾರು ಮಂದಿ ಕೊಟ್ಯಾಧೀಶರಾಗಿ ಮೆರೆಯುತ್ತಿದ್ದಾರೆ. ಅಕ್ಷರದ ಹಲವಾರು ಡಿಗ್ರಿ ಪಡೆದ ಮೊದಲ ರ್ಯಾಂಕ್ ಸ್ಟೂಡೆಂಟ್ಸ್ ಕೆಲಸ ಸಿಗದೇ ಅಳೆಯುವುದು ಅದರ ಜೊತೆಗೆ ಬದುಕು ಸಾಗಿಸಲು ಸಾಧ್ಯ ಆಗದೆ ಸಾಯುತ್ತಿದ್ದಾರೆ. ನಮ್ಮಲ್ಲಿ ವಿಲ್ ಪವರ್ ಹೆಚ್ಚಿಸಿ ಕೊಳ್ಳೋಣ. ಪ್ರೀತಿ, ಧೈರ್ಯ, ತಾಳ್ಮೆ ಗಳಿಸಿ ಸಂತಸದಿಂದ, ನೆಮ್ಮದಿ, ತೃಪ್ತಿಯಿಂದ ಬಾಳೋಣ. ಉತ್ತಮ ಆರೋಗ್ಯಕ್ಕಾಗಿ ಆ ದೇವರಲ್ಲಿ ನಿತ್ಯ ಬೇಡೋಣ. ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ