ಸೋಮವಾರ, ಏಪ್ರಿಲ್ 4, 2022

125

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -123

ಮಾರ್ಚ್ 22ರಿಂದ ಪಿಯುಸಿ ಹಾಗೂ 28ರಿಂದ ಈ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕೆಲವೊಂದು ಸೂಚನೆಗಳು. ಪ್ರೀತಿಯ ಮಕ್ಕಳೇ, ಹಾಗೂ ಹೆತ್ತವರೇ, ಪೋಷಕರೇ ನಿಮಗೆಲ್ಲ ಶಿಕ್ಷಕರ ನೆಲೆಯಲ್ಲಿ ಕಿವಿ ಮಾತುಗಳು ಇಲ್ಲಿವೆ. ಜೀವನದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಎಂಬುದು  ಪ್ರಮುಖ ಘಟ್ಟಗಳು. ಅದರಲ್ಲೂ ಈ ವರ್ಷಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೋರೋನ ಕಾಲದಲ್ಲಿ ಎಂಟನೇ ತರಗತಿಯ ಪರೀಕ್ಷೆ ಬರೆಯಲು ಅಣಿಯಾಗಿದ್ದವರು. ಅಲ್ಲಿ ಅವರನ್ನು ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲಾಯಿತು. ಮುಂದಿನ ವರ್ಷವೂ ಕರೋನ, ಒಮಿಕ್ರಾನ್, ಹಳದಿ ಕಪ್ಪು ಫಂಗಸ್ ಎಂದೆಲ್ಲಾ ಸರಿಯಾಗಿ ಒಂದೆರಡು ತಿಂಗಳು ಕೂಡಾ ಶಾಲೆಗೆ ಬರಲು ಆಗದೆ ಆನ್ ಲೈನ್ ತರಗತಿಯಲ್ಲಿ ಕಲಿತೇ ಅಷ್ಟೋ ಇಷ್ಟೋ ಬರೆದು ಅದು ಹೇಗೋ ಹತ್ತನೇ ತರಗತಿಗೆ ಬಂದವರು. ಕರೋನ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ  ಬರೆದು ಪಾಸ್ ಆದ ಬ್ಯಾಚ್ ಈಗ ಪಿಯುಸಿ 

ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳು ಸರಿಯಾಗಿ ಪರೀಕ್ಷೆ ಬರೆದದ್ದು ತಮ್ಮ ಏಳನೇ  ತರಗತಿಯಲಿ ಮಾತ್ರ. ಪ್ರೌಢ ಶಾಲೆಗೆ ಬಂದ ಮೇಲೆ ಅವರು ಯಾವಾಗಲೂ ಮೂರು ಗಂಟೆಗಳ ಕಾಲ ನಿರಂತರವಾಗಿ ಕುಳಿತು ಪರೀಕ್ಷೆ ಬರೆಯಲೇ ಇಲ್ಲ. ಹಾಗಿರುವಾಗ ಮೂರು ಗಂಟೆಗಳ ಪರೀಕ್ಷೆಯನ್ನು ಎದುರಿಸುವ ತಾಳ್ಮೆ ತರುವುದೂ ಕೂಡಾ ಶಿಕ್ಷಕರಿಗೆ ಈಗ ಇರುವ ಸವಾಲುಗಳಲ್ಲಿ ಒಂದು. ಮತ್ತೆ ಎರಡೆರಡು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಿ, ಮಕ್ಕಳನ್ನು ಕಲಿಕಾ ಗುಂಪುಗಳಾಗಿ ವಿಭಾಗಿಸಿ, ಪುನರಾವರ್ತನೆ, ಪುನರ್ಮನನ ಮಾಡಿಸಿ, ಬರೆಸಿ, ಓದಿಸಿ, ತಿದ್ದಿಸಿ, ತೀಡಿಸಿ, ಬೆಳಗ್ಗೆ, ಸಂಜೆ ಶಾಲಾ ಅವಧಿ ಮೀರಿ, ತಮ್ಮ ಮನೆಯ ಕೆಲಸಗಳನ್ನೆಲ್ಲ ಬದಿಗೊತ್ತಿ, ತಮ್ಮ ಮಕ್ಕಳ ಕಲಿಕೆಯನ್ನು ಪರರಿಗೆ ವಹಿಸಿ, ಎಲ್ಲಾ ಶಿಕ್ಷಕರೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ ಕಲಿಕೆಯನ್ನು ಮಾಡಿಸಿ ಪರೀಕ್ಷೆಗೆ ತಯಾರಿ ಮಾಡಿ, ಪರೀಕ್ಷೆ ಪ್ರಾರಂಭ ಆಗಿ, ಮುಗಿದು, ಫಲಿತಾಂಶ ಬರುವವರೆಗೂ ವಿದ್ಯಾರ್ಥಿಗಳಿಗಿಂತ ಹೆಚ್ಚು ಟೆನ್ಷನ್ ಶಿಕ್ಷಕರಿಗೆ. ನಮ್ಮ ಶಾಲೆಯ ರಿಸಲ್ಟ್ ಹೇಗೆ ಬರುವುದೋ ಎಂದು.

ಅದೇನೇ ಇರಲಿ, ವಿದ್ಯಾರ್ಥಿಗಳು ಸ್ಪಷ್ಟತೆ, ಸರಳ, ಸುಂದರ ಬರವಣಿಗೆಗೆ ಪ್ರಾಮುಖ್ಯತೆ ಕೊಡಬೇಕು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಏನಾದರೂ ಉತ್ತರ ಬರೆದಿದ್ದರೆ ತಾನೇ ಅಂಕಗಳನ್ನು ಕೊಡಲು ಸಾಧ್ಯ ಆಗುವುದು? ಬರೆದದ್ದನ್ನು ಸರಿಯಾಗಿ ಓದಲು ಸಾಧ್ಯ ಆದರೆ ಮಾತ್ರ ಪೂರ್ತಿ ಅಂಕಗಳು ಸಿಗಲು ಸಾಧ್ಯ , ಅಲ್ಲವೇ? 

ಸಾಮಾನ್ಯ ವಿಜ್ಞಾನದಲ್ಲಿ ಚಿತ್ರಗಳನ್ನು ಕಲಿಯಬೇಕಿದೆ. ಅದನ್ನು ಸರಿಯಾಗಿ ಕಲಿತರೂ ಬರೆಯುವುದು ಅಂದವಾಗಿ ಇಲ್ಲದೆ ಇದ್ದರೆ, ಗುರುತಿಸಿದ್ದು ತಪ್ಪಾದರೆ ಅಂಕಗಳು ಸಿಗುವುದಿಲ್ಲ. ಆದ್ದರಿಂದ ಶೇಡಿಂಗ್ ಮಾಡಿ, ಸರಿಯಾಗಿ ಪ್ರತಿ ಭಾಗಗಳನ್ನು ಗುರುತಿಸಿ ಬರೆದಿದ್ದೇ ಆದರೆ ಪೂರ್ಣ ಅಂಕಗಳು ದೊರೆಯುತ್ತವೆ.  ಸಮಾಜವಿಜ್ಞಾನಗಳಲ್ಲಿ ಭೂಪಟವನ್ನು ಅಂದವಾಗಿ ಬರೆದು, ದಿಕ್ಕುಗಳನ್ನು ಗುರುತಿಸಿ, ಸರಿಯಾದ ಜಾಗದಲ್ಲಿ ಆಯಾ ಸ್ಥಳಗಳನ್ನು ಗುರುತಿಸುವ ಕೌಶಲ್ಯವನ್ನು ಕರಗತವಾಗಿಸಿಕೊಂಡರೆ ಅಂಕಗಳ ಗಳಿಕೆ ಸುಲಭ. ಗಣಿತದ ಲೆಕ್ಕಗಳನ್ನು ಮಾಡುವಾಗ  ಸ್ಪಷ್ಟವಾಗಿ ಬರೆದಾಗ ತಿದ್ದುವ ಯಾವುದೇ ಶಿಕ್ಷಕರಿಗೆ ಪೂರ್ಣ ಅಂಕಗಳನ್ನು ನೀಡಲು ಸುಲಭವಾಗುತ್ತದೆ. ಆದ್ದರಿಂದ ಉತ್ತಮ ಹಸ್ತಾಕ್ಷರಕ್ಕೇ ಮಾನ್ಯತೆ. ಕಲಿಯುವಾಗ ಬರೀ ಓದಿ ಕಲಿಯದೆ ಬರೆದು ಬರೆದು ಕಲಿತಾಗ ವೇಗವಾಗಿ ಬರೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. 

  ಭಾಷಾ ವಿಷಯಗಳಲ್ಲಿ ಪ್ರಬಂಧ ರಚನೆ ಮಾಡುವಾಗ ನಿಮ್ಮ ನಿತ್ಯ ಜೀವನದ ಅನುಭವಗಳನ್ನು ಬಳಸಿಕೊಳ್ಳಿ, ಅವುಗಳನ್ನು ಸಮಯಕ್ಕೆ ಸರಿಯಾಗಿ ವಿಷಯಕ್ಕೆ ಪೂರಕವಾಗಿ ಉಲ್ಲೇಖಿಸಿ. ಸ್ವಂತ ಬರಹಕ್ಕೆ ಆದ್ಯತೆ ನೀಡಿ. ಯಾವುದೇ ಪ್ರಶ್ನೆಗೆ ಉತ್ತರವನ್ನು ಉರು ಹೊಡೆಯುವ ಬದಲು ಅರ್ಥ ಮಾಡಿಕೊಂಡು ಕಲಿಯಿರಿ. ಸಮಾಜ ವಿಜ್ಞಾನ, ಹಿಂದಿ, ಕನ್ನಡ ಅಥವಾ ಪ್ರಥಮ ಭಾಷೆ ಇಂಗ್ಲಿಷ್ ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಅತಿ ಹೆಚ್ಚು ಸ್ಕೋರ್ ಮಾಡುವ ವಿಷಯಗಳು.  ಗಣಿತ ಹಾಗೂ ವಿಜ್ಞಾನದ ವಿಷಯ ಇಷ್ಟವಾದ ವಿದ್ಯಾರ್ಥಿಗಳಿಗೆ ಅದರಲ್ಲಿ ಉತ್ತಮ ಅಂಕಗಳು ಸಿಗಬೇಕು ಎಂದಿದ್ದರೂ ಸ್ಪಷ್ಟತೆ, ಅಂದವಾದ ಬರಹ, ಪ್ರತಿಯೊಂದು ಪ್ರಶ್ನೆಗೂ ಸರಿಯಾದ ಪ್ರಶ್ನೆ ಸಂಖ್ಯೆ ಬರೆದು ಅಂದವಾಗಿ ಉತ್ತರ ಬರೆಯ ಬೇಕಾದುದು ಅಗತ್ಯ ಅಲ್ಲವೇ?

ಆಂಗ್ಲ ಭಾಷೆಯೇ ಆಗಿರಲಿ, ಸಂಸ್ಕೃತ, ಹಿಂದಿ, ಕನ್ನಡವೇ ಆಗಿರಲಿ ಅಥವಾ ಇತರ ಕೋರ್ ವಿಷಯಗಳೇ ಆಗಿರಲಿ, ಪ್ರತಿ ವಿದ್ಯಾರ್ಥಿಯೂ ಎಷ್ಟು ಕಲಿತಿರುವನೋ ಅದನ್ನು ತನ್ನ ಉತ್ತರ ಪತ್ರಿಕೆಯಲ್ಲಿ ತಿದ್ದುವ ಶಿಕ್ಷಕರಿಗೆ ಅರ್ಥ ಆಗುವಂತೆ ಮುಟ್ಟಿಸುವುದು ಒಂದು ಕಲೆ. ಅಂದವಾದ ಬರಹಕ್ಕೆ ಅಂಕಗಳು ಹೆಚ್ಚಾಗಿಯೇ ಬರುತ್ತವೆ ಎನ್ನುವುದು ಖಚಿತ. ಚಿತ್ತು ಕಾತು, ಗೀಚುಗಳನ್ನು ತಪ್ಪಿಸಿ, ಅಂದ, ಸ್ಪಷ್ಟ ಬರವಣಿಗೆಯೊಂದಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಾಗ ಅಂಕಗಳನ್ನು ಯಾವ ಶಿಕ್ಷಕರೂ ಕಸಿದುಕೊಳ್ಳಲು ಸಾಧ್ಯ ಇಲ್ಲ. ಸರಿಯಾಗಿ ಬರೆಯದೆ ತನಗೆ ಸರಿಯಾದ ಅಂಕಗಳನ್ನು ನೀಡಲಿಲ್ಲ ಎಂದು ಶಿಕ್ಷಕರನ್ನು ದೂರಿ ನೂರಾರು ರೂಪಾಯಿಗಳನ್ನು ಸುರಿದು ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ತರಿಸಿ, ಶಿಕ್ಷಕರಿಗೆ ತೋರಿಸಿದಾಗ "ನೀನು ಬರೆದ ಉತ್ತರಕ್ಕೆ ಸರಿಯಾದ ಅಂಕಗಳೆ ಸಿಕ್ಕಿವೆ. ಇನ್ನು ಹೆಚ್ಚು ಕೊಡಲು ಸಾಧ್ಯ ಆಗದು" ಎಂದು ಅವರೆಂದರೆ ವೃಥಾ ಖರ್ಚು. ಅದರ ಬದಲು ನಿಮ್ಮ ಬರವಣಿಗೆಯ ಸ್ಪಷ್ಟತೆ ಶಿಕ್ಷಕರ ಗಮನೆ ಸೆಳೆದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ. ಇದು ಹತ್ತನೇ ತರಗತಿ ಅಥವಾ ಪಿಯುಸಿ ವಿಧ್ಯಾರ್ಥಿಗಳಿಗೆ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅನ್ವಯಿಸುತ್ತದೆ. ಇದು ಮುಂದಿನ ಜೀವನಕ್ಕೂ ಅನ್ವಯಿಸುತ್ತದೆ. ನಗರ ಅಥವಾ ಹಳ್ಳಿಯಲ್ಲಿ ಎಷ್ಟೊಂದು ರಿಕ್ಷಗಳಿದ್ದರೂ ಉತ್ತಮವಾಗಿ ರಿಕ್ಷಾ ಚಲಾಯಿಸುವ, ಜವಾಬ್ದಾರಿ ತೆಗೆದುಕೊಂಡು ಸಮಯಪ್ರಜ್ಞೆ ಮೆರೆಯುವ, ಅಂದವಾಗಿ ತನ್ನ ರಿಕ್ಷಾ ಇಟ್ಟುಕೊಂಡಿರುವ ರಿಕ್ಷಾವನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ, ಎಷ್ಟು ಜನ ಟೈಲರ್ ಗಳಿದ್ದರೂ ಅಂದವಾಗಿ ಹೊಲಿಯುವವನಿಗೇ ಹೆಚ್ಚು ಬಟ್ಟೆ ಬರುವಂತೆ ಅಂದವಾಗಿ, ಸ್ಪಷ್ಟವಾಗಿ ಬರೆಯುವವನಿಗೆ ಹೆಚ್ಚು ಅಂಕಗಳು ಕಟ್ಟಿಟ್ಟ ಬುತ್ತಿ ನೆನಪಿರಲಿ. 

ಕಠಿಣ ಪರಿಶ್ರಮ ಎಂದೂ ಹಾದಿ ತಪ್ಪದು. ಸ್ಪಷ್ಟ ಓದು, ಶುದ್ಧ ಬರಹ ಬದುಕಿನಲ್ಲಿ ನಮ್ಮನ್ನು ಎತ್ತರಕ್ಕೆ ಏರಿಸುವ ಅಂಶ. ಅದನ್ನೇ ಪರಿಪಾಲಿಸಿ. ಬೇರೆ ಸಮಯಕ್ಕಿಂತ ಹೆಚ್ಚು ಓದಿ. 

ಕಲಿಕೆಯನ್ನು ಇಷ್ಟ ಪಡಿ. ಆನಂದಿಸಿ. ಹೇಗೆ ಮೊಬೈಲ್ ಗಳಲ್ಲಿ ಬರುವ ರೀಲ್ ವಿಡಿಯೋಗಳನ್ನು ನೋಡಿ ಆನಂದಿಸುವಿರೋ ಹಾಗೆಯೇ ಪ್ರತಿ ವಿಷಯದ ಮೇಲೆ ಪ್ರೀತಿ ಇರಲಿ. ಕಾರಣ ಇದು ನಿಮ್ಮ ಜೀವನವನ್ನು ಬೆಳಗುವ ಅಂಶ. ಮೊಬೈಲ್, ಟಿವಿ, ಚಲನಚಿತ್ರ, ಜಾತ್ರೆ, ಕಬಡ್ಡಿ, ಕ್ರಿಕೆಟ್ ಎಲ್ಲವೂ ಯಾವಾಗಲೂ ಇವೆ, ಇರುತ್ತವೆ. ಅವುಗಳಿಗಾಗಿ ನಿಮ್ಮ ಕಲಿಕೆಯನ್ನು ತ್ಯಾಗ ಮಾಡಿದರೆ ಮುಂದೆ ನಿಮ್ಮ ಬದುಕಿನ ಹಲವಾರು ಹಂತಗಳಲ್ಲಿ ಕಷ್ಟ ಪಡುವವರು ನೀವೇ. ಕ್ಷಣದ ಆಕರ್ಷಣೆಗಳಿಗೆ ಬಲಿಯಾಗಿ ಜೀವನ ಪೂರ್ತಿ ಧುಖಿಸದಿರಿ. ಬದಲಾಗಿ ಸಿಕ್ಕಿದ ಸಮಯವನ್ನು ಉಪಯೋಗಿಸಿ. 
ಮೊಬೈಲ್ ಅಟ್ರಾಕ್ಷನ್ ಹೆಚ್ಚಿದ್ದರೆ ಯುಟ್ಯೂಬ್ ನಲ್ಲಿ ಉತ್ತರಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೆಜ್, ನಿಮಗೆ ಕಷ್ಟವಾದ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ ಎಂಬುದನ್ನೇ ಹುಡುಕಿ ನೋಡಿ. ನಿಮ್ಮ ಯಾವುದೇ ಸರ್ಚ್ ನಿಮ್ಮನ್ನು ಉತ್ತಮ ಅಂಕಗಳಿಗೆ ಕೊಂಡು ಹೋಗುವುದೇ ಆಗಿರಲಿ. 
ಮಕ್ಕಳೇ, ಜೀವನದಲ್ಲಿ ಅವಕಾಶ ಮತ್ತು ಯಶಸ್ಸು ಒಂದೇ ಬಾರಿ ಬಂದು ಬಾಗಿಲು ತಟ್ಟುವುದು. ಆಗ ನಾವು ಸಮಯ ಹಾಳು ಮಾಡಿ ಮತ್ತೆ ಕೊರಗಿದರೆ ಫಲವಿಲ್ಲ. ನಿಮ್ಮ ಶಿಕ್ಷಕರ, ಪೋಷಕರ ಗುರಿ, ಉದ್ದೇಶಗಳನ್ನು ಈಡೇರಿಸುವುದು ಮತ್ತು ನಿಮ್ಮ ಕುಟುಂಬದ ಮರ್ಯಾದೆ, ಘನತೆ, ಗೌರವ ಕಾಪಾಡುವುದರ ಜೊತೆಗೆ ನಿಮ್ಮ ಭವಿಷ್ಯದ ಕೀಲಿಕೈ ನಿಮ್ಮ ಕೈಯಲ್ಲೇ ಇದೆ ಈಗ. ಅದನ್ನು ಈ ಸಮಯದಲ್ಲಿ ಶಿಕ್ಷಕರ ಸಹಾಯದಿಂದ ಸರಿಯಾಗಿ ಕಲಿತು, ಬಳಸಿಕೊಳ್ಳಿ, ಯಶಸ್ಸು ನಿಮ್ಮದಾಗಿಸಿಕೊಳ್ಳಿ. 
ಭವ್ಯ ಭವಿಷ್ಯ ನಿಮಗಾಗಿ ಕಾದಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ನೀವು ಏನು ಆಲೋಚಿಸುವಿರೋ ಹಾಗೆಯೇ ಆಗುತ್ತದೆ. ನಾವು ಉತ್ತಮ ಅಂಕಗಳನ್ನು ಪಡೆದು ನಮ್ಮ ಗುರಿ ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸ ನಿಮ್ಮಲ್ಲಿ ಇರಲಿ. ಅದರೊಂದಿಗೆ ಕಠಿಣ ಪರಿಶ್ರಮವೂ ಇರಲಿ. ದೇವರ,ಗುರು ಹಿರಿಯರ  ಆಶೀರ್ವಾದವನ್ನು ಕೂಡಾ ಪಡೆಯುವುದನ್ನು ಮರೆಯದಿರಿ.  ಜೀವನದಲ್ಲಿ ಬಂದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ, ಉತ್ತಮವಾಗಿ, ಅಂದವಾಗಿ ಬರೆಯಿರಿ. ಯಶಸ್ಸು ಕಟ್ಟಿಟ್ಟ ಬುತ್ತಿ. ಆಲ್ ದ ಬೆಸ್ಟ್ ವಿದ್ಯಾರ್ಥಿ ಮಿತ್ರರೇ. ಇಂದಿನ ಮಕ್ಕಳು ಇಂದೂ , ನಾಳೆಯೂ, ಮುಂದೂ ಭಾರತೀಯ ಪ್ರಜೆಗಳೇ. ಭವ್ಯ ಭಾರತದ ಮುಂದಿನ ಕನಸುಗಳು, ಶಿಲ್ಪಿಗಳು ನೀವೇ ಅಲ್ಲವೇ? ನೀವೇನಂತೀರಿ?
@ಪ್ರೇಮ್@
19.03.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ