ಸೋಮವಾರ, ಆಗಸ್ಟ್ 8, 2022

ಬೇಸರವಾದ ಕ್ಷಣ

ಒಂದು ಮಾತು ನೆನಪಿಡಿ ಪ್ರಜ್ವಲ್ ನಿಮ್ಮ ಮಗ ಹೇಗೋ ಶಾಲೆಗೆ ಬಂದ ಮೇಲೆ ನಮ್ಮ ಮಗು ಕೂಡ. ಹಾಗಂತ ಅವನಿಗೆ ನೀವು ಹೊಡೆದ ಹಾಗೆ ನಾವು ಹೊಡೆಯುವುದೂ ಇಲ್ಲ, ಆ ಹಕ್ಕೂ ನಮಗಿಲ್ಲ. ಏನೋ ಸುಮ್ಮನೆ ಬುದ್ದಿ ಕಲಿಯಲಿ, ಒಳ್ಳೆದಾಗಲಿ ಅಂತ ಒಮ್ಮೆ ಮುಟ್ಟಿದ ಕೂಡಲೇ ನಿಮ್ಮ ಮಗನ ದೀರ್ಘಾವಧಿ ತೊಂದರೆಗೆ ನಾನು ಜವಾಬ್ದಾರಿ ಆಗಲು ಸಾಧ್ಯ ಇಲ್ಲ. 

ನಿಮ್ಮ ಮಗನ ಮೇಲೆ ಶಾಲೆಯಲ್ಲಿ ಕಂಪ್ಲೇಂಟ್ ಆದಾಗ ನೀವೇ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳ ಮುಂದೆ ಅವನಿಗೆ ಕೋಣಕ್ಕೆ ಬಡಿದ ಹಾಗೆ ಹೊಡೆದಿಲ್ಲವೇ? ಆಗ ನಿಮ್ಮ ಮಗನ ಬಗ್ಗೆ ನಿಮಗೆ ಕಾಳಜಿ ಬೇಕಿತ್ತು ಅಲ್ಲವೇ? ಶಾಲೆಗೆ ಸೇರಿದ ಮರುದಿನವೇ ನೀವು ಚಪಾತಿಗೆ ಉಪ್ಪು\ ಸಕ್ಕರೆ ಅಂತ ಸರ್ಫ್ ಪೌಡರ್ ಹಾಕಿ ಚಪಾತಿ ಮಾಡಿ ತಿನ್ನಿಸಿ ಅವನಿಗೆ ಫುಡ್ ಇನ್ಫೆಕ್ಷನ್ ಆಗಿ ಅಡ್ಮಿಟ್ ಆಗಿದ್ದ. ನೀವೇ ಹೇಳಿದ ಹಾಗೆ ಚಿಕ್ಕಂದಿನಿಂದ ನೀವು ನಿಮ್ಮ ಮಗನಿಗೆ ಜಂಕ್ ಫುಡ್ ತಿನ್ನಿಸಿ ಅವನ ಹೊಟ್ಟೆ ವೀಕ್ ಆಗಿದೆ. ಅಲ್ಲದೆ ಎಲ್ಲರೂ ನೋಡಿರುವರು ಏನೆಂದರೆ ಅವನು ನಿಮ್ಮ ಬಳಿ ಇದ್ದಾಗೆಲ್ಲ ಪಕ್ಕದ ಬೇಕರಿಗೆ ಹೋಗಿ ಆಗಾಗ ತನಗೆ ಬೇಕಾದ ತಿಂಡಿ ತಂದು ತಿನ್ನುವುದು. ಹೀಗಾಗಿ ಅವನಿಗೆ ಧೀರ್ಘ ಕಾಲದ ಹೊಟ್ಟೆಯ ಸಮಸ್ಯೆ ಬಂದಿರಬಹುದು. 
ಕೋವಿಡ್ ವ್ಯಾಕ್ಸಿನ್ ಕೂಡ ನಾವು ಕಂಪಲ್ಸರಿ ಹೇಳಲೇ ಇಲ್ಲ. ನಾವು ಹೇಳಿದ್ದು ಇಲಾಖೆ ನಮ್ಮ ಮೇಲೆ ನಮ್ಮ ಶಾಲೆಯ ಯಾವ ಮಕ್ಕಳೂ ಕೂಡಾ ಕೋವಿಡ್ ವ್ಯಾಕ್ಷಿನ್ ಪಡೆಯದೇ ಇರಬಾರದು ಎಂಬ ಕಾನೂನು ತಂದ ಕಾರಣ, ಆರೋಗ್ಯ ಇಲಾಖೆಯ ಸಿಬ್ಬಂದಿಯ ಮೇಲೂ ಆ ಒತ್ತಡ ಇದ್ದ ಕಾರಣ ಅವರು ನಮ್ಮ ಮುಖ್ಯ ಶಿಕ್ಷಕರ ಮೇಲೆ, ಮುಖ್ಯ ಶಿಕ್ಷಕರು ತರಗತಿ ಶಿಕ್ಷಕರ ಮೇಲೆ ಯಾವ ಮಗುವೂ ಕೋವಿಡ್ ವ್ಯಾಕ್ಷಿನ್ ನಿಂದ ಹೊರಗುಳಿಯಬಾರದು ಎಂಬ ಒತ್ತಡ ತಂದ ಕಾರಣ ನಾವು ಎಲ್ಲಾ ಪೋಷಕರಿಗೂ ಫೋನ್ ಮುಖಾಂತರ ಸಂಪರ್ಕಿಸಿ ವಿಷಯ ತಿಳಿಸ ಬೇಕಾಯಿತು. 

"ನನ್ನ ಮಗನಿಗೆ ಆರೋಗ್ಯದ ಸಮಸ್ಯೆ ಇದೆ" ಎಂದು ನೀವು ಹೇಳಿದಾಗ ನಾನು ಅದಕ್ಕೆ ಸ್ಪಂದಿಸಿ, ಹಾಗಿದ್ದರೆ ನಮಗೆ ಇಲಾಖೆಗೆ ತೋರಿಸಲು ಒಂದು ಪತ್ರ ಬರೆದು ಕೊಡಿ ಎಂದು ಹೇಳಿದ್ದೆ. ಮತ್ತೆ ಮುಖ್ಯ ಶಿಕ್ಷಕರ ಬಳಿ ಫೋನಿನಲ್ಲಿ ಮಾತಾಡಿ ನೀವು ವ್ಯಾಕ್ಸಿನ್ ಹಾಕಿಸಲು ಒಪ್ಪಿದ್ದು, ಮಗನನ್ನು ಕರೆದುಕೊಂಡು ಹೋಗಲು ಶಾಲೆಗೆ ಬಂದಾಗಲೇ ನನಗೆ ಗೊತ್ತಾದದ್ದು. ಆಗಲೂ ನಾವು ಎಲ್ಲಾ ಶಿಕ್ಷಕರು ನಿಮಗೆ "ಮೊದಲು ಡಾಕ್ಟರ್ ಸಲಹೆ ಪಡೆದು ಆಮೇಲೆ ಅವರು ಒಪ್ಪಿದರೆ ಮಾತ್ರ ವ್ಯಾಕ್ಸಿನ್ ಹಾಕಿಸಿ " ಎಂಬ ಸಲಹೆ ನೀಡಿದ್ದೆವು. 

ನೀವು ಸಿಂಗಲ್ ಪೇರೆಂಟ್ ಎಂಬ ಕಾರಣಕ್ಕೆ ನಮ್ಮ ಶಾಲಾ ಎಲ್ಲಾ ಶಿಕ್ಷಕರು ನಿಮ್ಮ ಮಗುವನ್ನು ಹೆಚ್ಚು ಕೇರ್ ಮಾಡುತ್ತಿದ್ದೆವು. ಅವನು ಆರೋಗ್ಯ ಸಮಸ್ಯೆ ಇರುವ ಮಗು ಎಂದು ಗೊತ್ತಾದ ಕೂಡಲೇ ನಾವು ಅವನು ಏನೇ ಗಲಾಟೆ, ತೊಂದರೆ ಮಾಡಿದರೂ ನಿಮಗೇ ಹೇಳುತ್ತಿದ್ದೇವೆಯೇ ಹೊರತು ನಾವು ಅವನಿಗೆ ಯಾವ ಪನಿಶ್ಮೆಂಟ್ ಕೊಡುತ್ತಿರಲಿಲ್ಲ. ಕಾರಣ ನಮಗೂ ಮಕ್ಕಳಿವೆ . ನಾವೆಲ್ಲಾ ತಾಯಂದಿರು. ಮಕ್ಕಳನ್ನು ಬೆಳೆಸುವ ಕಷ್ಟ ತಿಳಿದವರು. ಅದೂ ಅಲ್ಲದೆ ನಾನೂ ಕೂಡಾ ಸಿಂಗಲ್ ಪೇರೆಂಟ್. 

ಮತ್ತೆ ನಿಮ್ಮ ಮಗನ ಆರೋಗ್ಯ ಕೋವಿಡ್ ವ್ಯಾಕ್ಸಿನ್ ಹಾಕಿದ ಬಳಿಕ ಹಾಳಾಯಿತು ಎಂದು ನೀವೇ ಒಪ್ಪಿಕೊಂಡಿರುವಿರಿ. ಹಾಗಿದ್ದ ಮೇಲೆ ಒಂದು ತಿಂಗಳ ಹಿಂದೆ ಸುಮ್ಮನೆ  ಮರೆತು ಹೋದ ಒಂದು ವಿಷಯ ಇಟ್ಟು, ನಿಮ್ಮ ಸಮಸ್ಯೆಗೆ ನನ್ನನ್ನು ವೃಥ ಗುರಿ ಮಾಡಿ ನನ್ನ ನೆಮ್ಮದಿ ಕೆಡಿಸುವುದು ತಪ್ಪಲ್ಲವೇ? ಇದರಲ್ಲಿ ನನ್ನದು ಏನೂ ತಪ್ಪಿಲ್ಲ. ದಯವಿಟ್ಟು ನನ್ನನ್ನು ನನ್ನಷ್ಟಕ್ಕೇ ಬದುಕಲು ಬಿಟ್ಟು ಬಿಡಿ. 

ಮೂರು ದಿನಗಳಿಂದ ಬೆಳಿಗ್ಗೆ ಶಾಲೆಗೆ ಬಂದ ಕೂಡಲೇ HM "ನಿಮ್ಮದೇ ತಪ್ಪಂತೆ, ನೀವು ಎರಡು ತಿಂಗಳ ಹಿಂದೆ ಅವನಿಗೆ ಒಂದು ಪೆಟ್ಟು ಕೊಟ್ಟಿದ್ದೀರಂತೆ. ಅದರಿಂದ ಅವನಿಗೆ ಈಗ ಹೊಟ್ಟೆ ನೋವು ಬಂದಿದೆ ಅಂತೆ. ಅವನ ಅಮ್ಮ ಹೇಳಿದರು" ಎಂದಾಗ ನನಗೆ ಇರುವ ವೈಯಕ್ತಿಕ ನೋವುಗಳೇ ಹೆಚ್ಚು. ಅವುಗಳನ್ನೆಲ್ಲಾ ನನ್ನ ಮಗುವಿನ ಮುಖ ನೋಡಿ ಅದು ಹೇಗೋ ಮರೆತು ಪ್ರತಿ ನಿತ್ಯ ಕಣ್ಣೀರು ಹಾಕಿ ಶಾಲೆಗೆ ಬರುವವಳು ನಾನು. ನನ್ನ ಬಿಪಿ ಮತ್ತಷ್ಟು ಲೋ ಆಗುತ್ತದೆ. ನನ್ನ, ನನ್ನ ಮಗುವಿನ ಕಾಳಜಿಗೂ ಯಾರಿಲ್ಲ ನನಗೆ. ನನಗೆ ಜ್ವರ ಬಂದರೆ ಒಂಭತ್ತು ವರ್ಷದ ನನ್ನ ಮಗು ಆರೈಕೆ ಮಾಡಬೇಕು ನನ್ನನ್ನು. 

ದಯವಿಟ್ಟು ಅರ್ಥ ಮಾಡಿಕೊಳ್ಳಿ. ಶಿಕ್ಷಕರು ಎಂದರೆ ರಾಕ್ಷಸರಲ್ಲ. ಅವರಿಗೂ ಅವರದ್ದೇ ಆದ ಹಲವಾರು ನೋವುಗಳಿವೆ. ವೈಯಕ್ತಿಕ ತೊಂದರೆಗಳಿವೆ. ಬೇನೆ ಬೇಸರಗಳಿವೆ. ಅವುಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಅವರು ಮನೆ ಹಾಗೂ ಹೊರಗೆ ದುಡಿಯುತ್ತಾ ಇರುತ್ತಾರೆ. ಪ್ರಪಂಚದಲ್ಲಿ ನೋವು, ಕಷ್ಟ, ದುಃಖ ಎಲ್ಲರಿಗೂ ಇದೆ. ನಮ್ಮ ಕಷ್ಟಕ್ಕೆ ಯಾರೋ ಹೇಳಿದರು ಎಂದು ನಾವು ಅನ್ಯರನ್ನು ಬೆಟ್ಟು ಮಾಡಿ ತೋರಿಸುವುದು ಎಷ್ಟು ಸರಿ? ಅದು ಕೂಡ ನಾನು ಯಾವತ್ತೂ ಯಾರಿಗೂ ಕೇಡು ಬಯಸದವಳು. ಎಲ್ಲರೂ ಚೆನ್ನಾಗಿ ಇರಬೇಕು ಎಂದು ಸದಾ ಬೇಡುವವಳು. ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಾ ಕೇವಲ ಮಗುವಿಗಾಗಿ ಬದುಕುತ್ತಿರುವ ನೊಂದ ಹೆಣ್ಣು. ಶಾರೀರಿಕ ಹಾಗೂ ಮಾನಸಿಕ ನೋವನ್ನು ಅನುಭವಿಸುತ್ತಾ, ಯಾರ ರಗಳೆಗೂ ಹೋಗದೆ ನಾನಾಯಿತು ನನ್ನ ಬದುಕಾಯಿತು ಎಂದು ಮಗುವಿಗಾಗಿ ನನ್ನೆಲ್ಲ ನೋವನ್ನು ನುಂಗಿ ಕೊಳ್ಳುತ್ತಾ ತಂತಿಯ ಮೇಲಿನ ನಡಿಗೆಯ ಹಾಗೆ ಬದುಕು ಸಾಗಿಸುತ್ತಿರುವವಳು ನಾನು. 

ಈ ತರ ಎಲ್ಲಾ ಸುಳ್ಳು ಆರೋಪ ಹಾಕಿ ನೀವು ನನ್ನನ್ನು ದಿನ ದಿನ ಜೀವಂತ ಸಾಯಿಸುತ್ತಿರುವಿರಿ. ನನ್ನ ಬದುಕಿನ ನೋವುಗಳೇ ಹೆಚ್ಚು ನನಗೆ. ಶಾಲೆಯಲ್ಲಿ ಮಕ್ಕಳ ಜೊತೆ ನನ್ನೆಲ್ಲ ನೋವುಗಳನ್ನು ಮರೆತು, ಮನೆಯಲ್ಲಿ ಮಗಳ ಜೊತೆ ಅದು ಹೇಗೋ ಬ್ಯಾಲೆನ್ಸ್ ಮಾಡಿ ಬದುಕು ಎಂಬ ನಾವೆಯಲ್ಲಿ ಸಾಗುತ್ತಿದ್ದೇನೆ. 

ಈಗ ಸರಿಯಾದ ಗೆಳೆಯರು ಸಿಗದ ಕಾರಣ, ಇದ್ದ ಅವನಂಥ ಅವನಿಗೆ ಸರಿಯಾದ ಗೆಳೆಯರು ಟಿಸಿ ಪಡೆದು ಬೇರೆ ಶಾಲೆಗೆ ಹೋದ ಕಾರಣ ನಿಮ್ಮ ಮಗನಿಗೆ ಈ ಶಾಲೆ ಬೇಡವಾಗಿದೆ. ಬರೆಯಲು ಸೋಮಾರಿತನ ಅವನಿಗೆ. ತರಗತಿಯಲ್ಲಿ ಬರೆಯದ ಕಾರಣ ಬೇರೆ ಮಕ್ಕಳ ನೋಟ್ಸ್ ಕೊಟ್ಟು ಮನೆಯಲ್ಲಿ ನೋಟ್ಸ್ ನೀವೇ ಬರೆಸಿರುವುದು ನೆನಪಿದೆ ನಿಮಗೆ. ಇನ್ನಾದರೂ ಕಲಿಕೆಯ ಕಡೆ ವಾಲುತ್ತಾನೆ ಅವನು ಅಂದುಕೊಂಡಿದ್ದೆ. ಆಗ ಗೊತ್ತಾಯಿತು ಅವನ ಕಲಿಕೆಯ ನಿರಾಸಕ್ತಿ. ಹೊರಗಿನ ಕೆಟ್ಟ ಗೆಳೆಯರ ಪ್ರಭಾವವೂ ಅವನ ಮೇಲಿದೆ. ತರಗತಿಯ ಮುಂದೆ ಮೇಲೆ ಕೆಟ್ಟ ಪದಗಳ ಪ್ರಯೋಗ ಮಾಡುವಾಗ "ಅದನ್ನು ಎಲ್ಲಿ ಕಲಿತೆ " ಎಂದು ಕೇಳಿದರೆ "ಮೊದಲಿನ ಶಾಲೆಯಲ್ಲಿ ಇದ್ದ ಮಕ್ಕಳು ಹೇಳುತ್ತಿದ್ದರು, ಟ್ಯೂಷನ್ ಕ್ಲಾಸಿನಲ್ಲಿ ಮಕ್ಕಳು ಹೇಳುತ್ತಿದ್ದರು " ಎಂದು ಹೇಳುತ್ತಾನೆ. ಪೋಷಕರಾಗಿ ನೀವು, ಶಿಕ್ಷಕರಾಗಿ ನಾವು ಮಗುವಿನ ವರ್ತನೆಯನ್ನು ಸರಿ ಮಾಡುವ ಕಡೆ ಲಕ್ಷ್ಯ ವಹಿಸಬೇಕು. ಮಗುವಿನ ಆರೋಗ್ಯ ಚಿಕ್ಕ ಮಗುವಾಗಿ ಇದ್ದಾಗಿನಿಂದಲೂ ಅಮ್ಮ ಕೊಡುವ ಆಹಾರದ ಮೇಲೆ ಅವಲಂಬಿಸಿದೆ. ಮೆಡಿಕಲ್ ಫೀಲ್ಡ್ ನಲ್ಲಿ ಇರುವ ನಿಮಗೆ ಅದು ತಿಳಿದಿದೆ  ನಾನು ಹೇಳುವ ಅಗತ್ಯ ಇಲ್ಲ. ಮಗುವಿನ ದೈಹಿಕ, ಮಾನಸಿಕ ಬೆಳವಣಿಗೆಗೆ ನಾವು ಶ್ರಮಿಸಬೇಕೆ ಹೊರತು ನಮ್ಮ ಟೆನ್ಶನ್ ಶಿಕ್ಷಕರ ಮೇಲೆ ಹಾಕುವುದರಿಂದ, ಬೇರೆಯವರನ್ನು ಅದಕ್ಕೆ ಸಿಕ್ಕಿಸಿ ಹಾಕುವುದರಿಂದ ಅದು ಸಾಲ್ವ್ ಆಗದು. ಅವನಿಗೆ ಈ ಶಾಲೆಯಲ್ಲಿ ಸರಿಯಾದ ಸ್ನೇಹಿತರು ಇಲ್ಲದ ಕಾರಣ ಅವನಿಗೆ ಬೇರೆ ಶಾಲೆಗೆ ಹೋಗ ಬೇಕು ಎಂಬ ಕಾರಣಕ್ಕೂ ಅವನು ಶಾಲಾ ಶಿಕ್ಷಕರ ಹೆಸರು ಹೇಳಿರಬಹುದು. ಶಾಲಾ ಶಿಸ್ತಿಗೆ ಅವನು ಒಗ್ಗಿಕೊಳ್ಳದ ಕಾರಣ ಮೊದಲಿನ ಶಾಲೆಯಿಂದ ನೀವು ಬಿಡಿಸಿ ಇಲ್ಲಿ ತಂದು ಸೇರಿಸಿದ್ಫು. ಇಲ್ಲೂ ಅವನಿಗೆ ಅದೇ ತೊಂದರೆ ಆಗಿರಲೂ ಬಹುದು. ಮನೆಯಲ್ಲಿ ನೀವು ಅವನನ್ನು ಫ್ರೀ ಆಗಿ ಬೆಳೆಸಿದ ಕಾರಣ ಈ ಶಾಲೆಯ ಶಿಸ್ತು ಅವನಿಗೆ "ನಾನು ಇಲ್ಲಿ ಹೊಂದಿಕೊಳ್ಳಲು ಆಗುವುದಿಲ್ಲ, ಬೇರೆ ಶಾಲೆಗೆ ಹೋಗ ಬೇಕು" ಅನಿಸಿ ಅವನು ಅದನ್ನು ನೇರವಾಗಿ ಹೇಳಲು ಆಗದೆ "ಆ ಶಾಲೆಯ ಶಿಕ್ಷಕರ ಮೇಲೆ ಹಾಕಿದರೆ ಹಾಗಾದರೂ ನನ್ನ ಅಮ್ಮ ನನ್ನನ್ನು ಬೇರೆ ಶಾಲೆಗೆ ಸೇರಿಸಿಯಾರು " ಅಂದುಕೊಂಡು ಹಾಗೆ ಹೇಳಿರಬಹುದು. ಎಲ್ಲಾ ದಿಕ್ಕಿನಲ್ಲೂ ನಾವು ಆಲೋಚಿಸಬೇಕಾಗುತ್ತದೆ. ಮಗುವಿನ ಮಾನಸಿಕ ಆಲೋಚನೆಗಳಿಗೂ ಬೆಲೆ ಕೊಡಿ. ಅವನಿಗೆ ಈ ಶಾಲೆ ಬೇಡ ಎಂದರೆ ಬೇರೆ ಅವನಿಗೆ ಇಷ್ಟವಾಗುವ , ಅವನ ಗೆಳೆಯರು ಇರುವ ಶಾಲೆಗೆ ಸೇರಿಸಿ. ಬದಲಾಗಿ ದಯವಿಟ್ಟು, ಹಿಂದೆ ಮುಂದೆ ಯೋಚಿಸದೆ ಯಾವುದೇ ಶಿಕ್ಷಕರನ್ನು ದೂಷಿಸಬೇಡಿ. ನನ್ನ ವೃತ್ತಿ ಜೀವನದಲ್ಲಿ ಇದು ಹದಿನೆಂಟನೇ ವರ್ಷ. ಇದುವರೆಗೂ ಯಾವ ವಿದ್ಯಾರ್ಥಿಗೂ ನಾ ಜೋರಾಗಿ ಯಾವುದೇ ಅಂಗಗಳಿಗೆ ಹಾನಿ ಆಗುವ ಹಾಗೆ ಹೊಡೆದದ್ದಾಗಲೀ, ಅದರಿಂದ ಅವನಿಗೆ ಸಮಸ್ಯೆ ಆಗಿದ್ದಾಗಲೀ ಇಲ್ಲ. ಇಲ್ಲೂ ಆ ಕಾರಣವೇ ಇರಲು ಸಾಧ್ಯ ಇಲ್ಲ. ನಮ್ಮ ಶಾಲೆಗೆ ಬರುವ ಮಕ್ಕಳು ನಮ್ಮ ಮಕ್ಕಳು. ನಮಗೆ ಅವರ ಕಾಳಜಿ ಇದೆಯೇ ಹೊರತು ಯಾವ ಮಕ್ಕಳ ಮೇಲೂ ದ್ವೇಷ ಇಲ್ಲ. ಇನ್ನು ಹತ್ತು ವರ್ಷ ಬಿಟ್ಟು ಬಂದರೂ ಕೂಡಾ ನಾವು ಅವರನ್ನು ನಮ್ಮ ಮಕ್ಕಳ ಹಾಗೆಯೇ ಟ್ರೀಟ್ ಮಾಡುತ್ತೇವೆ. ಇದು ಶಿಕ್ಷಕ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ. 

ನೀವು ಇನ್ನು ಮುಂದೆಯೂ ಸುಮ್ಮನೆ ನನ್ನ ಹೆಸರು ಹೇಳಿ ಅನ್ಯಥಾ ನಿಮ್ಮ ಟೆನ್ಶನ್ ನನ್ನ ತಲೆಗೆ ಕಟ್ಟಿ ಬಿಟ್ಟರೆ ನನಗೆ ಬದುಕುವ ಶಕ್ತಿ ಇಲ್ಲ. ನಾನು ಡೆತ್ ನೋಟ್ ನಲ್ಲಿ ನಿಮ್ಮ ಹೆಸರನ್ನೇ ಬರೆದು ಜೀವನ ಕೊನೆಗೊಳಿಸ ಬೇಕಾಗುತ್ತದೆ ಏಕೆಂದರೆ ತುಂಬಾ ನೊಂದು ಹೋಗಿರುವೆ ಬದುಕಲ್ಲಿ. ನೋವು ತಿಂದು ಸಾಕಾಗಿದೆ. ಜವಾಬ್ದಾರಿ, ಒಂಟಿತನ, ಬೇಸರ, ಶಾರೀರಿಕ ಆರೋಗ್ಯ, ಟೆನ್ಶನ್   ಎಲ್ಲಾ ಸೇರಿ ಮನಸ್ಸು ಕದಡಿ ಹೋಗಿದೆ. ಅದರ ನಡುವೆ ಇಂತಹ ಮತ್ತಷ್ಟು ಟೆನ್ಶನ್ ಹೊರಲು ನನ್ನ ಮನಸ್ಸಿಗೆ ಇಂದು ಶಕ್ತಿ ಇಲ್ಲವಾಗಿದೆ. ದಯವಿಟ್ಟು ಒಂದು ಹೆಣ್ಣಾಗಿ ಅರ್ಥ ಮಾಡಿಕೊಳ್ಳಿ. 

ಇದಕ್ಕೂ ಮೀರಿ ಏನೂ ಹೇಳುವ ಶಕ್ತಿ ನನಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ