ಸುಗ್ಗಿ ಹಬ್ಬ
ಸುಗ್ಗಿ ಹಬ್ಬ ಬಂದಿತಣ್ಣ ಕುಣಿದಾಡಿರೋ
ಹುಗ್ಗಿಯನ್ನು ತಿನ್ನುತಲಿ ನಲಿದಾಡಿರೋ..
ಬಗ್ಗಿ ಎದ್ದು ನಿಂದು ಕಲೆತು ಒಟ್ಟಾಗಿರೋ
ನುಗ್ಗಿ ಬಂದು ಗದ್ದೆಗೆಂದು ಎಲ್ಲಾ ನುಗ್ಗಿರೋ...
ಜಗ್ಗಿ ಬೇಳೆ ಕಾಳು ಭತ್ತ ರಾಗಿ ಜೋಲವೆಲ್ಲ ತೆಗೆಯಿರೋ
ಹಿಗ್ಗಿನಿಂದ ಮನೆಗೊಯ್ಯುತಲಿ ನಾಟ್ಯವಾಡಿರೋ...
ಮುದ್ದು ಮೊಗದ ಹೆಂಗಳೆಯರ ಕೆಲಸ ನೋಡಿರೋ
ಹಟ್ಟಿಯಲ್ಲಿ ಓಡೋ ದನದ ಕರುವ ಹಿಡಿಯಿರೋ
ಮೆಟ್ಟಿ ನಿಂತು ಕಷ್ಟಗಳ ಒಂದಾಗಿರೋ
ಜಟ್ಟಿಯಂತೆ ದುಡಿದು ದಣಿದು ನಿದ್ದೆ ಮಾಡಿರೋ
ಹಳ್ಳಿಯಲ್ಲಿ ಬಾಳ್ವೆ ನೋಡಿ ರೈತನಾಗುತ
ದಿಲ್ಲಿಯಲ್ಲೂ ಬೇಕು ಕೂಳು ಎನುತ ಬೆಳೆಯುತ
ನಲ್ಲಿ ನೀರಿನಲ್ಲೂ ಬೆಳೆಯ ಬೆಳೆದು ತೋರುತ
ಗಲ್ಲಿ ಗಲ್ಲಿಗಳಿಗೂ ತರಕಾರಿ ಹಣ್ಣು ನೀಡುತ
ರೈತ ನಮಗೆ ಊಟ ಕೊಡುವ ತಂದೆ ನೋಡಿರೋ
ನಿಯತ ಬೆಳೆಯ ಬೆಳೆಯೋ ಧರೆಯ ಹಾಡ ಹಾಡಿರೋ
ವಾತ ಪಿತ್ತ ಕಫವ ತಡೆವ ಜನರ ಕೇಳಿರೋ
ಸುಗ್ಗಿ ಬಂದಿತೆಂಬ ವಿಷಯ ಸಾರಿ ಹಾಡಿರೊ
ಹಾಡಿ ಕುಣಿದು ಹಬ್ಬದಲ್ಲಿ ಎಲ್ಲಾ ಒಂದಾಗಿರೋ..ನಕ್ಕು ನಲಿಯಿರೋ
@ಹನಿಬಿಂದು@
06.12.2022
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ