ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -197
ಮಗಳ ಚಿತ್ರಕಲಾ ತರಗತಿ ನಡೆಯುತ್ತಿತ್ತು. ಶಿಕ್ಷಕರು ಟ0ಗ್ ಟ್ವಿಸ್ಟರ್ಸ್ ಬಗ್ಗೆ ಹೇಳುತ್ತಾ ಎಲ್ಲಾ ವಿದ್ಯಾರ್ಥಿಗಳಿಗೂ ಈ ರೀತಿಯ ವಾಕ್ಯಗಳನ್ನು ಕೊಟ್ಟು ವೇಗವಾಗಿ ಉಚ್ಚರಿಸಲು ಹೇಳಿದರು." ತರೀಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಮೇಯ್ತಿತ್ತು" ಇದೇ ಕನ್ನಡದಲ್ಲಿ ಎಲ್ಲಕ್ಕಿಂತ ಎಲ್ಲರಿಗೂ ಪರಿಚಿತ ವಾಕ್ಯ. ಅದನ್ನು ಕೆಲವು ವಿದ್ಯಾರ್ಥಿಗಳು ಹೇಳಿದರು. ಇನ್ನು ಕೆಲವರಿಗೆ ಕಲಿತು ಹೇಳಲು ಹೇಳಿದರು. ಈ ತರದ ವಾಕ್ಯಗಳನ್ನು ತರಗತಿಯಲ್ಲಿ ಕೇಳಿ, ಕಲಿತು ಬನ್ನಿ ಇತರರಿಗೂ ಕಲಿಸಿ ಎಂದರು. ಆಗ ಬಂದ ಉತ್ತರದಿಂದ ಎಲ್ಲವನ್ನೂ ಕೇಳುತ್ತಾ ಹೌಹಾರಿದ್ದು ನಾನು. ಅಲ್ಲೊಬ್ಬಳು ಹುಡುಗಿ ಹೇಳಿದಳು." ನಮಗೆ ಇದನ್ನು ತರಗತಿಯಲ್ಲಿ ಹೇಳಲು, ಕೇಳಲು, ಹೇಳಿ ಕೊಡಲು ಅವಕಾಶ ಇಲ್ಲ"ಕಾರಣ? "ಕಾರಣ ಕನ್ನಡದಲ್ಲಿ ತರಗತಿಯಲ್ಲಿ ಮಾತನಾಡಿದರೆ ಟಿಕೇಟ್ ಕೊಡ್ತಾರೆ, ಇಲ್ಲಾಂದ್ರೆ ನೆಗಟಿವ್ ಪಾಯಿಂಟ್ಸ್, ಅದು ಇಲ್ಲಾಂದ್ರೆ ಎಕ್ಸ್ಟ್ರಾ ಫೈನ್ ಕಟ್ಟಬೇಕು. ಹಾಗಾಗಿ ನಾವು ತರಗತಿಯಲ್ಲಿ ಯಾವಾಗಲೂ ಕನ್ನಡ ಮಾತನಾಡುವುದೇ ಇಲ್ಲ" ಅಂದಳು. ಆಶ್ಚರ್ಯ ಆಯ್ತು. ಕನ್ನಡ ನಾಡಿನಲ್ಲಿ, ಕರ್ನಾಟಕದ ಶಿಕ್ಷಕರಿಂದಲೆ ಶಿಸ್ತಿನ ಹೆಸರಲ್ಲಿ ಕನ್ನಡದ ಕೊಲೆ ಆಗುತ್ತಿದೆ. ಇಂತಹ ಶಿಕ್ಷಣಕ್ಕೆ ಕರ್ನಾಟಕ ಅಂತಹ ಶಾಲೆಗೆ ಮಾನ್ಯತೆ ಕೂಡಾ ನೀಡಿದೆ. ಅಲ್ಲಿ ಕನ್ನಡ ಮಾತನಾಡುವುದೇ ತಪ್ಪು ಎಂದಾದರೆ ನಾವು ಮುಂದಿನ ಜನಾಂಗವನ್ನು ಅಲ್ಲಿ ಯಾವ ದೇಶಕ್ಕಾಗಿ ಸೃಷ್ಟಿ ಮಾಡುತ್ತಿದ್ದೇವೆ ಎಂಬುದೇ ನನ್ನ ಪ್ರಶ್ನೆ.
ಕನ್ನಡ ಓದಲು, ಬರೆಯಲು, ಮಾತನಾಡಲು ಅವಕಾಶ ಕೊಡದ ಶಿಕ್ಷಣವನ್ನು ಕನ್ನಡಿಗರಾದ ನಾವೇ ನಮ್ಮ ಮಕ್ಕಳಿಗೆ ನೀಡುತ್ತಾ ಇದ್ದೇವೆ ಎಂದಾದರೆ ಕನ್ನಡ ಭಾಷೆಗೆ ಹೋರಾಡುವ ಕಾರ್ಯ ಏತಕ್ಕೆ? ಮುಂದಿನ ಜನಾಂಗವನ್ನು ನಾವು ಅಮೆರಿಕಕ್ಕೊ, ಇಂಗ್ಲೆಂಡಿಗೊ, ಪಾಶ್ಚಾತ್ಯ ದೇಶಕ್ಕೊ ಭಾರತದಲ್ಲಿ ಓದಿಸುತ್ತಾ ಇದ್ದೇವೆ ಎಂದಾದರೆ ಭಾರತೀಯ ಮಕ್ಕಳು ನಡೆ ನುಡಿ ಭಾಷೆಯಲ್ಲಿ ಅಂಗ್ಲರಾಗಿ, ಅಂಗ್ಲರದ್ದೆ ಸ್ನೇಹ ಬಯಸಿ ಮುಂದೆ ಆಂಗ್ಲರನ್ನು ಭಾರತಕ್ಕೆ ಕರೆದು ಮುಂದೊಂದು ದಿನ ಹಿಸ್ಟರಿ ರಿಪೀಟ್ಸ್ ಎನ್ನುವ ಹಾಗೆ ಇತಿಹಾಸ ಮರಳಿ ಬ್ರಿಟಿಷರು ಮತ್ತೆ ನಮ್ಮನ್ನು ಆಳಬಹುದು. ಹಾಗೆ ಆದಾಗ ಅವರನ್ನು ವಿರೋಧಿಸಿ ಸ್ವಾತಂತ್ರ್ಯಕ್ಕೆ ಹೋರಾಡುವವರು ಕೇವಲ ಕನ್ನಡ ಮಾಧ್ಯಮದ ಸರಕಾರಿ ಶಾಲೆಯ ಮಕ್ಕಳು ಮಾತ್ರ ಆಗಿರಬಹುದು ಅಲ್ಲವೇ? ಎಲ್ಲೋ ಅಲ್ಲಿ ಇಲ್ಲಿ ಕನ್ನಡ ಇಷ್ಟ ಪಡುವ ಒಂದಷ್ಟು ಮಕ್ಕಳು ಇರಬಹುದು ಅಷ್ಟೇ. ಈ ರೀತಿಯ ವಿದ್ಯಾಭ್ಯಾಸ ಸೃಷ್ಟಿ ಮಾಡಿರುವ ನಾವು ಮುಂದೆ ಯಾವ ಸಂಸ್ಕೃತಿಯನ್ನು ಭಾರತದಲ್ಲಿ ವೀಕ್ಷಿಸಬಹುದು? ಈಗಲೇ ಪೋಷಕರು ತಮ್ಮ ಇಪ್ಪತ್ತು ವರ್ಷ ಕಳೆದ ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ ಎಂದು ಬ್ರಾಂಡೆಡ್ ಚಡ್ಡಿ ಮತ್ತು ಶರ್ಟ್ ಕೊಡಿಸಿ, ಅದನ್ನೇ ಹಾಕಿ ಊರು ಸುತ್ತಿಸುವ ಕಾರ್ಯ ನಡೆದೇ ಇದೆ. ಮಾನ ಮುಚ್ಚುವ ಬಟ್ಟೆಯೂ ನಮ್ಮಲ್ಲಿ ಉಳಿದಿಲ್ಲ ಎಂದು ಕೆಲವು ಹಿಂದಿ, ಕನ್ನಡ ರೆಯಾಲಿಟಿ ಶೋ ಗಳ ಜಡ್ಜ್ ಗಳನ್ನು ನೋಡಿದರೆ ಈಗಾಗಲೇ ನೋಡಿದರೆ ತಿಳಿಯುತ್ತದೆ ಅಲ್ಲವೇ?
ಮುಂದಿನ ಭಾರತದ ಸ್ಥಿತಿಗತಿ ನೆನೆಸಿದರೆ ಅಯ್ಯೋ ಪಾಪ ಅನ್ನಿಸುತ್ತದೆ. ಮಕ್ಕಳಿಗೆ ಅಜ್ಜಿಯರ ಜೊತೆ ಮಾತನಾಡಲು ಮಾತೃ ಭಾಷೆ ಬಾರದು, ಅಜ್ಜಿಯರಿಗೆ ಮೊಮ್ಮಕ್ಕಳ ಜೊತೆ ಮಾತನಾಡಲು ಆಂಗ್ಲ ಭಾಷೆ ಬಾರದು, ಅದು ಮನೆಯೊಳಗೆ ಪರಭಾವ ಕಾಡುವ ಸ್ಥಿತಿ. ಮತ್ತೆ ಹೇಗೋ ಒಂದಿಷ್ಟು ಟಸ್ ಪುಸ್ ಇಂಗ್ಲಿಷ್ ಕಲಿತು ನನ್ನ ಮೊಮ್ಮಗ ಇಂಗ್ಲಿಷ್ ನಲ್ಲಿಯೇ ಮಾತನಾಡುವುದು ಅಂತ ಊರಿಡೀ ಕೊಚ್ಚಿಕೊಂಡು ಬರುವುದು! ಆ ಮಗು ಪಾಪ! ಯಾವ ಭಾಷೆಯಲ್ಲೂ ಸರಿಯಾಗಿ ತನ್ನ ಭಾವನೆ ವ್ಯಕ್ತ ಪಡಿಸಲು ಆಗದೆ ಒದ್ದಾಡುವುದು! ಅಮ್ಮ ಹೋಗಿ ಮಮ್ಮ, ಮೊಮ್, ಮಾಂ, ಮಾ, ಮಮ್ಮಿ ಎಲ್ಲಾ ಬಂದಿದೆ ಈಗ! ಡಾಡ , ಡಾಡಿ, ಡಾಡು, ಡಾಡ್, ಡ್ಯಾಡಿ , ಪಾ, ಸೀನಿಯರ್ ...ಎಲ್ಲಾ ಇರುವ ಇಲ್ಲಿ ಅಪ್ಪ ಎನ್ನುವ ಪದವೆ ಮರೆತು ಹೋದ ಹಾಗಿದೆ!
ಮುಂದೆ ಪ್ರಪಂಚದ ಕಿಟಕಿ ಆಂಗ್ಲ ಭಾಷೆ ಆದ ಕಾರಣ ಅದನ್ನು ಮಾತನಾಡುವ ಅವಕಾಶ ಎಲ್ಲಾ ಕಡೆ ವಿಫುಲವಾಗಿ ದೊರೆಯುತ್ತದೆ. ಆದರೆ ಕನ್ನಡಕ್ಕೆ ಪ್ರಾಶಸ್ತ್ಯ ಎಲ್ಲಿದೆ? ಕನ್ನಡ ಭಾಷೆಗೆ ಕರ್ನಾಟಕ ಬಿಟ್ಟರೆ ಇನ್ನೂ ಹೆಚ್ಚು ಗೌರವ ಎಲ್ಲಿ ಸಿಗಲು ಸಾಧ್ಯ ಅಲ್ಲವೇ?
ಮುಂದೆ ಹರಕಲು ಜೀನ್ಸ್ ಹಾಕಿ, ಅಲ್ಲಿಲ್ಲಿ ಸುತ್ತುತ್ತಾ,ಬರೀ ಪರದೇಶಕ್ಕೆ ಹೋಗುತ್ತಾ, ಮೊಬೈಲ್ ಒತ್ತುತ್ತಾ ನಮ್ಮ ಬಾಲ್ಯ ಹಾಳು ಮಾಡಿಕೊಳ್ಳದೆ ಇರಲಿ, ಸರ್ವರಿಗೂ ಸುಖ ಸಾಗರ ಒದಗಿ ಬರಲಿ ಎಂಬ ಆಶೀರ್ವಾದ ಗಳೊಂದಿಗೆ ನಾವು. ನೀವೇನ0ತೀರಿ?
@ಹನಿಬಿಂದು@
10.08.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ