ಭಾನುವಾರ, ಸೆಪ್ಟೆಂಬರ್ 3, 2023

ಒಂದಿಷ್ಟು...200

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 200

    ಇನ್ನೂರನೇ ವಾರಕ್ಕೆ ಸರ್ವ ಓದುಗರಿಗೆ ಸ್ವಾಗತ ಕೋರುತ್ತಾ ನಿಮ್ಮ ಸಹೃದಯಕ್ಕೆ ನಾ ಸದಾ ಚಿರಋಣಿ. ಒಂದೊಂದು ಅಕ್ಷರವನ್ನೂ ತಿದ್ದಿ ತೀಡಿ ಕಲಿಸಿ ಬೆಳೆಸಿದ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ, ಕಾಲೇಜು ಹಾಗೂ ಉನ್ನತ ತರಗತಿಗಳಲ್ಲಿ ಬೋಧಿಸಿದ ನನ್ನೆಲ್ಲಾ ಗುರು ವೃಂದದ ಪಾದಾರವಿಂದಕ್ಕೆ ನಮಿಸುತ್ತಾ, ಮೊದಲ ಗುರು ಅಮ್ಮನಿಗೂ , ನನ್ನೊಡನೆ ವಿದ್ಯಾರ್ಥಿಗಳಿಗೆ ಬೋಧಿಸುತ್ತ, ಬೋಧಿಸುವ ಕಾಯಕವನ್ನು ಜೀವನದ ಧ್ಯೇಯ, ವೃತ್ತಿ ಹಾಗೂ ಪ್ರವೃತ್ತಿಯಾಗಿಸಿಕೊಂಡ  ಸರ್ವ ಗುರು ಸಂ ನುಕುಲಕ್ಕೆ ಶಿಕ್ಷಕರ ದಿನದ ಶುಭಾಶಯಗಳನ್ನು ಕೋರುತ್ತೇನೆ. 
      ಒಂದೆಡೆ ವಿಪರೀತ ಹರ್ಷದಲ್ಲಿ ಈ ಅಂಕಣ ಪ್ರಾರಂಭಿಸಿರುವೆ. ಇನ್ನೊಂದೆಡೆ ಒಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಇರುವ ಕಾರಣ ನನ್ನ ಆರೋಗ್ಯ  ಹದಗೆಟ್ಟು ಹೋಗಿದೆ. ಕಾರಣ ಇಷ್ಟೇ. ಬೆಂಗಳೂರಿನಲ್ಲಿ ಇರುವ ವಿಪರೀತ ಜನದಟ್ಟಣೆ ಹಾಗೂ ವಾಹನಗಳ ಸಂಖ್ಯೆಯ ಏರುವಿಕೆಯಿಂದಾಗಿ ಇಲ್ಲಿನ ಪರಿಸರ ಪೂರ್ತಿ ಬಿಸಿಯಾಗಿ ಗಾಳಿ ಎಲ್ಲಾ ವಿಷಯುಕ್ತವಾಗಿದೆ. ಇದು ಹೊರಗಿನಿಂದ  ಬಂದ ಜನರಿಗೆ ಆದಷ್ಟು ಬೇಗ ಹೊಂದಾಣಿಕೆ ಆಗಲು ಸಾಧ್ಯವಾಗದ ಹಾಗೆ ಮಾಡುತ್ತದೆ. ಎಷ್ಟೇ ಒಳ್ಳೆಯ ಶಕ್ತಿಯುತ ಜನರಿಗೂ ಇಲ್ಲಿನ ಬಿಸಿಲಿನಲ್ಲಿ ಒಂದು ದಿನ ರಸ್ತೆ ಬದಿ ನಡೆದರೆ ಇಲ್ಲಿನ ವಿಷಪೂರಿತ ಮಲಿನ ಗಾಳಿಯ ಅನುಭವ ದೇಹದ ಮೇಲೆ ಆಗಿಯೇ ಆಗುತ್ತದೆ. ಇಲ್ಲೇ ಇದ್ದವರಿಗೆ ದೇಹ ಹೊಂದಾಣಿಕೆ ಆಗಿಬಿಟ್ಟಿದೆ. ಹೊರಗಿನಿಂದ ಬಂದವರು ಸರಿಯಾಗಿ ಇಲ್ಲಿಗೆ ಹೊಂದಿಕೊಳ್ಳಲು ಬಹಳ ಕಾಲ ಬೇಕಾಗಬಹುದು. ವಿಪರೀತ ಬಿಸಿಲು ಹಾಗೂ ಮೈ ಪೂರ್ತಿ ಬೆವರಿನಿಂದ ತೊಯ್ದು ಒದ್ದೆಯಾಗುವ ದಕ್ಷಿಣ ಕನ್ನಡದ ಊರುಗಳಲ್ಲಿ ಇದ್ದು ಇಲ್ಲಿಗೆ ಬಂದು ತಕ್ಷಣ ಹೊಂದಿಕೊಳ್ಳಲು ಕಷ್ಟವೇ ಸರಿ. ಚೆನ್ನಾಗಿಯೇ ಇದ್ದರೆ ಓಕೆ.ಒಮ್ಮೆ ವೈರಲ್ ಶೀತ, ತಲೆನೋವು ಜ್ವರ ಪ್ರಾರಂಭವಾದರೆ ಸಾಕು. ಸಧ್ಯಕ್ಕೆ ಕಡಿಮೆ ಆಗುವ ಲಕ್ಷಣವೇ ಇಲ್ಲ, ಇದರ ಜೊತೆಗೆ ಕೆಮ್ಮು ಫ್ರೀ. ಹಾಗೆಯೇ ಇಲ್ಲಿನ ಬೋರ್ ನೀರಿಗೆ ಮೈಯ ಚರ್ಮವೆಲ್ಲಾ ಒಣಗಿ ಸುಕ್ಕಾಗಿ ತಲೆ ಕೂದಲಲ್ಲಿ ಹೊಟ್ಟಾಗಿ, ಚರ್ಮ ಹಾವಿನ ಪೊರೆಯ ಹಾಗೆ ಆಗಿ ಬಿಡುತ್ತದೆ. ತಂಪು ಹವೆಯಿದ್ದರೂ ದೇಹ ಒಣಗುವ ಕಾರಣ ಭೂ ವಾತಾವರಣ ವಿಪರೀತ ವಾಹನದ ಹೊಗೆಯಿಂದ ದೇಹದ ಚರ್ಮ ಒಣಗಿ ಹೋಗುತ್ತದೆ. ಇಲ್ಲಿನ ಹವಾಮಾನಕ್ಕೆ ಹೊಂದಾಣಿಕೆ ಆದ ದೇಹಕ್ಕೆ ಇದರ ತೊಂದರೆ ಇಲ್ಲ ಅನ್ನಿಸುತ್ತದೆ. 
     ನಮ್ಮ ಪರಿಸರ, ನಮ್ಮ ಭೂಮಿ, ನಮ್ಮ ನೆಲ, ನಮ್ಮ ಜಲ, ಪಂಚ ಭೂತ ಎನ್ನುತ್ತಾ ಭೂಮಿಯನ್ನು ಪೂಜೆ ಮಾಡುವ ನೆಪ ಮಾತ್ರ ಇಂದಿನ ಜನರಲ್ಲಿ. ಹೇಳುವುದು ಒಂದು ಮಾಡುವುದು ಇನ್ನೊಂದು. ಸಾವಿರಾರು ಆಚರಣೆಗಳು ವೇದಿಕೆಯಲ್ಲಿ ಮಾತ್ರ. ವನ ಮಹೋತ್ಸವದ ದಿನ ನೆಟ್ಟ ಗಿಡ ಮರುದಿನವೇ ಒಣಗಿ ಹೋಗಿರುತ್ತದೆ. ಮತ್ತೆ ಅದಕ್ಕೆ ನೀರು ಹಾಕುವ ಗತಿಯಿಲ್ಲ. ಇನ್ನು ವೇದಿಕೆಯಲ್ಲಿ ಉದ್ದುದ್ದ ಭಾಷಣ ಮಾಡುವುದರಲ್ಲಿ ನಾವು ನಿಸ್ಸೀಮರು. ಆದರೆ ನಿಜವಾಗಿ ಪ್ರಕೃತಿ ಉಳಿಸುವ ಕಾರ್ಯ ಅದೆಷ್ಟು ಆಗಿದೆಯೋ ಅದು ನಮ್ಮ ಬಿಸಿಯಾಗುತ್ತಿರುವ ಭೂಮಿಯಲ್ಲಿ, ತೇಲಿ ಬರುತ್ತಿರುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ, ರಾಶಿ ಬಿದ್ದಿರುವ ಕಸದ ಗುಡ್ಡಗಳಲ್ಲಿ ನಮಗಿರುವ ಪ್ರಕೃತಿ ಮಾತೆಯ ಕಾಳಜಿ ಕಾಣುತ್ತದೆ. ಎಲ್ಲೋ ಅಲ್ಲಲ್ಲಿ ಒಬ್ಬೊಬ್ಬ ಪರಿಸರ ಕಾಳಜಿ ಇರುವ ವ್ಯಕ್ತಿಗಳು ಗಿಡ ಮರ ನೆಟ್ಟು, ನೀರು ಇಂಗಿಸಿ, ನದಿ ಸ್ವಚ್ಛಗೊಳಿಸಿ, ಊರನ್ನು ಹಸಿರಾಗಿಸಿ ಪ್ರಕೃತಿಗೆ ಒಳಿತು ಮಾಡಿರುವುದು ಬಿಟ್ಟರೆ ನಾವೆಲ್ಲರೂ ಪ್ಲಾಸ್ಟಿಕ್, ಚೂಯಿಂಗ್ ಗಮ್ ನಿಂದ ಹಿಡಿದು ಬಳಸಿದ ಪೇಸ್ಟ್, ಬ್ರಷ್ ಎಲ್ಲವನ್ನೂ  ಭೂಮಿಗಿಳಿಸಿ ನಿರಾಳರಾಗುವ ನಾವು. ರೈತರೂ ಕೂಡಾ ಹಣದ ಆಸೆ, ಬೆಳೆ ಉತ್ತಮವಾಗಿ ಬರಲು ವಿವಿಧ ರಾಸಾಯನಿಕಗಳನ್ನು ಮಣ್ಣಿಗೆ ಸುರಿದು ಉತ್ತಮ ಬೆಳೆ ಪಡೆದು ಅದನ್ನು ಒಳ್ಳೆಯ ಬೆಲೆಗೆ ಮಾರುತ್ತಾರೆ. ರಾಸಾಯನಿಕ ವಿಷ ಸುರಿದ ತಾವೇ ಬೆಳೆದ ಬೆಳೆಯನ್ನು ಉಪಯೋಗಿಸದ ರೈತರ ಸಂಖ್ಯೆಯೂ ಕಡಿಮೆ ಇಲ್ಲ ಬಿಡಿ. ಹೆಚ್ಚುತ್ತಿರುವ ಜನಸಂಖ್ಯೆಗೆ ಬೇಕಾದ ಆಹಾರವನ್ನು ಕಡಿಮೆ ಆಗದ ಹಾಗೆ ಪೂರೈಸುವ ಜವಾಬ್ದಾರಿಯೂ ರೈತರ ಮೇಲೆ ಇದೆ ಅಲ್ಲವೇ? ಪಾಪ ಅವರಾದರೂ ಏನು ಮಾಡಿಯಾರು? ಇನ್ನು ಬೇಡಿಕೆ ಹೆಚ್ಚಿದರೂ ಹಣ ದಲ್ಲಾಳಿಯ ಪಾಲಿಗೆ, ಮಾರಾಟಗಾರರಿಗೆ ಹೊರತು ಕಷ್ಟ ಪಟ್ಟ ರೈತರಿಗೆ ಸಿಗುವ ಹಣ ಕೊಂಚವೇ. ಇದು ನಮ್ಮ ಜೀವನ ಪದ್ಧತಿಯೇ ಆಗಿ ಹೋಗಿದೆ ಬಿಡಿ. ಕಾಲಾಯ ತಸ್ಮಯೇ ನಮಃ ಎನ್ನ ಬೇಕಷ್ಟೆ! ಬೇರೇನೂ ವಿಧಿ ಇಲ್ಲ. ರಾಸಾಯನಿಕ ಇಲ್ಲದ ಸಾವಯವ ಆಹಾರ ತುಂಬಾ ತುಟ್ಟಿ. ಅದನ್ನು ಎಲ್ಲರೂ ಬಳಸಲು ಸಾಧ್ಯ ಆಗದ ಮಾತು. ಬಡ ಮಧ್ಯಮ ವರ್ಗ ಹಾಗೂ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳು ಭಾರತದಲ್ಲಿ ಅಧಿಕ ಆಗಿರುವ ಕಾರಣ ಅವರ ಬದುಕು ಯಾವಾಗಲೂ ದುಸ್ತರವೇ. ಆರಕ್ಕೆ ಏರುವುದಿಲ್ಲ,ಮೂರಕ್ಕೆ ಇಳಿಯುವುದಿಲ್ಲ ಅಂಥವರ ಬದುಕು. ಇನ್ನು ಗಂಡ ಕುಡುಕನಾಗಿದ್ದು ಅವನು ದುಡಿದ ಎಲ್ಲಾ ಹಣ ಕುಡಿತ, ಗೆಳೆಯರು ಅಂತ ಖರ್ಚು ಮಾಡಿ ಮಹಿಳೆಯೇ ಕುಟುಂಬ ನೋಡಿಕೊಳ್ಳುವ ಅನಿವಾರ್ಯತೆ, ಗಂಡ ಸತ್ತು ಮಹಿಳೆ ಕುಟುಂಬದ ಭಾರ ಎಳೆಯುವ ಕುಟುಂಬಗಳು ನಮ್ಮ ದೇಶದಲ್ಲಿ ಹಲವಾರು ಇರುವ ಕಾರಣ ಬಡತನ ಇನ್ನೂ ಇದೆ. ಇಂತಹ ದೇಶಕ್ಕೆ ಗುಣಮಟ್ಟದ ಬದಲು ಪ್ರಮಾಣವನ್ನು ಮಾನದಂಡವಾಗಿ ಇಡಬೇಕಾಗುತ್ತದೆ. ಹೀಗಾಗಿಯೇ ಸರಕಾರದ ಉಚಿತ ಪಡಿತರ ವಿತರಣೆಯ ಸಾಮಾಗ್ರಿಗಳಿಗೆ ಬಹು ಬೇಡಿಕೆ. ಅಲ್ಲಿ ಸಿಗುವ ಅಕ್ಕಿ, ಗೋಧಿ , ರಾಗಿ, ಎಣ್ಣೆ, ಸಕ್ಕರೆಗೆ ಜನ ಸರತಿಯ ಸಾಲಲ್ಲಿ ನಿಂತು, ಪಡೆದು, ರಿಕ್ಷಾ ಮಾಡಿ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ. ಹೀಗಿರುವಾಗ ಎಲ್ಲವನ್ನೂ ಒಳ್ಳೆಯ ಗುಣಮಟ್ಟದಲ್ಲಿಯೇ ಬಯಸಲು ಸಾಧ್ಯವೇ? ಆದರೂ ಭಾರತೀಯರಲ್ಲಿ ಇರುವ ಕಡಿಮೆ ಬೆಲೆಯ ಕೊಳ್ಳುಬಾಕ ಸಂಸ್ಕೃತಿಯನ್ನು ಚೀನಾ ದೇಶದ ಜನ ಚೆನ್ನಾಗಿಯೇ ಅರ್ಥ ಮಾಡಿಕೊಂಡು ಚೀನಾ ಬಜಾರ್ ಭಾರತದಲ್ಲಿ ನೆಲೆ ಊರುವಂತೆ ಮಾಡಿ ಬಿಟ್ಟಿದ್ದಾರೆ ಅಲ್ಲವೇ! ಅಲ್ಲಿ ಸಿಗುವ ಕಡಿಮೆ ಬೆಲೆಯ ಎಲ್ಲಾ ವಸ್ತುಗಳೂ, ಬಳಸಿ ಬಿಸಾಕುವ ವಸ್ತುಗಳೂ ಪರಿಸರಕ್ಕೆ ಮಾರಕವೇ. ಆದರೂ ಜನರ ಆಸೆ ಕಡಿಮೆ ಆಗಿಲ್ಲ. 
   ಭೂಮಿಯನ್ನು ಮನುಷ್ಯನ ಹೊರತು ಯಾವುದೇ ಪ್ರಾಣಿ ಪಕ್ಷಿಗಳೂ ಭೂಮಿಯನ್ನು ಹಾಳು ಮಾಡಲಾರವು. ಎಲ್ಲವೂ ತಮ್ಮ ಆಹಾರಕ್ಕಾಗಿ , ಅವಾಸಕ್ಕಾಗಿ, ಬದುಕಿಗಾಗಿ ಅವಲಂಬಿಸಿರುವ ಏಕೈಕ ಜಾಗ ಭೂಮಿ. ಅದನ್ನು ಚೆನ್ನಾಗಿ ಕಾಯ್ದುಕೊಳ್ಳಬೇಕಾದುದು ನಮ್ಮ ಧರ್ಮ. ಆದರೆ ಮನುಷ್ಯ ಬುದ್ಧಿ ಜೀವಿ ಆಗಿದ್ದರೂ ಕೂಡಾ ತನ್ನ ವಿಪರೀತ ದುರಾಸೆಯಿಂದ ಭೂಮಿಯ ಒಳಗೆ ಕೈ ಹಾಕಿ ಭೂಮಿಯನ್ನು ಬರಿದು ಮಾಡಿರುವುದೇ ಅಲ್ಲದೆ, ಮಣ್ಣು, ನೀರು, ಗಾಳಿಗೂ ವಿಷ ಹಾಕಿ ಇನ್ನು ಮುಂದಿನ ಜನಾಂಗ ಒಳ್ಳೆಯ ಬದುಕು ನಡೆಸಲು ಕೂಡಾ ಸಾಧ್ಯವಾಗದ ಹಾಗೆ ಮಾಡಿರುವುದು ವಿಪರ್ಯಾಸವೇ ಸರಿ. 
   ಪ್ರತಿಯೊಬ್ಬ ಮಾನವನೂ ತಾನು ಪರಿಸರವನ್ನು ಸ್ವಚ್ಚವಾಗಿ ಇಡುತ್ತೇನೆ ಎಂಬ ಪಣ ತೊಟ್ಟರೆ ಗಾಂಧಿ ಜಯಂತಿ ಆಚರಣೆ ಸಾರ್ಥಕವಾದಂತೆ. ಅಲ್ಲದೆ ನನ್ನಿಂದ ಪರಿಸರಕ್ಕೆ  ಹಾನಿ ಆಗುವ ಯಾವ ವಸ್ತುವೂ ಎಸೆಯಲ್ಪಡುವುದಿಲ್ಲ ಎಂಬ ಧ್ಯೇಯ ವಾಕ್ಯವನ್ನು ಎಲ್ಲರೂ ಪಾಲಿಸಬೇಕು. ಐಸ್ ಕ್ರೀಂ ಕಪ್, ಚಾಕೋಲೇಟ್ ಪೇಪರ್ ಗಳನ್ನು ಕಂಡ ಕಂಡಲ್ಲಿ ಎಸೆಯುವುದನ್ನು ತಪ್ಪಿಸಬೇಕು. ನನ್ನಿಂದ ಪರಿಸರ ಹಾಳಾಗಬಾರದು ಎಂಬುದನ್ನು ಮನದಲ್ಲಿ ಇರಿಸಬೇಕು. ಎಲ್ಲರೂ ಈ ರೀತಿ ವರ್ತಿಸಿದರೆ ಶಿಕ್ಷಕರಿಗೂ ಸಂತೋಷ. ವಿದ್ಯಾರ್ಥಿಗಳು ಶಿಕ್ಷಕರಿಗೆ ಖುಷಿ ಪಡಿಸಲು ಈ ಶಿಕ್ಷಕರ ದಿನಾಚರಣೆಯ ಬಳಿಕ ನಾವೆಂದೂ ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆಯುವುದಿಲ್ಲ ಎಂದು ಪಣ ತೊಡಿ. ಶಿಕ್ಷಕರನ್ನು ಸಂತಸವಾಗಿ ಇಡಲು ನಿಮ್ಮ ತರಗತಿ ಹಾಗೂ ಶಾಲೆಯ ಪರಿಸರ ಶುಚಿ ಇಡಿ. ಅಷ್ಟೇ ಸಾಕು. ನಮ್ಮ ದೇಹ, ಮನೆ, ಶಾಲೆ, ಸುತ್ತ ಮುತ್ತ, ಪ್ರಕೃತಿ, ಭೂಮಿ ಎಲ್ಲವೂ ನಮ್ಮದೇ, ಎಲ್ಲವನ್ನೂ ಶುಚಿಯಾಗಿ ಇಡೋಣ, ಮುಂದಿನ ಜನಾಂಗಕ್ಕೆ ಒಳ್ಳೆಯ ಭೂಮಿಯನ್ನು  ಧಾರೆ ಎರೆಯುವ ಕಾರ್ಯ ಮಾಡೋಣ. ನೀವೇನಂತೀರಿ?
@ಹನಿಬಿಂದು@
02.09.2023

ಭಾರತ ಪ್ರಕಾಶಿಸುತ್ತಿದೆ. ವಿಕ್ರಮ್ ಲ್ಯಾಂಡರ್  ಚಂದ್ರನನ್ನು ತಲುಪಿ ಇನ್ನೇನು ಪ್ರಗ್ಯಾನ್ ರೋವರ್ ವಿಷಯ ಕಲೆ ಹಾಕಿ ಭಾರತ ಅದನ್ನು ಪಡೆಯಲಿದೆ. ಚಂದ್ರನ ಮೇಲೆ ತಾನು ತಲುಪಿರುವ ಸುದ್ದಿ ನಾಲ್ಕು ಫೋಟೋಗಳನ್ನು ಕಳುಹಿಸುವ ಮೂಲಕ ಅದು ನಮಗೆ ನೀಡಿದೆ. ಚಂದ್ರನ ಒಂದು ದಿನ ಎಂದರೆ ಭೂಮಿಯ ಹದಿನಾಲ್ಕು ದಿನಗಳಂತೆ. ವಿಕ್ರಮ್ ಲ್ಯಾಂಡರ್ ಸ್ವಲ್ಪ ರೆಸ್ಟ್ ಮಾಡಲಿದೆ. ಕಾರಣ ಚಂದ್ರನಲ್ಲಿನ ಧೂಳಿನಿಂದ ಮುಕ್ತಿ ಸಿಗಲಿ ಅಂತ. ಇದೆಲ್ಲ ನಮಗೆ ವಿಜ್ಞಾನಿಗಳು ಕೊಟ್ಟ ಹೇಳಿಕೆ, ವಾರ್ತೆಗಳ ಮೂಲಕ ತಿಳಿದದ್ದು. ಇದರ ಮುಂದೆ ಮೊದಲೇ ಚಂದ್ರನಲ್ಲಿಗೆ ವ್ಯೋಮ ನೌಕೆಗಳನ್ನು ಕಳುಹಿಸಿದ್ದ ರಷ್ಯಾ, ಅಮೆರಿಕ, ಚೀನಾ ದೇಶಗಳ ಸಾಲಿಗೆ ಭಾರತ ಸೇರುತ್ತದೆ. ಭಾರತದ ಶಿಖರಕ್ಕೆ ಒಂದು ಗರಿ ಇದು.  ಭಾರತ ಮುಂದುವರೆಯುತ್ತಿರುವ ರಾಷ್ಟ್ರ ಇನ್ನೂ ಕೂಡ. ಇಲ್ಲಿ ಅತಿ ಸಿರಿವಂತರು ಕೂಡಾ ಇದ್ದಾರೆ, ಏನೂ ಇಲ್ಲದೆ ಕಿತ್ತು ತಿನ್ನುವ ಬಡತನವೂ ಇದೆ. ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುವ, ಹಗ್ಗದ ಮೇಲೆ ನಡೆಯುವ, ತನಗೆ ತಾನೇ ಹಿಂಸೆ ಕೊಟ್ಟುಕೊಳ್ಳುವ, ಹೊರಲಾರದ ಹೊರೆ ಹೊರುವ, ಮೊಬೈಲ್ ಟವರ್ ಗಳನ್ನು ಕಟ್ಟುವಂತಹ ಕಷ್ಟದ ಕೆಲಸ ಮಾಡುವ, ನಿತ್ಯ ಕೂಲಿಯ ಜನ ಅಷ್ಟೇ ಅಲ್ಲದೆ ಮೈ ಮಾರಿಕೊಂಡು ಬದುಕುವ, ಪರರ ಮನೆಯ ಪಾತ್ರೆ ತೊಳೆಯುವುದು, ಬಟ್ಟೆ ಒಗೆದು ಅವರು ಕೊಟ್ಟದ್ದನ್ನು ತಿಂದು ಬದುಕುವ ಜನರೂ ಅದೆಷ್ಟೋ ಇದ್ದಾರೆ. ಬದುಕಲು ಕೂಡದೆ ಕಳ್ಳತನ ಮಾಡಿ, ಅವರಿವರಿಗೆ ಮೋಸ ಮಾಡಿ ಬದುಕುವವರು ಒಂದೆಡೆ ಆದರೆ, ದೊಡ್ಡ ದೊಡ್ಡ ಮಂತ್ರಿಗಳ, ಅಫೀಸರುಗಳ ಹಿಂದೆ ಹಿಂದೆ ಸುತ್ತುತ್ತಾ ಅವರ ಹಣದಲ್ಲೇ ಬದುಕುವ ಅಡ್ನಾಡಿ ಜನರೂ ನಮಗೆ ಸಿಗುತ್ತಾರೆ. ಒಟ್ಟಿನಲ್ಲಿ ಬದುಕು ಪ್ರತಿಯೊಬ್ಬರಿಗೂ ವಿಭಿನ್ನ. ಕೆಲವರಿಗೆ ಹಣದ ಹೊಳೆ ಹರಿದರೆ ಇನ್ನೊಬ್ಬ ಒಂದೊಂದು ರೂಪಾಯಿಗೂ ಪರದಾಡುತ್ತ ಇರುತ್ತಾನೆ. ಒಬ್ಬರ ಮನೆಯಲ್ಲಿ ನಾಲ್ಕೈದು ಗಾಡಿಗಳಿದ್ದರೆ ಇನ್ನೊಬ್ಬನಿಗೆ ಸೈಕಲ್ ಕೊಳ್ಳಲೂ ಸಾಧ್ಯವಾಗುವುದಿಲ್ಲ. 
      ಒಬ್ಬ ವರ್ಷಕ್ಕೆರಡು ಬಾರಿ ಐಷಾರಾಮಿ ಕಾರು ಬದಲಿಸಿದರೆ ಇನ್ನೊಬ್ಬ ವರ್ಷವಿಡೀ ಎರಡೇ ಬಟ್ಟೆಯಲ್ಲಿ ಜೀವನ ಸಾಗಿಸುತ್ತಾನೆ. ಇದು ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದಲ್ಲೆಲ್ಲ ಹೀಗೆಯೇ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶ ಏನೇನೋ ಸಾಧನೆ ಮಾಡಿದ್ದರು ಕೂಡ ತಮ್ಮ ದೈಹಿಕ ಅನಾರೋಗ್ಯಕ್ಕೆ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಎಲ್ಲರ ಬಳಿ ಸಾಮಾಜಿಕ ಜಾಲ ತಾಣಗಳ ಮೂಲಕ  ಕೇಳಿ ತಮ್ಮ ಬದುಕುವ ಆಸೆ ವ್ಯಕ್ತ ಪಡಿಸುವ ಅದೆಷ್ಟು ಮಂದಿ ನಮ್ಮ ಮುಂದೆ ಇದ್ದಾರೆ! ಯಾಕೆಂದರೆ ನಮ್ಮ ಸುತ್ತಮುತ್ತ ನಮ್ಮನ್ನೂ ಸೇರಿಸಿ ಸಾಧಾರಣ ಜನರೇ ಹೆಚ್ಚು. ಕೆಲವರು ದಾನಿಗಳೂ ಇದ್ದಾರೆ. ಕೆಟ್ಟ ಜನರು ಮೋಸ, ದರೋಡೆ, ಕಳ್ಳತನ, ಕೊಲೆ, ಸುಲಿಗೆ ಮಾಡಿ ಜೀವಿಸುವವರು ಒಂದೆಡೆ ಆದರೆ ತಾನು ದುಡಿದ ಹಣದಲ್ಲಿ ವೃದ್ಧಾಶ್ರಮ, ವಿದ್ಯಾರ್ಥಿಗಳಿಗೆ ಶಾಲೆ, ಹಾಸ್ಟೆಲ್, ಉಚಿತ ವಿದ್ಯೆ, ಬಡವರಿಗೆ ನಿತ್ಯ ಬಳಕೆಯ ಸಾಮಾನು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ , ರೋಗಿಗಳಿಗೆ ಸಹಾಯ ಮಾಡುವ ಉನ್ನತ ಹೃದಯಿ, ಉದಾರ ದಾನಿಗಳಿಗೂ ಕೊರತೆ ಇಲ್ಲ. ಪಾಪ ಪುಣ್ಯಗಳ ಬಗ್ಗೆ ನಂಬಿಕೆ ಇರುವವರು ಒಂದೆಡೆ ಆದರೆ ಇನ್ನೊಂದೆಡೆ ನಾವು ವೈಜ್ಞಾನಿಕ ಯುಗದಲ್ಲಿ ಇದ್ದೇವೆ, ಬೆಳಗ್ಗೆ ಪ್ರಾರ್ಥನೆ ಯಾಕೆ ಮಾಡಬೇಕು? ಸಾರ್ವಜನಿಕ ಪೂಜೆ ಸಲ್ಲದು, ಬೇಕಿದ್ದರೆ ಮನೆಯೊಳಗೆ ಕುಳಿತು ಒಬ್ಬನೇ ಪೂಜೆ ಮಾಡು ಎನ್ನುವ ಜನರೂ ಇರುವ ಈ ದೇಶದಲ್ಲಿ ಪ್ರತಿಯೊಂದು ಕಡೆಯೂ ವಿವಿಧತೆ. ಆ ವಿವಿಧತೆಯಲ್ಲಿ ಏಕತೆ ಇರಲಿ ಎಂಬುದು ನಮ್ಮ ಹಾರೈಕೆ. 
    ಭಾರತ ಹೊಳೆಯಲಿ, ಭಾರತ ಬೆಳಗಲಿ, ಭಾರತದ ಕೀರ್ತಿ ಪತಾಕೆ ಹಾರಲಿ, ಭಾರತ ವಿಶ್ವದ ನಂಬರ್ ವನ್ ರಾಷ್ಟ್ರ ಆಗಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಲಿ. ಆ ದಿಶೆಯಲ್ಲಿ ಜೀವನ ಸಾಗಲಿ. ನಾನೊಬ್ಬ ಸಿರಿವಂತ ಆದರೆ ಸಾಕು ಎಂಬ ಸ್ವಾರ್ಥ ಭಾವ ಬಾರದೆ ಇರಲಿ. ಪುಕ್ಕಟೆ ಸಿಗುವ ವಸ್ತು, ಹಣವನ್ನು ಬಯಸಿ ಜನ ತಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳದೆ ಇರಲಿ, ಉತ್ತಮ ನಾಯಕರು ಪ್ರತಿ ಹಂತದಲ್ಲಿ ಇರಲಿ. ಹೆಂಡ, ತುಂಡು, ಗುಂಡಿಗೆ ಜನ ದಾಸರಾಗದೇ ಇರಲಿ. ಜಾತಿ, ಮತ, ಮೀಸಲಾತಿಗಾಗಿ ಒಳ ಜಗಳ ಬಾರದೆ ಇರಲಿ. ಪ್ರಜಾಪ್ರಭುತ್ವ ಯಶಸ್ವಿ ಆಗಲಿ ಬದಲಾಗಿ ಸ್ವಾರ್ಥಕ್ಕೆ ಉಪಯೋಗ ಆಗದೆ ಇರಲಿ.ವರ ಮಹಾಲಕ್ಷ್ಮಿ ಎಲ್ಲರ ಮೇಲೂ ಕೃಪೆ ತೋರಲಿ. ಹಣವಂತರ ಮನೆಯಲ್ಲಿ ಸೊಪ್ಪು , ತರಕಾರಿ, ಹಣ್ಣು ಕಸದ ತೊಟ್ಟಿ ಸೇರದೆ, ಬಡವರ ಹೊಟ್ಟೆ ತುಂಬುವ ಹಾಗಾಗಲಿ, ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಲಿ. ಆಸ್ಪತ್ರೆ ಬಿಲ್ಲು ಕಟ್ಟುವ ಶಕ್ತಿ ಬರಲಿ. ಚಂದ್ರನಲ್ಲಿ ಹೋದಂತೆ, ಎಲ್ಲಾ ಕ್ಷೇತ್ರದಲ್ಲೂ ಜನರಿಗೂ ಜಯ ಸಿಗಲಿ, ಮನುಷ್ಯರ ಹೃದಯ ವಿಶಾಲವಾಗಿ ಇರಲಿ ಎಂಬ ಭಾವ ನಮ್ಮದು. ಅಲ್ಲವೇ? 
ಭಾರತ ಬೆಳಗಲಿ. ನೀವೇನಂತೀರಿ?
@ಹನಿ ಬಿಂದು@
26.08.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ