ಗಾಂಧಿ ಕೇಳು...
ಗಾಂಧಿ ತಾತ ನೀನು ಹುಟ್ಟಿ ಏನೋ ಮಾಡಿದೆ
ಮಂದಿ ನಿನ್ನ ಹೆಸರು ಹೇಳಿ ಅನ್ಯಾಯ ಬೆಳೆಸಿದೆ
ರಸ್ತೆಗಳಿಗೂ ಕೆಲಸಗಳಿಗೂ ನಿನ್ನ ಹೆಸರಿದೆ
ಆದರೇನು ಸರಿಯಾದ ಕಾರ್ಯ ನಡೆಯದಾಗಿದೆ
ನಿನ್ನ ಜನುಮದಿನದಂದು ಸ್ವಚ್ಛತೆಯು ಸಾಗಿದೆ
ಮರುದಿನವೇ ಕಸದ ರಾಶಿ ಅಲ್ಲೇ ಬಿದ್ದಿದೆ
ನಿನ್ನ ನಡೆಯ ಜನರು ಎಲ್ಲ ಆಡುತಿರುವರು
ನೀನು ಹೇಳಿ ಕೊಟ್ಟ ಕಾರ್ಯ ಮಾಡಲೊಲ್ಲರು
ನಿನ್ನ ಹೆಸರಲ್ಲೆಲ್ಲ ತಾವು ಹಣವ ಗಳಿಸುತ
ತಮ್ಮ ತಮ್ಮ ಜೇಬು ಭರ್ತಿ ಮಾಡಿ ನಗುವ ಚೆಲ್ಲುತ
ತಿಂದು ಉಳಿದುದಲ್ಲಲ್ಲೆಸೆದು ಮುಂದೆ ಸಾಗುತ
ಸ್ವಚ್ಛ ಎಂದು ಗಿಡ ಮರಗಳ ಕಡಿ ಕಡಿದು ಎಸೆಯುತ...
ಪ್ಲಾಸ್ಟಿಕ್ ರಾಕ್ಷಸನ ಬಳಸುತಲೆ ಬಾಳುವರು
ರಸ್ತೆ ರಸ್ತೆಗಳಿಗೂ ಅದನು ಬಿಸಾಕಿ ಬಿಡುವರು
ಯಾರೋ ಬಂದು ಎಲ್ಲ ಎತ್ತಿ ಫೋಟೋ ತೆಗೆವರು
ಎಸೆವ ಜನಕೆ ಇಲ್ಲಿ ಯಾರೂ ಏನೂ ಹೇಳರು
ಚಾಕಲೇಟು ಚಿಪ್ಸ್ ತಿನುವ ಮಕ್ಕಳಿರುವರು
ತಿಂದು ಕಸವ ಅಲ್ಲೇ ಸುರಿದು ಮುಂದೆ ಸಾಗುವರು
ಯಾರಿಗಿಲ್ಲಿ ಯಾರು ಹೇಳು ಯಾರು ಕೇಳುವರು
ತಾನೇ ಎನುತ ಎಲ್ಲಾ ಕಡೆಯು ತಾವೇ ಮೆರೆವರು
ಬದುಕ ಜಾಲದಲ್ಲಿ ನಿನ್ನ ಮಾತು ಮರೆತರು
ಹೆಂಡ ಬಿಯರ್ ಹಾಟ್ ಇಲ್ಲದೆ ಪಾರ್ಟಿ ಮಾಡರು
ತುಂಡು ತಿಂದು ತೇಗಿ ಬಳಿಕ ಪ್ರಾಣಿ ಹಿಂಸೆ ಎನುವರು
ತಮ್ಮ ಬದುಕು ಸರಿಯಾಗಿದೆ ಅಂದು ಕೊಂಡರು
ನಿನ್ನ ಪದವ ಗಾಳಿಗೆಲ್ಲೋ ತೂರಿ ಆಗಿದೆ
ತಾನೇ ದೇವರೆನುತ ಇಂದು ಬಾಳು ಸಾಗಿದೆ
ನೀನು ಇಲ್ಲಿ ಹೆಸರಿಗಷ್ಟೇ ರಾಜಕೀಯ ಮಾಡಲು
ನಿನ್ನ ನಾಮ ಬೇಕಿಹುದು ಹಲವು ಆಟವಾಡಲು..
@ಹನಿಬಿಂದು@
30.01.2026
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ