#ಪುಸ್ತಕ_ವಿಮರ್ಶೆ
ಪ್ರೇಮಾ ಉದಯ್ ಕುಮಾರ್ ರವರ "ಭಾವ ಜೀವದ ಯಾನ" ಕವನ ಸಂಕಲನವು ಮೊನ್ನೆ ಬಂದು ತಲುಪಿತು. ನನ್ನ ಮನೆಯ ಪುಟ್ಟ ಗ್ರಂಥಾಲಯದಲ್ಲಿ ತನ್ನ ಸ್ಥಾನವನ್ನು ಅಲಂಕರಿಸಿಕೊಂಡಿತು. ಹಲವು ವಸ್ತು ವೈವಿಧ್ಯತೆಯ ಕವನಗಳನ್ನು ಓದಿ ಸಂತಸವಾಯಿತು.
ಪ್ರೇಮಾ ಉದಯ್ ಕುಮಾರ್ ರವರ ಈ ಕವಿತೆಗಳಲ್ಲಿ ಮಹಿಳೆಯರ ಅಂತರಂಗದ ಭಾವನೆಗಳು ಪರಿಣಾಮಕಾರಿಯಾಗಿ ಹೊರ ಹೊಮ್ಮಿವೆ. ಪ್ರಕೃತಿಯ ವೈವಿಧ್ಯಮಯ ವರ್ಣನೆಗಳ ಜೊತೆಗೆ ಬದುಕಿನ ಯಾನವನ್ನು ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ. ಅಲ್ಲಲ್ಲಿ ದೇಶ ಭಕ್ತಿಯ ಭಾವವೂ ಸಹ ಕವಿತೆಗಳಲ್ಲಿ ಮಿಳಿತವಾಗಿರುವುದನ್ನು ಕಾಣಬಹುದು. ಜೊತೆಗೆ ಸಮಾಜದಲ್ಲಿಯ ಹತ್ತು ಹಲವು ವಿಷಯಗಳೇ ಕವಿತೆಯ ಧನಿಯಾಗಿ ನಿಂತಿವೆ.
ಪ್ರಸ್ತುತ 'ಭಾವ ಜೀವನ ಯಾನ' ಕವನ ಸಂಕಲನದಲ್ಲಿನ ಕವನಗಳು ಓದುಗರನ್ನು ಪ್ರಜ್ಞಾಪೂರ್ವಕವಾಗಿ ವರ್ತಿಸುವಂತೆ ಪ್ರೇರೇಪಿಸುತ್ತವೆ. 'ಭಾವ ಜೀವನ ಯಾನ' ಎಂಬ ಹೆಸರಿನಂತೆ ಇಲ್ಲಿಯ ಕವನಗಳು ಕೇವಲ ಕವಿತೆಯಾಗಿರದೇ ಹಲವು ಭಾವಗಳನ್ನು ಬಿತ್ತುತ್ತವೆ.
ನಾನೇ ಬೆಳಕು' ಕವಿತೆಯು ವಿಶೇಷಾರ್ಥ ವನ್ನೊಳಗೊಂಡ ಕವಿತೆಯಾಗಿತ್ತು ಓದುಗರನ್ನು ಗಮನ ಸೆಳೆಯುತ್ತದೆ.
"ಹುಲು ಮಾನವನೆ ಹುಲಿಯಂತಾಗಬೇಡ
ಸೂರ್ಯನಿರದ ಕತ್ತಲ ಬದುಕಲಿ ಬಾಳಲಾರೆ
ವಿದ್ಯುತ್ ಇದ್ದರೆ ತಾನೇ ನಿನ್ನೆಲ್ಲಾ ಕೆಲಸ?
ಕತ್ತಲಲಿ ಸಾಧ್ಯವಾಗದು ತೆಗೆಯೆ ಮೌಢ್ಯದ ಕಸ.."
ಆಧುನಿಕ ಯುಗದ ಮನುಷ್ಯನ ಜೀವನವು ತಂತ್ರಜ್ಞಾನವನ್ನು ಅವಲಂಬಿಸಿಕೊಂಡೆ ಮುನ್ನಡೆಯುತ್ತಿದ್ದಾನೆ. ವಿಜ್ಞಾನದ ಶೋಧ ವಿದ್ಯುತ್ ಎಂಬ ಬೆಳಕು ಕೈ ಕೊಟ್ಟರೆ ಮನುಷ್ಯನ ಅರ್ಧ ಶಕ್ತಿ ಕೈಕೊಡುತ್ತದೆ. ಅದೇ ಪ್ರಕೃತಿ ? ಸದಾ ನಮ್ಮ ಜೊತೆಗಿರುತ್ತದೆ. ಅದರೊಂದಿಗೆ ಸಾಗಬೇಕು ಎಂಬ ಸೂಕ್ಷ್ಮ ಭಾವನೆಗಳು ಕವನದ ರೂಪದಲ್ಲಿ ಸುಂದರವಾಗಿ ಭಾವಾಬಿವ್ಯಕ್ತಿಗೊಂಡಿವೆ.
ಚಕಾರದ ಚಲನೆ, ನಗೆಯು ಬತ್ತುತ್ತಿತ್ತಾ, ಅಲೆ ಅಲೆಯಾಗಿ ಎಂಬ ಕವಿತೆಯ ಸಾಲುಗಳು ಅಂತರಂಗದ ಸೂಕ್ಷ್ಮತೆಯನ್ನು ಕಟ್ಟಿಕೊಂಡುವಂತಹ ಕಾಡುವ ಸಾಲುಗಳಾಗಿ ಮನಸಿನಾಳಕ್ಕೆ ಇಳಿದು ಬಿಡುತ್ತವೆ. ಪ್ರೇಮಾ ಉದಯ್ ಕುಮಾರ್ ರವರು ಕವನದಲ್ಲಿ ಆರಿಸಿಕೊಂಡ ವಿಷಯ ವಸ್ತು ಬಹು ಅಪರೂಪದ್ದು, ಮನ ಕಲುಕುವಂತದ್ದು, ಪ್ರಸ್ತುತ ಸಮಾಜದ ಚಿತ್ರಣಗಳಿಗೆ ಕನ್ನಡಿ ಹಿಡಿದು ಅದನ್ನು ತಿದ್ದಲು ಹೊರಟಂತೆ ಅಲ್ಲಲ್ಲಿ ಗೋಚರಿಸುತ್ತವೆ. ನನ್ನ ಜೀವ ಭಾವಕ್ಕೆ ಕವಿತೆಯಲ್ಲಿ ಭಾವೈಕ್ಯತೆಯ ಭಾವವು ಸುಂದರವಾಗಿ ಬಿಂಬಿಸಿದ್ದಾರೆ. ಕಷ್ಟಗಳನ್ನು ಮೆಟ್ಟಿ ನಿಂತು ಸೌಹಾರ್ಧತೆಯ ಬದುಕು ನಮ್ಮದಾಗಬೇಕು ಎಂಬ ಸಂದೇಶವಿದೆ
"ಭೋರ್ಗರೆವ ಶರಧಿಯದು ಭಯವುಕ್ಕಿ ಹರಿದಂತೆ
ಭಾವಗಳೆ ಮೈದುಂಬಿ ಭವ್ಯತೆಯ ಮೆರೆದಂತೆ
ಭೈರವಿಯ ಸ್ತುತಿಸುತ್ತ ಭಜನೆಯನು ಮಾಡುತ್ತಾ
ಭಾರತದ ಕೀರ್ತಿಯನು ಭೀಮನಂತೆ ಸಾರುತ್ತಾ "
ಇನ್ನು ಪ್ರೇಮಾ ಉದಯ್ ಕುಮಾರ್ ರವರ ಕವನಗಳು ಸೂಕ್ಷ್ಮವಾಗಿ ಓದುತ್ತಾ ಹೋದಂತೆ ಅಲ್ಲಲ್ಲಿ ಪ್ರಕೃತಿ ಮತ್ತು ಬದುಕನ್ನು ಜೊತೆ ಜೊತೆಯಾಗಿ ಅನಾವರಣ ಮಾಡುತ್ತಾ ಹೋಗುತ್ತಾರೆ. ಅವರ ಸಾಹಿತ್ಯದ ಶೈಲಿ ಸರಳ ಮತ್ತು ಮನಮುಟ್ಟುವಂತದ್ದು. ಎಲ್ಲಿಯೂ ಸಾಮಾಜಿಕ ಕಳಕಳಿಯ ಸಂದೇಶವನ್ನು ಬಿಟ್ಟು ಕೊಟ್ಟಿಲ್ಲ. ಉತ್ತಮ ಬದುಕನ್ನು ಸಹ್ಯವಾಗಿಸುವ ಕವಿತೆಗಳು ಕವನ ಸಂಕಲನ ಪುಟ ಪುಟದಲ್ಲಿಯೂ ಹರಿದಿದೆ. ಇವರ ಈ ಕವನ ಸಂಕಲನವು ಒಂದು ಯಶಸ್ಸಿನ ಯಾನವಾಗುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು. ನನ್ನುಸಿರೇ ನಿನಗೆ, ಬೆಳದಿಂಗಳು ಬೇಕಾಗಿದೆ, ರವಿಯೂ ಕವಿಯಾದ, ಮತ್ತು ಅಮ್ಮ ಕವಿತೆಗಳು ಗಮನ ಸೆಳೆಯುತ್ತವೆ. ಅಲ್ಲಲ್ಲಿ ಪ್ರೇಮ ಭಾವಗಳು ಸಹ ಕವಿತೆಯಲ್ಲಿ ಶಕ್ತಿಯಾಗಿ ಮೂಡಿ ಬಂದಿವೆ.
"ಒಡಲಾಳದ ಸಾಗರದಲಿ ಈಜುವ ಗೆಳೆಕಾರ
ಮತವೆಲ್ಲವ ನನಗೊತ್ತುವ ನೆಲ್ಮೆಯ ಕುವರ!
ವದನದಿ ನಸು ನಗೆ ಚೆಲ್ಲುವ ಹಿತ ಚಮತ್ಕಾರ!
ನಗೆಗಡಲಲಿ ತೇಲಿಸುತ ಕುಣಿಸುವ ಚಿತ್ತಚೋರ"
ಹೀಗೆ ಪ್ರೇಮ ಉದಯ್ ಕುಮಾರ್ ರವರ ಕವನಗಳು ಪ್ರೀತಿ ಪ್ರೇಮದ ವಿಷಯವಾಗಿಯೂ ಓದುಗರನ್ನು ಸೆಳೆಯುತ್ತವೆ. ಕೆಲವು ಕವಿತೆಗಳಂತೂ. ಸಮಾಜ ಪ್ರತಿಬಿಂಬಗಳೇ ಆಗಿವೆ. ಇಲ್ಲಿರುವ ಕವಿತೆಗಳು ಸಾಮಾನ್ಯ ಕವಿತೆಯಂತೆ ಗೋಚರಿಸುವುದಿಲ್ಲ. ಬದಲಾಗಿ ಕೆಲವು ಕಡೆ ಜೀವನದ ಒಂದು ಮಗ್ಗಲನ್ನು ಪರಿಚಯಿಸುತ್ತಾ ನಡೆಯುತ್ತದೆ. ಬಹುಷಃ ಕವನ ಬರೆದ ಸಾರ್ಥಕತೆ ಮತ್ತು ಯಶಸ್ಸು ಇಲ್ಲಿ ನಮಗೆ ಕಾಣ ಸಿಗುತ್ತದೆ. ಪ್ರೇಮಾ ಉದಯ್ ಕುಮಾರ್ ರವರ ಈ ಕೃತಿಯು ಸಾರಸ್ವತ ಲೋಕದಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತೇನೆ.
ಪ್ರಕಾಶ್ ಎನ್ ಜಿಂಗಾಡೆ
ಸಾಹಿತಿಗಳು, ಉಪನ್ಯಾಸಕರು,
ಬೆಂಗಳೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ