ಬುಧವಾರ, ಜನವರಿ 29, 2020

1328. ಕವನ- ಚಂದಿರನಿಗೆ

ಅಮವಾಸ್ಯೆ ಬೇಡ..

ಚಂದದ ಚಂದಿರನೆ ನೀನೇಕೆ ನನಗಿಂದು ಅಮವಾಸ್ಯೆಯ ನೀಡಿದೆ?
ನನ್ನ ಕಾಣಲು ಬರದೆ ಅಮವಾಸ್ಯೆಯ ಕತ್ತಲನು ತುಂಬಿದೆ!

ಚುಕ್ಕಿ -ತಾರೆಗಳು ಮಿನುಗುತಿಹವು ತಮ್ಮದೇ ದರ್ಪದಲಿ!
ಆದರೇನು, ಇಳೆಗೆ ಕಳೆ ತರಲು ನೀನೇ ಬೇಕಲ್ಲವೇ ಇರುಳಲಿ?

ಹಗಲು ರವಿ ಕೊಡುವ ಬಿಳುಪು ಕಿರಣಗಳ ಕಾಂತಿ ಒಂದು ಬದಿಗೆ,
ಮತ್ತೆ ನನ್ನ ಬೇರೆ ಬದಿಯನೂ ತಣಿಸಬೇಕಲ್ಲವೇ ನೀತಿಯಲಿ ಸರ್ವರಿಗೆ!

ನೀನೇಕೆ ಬರದಾದೆ ಆದಿತ್ಯನ ಕಾಂತಿಯನೇ ಹೊತ್ತು ತಂಪಾಗಿ?
ತಿರೆ ಕಾದಿಹಳು ಬಾಳ ನಿಶೆಯ ಬೆಳಕಿಗಾಗಿ!

ಇಂದ್ರನ ರಥವ ದತ್ತು ಪಡೆದಾದರೂ ನೀ ಬರಬೇಕಿತ್ತು!
ಅಮವಾಸ್ಯೆಯೆಂಬ ಪದವ ನಿನ್ನ ಶಬ್ದಕೋಶದಿ ಅಳಿಸಿ ಹಾಕಬೇಕಿತ್ತು!

ನಿನ್ನಿರವೆ ನನಗೆ ಖುಷಿ ತಿಳಿಯದೇ ಸೋಮನೇ?
ನೀ ಬರಲು ಹಾಲ್ಚೆಲ್ಲಿದ ಬೆಳದಿಂಗಳು, ಮರೆತೆಯಾ ಮಾಮನೇ?

ಚಂದ್ರೋದಯದ ಗಳಿಗೆಗೆ ತಡಮಾಡದಿರು ಎಂದೆಂದೂ..
ಧರಣಿ ಕಾದು ಬೆಂಡಾಗಿಹಳು ತಿಳಿದುಕೋ ಮುಂದೂ..

ವಿರಹದುರಿಯಲಿ ಬೇಯುವೆ ನೀನಿರದ ಕ್ಷಣಗಳಲಿ
ಗಾಢಾಂಧಕಾರದಲಿ ನೆನೆಯುವೆ ನೀ ಬರದ ಕರಾಳ ಕಪ್ಪಿನಲಿ..

ಬೇಸರಿಸದಿರು ಧರಿತ್ರಿ ಮನವ ಅಮವಾಸ್ಯೆನು ತಂದು,
ಬೇಡುತಿಹೆ ಬೆಳಕ ನೀಡು ನೀನು ಮನಕೆ  ವರುಷದಲಿ ಪ್ರತಿದಿನವೂ ಬಂದು!
@ಪ್ರೇಮ್@
30.01.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ