ಶನಿವಾರ, ಅಕ್ಟೋಬರ್ 31, 2020

ಬದಲಾವಣೆಯ ಬಿರುಗಾಳಿ

ಬದಲಾವಣೆಯ ಬಿರುಗಾಳಿ..

ನಾವು ಚೆನ್ನಾಗಿ ಬೆಳೆದವರು
ಅವರು ಹಾಳಾಗಿ ಬೆಳೆದವರು

ಅಂದು ನಮ್ಮೊಡನೆ ಹಣವಿತ್ತು
ಅಂದೂ ಇಂದೂ ಅವರೊಡನೆ ಗುಣವಿದೆ

ಅವರದು ಗುಡಿಸಲು ನಮ್ಮದು ಬಂಗಲೆ
ಅವರದು ನಗುಮುಖ ನಮ್ಮದು ರಗಳೆ!!

ಅವರಿಗೆಲ್ಲ ಅಳುವಿತ್ತು, ಛಲವಿತ್ತು
ನಮಗೆಲ್ಲ ನಗುವಿತ್ತು, ಸಂತಸವಿತ್ತು.

ಅವರ ಬಳಿ ಕನಸಿತ್ತು, ನನಸು ಮಾಡುವ ಛಲವಿತ್ತು
ನಮ್ಮ ಮನೇಲಿ ಝಳಝಳವಿತ್ತು, ಹೊಳಹಿತ್ತು..

ಅವರ ಮನೆಯಲ್ಲಿ ನಾಯಿ, ಬೆಕ್ಕು ಕೋಳಿಗಳು ಆಟವಾಡುತ್ತಿದ್ದವು
ನಮ್ಮ ಮನೆಯಲ್ಲೋ ಗೆಳೆಯರು ಬಂಧುಗಳು ಮೆರೆಯುತ್ತಿದ್ದರು!

ಕಾಲ ಬದಲಾಯ್ತು.. ಜನ ಬದಲಾದರು
ನಗ ನಕ್ಕಿತು, ನಗು ಸರಿಯಿತು, ನಾವು ನೀವಾಗಲಿಲ್ಲ, ನೀವು ನಾವಾಗಲು ಶ್ರಮಿಸಿದಿರಲ್ಲ!
ಹಣ ಕಳೆಯಿತು, ಗುಣವುಳಿಯಿತು!
ಅರಮನೆ ಸೆರೆಮನೆಯಂತಾಯಿತು, ಗುಡಿಸಲು ಬೆಳಗಿತು!
ಕಾಲ ಬದಲಾಯಿತು! ಗುಣ ಬದುಕ ಬದಲಾಯಿಸಿತು!!
@ಪ್ರೇಮ್@
31.10.2020

ಸೋಮವಾರ, ಅಕ್ಟೋಬರ್ 26, 2020

ಧೈರ್ಯಂ ಸರ್ವತ್ರ ಸಾಧನಂ

ಧೈರ್ಯಂ ಸರ್ವತ್ರ ಸಾಧನಂ

ಮೌಂಟ್ ಎವರೆಸ್ಟ್ ಹತ್ತುವಾಗಲೂ
ಕಣಿವೆ ಮಾರ್ಗ ಇಳಿಯುವಾಗಲೂ
ತಂತಿ ಮೇಲೆ ನಡೆಯುವಾಗಲೂ
ಸಂಸಾರ ಸಾಗರ ದಾಟುವಾಗಲೂ

ಪ್ರಪಂಚವನ್ನು ಸುತ್ತುವಾಗಲೂ
ಹೊಸ ದೇಶವ ಹುಡುಕುವಾಗಲೂ
ಸಾವಿರ ಅಡಿ ಆಳಕ್ಕೆ ಧುಮುಕುವಾಗಲೂ
ನೌಕೆಯಲಿ ಆಕಾಶದಾಚೆ ಹಾರುವಾಗಲೂ

ಮನೆ ಮಕ್ಕಳ ನಿಭಾಯಿಸುವಾಗಲೂ
ಅತ್ತೆ ಮಾವರ ಸಂಭಾಳಿಸುವಾಗಲೂ
ಗೆಳೆಯರೊಡನೆ ಹೊಂದಿಕೊಳ್ಳುವಾಗಲೂ
ಬಂಧು ಬಾಂಧವರ ಒಗ್ಗೂಡಿಸುವಾಗಲೂ

ಶಾಲೆಯಲ್ಲಿ ಕಲಿಯುವಾಗಲೂ
ಕೆಲಸಕೆಂದು ಅಲೆಯುವಾಗಲೂ
ಇಂಟರ್ವ್ಯೂಗೆ ಉತ್ತರಿಸುವಾಗಲೂ
ಸಂಗಾತಿಯನ್ನು ಆರಿಸುವಾಗಲೂ

ಮನದಲೂ ಎದೆಯಲೂ
ಮೆದುಳಲೂ ಆಲೋಚನೆಯಲೂ
ನಗುವಲೂ ಅಳುವಲೂ
ಧೈರ್ಯಂ ಸರ್ವತ್ರ ಸಾಧನಂ!
@ಪ್ರೇಮ್@
26.10.2020

ಶುಕ್ರವಾರ, ಅಕ್ಟೋಬರ್ 16, 2020

ಗಝಲ್

ಗಝಲ್


ತುಳಸಿ ಮನೆಯೆದುರು ನಗುತಿರಲಿ ಸಾಕಿ
ಕುಲ ಗೌರವವ ನೆನೆಯುತಿರಲಿ ಸಾಕಿ

ಮನದಲ್ಲೆಲ್ಲ ಸದಾ ಸುಖದ ನಗೆ ತುಂಬಿರಬೇಕು
ಸಂಸಾರ ಸಾಗರದಲಿ ಈಜುವಂತಿರಲಿ ಸಾಕಿ.

ದೇವರ ಸಹಸ್ರ ನಾಮಾರ್ಚನೆ ಮಾಡದಿದ್ದರೂ ಪರವಾಗಿಲ್ಲ
ಮನೆಯಲಿ ನೆಮ್ಮದಿಯ ಉಸಿರಿರಲಿ ಸಾಕಿ

ಘಂಟೆ, ಜಾಗಟೆ, ಆರತಿ, ತೀರ್ಥವೇ ಬೇಕಿಲ್ಲ
ಗಲಾಟೆಗೆ ಸ್ಥಾನ ಬರದಂತಿರಲಿ ಸಾಕಿ

ಮೂರ್ತಿ ಪೂಜೆ, ಮಂತ್ರೋಚ್ಛಾರ, ಆರತಿಯೇ ಮುಖ್ಯವಲ್ಲ
ಶಾಂತಿಯೇ ಬಾಳ ಮಂತ್ರವಾಗಿರಲಿ ಸಾಕಿ..

ಸಮಾಜ ಸೇವೆಗೆ ಲಕ್ಷ ಖರ್ಚು ಮಾಡಬೇಕೆಂದಿಲ್ಲ
ಪರರ ಒಳಿತನ್ನೂ ಬಯಸುವಂತಿರಲಿ ಸಾಕಿ!

ದ್ವೇಷದ ಕಿಡಿಯನು ಆರಿಸಿ ಬಿಡಬೇಕು
ಪ್ರೇಮದ ಬತ್ತಿಯನು ಹಚ್ಚುತಿರಲಿ ಸಾಕಿ!
@ಪ್ರೇಮ್@
17.10.2020

ಹಾಯ್ಕು

ಹಾಯ್ಕು-1

ನಗಲಾರದೆ
ನಗುವುದ ಕಲಿತೆ
ನನಸಾಗದೆ.

ಹಾಯ್ಕು-2

ನೀನೆನಗಿರೆ
ನಾನಿನಗಿರುವೆನು
ನನ್ನೊಲವಿಗೆ..

ಹಾಯ್ಕು-3

ನೂರು ಜನ್ಮಕೂ
ನೀನಿರುವೆಯೆಂದೆಂದು
ನಾನರಿಯೆನೇ..

ಹಾಯ್ಕು-4
ನಾನಾರೆಂದು
ನಾನರಿತೆನು ಇಂದು
ನಿನ್ನನೆ ನೋಡಿ.
@ಪ್ರೇಮ್@
14.10.2020

ಮಂಗಳವಾರ, ಅಕ್ಟೋಬರ್ 13, 2020

ಬಯಸದೆ ಬಂದ ಭಾಗ್ಯ

ಬಯಸದೆ ಬಂದ ಭಾಗ್ಯ

ಮನೆಯೊಳು ಮನದೊಳು
ನೀನಿರೆ ಶಿವನೆ
ಭಾಗ್ಯವೆ ಅಲ್ಲದೆ ಮತ್ತೇನು?
ವರವನು ಕೊಡುತಲಿ ನಗುತಲಿ ಇರುವೆಡೆ
ಪ್ರೀತಿಯ ಭಾವವು ಇನ್ನೇನು!

ದೇವನೆ ಜೊತೆಯಲಿ ಇರಲದು ಧನ್ಯತೆ
ಮುಂದೆಯೂ ನಾಳೆಯೂ ಇಂದೇನು?
ನಿನ್ನೊಳು ನಾನು ನನ್ನೊಳು ನೀನು
ಭಕ್ತಿ ಪರಾಕಾಷ್ಠೆಯಲಿ ಮಿಂದೇನು!

ಐಸಿರಿ, ಭಾಗ್ಯವು ಎಲ್ಲವೂ ನೀನೇ!
ನೀನಿರೆ ಸಕಲವು ಅಲ್ವೇನು?
ಬೇಕದು ಏನು ಇರುತಿರೆ ನೀನು
ಜತೆಗದು ಶಕ್ತಿ, ಜೈಸೇನು!

ಮಾತೆಯೂ ನೀನೇ, ಪಿತನೂ ನೀನೇ
ಶಕ್ತಿಯ ಮೂಲವು ನೀನೇನೇ!
ಮೂರ್ತಿಯೂ ನೀನೇ, ಕೀರ್ತಿಯೂ ನೀನೇ
ಲಿಂಗದ ಶಕ್ತಿಗೆ ಬರವೇನು!

ಬಯಸದೆ ಬಂದ ಭಾಗ್ಯವು ಬದುಕಲಿ
ಬೆರಗದು ಬಾಳಲಿ ಅಲ್ವೇನು?
ಬರಲದು ದೇವನು ಬಂಗಾರವು ಬಾಳುವೆ
ಬೆಳೆ ಬೆಳೆದಂತಲ್ಲದೆ ಮತ್ತೇನು?
@ಪ್ರೇಮ್@
13.10.2020

ಭಾನುವಾರ, ಅಕ್ಟೋಬರ್ 11, 2020

ಲಕ್ಷ್ಮಿ

ಲಕ್ಷ್ಮಿ

ಮನೆಯಲಿ  ಗೃಹಲಕ್ಷ್ಮಿ, ಕಛೇರಿಯಲಿ ವರಲಕ್ಷ್ಮಿ
ಮಕ್ಕಳೊಂದಿಗೆ ಸಂತಾನಲಕ್ಷ್ಮಿ!

ನೋಡಲು ಗಜಲಕ್ಷ್ಮಿ ನಡೆಯೂ ಅಂತೆಯೇ!
ಗದ್ದೆ ತೋಟವಿರದಿದ್ದರೂ ನನಗವಳು ಧಾನ್ಯಲಕ್ಷ್ಮಿ..
ದುಡಿವಾಗ ಧನಲಕ್ಷ್ಮಿಯೇ ಸರಿಯವಳು..

ಚಿನ್ನ ಬೇಕೆಂದು ಹಠ ಹಿಡಿವ ಕನಕಲಕ್ಷ್ಮಿ
ಮನೆಗೆ ಬಂದವರ ಸಾಗಹಾಕುವ ಧೈರ್ಯಲಕ್ಷ್ಮಿ!
ಅವಳಿರೆ ಮನೆಯೆತ್ತರಕ್ಕೇರಿ ಅನಿಸುವುದು ವೃದ್ಧಿಲಕ್ಷ್ಮಿ!

ನನ್ನ ಆದಿ ಅನಂತ ದೇವತೆಯವಳು ಆದಿಲಕ್ಷ್ಮಿ
ಮನೆಯವರಿಗೆಲ್ಲ ಊಟವುಣಿಸುವ ಧಾನ್ಯಲಕ್ಷ್ಮಿ!
ಅದಕೆಂದೆ ನಿನಗೆ  ನಾಮಧೇಯ ನನ್ನದು ಪುಟ್ಟಲಕ್ಷ್ಮಿ!
@ಪ್ರೇಮ್@
10.10.2020

ನಾರಿಗಾದೆಯೋ

ನೀನಾರಿಗಾದೆಯೋ ಎಲೆ ಮಾನವ

ಹಾಲು ನಾನು ಕುಡಿಯಲು, ಮೊಸರಾದೆ ಒಡೆಯಲು
ಬೆಣ್ಣೆಯಾದೆ ಕಡೆಯಲು, ತುಪ್ಪವಾದೆ ಕುದಿಯಲು
ಪನ್ನೀರಾದೆ ಗಟ್ಟಿಯಾಗಲು, ಕ್ರೀಮಾದೆ ತಣಿಸಲು
ನೀನಾರಿಗಾದೆಯೋ ಎಲೆ ಮಾನವ ಸಹಕರಿಸಲು?

ನೀರು ನಾನು ಸಾರ್ವಜನಿಕ ಶುದ್ಧಿಗೆ
ತಣಿಯೆ ಬರುವೆ ಹಿಮದ ರುಚಿಯ ಗೆಡ್ಡೆಗೆ
ಆವಿಯಾಗೆ ಮತ್ತುದುರುವೆ ಮಳೆಹನಿ ಧರೆಗೆ
ದಾಹ ತಣಿಸೆ ಇಳಿವೆ ನಿನ್ನ ಹೊಟ್ಟೆಗೆ!
ನೀನಾರಿಗಾದೆಯೋ ಎಲೆ ಮಾನವ ಮಜ್ಜಿಗೆ?

ನಾಯಿ ನಾನು ಕಾಯ್ವೆ ಮನೆಯ ನೆಟ್ಟಗೆ
ರಾತ್ರಿ ಹಗಲು ಆಜ್ಞಾಪಾಲಕ ಸಾಕಿದವಗೆ
ನಿಯತ್ತಿಗೆ ಹೆಸರಾದವ ಜಗದೊಳಗೆ
ನೀನಾರಿಗಾದೆಯೋ ಎಲೆ ಮಾನವ ನೆಟ್ಟಗೆ?

ಕಾಗೆ ನಾನು ಕಪ್ಪಾದರು ಊರ ಶುದ್ಧ ಮಾಡುವೆ
ಸತ್ತ ಪ್ರಾಣಿಗಳ ಕಸವ ತಿಂದು ಬದುಕುವೆ
ಕಾಳನೊಂದು ಕಂಡೊಡನೆ ಬಳಗವೆಲ್ಲ ಕರೆಯುವೆ
ನೀನಾರಿಗಾದೆಯೋ ಎಲೆ ಮಾನವ ಕುಲವೇ?
@ಪ್ರೇಮ್@
12.10.2020

ಶನಿವಾರ, ಅಕ್ಟೋಬರ್ 10, 2020

ಬಾಲ್ಯ ವಿವಾಹ

ಬಾಲ್ಯ ವಿವಾಹ

ಬೇಡವೇ ಬೇಡ ಬಾಲ್ಯದ ಮದುವೆ
ಬೇಡ ಬೇಕಾಗುವುದು ಮುಂದಿನ ಕಡೆಗೆ
ಬೇಕದು ಓದು ಬೇರೆಯೇ ಬದುಕು
ಬೇಡವು ಗೋಳಿನ ನರಕದ ಬಾಳು

ಬೇಸರ ಭಯದ ವಾತಾವರಣವು ನಿಜದಿ
ಬೇಡಿಯು ತೋಳಿಗೆ ತಾಳಿಯ ಅಂದದಿ
ಬೇನೆಯು ಮನಕೆ ಭಾವವು ಬರಿದು
ಬೇಗೆಯು ದಿನವೂ ಬಾಲ್ಯದ ಕಾಲದಿ..

ಭೋಗವು ಬರದು ಭವ್ಯತೆ ಬರಿದು
ಬಂಜರು ಬದುಕದು ಬಾರದು ನಿದ್ರೆ
ಬಾಡುವ ಬಾಳು ಬೇಡವು ಮಗುವೇ

ಬೇಸರ ಛಾಯೆ ಬೇರಿನ ಮಾಯೆ
ವೇದನೆ ಬರುವುದು ಮುಂದಿನ ಕಾರ್ಯ
ಬೇಗನೆ ಮದುವೆಯು ನಾಶವು ಕ್ಷಣವು
ಮೇದಿನಿಯೊಳು ಓದಿ ಸಾಧನೆ ಬೇಕು..

ಗಂಡನ, ಅತ್ತೆಯ, ನಾದಿನಿ ಕಾಟವು
ಮೈದುನ, ಭಾವ, ಅನ್ಯರ ನೋಟವು
ನೆಂಟರು, ಇಷ್ಟರು ಎಲ್ಲರ ಕೂಟವು
ಮಕ್ಕಳು ಮರಿಗಳು ಕಷ್ಟದ ಪಾಠವು.. 
@ಪ್ರೇಮ್@
11.10.2020

ಬುಧವಾರ, ಅಕ್ಟೋಬರ್ 7, 2020

2 ಚುಟುಕುಗಳು

ಚುಟುಕು-1

ನಶೆಯ ನಿಶೆಯಲಿ ನಶಿಸಿ ಹೋಗುವೆ
ಉಸಿರ ಬೇಗನೆ ಸ್ವತ: ಕೊಂದುಕೊಳ್ಳುವೆ
ಕಸಿಯ ಮಾಡುತ ಮನವ ಕೊಯ್ದುಕೊಳ್ಳುವೆ
ಮುಸಿಮುಸಿ ನಗುತ ಬಾಳನು ಸುಟ್ಟುಕೊಳ್ಳುವೆ...

ಚುಟುಕು-2

ಬಾರೆ ಪಂಚರಂಗಿ ನನ್ನೊಡಲ ಅರಮನೆಗೆ
ಕೊಡಿಸುವೆನು ಹೊಸ ಅಂಗಿ ನಿನ್ನ ಕರದೆಡೆಗೆ
ನೀಡೆನ್ನ ಮನಮಂದಿರಕೆ ಸುಖವ ಸತಿಯಾಗಿ
ನಾ ಕೊಡುವೆ ನಿನಗೆಲ್ಲ ಜವಾಬ್ದಾರಿ ಪತಿಯಾಗಿ!!!
@ಪ್ರೇಮ್@
08.10.2020

ಶನಿವಾರ, ಅಕ್ಟೋಬರ್ 3, 2020

ತೆರೆ-ಹೆಣ್ಣು

ತೆರೆ-ಹೆಣ್ಣು


ತೆರೆತೆರೆಯುತ ತೆರೆಗಳು ತೆರಳಲು
ತವರಿನ ದಡದೆಡೆ ತೇರಂತೆ
ತರತರ ಗಾತ್ರದ ನೀರಿನ ಬಂಡೆಯು
ತೊರೆ ನದಿ ಸೇರಿದ ಹಾಗಂತೆ!

ತರುಲತೆ ಬಳ್ಳಿಯು ನೋಡುತ ನಕ್ಕವು
ದೂರದ ಗುಡ್ಡದ ತುದಿಯಲ್ಲಿ
ತೋರುತ ಬಿಳಿನೊರೆ ಜಾರುತ ಬರಲು
ಭೋರ್ಗರೆತವು ಸಾಗರಿ ಹೃದಯದಲಿ..

ಮರಳಿನ ಕಣಗಳು ನೃತ್ಯವನಾಡುತ
ತೆರೆಗಳ ಒಳಗೆ ಸೇರಿರಲು
ಕಪ್ಪೆ ಚಿಪ್ಪು ನಕ್ಷತ್ರ ಮೀನು
ಶಂಖವು ದಡದೆಡೆ ಜಾರಿರಲು..

ತಿರೆಗದು ಸಂತಸ ಮರಳಿನ ರಾಕ್ಷಸ
ರಾಶಿಯ ತೆರದಿ ಬಿದ್ದಿರಲು
ಚಂದ್ರನು ಕಾಣಲು ತೆರೆಗಳು ಮೇಲೇರಲು
ಸೂರ್ಯನು  ದಿಗಂತದಿ ಮುಳುಗಿರಲು...

ತೊರೆಯವು ತೆರೆಗಳು ಕಡಲನು ಎಂದಿಗೂ
ಬಿಡವವು ಭೂಮಿಯ ಸ್ಪರ್ಶವನು
ಹೆಣ್ಣದು, ತವರು ದಡದಲಿ ಅದಕೆ
ತವಕಿಪುದು ತಾ ಮುಟ್ಟಲು ಇಳೆಯನ್ನು!!
@ಪ್ರೇಮ್@
21.09.2020

ಗಝಲ್-207

ಗಝಲ್

ಗಗನದೆತ್ತರಕೆ ಏರುವ ತುಡಿತ
ಮನಸ್ಸಿನಾಳಕೆ ಇಳಿಯುವ ಮಿಡಿತ

ಇರಲಾರೆ ನೋವಿನರಿವ ಬಿಟ್ಟು
ಚೇತನಕ್ಕೆ  ಕಲಿಯುವ ಕೆರೆತ!

ಭವಿಷ್ಯದ ಬಗೆಗೊಂದು ನೋಟ
ಆತ್ಮ ಜ್ಞಾನ ಹೆಚ್ಚಿಸಿಕೊಳ್ಳುವ ನೆಗೆತ!

ಇತರರ ಮಾತ ಕೇಳಿ ಬೇಸರ
ಬೇಡ ಪರರೆದುರು ಬಗ್ಗುವ ತುಳಿತ!

ಮಂದಿರದ ದೇವರಲೂ ಬೇಡಿಕೆ
ನಿತ್ಯ ಮಾಡೆನ್ನ ಜೀವನವ ಹರಿತ!

ಭಾವಗಳ ಮೇಳೈಕೆ, ಒದ್ದಾಟ ಒಳಗೊಳಗೆ 
ಕುದುರೆಯಂತೆ ಸಾಗಿದೆ ತನುವ ಕುಣಿತ!

ಶುದ್ಧ ಪ್ರೇಮವ ಅನುಭವಿಸಿದವನೇ ಜಾಣ
ಮಾಡುವೆ ಶಿವನಿಗೆ ಜೀವನವ ಅರ್ಪಿತ!
@ಪ್ರೇಮ್@
22.09.2020

ನ್ಯಾನೇಕತೆ-ವಿಧಿ

ನ್ಯಾನೋ ಕತೆ

ವಿಧಿ

ತನ್ನ ಸರ್ವಸ್ವ ಎಂದು ಸಲ್ಮಾ ಅಜೀಜ್ ನನ್ನೆ ನಂಬಿದ್ದಳು. ತಮ್ಮಿಬ್ಬರ ಪ್ರೀತಿಗೆ ಮನೆಯವರ ಯಾರ ಸಹಕಾರವೂ ಸಿಗದೆಂಬ ಕಲ್ಪನೆ ಅವರಿಗಿದ್ದರೂ ತಿಳಿಯದೇನೆ ಅವರಿಬ್ಬರೂ ಮಾನಸಿಕವಾಗಿ ಆಕರ್ಷಿತರಾಗಿ, ಪವಿತ್ರ ಪ್ರೇಮದಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಇಬ್ಬರಿಗೂ ಒಬ್ಬರಿಗೊಬ್ಬರಿಗೆ ಮೋಸ ಮಾಡುವ ಮನಸ್ಸಿರಲಿಲ್ಲ, ಒಟ್ಟಾಗಿ ಬಾಳುವ ಕನಸಿತ್ತು. ತಮ್ಮ ಪೋಷಕರಿಗೂ ಮೋಸಮಾಡದೆ ಸಲ್ಮಾ ಓದಿ ಶಿಕ್ಷಕಿಯಾಗಿ,ಅಜೀಜ್ ವ್ಯಾಪಾರ ಹಾಗೂ ಸಮಾಜ ಸೇವೆ ಮಾಡಿಕೊಂಡು ಹಿರಿಯರ ಆಶೀರ್ವಾದ ಪಡೆದೇ ಮದುವೆಯಾದರು.
@ಪ್ರೇಮ್@
23.09.2020

4 ಹಾಯ್ಕುಗಳು

ಹಾಯ್ಕುಗಳು

೧.
ಮನದ ನೋವು
ಹೆಪ್ಪುಗಟ್ಟುತಲಿದೆ
ಹೊರಬಾರದೆ

೨. 
ಬದುಕೊಂದು
ರೈಲು ಬಂಡಿಯ ಹಾಗೆ
ಚಲಿಸುತಿದೆ..

೩.

ಇಂದು ನಾಳೆಯ
ಲೆಕ್ಕವಿಟ್ಟವನು ನೀ
ಪರಮಾತ್ಮ ತಾ!

೪.
ನೋವಿಂದ ಎದೆ
ಹಿಂಡಿದಂತಾಗಿಹುದು
ರಕ್ತದೊತ್ತಡ..
@ಪ್ರೇಮ್@
24.09.2020

ಬಡಿತವೇ...

ವಿಶ್ವ ಹೃದಯ ದಿನದ ಅಂಗವಾಗಿ...

ಬಡಿತವೇ....

ಬಡಿವೆ ನೀನು ನನ್ನ ಒಲವೆ
ಒಡಲಿನೊಳಗೆ ನಲಿಯುತ
ಜೀವವೀಣೆಯನ್ನು ಉಳಿಸಿ
ನುಡಿವೆ ಎನಗೆ ಸಂತತ...

ಉಸಿರು ನಿನ್ನ ಪ್ರಾಣವಂತೆ
ಗಾಳಿ ನಿನಗೆ ಊಟವಂತೆ
ರಕ್ತವನ್ನೆ ಕುಡಿವೆಯಂತೆ
ಶುದ್ಧತೆಯ ಪ್ರತೀಕವಂತೆ...

ಮಾಂಸದ ಮುದ್ದೆಯಂತೆ
ಭಾವನೆಗಳ ಸಾಗರವು..
ಪ್ರೀತಿ ಪ್ರೇಮಕೆಂದು ಮಿಡಿತ
ಕಂಪನದ ಅನುರಾಗವು...

ನಲಿವು ನೋವು ಏನೆ ಬರಲಿ
ಸ್ಪಂದನೆಯ ಏರಿಳಿತವದು
ಏಳುಬೀಳಿನಲ್ಲಿ ಮಿಡಿತ
ತಾಳ್ಮೆಯೆಂದು ಜಗಕೆ ಇಹುದು..

ನಾನು ನೀನು ಬೇರೆಯಲ್ಲ
ನೀನಿರದೆನಾನು ಇಲ್ಲ
ರಾಗ ನಾನು ಭಾವ ನೀನು
ತಾಳವಿರದೆ ಬಡಿತವಿಲ್ಲ...
@ಪ್ರೇಮ್@
29.09.2020

ಬದುಕ ಸೂತ್ರ

ಬದುಕ ಸೂತ್ರ

ಪರಿಪರಿಯಿಂದಲಿ ಪ್ರಯಾಣದಿ ಸೇರಿಹ
ಪ್ರಭಾವ ಪುರುಷರು ನೀವು
ಪರಬ್ರಹ್ಮನ ಸೃಷ್ಟಿಯ ಪದರಗಳಾಗಿಹ
ಪಾವನ ಜನರು ತಾವು...

ಪುರದಲಿ ಬದುಕುತ ಪರರನು ತೆಗಳುತ
ನೋವು ನಲಿವಿನ ಪಾಲು
ಪದಕದ ಹಾಗೆಯೆ ಇರಬೇಕು ಹೊಳೆಯುತ
ಪದ ಪದದಲು ಇಹುದು ಗೋಳು..

ಪಂಡಿತ ಪಾಮರ ಎಲ್ಲಗೂ ಸಾವಿದೆ
ಪರಿಸರ ಸ್ವಚ್ಛತೆ ಮಾಡಿ
ಪಾಯಸದಂತೆ ಸವಿಯಾಗಿರಿ ಕಾಯದೆ
ಮೋಸವ ಹೊರಗೆ ದೂಡಿ..

ಪರರಿಗೆ ಸಹಾಯ ಬಾಳಿನ ಮಂತ್ರವು
ಪರೋಪಕಾರದ ಬುದ್ಧಿಯಲಿ
ಪದಗಳ  ಹೇಳದೆ ಇರುವುದು  ಸಾಧ್ಯವೆ?
ಪಾರಾಯಣವಿರಲಿ ಮನದಲ್ಲಿ...
@ಪ್ರೇಮ್@
25.09.2020