ಗಝಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗಝಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಮೇ 9, 2026

ಗಝಲ್

ಗಝಲ್

ನನ್ನ ನೋವನೆಲ್ಲಾ ಹಂಚಿಕೊಳ್ಳುವವರಿಲ್ಲ ಎಂದು ಕೊರಗಬೇಡ ಮನವೇ
ನಿನ್ನಾತ್ಮ ನಿನ್ನೊಳಿಹುದು ಗುರುವಾಗಿ ಗೆಲುವಾಗಿ  ಅಳುಕಬೇಡ ಮನವೇ

ಮೋಸ ವಂಚನೆ ಹೊಟ್ಟೆಕಿಚ್ಚು ತುಂಬಿಹುದು ಈ ಜಗದಲಿ ಇಂದು 
ಜೊತೆಗೆ ಒಳ್ಳೆಯತನ ಬಯಸುವ ಜನಗಳ ಕೊರತೆ ಇರದು ಇಲ್ಲಿ, ಅಂಜಬೇಡ ಮನವೇ

ದಾರಿಯಲಿ ನಡೆವಾಗ ಕಲ್ಲು ಮುಳ್ಳುಗಳಲಿ ಎಡವುದು ಸಹಜವೇ
ಬಿದ್ದರೂ ಮತ್ತೆ ಎದ್ದು ನಿನ್ನ ನೀನೇ ಹುರಿದುಂಬಿಸು, ಹೆದರಬೇಡ ಮನವೇ

ಮಳೆಗಾಲ ಚಳಿಗಾಲ ಬೇಸಿಗೆ ಕಾಲಗಳಾಗಿ ಬದಲಾಗುವುದು ಕ್ಷಣವು 
ಬರಗಾಲ ಬದಲಾವಣೆ ಬದುಕಲಿ ಬರುವುದು ಸಹಜ, ನಡುಗಬೇಡ ಮನವೇ

ಹನಿ ಹನಿ ಸೇರಿದರೆ ತುಂಬುವುದು ಕೆರೆ ಕೊಳವು ಬಾಳ ಬಯಲಲಿ
ಹನಿಬಿಂದುವಿನಲಿದೆ ಧೈರ್ಯ ಸ್ಥೈರ್ಯ ಮುನ್ನುಗ್ಗುವ ಹೃದಯ, ಬಿಡಬೇಡ ಮನವೇ.. 
@ಹನಿಬಿಂದು@

ಸೋಮವಾರ, ನವೆಂಬರ್ 3, 2025

ಗಝಲ್

ಗಝಲ್

ದತ್ತ ಪದ : ಹೊಸತನ (ಗೈರ್ ಮುರುದ್ಧಫ್ ಗಝಲ್)

ಹೊಸತನ ಬಂದಿದೆ  ಹುರುಪನು ತಂದಿದೆ
ಎಲ್ಲೆಡೆ  ಹಸಿರಿನ  ಸಿಹಿ ನಗುವನು ಚೆಲ್ಲಿದೆ..

ಬಳುಕುತ ಕುಲುಕುತ ತವರನು ನೆನೆಯುತ
ಸರ್ವರ ಜೊತೆಗೂಡಿ ಜತೆಯಲಿ ಆಟವನು ಆಡಿದೆ

ಬೇಡದ ಬೇಕಾದ ಎಲ್ಲವ ತಂದಿತ್ತ ಮಾನವನು
ತಾನೇ ಬದುಕುವ ಮಣ್ಣಿಗೆ ಕಸವನು ಸುರಿದಿದೆ

ಬರುತಿದೆ ಬೇಸರದ ಉಪ್ಪು ನೀರದು ಕಣ್ಣಲ್ಲಿ
ನಮ್ಮ ಮನದೊಳಗೆ ಕಿಡಿ ನೋವನು ಕುಣಿಸಿದೆ

ಬಸಿದ ಭಾವಗಳು ತೆರೆಯುಕ್ಕಿ ಹರಿಯುತಲಿ 
ಮಸಿಯ ಹಾಗಿನ ತನ್ನ ತನುವನು ಹಿಂಡಿದೆ

ಪ್ರೀತಿಯ ನೀತಿಯ ಕೀರ್ತಿಯ ಸ್ಪೂರ್ತಿಯ ಮಾತೆಲ್ಲಿ
ಹನಿ ಹನಿಯಾಗಿ ಸುರಿದೆಲೆ ಎಲೆಯನು ತೋಯಿಸಿದೆ 
@ಹನಿಬಿಂದು@
03.11.2025

ಶನಿವಾರ, ಏಪ್ರಿಲ್ 12, 2025

ಗಝಲ್

ತಂದೆಯಂತೆ ಪೊರೆದು ತಾಯಿಯಂತೆ ಕರೆದು ನೋಡಿಕೊಳ್ಳುವ ಶಿವ
ಮಂದಿಯೊಳಗೆ ಗುರುತಿಸಿ ಮಗುವಿನಂತೆ ಪೊರೆದು ಕಾಯುವ ಶಿವ

ಮುಗ್ಧತೆಯ ಅರಿತು ಸತ್ಯ ಸಂಧತೆ ಬೆಳೆಸಿಕೊಳ್ಳುವುದ ಅರಿಯುವನು
ಸ್ನಿಗ್ಧ ನಗುವ ಕೊಟ್ಟು ಸರ್ವರಲಿ ಒಂದಾಗಿ ಬಾಳಿ ಬದುಕುವ ಪರಿ ತಿಳಿಸುವ ಶಿವ

ಹಸಿರು ಬಣ್ಣವ ಬೆಳೆವ ಖುಷಿಯ  ಜಗದೊಳಗೆ ಎಲ್ಲಾ ತಿಳಿದಿರಬೇಕು
ಮೊಸರಿನಂತೆ ಬಿಳಿಯಾಗಿ ರುಚಿಯಾಗಿ ಆರೋಗ್ಯಕರವಾದ ಬಾಳು ನೀಡುವ ಶಿವ 

ನಾನು ನೀನೆನ್ನದ ಜಾತಿ ಮತ ಪಂಥವಿರದ ಮಾನವ ಧರ್ಮ ಕಟ್ಟಬೇಕು ಇಲ್ಲಿ
ತಾನು ಬರುತ ಹರಸೆ ಸಕಲ ಸಮಯಗಳಲ್ಲೂ ಧೈರ್ಯ ತೋರುವ ಶಿವ

ಪ್ರೀತಿ ನೀತಿ ಕಾಂತಿ ಭಕ್ತಿ ಸ್ಪೂರ್ತಿ ಶಾಂತಿ ಶಕ್ತಿ ಬೇಕು ಜನರಲ್ಲಿ ಇಂದು
ಕೀರ್ತಿ ಪತಾಕೆ ಹಾರಿಸಲು ಮನದಲಿ ಹನಿ ಹನಿ ಪ್ರೇಮ ತುಂಬುವ ಶಿವ
@ಹನಿಬಿಂದು@
13.04.2025

ಭಾನುವಾರ, ಸೆಪ್ಟೆಂಬರ್ 29, 2024

ಗಝಲ್

ಗಝಲ್ 

ಸರ್ವರಿಗೆ ಶಾಂತಿಯ ನಗೆ ಬೀರುವ ಚಿಟ್ಟೆಗಳಾಗೋಣ 
ಜನರಿಗೆ ಸಹಾಯ ಸಹಕಾರ ನೀಡುವ ಸಾಥಿಗಳಾಗೋಣ

ನಿತ್ಯವೂ ಬದುಕು ಬರ್ಭರ ಹಲವಾರು ಜನರಿಗೆ ಇಲ್ಲಿ
ಕೈಗಳ ಹಿಡಿದೆತ್ತಿ ಮುನ್ನಡೆಸುವ ಊರುಗೋಲುಗಳಾಗೋಣ 

ನರಕ ಸದೃಶ ಬಡತನ ಮೆಟ್ಟಿದ ಬಾಳಿನ ಗೋಳು
ವಿದ್ಯೆ ಬುದ್ಧಿ ಕಲಿಸಿ ತಿಳಿ ಹೇಳುವ ಗುರುಗಳಾಗೋಣ

ಕತ್ತಲೆಯ ಕೂಪದೊಳಗೆ ಅವೈಜ್ಞಾನಿಕ ಆಲೋಚನೆಗಳ ಕೂಸುಗಳಿವೆ
ಬೆಳಕ ತೋರಿಸಿ ಬಲಪಡಿಸಿ ಮುನ್ನಡೆಸುವ ಕರಗಳಾಗೋಣ

ನಾನು ನನ್ನದು ನಾನೇ ನನಗೆ ನಾನೊಬ್ಬನೇ ಎನ್ನುವ ಅಹಂಕಾರಿಗಳಿರುವರು
ಆರೋಗ್ಯ ಭಾಗ್ಯ, ಶಿಕ್ಷಣ ಮೇಲೆಂದು ಹನಿ ಹನಿಯಾಗಿ ತಿಳಿಸಿಕೊಡುವ ಹಿತೈಷಿಗಳಾಗೋಣ
@ಹನಿಬಿಂದು@
30.09.2024

ಗಝಲ್

ಗಝಲ್ 

ಭಾರತದ ಸ್ವಾತಂತ್ರ್ಯಕ್ಕೆ ಉದ್ಘಾಟನೆ ಇತ್ತವರು ನಮ್ಮ ಮಹಾತ್ಮ
ಭಾರತೀಯರ ಮುಕ್ತ ಬದುಕಿಗೆ ದೀಪ ಬೆಳಗಿದವರು ನಮ್ಮ ಮಹಾತ್ಮ

ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು
ದೇಶದುದ್ದಕ್ಕೂ ರಾಷ್ಟ್ರದಾಚೆಗೂ ಖ್ಯಾತಿ ಪಡೆದವರು ನಮ್ಮ ಮಹಾತ್ಮ

ಸತ್ಯದೊಂದಿಗಿನ ತನ್ನ ಪರಿಕಲ್ಪನೆಗಳ ಬರೆದವರು
ಶಾಂತಿ ಮಂತ್ರಗಳ ಪ್ರಪಂಚಕ್ಕೆ ಸಾರಿದವರು ನಮ್ಮ ಮಹಾತ್ಮ

ದೇಶದ ಜನತೆಯನ್ನು ದೇಶ ಸುತ್ತಿ ಸುತ್ತಿ ಒಗ್ಗೂಡಿಸಿದವರು
ಪರಂಗಿಗಳನ್ನು ಯುದ್ಧ ಇಲ್ಲದೆಯೆ ಓಡಿಸಿ ಬಿಟ್ಟವರು ನಮ್ಮ ಮಹಾತ್ಮ

ಆಟೋಟಗಳಿಂದ ಹೊರತಾದವರು,   ತನ್ನದೇ ಕೆಟ್ಟ ಅಕ್ಷರಗಳನ್ನು ದೂಷಿಸಿದವರು 
ಆಟದ ಜೊತೆ ಜೊತೆಗೆ ಮೂಲ ಶಿಕ್ಷಣಕ್ಕೆ ಒತ್ತು ಕೊಟ್ಟವರು ನಮ್ಮ ಮಹಾತ್ಮ 

ದೇಶದಲ್ಲಿ ಸ್ನೇಹ ಪ್ರೇಮ ಒಗ್ಗಟ್ಟಿನ ಸೂತ್ರ ಬಿತ್ತಿದವರು 
ದ್ವೇಷ, ಮದ ಮತ್ಸರ ಅಳಿಸಿ ಎಲ್ಲರೂ ಒಂದೆಂದವರು ನಮ್ಮ ಮಹಾತ್ಮ.
@ಹನಿಬಿಂದು@
30.09.2024

ಶುಕ್ರವಾರ, ಸೆಪ್ಟೆಂಬರ್ 27, 2024

ಗಝಲ್

ಗಝಲ್ 

ಮೌನ ಮಾತಾಡಿತು ಮಾತಿಗೆ ಉತ್ತರ ಇರಲಿಲ್ಲ
ಕಣ್ಣು ಗುಯ್‌ಗುಟ್ಟಿತು  ಶಬ್ದಕ್ಕೆ ದನಿ ಇರಲಿಲ್ಲ

ಹೂವು ಹಾವಾಯಿತು ಬೇಲಿ ಹೊಲ ಮೇಯಿತು
ಮನದಲಿ ಕಾಮನೆಗಳ ನಿಶಬ್ದಕ್ಕೆ ಎಣೆ ಇರಲಿಲ್ಲ

ಮಾತು ಮೌನಗಳ ನಡುವೆ ಜೇಡ ಗೂಡು ಕಟ್ಟುತ್ತಿತ್ತು
ನೊಣ ಬಿದ್ದು ಅಂಟಿಕೊoಡರೂ ತಿನ್ನಲು ಜೇಡವೇ ಇರಲಿಲ್ಲ!

ಮೋಹ ಮದ ಮಾತ್ಸರ್ಯಗಳ ಬದುಕಿದು
ಇತರರ ಕಂಡು ಹೊಟ್ಟೆ ಉರಿಯದೆ ಇರಲಿಲ್ಲ

ತೋಟ ಕೆರೆ ಬಾವಿ ಕುಂಟೆ ಎಲ್ಲೆಲ್ಲೂ ನೀರಿದೆ
ಬಿಸಿಯಾಗಿ ಹರಿವ ಪ್ರೇಮದ  ಕಣ್ಣೀರಿಗೆ ಬೆಲೆ ಇರಲಿಲ್ಲ..
@ಹನಿಬಿಂದು@
27.09.2024

ಬುಧವಾರ, ಜುಲೈ 5, 2023

ಗಝಲ್

ಗಝಲ್

ಬರೆಯಬೇಕೆನಿಸಿದೆ ಹೊಸದಾದ ನವ ರೂಪದ ಗಝಲ್
ಮರೆಯಬೇಕೇನಿಸಿದೆ ಹಳೆಯ ಮೋಹದ ಗಝಲ್

ನೋವು ಕಷ್ಟ ದುಃಖದ ಜೀವನ ಸಾಕಾಗಿದೆ
ಹೊಸೆಯ ಬೇಕೆನಿಸಿದೆ ಜೀವನದ ಗಝಲ್

ನಲಿವಿನ ಸಂತಸ-ಸುಖದ ಸಾಲುಗಳು ಬೇಕಾಗಿವೆ
ನವಿಲಿನಂತೆ ಕುಣಿಯ ಬೇಕೆನಿಸಿದೆ ಗಝಲ್

ಗರಿಬಿಚ್ಚಿ ಹಾರಿ ನಭದಿ ತೇಲಾಡಬೇಕಿದೆ
ಮರೆತು ಮರೆಸಲು ಮರೆಯಬೇಕಿದೆ ಗಝಲ್

ಪ್ರೇಮದ ಸಾಲುಗಳ ಸ್ನೇಹದ ಪದಗಳಲಿ ಹೊಸೆಯಬೇಕಿದೆ
ಪ್ರೀತಿಭರಿತ ಮಾತುಗಳ ಆಡಬೇಕಿದೆ ಗಝಲ್
@ಹನಿಬಿಂದು@
06.07.2023


ಶುಕ್ರವಾರ, ಮಾರ್ಚ್ 10, 2023

ಗಝಲ್

ಗಝಲ್

ಹೊಸ ಹೂವು ತಲೆಯೆತ್ತಿ ಹೊಸರಾಗ ಹಾಡಿತ್ತು
ಕಸ ಮುಸುರೆ ತೊಳೆದರೂ ಬದುಕ ದಾರಿ ಸಾಗಿತ್ತು

ಲತೆ ಮರವ ಏರುತ್ತಾ ಬಾಳ ಬಂಡಿ ಸಾಗಿತ್ತು
ಮನಸಾರೆ ಕೊಂಡಾಡುತ್ತಾ  ನವ ಲಹರಿ ಹೊಮ್ಮಿತ್ತು

ಸಂತಸದ ಹಾದಿಯಲಿ ಹಸಿರ ಗಿಳಿ ಮಾತಾಡಿತ್ತು
ಕೆರೆ ಕಟ್ಟೆಯ ಮೇಲೆ ನವಿಲ ಗರಿ ಕುಣಿದಿತ್ತು

ಮೋಹ ಮದ ಮಾತ್ಸರ್ಯದ ಹಗ್ಗ ತುಂಡಾಗಿ ಹೋಗಿತ್ತು
ಚಂದಿರನ ಕಾಂತಿಯಂತೆ ಅವಳ ಮುಖಸಿರಿ ಹೊಳೆದಿತ್ತು

ರಗಳೆ ಕವಿ ಹಾಡಿದಂತೆ ಪದಗಳಾಟ ಉರುಳಿತ್ತು
ರಮಿಸುವ ಪತಿಯ ಹಾಗೆ ನೆರಳು ಸುರಿ ಸುರಿದಿತ್ತು

ಕೋಮು ದಳ್ಳುರಿಯ ಮರೆತು ಕಣ ಕಣವೂ ಬೆಳಗಿತ್ತು
ಪ್ರೇಮದರಮನೆಯಲ್ಲಿ ಹೊಸ ಬದುಕ ಗುರಿ ಸಾಗಿತ್ತು.
@ಹನಿಬಿಂದು@
11.03.2023

ಗಝಲ್

ಗಝಲ್

ಮಾತು ಬೇಡವಾಗಿ ಮೌನವೇ ಕಣ್ಣಲಿ ಮಾತಾದಾಗ ಅದೇನು ಮುಖ
ಪದವು ಮರಗಟ್ಟಿ ಹೋಗಿ ನಗೆಯೊಂದು ಇಣುಕಿದಾಗ ಚಿಕ್ಕದೇನು ನಿಖಾ!

ನೋಟಗಳು ಸೇರಿ ನಯನಗಳು ಜಗಳವಾಡುತಿರಲು ಬದುಕು ನರಕ
ಮೋಸದಲಿ ಗೆದ್ದು ಮೆರೆಯುತಿರುವ ಮೀನಿಗೆ ನರಕದಲೇನು  ಸುಖ!

ಮಾತು ಬೆಳ್ಳಿ ಮೌನವೇ ಬಂಗಾರ ಅನ್ನಲಿಲ್ಲವೇ ತಿಳಿದ ಹಿರಿ ಸಖ?
ಮೌನಕೂ ಪೆನ್ನು ಕೊಟ್ಟರೆ ತನ್ನ ನೋವುಗಳ ಬರೆಯದೇನು ದುಃಖ!

ಬದುಕಲೊಂದಿಷ್ಟು ಪೆಟ್ಟು ತಿಂದಾಗಲೆ ರೂಪಗೊಳ್ಳುವುದು ಕಲ್ಲಿನಿಂದ ಶಿಲೆ
ಹಾಗಾಗಿಯೇ ಹಲವಾರು ಕಡೆಗಳಿಂದ ಮೇಲೇಳುವನು ಗಾಯಕ - ಲೇಖಕ

ಪ್ರೀತಿ ಪ್ರೇಮಗಳ ಅಕ್ಕಿ ದೋಸೆಗಳನ್ನು ತಿಂದಂತೆ ಬಿಡಲಾರದು ಬಾಳ್ವಿಕೆ
ನೀತಿ ನಿಯಮಗಳ ರೂಪಿಸಿ ನಿಜ  ಕ್ಷಣಗಳ -ಕಳೆವವನು ದ್ಯೋತಕ!
@ಹನಿಬಿಂದು@
23.02.2023





ಬುಧವಾರ, ನವೆಂಬರ್ 9, 2022

ಗಝಲ್

ಗಝಲ್

ಹಸಿರ ಹೊದ್ದು ಮಲಗಿರುವ ಕನ್ಯೆಯಿವಳು ನೀ ಯಾರೇ?
ಬಸಿರಲಿ ಜೀವಿಗಳ ಹೊತ್ತು ಸಾಕುವವಳು ನೀ ಯಾರೇ ?

ಬವಣೆಯ ಬದುಕನು ಒಪ್ಪಿ ಅಪ್ಪಿಕೊಂಡಿರುವಳು ಧರೆ
ಬದಲಾವಣೆ ಮಾಡುವ ಮನುಜರ ಹೊತ್ತವಳು ನೀ ಯಾರೇ?

ಗುಂಡಿ ಕೊರೆದು ನಿನ್ನೆದೆಯ ನೆತ್ತರ ಕುಡಿವವರ ಬೆಳೆಸುತಿರುವವಳು ಬುವಿ
ಗಂಡಿಯೊಳಗೂ ಜೀವಿಗಳಿಗೆ ಆಶ್ರಯವಿತ್ತವಳು ನೀ ಯಾರೇ?

ಗುಂಡು ಗುಂಡಾಗಿ ದುಂಡಾಗಿ ಬೆಳೆದವಳು ಪೃಥ್ವಿ
ಗಂಡಸರಿಗೂ ತಲೆ ತಗ್ಗಿಸದೆ ರವಿಯ ಕಿರಣದಿ ಬೆಳೆಯುವವಳು ನೀ ಯಾರೇ?

ಮಂಡಿಯೂರಿ ಬೇಡುತಿಹೆ ಧರಣಿ ದೇವಿಯೇ ಹೆಚ್ಚಿಸದಿರು ಮನುಜರನು
ಹೆಂಡ ಕುಡಿದು ಬುದ್ಧಿ ಹಾಳುಮಾಡಿಕೊಂಡವರ ಪ್ರೇಮದಿ ಪೊರೆವವಳು ನೀ ಯಾರೇ?
@ಹನಿಬಿಂದು@
09.11.2022

ಮಂಗಳವಾರ, ನವೆಂಬರ್ 8, 2022

ಗಝಲ್

ಗಝಲ್
ತನ್ನ ಉದ್ಧಾರವಾಗಬೇಕಿದೆ, ಆತ್ಮ ವಿಮರ್ಶೆ ಮಾಡಬೇಕಿದೆ ಮನವೇ
ಸರ್ವ ಬಂಡೆಗಲ್ಲುಗಳ ನಡುವೆ ನೀರಾಗಿ ಹರಿಯಬೇಕಿದೆ 
ಮನವೇ

ಬಿರುಗಾಳಿಗೆ ಎದುರಾಗಿ ಸಾಗಬೇಕಿದೆ, ತರಗೆಲೆಯ ತೆರದಿ ಜಾರುತ್ತಾ ಬೀಳುತ್ತಾ, ಓಡುತ್ತಾ
ಸರ್ವರ ಜೊತೆಗೆ ಒಂದಾಗಿ ಬೆರೆತು ಬಾಳ ಬೇಕಿದೆ ಮನವೇ..

ಅಕ್ಕರೆಯ ಸಕ್ಕರೆಯು ಒಂದೆರಡು ದಿನಕ್ಕೆ ಮಾತ್ರ ಮೀಸಲು
ಅತಿಯಾದರೆ ಅಮೃತವೂ ವಿಷವೇ, ತಿಳಿಯಬೇಕಿದೆ ಮನವೇ

ಮೋಸ, ವಂಚನೆ, ಹಗೆ, ಹೊಟ್ಟೆಕಿಚ್ಚಿನ ಜಾಲತಾಣಗಳಿಹವು
ಬದುಕ ಮೊಬೈಲ ಆ್ಯಪ್ ಗಳನು ಬಳಸುವುದ ಅರಿಯಬೇಕಿದೆ ಮನವೇ..

ಕಣ್ಣು ಕೋರೈಸುವ ಕಡೆ ಎಲ್ಲಾ ಜಗಮಗ ಬೆಳಕು, ತಳುಕು, ಮೆಲುಕು
ನೂಕುವರು ಪಾತಾಳಕೆ ಬಡವನ, ಸೆಟೆದು ನಿಲ್ಲಬೇಕಿದೆ ಮನವೇ..

ಪ್ರೀತಿ, ಸ್ನೇಹ, ಜಾಣ್ಮೆಯಿಂದಲಷ್ಟೆ ಗೆಲ್ಲಬಹುದು ಹೃದಯಗಳ ಧರೆಯಲಿ
ಪ್ರೇಮ ಭರಿತ ಹೃದಯವನು ಸರಿಯಾಗಿ ಓದ ಬೇಕಿದೆ ಮನವೇ..
@ಹನಿಬಿಂದು@
09.11.2022

ಗುರುವಾರ, ಸೆಪ್ಟೆಂಬರ್ 8, 2022

ಗಝಲ್

ಗಜ಼ಲ್

ಅರೆ ತೆರೆದ ಕಣ್ಣಲ್ಲಿ ಪ್ರೀತಿ ಹೇಗೆ ಕಾಣಬಲ್ಲದು ಹುಜೂರ್
ಕರೆಯುವ ಹೃದಯದ ದನಿ ಅದು ಹೇಗೆ ತಾನೇ ಕೇಳಬಲ್ಲದು ಹುಜೂರ್

ಮರದೊಳಗೆ ಹೂ ಕಾಯಿ ಹಣ್ಣ ರುಚಿ ಅಡಗಿಹುದು ಖರೆ
ಒಡಲೊಳಗೆ ಸುರಿದ ಮದಿರೆಯಲಿ ಪ್ರೀತಿ ಹೇಗೆ ಉಕ್ಕುಬಲ್ಲದು ಹುಜೂರ್

ಕಗ್ಗತ್ತಲೆಯಲಿ ಕಣ್ಣ ಭಾಷೆ, ಮುಖದ ಭಾವಗಳ ಓದಲಾಗದು ನಿಜ
ಮಗ್ಗದ ಬಟ್ಟೆಯಡಿಯಲ್ಲು ಮನದ ಹೇಯ ಕೃತ್ಯವ ನೋವು ಅಳೆಯಬಲ್ಲದು ಹುಜೂರ್

ಮೋಸ ವಂಚನೆಗಳ ಅರಿಯದ ಮನಸ್ಸು ಸುಲಭವಾಗಿ ಕಳ್ಳರ ಗುರುತಿಸಲಾಗದು ದಿಟ
ಕೋಶ ಓದಿ ದೇಶ ತಿರುಗಿದ ಮೆದುಳು ನ್ಯಾಯ ನೀತಿ ಹೇಗೆ ಮರೆಯಬಲ್ಲದು ಹುಜೂರ್

ರಾಗಿ ಕಪ್ಪಾದರೂ ಅದರೊಳಗಿನ ಪೋಷಕಾಂಶದ ಉತ್ತಮ ರುಚಿ ಬದಲಿಸದು ಎಂದೂ
ಪ್ರೇಮನ ಪರಿಶುದ್ಧ ಪ್ರೀತಿಯ ಕಡೆಗಣಿಸಿದರೆ ತಡೆಯಲು ಹೇಗೆ ಸಾಧ್ಯವಾಗಬಲ್ಲದು ಹುಜೂರ್ ?
@ಪ್ರೇಮ್@
31.08.2022

ಭಾನುವಾರ, ಅಕ್ಟೋಬರ್ 31, 2021

ಗಝಲ್

ಗಝಲ್

ರವಿಯ ಸುತ್ತ ಭ್ರ ಬುವಿಯದು , ಒಲವು ಇರುವುದು ಹೀಗೆಯೇ
ಕವಿಯ ಮನದ ಭಾವ ಬೆಳೆವುದು ಸ್ನೇಹ ಬರುವುದು ಹೀಗೆಯೇ..

ಹನಿ ಹನಿಯೂ ತೊಟ್ಟಿಕ್ಕುತ್ತಿದೆ ಧಾರೆಯಾಗಿ ರಭಸದಲಿ
ಮಿನಿ ಬಯಕೆ ಗರಿ ಬಿಚ್ಚಿ ಹಾರಿ ನಲಿವುದು ಹೀಗೆಯೇ..

ಮರೆತು ಕೂಡಾ ಮರೆಯಲಾರದ ನಾನು - ನೀನಿನ ಜಗವಿದು
ಮೌನದಲೂ ಮಾತು, ನೋಟದಲೂ ಅರ್ಥವಾಗುವುದು ಹೀಗೆಯೇ..
 
ಬೇಕೆಂದರೂ ಸಿಗದ, ದಕ್ಕಿದ್ದನ್ನು ಒಪ್ಪದ ಲೋಕವಿದು
ನಿಜ ಪ್ರೀತಿಗೆ ಸರ್ವ ಹೃದಯಗಳು ತಲೆ ಬಾಗುವುದು ಹೀಗೆಯೇ..

ಬಾಎಂದರೂ ಕೈಗೆ ಸಿಗದ ಮಹಾ ಕಳ್ಳನ ಮನವಿದು
ತಾ ಎನಲು ಹಗಲು ರಾತ್ರಿ ಮೋಹದ ಮೂಟೆ ಕೊಡುವುದು ಹೀಗೆಯೇ..

ಪ್ರೇಮದ ಜಾಗದಲಿ  ಅನುಮಾನವೇ ತುಂಬಿದೊಡೆ ಇಂಬುಂಟೆ ನಿಜದಲಿ
ಭ್ರಮೆಯ ಕ್ಷಣದ ನಶೆಯಲಿ ಬಿದ್ದು ಏಳಲಾಗದ್ದು ಹೀಗೆಯೇ..
@ಪ್ರೇಮ್@
31.10.2021

ಸೋಮವಾರ, ಅಕ್ಟೋಬರ್ 18, 2021

ಗಝಲ್

ಗಝಲ್

ನಮ್ಮೊಳಗಿನ ಭಾವಕ್ಕೆ ಜೀವ ತುಂಬಿದವ ನೀನು
ನನ್ನೊಲವಿನ ಕವಿತೆಗೆ ಪದವಾದವ ನೀನು...!

ಜೀವದ ಜೀವಕ್ಕೆ ಕಾವ್ಯ ಕೈಗನ್ನಡಿ ಬೇರೆ ಬೇಕೇನು?
ಮನದೊಳಗಿನ ಕಿಚ್ಚನ್ನು ತಣಿಸಿದವ ನೀನು!

ಮೌನಕ್ಕೆ ಅಕ್ಷರಗಳ ಸರವ ಪೋಣಿಸಿದ ಕರುಣಿ
ಪ್ರಾಣಕ್ಕೆ ವಾಯುವಿನ ಶಕ್ತಿ ತುಂಬಿದವ ನೀನು!

ಜೋಗುಳದ ಹಾಡಲ್ಲಿ ಜೋಪಾನ ಮಾಡಿದವ
ಕೋಗಿಲೆಯ ಕೂಗಿನ ಮಧುರತೆ ತಂದವನು ನೀನು

ಪ್ರೀತಿ ವಿಶ್ವಾಸ ಶಾಂತಿ ನೆಮ್ಮದಿಯ ಗೂಡು ಮನ
ಪ್ರೇಮದುಂಗುರವ ತೊಡಿಸಿ ನಂಬಿಕೆಯ ಮೊಳಕೆಯೊಡೆಸಿದವ ನೀನು!
@ಪ್ರೇಮ್@
19.10.2021

ಶುಕ್ರವಾರ, ಅಕ್ಟೋಬರ್ 15, 2021

ಗಝಲ್

ಗಝಲ್

ಮಾತಿನಲೂ ಮೌನವಿದೆ ಗೆಳತಿ ಕಣ್ಣಿಂದ ಇಣುಕುವ ಹನಿ ಕಣ್ಣೀರಲಿ..
ಗೀತೆಯಲೂ ನೋವಿದೆ ಒಡತಿ ಮಣ್ಣಿಂದ ದೊರೆಯುವ ತುಸು ಪಟ್ಟದಲಿ..

ಬಾಸುಮತಿಯಂತೆ ರುಚಿಯಿರಬಹುದು ಬಾಳೆಂದು ಬಗೆದೆ ನಾ ಅಂದು!
ಬಾಸುಂಡೆ ಬಂದಂತೆ ಇಹುದೆಂಬ ಪರಿವೆ ಇರಲಿಲ್ಲ  ನಿಜ ಜೀವದಲಿ..

ಮರೆವು ಕೆಟ್ಟದು ಎಂದು ಹೇಳುತಲಿದ್ದರು ಹಿರಿಯರೆನಗೆ ನಿತ್ಯವೂ
ಮರೆತ ಸಾಲುಗಳೇ ಪರಮ ಮಿತ್ರರೆಂದು ಅರಿವಾಯಿತು ಹೊರ ಜಗದಲಿ...

ಗಗನದಲಿ ಗೂಡು ಕಟ್ಟಿದ್ದವು ಮೋಡಗಳು ತಣ್ಣಗೆ ತಮ್ಮಷ್ಟಕ್ಕೆ ತಾವು!
ಉದುರಿದವು ಹನಿಯಾಗಿ ಮುತ್ತಿನ ಮಣಿಯಾಗಿ ನವಿರಾಗಿ ಬಲವಾಗಿ ಸಣ್ಣ ಬಿಂದುವಲಿ.. 

ಮರದೊಳಗೆ ಅದೆಲ್ಲಿ ಹುದುಗಿತ್ತು ರುಚಿಯಾದ ಹಣ್ಣಿನ ಸಿಹಿಯು?
ಕನಿಕರದ ನಂಬಿಕೆಯ ಪ್ರೀತಿಯ ನಿಸ್ವಾರ್ಥದ ಮೋಸವಿರದ ಸರಿ ಗೆಳೆತನದಲಿ.

ಬಡಬಾಗ್ನಿ ಎದೆಯೊಳಗೆ ನಿದ್ದೆಯಾದರೂ ಹೇಗೆ ತಾನೇ ಅಡಿಯಿಟ್ಟೀತು ಮಂಚದೊಳಗೆ?
ಸುಡು ಸುಡುವ ಪನ್ನೀರು ವೇಗದಿ ಜಾರಿ ಬೀಳುತಳಿ ಕೆನ್ನೆ ಅಂಚಿನಲಿ..

ಪುಸ್ತಕದಿ ಬರೆದದ್ದು ಓದಿದ್ದು ಗೀಚಿದ್ದು ನೆನಪಿಲ್ಲ ಕ್ಲಾಸಿನಲಿ ಅಂದು!
ಪ್ರೇಮ ಪತ್ರವ ಬರೆದು ಸಿಕ್ಕಿ ಹಾಕಿಕೊಂಡಿರುವುದು ಸತ್ಯ ಗುರುವಿನಲಿ! 
@ಪ್ರೇಮ್@
15.10.2021

ಬುಧವಾರ, ಜುಲೈ 7, 2021

ಗಝಲ್

ಗಝಲ್

 ಹೃದಯದ ಭಾವನೆಗಳ ಆಳದಲಿ ಕಾಡದಿರು ಗಝಲ್
ನೊಂದ ಮೂಕ ವೇದನೆಗಳ ನೋಡದಿರು ಗಝಲ್..

ಸರ್ವ ಜನಕೆ ಹಿತವ ಕೋರುವ ಮನವು
ದುರ್ವರ್ತನೆಗಳ ಒಳಗೆ ಬರಲು ಬಿಡದಿರು ಗಝಲ್...

ಸತ್ಯ ಪಥದಿ ನಡೆವ ಹಾದಿಯಲಿ ಸಾಗಿಸುತಿರು
ಸದಾ ಭಕ್ತಿಯಿಂದಲಿ ದೇವಗೆ ಬಾಗುತಿರು ಗಝಲ್..

ಸೋಜಿಗದ ಯುಗವಿದು ಜಗದಲಿ ನಿನ್ನೆ ಇಂದು 
ಬದುಕ ನಾವೆಯಲಿ ದಡಕೆ ನೂಕುತಿರು ಗಝಲ್..

ಮೋಹ, ಮದ, ಮಾತ್ಸರ್ಯದ ಜನರ ಜೊತೆಗಿಹೆವು
ದ್ರೋಹವೆಸಗುವ ಹಾಗೆ ಎಂದೂ ಮಾಡದಿರು ಗಝಲ್...

ಹೋರಾಟದ ಕ್ಷಣವಿದು ಒಳಿತು ಕೆಡುಕುಗಳ ಜೊತೆಗೆ
ಕಡಿಮೆ ಸಂಖ್ಯೆಯೆಂದು ಹೊರ ದೂಡದಿರು ಗಝಲ್...

ಮರುಕ ಪಡುವ ಕರಗುವ ಗುಣದ ಬರಹವಿದು
ಪ್ರೇಮ -ಶಾಂತಿಯ ಕೊನೆವರೆಗೆ ಕಳೆಯದಿರು ಗಝಲ್..
@ಪ್ರೇಮ್@
07.07.2021




ಸೋಮವಾರ, ಮೇ 17, 2021

ಗಝಲ್

ಗಝಲ್
ಮೂರು ದಿನದ ಬಾಳಿಗೆ ಸಣ್ಣ ನಗುವಿನಲೆಯೇ ಗಝಲ್
ನೂರು ಕನಸ ಬದುಕಿನೊಳಗೆ ತುಸು ಪ್ರೀತಿಯೇ ಗಝಲ್!

ಮಹಡಿ ಮನೆಯೊಳಗೆ, ಅರಮನೆಯ ಕೊನೆಯೊಳಗು ಬೇಕಿದೆ
ಸವಿ ಮಾತಿನ ನಗೆಯುಸಿರಿಗೆ ಮೌನ ಮಾಯೆಯೇ ಗಝಲ್

ನೋಟ ಪಾಠ ಕೂಟ ಕಾರ್ಯಕೆ ಸೇರಿಕೆ ಬೇಕಲ್ಲವೇ?
ಸೋತ ಜೀವಕೆ ಸಾಂತ್ವನ ಕೊಡುವ ಗೆಳತಿಯೇ ಗಝಲ್..

ರಾಗಿ ಅಕ್ಕಿಯ ಗೋಧಿ ಎಣ್ಣೆಯ ಶಕ್ತಿ ಇಹುದಲ್ಲವೇ?
ಸಾಗಿ ದುಡಿಯಲು ದೇಹದೊಳಗೆ ಶಕ್ತಿಯೇ ಗಝಲ್..

ಮೋಸ ವಂಚನೆ ದೂರು ದೂಷಣೆ ಬೀಳು ಸಹಜವು
ದ್ವೇಷವಿಲ್ಲದ ಸ್ವಚ್ಚ ಬಾಳ್ವೆಯ ಯುಕ್ತಿಯೇ ಗಝಲ್..

ರೋಷದಗ್ನಿಯ ದೂರ ಮಾಡುತ ಬಾಳುವವನೇ ಮನುಜನು
ಕೋಶ ಓದುತ ದೇಶ ಸುತ್ತುವ ಕಲಿಕೆಯೇ ಗಝಲ್..

ವಿರಹದುರಿಯಲಿ ಬೇಯುತಿರುವ ಕ್ಷಣವು ಬರುತಲಿರುವುದು
ಬರಹ, ಪ್ರೇಮವ ಗೆದ್ದು ಬಿಡುವ ಸತ್ಯಶಾಂತಿಯೇ ಗಝಲ್..
@ಪ್ರೇಮ್@
17.05.2021

ಶುಕ್ರವಾರ, ಜನವರಿ 29, 2021

ಗಝಲ್

ಗಝಲ್

ಬದುಕು ಹೀಗೆಯೇ ಮೌನ ಶಬ್ದದ ಹಾಗೆ
ಮಾತು ಹೀಗೆಯೇ ಪದವು ನಿಶ್ಶಬ್ದದ ಹಾಗೆ!

ಪ್ರೀತಿ ಹಾಗೆಯೇ ದ್ವೇಷ ಉಕ್ಕುವ ತೆರದಿ
ನೀತಿ ಹಾಗೆಯೇ  ಪಕ್ಷಪಾತ ಮೂಡಿದ ಹಾಗೆ!

ನಲಿವೂ ಹಲವೆಡೆ ನೋವು ನೀಡುವುದು ಬಾಳಿಗೆ
ಕಲಿಕೆಯೂ ಹಲವೆಡೆ ಗುರಿಯ ತೋರದ ಹಾಗೆ!

ನಿದ್ದೆಯಲ್ಲೂ ಹೆದರಿ ಬೆಚ್ಚಿ ಬೀಳುವೆವು ಕೆಲವೊಮ್ಮೆ
ಬಿದ್ದಾಗಲೂ ಏಳುತ ಹೋರಾಡಿ ಗೆದ್ದ ಹಾಗೆ!

ದು:ಖದಲಿ ಹೇಳಿಕೊಳ್ಳಬಾರದು ಮನದೊಡಲ *ಪ್ರೇಮ* ಭಾವ
ಸುಖದಲೂ ಮುಖವ ಸಿಂಡರಿಸಿ ಬದುಕಿದ ಹಾಗೆ!
@ಪ್ರೇಮ್@
16.01.2020

ಶನಿವಾರ, ಜನವರಿ 9, 2021

ಗಝಲ್

*ಗಝಲ್*

ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ?
ಕಾಡಿ ಬೇಡಿ ಪ್ರೀತಿಯನ್ನು ಹೃದಯ ಪಡೆಯ ಬಲ್ಲುದೇ?

ನೋವ ನುಂಗಿ ಮಹಿಳೆ ತಾನು ಸಂಸಾರ ನಡೆಸಬಲ್ಲಳು
ಆದರೇನು ಬಸವಳಿದ ಜೀವ ಚಿಗುರ ಕಾಣ ಬಲ್ಲುದೇ?

ಒಡೆದು ಚೂರಾದ ಕನ್ನಡಿಯ ಜೋಡಿಸಲು ಸಾಧ್ಯವೇ?
ಬಿರುಕಾದ ಮನದ ನಡುವೆ ಮತ್ತೆ ಸೇತುವೆಯ ನಿರ್ಮಿಸ ಬಲ್ಲುದೇ?

ಮರದ ಹಾಗೆ ಭಾವನೆಗಳ ನೇರ ನಿಲ್ಲಿಸುವುದು ಸಾಧ್ಯವೇ?
ಪ್ರತಿ ಕ್ಷಣವೂ ಪ್ರೀತಿಯ ಮಧುರ ಭಾವ ಹೊಮ್ಮ ಬಲ್ಲುದೇ?

ಮಖದಿ ನಗೆಯ ಕಾಣಲೆಮಗೆ ಪ್ರೀತಿ ಕಡಲು ಬೇಡವೇ?
ಕಡಿದು ಸುಟ್ಟ ಮರದ ನಡುವೆ ಚಿಗುರು ಬರಲು ಬಲ್ಲುದೇ?

ಚಂದ್ರ ತಾರೆ ಬಾನ ಬಯಲು ಅಗಲಿ ಇರಲು ಆಗುವುದೇ?
ಮನದ ನೋವ ಮೂಟೆ ಕಟ್ಟಿ ತೇಲಿ ಬಿಡಲು ಬಲ್ಲುದೇ?

ಮಾತ ಕೊಂದು ಬಯಕೆ ಚಿವುಟಿ ಗೆಲ್ಲಬಹುದೇ ಬಾಳಲಿ?
ಪ್ರೇಮವೆಂಬ ಸುಮವ ಮರೆತು ಬದುಕ ಸವೆಸ ಬಲ್ಲುದೇ?
@ಪ್ರೇಮ್@
02.01.2020
🥀🌼🥀🌼🥀🌼🥀🌼