ಶನಿವಾರ, ನವೆಂಬರ್ 7, 2020

ವಿಮರ್ಶೆ

💐--- *ನಾನು ಪ್ರೇಮ್ ಯಾನೆ ಪ್ರೇಮಾ ಉದಯ್ ಕುಮಾರ್. ಜಬೀವುಲ್ಲಾ ಎಂ.ಅಸದ್ ಅವರ ಈ ಗಝಲ್ ನ್ನು ಅಶೋಕ್ ಬಾಬು ಟೇಕಲ್ ರವರು ವಿಮರ್ಶೆಗಾಗಿ ಗಝಲ್ ಸಂಭ್ರಮದ ಸುಮಧುರ ಘಳಿಗೆಯಲ್ಲಿ ನನ್ನ ಕೈಗಿತ್ತಿರುವರು. ನಾನೇನು ವಿಮರ್ಷಕಿಯಲ್ಲ, ನನ್ನ ಓದು ಹಾಗೂ ಅನುಭವದ  ಆಧಾರದಲ್ಲಿ ನನ್ನದೇ ನೆಲೆಯಲ್ಲಿ ನನ್ನ ಅನಿಸಿಕೆಯನ್ನಿಲ್ಲಿ ವ್ಯಕ್ತಪಡಿಸಲು ಹರ್ಷಿಸುತ್ತಿದ್ದೇನೆ. ಕವಿಭಾವಕ್ಕೆ ಧಕ್ಕೆ ಬರದೆಂದು ಆಶಿಸುತ್ತೇನೆ* 💐

ಇಟ್ಟ ಒಂದು ಹೆಜ್ಜೆ ನೂರು ಸಾವಿರವಾಗಿ ಗುರಿಯತ್ತ ಸಾಗಬೇಕಿದೆ ನೋಡು
ಸಾಧನೆಯ ಶಿಖರಕ್ಕೆ ಅನ್ಯಮಾರ್ಗಗಳಿಲ್ಲ ಖುದ್ದು ಛಲದಿ ಏರಬೇಕಿದೆ ನೋಡು 

💐 *ಒಂಭತ್ತು ದ್ವಿಪದಿಗಳ ಹೊತ್ತ ಈ ಗಝಲ್ ನ ಮೊದಲ ಸಾಲುಗಳನ್ನೋದುವಾಗಲೇ ಸ್ವಾಮಿ ವಿವೇಕಾನಂದರ ಮಾತು ನೆನಪಾಯಿತು.'ಸಾವಿರ ಮೈಲಿಗಳ ಪ್ರಯಾಣವೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗುತ್ತದೆ.'  ನಮ್ಮ ಜೀವನವೆಂಬ ಸಾಗರಕ್ಕೆ ಧುಮುಕಿದ ಮೇಲೆ ಅದನ್ನು ಈಜಿ ದಡ ಸೇರಲೇ ಬೇಕಾಗಿದೆ. ಸಾಧನೆಯ ಶಿಖರ ತಲುಪದಿರೆ   ಬದುಕಿಗೆ ಬೆಲೆಯಿಲ್ಲ, ನಮ್ಮ ಬದುಕಿನ ಮಾರ್ಗವನ್ನು ಏರಿ ಇತರರು ಸಾಧಿಸಲು ಸಾಧ್ಯವಿಲ್ಲ, ನಾವೇ ಸ್ವತ: ಎತ್ತರಕ್ಕೇರುವ ಪ್ರಯತ್ನ ಮಾಡಬೇಕಾಗಿದೆ. ಹಾಗಾಗಿ ನಮ್ಮ ಪ್ರಯತ್ನ ನಾವೇ ಮಾಡಿದರೆ ಮಾತ್ರ  ನಮ್ಮ ಗುರಿ ತಲುಪಲು ಸಾಧ್ಯವೆನ್ನುವ ಮಾತು ಅತ್ಯದ್ಭುತ. ಹಿರಿಯ ಕವಿಯೋರ್ವರ 'ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ" ಎನ್ನುವ ಸಾಲು  ನೆನಪಾಯಿತು.* 💐

ಅಡ್ಡಗಟ್ಟುವ ಕಲ್ಲಿನ ಜೊತೆಗೂಡಿ ಚುಚ್ಚಿವೆ ಬೇನಾಮ್ ಮಾತಿನ ಮುಳ್ಳುಗಳು
ಪ್ರತಿ ಅಡೆತಡೆಯ ಕೋಟೆ ಕಂದಕ ದಾಟಿ ನಡೆಯಬೇಕಿದೆ ನೋಡು
 
*💐ನಾವು ನಿಂತಾಗ ಎಡವಲಾರೆವು, ನಡೆಯುವಾಗ ಎಡವುದು ಸಹಜ. ನಡೆವ ವ್ಯಕ್ತಿ ಎಡವದೆ ನಿಂತ ವ್ಯಕ್ತಿ ಎಡವುವನೇ? ಇದೊಂದು ಸಾಮಾನ್ಯ ಗಾದೆ. ಇದನ್ನೆ ಗಝಲ್ ಕಾರರು ರೂಪಕ ಬಳಸಿ ಬಹು ರಸವತ್ತಾಗಿ ವಿವರಿಸಿರುವರು. ಬದುಕಿನಲ್ಲಿ ಸಾಧನೆ ಮಾಡಲು ಹೊರಟ ಪ್ರತಿ ವ್ಯಕ್ತಿಗೆ ಎಡರು ತೊಡರುಗಳು ಎದುರಾಗುವುದು ಸಹಜ. ಅವು ಮಾತಿನ ಮುಳ್ಳುಗಳೆನ್ನುವುದು ಕವಿ ಕಲ್ಪನೆ. ಅದ್ಭುತ ರೂಪಕ. ಕೋಟೆಯೊಳಗೆ ನುಗ್ಗಬೇಕಾದರೆ ಕಂದಕಗಳ ದಾಟ ಬೇಕಾದುದು ಸಹಜ ತಾನೇ? ಅತ್ಯದ್ಭುತ ಪದ ಚಿತ್ರದ ವರ್ಣನೆ ಕವಿಗಳದು. ಕಂದಕಗಳ ದಾಟಿ ಕೋಟೆಯೊಳಗೆ ಹೊಕ್ಕಿ ತನ್ನ ಗುರಿ ಸಾಧಿಸುವಾಗ ಅಡೆತಡೆಗಳು ಸಹಜ. ಅವನ್ನು ಲೆಕ್ಕಿಸದೆ ಮುಂದಡಿಯಿಡಬೇಕೆಂಬ ನೀತಿ ಜೀವನಕ್ಕೆ ಮಾದರಿಯಾಗಿ ಕವಿಯಾಶಯ ಉತ್ತಮವಾಗಿ ಬಿತ್ತರಗೊಂಡಿದೆ.* 💐

ಬೆಂಬಿಡದ ಸೋಲು ಎಂದೂ ಮುಗಿಯದ ಗೋಳು ಕೊನೆ ಎಲ್ಲಿದೆ ಹೇಳು
ಬದುಕೆಂಬ ಯುದ್ಧವನು ಸ್ನೇಹ ಪ್ರೇಮದಿಂದ ಗೆಲ್ಲಬೇಕಿದೆ ನೋಡು

*💐ಬದುಕೆಂಬ ಯುದ್ಧ" ಆಹಾ! ಅದ್ಭುತ ರೂಪಕದ ಬಳಕೆಯಿದು. ಈ ಯುದ್ಧವನ್ನು ಗೆಲ್ಲುವ ಆಯುಧಗಳೆಂದರೆ ಸ್ನೇಹ ಮತ್ತು ಪ್ರೇಮ. ಸರಳ ನುಡಿಗಳ ಸರಳ ಸಾಲುಗಳನ್ನು ಅದೆಷ್ಟು ರಮ್ಯವಾಗಿ ಕಟ್ಟಿ ಕೊಟ್ಟಿರುವರು! ಸುಂದರ ಸಾಲುಗಳು ಮುಕುಟಪ್ರಾಯವಾಗಿಹವು!*💐

ಕಾಂಚಾಣದ ಝಣಝಣ ಕುರುಡಾಗಿಸಿದೆ ಮನಸ್ಸುಗಳನ್ನು
ಸಂಬಂಧಗಳ ಬಂಧದಲಿ ಹೃದಯಗಳನ್ನು ಬೆಸೆಯಬೇಕಿದೆ ನೋಡು

*💐ಪ್ರತಿ ಮನಸ್ಸೆಂಬ ಕನ್ನಡಿಯನ್ನು ಒಡೆಯುವುದು ಮಾತು ಮತ್ತು ಹಣ. ಇಲ್ಲೂ ಕವಿ ಅದನ್ನೇ ಹೇಳಿರುವರು. ಹಣದ ದರ್ಪದೆದುರು ಪ್ರೀತಿ ಸ್ನೇಹಕ್ಕೆ ಬೆಲೆಯೆಲ್ಲಿ ಬರಬೇಕು? ಅದಕ್ಕೊಂದು ಪರಿಹಾರವನ್ನೂ ಗಝಲ್ ಕಾರನಿಲ್ಲಿ ಕಟ್ಟಿ ಕೊಟ್ಟಿರುವನು. ಹೃದಯವೆಂಬ ನದಿಗಳಿಗೆ ಉತ್ತಮ ಸಂಬಂಧವೆಂಬ ಬಂಧದ ಸೇತುವೆ ಬಳಸಿ ಸರ್ವರನು ಒಗ್ಗೂಡಿಸಬಹುದು. ಆಗ ಹಣದ ದರ್ಪವನ್ನು ಕೊನೆಗೊಳಿಸಿ ಪ್ರೇಮದ ದೀಪವನ್ನು ಹಚ್ಚಿ ಬೆಳಗಿ, ನಮ್ಮ ಗುರಿಯೆಡೆಗೆ ಪಯಣಿಸಬಹುದೆನ್ನುವ ಸತ್ವಭರಿತ ಮಾತು.  ಮನಸ್ಸುಗಳನ್ನು ಕಾಂಚಾಣದ ಝಣಝಣ ಕುರುಡಾಗಿಸಿದೆ ಎನ್ನಬಹುದಿತ್ತೇನೋ.ದ್ವಿಪದಿಯಾದ ಕಾರಣ ಗಝಲ್ ನೇರನುಡಿಯಲ್ಲಿದ್ದರೆ ಚೆನ್ನವೆಂದು ಕೆಲವು ಹಿರಿಯ ಗಝಲ್ ಕಾರರು ಹೇಳಿದ ನೆನಪು ನನಗೆ. ಆದರಿಲ್ಲಿ ಕವಿತ್ವ ಮೂಡಿ ಅಂದವಾಗಿದೆ.* 💐

ಬಯಕೆಗಳ ಮುಳ್ಳಿನ ಬೇಲಿ ಕಾರ್ಕೋಟಕ ಸರ್ಪವಾಗಿ ಸುತ್ತಿಬಳಸಿರುವಾಗ
ಪಂಜರದ ಬಂಧನದ ಸರಳುಗಳ ಸೀಳಿ ಹಾಕಿ ಹಾರಬೇಕಿದೆ ನೋಡು

*💐ಈ ದ್ವಿಪದಿಯಲ್ಲಿ ಸಾಲುಗಳು ಎರಡು ವಾಕ್ಯಗಳಾಗಿ ವಿಂಗಡಣೆಯಾಗಿಲ್ಲ.* *ದ್ವಿಪದಿಗಳಲ್ಲಿ ಪ್ರತ್ಯೇಕ ಎರಡು ವಾಕ್ಯಗಳಿರಬೇಕು. ಇಲ್ಲಿ ಒಂದೇ ವಾಕ್ಯವನ್ನು ಎಳೆದಂತಿದೆ. ಆದರೆ ಬಳಕೆಯಾದ ರೂಪಕಗಳಂತೂ ಫೆಂಟಾಸ್ಟಿಕ್.ಬಯಕೆಗಳ ಮುಳ್ಳಿನ ಬೇಲಿ ಕಾರ್ಕೋಟಕದಂತೆ ಸುತ್ತಿಕೊಂಡ ಈ ಸಾಲು ಎಷ್ಟು ಅಂದವಾಗಿದೆಯೆಂದು ವರ್ಣಿಸಲಸದಳ! ರೂಪಕ ಸಾಲು! ಕವಿಯೆಂದರೆ, ಕವಿತ್ವವೆಂದರೆ ಇದೇ ಅಲ್ಲವೇ ಈ ಬಯಕೆಗಳೆಂಬ ಪಂಜರದಿಂದ ಸರಳುಗಳ ಬಿಗಿದು ಹಾರಿ ಹೊರಬಂದು ನಮ್ಮ ಗುರಿ ಸಾಧಿಸಬೇಕಿದೆ.ಸುಂದರ ಪದ ಸಂಪತ್ತು!*💐

ಅಸ್ತಮಿಸುವ ಸೂರ್ಯನೊಂದಿಗೆ ಕೂಡಿ ಮುಳುಗುತ್ತಿದೆ ಹಡಗು
ಬೆಳದಿಂಗಳ ಕಿರಣಗಳಿಗೆ ಚಿಗುರಿ ಕಡಲಾಗಿ ಉಕ್ಕಬೇಕಿದೆ ನೋಡು

*💐ದಿನ ಕಳೆದಂತೆ ನಮಗೆ ವಯಸ್ಸಾಗುತ್ತಿದೆ. ಸಂಜೆಯಾಗುತ್ತಲೇ ಸೂರ್ಯನೂ ಅಸ್ತಮಿಸುವನು. ಹಾಗಿರುವಾಗ ನಮ್ಮ ಬದುಕಿನಲ್ಲಿ ನಾವು ಸೇರಲಿರುವ ಗುರಿಯನ್ನು ತಲುಪಲು ನಾವು ಮತ್ತೆ ಚಿಗುರಬೇಕಿದೆ.ದಡ ಸೇರಲು ಕಡಲಂತೆ ಉಕ್ಕಬೇಕಿದೆ. ಇಲ್ಲಿ ಕವಿ ಉಪಮಾಲಂಕಾರ ಬಳಸಿರುವರು. ಸೂಪರ್ ಉತ್ತೇಜನ.* 💐


ಸುರ್ಮದ ಕಣ್ಣುತುಂಬಿ ಕಪ್ಪು ಕಂಬನಿಗಳು ಉರುಳುತ್ತಿವೆ ಯಾ ಖುದಾ
ಮಸಣದ ಹಾದಿಯಲ್ಲೂ ನಗುವಿನ ಗೀತೆ ಗುನುಗಬೇಕಿದೆ ನೋಡು

💐 *ಕಣ್ಣು ಕಪ್ಪು ಅಂದಕ್ಕಾಗಿ ಹಾಕುವುದಾದರೂ ಅದು ಹೆಚ್ಚಾದರೆ ಕಣ್ಣಲ್ಲಿ ನೀರು ತರುವುದು ಖಚಿತ, ನಮ್ಮ ಬದುಕೂ ಅಂತೆಯೇ. ಅದನ್ನು ಆ ದೇವರೇ ಸರಿಪಡಿಸಬೇಕು. ಏನೇ ಸಾಧಿಸಿದರೂ ನಮ್ಮ ಬಾಳಿನ ಹಾದಿಯ ಕೊನೆಯ ಗುರಿ ಮಸಣವೇ ಆಗಿದೆ. ಈ ಮಸಣದ ಹಾದಿಯಲ್ಲಿ ನಡೆಯುತ್ತಿರುವ ನಮ್ಮ ಬಾಳಿನಲಿ ಏನೇ ಕಷ್ಟಗಳು ಬಂದರೂ ನಗುತ್ತಲೇ ಸಾಗಬೇಕಿದೆ. ಬದುಕಿನ ಕಷ್ಟ-ಸುಖವನ್ನು ಸ್ವೀಕರಿಸಲೇಬೇಕಿದೆ.ಆಹಾ ..ಇಡೀ ಜೀವನದ ಲೌಕಿಕ ಅನುಭವಗಳು ಈ ಎರಡು ದ್ವಿಪದಿಗಳಲ್ಲೇ ಹುದುಗಿ ಕುಳಿತಿವೆಯೆನಿಸುವುದಿಲ್ಲವೇ? ಇದುವೇ ಕವಿಯ ಸಾಮರ್ಥ್ಯ. ಇದಕ್ಕೆ ಪುಟವಿಟ್ಟವರಾರು ಅಲ್ಲವೇ?* 💐

ಗರಿಕೆಹುಲ್ಲು ಸಹ ಅಲ್ಲಾಹನ ಮರ್ಜಿಯಿಲ್ಲದೆ ಗಾಳಿಗೆ ಅಲುಗಾಡದಲ್ಲ
ಬೆರಕೆಯ ಕಪಟ ಜಗದಲ್ಲಿ ಕೊಹಿನೂರಾಗಿ ಹೊಳೆಯಬೇಕಿದೆ ನೋಡು

💐 *ಮತ್ತೊಂದು ಸವಿನುಡಿಯ ದ್ವಿಪದಿಯಿಲ್ಲಿದೆ ನೋಡಿ. ಆ ದೇವನ ಅನುಮತಿಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು, ಭಗವದ್ಗೀತೆಯಲ್ಲಿ ಪುರಾಣದಲ್ಲಿ "ತೇನವಿನಾ ತೃಣಮಪಿ ನ ಚಲತಿ" ಎಂದು ಸಂಸ್ಕೃತದಲ್ಲಿ ಹೇಳಲಾಗಿದೆ. ಅದನ್ನು ಕುವೆಂಪುರವರೂ ತಮ್ಮ ಗೀತೆಯೊಂದರಲ್ಲಿ ಬಳಸಿರುವರು. ಜಗತ್ತು ವಿವಿಧ ಜಾತಿ, ಭಾಷೆ, ಜನಾಂಗ, ಸಂಸ್ಕೃತಿ, ಆಚಾರ-ವಿಚಾರಗಳ ಬೆರಕೆಯದಾಗಿದೆ. ಇಲ್ಲಿರುವ ಜನರಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಕಪಟವೇ ತುಂಬಿ ತುಳುಕಿದೆ. ಪರೋಪಕಾರ, ಪರಹಿತ ಮರೆತು ಪರರ ಮೇಲೆ ದೌರ್ಜನ್ಯ, ವಂಚನೆ, ಮೋಸ, ಅವ್ಯವಹಾರ, ಕೊಲೆ, ಸುಲಿಗೆ, ದರೋಡೆ ಹೆಚ್ಚಿರುವ ಇಲ್ಲಿ ನಾವು ಅನ್ಯರ ಮುಂದೆ ಗಟ್ಟಿಯಾಗಿ ನಿಂತು ವಜ್ರದಂತೆ ಹೊಳೆದು ನಮ್ಮತನವನ್ನು ರೂಪಿಸಿಕೊಂಡು ಹೆಸರುಳಿಸಿಕೊಳ್ಳಬೇಕಿದೆಯೆನುವ ಕವಿಭಾವಕ್ಕೆಣೆಯಿದೆಯೇ? ವಂಡರ್ಫುಲ್ ಅಲ್ಲವೇ* 💐

ಕವಿದ ಕತ್ತಲಿಗೆ ಬಟ್ಟ ಬಯಲು ಬೆತ್ತಲಾಗಿ ಕುಣಿಯುತ್ತಿದೆ ಅಸದ್
ದಹಿಸಿ ತನುವ ಮೇಣ ಕರಗಿ ಹರಿದು ಬೆಳಕು ನುಡಿಯುತ್ತಿದೆ ನೋಡು

 💐 *ತಮ್ಮ ಕೊನೆಯ ದ್ವಿಪದಿಯಲ್ಲಿ ಗಝಲ್ ಕಾರರು ದೇವನೊಡನೆ ಮಾತನಾಡುತ್ತಿರುವಂತೆ ಭಾಸವಾಗುತ್ತಿದೆ, ಸತ್ಯವನ್ನು ಬೆತ್ತಲೆಯಾಗಿ ಅನಾವರಣಗೊಳಿಸಿದ ಚಿತ್ರಕಾವ್ಯದ ಪರಿ ಅನನ್ಯ. ಸರ್ವ ಕಾರ್ಯವ ಮಾಡಿ ಕೊನೆಗೆ ಸತ್ತು ಹೋದ ದೇಹವನ್ನು ಮೇಣ ಹಾಕಿ ಸುಡಲಾಗಿದೆ. ಆ ಸುಟ್ಟ ದೇಹ ಉರಿಯುವಾಗ ಮೇಣದಲ್ಲೂ ಬೆಳಕು ಬರುತ್ತಿದೆ. ಅಂದರೆ ಜನ ಮಾಡಿದ ಒಳ್ಳೆಯ ಕಾರ್ಯಗಳು ಅವರು ಸತ್ತು ದೇಹ ಬೂದಿಯಾದ ಬಳಿಕವೂ ಸರ್ವರಿಗೂ ಬೆಳಕು ನೀಡುತ್ತವೆ. ಬದುಕಿರುವಾಗ ಮನುಜ ಅಂಥ ಕಾರ್ಯಗಳನ್ನು ಮಾಡಬೇಕಿದೆ. ಆಗ ಮಾತ್ರ ದೇವ ಮೆಚ್ಚುವನು. ಅದನ್ನು ಮಾಡವು, ಜೀವನದ ಗುರಿ ತಲುಪಲು ವಿರಹ, ನೋವು, ಕಷ್ಟಗಳ ಅನುಭವಿಸಿ ದೇಹ ಸವೆಯಬೇಕಿದೆ. ಕೊನೆಗೆ ದೇಹ ಉರಿದು ಹೋದರೂ ಬೆಂಕಿ ಜಗವ ಬೆಳಗುವುದೆಂಬ ಭಾವದ ಬಿತ್ತರಣಿಕೆಯ ಶೈಲಿ ಅಮೋಘವಾದುದು.* 💐

💐 *ನನಗನಿಸಿದ್ದು-ಈಗಿನ ಕವನ , ಗಝಲ್ಗಳಲ್ಲಿ ಭಾಷಾ ಚಿಹ್ನೆಗಳ ಪ್ರಯೋಗಕ್ಕೆ ಕವಿಗಳು ಒತ್ತು ನೀಡುತ್ತಿಲ್ಲ, ಇಲ್ಲೂ ಕವಿ ಅದನ್ನು ಬಳಸಿಲ್ಲ, ಭಾಷಾ ಚಿಹ್ನೆಗಳಾದ ಪ್ರಶ್ನಾರ್ಥಕ ಚಿಹ್ನೆ, ಆಶ್ಚರ್ಯ ಸೂಚಕಗಳನ್ನು ಸರಿಯಾದ ಸ್ಥಳದಲ್ಲಿ ಬಳಸಿದ್ದಿದ್ದರೆ ಕವಿತ ತೂಕಮಯ ಹಾಗೂ ಇನ್ನೂ ಅಂದ ಹೆಚ್ಚಿಸಿಕೊಳ್ಳುತ್ತಿತ್ತೇನೋ. ಮುಂದೊಂದು ಜನಾಂಗ ಭಾಷಾ ಚಿಹ್ನೆಗಳ ಮರೆತೇ ಬಿಡುವ ಸಾಧ್ಯತೆಯೂ ಇದೆಯೆನಿಸುತ್ತದೆ. ಅರ್ಥಪೂರ್ಣ ಕವಿತೆಗೆ ಶುಭಾಶಯಗಳು.* 💐💐💐💐💐💐
@ಪ್ರೇಮ್@
07.11.2020
#ಗಝಲ್....

ಇಟ್ಟ ಒಂದು ಹೆಜ್ಜೆ ನೂರು ಸಾವಿರವಾಗಿ ಗುರಿಯತ್ತ ಸಾಗಬೇಕಿದೆ ನೋಡು
ಸಾಧನೆಯ ಶಿಖರಕ್ಕೆ ಅನ್ಯಮಾರ್ಗಗಳಿಲ್ಲ ಖುದ್ದು ಛಲದಿ ಏರಬೇಕಿದೆ ನೋಡು

ಅಡ್ಡಗಟ್ಟುವ ಕಲ್ಲಿನ ಜೊತೆಗೂಡಿ ಚುಚ್ಚಿವೆ ಬೇನಾಮ್ ಮಾತಿನ ಮುಳ್ಳುಗಳು
ಪ್ರತಿ ಅಡೆತಡೆಯ ಕೋಟೆ ಕಂದಕ ದಾಟಿ ನಡೆಯಬೇಕಿದೆ ನೋಡು

ಬೆಂಬಿಡದ ಸೋಲು ಎಂದೂ ಮುಗಿಯದ ಗೋಳು ಕೊನೆ ಎಲ್ಲಿದೆ ಹೇಳು
ಬದುಕೆಂಬ ಯುದ್ಧವನು ಸ್ನೇಹ ಪ್ರೇಮದಿಂದ ಗೆಲ್ಲಬೇಕಿದೆ ನೋಡು

ಕಾಂಚಾಣದ ಝಣಝಣ ಕುರುಡಾಗಿಸಿದೆ ಮನಸ್ಸುಗಳನ್ನು
ಸಂಬಂಧಗಳ ಬಂಧದಲಿ ಹೃದಯಗಳನ್ನು ಬೆಸೆಯಬೇಕಿದೆ ನೋಡು

ಬಯಕೆಗಳ ಮುಳ್ಳಿನ ಬೇಲಿ ಕಾರ್ಕೋಟಕ ಸರ್ಪವಾಗಿ ಸುತ್ತಿಬಳಸಿರುವಾಗ
ಪಂಜರದ ಬಂಧನದ ಸರಳುಗಳ ಸೀಳಿ ಹಾಕಿ ಹಾರಬೇಕಿದೆ ನೋಡು

ಅಸ್ತಮಿಸುವ ಸೂರ್ಯನೊಂದಿಗೆ ಕೂಡಿ ಮುಳುಗುತ್ತಿದೆ ಹಡಗು
ಬೆಳದಿಂಗಳ ಕಿರಣಗಳಿಗೆ ಚಿಗುರಿ ಕಡಲಾಗಿ ಉಕ್ಕಬೇಕಿದೆ ನೋಡು

ಸುರ್ಮದ ಕಣ್ಣುತುಂಬಿ ಕಪ್ಪು ಕಂಬನಿಗಳು ಉರುಳುತ್ತಿವೆ ಯಾ ಖುದಾ
ಮಸಣದ ಹಾದಿಯಲ್ಲೂ ನಗುವಿನ ಗೀತೆ ಗುನುಗಬೇಕಿದೆ ನೋಡು

ಗರಿಕೆಹುಲ್ಲು ಸಹ ಅಲ್ಲಾಹನ ಮರ್ಜಿಯಿಲ್ಲದೆ ಗಾಳಿಗೆ ಅಲುಗಾಡದಲ್ಲ
ಬೆರಕೆಯ ಕಪಟ ಜಗದಲ್ಲಿ ಕೊಹಿನೂರಾಗಿ ಹೊಳೆಯಬೇಕಿದೆ ನೋಡು

ಕವಿದ ಕತ್ತಲಿಗೆ ಬಟ್ಟ ಬಯಲು ಬೆತ್ತಲಾಗಿ ಕುಣಿಯುತ್ತಿದೆ ಅಸದ್
ದಹಿಸಿ ತನುವ ಮೇಣ ಕರಗಿ ಹರಿದು ಬೆಳಕು ನುಡಿಯುತ್ತಿದೆ ನೋಡು

---- ಜಬೀವುಲ್ಲಾ ಎಂ.ಅಸದ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ