ಗಝಲ್
ನೆಲದಾಳದ ಬೇರಿನ ಕಷ್ಟ ಮೇಲಿನ ಎಳೆಯ ಚಿಗುರು ಅರಿಯಲಿಲ್ಲ ಮನವೇ
ಕೆಳವರ್ಗದಿ ಬದುಕುವ ಬಡವರ ನೋವ ಕುರ್ಚಿಯಲಿ ಕುಂತವ ನೆನೆಯಲಿಲ್ಲ ಮನವೇ!
ಬರಗಾಲದಲೂ ಬಂದು ಭೇಟಿಯಾಗಿ ತುಸು ಸಾಂತ್ವನ ಕೊಡಲು ಆಗಲೇ ಇಲ್ಲ
ಪ್ರವಾಹದ ಸಮಯದಿ ಮನೆ ಮಠ ಕಳೆದುಕೊಂಡಾಗ ಕೊಂಚ ನೋಡಲಾಗಲಿಲ್ಲ ಮನವೇ!
ನೇಸರನು ನೆತ್ತಿಯ ಸುಡುತಿರಲು ಕೊರೋನ ಸಮಯದಿ ಹೊರಟರು ತಮ್ಮೂರಿಗೆ ಕೂಲಿಯಾಳುಗಳು
ಅನ್ನ-ನೀರು ಸಿಗದೆ ನಡು- ಬೀದಿಯಲಿ ಸತ್ತು ಹೋದುದು ಗೊತ್ತಾಗಲಿಲ್ಲ ಮನವೇ!
ಹೋಟೆಲ್ ಕ್ಯಾಂಟೀನ್ ಚಹಾ ಕಾಫಿ ಮುಂದಿರಗಳು ಬಂದಾಗಿ ಮಾಲಕರು ಬಡವರಾದರು
ಹಣದ ಗದ್ದುಗೆ ಮೇಲೆ ಕುಳಿತ ಮಂತ್ರಿಗಳಿಗೆ ಅವರ ನೋವು ತಿಳಿಯಲಿಲ್ಲ ಮನವೇ!
ಬೇಡವಾದ, ಉಪಯೋಗಿಸಿದ ಸ್ಯಾನಿಟೈಸರ್, ಮಾಸ್ಕ್, ಕೈಗವಚಗಳ ಕಸದ ಬುಟ್ಟಿಗೆ ತುಂಬಿದರು!
ದನ, ಕುರಿ, ಆಡುಗಳ ಹೊಟ್ಟೆಯೊಳಗೆ ಹೋದ ವಸ್ತುಗಳ ಯಾರೂ ಗಮನಿಸಲಿಲ್ಲ ಮನವೇ!
ಗಿಡ ಮರ ಕಡಿದು ಕಾಂಕ್ರೀಟ್ ಕಾಡು ಕಟ್ಟುವಾಗ ಜನರಿಗೆ ಅರಿವಾಗಲಿಲ್ಲ
ಹಲವು ರಸ್ತೆಗಳು ಮಳೆ ಸುರಿವಾಗ ಮಣ್ಣು ಸಡಿಲವಾಗಿ ಬಿರಿಯಲಿಲ್ಲ ಮನವೇ!
ಪ್ರೇಮ ಪ್ರೀತಿ ಶಾಂತಿ ನೀತಿ ಕೀರ್ತಿ ಸ್ಪೂರ್ತಿ ಭಕ್ತಿಯನು ಬಯಸೋಣ
ಪರಹಿತಕಾಗಿ ಬೇಡುತ ಸರ್ವೆಡೆ ಸರ್ವರ ಹಿತವನು ಬಯಸುವ ಹೃದಯವಿಲ್ಲ ಮನವೇ!
@ಪ್ರೇಮ್@
07.08.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ