ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-71
ಜೀವನದ ಒಂದಲ್ಲ ಒಂದು ಕ್ಷಣದಲ್ಲಿ ಒಂಟಿತನ ನಮ್ಮನ್ನು ಕಾಡದೇ ಇರೋಲ್ಲ. ಪ್ರತಿಯೊಬ್ಬ ಮಾನವನಿಗೂ ಒಂಟಿತನ ಕಾಡಿಲ್ಲವೆಂದರೆ ಅವನು ಸ್ವಂತಿಕೆಯಿಂದ ಯೋಚನೆ ಮಾಡಲಾರನೆಂದೇ ಅರ್ಥವಲ್ಲವೇ? ಯಾರು ತಮ್ಮ ಬಗ್ಗೆ ತಾನು ಹಲವು ಗುರಿಗಳನ್ನು ಹೊಂದಿ ಅವುಗಳ ಕಾರ್ಯ ಸಾಧನೆಗೆ ಅಡಿಯಿಡುತ್ತಾನೆಯೋ, ಪರರ ಕಲ್ಮಶಯುಕ್ತ ಮಾತುಗಳನ್ನು ಕೇಳಿ ತಲೆ ಕೆಡಿಸಿಕೊಳ್ಳದೆ ತಾನೇ ತಾನಾಗಿ ಮುಂದೆ ಸಾಗುತ್ತಿರುವನೋ ಅವನಿಗೂ ಕೂಡಾ ತನ್ನ ಸಂತಸವನ್ನು ಹಂಚಿಕೊಳ್ಳಲು ತನ್ನ ಜೊತೆಗೆ ತನಗೆ ಯಾರಾದರೂ ಬೇಕೆಂದು ಅನ್ನಿಸದೇ ಇರದು. ಪರರನ್ನು ಅವಲಂಬಿಸುವುದು ದಾಸ್ಯದ ಸಂಕೇತವಾದರೂ, ಕುಟುಂಬ, ಸಂಸಾರ, ಗೆಳೆಯರನ್ನು, ತನಗೆ ಅನ್ನ ಕೊಡುತ್ತಿರುವವರನ್ನು ಅವಲಂಬಿಸಲೇ ಬೇಕಲ್ಲವೇ?
ನಮ್ಮ ಏಳ್ಗೆಗೆ ಎಷ್ಟು ಜನ ಖುಷಿ ಪಡುತ್ತಾರೋ ಗೊತ್ತಿಲ್ಲ, ಆದರೆ ನಮ್ಮ ಏಳಿಗೆ, ಏರುತ್ತಿರುವ ಎತ್ತರವನ್ನು ಕಂಡು ಕರುಬುವವರಂತೂ ಅದಕ್ಕಿಂತ ಹೆಚ್ಚೇ ಇರುತ್ತಾರೆ. ಆ ಅವರದೇ ಹೊಟ್ಟೆಯೊಳಗಿನ ಉರಿಯುತ್ತಿರುವ ಕಿಚ್ಚಿನ ಬಡಬಾಗ್ನಿ ಮಾತಿನ ರೂಪದಲ್ಲಿ ಹೊರಬರುತ್ತದೆ. ಅದರ ಉರಿಯಂತೂ ಊಹಿಸಲಸಾಧ್ಯ! ಅದು ಇಡೀ ಕುಟುಂಬವನ್ನೇ ಸುಟ್ಟು ಕಲುಷಿತವೂ, ಸರ್ವನಾಶವೂ ಮಾಡಬಲ್ಲುದು. ಕುಟುಂಬದೊಳಗಿನ ಜನರೇ ಹಣ, ಆಸ್ತಿ, ಹೆಸರಿಗಾಗಿ ತಮ್ಮ ಸದಸ್ಯನೊಬ್ಬನಿಗೆ ಮೋಸ ಮಾಡಿದಾಗ ಒಂಟಿತನವೇ ಲೇಸೆನಿಸುತ್ತದೆ. ಮಕ್ಕಳ ಗಲಾಟೆ, ಆಸ್ತಿ-ಹಣ-ಹೆಣ್ಣು-ಮಣ್ಣಿಗಾಗಿ ಪ್ರಾಣ ಬಿದ್ದಾಗಲೂ ಒಂಟಿತನ ಲೇಸೆನಿಸುವುದಿಲ್ಲವೇ?
ಈಗಂತೂ ಬಿಡಿ, ಇರುವುದೆಲ್ಲವೂ ನ್ಯಾನೋ ಕುಟುಂಬಗಳೇ! ತಮ್ಮ ಮನೆಗಳಲ್ಲಿ ಜತೆಗೂಡಿ ಹಾಡುವ, ಕುಣಿದು ನಲಿಯುವ ಕಾಲ ಹೋಗಿ ತಾಯಿ ಅಡಿಗೆ ಮನೆಯೊಳಗೆ, ತಂದೆ ಮೊಬೈಲ್ ನೊಳಗೆ, ಮಗ ಕಂಪ್ಯೂಟರ್ ನೊಳಗೆ ಎನ್ನುವಂತಾಗಿದೆ ಜೀವನ!
ಒಂಟಿತನವೂ ಹಲವೆಡೆ ವರವೇ, ಶಾಪವಲ್ಲ, ಅಪಾರ ಸಾಧನೆ ನಿಮ್ಮದಾಗಬೇಕಾದರೆ, ಬದುಕಿನಲ್ಲಿ ನೀವು ಯಾರಿಗೂ ಕಾಯದೆ ಒಂಟಿಯಾಗಿಯೇ ಮುಂದುವರೆಯಬೇಕಿದೆ. ಪರರ ನಂಬಿದರೆ ಕೈ ಕೊಡುವವರೇ ಜಾಸ್ತಿ. ಕೇವಲ ನಿಮ್ಮನ್ನೇ ನೀವು ನಂಬಿದಾಗ ಮುಂದೆ ಹೋಗುವುದೇ ಹೆಚ್ಚು! ಆದ ಕಾರಣ ಗುರಿ ಸಾಧನೆಗೆ ಯಾರನ್ನೂ ಕಾಯದೆ ಒಂಟಿಯಾಗಿ ಮುಂದುವರೆಯಿರಿ. ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್, ಸ್ವಾಮಿ ವಿವೇಕಾನಂದ,ಹಾಡುಗಾರ ವಿಜಯ್ ಪ್ರಕಾಶ್ ಇಂಥ ಸಾಧಕರೇ ಉದಾಹರಣೆ ಅದಕ್ಕೆ. ನನ್ನ ಗೆಳೆಯರೂ ಬರಲೆಂದು ಕಾದವನ ಒಂಟಿಯಾಗಿ ಬಿಟ್ಟು ಗೆಳೆಯರು ಮುಂದೆ ಹೋಗಿರುತ್ತಾರೆ.
ಒಂಟಿತನದ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿರುವ ಅದೆಷ್ಟೋ ಮನುಜರು ನಮ್ಮ ನಡುವೆಯೇ ಇದ್ದಾರೆ. ಒಮ್ಮೆ ಈ ಸಂಸಾರ ಬಂಧನದಿಂದ, ಕೂಪದಿಂದ ಹೊರ ಬರುವಂತಾದರೆ ಸಾಕೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸುವವರೂ ಇದ್ದಾರೆ!
ಆಕಸ್ಮಾತ್ ಬಯಸದೆಯೇ ಒಂಟಿತನ ಸಿಕ್ಕಿದ್ದರೂ, ನಾನು ಒಂಟಿಯೆಂದು ಕೊರಗದೆ, ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳದೆ ನಮ್ಮ ಗುರಿ ಸಾಧನೆಗಾಗಿ ಮುಂದುವರೆಯೋಣ. ನಮ್ಮ ಸ್ವಾತಂತ್ರ್ಯ ಹಲವರ ಜೀವನಕ್ಕೆ ಬೆಳಕಾಗಲಿ, ನೀವೇನಂತೀರಿ?
@ಪ್ರೇಮ್@
21.02.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ