ಲಘು ಬರಹ
ಮೂಗೇ ಇಲ್ಲದಿರುತ್ತಿದ್ದರೆ...
ಈ ಮೂಗು ಇದೆಯಲ್ಲ, ಬದುಕಲು ಬೇಕಾದ ಅತ್ಯಗತ್ಯದ ಅಂಗವಲ್ಲವೇ? ಊಟ ಮಾಡದೆ ಹಲವಾರು ದಿನ ಬದುಕಬಲ್ಲಿರಿ, ಉಸಿರಾಡದೆ? ಬದುಕಲು ಸಾಧ್ಯವೇ ಇಲ್ಲ! ಊಹಿಸಲೂ ಆಗದು, ಅಲ್ಲವೇ?
ಮೂಗು ಮುಖಕ್ಕೊಂದು ಆಕಾರವನ್ನೂ ಕೊಡುತ್ತದೆ, ಮಾನವನ ಮುಖವನ್ನೊಮ್ಮೆ ಮೂಗೇ ಇಲ್ಲದಿರುತ್ತಿದ್ದರೆ ಯೋಚಿಸಿ? ಕವಿಗಳು ಹೇಗೆ 'ನಾಸಿಕವು ಸಂಪಿಗೆಯಂತೆ' ಎಂದು ವರ್ಣಿಸುತ್ತಿದ್ದರು? ಮೂಗೇ ಮಹಾನ್ ಎಂದಾಯ್ತಲ್ಲವೇ?
ಅಷ್ಟೇ ಏಕೆ, ಕಾಳಿದಾಸನ ಕತೆ ನೆನಪಿಲ್ಲವೇ? ಮುಗ್ದನಾದ ಅವನ ಮುಂದೆ ಕಾಳಿ ಮಾತೆ ತನ್ನ ಹತ್ತು ತಲೆಗಳ ಹೊತ್ತು ಬಂದಾಗ ನಕ್ಕನಂತೆ! ಕಾರಣ "ನಮಗಿರುವುದು ಒಂದೇ ಮೂಗು, ಶೀತವಾದರೆ ಅದನ್ನೇ ತಡೆಯಲಾಗದು, ನಿನ್ನ ಹತ್ತು ಮೂಗನ್ನು ಅದು ಹೇಗೆ ಸಂಭಾಳಿಸುವೆ ದೇವೀ? ಅದಕ್ಕೆ ನಗು ಬಂತು" ಎಂದನಂತೆ! ಬಹುಶಃ ರಾವಣನ ಪರಿಸ್ಥಿತಿಯೂ ಇದೇ ಆಗಿರಬಹುದು.
ನಿಮ್ಮನ್ನು ಗುರುತಿಸುವಾಗಲೂ ಜನ ಉದ್ದ ಮೂಗಿನವ, ಚಟ್ಟೆ ಮೂಗಿನವ, ವಕ್ರ ಮೂಗಿನವ, ಚಪ್ಪಟೆ ಮೂಗಿನವ ಎಂದು ಗುರುತಿಸಲೂ ಬಹುದು! ಮೂಗು ತೂರಿಸಲು ಎಲ್ಲೂ ಎಂದೂ ಹೋಗದಿದ್ದರೆ ಒಳಿತು! ಮೂಗು ಮುರಿಯುವವರು, ಮೂಗು ಸವರುವವರು, ಮೂಗು ಸ್ವಚ್ಛಮಾಡುವವರು ಅನೇಕರು ಸಿಗುತ್ತಾರೆ! ಕೊರೋನ ಆವರಿಸಿದ ಮೇಲೆ ಅವರೆಲ್ಲರಿಗೂ ಸಮಸ್ಯೆಯೇ! ಕಾರಣ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.
ಮೂಗು ಮುಚ್ಚಿಕೊಂಡು ಹೋಗುವುದರಿಂದ ಹಲವಾರು ಏಕಕೋಶ ಜೀವಿಗಳು ನಿಮ್ಮ ಶ್ವಾಸ ಕೋಶದೊಳಗೆ ಹೋಗಲಾಗದೆ ಸಾವನ್ನಪ್ಪುತ್ತಿರುವುದೂ, ನಿಮಗೆ ಶೀತಬಾಧೆಯು ಕಡಿಮೆಯಾಗಿರುವುದೂ ಕಂಡು ಬಂದಿದೆ!
ಮೂಗಿನ ಬಗ್ಗೆ ಬರೆಯುತ್ತಾ ಹೋದರೆ ರಾಮಾಯಣದಂತೆ ಮೂಗಾಯಣವಾಗಿ, ನೀವು ಮೂಗು ಮುರಿಯುವ ಮೊದಲೇ ನನ್ನ ಲೇಖನಿಯ ಮೂಗನ್ನು ಬದಿಗೆ ಸರಿಸುವುದು ಒಳಿತಲ್ಲವೇ? ನೀವೇನಂತೀರಿ?
@ಪ್ರೇಮ್@
09.09.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ