88
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-88
ಸಂಬಂಧಗಳ ಬಗೆಗೆ ಒಂದಿಷ್ಟು. ಮೊದಲಿನ ಹಾಗೆ ಒಂದೇ ಕುಟುಂಬದ ಎಲ್ಲಾ ಸದಸ್ಯರು ಒಂದೇ ಕಡೆ ಮನೆ ಕಟ್ಟಿ ಅಲ್ಲೇ ಕೊಡು ಕೊಳ್ಳುವಿಕೆ ಇರುವ ಸಂಪ್ರದಾಯ ಇಂದು ಇಲ್ಲ. ಅಪ್ಪ ಅಮ್ಮ ಹಳ್ಳಿಯಲ್ಲಿ, ಮಗ ಅಮೆರಿಕಾದಲ್ಲಿ, ಮಗಳು ಯುರೋಪ್ ನಲ್ಲಿ ಇರುವ ಕಾಲ ಇದು! ಕೆಲವು ಕುಟುಂಬಗಳಲ್ಲಿ ತಂದೆ ದುಬೈ ಯಲ್ಲಿ, ತಾಯಿ ಭಾರತದಲ್ಲಿ, ಮಗ ಜಪಾನ್ ನಲ್ಲಿ, ಮಗಳು ಅಮೆರಿಕಾದಲ್ಲಿ! ಕೂಡು ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಹಂಚಿ ಹೋದುದೆ ಅಲ್ಲದೆ ಆ ನ್ಯೂಕ್ಲಿಯರ್ ಕುಟುಂಬದಲ್ಲೂ ಒಬ್ಬರೇ ಜನರಿರುವ ಕಾಲ ಬಂದಿದೆ. ನಾನು ಗಮನಿಸಿದಂತೆ ಬೇರೆ ಬೇರೆ ದೇಶದಲ್ಲಿ ಇರುವ ಜನರಲ್ಲಿ ಡಿವೋರ್ಸ್ ಕೇಸುಗಳು ಹೆಚ್ಚು. ಹಣ ಹೆಚ್ಚಾದಂತೆ ಹೊಂದಾಣಿಕೆ ಕಡಿಮೆ ಆಗುವುದೆನೋ? ಕುಟುಂಬಗಳ ಒಗ್ಗೂಡುವಿಕೆ ಇಲ್ಲದ ಕಾರಣ ನಂಬಿಕೆ, ಪ್ರೀತಿ ಕೂಡಾ ಕಡಿಮೆ. ಹಲವು ಬಾಂಧವ್ಯಗಳು ನಂಬಿಕೆಯ ಮೇಲೆಯೇ ನಿಂತಿದ್ದರೂ ಸಹ ಇಂದು ಮಾನವ ದುಡ್ಡಿನ ಹಿಂದೆ ಓಡುತ್ತಿರುವ ಕಾರಣ ಎಲ್ಲಾ ಸಂಬಂಧ, ಬಾಂಧವ್ಯಗಳಿಗಿಂತ ಹೆಚ್ಚಾಗಿ ಹಣಕ್ಕೆ ಬೆಲೆ ಕೊಡುತ್ತಾನೆ. ಇಂದು ಹಣ ನಮ್ಮನ್ನು ಆಳುತ್ತಿದೆ.
ಹಲವು ಜನರ ಜೀವನದಲ್ಲಿ ಇಂದು ಅವರ ಖರ್ಚಿಗೆ ಬೇಕಾದಷ್ಟು ಹಣವಿದೆ. ಆದರೆ ನೆಮ್ಮದಿ, ಪ್ರೀತಿ ಸಿಗುತ್ತಿಲ್ಲ. ಕಾರಣ ಅವರ ಮನೋಧೋರಣೆ. ಹಣದಿಂದ ಏನು ಬೇಕಾದರೂ ಪಡೆಯಬಹುದು ಎಂಬುದನ್ನು ಮನುಷ್ಯ ತನ್ನ ಬದುಕಿನಿಂದ ದೂರ ತಳ್ಳಬೇಕಿದೆ. ನಿಷ್ಕಲ್ಮಶ ಪ್ರೀತಿ, ಸ್ನೇಹಗಳು ಸಿಗಲೂ ಹೃದಯದ ಭಾಷೆ ಚೆನ್ನಾಗಿರಬೇಕು, ಮನುಷ್ಯತ್ವ ಬೇಕು. ಅದು ಇಂದು ಮಾನವನಲ್ಲಿ ಕಡಿಮೆಯಾಗಿ ಮೃಗತ್ವ ಬೆಳೆದಿದೆ. ಹಣವಿದ್ದವರೇ ಹೆಚ್ಚು ಮೃಗೀಯ ವರ್ತನೆ ತೋರುತ್ತಿದ್ದಾರೆ. ಒಂದು ಕಾಲದಲ್ಲಿ ಈಗಿನ ಹಾಗೆ ಮಾಹಿತಿ, ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಜನ ಜಾತಿ ಮತ ಅಂತರ ನೋಡದೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಚೆನ್ನಾಗಿದ್ದರು. ಅಂಗಡಿಗಳು ಜಾತಿಯ ಆಧಾರದಲ್ಲಿಯೇ ಇದ್ದರೂ ಅಕ್ಕಸಾಲಿಗರ ಬಳಿ ಚಿನ್ನಕ್ಕೆ, ನಾಯಿಂದರ (ಭಂಡಾರಿ) ಬಳಿ ಕೂದಲು ಕತ್ತರಿಸಲು, ಮುಸ್ಲಿಮರ ಬಳಿ ಗುಜೀರಿ ವಸ್ತುಗಳ ಮಾರಲು, ಮೀನು ಮಾಂಸ, ಚಪ್ಪಲಿ ಕೊಳ್ಳಲು, ಭಟ್ಟರ ಬಳಿ ಪೂಜೆ , ಅಡಿಗೆ ಮಾಡಿಸಲು, ಶೆಟ್ಟರ ಅಂಗಡಿಯಿಂದ ದಿನಿಸು ತರಲು, ಕೆಳ ಜಾತಿಯವರನ್ನು ಮನೆಯ ತೋಟದ ಕೆಲಸಕ್ಕೆ ಆಳುಗಳನ್ನಾಗಿ ಕರೆಸಿ ಅವರನ್ನೂ ಚೆನ್ನಾಗಿ ನೋಡಿಕೊಳ್ಳುವ ಸಮಾಜ ಇತ್ತು. ಸಮಾನತೆ ಇರಲಿಲ್ಲ ಆದರೆ ಅವರವರಿಗೆ ಸಮಾಜದಲ್ಲಿ ಅವರದ್ದೇ ಆದ ಜವಾಬ್ದಾರಿ, ಕರ್ತವ್ಯಗಳು ಇದ್ದವು. ಓಲಗ ಊದುವವರು ಬಾರದೆ ಊರ ಜಾತ್ರೆ ಪ್ರಾರಂಭ ಆಗುತ್ತಿರಲಿಲ್ಲ, ಮದುವೆಗಳು ಕೂಡಾ. ಜೀಟಿಗೆ ಹಿಡಿಯುವವರು ಬಾರದೆ ಕೋಲ ಶುರುವಾಗುತ್ತಿರಲಿಲ್ಲ. ಅವರವರಿಗೆ ಅವರದ್ದೇ ಆದ ಬೆಲೆ ಇತ್ತು. ಕೆಲಸಕ್ಕೆ ಕೂಡಾ. ಕೂಲಿ ಕೆಲಸದವರು ಇಲ್ಲದಿದ್ದರೆ ದನಿಯ ಮನೆಯಲ್ಲಿ ಗದ್ದೆ ತೋಟದ ಹಸಿರು ಮಾಸಿ ಹೋಗುತ್ತಿತ್ತು. ಆದರೆ ಈಗ ಓದಿದ ಮಕ್ಕಳೆಲ್ಲಾ ನಗರಗಳಲ್ಲಿ. ಹಿರಿಯರು ದಿಕ್ಕು ಕಾಣದೆ ತಾವು ಕಷ್ಟ ಬಂದು ಕಟ್ಟಿದ ಹಳ್ಳಿಯ ಮನೆಗಳಲ್ಲಿ ಅಸಹಾಯಕರಾಗಿ ಇದ್ದಾರೆ. ನಮ್ಮ ಮಕ್ಕಳು ನಮ್ಮ ಹಾಗೆ ಕಷ್ಟ ಬರಬಾರದು ಎಂದು ವಿದ್ಯೆ ಕಲಿಸಿದ ಹಲವಾರು ಮಕ್ಕಳು ತಂದೆ ತಾಯಿ ಮಾಡುತ್ತಿದ್ದ ಕೃಷಿ ಕೆಲಸ ಮಾಡಲು ಬಾರದೆ ಇದ್ದ ಭೂಮಿಯನ್ನು ಉಪಯೋಗ ಮಾಡಿಕೊಂಡರು. ಜೆಸಿಬಿ ಎಂಬ ವಾಹನ ಬಂದುದೆ ಮಣ್ಣು ಸಮತಟ್ಟು ಮಾಡಲು.ಗಿಡ ಮರಗಳು ಬೇರು ಸಹಿತ ನೆಲಕ್ಕುದುರಿದವು. ಅವುಗಳ ಜಾಗದಲ್ಲಿ ಕಾಂಕ್ರೀಟ್ ಕಾಡುಗಳು ತಲೆ ಎತ್ತಿದವು. ತಿನ್ನಲು ಅನ್ನ ಇಲ್ಲವಾಯಿತು. ಅದೇ ರೀತಿ ಸಂಬಂಧಗಳೂ ಬೆಲೆ ಕಳೆದುಕೊಂಡವು.
"ಪರ ಊರು ಪರಮ ಕಷ್ಟ " ಎಂಬ ಗಾದೆಯ ಅರ್ಥ ಜನರಿಗೆ ಅರಿವಾದದ್ದು ಲಾಕ್ ಡೌನ್ ಕಾಲದಲ್ಲಿ. ಯಾರಿಗೆ ಏನು ಬೇಕೋ ಅದು ಸಿಗದಾಯಿತು. ಹಳ್ಳಿಯ ವಯಸ್ಸಾದ ತಂದೆ ತಾಯಿಯರನ್ನು ಕ್ಯಾರೇ ಮಾಡದೇ ನಗರದಲ್ಲೇ ಬದುಕಿ ಜೀವನವನ್ನು "ಎಂಜಾಯ್ " ಮಾಡುತ್ತಿದ್ದವರಿಗೆ ಕೆಲಸ ಇಲ್ಲದೆ ಹಳ್ಳಿಗೆ ಹೋಗುವ ಹಾಗಾಯಿತು. ಅದೆಷ್ಟೋ ಜನ ಕೃಷಿಗೆ ಮತ್ತೆ ಮರಳಿದರು. ತಮಗಿರುವ ಜಾಗದಲ್ಲಿ ತೋಟ ಪ್ರಾರಂಭಿಸಿದರು. ತಮ್ಮ ಹಿರಿಯರ ಕೆಲಸ ಕಾರ್ಯವನ್ನು ನೂತನ ತಂತ್ರಜ್ಞಾನದ ಬಳಕೆಯ ಮೂಲಕ ಮತ್ತಷ್ಟು ಉತ್ತಮಗೊಳಿಸಿದರು. ಹಿರಿಯರಿಂದ ಜವಾಬ್ದಾರಿ ಪಡೆದುಕೊಂಡರು.
ಪ್ರೀತಿ, ವಿಶ್ವಾಸ, ನಂಬಿಕೆಗಳು ಹಣ, ಧನ, ಕನಕಗಳಿಂದ ಹೊರತಾದವು. ಇವು ಮಾನವನ ಜೀವನದ ಅನನ್ಯ ಬಿಂದುಗಳು. ಎಷ್ಟೇ ದುಡಿದರೂ ದೊಡ್ಡ ಕೋಟ್ಯಾಧಿಪತಿ ಆದರೂ ಅಮ್ಮನ ಪ್ರೀತಿಯಲ್ಲಿ ಅವನು ಮಗುವೇ ಆಗಿ ಬಿಡುತ್ತಾನೆ. ಅದನ್ನು ಅವನ ಪೂರ್ತಿ ಹಣ ಕೊಟ್ಟರೂ ಬೇರೆಯವರಿಂದ ಪಡೆಯಲು ಸಾಧ್ಯ ಇಲ್ಲ. ನಮ್ಮವರು ಅನ್ನಿಸಿಕೊಂಡವರು ಮಾತ್ರ ನಮ್ಮ ಕಷ್ಟದಲ್ಲಿ ನಮ್ಮೊಡನೆ ಇರುತ್ತಾರೆ, ಅದು ಬಿಟ್ಟು ಟ್ವಿಟರ್ ಫ್ರೆಂಡ್ಸ್ ಬಂದು ಆಸ್ಪತ್ರೆಯಲ್ಲಿ ನಿಮ್ಮ ಸೇವೆ ಮಾಡುವರೇ?
ಸಂಬಂಧಗಳ ಬೆಲೆಯನ್ನು ನಾವು ಅರ್ಥೈಸಿಕೊಳ್ಳ ಬೇಕಿದೆ. ಪ್ರತಿ ಸಂಬಂಧಕ್ಕೂ ಬೆಲೆ ಕೊಟ್ಟು ಆ ಪ್ರೀತಿಯನ್ನು ಪಡೆಯ ಬೇಕಿದೆ. ಮೊಬೈಲ್ ನೋಡುತ್ತಾ ಯಾರನ್ನೂ ಗುರುತು ಹಿಡಿಯದವರ ಹಾಗಿದ್ದು ಕೊನೆಗೆ ಒಂದು ದಿನ ಪಶ್ಚಾತಾಪ ಪಡಬೇಕಾಗ ಬಹುದು. ನಮ್ಮ ಪ್ರೀತಿಯನ್ನು ನಮ್ಮವರಿಗೆ ಹಂಚಿ, ಮೋಸ ಹೋಗದೆ, ಹಣದ ಹಿಂದೆ ಓಡದೆ, ನಿಜವಾದ ನೀತಿಯಿಂದ ನಂಬಿಕೆ ಉಳಿಸೋಣ. ವಿಶ್ವಾಸ ಬೆಳೆಸೋಣ. ಪರದೇಶದಲ್ಲಿ ನೆಲೆಸಿದ ಭಾರತೀಯರಿಗೆ ಒಬ್ಬ ಭಾರತೀಯ ಸಿಕ್ಕಿದರೂ ಅವರೆಷ್ಟು ಖುಷಿ ಪಡುತ್ತಾರೆ. ಅಲ್ಲಿ ಉತ್ತರ ಭಾರತ, ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮಲಯಾಳಿ, ಕನ್ನಡಿಗ, ಬಿಹಾರಿ, ಅಸ್ಸಾಮಿ ಎಲ್ಲಾ ಮರೆತೆ ಹೋಗಿರುತ್ತದೆ. ನಿಮ್ಮ ವಿದ್ಯೆ, ಗುಣ, ನಂಬಿಕೆ, ವಿಶ್ವಾಸಕ್ಕೆ ಮಾತ್ರ ಬೆಲೆ. ಈ ಗುಣಗಳನ್ನು ನಾವೂ ಬೆಳೆಸಿ ಕೊಳ್ಳೋಣ, ಉತ್ತಮ ಸಂಬಂಧಗಳನ್ನು ಗಟ್ಟಿಗೊಳಿಸಿ ಉಳಿಸಿಕೊಳ್ಳೋಣ ಅಲ್ಲವೇ? ನೀವೇನಂತೀರಿ?
@ಪ್ರೇಮ್@
22.07.2021
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ