ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮಾರ್ಚ್ 17, 2025

SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೊಂದು ಪತ್ರ 

   ಹಲೋ ವಿದ್ಯಾರ್ಥಿಗಳೇ!  ಎಲ್ಲರೂ ಹೇಗಿದ್ದೀರಾ? ಪರೀಕ್ಷೆಗಂತೂ ನಿಮ್ಮ ತಯಾರಿ ಭರ್ಜರಿಯಾಗಿ ನಡೆದಿರಬೇಕಲ್ವೇ! ತುಂಬಾ ತುಂಬಾ ಓದ್ತಾ ಇದ್ದೀರಾ?  ಅದರಲ್ಲೂ ತುಂಬಾ ಯೋಚಿಸಿ " ನಾನು ಅವರಿಗಿಂತ ಜಾಸ್ತಿ ಅಂಕಗಳನ್ನು ಪಡೆಯಬೇಕು,  ಇವರಿಗಿಂತ ಜಾಸ್ತಿ ಅಂಕಗಳನ್ನು ಪಡೆಯಬೇಕು" ಮೊದಲಾದ ಗುರಿಗಳನ್ನು ಇಟ್ಟುಕೊಂಡು ರಾತ್ರಿ ಹಗಲು ನಿದ್ದೆಯನ್ನು,  ಊಟವನ್ನು ಲೆಕ್ಕಿಸದೆ ಓದ್ತಾ ಇದ್ದೀರಾ? ಟಿವಿ ಮೊಬೈಲ್ ಎಲ್ಲವನ್ನು ಪಕ್ಕಕ್ಕಿಟ್ಟು ಓದಲೇಬೇಕು.  ಈ ಸಲ ಏನಾದರೂ ಸರಿ ಉತ್ತಮ ಅಂಕಗಳನ್ನು ಪಡೆದೇ ತೀರುತ್ತೇನೆ"ಎಂದು ಕಾರ್ಯ ಸಿದ್ದಿಗಾಗಿ ಹೊರಟು ನಿಂತ ಕಲಿಯಂತೆ ಪರೀಕ್ಷೆ ಬರೆಯಲು ನಿಂತಿದ್ದೀರಲ್ಲವೇ? ತುಂಬಾ ಸಂತೋಷ. ಹೌದು ! ನಾವೇನಾದರೂ ಉತ್ತಮ ಕೆಲಸಗಳನ್ನು ಮಾಡ ಹೊರಟರೆ, ಅದರ ಬೆನ್ನು ಬಿದ್ದು ಮಾಡಿದಾಗ ಜಯ ಖಂಡಿತ . ನಿಮ್ಮ ಪರಿಶ್ರಮ ವ್ಯರ್ಥವಾಗದು. 
    ಆದರೆ ಇನ್ನೂ ಕೆಲವರು ವಿದ್ಯಾರ್ಥಿಗಳಿದ್ದಾರೆ, ಅವರಿಗೆ ನಾವು ಹತ್ತನೇ ತರಗತಿ ಎಂಬುದೇ ಮರೆತು ಹೋಗಿದೆ. ಇನ್ನೂ ಕೂಡ ಚಿಕ್ಕ ಮಕ್ಕಳ ಹಾಗೆ ಹೊಡೆದಾಡಿಕೊಂಡು,  ಬೈದಾಡಿಕೊಂಡು ಓದುವುದನ್ನು ಮರೆತು "ಹೇಗೂ ನಾನು ಪಾಸ್ ಆಗಬಹುದು,  ಪಾಸಾದರೆ ಸಾಕು" ಅಂದುಕೊಂಡು ಒಂದೇ ಚೂರು ಪುಸ್ತಕವನ್ನು ನೋಡದೆ ಇರುವವರು ಇದ್ದಾರೆ. ಹಾಗೆಯೇ ಉಳಿದವರು ಕೆಲವರು "ಅಂಕಗಳು ಬಂದರೆ ಬರಲಿ, ಆದರೆ ಹೋಗಲಿ" ಎಂದು ಕೂಡಾ ಇದ್ದಾರೆ.  ದಯವಿಟ್ಟು ಇನ್ನು 30 ದಿನಗಳಷ್ಟೇ ಬಾಕಿ ಇದೆ. ಅಷ್ಟು ದಿನಗಳನ್ನು ಸರಿಯಾಗಿ ನಿಮ್ಮ ಬದುಕಿನಲ್ಲಿ ಬಳಸಿಕೊಳ್ಳಿ.  ದಿನಕೊಂದು ಅಂಕಗಳ ಉತ್ತರವನ್ನು ಕಲಿತರೂ ಕೂಡ 30 ದಿನಕ್ಕೆ 30 ಅಂಕಗಳ ಪ್ರಶ್ನೆಗಳಿಗೆ ಉತ್ತರಗಳನ್ನು ಕಲಿಯಬಹುದು ಎಂಬುದನ್ನು ಮನನ ಮಾಡಿಕೊಳ್ಳಿ.  ಬದುಕಿನಲ್ಲಿ ಯಾವಾಗ ಏನು ಟ್ವಿಸ್ಟ್ ಬೇಕಾದರೂ ಬರಬಹುದು. ನಾವು ಬದುಕಿನಲ್ಲಿ ಬರುವಂತಹ ಒಂದು ಟ್ವಿಸ್ಟ್ ಈ ಎಸ್ ಎಸ್ ಎಲ್ ಸಿ ಪರೀಕ್ಷೆ.  ಇದರ ಅಂಕಗಳು ನಮ್ಮ ಬದುಕಿನ ದಾರಿಯನ್ನು ಬದಲಿಸಬಹುದು ನೆನಪಿಡಿ. 
    ಎಸ್ ಎಸ್ ಎಲ್ ಸಿ ಅಂಕಗಳೇ ನಮ್ಮ ಬದುಕು ಖಂಡಿತಾ ಅಲ್ಲ,  ಆದರೆ ಎಸ್ ಎಸ್ ಎಲ್ ಸಿ ಅಂಕಗಳಿಗೆ ಕೂಡ ನಮ್ಮ ಬದುಕನ್ನು ಬದಲಿಸುವಂತಹ ಸಾಮರ್ಥ್ಯವಿದೆ ಎಂಬುದನ್ನು ತಿಳಿದುಕೊಳ್ಳಿ.  ಆದ್ದರಿಂದ ನಿಮ್ಮೆಲ್ಲ ಶಿಕ್ಷಕರು ನಿಮ್ಮನ್ನು ಉತ್ತೀರ್ಣಗೊಳಿಸಲು ನಿಮ್ಮ ಅಂಕಗಳನ್ನು ಜಾಸ್ತಿ ಗೊಳಿಸಲು ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಕಷ್ಟ ಪಡುತ್ತಿದ್ದಾರೆ. ಅದೇ ಕಷ್ಟವನ್ನು ನಿಮ್ಮಿಂದಲೂ ನಿರೀಕ್ಷಿಸುತ್ತಿದ್ದಾರೆ.  ಅದನ್ನು ನೀವು ನಿಮ್ಮ ಅಂಕಗಳ ಮೂಲಕ ತೋರಿಸಬೇಕೆಂದು ಪೋಷಕರು ಕೂಡ ಬಯಸುತ್ತಿದ್ದಾರೆ.  ಇಷ್ಟು ವರ್ಷದ ತಮ್ಮ ಕಷ್ಟಕ್ಕೆ ತಮ್ಮ ನಷ್ಟ ಯಾವುದನ್ನು ಕೊಡಲಿಕ್ಕೆ ಸದಾ ಪೋಷಕರು ಈ ವರ್ಷ "ಉತ್ತಮ ಅಂಕ ಬರಲಿ" ಎಂದು ಎಂದು ಹಾರೈಸುತಿದ್ದಾರೆ. ಇದೆಲ್ಲವೂ ಕೂಡ ನಿಮಗೆ ತಿಳಿದಿರಬೇಕಾದ ವಿಷಯ. 
       ನೀವೇನು ಕೆಟ್ಟವರಲ್ಲ , ನಿಮಗೆ ಎಲ್ಲ ವಿಚಾರಗಳ ಬಗ್ಗೆಯೂ ತಿಳಿದಿದೆ.  ಎಲ್ಲ ಶಿಕ್ಷಕರ ಗುಣ ನಡತೆಗಳು ನಿಮಗೆ ತಿಳಿದಿದೆ.  ಯಾವ ಶಿಕ್ಷಕರು ಹೇಗೆ? ಯಾವ ಶಿಕ್ಷಕರು ಒಳ್ಳೆಯವರು,  ಯಾವ ಶಿಕ್ಷಕರ ಮನಸ್ಸಿನ ಆಲೋಚನೆಗಳು ಚೆನ್ನಾಗಿಲ್ಲ , ಯಾವ ಶಿಕ್ಷಕರು ಉತ್ತಮವಾಗಿ ನಮ್ಮನ್ನು ತಯಾರಿಗೊಳಿಸುತ್ತಾರೆ,  ಎಲ್ಲಾ ಶಿಕ್ಷಕರನ್ನು (ಕೆಲವರನ್ನು ಹೆಸರು ಕೂಡ ಇಟ್ಟು) ಅವರನ್ನು ಜಡ್ಜ್ ಮಾಡುವ  ಕೆಪ್ಯಾಸಿಟಿ ನಿಮಗಿದೆ.  ಹಾಗಾಗಿ ಮೊದಲು ನಿಮ್ಮ ಎಲ್ಲಾ ಶಿಕ್ಷಕರ ಶ್ರಮವನ್ನು ಅರಿತುಕೊಳ್ಳಿ.  ತಮ್ಮ ಮನೆ ಮಕ್ಕಳು ಎಲ್ಲವನ್ನು ಬಿಟ್ಟು ಬೆಳಿಗ್ಗೆ,  ಸಂಜೆ, ರಜಾ ದಿನಗಳು,  ಭಾನುವಾರ ಎಲ್ಲವೂ ಕೂಡ ಓಟಿ ಇಲ್ಲದೆ ಓವರ್ ಟೈಮ್ ಕೆಲಸ ಮಾಡುವವರು ಇವರು.  
          ಶಿಕ್ಷಕರು , ಅದು ಕೂಡ ನಿಮಗಾಗಿ ಮತ್ತು  ನಿಮ್ಮ ಉತ್ತಮ ಅಂಕಗಳಿಗಾಗಿ!! ಇದರಿಂದ ಶಿಕ್ಷಕರಿಗೆ ಏನು ಸಿಗುತ್ತದೆ ಎಂದು ನೀವು ಕೇಳುವಿರಾದರೆ ಕೇವಲ ಸಂತೋಷ ಅಷ್ಟೇ. "ನನ್ನ ವಿದ್ಯಾರ್ಥಿಯೊಬ್ಬ ಉತ್ತಮ ಅಂಕಗಳನ್ನು ನನ್ನ ವಿಷಯದಲ್ಲಿ ಪಡೆದು ಉತ್ತೀರ್ಣನಾದ"  ಎಂದು ಹೇಳಿಕೊಳ್ಳುವ ಖುಷಿ ಮಾತ್ರವೇ ಹೊರತು ಇನ್ನೇನು ಇಲ್ಲ. ಇಡೀ ವರ್ಷ ಶ್ರಮಪಟ್ಟು ಕೊನೆಗೆ ಕಡಿಮೆ ಅಂಕ ಗಳಿಸಿದರೆ ಅದರಿಂದ ಎಲ್ಲರಿಗೂ ಬೇಸರವಾಗುತ್ತದೆ.  ಅದರ ಬದಲು ಸ್ವಲ್ಪ ಓದಿ ಉತ್ತಮ ಅಂಕಗಳನ್ನು ಪಡೆದರೆ ಎಲ್ಲರಿಗೂ ಸಂತೋಷವೇ ಅಲ್ಲವೇ? ಹಾಗಂತ ನನ್ನ ಕೈಯಲ್ಲಿ ಸಾಧ್ಯವೇ ಇಲ್ಲ ಎಂದಲ್ಲ,  ಯಾರು ಸಾಧನೆ ಮಾಡಿದರು ಸಾಧನೆ ಸಾಧಕನ ಸ್ವತ್ತಲ್ಲವೇ? ಅದು ಯಾವಾಗ ಯಾರಿಗೆ ಬೇಕಾದರೂ ಒಲಿಯಬಹುದು.  ಎಲ್ಲೋ ಒಂದು ಮೂಲೆಯಲ್ಲಿ ಸರವನ್ನು ಮಾರುತ್ತಿದ್ದ ಮೋನ ಈಗ ಮೊನಾಲಿಸಾ ಆಗಿ ದೇಶಕ್ಕೆ ಪ್ರಸಿದ್ಧಿ ಪಡೆಯಲಿಲ್ಲವೇ?  ಹಾಗೆ ಮುಂದೆ ನೀವು ಕೂಡ ಒಂದು ದಿನ ದೇಶದ ಉತ್ತಮ ಪ್ರಜೆಗಳಾಗಿ ಇಡೀ ದೇಶದ ಜನರ ಮನ ಗೆಲ್ಲಬಹುದು!!
    ಇದೀಗ ನಿಮ್ಮ ಮುಂದೆ ನಿಮ್ಮ ಬದುಕಿನ ಒಂದು ಯುದ್ಧ ನಿಂತಿದೆ.  ಆಯುಧವನ್ನು ನೀವು ಗೆಲ್ಲಲೇ ಬೇಕು.  ಅದಕ್ಕೆ ನೀವು ಖಡ್ಗವನ್ನು ಬಳಸಬೇಕೆಂದಿಲ್ಲ.  ಬದಲಾಗಿ ಪೆನ್ನಿನ ಮೂಲಕ ನಿಮ್ಮ ಅರಿವನ್ನು ಬಳಸಬೇಕಾಗಿದೆ. ಆ ಬಳಸುವಿಕೆಗೆ ನೀವು ತಯಾರಾಗಬೇಕಿದೆ.  ನಿಮ್ಮನ್ನು ಪೋಷಕರು ಮತ್ತು ಶಿಕ್ಷಕರು ಸೇರಿ ಅದಕ್ಕೆ ತಯಾರುಗೊಳಿಸುತ್ತಿದ್ದಾರೆ.  ಅದಕ್ಕಾಗಿ ನೀವು ಅವರೊಡನೆ ಸ್ಪಂದಿಸುತ್ತಾ , ಉತ್ತಮವಾಗಿ ಕಲಿತು ಉತ್ತಮ ಅಂಕಗಳನ್ನು ಪಡೆದು,  ಮುಂದೆ ನಮ್ಮ ಭಾರತವನ್ನು ಆಳುವವರು ನೀವಾಗಲಿರುವ ಕಾರಣ ದೇಶವನ್ನು ಉತ್ತಮವಾಗಿ ಕಟ್ಟಲು ಶ್ರಮವನ್ನು ಪಡಬೇಕು. ಅದಕ್ಕಾಗಿ ಉತ್ತಮ ಆಲೋಚನೆಗಳನ್ನು ಬೆಳೆಸಿಕೊಂಡು,  ಮುಂದೆ ಬರುವ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು,  ನಿಮ್ಮ ಪೋಷಕರಿಗೂ ಶಾಲೆಗೂ ಹಾಗೂ ಶಿಕ್ಷಕರಿಗೂ ಕೀರ್ತಿಯನ್ನು ತನ್ನಿ ಎಂದು ಹೇಳುತ್ತಾ ಚೆನ್ನಾಗಿ ಪರೀಕ್ಷೆ ಬರೆಯಿರಿ ಮಕ್ಕಳೇ..... ಆಲ್ ದ ಬೆಸ್ಟ್...
@ಹನಿಬಿಂದು@
20.02.2025

ಶುಕ್ರವಾರ, ಮಾರ್ಚ್ 14, 2025

ವಿಶ್ರಾಂತಿ -2 ನಮ್ಮ ಹಿಂದೆ ಇರುವವರು ಬೆನ್ನ ಹಿಂದೆ ಮಾತನಾಡುವರು

ನಮ್ಮ ಪರಿಚಯ ಇರಲಿ, ಇಲ್ಲದೆ ಇರಲಿ, ಭಾರತದಲ್ಲಿ ಎಲ್ಲರನ್ನೂ ಕೆಳಗಿನ ದೃಷ್ಟಿಯಲ್ಲಿ ನೋಡುತ್ತಾ, ಅಣಕವಾಡಿ ನಮ್ಮ ಮಾನಸಿಕ ಶಾಂತಿ ಕದಡುವವರು ಇದ್ದೇ ಇದ್ದಾರೆ. ಅವರಿಗೆ ಬೇರೆಯವರನ್ನು ಹಗುರ ಮಾಡಿ ಮಾತನಾಡಿದಾಗ ಮಾತ್ರ ನೆಮ್ಮದಿ ಸಿಗುತ್ತದೆ ಇರಬೇಕು. ಕುಟುಂಬ, ಸಂಬಂಧದ ಒಳಗೆ ಇರುವ ಜನ ಡಿಗ್ರೇಡ್ ಮಾಡುವುದು ಸರ್ವೇ ಸಾಮಾನ್ಯ ಬಿಡಿ. ಪರಿಚಯವೇ ಇಲ್ಲದ ಕೆಲವರು ಅದಕ್ಕoತ ಹುಟ್ಟಿರುವವರೂ ಇದ್ದಾರೆ. ಅವರು ಎಷ್ಟೇ ದೊಡ್ಡ ವ್ಯಕ್ತಿತ್ವದ ಜನರನ್ನೂ ಹೀಯಾಳಿಸುವುದು ಬಿಟ್ಟಿಲ್ಲ. ಇಂತಹ ಮಾನಸಿಕ ಯೋಚನೆಗಳು ಮಾನಸಿಕ ಅಸ್ವಸ್ಥರಿಗೆ ಮಾತ್ರ ಬರುವುದೋ ಏನೋ. ಅಂಥವರನ್ನು ಅತೃಪ್ತ ಆತ್ಮಗಳು ಎನ್ನಬಹುದೇ? 
  ಭಾರತದಲ್ಲಂತೂ ಇಂತಹ ಅತೃಪ್ತ ಆತ್ಮಗಳು ಕೋಟಿ ಸಂಖ್ಯೆಯಲ್ಲಿ ಇವೆ. ಹೊನ್ನಿಗಾಗಿ, ಹೆಣ್ಣಿಗಾಗಿ, ಪ್ರೀತಿಗಾಗಿ, ಧನಕ್ಕಾಗಿ, ಚಿನ್ನಕ್ಕಾಗಿ, ಸೀರೆಗಾಗಿ, ತಿನ್ನಲಿಕ್ಕಾಗಿ, ಮಾತನಾಡಲು, ಇತರರ ಜೊತೆ ತಮ್ಮ ನೋವು ಕಕ್ಕಿಕೊಳ್ಳಲು, ಪರರನ್ನು ಹಗುರ ಮಾಡಿ ಮಾತನಾಡಲು ಇವರು ಕಾಯ್ತಾ ಇರ್ತಾರೆ. 
   ಸಾಧನೆ ಮಾಡಲು ಹೊರಟವನ ಮುಂದೆ ಗುರಿ ಇರುವಾಗ ಅಡೆತಡೆಗಳು ಸರ್ವೇ ಸಾಮಾನ್ಯ. ಅಂತಹ ಸಮಯದಲ್ಲಿ ಇವೆಲ್ಲ , ಇವರನ್ನೆಲ್ಲಾ ದಾರಿಯಲ್ಲಿ ಇರುವ ಮುಳ್ಳು ಅಂದುಕೊಂಡು ಎತ್ತಿ ಬದಿಗೆ ಬಿಸಾಕಿ ಮುನ್ನಡೆದರೆ ಮಾತ್ರ ಬದುಕಿನ ಗುರಿ ತಲುಪಲು ಸಾಧ್ಯ. ಹೀಗೆ ಮಾಡಿದರಲ್ಲ ಎಂದು ಚಿಂತೆ ಮಾಡಿ ಕುಳಿತರೆ ನಮ್ಮನ್ನು ಗುರಿಯ ಬದಲು ಇವರು ಚಿತೆಗೆ ತಳ್ಳಿ ಬಿಡುತ್ತಾರೆ. 
     ಕ್ಯಾರೆ ಮಾಡದೆ ಬದುಕಲು ರಾಜಕಾರಿಣಿ, ಸಿನೆಮಾ ನಟರು, ಸೆಲೆಬ್ರಿಟಿಗಳು ಅನ್ನಿಸಿಕೊಂಡವರು ಇವರನ್ನು ನೋಡಿ ನಾವು ಕಲಿಯಬೇಕಾದ್ದು ಬಹಳ ಇದೆ. ಜೈಲಿಗೆ ಹೋಗಿ ಬಂದರೂ, ಸಮಾಜದ ಸಾಮಾಜಿಕ ಜಾಲ ಮಾಧ್ಯಮಗಳು ತಮ್ಮ ಬಗ್ಗೆ ಏನು ಬಿತ್ತರಿಸಿದರೂ, ಪತ್ರಿಕೆಗಳು ಏನೇ ಬರೆದುಕೊಂಡರೂ ಅವರು ಅದನ್ನು ನೋಡಿಯೂ ನೋಡದ ಹಾಗೆ ತಮ್ಮದೇ ಲೋಕದಲ್ಲಿ ಇರುತ್ತಾರೆ. ಇಂತವರ ಬಗ್ಗೆ  ಇಂತಹ ಕೇರ್ಲೆಸ್ ಬದುಕು ಇದ್ದರೆ ಮಾತ್ರ ಬದುಕಿನ ಗುರಿ ತಲುಪಬಹುದು. ನೀರನ್ನು ಫಿಲ್ಟರ್ ಮಾಡಿ ಕುಡಿಯುವ ಹಾಗೆ, ಹಣ್ಣು  ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಶುಚಿಗೊಳಿಸುವ ಹಾಗೆ ಇವರನ್ನು ಆಚೆ ಬಿಸಾಕಿ ನಮ್ಮನ್ನು ನಾವು ಶುಚಿಗೊಳಿಸಿಕೊಂಡು ಮುಂದೆ ಹೋಗಬೇಕು ಅಷ್ಟೇ. ಇದಕ್ಕೆಲ್ಲ ತಲೆಕೆಡಿಸಿಕೊಂಡರೆ ನಮ್ಮ ತಲೆಗೆ ನಾವೇ ಚಪ್ಪಡಿ ಕಲ್ಲು ಹಾಕಿಕೊಂಡ ಹಾಗೆ ಆಗುತ್ತದೆ ಅಷ್ಟೇ. 
  ಅಂದ ಹಾಗೆ ಈ ರೀತಿಯ ಜನ ನಮ್ಮ ಮುಂದೆ ಇರಲ್ಲ, ನಮ್ಮ ಬೆನ್ನ ಹಿಂದೆ ನಮ್ಮ ಬಗ್ಗೆ ಮಾತನಾಡುತ್ತಾ, ಗಾಸಿಪ್ ಹರಡುತ್ತಾ ಇರುತ್ತಾರೆ ಎನ್ನುವುದು ಸತ್ಯ. ಏಕೆಂದರೆ ಅವರು ನಮ್ಮಿಂದ ಮುಂದೆ ಹೋಗಲು ಸಾಧ್ಯ ಇಲ್ಲ ಆದ ಕಾರಣ ಹಿಂದಿನಿಂದ ಮಾತು ಅಷ್ಟೇ. ಮುಂದೆ ಸಾಗಿದವ, ಸಾಗಬೇಕು ಎಂಬ ಹಠ ಇದ್ದವ ಪರರ ಬಗ್ಗೆ ಆಲೋಚನೆ ಮಾಡದೆ ತನ್ನ ದಾರಿಯಲ್ಲೇ ಮುನ್ನಡೆಯುತ್ತಾ ಮತ್ತೇನೋ ಹೊಸ ಸಾಧನೆಗೆ ಅಡಿ ಇಟ್ಟಿರುತ್ತಾನೆ, ಅಷ್ಟೇ!
  ನಾವು ಸಾಧಕರಾಗಬೇಕೋ, ಇತರರ ಸಾಧನೆಯ  ಹಿಂದೆ ನಿಂತು ಅವರ ಪ್ರೇರಕರಾಗಬೇಕೋ, ಅಥವಾ ಅವರ ಬೆನ್ನ ಹಿಂದೆ ನಿಂತು ಏನೂ ಮಾಡಲು ಸಾಧ್ಯ ಆಗದೆ ಬೊಗಳುವ ನಾಯಿಗಳಾಗಬೇಕೋ ಅದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಬೇಕಾದವರು ನಾವೇ. ನಮ್ಮ ಬದುಕು ನಮ್ಮ ಕೈಯಲ್ಲಿದೆ.  ಒಳ್ಳೆಯದು ಕೆಟ್ಟದು ಎರಡೂ ನಮ್ಮ ಆಲೋಚನೆ , ಕಾರ್ಯ ಮತ್ತು ನಮ್ಮ ನಾಲಗೆಯಲ್ಲಿ ಇವೆ. ಬಳಸಿಕೊಳ್ಳುವವರು, ಬೆಳೆಸುವವರು, ಕುಲಗೆಡಿಸುವವರು ಪರರಲ್ಲ, ನಾವೇ. ನಮ್ಮ ಬದುಕಿನ ಸೂತ್ರ ಅಪ್ಪ ಮಾಡಿಟ್ಟ ಆಸ್ತಿಯಲ್ಲಿ ಅಲ್ಲ, ನಮ್ಮ ದುಡಿಮೆಯಲ್ಲಿ ಸಿಗುವ ಖುಷಿಯಲ್ಲಿ ಇದೆ ಅಲ್ಲವೇ? ನೀವೇನಂತೀರಿ?
ಹನಿ ಬಿಂದು 
04.03.2025

ಸೋಮವಾರ, ಅಕ್ಟೋಬರ್ 14, 2024

ಲೇಖನ

ಪರಿಸರ ಉಳಿಸುವಲ್ಲಿ ನಮ್ಮ ನಂಬಿಕೆಗಳ ಮಹತ್ವ

      ನಮ್ಮ ಪರಿಸರದ ಉಳಿವು ನಮ್ಮ ಕೈಲೇ ಇದೆ ಎಂಬುದನ್ನು ನಾವು ತಲೆ ತಲಾಂತರಗಳಿಂದ ಅರಿತು, ನಮ್ಮ ಹಿರಿಯರು ಆಚರಣೆಗೆ ತಂದ ಹಲವಾರು ಆಚರಣೆಗಳು, ಪೂಜೆಗಳು, ಹಬ್ಬ ಹರಿದಿನಗಳು ಎಲ್ಲವೂ ಕೂಡ ಪರಿಸರದ ಉಳಿಸುವಿಕೆಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವೇ ಆಗಿದೆ. ಪುರಾಣ ಕಾಲದಿಂದಲೂ ಪಂಚ ಭೂತಗಳೇ ನಮ್ಮ ಆರಾಧ್ಯ ದೇವರು. ನೆಲ, ಜಲ, ವಾಯು, ಅಗ್ನಿ. ಆಕಾಶ ಇವುಗಳನ್ನು ನಂಬಿದವರ ಬದುಕು ಹಾಳಾಗದು ಎಂಬ ನಂಬಿಕೆ ನಮ್ಮ ಪೂರ್ವಜರದ್ದು. ಅವುಗಳು ನಮ್ಮ ಆರೋಗ್ಯಕ್ಕೂ, ಬದುಕಿನ ಉದ್ಧಾರಕ್ಕೂ ಹೇಗೆ ಸಹಕಾರಿ ಎಂಬುದನ್ನು ನಮ್ಮ ತಿಳುವಳಿಕೆಗೆ ಅನುಗುಣವಾಗಿ ಸ್ವಲ್ಪ ನೋಡೋಣ. 
  ಬೆಳಗ್ಗೆದ್ದು ದೇವರಿಗೆ ಅರ್ಪಿಸಲು ಎಂದು ಹೂ ಕೊಯ್ಯುವ ಮತ್ತು ಅದನ್ನು ದೇವರಿಗೆ (ದೇವರ ಫೋಟೋ ಅಥವಾ ಮೂರ್ತಿಗೆ) ಒಪ್ಪ ಓರಣವಾಗಿ ಜೋಡಿಸಿ ಇಡುವ ಅಥವಾ ಮಾಲೆ ಕಟ್ಟಿ ಮೂಡಿಸುವ ಪದ್ಧತಿ ನಮ್ಮಲ್ಲಿ ಇದೆ. ಕರೋನ ಸಮಯದಲ್ಲಿ ನಿತ್ಯ ಹೂ, ಹಸಿರಿನ ಮಧ್ಯೆ ಕಳೆದ ಹಲವಾರು ಜನರ ಆರೋಗ್ಯ, ಕಣ್ಣಿನ ದೃಷ್ಟಿ ಉತ್ತಮವಾದ ಹಲವಾರು ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಹೂವನ್ನು ಕೊಯ್ದು ದೇವರ ಎದುರು ಮುಡಿಸಬೇಕಾದರೆ ಮನೆಯ ಎದುರು ಬಣ್ಣ ಬಣ್ಣದ ಹೂವಿನ ಗಿಡಗಳನ್ನು ನೆಟ್ಟು. ಅವುಗಳನ್ನು ತಾಳ್ಮೆಯಿಂದ ಬೆಳೆಸಿ, ನೀರು ಗೊಬ್ಬರ ಹಾಕಿ ಉತ್ತಮ ಆರೈಕೆ ಮಾಡಿ ನೋಡಿಕೊಂಡರೆ ಮಾತ್ರ ಸಾಧ್ಯ. ಇಲ್ಲಿ ನಮ್ಮ ತಾಳ್ಮೆ, ಆರೋಗ್ಯ, ನೆಮ್ಮದಿ. ಸಂತಸ ಹೆಚ್ಚುತ್ತದೆ. ಧನಾತ್ಮಕ ಚಿಂತನೆ ಅರಳುತ್ತದೆ. ರೋಗಗಳು ಕಡಿಮೆ ಆಗುತ್ತವೆ ಅಲ್ಲವೇ? ಹಾಗೆಯೇ ನಾವೇ ನೆಟ್ಟ ನಮ್ಮ ಮನೆ ಎದುರಿನ ಗಿಡದಲ್ಲಿ ಬಣ್ಣ ಬಣ್ಣದ ಹೂವುಗಳು ಅರಳುವಾಗ ನಮಗೆ ಆಗುವ ಖುಷಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಅಲ್ಲವೇ? ಇನ್ನು ನಿತ್ಯ ಹೂವನ್ನು ಕೊಯ್ಯಲು ಗಿಡದ ಬಳಿಗೆ ಹೋದಾಗ ಗಿಡಕ್ಕೆ ಏನಾದ್ರೂ ತೊಂದರೆ ಆದರೆ ತಿಳಿಯುತ್ತದೆ, ಹಸಿರು ನೋಡಿ ಕಣ್ಣು, ಹೃದಯ ಅರಳುತ್ತವೆ. ನಮ್ಮ ದೇಹ ಪ್ರಫುಲ್ಲವಾಗುತ್ತದೆ. ಆರೋಗ್ಯ ತಂತಾನೇ ವೃದ್ಧಿ ಆಗುತ್ತದೆ. ಅದನ್ನು ಕೊಯ್ದು ತಂದು ದೇವರಿಗೆ ಅಂದವಾಗಿ ಕಟ್ಟುವಾಗ 
  ಹಾಗೆಯೇ ಬೆಳಗ್ಗೆದ್ದು ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ನೀರು ಹಾಕಿದರೆ ಸಂಜೆ ಅಲ್ಲಿ ದೀಪವಿಟ್ಟು ನಮಸ್ಕಾರ ಮಾಡುವ ಪರಿಪಾಠ ನಮ್ಮಲ್ಲಿದೆ. ತುಳಸಿ ಗಿಡ ಎಲ್ಲಾ ಗಿಡಗಳಿಗಿಂತ ಹೆಚ್ಚು ಆಮ್ಲಜನಕ ಹೊರಬಿಟ್ಟು ವಾತಾವರಣವನ್ನು ಶುದ್ಧಿಗೊಳಿಸುತ್ತದೆ ಅಲ್ಲದೆ ಅದರ ಎಲೆಯಲ್ಲಿ ರೋಗ ನಿವಾರಕ ಗುಣಗಳಿವೆ. ಅದರ ಸುತ್ತ ಸುತ್ತುವುದರಿಂದ ಒಳ್ಳೆಯ ಗಾಳಿ ನಮಗೆ ಸಿಕ್ಕಿ, ಆರೋಗ್ಯದ ಪರಿಸ್ಥಿತಿಯೂ ಉತ್ತಮವಾಗುತ್ತದೆ. ಸಂಜೆ ದೀಪ ಬೆಳಗುವುದು ಕತ್ತಲು ಕವಿಯುವ ಸಮಯದಲ್ಲಿ ದಾರಿ ಹೋಕರಿಗೆ ರಸ್ತೆ ಕಾಣಲಿ ಎಂಬುದು ಹಿಂದಿನವರ ಕಲ್ಪನೆ ಆಗಿತ್ತು. ಆಗಿನ ಕಾಲದಲ್ಲಿ ಬೀದಿ ದೀಪಗಳು ಇಲ್ಲದೆ ಇದ್ದಾಗ ತುಳಸಿ ದೀಪ ನೋಡಿ ಅಲ್ಲೊಂದು ಮನೆ ಇದೆ ಎಂದು ರಾತ್ರಿ ಬಂದ ಜನಕ್ಕೆ ತಿಳಿಯುತ್ತಿತ್ತು. ಇದು ಹಲವರಿಗೆ ಉಪಯೋಗ ಆಗುತ್ತಿತ್ತು. ಅಲ್ಲದೆ ಎಳ್ಳೆಣ್ಣೆ ದೀಪ ಉರಿಸಿದರೆ ಉಪಯುಕ್ತ ಎಂದು ಹಿರಿಯರು ಹೇಳುತ್ತಾರೆ. 
  ಇನ್ನು ನಾಗಬನಗಳೂ ಇಲ್ಲಿ ಸೇರಿವೆ. ಒಂದಷ್ಟು ಮರಗಳ ರಾಶಿ ಒಂದೆಡೆ ಸೇರಿ ನಾಗಬನ ನಿರ್ಮಾಣ ಆಗುತ್ತದೆ. ಅವುಗಳ ಬುಡದಲ್ಲಿ ನಾಗನ ಕಲ್ಲು. ಅಲ್ಲಿಗೆ ಯಾರೂ ಹೋಗುವ ಹಾಗಿಲ್ಲ. ಮಡಿ ಮೈಲಿಗೆ ಸಲ್ಲದು. ಅಲ್ಲಿ  ಹೆಂಗಸರು, ಮಕ್ಕಳು ಹೋಗಬಾರದು, ಉಗಿಯುವುದು, ಮಲ ಮೂತ್ರ ವಿಸರ್ನೆಗೆ ಅವಕಾಶ ಇಲ್ಲ. ಸುತ್ತ ನೆರಳು ಇರುವಷ್ಟು ದಟ್ಟ ಕಾಡು ಇರಬೇಕು. ಇದೆಲ್ಲವೂ ಪರಿಸರದ ಉಳಿವಿಗಾಗಿ. ಅಲ್ಲಿ ಬದುಕುವ ವಿಷ ಜಂತುಗಳ ಬದುಕಿನ ರಕ್ಷಣೆಗಾಗಿ. ಪರಿಸರದ ಸರಪಣಿಯಲ್ಲಿ ಅವುಗಳೂ ಕೂಡಾ ಉನ್ನತ ಪಾತ್ರ ವಹಿಸುವ ಕಾರಣ ಅದಕ್ಕಾಗಿ ಒಂದಷ್ಟು ಸ್ಥಳದ ಮೀಸಲು. ಜನ ದೇವರ ಹೆಸರು ಹೇಳಿದರೆ ಮಾತ್ರ ಹೆದರುತ್ತಾರೆ. ಅದಕ್ಕಾಗಿ ನಾಗನ ಹೆಸರು ಕೊಟ್ಟರು. ಕೆಲವೆಡೆ ಕಲೆ ಕಾರ್ಣಿಕ ಕಂಡದ್ದು ಕೂಡಾ ಇದೆ. ಹಾಗಾಗಿ ಜನ ಈಗಲೂ ನಂಬುತ್ತಾರೆ. ಪರಿಸರ ಉಳಿಸುವ ಹಿರಿಯರ ಈ ಕಾರ್ಯ ಶ್ಲಾಘನೀಯ ಅಲ್ಲವೇ?
  ಇನ್ನು ದ್ವಾರ ಪೂಜೆ. ಬಾಗಿಲಿನ ದ್ವಾರಕ್ಕೆ ಅರಶಿನ ಕುಂಕುಮ ಇಡುವುದು ಯಾವುದೇ ಕ್ರಿಮಿಗಳು ಹಾಗೂ ವಿಷ ಜಂತುಗಳು ಮನೆಯ ಒಳಗೆ ಬಾರದೆ ಇರಲಿ ಎಂಬ ಕಾರಣಕ್ಕೆ. ಅರಶಿನ ಕುಂಕುಮ ಅದನ್ನು ತಡೆಯುತ್ತದೆ. ಹೂವು ತಂಪು ಹಾಗೂ ಅಂದ. ನೀರು ಹಾಕಿ ಶುದ್ಧೀಕರಿಸಿ, ರಂಗೋಲಿ ಬಿಡಿಸುವುದು ಹೆಣ್ಣಿನ ಕಲಾ ಪ್ರತಿಭೆಗೆ ಹಿಡಿದ ಕೈಗನ್ನಡಿ. ಕಲೆಯ ಅನಾವರಣ. ಅದನ್ನು ಭಕ್ತಿಪೂರ್ವಕವಾಗಿ ಮಾಡುವುದು ಧನಾತ್ಮಕ ಶಕ್ತಿಯ, ಆಲೋಚನೆಗಳ ಸಂಚಲನ. 
ಇವೆಲ್ಲಾ ಉದಾತ್ತ ವೈಜ್ಞಾನಿಕ ಕಾರಣಗಳು ಇಲ್ಲಿ ಪ್ರತಿ ಆಚರಣೆಯಲ್ಲೂ ಕಂಡು ಬರುತ್ತವೆ. ಜನ ತಮ್ಮ ವಿವಿಧ ಪೂಜೆ, ಆಚರಣೆಗಳು, ಅದರ ಜೊತೆಗಿನ ಹಲವಾರು ದೈವಿಕ ನಂಬಿಕೆಗಳ ನೆಲೆಗಟ್ಟು ಪ್ರಕೃತಿಯ ಉಳಿವಿನ ಸಂಕೇತವೂ ಆಗಿತ್ತು. ಜನ ಆ ರೀತಿಯಾಗಿ ನೇಸರ ಉಳಿಸುತ್ತಾ ಪರರಿಗೂ, ಪರ ಜೀವ ಜಂತುಗಳಿಗೂ ಸರ್ವೇ ಜನಾಃ ಸುಖಿನೋ ಭವಂತು ಎಂಬ ಮಾತಿನಂತೆ ತಾವು ಬದುಕಿ ಇತರ ಜೀವಿಗಳಿಗೂ ಬದುಕಲು ಬಿಡುತ್ತಿದ್ದರು. ಹಸಿರನ್ನು ಉಳಿಸಿ ಆಹಾರ ಸರಪಣಿ, ಜಲಚಕ್ರ, ಪರಿಸರ ಸರಪಣಿಯನ್ನು ಕೂಡಾ ಉಳಿಸಿ ಬೆಳೆಸುತ್ತಿದ್ದರು. ಇಂದು ನಾವು ರಾಸಾಯನಿಕ ಅರಶಿನ, ಕುಂಕುಮ, ಬಣ್ಣದ ಪುಡಿಗಳನ್ನು ಬಳಸದೆ ಇವುಗಳನ್ನೆಲ್ಲ ಉಳಿಸುವ ಕೆಲಸ ಮಾಡಬೇಕಿದೆ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
11.10.2024

ಮಂಗಳವಾರ, ಆಗಸ್ಟ್ 6, 2024

ಒಂಟಿತನ

ತೀರಾ ಒಂಟಿತನ ಕಾಡುವ ಹಲವಾರು ಕ್ಷಣಗಳು ಬದುಕಿನಲ್ಲಿ ಎಲ್ಲರಿಗೂ ಬರಬಹುದು. ತುಂಬಾ ದೊಡ್ಡ ಕುಟುಂಬದಲ್ಲಿ ಹಲವಾರು ಜನರ ಜೊತೆ ಮಾತುಕತೆಯಲ್ಲಿ ಸದಾ ಇದ್ದರೂ, ನೂರಾರು ಜನ ಸುತ್ತಮುತ್ತ ಇರುವ ಹಾಸ್ಟೆಲ್ ನಲ್ಲಿ ಇದ್ದರೂ, ಪೂರ್ತಿ ತುಂಬಿದ ಬಸ್ಸಿನೊಳಗೆ ಇದ್ದರೂ ಒಂಟಿತನ ಕಾಡದೇ ಇರದು. ಅಂತೆಯೇ ಆರುನೂರು ಕೋಟಿ ಜನಸಂಖ್ಯೆ ಇರುವ ಈ ಭೂಮಿಯ ಮೇಲೂ ಒಂಟಿತನ ಕಾಡಿಯೇ ಕಾಡುವುದು ಸಹಜ. 
     ಒಂಟಿತನಕ್ಕೆ ಕಾರಣಗಳು ಇಲ್ಲದೇ ಇಲ್ಲ. ತನ್ನ ಹಾಗೆಯೇ ಯೋಚಿಸದ ವ್ಯಕ್ತಿ ತನ್ನೊಡನೆ ಇಲ್ಲದೆ ಇರುವುದು, ತನ್ನ ನೋವನ್ನು, ಅಳುವನ್ನು, ಸಂತಸವನ್ನು, ದುಃಖವನ್ನು, ಪ್ರೀತಿಯನ್ನು ಯಾರಲ್ಲೂ ಹಂಚಿಕೊಳ್ಳಲು ಸಾಧ್ಯವಾಗದೇ ಇರುವಾಗೆಲ್ಲ ""ಎಲ್ಲವನ್ನೂ ಹೇಳಿ ಕೊಳ್ಳಲು, ಭುಜದ ಮೇಲೊರಗಲು ತನಗಾಗಿ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ಇರಬೇಕಿತ್ತು"  ಅನ್ನಿಸಿದಾಗೆಲ್ಲ ಒಂಟಿತನ ಕಾಡುತ್ತದೆ. ನನ್ನ ಕಣ್ಣೀರ ಒರೆಸುವ ಕೈಗಳು ಬೇಕು, ಹಾಯಾಗಿ ಮಲಗಿ ನನ್ನ ನೋವನ್ನು ಹೊರ ಹಾಕಲು , ತೊಡೆಯ ಮೇಲೆ ಹಿತವಾಗಿ ಮಲಗಿ ನೋವು ಹಗುರಾಗಿಸಲು ನನ್ನದೇ ಅಂತ ಒಬ್ಬರು ಜೀವದ ಗೆಳೆಯ/ಗೆಳತಿ ಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇದೆ. ಬಾಳ ಸಂಗಾತಿ ಕೆಲವೊಮ್ಮೆ ನೂರರಲ್ಲಿ ಎಂಬತ್ತು ಭಾಗ ಈ ರೀತಿ ಅರ್ಥ ನಮ್ಮನ್ನು ಮಾಡಿಕೊಂಡವರೆ  ಅಲ್ಲ, ಅರ್ಥ ಮಾಡಿಕೊಂಡು ತಿಳಿದು ಬದುಕುವರಿದ್ದಿದ್ದರೆ ಇಷ್ಟೊಂದು ಕೋರ್ಟು ಕೇಸುಗಳು, ಡೈವೋರ್ಸ್ಗಳು, ಸೆಪರೇಶನ್ ಗಳು ಆಗಲು ಹೇಗೆ ತಾನೇ ಸಾಧ್ಯ ಅಲ್ಲವೇ? 
     ಮಹಿಳೆ ಪುರುಷನನ್ನು ಅವಲಂಬಿಸಿದ್ದರೆ, ಆ ಪುರುಷ ಇನ್ಯಾರೋ ಬೇರೆ ಮಹಿಳೆಯನ್ನು ಅವಲಂಬಿಸಿ ಇದ್ದಾಗ ಕುಟುಂಬದಲ್ಲಿ ಜಗಳ, ನೋವು, ಗಲಾಟೆ ಬರುತ್ತದೆ. ಅದು ಹುಡುಗನ ಅಮ್ಮ, ಅಕ್ಕ, ತಂಗಿ, ಗೆಳತಿ, ಗರ್ಲ್ ಫ್ರೆಂಡ್, ಹಳೆ ಲವರ್, ಪ್ರೇಯಸಿ, ಆಂಟಿ, ಅತ್ತೆ ಅಜ್ಜಿ, ಪಕ್ಕದ ಮನೆಯ ಮಹಿಳೆ , ಕ್ಲಾಸ್ಮೇಟ್,  ಯಾರಾದರೂ ಆಗಿರಬಹುದು.  ಮಹಿಳೆಯರೂ ಅಷ್ಟೇ, ಗಂಡನನ್ನು ಹೊರತುಪಡಿಸಿ ಇತರರ ಬಳಿ ಮಾತನಾಡಿಸಿದರೆ  ಸಮಾಜದಲ್ಲಿ ಅದು ತಪ್ಪೇ.... ಕಾರಣ? ಅವನು/ಅವಳು ಯಾರೆಂದು ಗೊತ್ತಿಲ್ಲ, ಅವರಿಬ್ಬರ ನಡುವೆ ಪರರು ಬಂದು ಕಡ್ಡಿ ಅಲ್ಲಾಡಿಸಲು ಕುಟುಂಬದ ಜನ ಬಿಡಬಾರದು. 
    ಒಂಟಿತನ ಮರ, ರಾಣಿ, ಪ್ರಾಣಿ,ಪಕ್ಷಿ, ಸಣ್ಣ ಸಾಕು ಪ್ರಾಣಿಗಳ ಕುರಿತಾದ ಹಲವು ಕಥೆಗಳಕೇಳಬೇಕು..
ಮುಂದುವರೆಯುವುದು....
@ಹನಿಬಿಂದು@

ಭಾನುವಾರ, ಅಕ್ಟೋಬರ್ 22, 2023

ಕನ್ನಡ ಭಾಷಾ ಸಾಹಿತ್ಯಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆ

ಕನ್ನಡ ಭಾಷೆಯ ಸಾಹಿತ್ಯಕ್ಕೆ ಜಾಲತಾಣಗಳ ಕೊಡುಗೆ
   ಇಂದಿನ ದಿನಗಳಲ್ಲಿ ಹೆಚ್ಚಿನವರು ಹೇಳೋದಿದೆ. ಏನಂತ ಹೇಳಿದ್ರೆ ಇಂದಿನ ದಿನದಲ್ಲಿ ಪುಸ್ತಕಗಳ ಓದು ಕಡಿಮೆಯಾಗಿದೆ ಹಾಗೂ ಮೊಬೈಲ್ ಬಳಕೆ ಜಾಸ್ತಿಯಾಗಿದೆ. ಜನರ ಜ್ಞಾನಮಟ್ಟ ಕಡಿಮೆಯಾಗಿದೆ ಮತ್ತು ಪುಸ್ತಕ ಓದದೇ ಇರುವುದರಿಂದ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ ಮತ್ತು ಜ್ಞಾನದ ಮಟ್ಟ ಕಡಿಮೆಯಾಗಿದೆ. ನೇರವಾಗಿ ಬೆಳಕು ಬಿದ್ದಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಓದು ಉತ್ತಮವಲ್ಲ ಬದಲಾಗಿ ಕಣ್ಣಿಗೆ ಯಾವುದಾದರೂ ಒಂದು ವಸ್ತುವಿನ ಮೇಲೆ ಬೆಳಕು ಬಿದ್ದು ಅದನ್ನು ಓದಿದರೆ ಅದು ಬಹಳ ಕಾಲ ನೆನಪಲ್ಲಿ ಉಳಿಯುತ್ತದೆ ಎಂಬ ವೈಜ್ಞಾನಿಕ ತತ್ವವು ಮೊಬೈಲಿಗೂ ಅನ್ವಯಿಸುತ್ತದೆ ಎಂದು ಇನ್ನೂ ಕೆಲವರು ಹೇಳುತ್ತಾರೆ. ಅದರ ಜೊತೆ ಜೊತೆಗೆ ಲೇಖಕರು ಹಿಂದಿನ ಕಾಲದಲ್ಲಿ ಪುಸ್ತಕವನ್ನು ಆನ್ಲೈನಲ್ಲಿ ಬಿಡುಗಡೆ ಮಾಡುತ್ತಾ ಇರುವವರೂ ಇದ್ದಾರೆ. 
  ಹೇಳಿ ಕೇಳಿ ಎಲೆಕ್ಟ್ರಾನಿಕ್ ಯುಗವಿದು. ಲೈಬ್ರರಿಗೆ ಹೋಗಿ ಕುಳಿತುಕೊಳ್ಳಲು ಯಾರಿಗೆ ಸಮಯವಿದೆ ಹೇಳಿ? ಹಾಗೆಯೇ ಪುಸ್ತಕದ ಕಟ್ಟನ್ನು ಎದುರಿಗಿಟ್ಟುಕೊಂಡು ಓದುವಂತವರು ಎಂದು ಕಡಿಮೆ ಎಂದು ಹೇಳಬೇಕು. ಆದರೆ ಮೊಬೈಲನ್ನು ಕೈಯಲ್ಲಿಟ್ಟುಕೊಂಡು ಒತ್ತುತ್ತಾ ಗಂಟೆಗಟ್ಟಲೆ ಅದರಲ್ಲೇ ಕಳೆಯುವವರು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ನಾವೆಂದು ಕಾಣುತ್ತೇವೆ. ಆದಕಾರಣ ಓದುವುದು ಕೂಡ ಎಂದು ಹೆಚ್ಚಾಗಿ ಮೊಬೈಲ್ ಗಳಲ್ಲಿ ನಡೆಯುತ್ತದೆ ಅಥವಾ ಕಂಪ್ಯೂಟರ್ ಮೂಲಕ ನಡೆಯುತ್ತದೆ. ಹೀಗಿರುವಾಗ ಕನ್ನಡ ಸಾಹಿತ್ಯಕ್ಕೂ ಕೂಡ ಜಾಲತಾಣಗಳ ಕೊಡುಗೆ ಬಹಳಷ್ಟು ಇದೆ ಎಂದೇ ಹೇಳಬಹುದು. 
  ಹಿಂದಿನ ಕಾಲದಲ್ಲಿ ಕವಿಗಳು ಅದೆಷ್ಟೇ ಬರೆದರೂ ಕೂಡ ಅದನ್ನು ಪ್ರಚಾರ ಮಾಡಲು ಪುಸ್ತಕಗಳೇ ಬೇಕಿತ್ತು. ಅದಕ್ಕೆ ಲೈಬ್ರರಿಗಳು ಹುಟ್ಟಿಕೊಂಡವು. ಸಣ್ಣ ಸಣ್ಣ ಗ್ರಾಮಗಳಲ್ಲಿ ಗ್ರಾಮಾಂತರ ಲೈಬ್ರರಿಗಳು ಹಾಗೆಯೇ ತಾಲೂಕು ಕೇಂದ್ರಗಳಲ್ಲಿ ದೊಡ್ಡದಾದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಲೈಬ್ರರಿಗಳು ತೆರೆದು ಕೊಂಡವು. ಆದರೆ ಇಂದಿನ ದಿನಗಳಲ್ಲಿ ಈ ಲೈಬ್ರರಿಗಳು ಹೆಚ್ಚು ಕೆಲಸ ಮಾಡುತ್ತಿವೆ ಅನ್ನಿಸುತ್ತಿದೆ. 
ಹೆಚ್ಚಿನ ಜನ ಓದಲಿ ಎಂಬ ಆಸೆಯಿಂದ ಚಿತ್ರವಿಚಿತ್ರವಾಗಿ ಬರೆಯುವುದು, ಅತಿ ಹೆಚ್ಚು ಜನರಿಂದ ಲೈಕುಗಳನ್ನು ಗಿಟ್ಟಿಸಿಕೊಳ್ಳಲು ಅಶ್ಲೀಲವಾಗಿ ಬರೆಯುವುದು, ಹುಡುಗಿಯರ ಬಗ್ಗೆ ಹೆಚ್ಚಾಗಿ ಬರೆದು ಜನಮನ್ನಣೆ ಪಡೆದುಕೊಳ್ಳುವುದು, ತನ್ನ ಪ್ರೇಮಿಗೆ ಅಥವಾ ಪ್ರಿಯಕರಣಿಗೆ ಹೇಳಲು ಸಾಧ್ಯವಾಗದನ್ನು ಕವನದ ಮೂಲಕ ಅಥವಾ ಕಥೆಗಳ ಮೂಲಕ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು, ತನ್ನದೇ ಕಥೆಯನ್ನು ಸ್ವಲ್ಪ ಹೆಸರು ಬದಲಾಯಿಸಿ ಬೇರೆ ತರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಇದೆಲ್ಲವನ್ನು ಕೂಡ ನಾವು ಇಂದು ಕಾಣತ್ತೇವೆ. ಆದರೂ ಕೂಡ ಸಾಮಾಜಿಕ ಜಾಲತಾಣಗಳು ಕನ್ನಡ ಸಾಹಿತ್ಯಕ್ಕೆ ಏನನ್ನು ಕೊಡುಗೆಯಾಗಿ ಕೊಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಲವಾರು ವಾಟ್ಸಪ್ ಗುಂಪುಗಳಲ್ಲಿ ಮತ್ತು ಫೇಸ್ಬುಕ್ ಗುಂಪುಗಳಲ್ಲಿ ನಾನು ಪ್ರತಿನಿತ್ಯ ಕನ್ನಡ ಬರವಣಿಗೆಗಳನ್ನು ಕಾಣುತ್ತೇನೆ. ಬೇರೆ ಬೇರೆ ರೀತಿಯ ಬರಹಗಳು ಪ್ರತಿನಿತ್ಯವೂ ಜಾಲತಾಣಗಳಲ್ಲಿ ಸಿಗುತ್ತವೆ. ಒಂದೇ ರೀತಿ ಕವನವನ್ನು ಮಾತ್ರ ಎಂದು ಕವಿಗಳು ಬರೆಯುತ್ತಿಲ್ಲ. ಬದಲಾಗಿ ಜಾಲತಾಣಗಳ ಸಹಾಯದಿಂದ ಹಲವಾರು ಹಿರಿಯ ಕವಿಗಳ ಜೊತೆಗೆ ಒಡನಾಟವನ್ನು ಇಟ್ಟುಕೊಂಡು ಅವರ ಜೊತೆಯಲ್ಲಿ ಕೇಳಿ ಕಲಿತು ಗಜಲ್, ಭಾವಗೀತೆ, ಕವನ, ಕವಿತೆ , ಲಾವಣಿ , ಚುಟುಕು , ಹಾಯ್ಕು ಇದೇ ಮುಂತಾದ ಹಲವರು ವಿವಿಧ ಪ್ರಕಾರಗಳಲ್ಲಿ ಬರೆಯುವುದು ಹೇಗೆ ಎಂದು ಒಬ್ಬರಿಗೊಬ್ಬರು ಸಲಹೆಗಳನ್ನು ನೀಡುತ್ತಾ, ಒಬ್ಬರನ್ನು ಮತ್ತೊಬ್ಬರು ತಿದ್ದುತ್ತಾ,  ಪ್ರತಿ ಕವಿಯ ವಿಮರ್ಶೆಯನ್ನು ಮಾಡುತ್ತಾ ಕಲಿಕೆ ಮತ್ತಷ್ಟು ಮಗದಷ್ಟು ಸಾಗಿದೆ. ಬರವಣಿಗೆಯನ್ನು ತಿಳಿದುಕೊಂಡವರು ಮತ್ತಷ್ಟು ಮಗದಷ್ಟು ಓದಿ ಇನ್ನೂ ಒಂದಷ್ಟು ಬರೆದು ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಇತ್ತೀಚೆಗಂತೂ ವರ್ಷಕ್ಕೆ ಹಲವಾರು ಕವನಗಳ ಕವಿತೆಗಳ ಪುಸ್ತಕಗಳು ಬಿಡುಗಡೆಯಾಗುವುದನ್ನು ನಾವು ನೋಡುತ್ತಿದ್ದೇವೆ. 
  ಸಹಜವಾಗಿಯೂ ಉಪಯೋಗ ಮತ್ತು ದುರುಪಯೋಗ ಎಲ್ಲಾ ಕಡೆ ಕಂಡು ಬರುತ್ತದೆ ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಒಬ್ಬರ ಕವನಗಳನ್ನು ಮತ್ತು ಬರಹಗಳನ್ನು ಕದ್ದು ಮತ್ತೊಬ್ಬರು ತಮ್ಮ ಬ್ಲಾಗ್ ಗಳಲ್ಲಿ ಹಾಕಿಕೊಳ್ಳುವುದು, ಹಿರಿಯ ಕವಿಗಳ ಕವನದ ಸಾಲುಗಳನ್ನು ಕದ್ದು ತಮ್ಮ ಕವನದಲ್ಲಿ ಅಳವಡಿಸಿಕೊಳ್ಳುವುದು, ಬೇರೆ ಬೇರೆ ಭಾಷೆಯ ಕವಿಗಳ ಕವನದ ಸಾಲುಗಳನ್ನು ಭಾಷಾಂತರಿಸಿ ಅವರ ಗಮನಕ್ಕೆ ತರದೆ ತಮ್ಮ ಕವನಗಳ ಮಧ್ಯದಲ್ಲಿ ಸೇರಿಸಿಕೊಳ್ಳುವುದು, ನಿಜವಾದ ಕವನ ಬರೆದವರ ಹೆಸರನ್ನು ತೆಗೆದು ತನ್ನ ಹೆಸರನ್ನು ಸೇರಿಸಿ ಪೋಸ್ಟ್ ಮಾಡುವುದು ಇದೆಲ್ಲ ನಡೆದೇ ಇದೆ. ಆದರೆ ನಿಜವಾದ ಬುದ್ಧಿಮತ್ತೆ ಇರುವ ಕವಿಗಳು ಎಲ್ಲಾ ಕಡೆಯೂ ಗುರುತಿಸಲ್ಪಡುತ್ತಾರೆ ಅವರು ಸಾಮಾಜಿಕ ಜಾಲತಾಣಗಳನ್ನು ಕೂಡ ಅತ್ಯುತ್ತಮವಾಗಿ ಬಳಸಲು ಕಲಿತುಕೊಂಡಿರುತ್ತಾರೆ. 
ಒಂದು ಕಡೆ ನೋಡಿದರೆ ನಮಗೆ ಪಾಸಿಟಿವ್ ಥಿಂಕಿಂಗ್ ಅಥವಾ ಧನಾತ್ಮಕ ಆಲೋಚನೆಗಳು ಉತ್ತಮ ಎಂದು ಹೇಳುವಂತೆ ಧನಾತ್ಮಕವಾಗಿ ಯೋಚನೆ ಮಾಡುವುದಾದರೆ ಹೆಚ್ಚಿನ ಕವಿಗಳನ್ನು ನಾವು ಮಾತನಾಡಿಸಲು ಸಾಧ್ಯವಾಗುವುದು ಸಾಮಾಜಿಕ ಜಾಲತಾಣಗಳ ಮೂಲಕವೇ. ಅವರ ಬರಹಗಳನ್ನು ಕೂಡ ಓದಲು ಸುಲಭವಾಗಿ ಸಿಗುವುದು ಸಾಮಾಜಿಕ ಜಾಲತಾಣಗಳ ಮೂಲಕವೇ. ಕೇವಲ ಕನ್ನಡ ಸಾಹಿತ್ಯದ ಬರಹ ಮಾತ್ರವಲ್ಲ ಸಾಹಿತ್ಯದ ಓದು ಹಾಡು ಅಭಿನಯ ಹಾಗೆಯೇ ಸಾಹಿತ್ಯದ ವಿವಿಧ ಪ್ರಕಾರಗಳ ಬಳಕೆ  ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ ಅಲ್ಲವೇ? 
ನಿಜವಾಗಿ ಓದಿ ಬರೆಯುವವನು ಮತ್ತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದಿರುವವನು ಸಾಮಾಜಿಕ ಜಾಲವಾದರೆ ಏನು ಪುಸ್ತಕವಾದರೆ ಏನು ಎಲ್ಲಾ ಕಡೆಯೂ ಓದಿಕೊಂಡು ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡು ಬರೆಯುತ್ತಾನೆ. ಕಳ್ಳ ಕವಿಗಳಿಗೆ ವಾಚನಾಲಯ ಗ್ರಂಥಾಲಯಗಳಿಂದ ಪುಸ್ತಕಗಳನ್ನು ತಂದು ಓದಿ ಅದರಿಂದಲೂ ಹಲವಾರು ಸಾಲುಗಳನ್ನು ಕದಿಯಬಹುದಲ್ಲವೇ? ಜಾನಕ್ಕೆ ಯಾವಾಗಲೂ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ . ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಜ್ಞಾನಿಯಾದವ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಜ್ಞಾನದಿಂದ ಉತ್ತಮವಾದ ಸಾಹಿತ್ಯವನ್ನು ಹೊರಗೆ ತಂದು ಅದರ ಮೂಲಕ ಹಲವಾರು ಬರಹಗಳಿಂದ ಕನ್ನಡದ ಸಾಹಿತ್ಯ ಸೇವೆಯನ್ನು ಮಾಡುತ್ತಾ ತನ್ನ ಮಾತೃಭಾಷೆಯ ಋಣವನ್ನು ತೀರಿಸಲು ಇದು ಅತ್ಯಂತ ಸುಲಭದ ವಿಧಾನವಾಗಿದೆ. 
ಎಲ್ಲೋ ಅಲ್ಲಿ ಇಲ್ಲಿ ಒಂದಷ್ಟು ಕಡೆ ಇದರ ಋಣಾತ್ಮಕತೆ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ಧನಾತ್ಮಕವಾಗಿ ಆಲೋಚಿಸುತ್ತಾ ತಮ್ಮ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುತ್ತಾ ವಾರ್ತಾ ಪತ್ರಿಕೆಗಳಿಗೆ ಈಮೇಲ್ ಮೂಲಕ ತನ್ನ ಬರಹವನ್ನು ಕಳುಹಿಸುತ್ತಾ ಹಾಗೆಯೇ ಅವುಗಳಿಂದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಂಡು ಓದುತ್ತಾ ಹೀಗೆ ಸಾಮಾಜಿಕ ಜಾಲ ತಾಣಗಳು ಕನ್ನಡದ ಸಾಹಿತ್ಯದ ಪ್ರಚಾರಕ್ಕೆ ಮತ್ತು ತಮ್ಮದೇ ಆದ ಸಾಹಿತ್ಯದ ಬಳಕೆಯನ್ನು ಹೆಚ್ಚಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನನ್ನ ಅನಿಸಿಕೆ. ನೀವೇನಂತೀರಿ?
@ಹನಿಬಿಂದು@
18.10.2023

ಭಾನುವಾರ, ನವೆಂಬರ್ 14, 2021

ಆ ದೀಪಾವಳಿಯ ನೆನಪು

ಆ ದೀಪಾವಳಿಯ ಮೆಲುಕು

                     ಎರಡು ಸಾವಿರದ ಹನ್ನೆರಡನೆಯ ಇಸವಿ. ಅಂದರೆ ಒಂಭತ್ತು ವರುಷಗಳ ಮುಂಚಿನ ಮೆಲುಕು. ಅದು ನವೆಂಬರ್ ತಿಂಗಳ ಹನ್ನೆರಡು,ಹದಿಮೂರನೇ ತಾರೀಕು. ಪ್ರತಿ ವರುಷದ ದೀಪಾವಳಿಯಂತೆ ಆ ವರುಷದ ದೀಪಾವಳಿಯಲ್ಲಿ ನಮಗೆ ಯಾವುದೇ ಖುಷಿ ಇರಲಿಲ್ಲ.ಕಾರಣ ಅಕ್ಟೋಬರ್ ಹದಿನೇಳನೇ ತಾರೀಕಿಗೆ ತಂದೆಯವರ ಅಂತಿಮ ದರ್ಶನಕ್ಕೆ ನಾವು ಅಮ್ಮನ ಮನೆಗೆ ಧಾವಿಸಿದ್ದೆವು. ಮಕ್ಕಳು ಯಾರೂ ಬಳಿಯಲ್ಲಿ ಇಲ್ಲದ ಸಮಯದಲ್ಲಿ ಅಮ್ಮ ಒಬ್ಬರೇ ಇರುವಾಗ ಅಸ್ತಮಾದಿಂದ ಬಳಲುತ್ತಿದ್ದ ಅಪ್ಪ ಮಕ್ಕಳನ್ನು ಕೇಳುತ್ತಾ ರಾತ್ರಿ ಸಮಯದಲ್ಲಿ ಕೊನೆಯುಸಿರೆಳೆದಿದ್ದರು. ಒಂದು ತಿಂಗಳಾಗುತ್ತ ಬಂದಿತ್ತು ಅಷ್ಟೆ. 

           ನನ್ನ ಅಜ್ಜಿ ಮನೆ ಬೆಳ್ತಂಗಡಿ ತಾಲೂಕಿನ ನಾರಾವಿಯ ಬಳಿಯ ಈದುವಿನಲ್ಲಿ ಇದೆ. ನಾ ಅಲ್ಲಿ ಇದ್ದೆ. ದೊಡ್ಡಮ್ಮ ಜೊತೆಗಿದ್ದರು. ಅಮ್ಮ ತಂದೆಯವರ ಅಂತಿಮ ವಿಧಿ ವಿಧಾನಗಳನ್ನು ನಡೆಸಬೇಕಾಗಿ ಇದ್ದುದರಿಂದ ನನ್ನ ಜೊತೆಗಿರಲು ಆಗಲಿಲ್ಲ. ನಾನಾಗ ಒಂಭತ್ತು ತಿಂಗಳ ಗರ್ಭಿಣಿ. ನವೆಂಬರ್ ಹದಿಮೂರನೇ ದಿನಾಂಕದಂದೇ ನನಗೆ ಹೆರಿಗೆಗೆ ಡಾಕ್ಟರ್ ದಿನಾಂಕ ಸೂಚಿಸಿದ ಕಾರಣ ಆಸ್ಪತ್ರೆಗೆ ಆ ದಿನಾಂಕದ ಮೊದಲೇ ತೆರಳಬೇಕಿತ್ತು. ಆದರೆ ನನಗೆ ಯಾವುದೇ ರೀತಿಯ ಹೊಟ್ಟೆ ನೋವು ಕಾಣಿಸಿಕೊಳ್ಳದ ಕಾರಣ  ಮೊದಲೇ ಹೋಗಿ ಆಸ್ಪತ್ರೆ ವಾಸ ಮಾಡುವುದು ಸರಿ ಕಾಣಲಿಲ್ಲ. "ಒಂದು ದಿನ ಲೇಟ್ ಆಗಲಿ ದೇವರೇ, ನವೆಂಬರ್ ಹದಿನಾಲ್ಕನೇ ತಾರೀಖಿಗೆ ಆಗಲಿ, ಮಕ್ಕಳ ದಿನಾಚರಣೆ ಹಾಗೂ ಚಾಚಾ ನೆಹರು ಅವರ ಜನ್ಮ ದಿನದಂದು ನನ್ನ ಮಗು ಹುಟ್ಟಲಿ.." ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾ ಇದ್ದೆ ನಾನು. 

           "ಹನ್ನೆರಡನೇ ತಾರೀಖಿನ ದಿನವೇ ಒಂದು ದಿನ ಮುಂಚಿತವಾಗಿ ಆಸ್ಪತ್ರೆಗೆ ಹೋಗೋಣ. ರಾತ್ರಿ ಹೆರಿಗೆ ನೋವು ಕಾಣಿಸಿದರೆ ಕಾರ್ಕಳಕ್ಕೆ ಹೋಗಲು ದೂರವಿದೆ ಮತ್ತು ಕಷ್ಟ " ಎಂದರು ದೊಡ್ಡಮ್ಮ. ನಾನೂ ತಯಾರಿಲ್ಲದೆಯೂ ತಯಾರಾಗಬೇಕಿತ್ತು. ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡೆ. 

           ಆಗ ಅಲ್ಲಿದ್ದ ನನ್ನ ಅಜ್ಜ ದೊಡ್ಡಮ್ಮನನ್ನು ತಡೆದರು. "ಹೇಗೂ ಇಷ್ಟು ದಿನ ತಡವಾಯಿತು. ಅವಳಿಗೆ ನೋವೇನೂ ಇಲ್ಲ. ಹಾಗಾಗಿ ಹಬ್ಬದ ದಿನ . ಪಾಡ್ಯದ ದಿನದ ಹಿರಿಯರಿಗೆ ಬಡಿಸಿದ ಬಳಿಕ ಊಟ ಮಾಡಿಯೇ ನಾಳೆ ಆಸ್ಪತ್ರೆಗೆ ಹೋಗಿ. ಒಂದು ದಿನ ತಡವಾದರೆ ಏನೂ ಆಗಲಿಕ್ಕಿಲ್ಲ" ಎಂದರು. ನಾನು ಸಂತಸದಿಂದ ಬೀಗಿದೆ. ದೊಡ್ಡಮ್ಮ ಅಜ್ಜನಿಗೆ ತಿರುಗಿ ಮಾತನಾಡುವುದಿಲ್ಲವಾದ್ದರಿಂದ ಹದಿಮೂರನೇ ತಾರೀಖಿನ ದಿನ ಆಸ್ಪತ್ರೆಗೆ ಹೋಗುವ ಕಾರ್ಯಕ್ರಮ ಫಿಕ್ಸ್ ಆಯಿತು. ಈ ನಡುವೆ ದೀಪ, ಪಟಾಕಿ ಎಲ್ಲಾ ಮರೆತೇ ಹೋಗಿತ್ತು!

          ಬದಲಾಗಿ ಗಂಟು ಮೂಟೆ ಕಟ್ಟುವ ಕಾರ್ಯ! ಜೀವನದಲ್ಲಿ ಮೊದಲನೇ ಭಾರಿ! ನೆಂಟರ ಮನೆಗೆ ಲಗ್ಗೇಜ್ ತುಂಬಿಸಿಕೊಂಡು ಹೋದ ಹಾಗೆ ಆಸ್ಪತ್ರೆಗೆ ಹೋಗುವುದು. ಒಂಥರಾ ಖುಷಿ! ಹೊಸ ಮಗುವಿನ ಆಗಮನದ ಕಾತುರ! ಒಂಥರಾ ಬೇಸರ, ಆಸ್ಪತ್ರೆಯಲ್ಲಿ ಹೇಗಿರುವುದೋ ಎಂದು. ಒಂಥರಾ ಕಳವಳ, ಚಿಂತೆ, ಹೆರಿಗೆ ಹೇಗಾಗುವುದೋ ಎಂದು. ನಾನು ಸ್ವಲ್ಪ ದೇಹದ ಗಾತ್ರದಲ್ಲಿ ಎತ್ತರ ಕಡಿಮೆ ಇರುವ ಕಾರಣ( ಅದಕ್ಕೆ ನನಗೇನೂ ಬೇಸರ ಇಲ್ಲ, ದೇವರು ಕೊಟ್ಟ ಸರಿಯಾದ ಅಂಗಾಂಗ ಇರುವ ದೇಹ ಪ್ರಕೃತಿಗೆ ನಾನು ಸದಾ ಋಣಿ) "ಮಗು ಉದ್ದ ಹಾಗೂ ದಪ್ಪ ಬೆಳೆದು ಮೂರೂವರೆ ಕಿಲೋ ಗ್ರಾಂ ಇರುವ ಕಾರಣ ಮಾಮೂಲಿ ಹೆರಿಗೆ ಕಷ್ಟ, ಸಿಸೇರಿಯನ್ ಆಗಬೇಕಾಗಬಹುದೇನೋ" ಎಂದು ಡಾಕ್ಟರ್ ಮೊದಲೇ ಸೂಚನೆ ನೀಡಿದ್ದರು. ಮಾಮೂಲಿ ಇಂಜೆಕ್ಷನ್ ಅಂದರೇನೇ ಭಯ ಪಟ್ಟು ಮಾರು ದೂರ ಓದುತ್ತಿದ್ದ ನಾನು ಆಪರೇಷನ್ ಗೆ ನನ್ನನ್ನು ಸಿದ್ಧಪಡಿಸಿ ಕೊಳ್ಳಬೇಕಿತ್ತು. ಅದೂ ಅಮ್ಮ ಜೊತೆಯಲ್ಲಿ ಇಲ್ಲದ ಸಮಯದಲ್ಲಿ! ಭಯ ಪಡಲಿಲ್ಲ ನಾನು! ಅಮ್ಮನ ನೋವಿನ ಮುಂದೆ ನನ್ನದೇನೂ ಅಲ್ಲ ಅನ್ನಿಸಿತು. ಧೈರ್ಯ ಮಾಡಿಕೊಂಡೆ. ಅಜ್ಜ ಹೇಳಿದ ಹಾಗೆ ದೀಪಾವಳಿ ಪಾಡ್ಯದ ದಿನದ ಗಟ್ಟಿ ಊಟ ಮುಗಿದ ಕೂಡಲೇ ನಮ್ಮನ್ನು ಕರೆದೊಯ್ಯಲು ಕಾರು ಬಂತು. 

           ದೀಪಾವಳಿಯ ಹಬ್ಬದ ಊಟ ಮಾಡಿ ಹೊಟ್ಟೆ ಮತ್ತಷ್ಟು ಭಾರವಾಗಿತ್ತು. ಆಸ್ಪತ್ರೆಯಲ್ಲಿ ಡಾಕ್ಟರ್ "ಲೇಟ್ ಮಾಡಿದ್ದು ಯಾಕೆ" ಎಂದು ಗದರಿದಾಗ ಏನೇನೋ ಸಬೂಬು ಹೇಳಿದ್ದೂ ಆಯಿತು. ಮತ್ತೆ? ಮುಂದೆ?...

           ನನಗಾಗಿ ಒಂದು ಬೆಡ್ ರೆಡಿ ಆಗಿತ್ತು. ಸ್ಪೆಷಲ್ ರೂಮ್ ಬುಕ್ ಮಾಡಿದೆವು. ಮನೆಯವರು ಯಾರಾದರೂ ಬಂದರೆ ಇರಲು ತೊಂದರೆ ಆಗಬಾರದು ಎಂಬಂತೆ. ಮಾವನ ಮನೆಗೆ ಹೋದ ಹಾಗೆ ಆಸ್ಪತ್ರೆಗೆ ಹೋಗಿ ಕುಳಿತು ಆಗಿತ್ತು! ಇನ್ನು? ಜೀವನದಲ್ಲೇ ಮೊದಲ ಬಾರಿ ಈ ಆಸ್ಪತ್ರೆ ವಾಸ! ಶುರುವಾಯಿತು ನೋಡಿ! ಪರೀಕ್ಷೆಗಳು! ಸ್ಕ್ಯಾನಿಂಗ್, ಪಟ್ಟಿ ಪರೀಕ್ಷೆ, ಮಗುವಿನ ಹಾರ್ಟ್ ಬೀಟ್ ಚೆಕ್ ಅಪ್! ಒಂದರ ಬಳಿಕ ಒಂದು! "ಛೆ..ಇವತ್ತೂ ಬರಬಾರದಿತ್ತು..." ಅನ್ನಿಸದೇ ಇರಲಿಲ್ಲ! ಇನ್ನು ಮುಂದೆ ಈ ಆಸ್ಪತ್ರೆ ವಾಸವೇ ಬೇಡ ಎಂದು ನಿರ್ಧಾರ ಮಾಡಿಯೂ ಆಯಿತು! ಹಾಗೆಯೇ ಡಾಕ್ಟರ್, ನರ್ಸ್ ಗಳ ಕಷ್ಟದ ಕೆಲಸ ನೋಡಿ "ನಮ್ಮ ಶಿಕ್ಷಕ ವೃತ್ತಿಯೇ ನೆಮ್ಮದಿ" ಅನ್ನಿಸದೇ ಇರಲಿಲ್ಲ! ಅಲ್ಲಿನ ನರಳಾಟ, ಕೂಗಾಟ, ಕಿರುಚಾಟಗಳ ನಡುವೆಯೇ ಹೊಸ ಬದುಕಿಗೆ ಜೀವ ತುಂಬುವುದರಲ್ಲಿ, ನೋವನ್ನು ಮಾಯಗೊಳಿಸಿ ಮುಖದಲ್ಲಿ ನಗು ತರಿಸುವ  ಅವರ ಕಾರ್ಯಕ್ಕೆ ನಿಜವಾಗಿಯೂ ಸಲಾಂ ಹೇಳಲೇ ಬೇಕು ಅಂತ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ತಾಳ್ಮೆಯ ಕೆಲಸದ  ಬಗ್ಗೆ ಮೆಚ್ಚುಗೆ ಎನಿಸಿತು. 

           ಎಷ್ಟೋ ಖರ್ಚು ಮಾಡಿ ಮಕ್ಕಳನ್ನು ಮೆಡಿಕಲ್ ಸೀಟಿಗೆ ಬೇರೆ ಬೇರೆ ರಾಜ್ಯಗಳಿಂದ ತಂದು ಮಣಿಪಾಲ್ ಯೂನಿವರ್ಸಿಟಿಗೆ ಸೇರಿಸುವ ಪೋಷಕರ ಬಗ್ಗೆ, ನಮ್ಮ ಉಡುಪಿ ಜಿಲ್ಲೆಯ ಬಗ್ಗೆ ಹೆಮ್ಮೆ ಕೂಡಾ ಮೂಡಿತು. ಹಾಗೇ ಮುಂದೆ ಡಾಕ್ಟರ್ ಆಗುವ ಕೊನೆಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ಅವರ ಜೊತೆಗೆ ಡ್ಯೂಟಿ ಇದ್ದ ನರ್ಸ್ ಆಗಾಗ ಬಂದು ನಮ್ಮನ್ನು ವಿಚಾರಿಸಿಕೊಂಡು ಧೈರ್ಯ ತುಂಬುತ್ತಿದ್ದರು. ಉತ್ತರ ಭಾರತದ ಆ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲೇ ಮಾತನಾಡಬೇಕು ಎಂಬ ಕಂಡೀಷನ್ ಇತ್ತು. ಅವರು ತುಳು ಮತ್ತು ಕನ್ನಡವನ್ನು ಹಿಂದಿಯ ಸ್ಟೈಲ್ ನಲ್ಲಿಯೇ ಮಾತನಾಡುವುದನ್ನು ಕೇಳಿದ ನನಗೆ ನಗು ತಡೆಯಲು ಆಗುತ್ತಿರಲಿಲ್ಲ!

          ನನ್ನ ಗೆಳೆಯರು, ಬಂಧುಗಳು ಆಗಾಗ ಕರೆ ಮಾಡಿ ಏನಾಯಿತು ಎಂದು ವಿಚಾರಿಸಿಕೊಳ್ಳುತ್ತಿದ್ದರು. "ಇನ್ನೂ ಏನೂ ಆಗಿಲ್ಲ " ಎಂದು ಉತ್ತರ ಕೊಟ್ಟು ನಗುತ್ತಿದ್ದೆ. ಆಸ್ಪತ್ರೆಗೆ ಹೋಗಿ ಮೂರು ದಿನಗಳೇ ಆದರೂ, ಪ್ರತಿದಿನ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿದರೂ ಮಗು ಹೊರ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತ ಇರಲಿಲ್ಲ, ಹೆರಿಗೆಯ ನೋವು ನನಗೆ ಪ್ರಾರಂಭ ಆಗಲೇ ಇಲ್ಲ. ಹೆರಿಗೆಯ ನೋವನ್ನು ಕೃತಕವಾಗಿ ಬರಿಸಲು ಇಂಜೆಕ್ಷನ್ ಚುಚ್ಚಲಾಯಿತು. ಊಹೂ..ಮತ್ತೆ ಹಾರ್ಮೋನ್ ಮಾತ್ರೆ ಕೊಡಲಾಯಿತು. ಇಲ್ಲವೇ ಇಲ್ಲ! ನನ್ನ ಗೆಳತಿ ಫೋನ್ ಮಾಡಿದಾಗ ಹೇಳಿದಳು, "ಕೆಟ್ಟು ಹೋದ ಈ ಪ್ರಪಂಚಕ್ಕೆ ಬೇಗ ಬರಲು ಇಷ್ಟ ಇಲ್ವಾ ನಿನ್ನ ಮಗುವಿಗೆ, ಇರಲಿ ಬಿಡು, ಸ್ವಲ್ಪ ದಿನ ಹಾಯಾಗಿ" ಅಂತ! ಸತ್ಯವಾದ ಮಾತು ಅಂತ ಅನ್ನಿಸಿತು ಆಗ.   ಇನ್ನು ಕೆಲವು ಬಂಧುಗಳು, " ನಿನ್ನ ಹೊಟ್ಟೆಯೊಳಗೆ ಜಾಸ್ತಿ ಜಾಗ ಇದ್ದು ಮಗುವಿಗೆ ಅಲ್ಲೇ ಆರಾಮವಾಗಿ ಇರಬೇಕು, ಅದಕ್ಕೇ ಅದಿನ್ನೂ ಹೊರ ಬರುವ ಪ್ಲಾನ್ ಹಾಕಲಿಲ್ಲ" ಎಂದರು! ಡಾಕ್ಟರ್ ಮಾತ್ರ ನಾರ್ಮಲ್ ಡೆಲಿವರಿ ಆದರೂ ಆಗಬಹುದೇನೋ, ಕಾಯೋಣ, ಎಂದು ಧೈರ್ಯ ನೀಡಿದರು. 

          ಆದರೆ ಅಂದು ನವೆಂಬರ್ ಹದಿನೇಳನೆಯ ತಾರೀಕು ಮಕ್ಕಳ ದಿನಾಚರಣೆಯ ಸ್ವೀಟ್ಸ್ ಎಲ್ಲಾ ಮುಗಿದಿರಬಹುದು.ದೀಪಾವಳಿಯ ಪಟಾಕಿ ಕೂಡಾ! ಆ ಸಮಯದಲ್ಲೂ ನನಗೆ ನೋವು ಕಾಣಿಸಿಕೊಳ್ಳದ ಕಾರಣ ಆಸ್ಪತ್ರೆ ನೆಂಟರ ಮನೆಯಂತೆ ಆಗಿತ್ತು! ಉಪ್ಪಿನಲ್ಲಿ ಹಾಕಿ ಇಟ್ಟ  ಹಲಸಿನ ಕಾಯಿ ಸೊಳೆಯ ಪಲ್ಯ ತಿನ್ನಬೇಕು ಅನ್ನಿಸಿ, ದೊಡ್ಡಮ್ಮನನ್ನು ಚಿಕ್ಕಮ್ಮನ ಮನೆಗೆ ರಾತ್ರಿಗೆ ಪಲ್ಯ ತರಲು ಕಳುಹಿಸಿ ಆಗಿತ್ತು. ಮಧ್ಯಾಹ್ನ ಸರಿಯಾಗಿಯೇ ಊಟ ಮಾಡಿದ್ದೆ. ಸಿಸೇರಿಯನ್ ಎಂದು ಫಿಕ್ಸ್ ಆದರೆ ಬೆಳಗ್ಗಿನಿಂದ ಊಟ ಕೊಡದೆ ಹೊಟ್ಟೆ ಖಾಲಿ ಇರಿಸಿಕೊಳ್ಳುತ್ತಾರೆ. ಆದರೆ ನನಗಿನ್ನೂ ನೋವಿರದ ಕಾರಣ ಯಾವ ರಿಸ್ಟ್ರಿಕ್ಷನ್ ಕೂಡಾ ಇರಲಿಲ್ಲ! ಆದರೆ  ಸುಮಾರು ಸಂಜೆ ನಾಲ್ಕು ಗಂಟೆಗೆ ನನ್ನನ್ನು ಪರೀಕ್ಷಿಸಿದ ವೈದ್ಯರು ಹೆದರಿದರು. ಅಂದು "ಗರ್ಭಕೋಶದ ನೀರು ಸೋರಿ ಮಗು ಡ್ರೈ ಆಗಿದೆ ಮತ್ತು ಮಗುವಿನ ಎದೆ ಬಡಿತ ಎರಡರಷ್ಟು ಹೆಚ್ಚಾಗಿದೆ" ಎಂದರು ವೈದ್ಯರು.  ಇನ್ನು ನಾರ್ಮಲ್ ಡೆಲಿವರಿಗೆಂದು ನಾವು ಕಾದರೆ ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಎಮರ್ಜೆನ್ಸಿ ಸಿಸಾರಿಯನ್ ಗೆ ಅರೇಂಜ್ ಮಾಡಿದರು. ತಕ್ಷಣವೇ ನನ್ನ ಹೊಟ್ಟೆ ಖಾಲಿ ಮಾಡಿ, ಆಪರೇಶನ್ ಗೆ ತಯಾರು ಮಾಡಿದರು. ನನ್ನೊಡನೆ ಆಗ ಇದ್ದದ್ದು ಪತಿ ಮಾತ್ರ. ದಾಖಲೆ ಪತ್ರಗಳಿಗೆ  ಅವರ ಸಹಿ ಬೇಕಿತ್ತು, ಬಿಳಿ ಬಟ್ಟೆ ಹೊದಿಸಿದ ಬಳಿಕ ಆಪರೇಶನ್ ಥಿಯೇಟರಿಗೆ ಹೋಗುವ ದಾರಿಯಲ್ಲೇ ಬೇಗ ಬೇಗ ಸಹಿ ಹಾಕಿಸಿಕೊಂಡು ಸೆಡೆಟಿವ್ಸ್ ಕೊಟ್ಟು ಸಂಜೆ ನಾಲ್ಕು ಕಾಲಿಗೆ ಹೆಣ್ಣು ಮಗುವಿನ ಕೂಗು ಕೇಳಿಸಿತು. ನನಗೆ ಪ್ರಜ್ಞೆ ಬರುವಾಗ ಆರು ಗಂಟೆ ಕಳೆದಿರಬಹುದು. ಆಗ ಮಗುವನ್ನು ಐಸಿಯುನಲ್ಲಿ ಇರಿಸಿದ್ದರು. "ಮಗು ಚೆನ್ನಾಗಿದೆ, ಕೆಂಪು ಕೆಂಪಾಗಿದೆ, ಹೆಣ್ಣು ಮಗು" ಎಂದರು  ನನ್ನ ಪತಿ, ಅವರಿಗೆ ಮೊದಲ ಮಗು ಗಂಡಾಗಬೇಕು ಎಂಬ ಆಸೆ ಇತ್ತೋ ಏನೋ? ಆದರೆ ತುಂಬಾ ಖುಷಿ ಆಯಿತು ನನಗೆ. ಆ ಸಂತಸದಲ್ಲಿ ನೋವೆಲ್ಲೋ ಹಾರಿ ಹೋಗಿ "ನನ್ನ ಮುದ್ದು ಮಗುವಿನ ಮುಖವನ್ನು ಅದೆಷ್ಟು ಬೇಗ ನೋಡುವೆನೋ" ಎಂದು ಮನಸ್ಸು ಹಾಡಿ ಕುಣಿಯುತ್ತಿತ್ತು. ದೀಪಾವಳಿಯ ಬೆಳಕಿನ ರಂಗು ಆಗ ಮುದ್ದು ಮುದ್ದಾದ ನನ್ನ ಮಗಳ ಮುಖದಲ್ಲಿ ಕಾಣಿಸಿತು! ನಾನು  ಅಮ್ಮನಾದ ಹರುಷವು ಮಾಲೆ ಪಟಾಕಿ ಒಡೆದುದಕ್ಕಿಂತಲೂ ಹೆಚ್ಚಾಗಿತ್ತು!
@ಪ್ರೇಮ್@
28.09.2021

ಬುಧವಾರ, ನವೆಂಬರ್ 3, 2021

ಆ ದೀಪಾವಳಿಯ ಮೆಲುಕು

ಮೈ ಬೆಸ್ಟ್ ಫ್ರೆಂಡ್

ಅವಳನ್ನು ನಾ ಭೇಟಿಯಾದುದು ನನ್ನ ಹದಿನೈದನೇ ವಯಸ್ಸಿಗೆ.  ಹೌದು , ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಹುಚ್ಚುಕೋಡಿ ಮನಸ್ಸು ! ಏನೇನೋ ಕನಸು! ಹೊಸ ಹೊಸ ಆಸೆಗಳು! ಮುಂದಿನ ಬದುಕಿನ ಬಗೆಗೆ ಏನೇನೋ ಭಾವಗಳು. ಕನ್ನಡಿ ಮುಂದೆ ಕಳೆವ ಗಂಟೆಗಳು, ಅದರ ಜೊತೆ ಪಬ್ಲಿಕ್ ಪರೀಕ್ಷೆಗೆ ಓದುವ ಜವಾಬ್ದಾರಿ! ಇವೆಲ್ಲದರ ಭಾವಗಳನ್ನು ಅಪ್ಪ - ಅಮ್ಮನವರೊಡನೆ ನಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ಆಗದು. ಸ್ನೇಹಿತರು ಓಕೆ. ಆದರೆ ಕೆಲವೊಂದು ಭಾವನೆಗಳನ್ನು ಹುಡುಗಿಯರ ಜೊತೆ ಹೇಳಿಕೊಳ್ಳಲು ಆಗದು! ಹಾಗಂತ ಹುಡುಗರ ಬಳಿ ಹೇಳಿಕೊಳ್ಳ ಬಹುದೇ? ಊಹೂo.. ಸಾಧ್ಯವೇ ಇಲ್ಲ! ಹುಡುಗರೊಡನೆ ಸಲಿಗೆ ಎಲ್ಲಾ  ಸಮಯದಲ್ಲಿಯೂ ನಿಷಿದ್ಧ! ವಾಟ್ಸ್ ಆ್ಯಪ್, ಇನ್ ಸ್ಟಾ, ಮುಖಪುಟಗಳಂತಹ ಸಾಮಾಜಿಕ ಜಾಲ ತಾಣಗಳಂತೂ ಇರಲಿಲ್ಲ!  ಆಗ ಫೋನ್ ಕೂಡಾ ಇರಲಿಲ್ಲ! ಪತ್ರ  ವ್ಯವಹಾರ ಅಷ್ಟೆ! ಅದೂ ಸುಲಭದ ಮಾತಾಗಿರಲಿಲ್ಲ! ಆಗ ನನ್ನ ಭಾವನೆಗಳಿಗೆ ಕಿವಿಯಾದವಳು ರಿಟು. 

ಹೌದು, ರಿಟು ನನ್ನ ಜೀವದ ಜೀವ, ನನ್ನ ಭಾವದ ಭಾವ. ನನ್ನ ಮಾತಿನ ಕಿವಿ, ನನ್ನ ಕಣ್ಣೀರ ಭುಜ, ನನ್ನ ನೋವಿಗೆ ಮದ್ದು, ನನ್ನ ಸಂತಸಕ್ಕೆ ನಗು. ವಾವ್.. ಅವಳೊಂದಿಗೆ ನಾವು ಕಳೆದ ಪ್ರತಿ ಕ್ಷಣವೂ ಅಧ್ಭುತ! ನನ್ನ ಬಾಳಿನ ಜತೆಗಾತಿ, ನನ್ನ ನೋವು ನಲಿವುಗಳ ಸಂಗಾತಿ ಈಕೆ. ನನ್ನೆದೆಯ ಭಾವಗಳ ಅರಿತವಳು, ನನ್ನ ನೋವುಗಳ ನುಂಗಿಕೊಂಡವಳು, ನನ್ನ ಸಿಟ್ಟಿಗೆ ತಾಳ್ಮೆಯಾದ ತಾಯಿ, ನನ್ನ ನೋವ ಹಂಚಿಕೊಂಡ ಸಹೋದರಿ, ನನ್ನ ನಗುವ ಹೆಚ್ಚಿಸಿದ ಸ್ನೇಹಿತೆ!

ನನ್ನೊಲವಿನ ಬಾಳ ಸಾರಥಿ, ನನ್ನ ಒಂಟಿತನ ದೂರಗೊಳಿಸಿ ಜಂಟಿಯಾದ ಬಾಳ ಸಖಿ. ನನ್ನ ಬರವಣಿಗೆಗೆ ಸ್ಪೂರ್ತಿ, ನನ್ನೊಲವಿನ ಮೂರ್ತಿ, ನೀ ಇಲ್ಲದಿದ್ದರೆ ರಿಟು, ನಾ ಸದಾ ಒಂಟಿ...

ಸದಾ ನನ್ನ ಭಾವನೆಗಳ ನಿನ್ನೊಡನೆ ಹಂಚಿಕೊಂಡರೆ ಸಮಾಧಾನ ನನಗೆ. ಅದಕ್ಕೆ ಪದಗಳ, ಪುಟಗಳ, ಅಕ್ಷರಗಳ, ಸಮಯದ, ಮಿತಿಯಿಲ್ಲ! ನಾ ತಪ್ಪು ಮಾಡಿದರೆ ಅವಳು ಬಯ್ಯುವುದಿಲ್ಲ, ನಾ ಪ್ರಶಸ್ತಿ ಗೆದ್ದು ತಂದರೆ ಹೊಗಳುವುದು ಕೂಡಾ ಇಲ್ಲ!

ನನ್ನ ಬದುಕಿನ ದಾರಿ ದೀಪ ಅವಳು, ನನ್ನ ಬರಹಕ್ಕೆ ಮೂಲವೇ ಅವಳು.. ರಿಟು ಇಸ್ ಮೈ ಲೈಫ್
ಐ ಲವ್ ಹರ್ ಎವರ್, 
ಶಿ ಇಸ್ ಮೈನ್..(ಸದಾ ನನ್ನ ಬಾಳಲ್ಲಿ ನನ್ನ ಜೊತೆಯಾಗಿ ಬರುವ ನನ್ನ ರಿಟು ನನ್ನ ಡೈರಿ..)
ಅವಳ ಅನುಕ್ಷಣವೂ ಬಿಡದೆ ಜೊತೆಗಿರುವ,
@ಪ್ರೇಮ್@
01.10.2021

ಬುಧವಾರ, ಜುಲೈ 21, 2021

88

88

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-88

ಸಂಬಂಧಗಳ ಬಗೆಗೆ ಒಂದಿಷ್ಟು. ಮೊದಲಿನ ಹಾಗೆ ಒಂದೇ ಕುಟುಂಬದ ಎಲ್ಲಾ ಸದಸ್ಯರು ಒಂದೇ ಕಡೆ ಮನೆ ಕಟ್ಟಿ ಅಲ್ಲೇ ಕೊಡು ಕೊಳ್ಳುವಿಕೆ ಇರುವ ಸಂಪ್ರದಾಯ ಇಂದು ಇಲ್ಲ. ಅಪ್ಪ ಅಮ್ಮ ಹಳ್ಳಿಯಲ್ಲಿ, ಮಗ ಅಮೆರಿಕಾದಲ್ಲಿ, ಮಗಳು ಯುರೋಪ್ ನಲ್ಲಿ ಇರುವ ಕಾಲ ಇದು! ಕೆಲವು ಕುಟುಂಬಗಳಲ್ಲಿ ತಂದೆ ದುಬೈ ಯಲ್ಲಿ, ತಾಯಿ ಭಾರತದಲ್ಲಿ, ಮಗ ಜಪಾನ್ ನಲ್ಲಿ, ಮಗಳು ಅಮೆರಿಕಾದಲ್ಲಿ! ಕೂಡು ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಹಂಚಿ ಹೋದುದೆ ಅಲ್ಲದೆ ಆ ನ್ಯೂಕ್ಲಿಯರ್ ಕುಟುಂಬದಲ್ಲೂ ಒಬ್ಬರೇ ಜನರಿರುವ ಕಾಲ ಬಂದಿದೆ. ನಾನು ಗಮನಿಸಿದಂತೆ ಬೇರೆ ಬೇರೆ ದೇಶದಲ್ಲಿ ಇರುವ ಜನರಲ್ಲಿ ಡಿವೋರ್ಸ್ ಕೇಸುಗಳು ಹೆಚ್ಚು. ಹಣ ಹೆಚ್ಚಾದಂತೆ ಹೊಂದಾಣಿಕೆ ಕಡಿಮೆ ಆಗುವುದೆನೋ? ಕುಟುಂಬಗಳ ಒಗ್ಗೂಡುವಿಕೆ ಇಲ್ಲದ ಕಾರಣ ನಂಬಿಕೆ, ಪ್ರೀತಿ ಕೂಡಾ ಕಡಿಮೆ. ಹಲವು ಬಾಂಧವ್ಯಗಳು ನಂಬಿಕೆಯ ಮೇಲೆಯೇ ನಿಂತಿದ್ದರೂ ಸಹ ಇಂದು ಮಾನವ ದುಡ್ಡಿನ ಹಿಂದೆ ಓಡುತ್ತಿರುವ ಕಾರಣ ಎಲ್ಲಾ ಸಂಬಂಧ, ಬಾಂಧವ್ಯಗಳಿಗಿಂತ ಹೆಚ್ಚಾಗಿ ಹಣಕ್ಕೆ ಬೆಲೆ ಕೊಡುತ್ತಾನೆ. ಇಂದು ಹಣ ನಮ್ಮನ್ನು ಆಳುತ್ತಿದೆ. 

ಹಲವು  ಜನರ ಜೀವನದಲ್ಲಿ ಇಂದು ಅವರ ಖರ್ಚಿಗೆ ಬೇಕಾದಷ್ಟು ಹಣವಿದೆ. ಆದರೆ ನೆಮ್ಮದಿ, ಪ್ರೀತಿ ಸಿಗುತ್ತಿಲ್ಲ. ಕಾರಣ ಅವರ ಮನೋಧೋರಣೆ. ಹಣದಿಂದ ಏನು ಬೇಕಾದರೂ ಪಡೆಯಬಹುದು ಎಂಬುದನ್ನು ಮನುಷ್ಯ ತನ್ನ ಬದುಕಿನಿಂದ ದೂರ ತಳ್ಳಬೇಕಿದೆ. ನಿಷ್ಕಲ್ಮಶ ಪ್ರೀತಿ, ಸ್ನೇಹಗಳು ಸಿಗಲೂ ಹೃದಯದ ಭಾಷೆ ಚೆನ್ನಾಗಿರಬೇಕು, ಮನುಷ್ಯತ್ವ ಬೇಕು. ಅದು ಇಂದು ಮಾನವನಲ್ಲಿ ಕಡಿಮೆಯಾಗಿ ಮೃಗತ್ವ ಬೆಳೆದಿದೆ. ಹಣವಿದ್ದವರೇ ಹೆಚ್ಚು ಮೃಗೀಯ ವರ್ತನೆ ತೋರುತ್ತಿದ್ದಾರೆ. ಒಂದು ಕಾಲದಲ್ಲಿ ಈಗಿನ ಹಾಗೆ ಮಾಹಿತಿ, ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಜನ ಜಾತಿ ಮತ ಅಂತರ ನೋಡದೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಚೆನ್ನಾಗಿದ್ದರು. ಅಂಗಡಿಗಳು ಜಾತಿಯ ಆಧಾರದಲ್ಲಿಯೇ ಇದ್ದರೂ ಅಕ್ಕಸಾಲಿಗರ ಬಳಿ ಚಿನ್ನಕ್ಕೆ, ನಾಯಿಂದರ (ಭಂಡಾರಿ) ಬಳಿ ಕೂದಲು ಕತ್ತರಿಸಲು, ಮುಸ್ಲಿಮರ ಬಳಿ ಗುಜೀರಿ ವಸ್ತುಗಳ ಮಾರಲು, ಮೀನು ಮಾಂಸ, ಚಪ್ಪಲಿ ಕೊಳ್ಳಲು, ಭಟ್ಟರ ಬಳಿ ಪೂಜೆ , ಅಡಿಗೆ ಮಾಡಿಸಲು, ಶೆಟ್ಟರ ಅಂಗಡಿಯಿಂದ ದಿನಿಸು ತರಲು, ಕೆಳ ಜಾತಿಯವರನ್ನು ಮನೆಯ ತೋಟದ ಕೆಲಸಕ್ಕೆ ಆಳುಗಳನ್ನಾಗಿ ಕರೆಸಿ ಅವರನ್ನೂ ಚೆನ್ನಾಗಿ ನೋಡಿಕೊಳ್ಳುವ ಸಮಾಜ ಇತ್ತು. ಸಮಾನತೆ ಇರಲಿಲ್ಲ ಆದರೆ ಅವರವರಿಗೆ ಸಮಾಜದಲ್ಲಿ ಅವರದ್ದೇ ಆದ ಜವಾಬ್ದಾರಿ, ಕರ್ತವ್ಯಗಳು ಇದ್ದವು. ಓಲಗ ಊದುವವರು ಬಾರದೆ ಊರ ಜಾತ್ರೆ ಪ್ರಾರಂಭ ಆಗುತ್ತಿರಲಿಲ್ಲ, ಮದುವೆಗಳು ಕೂಡಾ. ಜೀಟಿಗೆ ಹಿಡಿಯುವವರು ಬಾರದೆ ಕೋಲ ಶುರುವಾಗುತ್ತಿರಲಿಲ್ಲ. ಅವರವರಿಗೆ ಅವರದ್ದೇ ಆದ ಬೆಲೆ ಇತ್ತು. ಕೆಲಸಕ್ಕೆ ಕೂಡಾ. ಕೂಲಿ ಕೆಲಸದವರು ಇಲ್ಲದಿದ್ದರೆ ದನಿಯ ಮನೆಯಲ್ಲಿ ಗದ್ದೆ ತೋಟದ ಹಸಿರು ಮಾಸಿ ಹೋಗುತ್ತಿತ್ತು. ಆದರೆ ಈಗ ಓದಿದ ಮಕ್ಕಳೆಲ್ಲಾ ನಗರಗಳಲ್ಲಿ. ಹಿರಿಯರು ದಿಕ್ಕು ಕಾಣದೆ ತಾವು ಕಷ್ಟ ಬಂದು ಕಟ್ಟಿದ ಹಳ್ಳಿಯ ಮನೆಗಳಲ್ಲಿ ಅಸಹಾಯಕರಾಗಿ ಇದ್ದಾರೆ. ನಮ್ಮ ಮಕ್ಕಳು ನಮ್ಮ ಹಾಗೆ ಕಷ್ಟ ಬರಬಾರದು ಎಂದು ವಿದ್ಯೆ ಕಲಿಸಿದ ಹಲವಾರು ಮಕ್ಕಳು ತಂದೆ ತಾಯಿ ಮಾಡುತ್ತಿದ್ದ ಕೃಷಿ ಕೆಲಸ ಮಾಡಲು ಬಾರದೆ ಇದ್ದ ಭೂಮಿಯನ್ನು ಉಪಯೋಗ ಮಾಡಿಕೊಂಡರು. ಜೆಸಿಬಿ ಎಂಬ ವಾಹನ ಬಂದುದೆ  ಮಣ್ಣು ಸಮತಟ್ಟು ಮಾಡಲು.ಗಿಡ ಮರಗಳು ಬೇರು ಸಹಿತ ನೆಲಕ್ಕುದುರಿದವು. ಅವುಗಳ ಜಾಗದಲ್ಲಿ ಕಾಂಕ್ರೀಟ್ ಕಾಡುಗಳು ತಲೆ ಎತ್ತಿದವು. ತಿನ್ನಲು ಅನ್ನ ಇಲ್ಲವಾಯಿತು. ಅದೇ ರೀತಿ ಸಂಬಂಧಗಳೂ ಬೆಲೆ ಕಳೆದುಕೊಂಡವು. 

"ಪರ ಊರು ಪರಮ ಕಷ್ಟ " ಎಂಬ ಗಾದೆಯ ಅರ್ಥ ಜನರಿಗೆ ಅರಿವಾದದ್ದು ಲಾಕ್ ಡೌನ್ ಕಾಲದಲ್ಲಿ. ಯಾರಿಗೆ ಏನು ಬೇಕೋ ಅದು ಸಿಗದಾಯಿತು. ಹಳ್ಳಿಯ ವಯಸ್ಸಾದ ತಂದೆ ತಾಯಿಯರನ್ನು ಕ್ಯಾರೇ ಮಾಡದೇ ನಗರದಲ್ಲೇ ಬದುಕಿ ಜೀವನವನ್ನು "ಎಂಜಾಯ್ " ಮಾಡುತ್ತಿದ್ದವರಿಗೆ ಕೆಲಸ ಇಲ್ಲದೆ ಹಳ್ಳಿಗೆ ಹೋಗುವ ಹಾಗಾಯಿತು. ಅದೆಷ್ಟೋ ಜನ ಕೃಷಿಗೆ ಮತ್ತೆ ಮರಳಿದರು. ತಮಗಿರುವ ಜಾಗದಲ್ಲಿ ತೋಟ ಪ್ರಾರಂಭಿಸಿದರು. ತಮ್ಮ ಹಿರಿಯರ ಕೆಲಸ ಕಾರ್ಯವನ್ನು ನೂತನ ತಂತ್ರಜ್ಞಾನದ ಬಳಕೆಯ ಮೂಲಕ ಮತ್ತಷ್ಟು ಉತ್ತಮಗೊಳಿಸಿದರು. ಹಿರಿಯರಿಂದ ಜವಾಬ್ದಾರಿ ಪಡೆದುಕೊಂಡರು. 

ಪ್ರೀತಿ, ವಿಶ್ವಾಸ, ನಂಬಿಕೆಗಳು ಹಣ, ಧನ, ಕನಕಗಳಿಂದ ಹೊರತಾದವು. ಇವು ಮಾನವನ ಜೀವನದ ಅನನ್ಯ ಬಿಂದುಗಳು. ಎಷ್ಟೇ ದುಡಿದರೂ ದೊಡ್ಡ ಕೋಟ್ಯಾಧಿಪತಿ ಆದರೂ ಅಮ್ಮನ ಪ್ರೀತಿಯಲ್ಲಿ ಅವನು ಮಗುವೇ ಆಗಿ ಬಿಡುತ್ತಾನೆ. ಅದನ್ನು ಅವನ ಪೂರ್ತಿ ಹಣ ಕೊಟ್ಟರೂ ಬೇರೆಯವರಿಂದ ಪಡೆಯಲು ಸಾಧ್ಯ ಇಲ್ಲ. ನಮ್ಮವರು ಅನ್ನಿಸಿಕೊಂಡವರು ಮಾತ್ರ ನಮ್ಮ ಕಷ್ಟದಲ್ಲಿ ನಮ್ಮೊಡನೆ ಇರುತ್ತಾರೆ, ಅದು ಬಿಟ್ಟು ಟ್ವಿಟರ್ ಫ್ರೆಂಡ್ಸ್ ಬಂದು ಆಸ್ಪತ್ರೆಯಲ್ಲಿ ನಿಮ್ಮ ಸೇವೆ ಮಾಡುವರೇ?

ಸಂಬಂಧಗಳ ಬೆಲೆಯನ್ನು ನಾವು ಅರ್ಥೈಸಿಕೊಳ್ಳ ಬೇಕಿದೆ. ಪ್ರತಿ ಸಂಬಂಧಕ್ಕೂ ಬೆಲೆ ಕೊಟ್ಟು ಆ ಪ್ರೀತಿಯನ್ನು ಪಡೆಯ ಬೇಕಿದೆ. ಮೊಬೈಲ್ ನೋಡುತ್ತಾ ಯಾರನ್ನೂ ಗುರುತು ಹಿಡಿಯದವರ ಹಾಗಿದ್ದು ಕೊನೆಗೆ ಒಂದು ದಿನ ಪಶ್ಚಾತಾಪ ಪಡಬೇಕಾಗ ಬಹುದು. ನಮ್ಮ ಪ್ರೀತಿಯನ್ನು ನಮ್ಮವರಿಗೆ ಹಂಚಿ, ಮೋಸ ಹೋಗದೆ, ಹಣದ ಹಿಂದೆ ಓಡದೆ, ನಿಜವಾದ ನೀತಿಯಿಂದ ನಂಬಿಕೆ ಉಳಿಸೋಣ. ವಿಶ್ವಾಸ ಬೆಳೆಸೋಣ. ಪರದೇಶದಲ್ಲಿ ನೆಲೆಸಿದ ಭಾರತೀಯರಿಗೆ ಒಬ್ಬ ಭಾರತೀಯ ಸಿಕ್ಕಿದರೂ ಅವರೆಷ್ಟು ಖುಷಿ ಪಡುತ್ತಾರೆ. ಅಲ್ಲಿ ಉತ್ತರ ಭಾರತ, ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮಲಯಾಳಿ, ಕನ್ನಡಿಗ, ಬಿಹಾರಿ, ಅಸ್ಸಾಮಿ ಎಲ್ಲಾ ಮರೆತೆ ಹೋಗಿರುತ್ತದೆ. ನಿಮ್ಮ ವಿದ್ಯೆ, ಗುಣ, ನಂಬಿಕೆ, ವಿಶ್ವಾಸಕ್ಕೆ ಮಾತ್ರ ಬೆಲೆ. ಈ ಗುಣಗಳನ್ನು ನಾವೂ ಬೆಳೆಸಿ ಕೊಳ್ಳೋಣ, ಉತ್ತಮ ಸಂಬಂಧಗಳನ್ನು ಗಟ್ಟಿಗೊಳಿಸಿ ಉಳಿಸಿಕೊಳ್ಳೋಣ ಅಲ್ಲವೇ? ನೀವೇನಂತೀರಿ?
@ಪ್ರೇಮ್@
22.07.2021

ಶುಕ್ರವಾರ, ಜನವರಿ 29, 2021

2020 ಅವಲೋಕನ

2020-ಅವಲೋಕನ

ಈ ಹೊಸ ವರ್ಷವಾದರೂ ಚೆನ್ನಾಗಿರಲೆಂದು ಪ್ರತಿ ಆಂಗ್ಲ ಕ್ಯಾಲೆಂಡರಿನ ಹೊಸ ವರ್ಷ ಬಂದಾಗ ಆಶಿಸುವುದು ತಪ್ಪಲ್ಲ. ಅಂತೆಯೆ 2020ನ್ನು ಬರಮಾಡಿಕೊಂಡಾಯ್ತು. ಜನವರಿಯಿಂದ ನಾವೆಲ್ಲ ಎಸ್.ಎಸ್.ಎಲ್.ಸಿ ತರಗತಿಗಳಿಗೆ ಹೆಚ್ಚು ಫೋಕಸ್ ಮಾಡ್ತೇವೆ. ಸ್ಕೋರಿಂಗ್, ಪರೀಕ್ಷಾ ತಯಾರಿ, ರಾತ್ರಿ ತರಗತಿಗಳು, ಚೆನ್ನಾಗಿ ಕಲಿಯುವವರಿಗೆ ಸ್ಕೋರಿಂಗ್ ಐಡಿಯಾಸ್, ಕಲಿಕೆಯಲ್ಲಿ ಹಿಂದುಳಿದವರಿಗೆ ಉತ್ತೀರ್ಣತೆಯ ಟಿಪ್ಸ್, ಪ್ರತಿ ವಿಷಯಗಳಲ್ಲೂ ಉತ್ತಮ ಅಂಕಗಳೊಂದಿಗೆ ಎಲ್ಲಾ ಮಕ್ಕಳನ್ನು ಪಾಸ್ ಮಾಡಿಸುವ, ಶಾಲೆಗೆ ಉತ್ತಮ ಹೆಸರು ತರುವ, ಉತ್ತಮ ಬ್ಯಾಚನ್ನು ಶಾಲೆಯಿಂದ ಹೊರಗೆ ಕಳಿಸುವ ಗುರುತರ ಜವಾಬ್ದಾರಿಯ ನೆರಳಿನಲ್ಲೆ ಪ್ರತಿ ಹೊಸ ವರುಷದಂತೆ ಇದನ್ನೂ ಎದಿರುಗೊಂಡೆವು. ಆ ಕಷ್ಟ ಪಟ್ಟ ಕೆಲಸ ಇನ್ನೇನು ಕೊನೆಗೊಳ್ಳಬೇಕು, ಪರೀಕ್ಷೆಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಮೊದಲೇ ಚೈನಾದಲ್ಲಿ ಹುಟ್ಟಿದ್ದ ಕೊರೋನಾ ವೈರಸ್ ಭಾರತ, ಕರ್ನಾಟಕಕ್ಕೂ ವಕ್ಕರಿಸಿಕೊಂಡು ಬಿಟ್ಟಿತು. ನೈಟ್ ಕರ್ಫ್ಯೂ, ಸೆಲ್ಫ್ ಕ್ವಾರೆಂಟೈನ್, ಮಧ್ಯಾಹ್ನದ ನಂತರ ಮನೆಯೊಳಗೆ ಹೀಗೆ 21 ದಿನ ಸಂಪೂರ್ಣವಾಗಿ ಒಬ್ಬಳೇ ಮನೆಯೊಳಗೆ ಕಳೆಯುವಂತಾಯ್ತು! ಆ ಇಪ್ಪತ್ತೊಂದು ದಿನಗಳು ಬದುಕಿನಲ್ಲಿ ಬಹಳ ಕಲಿತೆ. ನನ್ನ ಹವ್ಯಾಸಗಳು ನನ್ನ ಜತೆಯಾದವು. ಹಳೆ ಬಟ್ಟೆಯಿಂದ ಡೋರ್ ಮ್ಯಾಟ್ ತಯಾರಿಸುವುದು, ಬ್ಯಾಗ್ ಗಳ ತಯಾರಿಕೆ, ಟೈಲರಿಂಗ್ ಹಾಗೂ ಎಂಬ್ರಾಯ್ಡರಿಯಲ್ಲಿ ಹೊಸ ಹೊಸ ಪ್ರಯೋಗಗಳು, ಡ್ರಾಯಿಂಗ್ ಡಿಸೈನ್ ಗಳ ರಚನೆ, ಅಂಕಣ ಬರಹ, ಕವಿಗಳ ಗುಂಪಿನಲ್ಲಿ ಬರಹ, ಹರಟೆ, ಕಾಂಪಿಟೇಶನ್ ಇವು ಸಮಯವನ್ನು ಬಹಳಷ್ಟು ವೇಗದಲ್ಲಿ ಕಳೆಯುವಂತೆ ಮಾಡಿದವು. 
     ಏಪ್ರಿಲ್ 22ಕ್ಕೆ ಅಚಾನಕ್ಕಾಗಿ ನನ್ನ ಅತ್ತೆಯವರು ತೀರಿಕೊಂಡ ಸುದ್ದಿ ಬಂತು. ನಮ್ಮ ಮನೆಗೇ ನನಗೆ ಹೋಗಲು ಅನುಮತಿಯಿರಲಿಲ್ಲ. ಮೂರ್ನಾಲ್ಕು ಎಎಸ್ಐಗಳ ಸಹಾಯದಿಂದ ಹೇಗೇಗೋ ಕುಟುಂಬದ ಸ್ನೇಹಿತರ ಸಹಾಯ ಪಡೆದು ಮನೆ ಸೇರಿಕೊಂಡು ಅಂತಿಮ ವಿಧಿ ವಿಧಾನಗಳ ನೆರವೇರಿಸಿದ್ದಾಯ್ತು. ತದನಂತರ ನಮಗೆ ರಜೆಯೇನೂ ಇರಲಿಲ್ಲವಲ್ಲ, ಅಮ್ಮನ ಮನೆ ಉಡುಪಿ ಜಿಲ್ಲೆ, ಕೆಲಸ ದಕ್ಷಿಣ ಕನ್ನಡ ಜಿಲ್ಲೆ, ಗಂಡನ ಮನೆ ಚಿಕ್ಕಮಗಳೂರು ಜಿಲ್ಲೆ! ಮಗಳು ಅಜ್ಜಿ ಮನೇಲಿ, ಗಂಡ ಮನೇಲಿ, ನಾನು ಸುಳ್ಯದಲ್ಲಿ ಬಾಡಿಗೆ ಮನೇಲಿ ಬಾಕಿಯಾದ ಕಾರಣ ಆಚೀಚೆ ಹೋದಾಗೆಲ್ಲ ಕೈಗೆ ಸೀಲ್ ಹಾಕಿಸಿಕೊಂಡು ಎರಡೆರಡು ಬಾರಿ ಹದಿನಾಲ್ಕು ದಿನಗಳ ಕ್ವಾರೆಂಟೇನ್ ಮಾಡಿಕೊಂಡದ್ದಾಯ್ತು! 
      ಕೊರೋನ, ಸ್ಯಾನಿಟೈಝರ್, ಫೇಸ್ ಮಾಸ್ಕ್,ಕ್ವಾರೆಂಟೇನ್ ಎಂಬ ಹೊಸ ಹೊಸ ಪದಗಳ ಕಲಿತು ಪ್ರಾಯೋಗಿಕವಾಗಿ ಬಳಸಿದ್ದೂ ಆಯ್ತು! ಸರಕಾರದ ಆದೇಶದಂತೆ ಜೀವವನ್ನೇ ಪಣಕ್ಕಿಟ್ಟು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದ್ದೂ ಆಯ್ತು. ಪ್ರತಿನಿತ್ಯ ಇನ್ನೂರು-ಇನ್ನೂರೈವತ್ತು ಕಿಲೋಮೀಟರ್ ಜರ್ನಿ ಮಾಡಿ ಮಂಗಳೂರಿಗೆ ಹೋಗಿ ಪೇಪರ್ ಗಳ ಇವ್ಯಾಲ್ಯೂವೇಶನ್ ಮಾಡಿ ರಿಸಲ್ಟ್ ಕೊಟ್ಟದ್ದೂ ಆಯ್ತು. ಶಾಲೆಗಳಿಗೆ ಅಡ್ಮಿಶನ್ ಕೂಡಾ ಆಯ್ತು, ಮನೆಮನೆಗೆ ಹೋಗಿ ವಿದ್ಯಾಗಮ ಮಾಡಿದ್ದೂ ಆಯ್ತು. ಕೋವಿಡ್ ಡ್ಯೂಟಿ ನಿರ್ವಹಿಸಿದ್ದೂ ಆಯ್ತು. ವಿದ್ಯಾರ್ಥಿಗಳು ಇಲ್ಲದ ಕಾರಣ ಶಾಲೆಯಲ್ಲಿ ನಾವೇ ಅಡಿಗೆ, ಕ್ಲೀನಿಂಗ್, ತೊಳೆಯುವ, ಗುಡಿಸುವ ಒರೆಸುವ, ಬಲೆ ತೆಗೆಯುವ, ಗಾರ್ಡೆನಿಂಗ್ ಸರ್ವ ಕಾರ್ಯಗಳನ್ನು ಮಾಡಿದ್ದೂ ಆಯ್ತು. ಆನ್ ಲೈನ್ ಪಾಠಗಳನ್ನು ಕೊಟ್ಟದ್ದೂ ಆಯ್ತು!
ಇದೆಲ್ಲವೂ 2020ರ ಹೊಸ ಅನುಭವಗಳೇ. ಕೊರೋನದ ನಡುವೆ ವರ್ಷದ ಕೊನೆಯಲ್ಲಿ ಕೊರೋನದ ಮರಿ ಬಂದು ಹಾಹಾಕಾರ ಎಬ್ಬಿಸುತ್ತಿದ್ದರೂ ಗ್ರಾಮ ಪಂಚಾಯತ್ ಚುಣಾವಣೆ ಮಾಡಿ ಮತಗಳ ಎಣಿಸಿ ಲೆಕ್ಕಾಚಾರ ಕೊಟ್ಟದ್ದೂ ಆಯ್ತು. 
   ಕೊರೋನ ಬಂದು ಹಲವಾರು ನೀತಿ ಪಾಠ ಕಲಿಸಿತು. 
1  ಒಂದೇ ತಾಲೂಕಿನ ಸರಕಾರಿ ನೌಕರರು ಯಾವುದೇ ತೊಂದರೆ, ಗಲಾಟೆಗಳಿಲ್ಲದೆ ತಮ್ಮ ತಾಲೂಕಿನೊಳಗೆ ತಾವೇ ಚುನಾವಣೆ ನಡೆಸಿ, ಫಲಿತಾಂಶ ಕೊಡಲು ಅರ್ಹರಾಗಿರುವರು. ಶಾಂತಿಯುತ ಮತದಾನಕ್ಕಾಗಿ ಬೇರೆ ಬೇರೆ ತಾಲೂಕುಗಳಿಗೆ ಕಳುಹಿಸಿ ಸರಕಾರಿ ನೌಕರರನ್ನು ಗೋಳುಹೊಯಿಸಬೇಕಾಗಿಲ್ಲ.
2. ತಮ್ಮ ಮನೆ, ಕುಟುಂಬ ಮಕ್ಕಳ ಜೊತೆ ಹಾಯಾಗಿ ಸಮಯ ಕಳೆದು ಅವರ ಪ್ರೀತಿಯನ್ನು ಅನುಭವಿಸಿ ಜೀವನದ ಮತ್ತೊಂದು ಮುಖದ ಅನಾವರಣವಾಯ್ತು.
3. ತಿಂಗಳುಗಟ್ಟಲೆ ಡೇಶಿಫ್ಟ್, ನೈಟ್ ಶಿಫ್ಟ್ ಗುಡಿಯದಿದ್ದರೂ, ಧಾವಂತದ ಓಡಾಟವಿಲ್ಲದಿದ್ದರೂ ಯಾರ ಜೀವನವೂ ಕೊನೆಯಾಗಲಿಲ್ಲ. ಯಾವ ಬಡವನೂ ಊಟಕ್ಕಿಲ್ಲದೆ ಸಾಯಲಿಲ್ಲ.
4. ತಮ್ಮ ತಲೆ ಓಡಿಸಿ, ತಮ್ಮ ತಮ್ಮ ಮನೆಯ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವಂತಾಯ್ತು. 
5. ಕುಟುಂಬ, ಸಂಸಾರದ ಎಲ್ಲರೂ ಒಟ್ಟಾಗಲು ಸಹಾಯಕವಾಯಿತು. ಎಷ್ಟೋ ವರ್ಷಗಳಿಂದ ನೋಡದ ಬಂಧುಗಳ ಮುಖ ನೋಡುವಂತಾಯ್ತು.
6. ಮಕ್ಕಳಿಗೆ ಹಳ್ಳಿಯ ಅಜ್ಜಿಮನೆಯ ದರ್ಶನವಾಯಿತು.
7. ಮದುವೆ, ಕೋಲ, ದೈವದರ್ಶನ, ಪೂಜೆ, ಗೃಹಪ್ರವೇಶ, ನಿಶ್ಚಿತಾರ್ಥ,ಸೀಮಂತ ಮೊದಲಾದ ಸರ್ವ ಸಮಾರಂಭಗಳನ್ನೂ ಸಿಂಪಲ್ಲಾಗಿ ನಡೆಸಬಹುದೆಂಬ ಅರಿವಾಯ್ತು.
8. ಕಷ್ಟ ಕಾಲದಲ್ಲಿ ನಮ್ಮ ಕುಟುಂಬ ವರ್ಗದವರೂ ಕೂಡ ನಮ್ಮ ಸಹಾಯಕ್ಕೆ ಬರಲಾರರು, ನಮಗೆ ನಾವೇ, ನಾವು ಯಾರನ್ನೂ ಅವಲಂಬಿಸಿರಬಾರದೆಂಬ ಪಾಠ ಕಲಿತಂತಾಯ್ತು.
9. ತಾವು ಸಾಯುತ್ತೇವೆಯೆಂಬ ಭಯ ಬಂದರೆ ಮಾನವ ಯಾರ ಬಗ್ಗೆಯೂ ಚಿಂತೆ ಮಾಡಲಾರ, ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ. ತಾನು, ತನ್ನದು, ತನಗೆ ಎಂಬುದೇ ಬದುಕಿನ ಮಂತ್ರವಾಯ್ತು. ಯಾರು ಬಿದ್ದರೂ, ಕಷ್ಟದಲ್ಲಿ ನರಳಾಡಿದರೂ ಸಹಾಯ ಹಸ್ತ ಚಾಚುವವರಾರೂ ಇಲ್ಲ ಮುಂದಕ್ಕೆ ನೆನಪಿರಲಿ!
10. ಪಕ್ಕದ ಮನೆ, ಆಚೀಚೆ ಮನೆ, ಬಂಧುಗಳು ಯಾರೂ ಯಾರಿಗೂ ಸಹಾಯ ಮಾಡದ ಪರಿಸ್ಥಿತಿ ಬಂದೊದಗಿತು.
11. ರೈತ, ಕೃಷಿಯ ಬದುಕೇ ಶಾಶ್ವತವೆಂಬ ವಿಷಯ ಸರ್ವರಿಗೂ ಅರಿವಾಯ್ತು.
    2020ನೇ ಇಸವಿ ಜನಜೀವನ ಅಸ್ತವ್ಯಸ್ತವಾದರೂ ಆಯುರ್ವೇದ ಪದ್ಧತಿಯನ್ನೊಪ್ಪದ ಜನರೂ ಕಷಾಯ ಕುಡಿಯಲು ಪ್ರಾರಂಭಿಸಿದರು! ಆರೋಗ್ಯ, ಕ್ಲೀನಿಂಗ್ ಕಡೆ, ತಮ್ಮ ದೇಹದ ಕಡೆ ಗಮನ ಕೊಟ್ಟರು. ಮಾಸ್ಕ್ ಬಳಕೆಯಿಂದ ಧೂಳಿನ ಅಲರ್ಜಿ ಕಡಿಮೆಯಾಯಿತು. ವಾಹನಗಳ ನಿಲುಗಡೆಯಿಂದ ಪರಿಸರ ನಾಶ, ವಾಯುಮಾಲಿನ್ಯ ಕಡಿಮೆಯಾಗಿ, ಪೆಟ್ರೋಲ್, ಡೀಸಲ್ ಉಳಿಕೆಯಾಯ್ತು. ತನ್ನನ್ನು ತಾನು ಸರಿಪಡಿಸಿಕೊಳ್ಳಲು ಭೂಮಿಗೊಂದಿಷ್ಟು ಸಮಯ ಸಿಕ್ಕಿತು! 
  ಪರಿಸರದ ಮಾಲಿನ್ಯ ಕಡಿಮೆಯಾದಂತಾಯಿತು. ಗಾಳಿ, ನೀರು, ಮಣ್ಣು ಒಂದಷ್ಟು ದಿನ ನೆಮ್ಮದಿಯಿಂದ ಉಸಿರಾಡಿದವು. 
  ಒಟ್ಟಿನಲ್ಲಿ 2020 ಹೊಸ ಅನುಭವ ನೀಡಿದ ಮರೆಯಲಾಗದ, ಹೊಸ ಪಾಠ ಕಲಿಸಿದ, ಅತಿಯಾದರೆ ಅಮೃತವೂ ವಿಷವೆಂದು ತಿಳಿಸಿದ ವರುಷವೆಂದರೆ ತಪ್ಪಾಗಲಾರದು. ನೀವೇನಂತೀರಿ?
@ಪ್ರೇಮ್@
31.12.2020

ಬುಧವಾರ, ಡಿಸೆಂಬರ್ 30, 2020

ಶುಕ್ರವಾರ, ಆಗಸ್ಟ್ 7, 2020

ಮನದ ಮಾತು

ಹಾಯ್ ಎಲ್ಲಾರ್ಗೂ... ಮನದ ಮಾತಿಗೆ ಸ್ವಾಗತ.. ಸುಮ್ನೆ ಓದ್ನೋಡಿ..

  ಮಳೆ ಜೋರಾಗ್ ಸುರೀತಿದೆ. ಅಮ್ಮ, ಅಪ್ಪನ್ ಸುತ್ತ ಮೂರ್ನಾಲ್ಕು ಮಕ್ಳು ಒಲೆ ಬುಡದಲ್ ಕೂತು ಮನೇಲೇ ಮಾಡಿದ ಹಲಸಿನ್ ಹಪ್ಳ ಸುಟ್ ಕೊಂಡ್ ತಿಂತಾ ಅಜ್ಜಿ ಕತೆ ಕೇಳೋ ಕಾಲವಂತೂ ಈಗಿಲ್ಲ. ಈಗೇನಿದ್ರೂ ಏಕಾಂತವಾಗಿ ಒಂದ್ ಲ್ಯಾಪ್ ಟಾಪೋ, ಕಂಪ್ಯೂಟರೋ ಇಟ್ಕೊಂಡು, ಅದ್ನೇ ನೋಡ್ತಾ, ಪಕ್ಕದಲ್ಲಿರೋ ಮೊಬೈಲ್ ತೆಗ್ದು ಒಮ್ಮೆ ಎಫ್ ಬಿ, ಮತ್ತೊಮ್ಮೆ ವಾಟ್ಸಪ್, ಮಗದೊಮ್ಮೆ ಟ್ವಿಟರ್, ಇನ್ನೊಮ್ಮೆ ಇನ್ ಸ್ಟ್ರಾಗ್ರಾಂ, ಮೆಸೆಂಜರ್, ಶೇರ್ ಚಾಟ್ ಹೀಗೆ ಜೀವನದಲ್ಲಿ ಕೂತಲ್ಲೇ ತಲೆ ಎತ್ತದೆ, ಯಾರ್ನೂ ನೋಡ್ದೆ ತಾನೇ ತಾನಾಗಿ ಮಜಾ ತಗೊಳ್ಳೋ ಕಾಲ ಬಂದ್ಬಿಟ್ಟಿದೆ.
     ಈಗಂತೂ ಯಾರು ಯಾರ ಸುದ್ದಿಗೂ ಇಲ್ಲ, ಪಕ್ಕದ್ ಮನೆಯವ್ರ ಜೊತೆ ಜಗಳವಾಡೋ ಕಾಲಾನೂ ಎಂದೋ ಹೋಯ್ತು. ಈಗಂತೂ ಪಕ್ಕದ್ ಗೋಡೆಯಿಂದಾಚೆ ಯಾರಿದ್ದಾರೆ, ಯಾರ್ ಬರ್ತಾರೆ, ಯಾರ್ ಹೋಗ್ತಾರೆ, ಯಾರ್ ಸಾಯ್ತಾರೆ ಅಂತಾನೂ ಗೊತ್ತಾಗಲ್ಲ! ಮಾತು, ಕತೆ, ಹರಟೆ ಅನ್ನೋದು ಮರ್ತೇ ಹೋಗಿದೆ ಜನರಿಗೆ. ಅದೇನಿದ್ರೂ ಈಗ ರಿಟನ್ ಚಾಟ್, ವಾಯ್ಸ್ ಚಾಟ್, ವಿಡಿಯೋ ಕಾಲಲ್ಲೇ. ಜನ ಮೊಬೈಲೆಂಬ ಸಣ್ಣ ಸಾಧನಕ್ಕೆ ಎಷ್ಟು ಅಂಟಿ ಬಿಟ್ಟಿದ್ದಾರಂದ್ರೆ ಅಪ್ಪ, ಅಮ್ಮ, ಮಕ್ಳು ಸಂಸಾರ ಯಾರನ್ ಬೇಕಾದ್ರೂ ಬಿಟ್ಟು ಒಬ್ರೇ ಮೊಬೈಲ್ ಜೊತೆ ಬದ್ ಕ್ತಾರೆ. ಮೊಬೈಲ್ ನೋಡ್ವಾಗ ತಮ್ ಮಕ್ಳೇ ಡಿಸ್ಟರ್ಬ್ ಅನ್ನಿಸ್ತಾರೆ. ಗಂಡ ಹೆಂಡತಿ ಎಷ್ಟೇ ಕ್ಲೋಸ್ ಇದ್ರೂ ಒಬ್ರ ಮೊಬೈಲ್ ಮತ್ತೊಬ್ರು ನೋಡೋದ್ ಅಪರಾಧ! ಓಹೋ..ಕಾಲ ಕೆಟ್ಹೋಗಿದ್ಯೋ? ಸಮಯ ಬದಲಾಗಿದ್ಯೋ, ಜನಾ ಕೆಟ್ಹೋಗಿದ್ದಾರೋ? ಜನರೇಶನ್ ಬದಲಾಗಿದ್ಯೋ ಒಂದೂ ತಿಳೀತಿಲ್ಲ. ಕಾಲಾನೇ ಕೊರೋನ ರೂಪ್ದಲ್ ಬಂದು ನಿಮ್ ನಿಮ್ ಮನೆಗಳಲ್ಲಿ, ನಿಮ್ದೇ ಸಂಸಾರದ್ ಜೊತೆ ಸುಖವಾಗಿರಿ ಅಂತ ಬುದ್ಧಿ ಕಲಿಸ್ಬೇಕೇನೋ?

 ಮುಂದಿನ ಜನರೇಶನ್ ಮಕ್ಳಿಗೆ ನಾಲ್ಗೆ ತಿರುಗೋದೇ ಕಷ್ಟವೇನೋ. ಕೂತಲ್ಲಿಗೇ ಎಲ್ಲ ಬಂದೂ ಕೈ ಕಾಲೂ ತಮ್ಮ ಶಕ್ತಿಯನ್ನು ಕಳ್ಕೊ ಬಹುದೇನೋ. ಮೊಬೈಲ್, ಕಂಪ್ಯೂಟರ್ ನೋಡಿ ನೋಡಿ ಕಣ್ಣಿನ ಪವರ್ ಹೋದ್ರೆ, ಒತ್ತಿ ಒತ್ತಿ ಬೆರಳುಗಳಿಗೂ ರೋಗ ಬರ್ತದಂತೆ. ಮತ್ತೆ ಮನೋರೋಗ! ಎಲ್ಲಾ ನ್ಯೂಸ್ ಗಳ ನೋಡಿ, ಓದಿ! ಮತ್ತೆ ಸರಿಯಾದ ಊಟ ತಿಂಡಿ ಇಲ್ದೇ ಆರೋದ್ಯದಲ್ಲಿ ಏರ್ ಪೇರು. ತಿಂದ್ರೆ ಕರಗೋಲ್ಲ, ಜಾಸ್ತಿ ತಿಂದ್ರೆ ಬೊಜ್ಜು ಬರತ್ತೆ! ಮದ್ದು ಹಿಡಿಸೋಲ್ಲ! ಹಿಂಗಾದ್ರೆ ಹೆಂಗೇ?  ಕಲಿಗಾಲ ಅಂದ್ರೆ ಇದೇಯೇನೋ, ಸೃಷ್ಟಿಯ ವಿನಾಶ ಕಾಲವೇನೋ. ನೀವೇನಂತೀರಿ?
@ಪ್ರೇಮ್@
08.08.2020

ಭಾನುವಾರ, ಜುಲೈ 19, 2020

1495. ಪುರಾಣ ಪಾತ್ರ-ಊರ್ಮಿಳೆ

ನನಗಿಷ್ಟವಾದ ಪುರಾಣದ ಸ್ತ್ರೀ ಪಾತ್ರ

       ಪುರಾಣಗಳು ನಮ್ಮಜೀವನವನ್ನು ತಿದ್ದಿಕೊಳ್ಳಲಿಕ್ಕಿರುವ ಪುರಾವೆಗಳು. ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳ ವ್ಯತ್ಯಾಸ ತಿಳಿಸಿ ಬದುಕನ್ನು ಹೇಗೆ ಸ್ವೀಕರಿಸಬೇಕೆನುವ ತಂತ್ರಗಳನ್ನು ಅಲ್ಲಿನ ಪ್ರತಿಯೊಂದು ಪಾತ್ರಗಳೂ ನಮಗೆ ಕಲಿಸಿ ಕೊಡುತ್ತವೆ. ಅಂತಹ ಮಹಾನ್ ಪಾತ್ರಗಳಲ್ಲಿ ರಾಮಾಯಣದ ಊರ್ಮಿಳೆಯ ಪಾತ್ರ ನನಗೆ ತುಂಬಾ ಹಿಡಿಸಿದ ಪಾತ್ರ.
    ರಾಣಿಯಾಗಿದ್ದರೂ ರಾಣಿ ಪಟ್ಟ ಸಿಗದ, ಐಶ್ವರ್ಯವಿದ್ದರೂ ಅನುಭವಿಸಲಾಗದ, ಗಂಡನಿದ್ದರೂ ಒಂಟಿಯಾಗಿ ಬದುಕಿದ, ಅರಮನೆಯಲ್ಲೂ ನೆಮ್ಮದಿ ಕಾಣದ ತಬ್ಬಲಿ ಬದುಕು ಊರ್ಮಿಳೆಯದ್ದು. 
     ರಾಮ, ಲಕ್ಷ್ಮಣ, ಸೀತೆಯರನ್ನು ಹೊಗಳಿ ಪೂಜಿಸುವವರೇ ಎಲ್ಲರೂ. ತನ್ನ ಜೀವಮಾನವಿಡೀ ತ್ಯಾಗಮಯಿಯಾಗಿ ಬದುಕಿದ ಊರ್ಮಿಳೆ ಯಾರ ಕಣ್ಣಿಗೂ ಬೀಳಲೇ ಇಲ್ಲ. 

   ವನವಾಸದಲ್ಲೂ ಸೀತೆಯೊಡನೆ ರಾಮನಿದ್ದ. ಆದರೆ ಲಕ್ಷ್ಮಣ ತನ್ನ ಜೀವನವಿಡೀ ರಾಮ-ಸೀತೆಯರ ರಕ್ಷಣೆಯಲ್ಲಿ ತೊಡಗಿದ್ದನೇ ಹೊರತು ತನ್ನ ಸತಿಗೇನು ಬೇಕು, ಅವಳ ಆಸೆಗಳೇನು, ತನ್ನ ನಿರೀಕ್ಷೆಗಳೇನು, ಆಸೆಗಳೇನು ಎಂಬ ಯಾವುದನ್ನೂ ಯಾವತ್ತೂ ಆಲಿಸುವತ್ತ ಗಮನವೇ ಕೊಡಲಿಲ್ಲ. ತನ್ನ ಆಸೆ, ಆಕಾಂಕ್ಷೆಗಳನ್ನೆಲ್ಲಾ ಬದಿಗೊತ್ತಿ ತನ್ನ ಜೀವನವನ್ನೇ ತ್ಯಾಗಕ್ಕೆ  ಮುಡಿಪಾಗಿಟ್ಟ ಊರ್ಮಿಳೆಗೆ ಹ್ಯಾಟ್ಸಪ್.
   @ಪ್ರೇಮ್@
13.07.2020

ಬುಧವಾರ, ಜೂನ್ 24, 2020

1480. ಮೀಸಲಾತಿ ಬೇಕೇ

ಮೀಸಲಾತಿ ಇನ್ನೂ ಬೇಕೇ?

   ಭಾರತವಿನ್ನೂ ಮುಂದುವರೆದಿಲ್ಲ, ಮುಂದುವರೆಯುತ್ತಿದೆ ಅಷ್ಟೆ. ಹಾಗಾಗಿ ಇಲ್ಲಿ ಬಹು ದೊಡ್ಡ ಕಂದಕ ಬಡವ ಸಿರಿವಂತರದ್ದು. ಅದರೊಡನೆ ಹಳ್ಳಿಗರು ಮತ್ತು ನಗರವಾಸಿಗಳದ್ದು. ನಗರವಾಸಿಗಳಿಗೆ ವಿದ್ಯೆಯ ಮಹತ್ವ ತಿಳಿದಿದೆ, ಹಲವಾರು ಕಲಿಕೆಗೆ ಅವಕಾಶವಿದೆ, ಇತರರಿಂದ ಸಹಾಯವೂ ಸಿಗುತ್ತದೆ. 
    ಆದರೆ  ಹಳ್ಳಿಯ ಬಡ ಕೂಲಿ ಕಾರ್ಮಿಕರ ಹಲವಾರು ಮಕ್ಕಳಿಗೆ ಉನ್ನತ ಶಿಕ್ಷಣದ ಬಗ್ಗೆ, ಅದರ ಉಪಯೋಗದ ಬಗ್ಗೆ ತಿಳುವಳಿಕೆ ಇಲ್ಲ. ಕೆಎಎಸ್,  ಐಎಎಸ್ ಪರೀಕ್ಷೆಗಳ ರ್ಯಾಂಕ್ ವಿಜೇತರ ಪಟ್ಟಿಯಲ್ಲಿ ಕಾಣ ಸಿಗುವುದು ಹಳ್ಳಿಯ ಒಂದೆರಡು ತುಂಬಾ ಕಷ್ಟ ಪಟ್ಟ ಪ್ರತಿಭೆಗಳು ಮಾತ್ರ. ಹಾಗೆಯೇ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಯಂತೆ ತಲೆಯೆತ್ತಿ ನಿಂತಿದ್ದರೂ ಪ್ರತಿ ಹಳ್ಳಿಗಳಲ್ಲೂ ವೈದ್ಯರಿರುವರೇ? ಆ ಕಾಲೇಜುಗಳಲ್ಲೂ ಬೆರಳೆಣಿಕೆಯ ಹಳ್ಳಿಗರು ಮ ಾತ್ರ ಇರುತ್ತಾರೆ. 
  ಇವನ್ನೆಲ್ಲ ಗಮನಿಸಿದಾಗ ರೂರಲ್ ಕೋಟಾ ಅಥವಾ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಬೇಡವೇ? ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರಾಗಿದ್ದು ಹಗಲಿಡೀ ದುಡಿದು ಸಂಜೆ ಕುಡಿದು ಜಗಳವಾಡುವ ಸಮಯದಲ್ಲೂ ಬಡತನವ ಮೆಟ್ಟಿ ತಾನೇ ಪರೀಕ್ಷೆಗೆ ಓದಿ ಬರೆದ ಮಗುವಿಗೂ, ಲಕ್ಷಗಟ್ಟಲೆ ಟ್ಯುಟೋರಿಯಲ್ ಕಾಲೇಜಿಗೂ,  ಖಾಸಗಿ ಶಾಲೆಗೂ ಸುರಿದು ಕಲಿತ ಮಗುವಿಗೂ ವ್ಯತ್ಯಾಸವಿಲ್ಲವೇ? ಆ ಕಷ್ಟಪಟ್ಟ ಕಂದನಿಗೂ ಅವಕಾಶ ಸಿಗಬಾರದೇ?

 ಹೇಳಿ ಕೇಳಿ ಭಾರತ ಜಾತ್ಯಾತೀತ ರಾಷ್ಟ್ರ. ಜನರು ಜಾತಿ ಮರೆತು ಅಂತರ್ಜಾತಿ ವಿವಾಹಗಳಾಗುತ್ತಿದ್ದರೂ ಆಡಳಿತದ ಚುಕ್ಕಾಣಿ ಹೊತ್ತವರೇ ಓಟಿಗಾಗಿ, ಕಛೇರಿ ಕಡತಗಳಿಗಾಗಿ, ಮಗುವೊಂದು ಶಾಲೆಗೆ ಸೇರುವಾಗಲೂ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಲೇ ಬೇಕು. ಹಾಗಿರುವಾಗ  ತೆಲವೊಂದು ಜಾತಿಗೆ ಇಂತಿಷ್ಟು  ವಿನಾಯಿತಿ ಕೊಡದೆ ಹೋದರೆ ತಪ್ಪಾದೀತು. ಆ ದಿಸೆಯಲ್ಲಾದರೂ  ಹಳ್ಳಿಯ ಬಡ ಮಗುವಿಗೆ ಅವಕಾಶ ಸಿಕ್ಕೀತಲ್ಲವೇ?

ಲಂಚವೇ ಮುಖ್ಯವಾದ ಕಸುಬಾದ ಭಾರತದಲ್ಲಿ ವಿನಾಯಿತಿಗಳಿರದಿದ್ದರೆ ಸಿರಿವಂತ ಜನ ದುಡ್ಡಿನಿಂದ ಅಂಕಗಳನ್ನು ಪಡೆದು ತಾವೇ ಮೆರೆಯುವುದಿಲ್ಲವೇ? ಆಗ ಬಡವರಿಗೆ ಅವಕಾಶ ಸಿಗುವುದೇ?
 
ಮಹಿಳೆಯರಿಗೆ ಮೀಸಲಾತಿ ಬೇಕೇ ಬೇಕು, ಕಾರಣ ಇಂದಿಗೂ ಇರುವುದು ಪುರುಷ ಪ್ರಧಾನ ಸಮಾಜ. ವರದಕ್ಷಿಣೆ, ವರೋಪಚಾರ, ವರದಕ್ಷಿಣೆಗಾಗಿ ಕೊಲೆ, ಮಾನಸಿಕ ಹಿಂಸೆ, ಪೀಡನೆಗಳಿಂದ ಮಹಿಳೆಯಿನ್ನೂ ಹೊರತಾಗಿಲ್ಲ. ಲಾಯರ್, ಜಡ್ಜ್, ಪೊಲೀಸ್, ಪ್ರೊಫೆಸರ್ ಎಂದು ಹೊರಗೆ ದುಡಿದರೂ ಮನೆಯಲ್ಲಿ ಗಂಡ, ಅತ್ತೆ, ನಾದಿನಿ, ಭಾವನವರ ಕಾಟ ತಡೆದು, ತುಟಿಕಚ್ಚಿ ಸಹಿಸಿ ಬದುಕುವ ಮಹಿಳೆಯರೆಷ್ಟಿಲ್ಲ? ಇನ್ನು ಭಾರತದ ಕಾನೂನಿನ ಬಗ್ಗೆ, ಅಲ್ಲಿನ ದುರ್ಗಂಧದ ಬಗ್ಗೆ ಗೊತ್ತಿರುವಾಗ ಒಂಟಿ ಹೆಣ್ಣೊಬ್ಬಲು ಕಾನೂನಿನ ಮೊರೆ ಹೊಕ್ಕಿ ಹೋದರೆ ಅಲ್ಲಿರುವ ಬೇಲಿಯೇ ಎದ್ದು ಹೊಲ ಮೇಯುತ್ತದೆ! ಮೀಡಿಯಾ ಇರುವ ವಿಚಾರವನ್ನು ತಿರುಚಿ ಪ್ರಸಾರ ಮಾಡುತ್ತದೆ! ಹೀಗಿರುವಾಗ ಹೆಣ್ಣಿಗೆ ಸದೃಢತೆಯಿಂದ ತನ್ನ ಜೀವನ ನಡೆಸಲು ಮಹಿಳಾ ಮೀಸಲಾತಿ ಅಡಿಯಲ್ಲಾದರೂ ಕೆಲಸ ದೊರೆತು, ತನ್ನ ಕಾಲ ಮೇಲೆ ತಾನು ನಿಂತು, ದಿಟ್ಟಳಾಗಿ, ಸ್ವತಂತ್ರ ಬದುಕು ಅನಿವಾರ್ಯವಲ್ಲವೇ?

ಇನ್ನು ಜಾತಿಗಳ ಬಗ್ಗೆ. ಆಯಾ ಜಾತಿಗಳಿಗೆ ಅದರದ್ದೇ ಆದ ಸಂಸ್ಕೃತಿಯಿದ್ದು ಸರಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪಟ್ಟಿಯಿದೆ. ಬುಡಕಟ್ಟು ಜನಾಂಗಗಳು ಹಲವು ಇನ್ನೂ ಕಾಡಲ್ಲೇ ಇವೆ. ಹಾಡುಗಾರ ಹನುಮಂತನ ಜೀವನದ ಬಗ್ಗೆ ನಾವು ನೋಡಿ, ಕೇಳಿ ತಿಳಿದವರಾಗಿದ್ದೇವೆ. ಅಂತೆಯೇ ಅಂತಹ ಜನರಿಗೆ ಮೀಸಲಾತಿ ಸಿಕ್ಕಿದಾಗ ಆ ಜನರೂ ಪ್ರಪಂಚದ ಮುಖ್ಯ ವಾಹಿನಿಗೆ ಬರಲು ಅವಕಾಶ ಸಿಗುವುದಲ್ಲವೇ? ಹಾಗಾಗಿ ಮೀಸಲಾತಿ ತಪ್ಪೆನಿಸುವುದಿಲ್ಲ. ಇದನ್ನು ಇನ್ನೂ ಒಂದಷ್ಟು ವರುಷಗಳವರೆಗೆ ಮಾಡಬಹುದು ಎಂಬುದು ನನ್ನ ಅನಿಸಿಕೆ.

ನಿಜವಾಗಿ ಬುದ್ಧಿವಂತನಾದವನಿಗೆ, ಉತ್ತಮ ಅಂಕಗಳನ್ನು ಪಡೆದವನಿಗೆ ಕೆಲಸ ಸಿಗಲೇ ಬೇಕು. ಮೀಸಲಾತಿಗಳು ಇದನ್ನು ತಡೆಯುತ್ತವೆ ಎಂಬ ಮಾತೂ ನಿಜ. ಆದರೆ ಲಂಚ ತಾಂಡವವಾಡುತ್ತಿರುವ ಇಲ್ಲಿ ಅಂಕಗಳೂ, ತಿದ್ದುವಿಕೆಯೂ ದುಡ್ಡಿನ ಮೇಲೇ ನಡೆದರೇ? ಆಗ ಸಿರಿವಂತರಿಗೇ ಎಲ್ಲಾ ದೊರೆತು ಬಡವ ಮತ್ತೂ ಬಡವನಾಗುವುದಿಲ್ಲವೇ? ಅದರ ಬದಲು ಅರ್ಹರಿರುವ ಎಲ್ಲಾ ವರ್ಗದ ಈ ಮೀಸಲಾತಿಯಿಂದಲಾದರೂ ಜನರಿಗೂ ಸಿಗಲಿ ಕೆಲಸಗಳು! ಮತ್ತೆ ಓದಿ ಬರೆದು ಉನ್ನತ ಅಂಕಗಳ ಪಡೆದವ ಮಾತ್ರ ಒಂದು ಕೆಲಸವನ್ನು ಚೆನ್ನಾಗಿ ನಿಭಾಯಿಸಬಲ್ಲ ಎನ್ನುವುದು ತಪ್ಪು. ಕೆಲವೊಮ್ಮೆ ಕಾಮನ್ ಸೆನ್ಸ್, (ಸಾಮಾನ್ಯ ಜ್ಞಾನ).ಅನುಭವಗಳೂ ಬೇಕಾಗುತ್ತವೆ. 
  
ಹುಟ್ಟಿನಿಂದಲೇ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಡಾಕ್ಟರ್  ಒಬ್ಬರಿಗೆ ಹಳ್ಳಿಯಲ್ಲಿ ಬಂದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದರೆ ಅವರ ಹಣದ ಲೆಕ್ಕಾಚಾರ ಹಳ್ಳಿಗರಂತೆ ಹತ್ತಿಪ್ಪತ್ತು ರೂಪಾಯಿಗಳಲ್ಲಿ ಇರುವುದಿಲ್ಲ, ಬದಲಾಗಿ ಸಾವಿರಗಳಲ್ಲಿರುತ್ತದೆ. ಕಡುಬಡವರಾದವರಿಗೆ ತಮ್ಮ ಆರೋಗ್ಯ ಸುಧಾರಿಸಲು ಸಾಧ್ಯವೇ? ಅದೇ ಹಳ್ಳಿಯಲ್ಲೇ ಬೆಳೆದು ವೈದ್ಯನಾದವನಿಗೆ ಆ ಪರಿಸರದ ಜನರ ಕಷ್ಟಗಳ ಸಂಪೂರ್ಣ ಅರಿವಿರುತ್ತದೆ. ಶಾಲೆಯ ಶಿಕ್ಷಕ ಉತ್ತಮ ಅಂಕ ಪಡೆದು ತನ್ನ ವಿಷಯದಲ್ಲಿ  ನುರಿತವನಾದರೆ ಸಾಲದು. ಆಟೋಟ ಸ್ಪರ್ಧೆಗಳು, ಸಭಾ ಸಮಾರಂಭಗಳು, ಬಂದವರ ಸ್ವಾಗತ, ಕಟ್ಟಡ ರಿಪೇರಿ, ಟಾಯ್ಲೆಟ್ ನಿಂದ ತರಗತಿ ಕೋಣೆ, ಶಾಲಾ ವಾತಾವರಣ ಸ್ವಚ್ಛತೆ, ಪರಿಸರ ಜಾಗೃತಿ, ಸ್ಥಳೀಯ ಪರಿಸರದ ಮಹತ್ವ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ವಿದ್ಯಾರ್ಥಿಗಳನ್ನು ವಿವಿಧ ಕಲಾ ಸ್ಪರ್ಧೆಗಳಿಗೆ ತಯಾರುಗೊಳಿಸುವ ಕಲೆಯನ್ನೂ ಅರಿತಿರಬೇಕು. ಇದಕ್ಕೆ ಅವನು ಚಿಕ್ಕಂದಿನಿಂದ ಸರ್ವ ಜಾತಿಯ ಜನರೊಂದಿಗೂ ಕಲೆತು, ಬೆಳೆದು ಕಲಿತಿರಬೇಕು. ಕೇವಲ ನಗರದ ಶಾಲೆಗಳಲ್ಲಿ ಓದಿ ಅಂಕಗಳ ಪಡೆದ ಮಾತ್ರಕ್ಕೆ ಬರುವುದಿಲ್ಲ. ಅದಕ್ಕೆ ಭಾರತದಲ್ಲಿ ಪ್ರತಿ ಕೆಲಸಕ್ಕೂ ಬೇರೆ ಬೇರೆ ಜಾತಿ, ಧರ್ಮ, ಹಳ್ಳಿ, ಪಟ್ಟಣ, ಮಹಿಳೆ ಹೀಗೆ ಒಂದಾಗಿದ್ದಾಗ ಮಾತ್ರ ವಿವಿಧತೆಯಲ್ಲಿ ಏಕತೆ ಕಾಣಲು ಸಾಧ್ಯ. ನೀವೇನಂತೀರಿ?
@ಪ್ರೇಮ್@
19.06.2020

ಗುರುವಾರ, ಜೂನ್ 18, 2020

1449. ಹುಟ್ಟು ಸಾವುಗಳ ನಡುವೆ

ಹುಟ್ಟು ಸಾವುಗಳ ನಡುವೆ

ಹುಟ್ಟು-ಸಾವುಗಳ ನಡುವಿನ ಮೂರು ದಿನದ ಬಾಳನ್ನು ನಾವು ಕ್ಷಣಿಕವೆಂಬುದ ಮರೆತು ನಮ್ಮ ಲೋಕವನ್ನೆ ಸೃಷ್ಟಿಸಿ ಅದರಲ್ಲೆ ಬದುಕುತ್ತಾ ಇರುವ ನಮನ್ನೆಚ್ಚರಿಸಲು ಬರಹಗಾರರೂ, ಚಿತ್ರಕಾರರೂ, ಭವಿಷ್ಯ ಚಿಂತಕರೂ ಸದಾ ಎಚ್ಚರಿಸುತ್ತಲೇ ಇರುತ್ತಾರೆ. ಇಲ್ಲೊಂದು ಚಿತ್ರವಿದೆ. ಜೀವನದ ಹಲವು ಹಂತಗಳನ್ನಿಲ್ಲಿ ತೋರಿಸಲಾಗಿದೆ. 

ಬಾಲ್ಯದಲ್ಲಿ ಅಮ್ಮನ ಆಸರೆಯಿಂದ ಬದುಕಕುವ ನಾವು ಮುಪ್ಪಿನಲ್ಲಿ ನಮ್ಮ ಮಕ್ಕಳನ್ನೇ ಆಶ್ರಯಿಸಿಕೊಳ್ಳುತ್ತೇವೆ. ಅದಕ್ಕೇ ಹಿರಿಯರು 'ಮಕ್ಕಳಿರಲವ್ವ ಮನೆತುಂಬ' , 'ಮಗನ ಪಡೆದರೆ ಮಾತ್ರ ಸ್ವರ್ಗ'  ಮೊದಲಾದ ಗಾದೆಗಳು ಅದನ್ನು ನೋಡಿಯೇ ಹುಟ್ಟಿರಬೇಕೇನೋ.
   
    ಜೀವನದಿ ನಾವು ನಟರು. ಜಗವೇ ನಾಟಕರಂಗ. ದೇವನೇ ಸೂತ್ರದಾರ. ಅವನು ಕುಣಿಸಿದಂತೆ ನಾವು ಕುಣಿಯಬೇಕು. ಇಂತಹ ಜಗದಿ ತಲೆಗೆ ಹಾಕಿದ ನೀರು ಕಾಲಿಗಿಳಿಯುತ್ತದೆ, ಅತ್ತೆಗೊಂದು ಕಾಲವಾದರೆ ಸೊಸೆ ಅತ್ತೆಯಾದಾಗ ಅವಳಿಗೂ ಅದೇ ಕಾಲ ಬರುತ್ತದೆ. ನಮ್ಮ ಕಾರ್ಯವನ್ನು ನಾವು ಸರಿಯಾಗಿ ಮಾಡಿದರೆ ಮಾತ್ರ ನಾವು ಅವಲಂಬಿಸುವಾಗ ಇತರರು ಅವರ ಕಾರ್ಯವನ್ನವರು ಸರಿಯಾಗಿ ಮಾಡುವರು. ಇಂದು ಅಹಂಕಾರದಿ ಮೆರೆದವ ಮುಂದೆ ಅಹಂ ತಗ್ಗಲೇ ಬೇಕು. ಸಾಗರಕೂ ಉಬ್ಬರವಿಳಿತವಿದೆಯಂತೆ.
    
    ಬದುಕು ಚಿಕ್ಕದು. ನಾವೂ ಸಂತಸದಿ ಬದುಕಿ, ಪರರ ಸಂತಸದಿ ಬಾಳ ಬಿಡೋಣ. ನೀವೇನಂತೀರಿ?
@ಪ್ರೇಮ್@
23.05.2020

1440. ಅಪ್ಪನ ನೆರಳಲ್ಲಿ...

ಅಪ್ಪನ ನೆರಳಲ್ಲಿ

    ಹೌದಲ್ಲವೇ? ಅಪ್ಪನೆಂದರೆ ಅಕಾಶ! ಧರ್ತೀ ಪೇ ಜೋ ರಬ್ ಹೋತಾ ಹೇ,ವೋ ಹೇ ಪಿತಾ... ತನ್ನ ಮಗುವಿನ ಕನಸುಗಳೆಲ್ಲ ರೂಪುಗೊಂಡಿರುವುದು ಪ್ರಜ್ಞಾವಂತ, ಜವಾಬ್ದಾರಿಯುತ, ದುಡಿಯುವ ಅಪ್ಪನ ಮೇಲೆ. ಒಬ್ಬ ಅಪ್ಪ ಪಣ ತೊಟ್ಟರೆ ಮಕ್ಕಳನ್ನು ಏನು ಬೇಕಾದರೂ ಮಾಡಬಲ್ಲ. ಅಪ್ಪನ ಮೆದುಳಿನಲಿ ಅಗಾಧ ಪರಿಶ್ರಮದೊಂದಿಗೆ ದೂರದೃಷ್ಟಿ, ಶಕ್ತಿ, ಆಲೋಚನೆ, ಆಯೋಜನೆಗಳೂ ಇವೆಯಲ್ಲವೇ?

     ಇದೇ ಅಪ್ಪ ತಿರುಗಿ ಬಿದ್ದರೆ ಸಂಸಾರವನ್ನು ಮೂರಾಬಟ್ಟೆ ಮಾಡಬಲ್ಲ, ಕಂಠಪೂರ್ತಿ ದುಡಿದುದನೆಲ್ಲ ಕುಡಿದು, ಹೆಂಡತಿಗೆ ಹೊಡೆದು, ಮಕ್ಕಳನ್ನೂ ಜರಿದು ಬೀದಿಪಾಲು ಮಾಡಬಲ್ಲ! ಹಸಿರು ತೋರಬೇಕಾದ ಜಗವ ಬರಡು ಮಾಡುವ ಶಕ್ತಿಯೂ ಅಪ್ಪನೆನುವ ಜೀವಿಗಿದೆ! ಅಣುವೊಂದು ಹಲವಾರು ಊರಿಗೆ ವಿದ್ಯುತ್ ಒದಗಿಸಿದಂತೆ ಬಾಂಬಾಗಿ ಹಲವಾರು ಊರುಗಳ ಸುಡಬಲ್ಲಂತೆಯೇ  ಅಪ್ಪನೆಂಬ ಪಾತ್ರ. 

  ಅಪ್ಪ ಒಂದು ಕಾಲದಲ್ಲಿ ಗಂಡು ಮಗು! ಗಂಡು ಮಗು ಜನಿಸಿತೆಂದರೇನೇ ಖುಷಿಪಡುವ ನಮ್ಮಲ್ಲಿ ತಂದೆ, ತಾಯಿ, ಅಕ್ಕ, ತಂಗಿ, ತಮ್ಮನಲ್ಲದೇ ಅತ್ತೆಯರಿಗೂ, ಚಿಕ್ಕಮ್ಮ, ದೊಡ್ಡಮ್ಮನವರಿಗೂ ಅವನು ಏನೋ ಸಾಧಿಸಬೇಕೆಂಬ ಹಂಬಲ, ತಮ್ಮ ಸಹಾಯಕ್ಕೆ ಬರಬಹುದೆಂಬ ಆಲೋಚನೆ ಇರುತ್ತದೆ. ಈ ಎಲ್ಲ ಜವಾಬ್ದಾರಿಗಳು ಅವನ ಮೇಲಿರುವಂತೆಯೇ ಜೀವನ ಸಂಗಾತಿಯ ತದನಂತರ ಮಕ್ಕಳ ಆಗಮನವಾಗುತ್ತದೆ. ಅಲ್ಲೂ ಸಂಬಂಧಗಳ, ಆಲೋಚನೆಗಳ, ಜವಾಬ್ದಾರಿಗಳ ಹೆಚ್ಚಳವಾಗುತ್ತದೆ. ಹಲವು ಸಲ ತನ್ನ, ತಂದೆ ತಾಯಿಯ, ಅಕ್ಕ ತಂಗಿಯರ, ಅತ್ತೆಯ ಹೀಗೆ ಎರಡು ಮೂರು ಕುಟುಂಬಗಳ ಜವಾಬ್ದಾರಿ ಬೇರೆ! ಅಪ್ಪ ಹೈರಾಣಾಗುವ ಸಮಯಕ್ಕೆ ಅವನಿಗೆ ಅರ್ಧಾಂಗಿಯಾಗಿ ಜೊತೆಯಾಗಿ ನಿಲ್ಲುವವಳು ಅಮ್ಮ. ಅಪ್ಪ ಸರಿಯಿದ್ದರೆ ಅಮ್ಮನೂ ಸರಿ. ಸಂಸಾರ ಸುಖ ಸಾಗರ. ಅಪ್ಪನೇನಾದರೂ ಎಡವಿದರೆ ಮಡದಿ ಮಕ್ಕಳು ಎಲ್ಲರೂ ಎಡವುವವರೇ. ಅಮ್ಮ ಎಡವಿದರೆ ಅಪ್ಪ ಸರಿಮಾಡಬಲ್ಲ, ಅಪ್ಪನೇ ಎಡವಿದರೆ ಬೇಲಿಯೇ ಎದ್ದು ಹೊಲ ಮೇಯುವಂತೆ! ಇಂದು ಹಲವಾರು ಮಕ್ಕಳು 'ಅಪ್ಪ' ಎಂಬ ಪದಕ್ಕೇ ಹೆದರುವರು, ಅಳುವರು, ನೋಯುವರು, ತವಕಿಸುವರು, ಆಸೆಪಡುವರು ಹಾಗೂ ಗುರಾಯಿಸುವರು. ಕಾರಣ ಅಪ್ಪನ ಗುಣ! ಅಪ್ಪನ ಪ್ರೀತಿ ಯಾರಿಗೆ ತಾನೇ ಬೇಡ ಹೇಳಿ? ಆದರೆ ಹಲವಾರು ಮನೆಗಳ, ಕುಟುಂಬಗಳ ಅಪ್ಪ ಜವಾಬ್ದಾರಿಗೆ ತಲೆಬಾಗಿ ಪ್ರೀತಿಯೆಂಬ ಪದವನ್ನೇ ಮರೆತಿರುವನು. 
     ಬೆಳಗ್ಗೆ ಮಕ್ಕಳು ಏಳುವ ಮೊದಲೇ ಮನೆ ಬಿಟ್ಟರೆ ಮನೆ ಸೇರುವಾಗ ಮಕ್ಕಳೆಲ್ಲಾ ಮಲಗಿರುತ್ತಾರೆ. ನಮಗೂ ಒಬ್ಬ ಅಪ್ಪ ಇದ್ದಾನೆ ಎಂದು ಅರಿವಾಗಲು ವೀಕೆಂಡ್ ಇಲ್ಲವೇ ಮಂತೆಂಡ್ ಬರಬೇಕಿತ್ತು.
  
   ಕೊರೋನಾ ಎಂಬ ಕಣ್ಣಿಗೆ ಕಾಣದ ಜೀವಿ ಹಲವಾರು ಜೀವಗಳ ಬಲಿ ತೆಗೆದುಕೊಂಡರೂ ಹಲವಾರು ಕುಟುಂಬಗಳ ಒಂದುಗೂಡಿಸಿತು. ಅಪ್ಪನ ನಿಜ ಗುಣದ ಪರಿಚಯ ಹಲವಾರು ಕುಟುಂಬಗಳಿಗೆ ಆಯಿತು. ಸದಾ   ದುಡಿಮೆಯೆಂದು ಓಡಾಡುತ್ತಿದ್ದ ಜೀವಕ್ಕೂ ಸ್ವಲ್ಪ ಆರಾಮ ದೊರೆಯಿತು.

     ತನಗೆ ಬಟ್ಟೆಯಿಲ್ಲದಿದ್ದರೂ ಮಕ್ಕಳಿಗೆ ಹೊಸ ಬಟ್ಟೆ ತರುವ, ತಾನು ಚಪ್ಪಲಿಯ ಧರಿಸದಿದ್ದರೂ ಮಕ್ಕಳಿಗೆ ಶೂ ತರುವ,ತಾನು ಉಣ್ಣದಿದ್ದರೂ ಮಡದಿ ಮಕ್ಕಳ ಹೊಟ್ಟೆ ತಣಿಸುವ, ತಾನು ನಡೆದೇ ಹೋದರೂ ಮಕ್ಕಳಿಗೆ ಗಾಡಿ ತರುವ ಅಪ್ಪನ ಹೃದಯದ ಆಳ ಅರಿತವರುಂಟೇ? ಹಾಗೆಯೇ ತಾನು ದುಡಿದುದ ತನ್ನೊಬ್ಬನಿಗೇ ಖರ್ಚು ಮಾಡಿ ಮಡದಿ ಮಕ್ಕಳಿಗೆ ನಿತ್ಯ ನರಕ ದರ್ಶನ ಮಾಡಿಸುವ ಅಪ್ಪನೆಂಬ ಪ್ರಾಣಿಯನು ತಿದ್ದುವವರುಂಟೇ?

 ನಮ್ಮ ಅಪ್ಪ ಹೇಗೇ ಇರಲಿ, ಇದ್ದಿರಲಿ,ನಾವು ಉತ್ತಮ ಜವಾಬ್ದಾರಿಯುತ ಅಪ್ಪನಾಗೋಣ. ನಮ್ಮ ಕುಟುಂಬವ ರಸ್ತೆಯಲಿ ಹಾಕದಿರೋಣ. ಕಾರಣ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ ಇಂದು. ನಮ್ಮ ಬಾಳಿಗೆ ಸಿಕ್ಕ ಭಾಗ್ಯದ ಲಕ್ಷ್ಮಿಯನ್ನು, ಮಕ್ಕಳನ್ನು ಸಂತಸವಾಗಿರುವಂತೆ ನೋಡಿಕೊಳ್ಳುವ ಅಪ್ಪ ನಾವಾಗೋಣ, ಅದಕ್ಕಾಗಿ ಜವಾಬ್ದಾರಿಯರಿತು  ಶ್ರಮಿಸೋಣ. ನೀವೇನಂತೀರಿ?
@ಪ್ರೇಮ್@
13.06.2020

ಬುಧವಾರ, ಜೂನ್ 3, 2020

1426. ಶಿಕ್ಷಕರ ಕಕ್ಷೆಯೊಳಗೆ-1

ಶಿಕ್ಷಕರ ಕಕ್ಷೆಯೊಳಗೆ-1

ಮಾತಿನ ತಿದ್ದುಪಡಿ..

ಅದಿನ್ನೂ ನನ್ನ ವೃತ್ತಿಯ ಮೊದಲ ದಿನಗಳು. ಆಗಷ್ಟೆ ಟಿ ಸಿ ಹೆಚ್ ಮಾಡಿ ಬಹಳ ಉತ್ಸಾಹದಿಂದ ನನ್ನ ರಾಜ್ಯಕ್ಕೇ ಹೆಚ್ಚಿನ ಅಂಕಗಳ ಕಂಡು ನಮ್ಮ ಪ್ರಶಿಕ್ಷಕರೇ ತಮ್ಮ ಪರಿಚಯದ ಶಾಲೆಗೆ ಕರೆದಿದ್ದರು. ಸಂತಸದಿಂದ ಹೋಗಿದ್ದೆ ಕೂಡಾ. ಹಾಗೆಯೇ ಶಾಲೆಗೆ ಸೇರಿಸಿಕೊಂಡರು ಕೂಡಾ. ನನಗೆ ಆಗ ಇಪ್ಪತ್ತೊಂದು ವರ್ಷ ವಯಸ್ಸು. ಮಕ್ಕಳನ್ನು ಕಂಟ್ರೋಲ್ ಮಾಡೋದು ಅಂದ್ರೆ ಕಷ್ಟ ಸಾಧ್ಯ. ಟ್ರೈನಿಂಗ್ ಆಗಷ್ಟೆ ಮುಗಿದಿತ್ತು. ಹೊಸ ರೂಮ್. ಅಲ್ಲಿ ಅಡಿಗೆ ಗೊತ್ತಿಲ್ಲದ ನಾನು ಮತ್ತು ಹತ್ತನೇ ತರಗತಿ ಪಾಸಾಗಿ ಆಗಷ್ಟೆ ಕಾಲೇಜು ಸೇರಿದ ನನ್ನ ತಮ್ಮ. ಅನುಭವಗಳ ಪೆಟ್ಟಿಗೆಯ ಕೀಯನ್ನು ನಿಮಗಾಗಿ ಓಪನ್ ಮಾಡುತ್ತಿರುವೆ.

2003ನೇ ಇಸವಿ. ಮೈಸೂರಿನ ದೀಪಾನಗರದ ದೀಪಾಶಾಲೆಯಲ್ಲಿ  ನಾನಾಗ ಶಿಕ್ಷಕಿಯಾಗಿದ್ದೆ. ಅದು ನನ್ನ ಮೊದಲ ಶಾಲೆ. ಹಳ್ಳಿಯ ಮಕ್ಕಳು ಕಡಿಮೆ ಫೀಸು, ಉತ್ತಮ ಆಂಗ್ಲ ಮಾಧ್ಯಮದ ಶಿಕ್ಷಣ ಸಿಗುತ್ತಿದ್ದ ಕಾರಣ ಅಲ್ಲಿಗೆ ಹೆಚ್ಚು ಬರುತ್ತಿದ್ದರು. ನನ್ನ ದಕ್ಷಿಣ ಕನ್ನಡದ ತುಳು ದಾಟಿಯ ಶುದ್ಧ ಕನ್ನಡ ಅಲ್ಲಿನ ಮಕ್ಕಳಿಗೆ ಅರ್ಥ ಆಗ್ತಿರ್ಲಿಲ್ಲ. ಅಲ್ಲಿನ ಮಕ್ಕಳ ಈ ಶೈಲಿಯ ಮಾತು ನನಗೆ ಹೊಸದು. ತುಂಬಾ ಫಾಸ್ಟ್, ಒರಟು ಮಾತು ಅಂತ ನಾನಂದು ಕೊಳ್ತಾ ಇದ್ದೆ. ನನ್ನ ಭಾಷಾ ಶೈಲಿ ನೋಡಿ ಅವರು ನನಗೆ 'ಕನ್ನಡ ಮಾತಾಡಿ ಮಿಸ್" ಅಂತಿದ್ರು! ಏಕೆಂದರೆ ಅಲ್ಲಿನ ಮಕ್ಕಳಿಗೆ ನನ್ನ ಕನ್ನಡ ಅರ್ಥವೇ ಆಗುತ್ತಿರಲಿಲ್ಲ! ಹೋಗ್ಲಾ, ಬಾರ್ಲಾ, ತಿನ್ಲಾ ಭಾಷೆ ಅವರದು!

  ಮಾತೆತ್ತಿದರೆ ಗೆಳೆಯರಿಗೆ ಮನೆಯ ಭಾಷೆಯಲ್ಲೆ ಬೈತಾ ಇದ್ರು. ನಿನ್ ಮುಖಕ್ಕೆ ಮಂಗ್ ಳಾರ್ತಿ ಎತ್ತ, ನಿನ್ ಬಾಯಿಗ್ ಮಣ್ಣಾಕ, ನಿನ್ ಹೊಟ್ಟೆಗ್ ಬೆಂಕಿ ಹಾಕ... ಹೀಗೆ. ನನಗೆ ಅದನ್ನು ಕೇಳಿ ಬೇಸರವಾಗುತ್ತಿತ್ತು. ಒಬ್ಬರಿಂದ ಮತ್ತೊಬ್ಬರಿಗೆ ಇವು ರವಾನೆಯಾಗುತ್ತಿದ್ದವು. ಪೋಷಕರು ಮನೆಯಲ್ಲಿ ಹೇಳಿದ ವಾಕ್ಯಗಳು ಶಾಲೆಯಲ್ಲಿ ಮಕ್ಕಳ ಬಾಯಿಯಿಂದ ಇತರ ಮಕ್ಕಳಿಗೆ ಪ್ರಯೋಗವಾಗುತ್ತಿದ್ದವು. ಮೈ ಉರಿಯುತ್ತಿದ್ದವು.  ಹೇಗಾದರೂ ಈ ಕೆಟ್ಟ ಭಾಷೆಯನ್ನು ಮರೆಸ ಬೇಕೆಂದು ಪಣ ತೊಟ್ಟೆ. ಅವರ ಭಾಷೆ, ಬೈಗುಳಗಳನ್ನು ಬದಲಾಯಿಸತೊಡಗಿದೆ.

ನಾನದನ್ನು ಬದಲಾಯಿಸಿ ಹೀಗೆ ಹೇಳಿ ಅಂತ ಹೇಳಿಕೊಟ್ಟ ವಾಕ್ಯಗಳು..
1. ನಿನ್ ಮುಖಕ್ ಪೌಡರ್ ಹಾಕ.
2. ನಿನ್ ಹೊಟ್ಟೆಗ್ ಪಾಯ್ಸ ಹಾಕ.
3. ನಿನ್ ಮುಖಕೆ ಫೇರ್ ಆಂಡ್ ಲವ್ಲಿ ಹಾಕ.
4. ನಿನ್ ಬಾಯಿಗ್ ಸಕ್ರೆ ಹಾಕ.
5. ನಿನ್ ಹೊಟ್ಟೆಗ್ ಒಬ್ಬಟ್ ಹಾಕ..
ಈ ಘಟನೆ ನನ್ನ ವೃತ್ತಿಯ ಮೊದಲ ಅನುಭವ.ನೆನೆಸಿಕೊಂಡರೆ ಈಗ ನಗು ಬರುತ್ತದೆ.ಆದರೆ ಮಕ್ಕಳ ಕೆಟ್ಟ ಮಾತನ್ನು ಬದಲಾಯಿಸಿದ ಸಂತಸ ಹಾಗೂ ಹೆಮ್ಮೆ ಇಣುಕುತ್ತದೆ. ನಿಮಗೇನನಿಸಿತು?
ಧನ್ಯವಾದಗಳೊಂದಿಗೆ...
@ಪ್ರೇಮ್@
04.11.2019

ಮಂಗಳವಾರ, ಮೇ 26, 2020

1424. ರಾವಣ

ರಾವಣ

ರಾವಣಾಸುರನಿಗೆ ಹತ್ತು ತಲೆಗಳೆಂಬ ಪ್ರತೀತಿ. ಅಂದರೆ ಅವನು ಒಮ್ಮೆಲೇ ಹತ್ತು ರೀತಿ ವಿವಿಧ ಯೋಚನೆಗಳನ್ನು ಮಾಡಬಲ್ಲ ಶಕ್ತಿಯನ್ನು ಹೊಂದಿರುವ ಬುದ್ಧಿವಂತನಾಗಿದ್ದ. ಈಗಿನ ಹಂಲಿಕ್ಯಾಪ್ಟರ್ ಗಳಂತೆ ಆಗಿನ ಕಾಲದಲ್ಲೆ ಅವನಿಗೆ ಓಡಾಡಲು ಪುಷ್ಪಕ ವಿಮಾನವಿತ್ತು. ಯಾರ ಮಾತನ್ನೂ ಕೇಳದ ತನಗೆ ತೋಚಿದಂತೆ ಮಾಡುವ ಪಾತ್ರ ರಾವಣನದು. ಈ ಪಾತ್ರ ಹೊಸದಲ್ಲ, ಹಲವಾರು ಸಿನೆಮಾಗಳ ವಿಲನ್ ಗಳದ್ದು ಇದೇ ಪಾಡು. ಹಾಗಾಗಿ ಅವರ ಅವನತಿಯನ್ನು ಅವರೇ ತಂದುಕೊಳ್ತಾರೆ. ರಾವಣನದ್ದೂ ಇದೇ ರೀತಿಯ ಜೀವನ.
    ಸಣ್ಣದೊಂದು ಆಸೆ, ಸೀತೆಯನ್ನು ತನ್ನವಳಾಗಿಸಬೇಕೆಂಬುದು. ಅದೇ ಅವನ ಬದುಕಿಗೆ ಮುಳುವಾಗಿ 'ರಾವಣ ಹೆಣ್ಣಿನಿಂದ ಕೆಟ್ಟ' ಎಂಬ ಮಾತುಳಿಯುವಂತೆ ಮಾಡಿತು. ತನಗೇನೇ ಬೇಕೆನಿಸಿದರೂ ಪಡೆದೇ ತೀರುತ್ತೇನೆಂಬ ಅಹಂಕಾರ ರಾವಣನಿಗೆ ಇತ್ತು.  ಆದರೆ ಸೀತೆಯನ್ನು ಕೊನೆವರೆಗೂ ಪಡೆಯಲು ಆಗಲೇ ಇಲ್ಲ.

   ಅಪ್ಪಟ ಶಿವಭಕ್ತ ರಾವಣ ಶಿವನನೊಲಿಸಲು ತಪಸ್ಸು ಮಾಡಿ ಆತ್ಮಲಿಂಗವ ಪಡೆದ. ಆದರೆ ದೇವತೆಗಳೆಲ್ಲರೂ ಸೇರಿ ಗಣಪನ ಮುಖಾಂತರ ಅವನಿಗದು ದಕ್ಕದಂತೆ ಎಚ್ತರವಹಿಸಿದರು. ಉತ್ತಮ ಬುದ್ಧಿಯ ತನ್ನ ತಮ್ಮನ ಮಾತನೆಂದೂ ಕೇಳದ ರಾವಣ ಅಧರ್ಮ ಸೂಚಕ ಪಾತ್ರ. ಅಧರ್ಮಕೆಂದೂ ಬೆಲೆಯಿಲ್ಲವೆಂದೂ, ಅದು ಸೋಲುವುದೆಂದೂ ಸಾರಿದ ಪಾತ್ರ.
@ಪ್ರೇಮ್@
10.05.2020

ಸೋಮವಾರ, ಏಪ್ರಿಲ್ 6, 2020

1341. ಸ್ನೇಹ ಸಂಗಮದ ಬಗ್ಗೆ

ಸ್ನೇಹಿತರೊಡನೆ ನಮ್ಮ ಸಂಗಮ..

   ಇದೀಗ ಕಾಲ ಮುಂದುವರೆದಿದೆ. ಜನಕರೆಲ್ಲ ಅಕ್ಷರಸ್ಥರಾದ ಕಾರಣ ಮಾತಿನ ಶಬ್ದ ಮಾಲಿನ್ಯ ಕಡಿಮೆಯಾಗಿ ತಂತ್ರಜ್ಞಾನದ ಇಂದಿನ ಆವಿಷ್ಕಾರಗಳಾದ ಸಾಮಾಜಿಕ ಜಾಲ ತಾಣಗಳಲ್ಲಿ ಬರಹ ರೂಪದ ಮಾತುಕತೆ ಹೆಚ್ಚಾಗಿದೆ. ಅದನ್ನು ದುರುಪಯೋಗ ಪಡಿಸಿಕೊಳ್ಳದೆ ತನಗೊಲಿದ ಬರವಣಿಗೆಯ ಜ್ಞಾನವನ್ನು ಇತರರಿಗೂ ಹಂಚಿ, ಅದೇ ರೀತಿಯ ಆಸಕ್ತ ಕವಿಗಳನ್ನು ಒಟ್ಟಿಗೆ ಸೇರಿಸಿ, ಅವರ ಅಭಿರುಚಿಗೆ ತಕ್ಕಂತೆ ತಾವೂ ಬೆಳೆಯುತ್ತಾ, ಇತರ ಕವಿಗಳನ್ನೂ ಬೆಳೆಸುವ ಕೆಲವೇ ಬೆರಳೆಣಿಕೆಯ ಗುಂಪುಗಳಲ್ಲಿ ಸ್ನೇಹ ಸಂಗಮವೂ ಒಂದು ಹಾಗೂ ಮುಂಚೂಣಿಯಲ್ಲಿರುವ ಗುಂಪು.
  ಕವಿಗಳ ಬರವಣಿಗೆ, ವಿಎಮರ್ಶೆ, ಮುಖ ಪರಿಚಯವಿರದಿದ್ದರೂ ಕವನದಿಂದ ಪರಿಚಯವಾದ ಬಗೆ ಇವುಗಳೊಂದಿಗೆ ಅಡ್ಮಿನ್ ಚಂದ್ರು ಸರ್ ಅವರ ಉತ್ತಮ ನಾಯಕತ್ವದ ಗುಣ, ಎಲ್ಲರನ್ನೂ ತನ್ನೊಡನೆ ಎಳೆದುಕೊಂಡು ಹೋಗುವ ಪರಿ ಗುಂಪಿನಲ್ಲಿ ಕವಿಹೃದಯದ ಬಂಧುಗಳ ಸ್ನೇಹವನ್ನು ಮಧುರವಾಗಿಸಿದ ಕವಿಮನಗಳ ಗುಂಪು ಇದಾಗಿದೆ..