ಗಣರಾಜ್ಯೋತ್ಸವದ ಮಹತ್ವ
ಎಲ್ಲರಿಗೂ ಈ ಹೊಸ ಕ್ಯಾಲೆಂಡರ್ ವರ್ಷದ ಹಾಗೂ ಈ ವರ್ಷದ ಉತ್ತರಾಯಣ ಪುಣ್ಯ ಕಾಲದ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಾ ವಿವಿಧ ಭಾಷೆ, ಜಾತಿ, ಮತ, ವರ್ಗ, ಪಂಗಡ, ಧರ್ಮ, ಸಂಸ್ಕೃತಿ, ವೇಷ ಭೂಷಣ, ಕಲೆ, ಸಾಶಿತ್ಯಗಳಿಂದ ಮಿಳಿತವಾಗಿ ವಿವಿಧತೆಯಲ್ಲಿ ಏಕತೆ ಸಾರುವ ದೇಶ ನಮ್ಮದು. ನಮ್ಮ ದೇಶದಲ್ಲಿ ಮಾತ್ರ ನಾವು ಕ್ರೈಸ್ತ ಕೃಪಾ ಕಟ್ಟಡದಲ್ಲಿ ಹೋಟೆಲ್ ದುರ್ಗಾ ಕೃಪ ಮತ್ತು ಭಾರತ್ ಕನ್ಸಲ್ಟೆನ್ಸಿ ಯಂತಹ ಫಲಕಗಳನ್ನು ಒಟ್ಟಿಗೆ ಕಾಣಲು ಸಾಧ್ಯ. ಇಂತಹ ಮಹಾನ್ ಕಲೆ ಸಂಸ್ಕೃತಿಯ ದೇಶ ಬ್ರಿಟಿಷರ ಕಪಿ ಮುಷ್ಟಿಯಿಂದ 1947 ಆಗಸ್ಟ್ 1947ನೆಯ ಮಧ್ಯ ರಾತ್ರಿ ಸ್ವಾತಂತ್ರ್ಯ ಪಡೆಯಿತು. ಗಾಂಧೀಜಿಯವರ ಶಾಂತಿ ಮಂತ್ರ, ಅಸಹಕಾರ ಚಳುವಳಿ ಪ್ರಪಂಚಕ್ಕೆ ಮಾದರಿಯಾಗಿ ಇಂದಿಗೂ ಭಾರತದ ಸ್ವಾತಂತ್ರ್ಯ ಸಮರದ ಕಥೆ ವಿಭಿನ್ನವಾಗಿ ನಿಂತಿದೆ. ಸ್ವಾತಂತ್ರ್ಯ ದೊರೆತ ಮೇಲೆ ಭಾರತ ದೇಶಕ್ಕೆ ತನ್ನದೇ ಆದ ಕಾನೂನು ಕಟ್ಟಳೆ, ತನ್ನದೇ ಒಂದು ನೀತಿ ಬೇಕಾಯಿತು. ರಾಜರ ಆಡಳಿತ ನಿಂತು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸುವ ಆಡಳಿತ ಬಂದಾಗ ಅದಕ್ಕೆ ಹೊಸ ಸಂವಿಧಾನ ಬೇಕಾಯಿತು. 1950ರ ಜನವರಿ 26 ರಂದು ಭಾರತ ತನ್ನದೇ ಆದ ಸಂವಿಧಾನವನ್ನು ಜಾರಿಗೊಳಿಸಿದ ದಿನ. ಅದಕ್ಕಿಂತ ಮೊದಲೇ 1949 ನವೆಂಬರ್ ಇಪ್ಪತ್ತಾರಕ್ಕೆ ಅದನ್ನು ಅಂಗೀಕರಿಸಿತು. 2023 ಈ ವರ್ಷ ನಾವು 74ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಿದ್ದೇವೆ. ಮುಂದಿನ ವರ್ಷ ಭಾರತವು ಗಣರಾಜ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಎನ್ನಲು ಖುಷಿ. ಆದರೆ ಜಾರಿಗೆ ತರಲು ಜನವರಿ 26 ನ್ನೇ ಏಕೆ ಇಟ್ಟರು ಬೇರೆ ದಿನಾಂಕ ಇರಲಿಲ್ಲವೇ? ಈ ಪ್ರಶ್ನೆಗೆ ನಾವು ಉತ್ತರ ಹುಡುಕುತ್ತಾ ಹೋದರೆ ನಮಗೆ ಕೆಲವೊಂದು ಅಂಶಗಳು ತಿಳಿಯುತ್ತವೆ.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ನಡೆದಾಗಲೇ ಜನವರಿ 26ರಂದು ಭಾರತದ ತಿರಂಗಾ ಹಾರಿಸಿ, ಧೈರ್ಯವಂತರೆಲ್ಲಾ ಒಟ್ಟಾಗಿ ಇಂದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಆಚರಿಸೋಣ ಎಂದು ಅವರವರೇ ಅಂದುಕೊಂಡು ಆ ಮೂಲಕ ತಮಗೆ ಅಂದೇ ಸ್ವಾತಂತ್ರ್ಯ ಸಿಕ್ಕಿತು ಎಂದು ಸ್ವಯಂ ಘೋಷಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆ ಅಂದು ಆಚರಿಸಿದ ದಿನ. ಅದರ ನೆನಪಿಗಾಗಿ ಅದೇ ಕಾರಣ ಇಟ್ಟು ಜನವರಿ ಇಪ್ಪತ್ತಾರಕ್ಕೇ ಏನಾದರೂ ಹೊಸದನ್ನು ಕೊಡಬೇಕು ಎಂದು ಅದೇ ದಿನವನ್ನು ನಮ್ಮ ಸಂವಿಧಾನವನ್ನು ಜಾರಿಗೊಳಿಸಲು ಇಟ್ಟುಕೊಂಡರು ಎಂಬುದು ತಿಳಿದು ಬರುತ್ತದೆ.
ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ನವದೆಹಲಿಯ ರಾಜಪಥದಲ್ಲಿ ಧ್ವಜಾವರೋಹಣ ಮಾಡುತ್ತಾರೆ. ಅಲ್ಲಿ ನಡೆಯುವ ಮಾರ್ಚ್ ಫಾಸ್ಟ್ ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಗೌರವ ವಂದನೆ ಸ್ವೀಕರಿಸುತ್ತಾರೆ. ಅವರೇ ಅದರ ಕಮಾಂಡರ್ ಇನ್ ಚೀಫ್ ಆಗಿರುತ್ತಾರೆ. ಅವರಿಗೆ ಗೌರವದ ನಂತರ ಮೆರವಣಿಗೆ ನಡೆಯುತ್ತದೆ. ಇದರಲ್ಲಿ ಭಾರತದ ಸಂಸ್ಕೃತಿ, ಪರಂಪರೆ, ಸಾಮರ್ಥ್ಯ, ಸಾಮಾಜಿಕ ಅಂಶಗಳನ್ನು ಪ್ರತಿನಿಧಿಸುವ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ಅನಾವರಣಗೊಳ್ಳುತ್ತವೆ. ಇದನ್ನು ನೋಡುವುದೇ ಚಂದ. ಇದರ ಜೊತೆ ಜೊತೆಗೆ ದೇಶದ ಪ್ರತಿಯೊಂದು ರಾಜ್ಯದ, ಜಿಲ್ಲಾ, ತಾಲೂಕು, ಗ್ರಾಮದ ಕೇಂದ್ರಗಳಲ್ಲಿ, ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಲ್ಲಿಯೂ ಧ್ವಜಾರೋಹಣ ಮಾಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ಭಾರತೀಯರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ತಮ್ಮ ದೇಶ ಪ್ರೇಮ ಮರೆಯುತ್ತಾ ಹೆಮ್ಮೆ ಪಡುವ ದಿನವಿದು.
ನಾವು ಪಠ್ಯ ಪುಸ್ತಕದಲ್ಲಿ ಓದಿ, ಕೇಳಿ ತಿಳಿದವರಾಗಿದ್ದೇವೆ ಏನೆಂದರೆ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಸಣ್ಣ ವಿದ್ಯಾರ್ಥಿಗಳಿಂದ ಹಿಡಿದು, ನಾಯಕರು, ಹಿರಿಯರು, ಮಹಿಳೆಯರು, ತಾಯಂದಿರೂ, ಬಡವರು, ಸಿರಿವಂತರು ಕೂಡಾ ಹೇಗೆ ಜಾತಿ, ಮತ, ಧರ್ಮದ ಬೇಧವಿಲ್ಲದೆ ಹೇಗೆ "ನಾವು ಭಾರತೀಯರು, ನಮ್ಮ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಬೇಕು" ಎಂಬ ಒಕ್ಕೊರಳ ಭಾವದಿಂದ ಒಂದಾಗಿ " ಒಗ್ಗಟ್ಟಿನಲ್ಲಿ ಬಲವಿದೆ" ಎಂದು ತೋರಿಸಿ ಭಾರತೀಯರು ಸ್ವಾತಂತ್ರ್ಯ ಗಳಿಸಿಕೊಂಡರು. ಗಲ್ಲಿನ ನೇಣಿಗೂ ಕೊರಳೊಡ್ಡಿ ಭಾರತ ಮಾತೆಗಾಗಿ ಹಲವಾರು ವರುಷ ಜೈಲಿನೊಳಗೆ ಕೊಳೆತು ಊಟ ತಿಂಡಿ ನಿದ್ದೆ ಇಲ್ಲದೆ ತಮ್ಮ ಜೀವ ತ್ಯಾಗ ಮಾಡಿ ಪಡೆದುಕೊಂಡ ಈ ಸ್ವತಂತ್ರ ಭಾರತವನ್ನು ನಾವು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಆಗಿದೆ. ಆದರೆ ಸಮಾಜ ಹಾಗೂ ಹಲವಾರು ಮಾಧ್ಯಮಗಳು ಇಂದು ದೇಶ ಪ್ರೇಮವನ್ನು ಬೆಳೆಸುವ ಬದಲಾಗಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಜಾತಿ, ಮತ, ಧರ್ಮಗಳ ಬೀಜ ಬಿತ್ತಿ, ಒಂದು ಮೇಲು ಇನ್ನೊಂದು ಕೀಳು ಎಂಬ ಭಾವವನ್ನು ರಾಜಕೀಯಕ್ಕಾಗಿ ಬಳಸಿ ಜನರ ಒಗ್ಗಟ್ಟನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ಇದು ಬಹಳ ತಪ್ಪು. ಒಬ್ಬ ಮಂತ್ರಿ, ಒಬ್ಬ ಎಮ್ಮೆಲೆ ಅಥವಾ ಎಂಪಿಗೆ ಸಿಗುವ ಸ್ಥಾನಮಾನ, ವ್ಯವಸ್ಥೆಗಳು ಒಬ್ಬ ಭಾರತೀಯ ಯೋಧನಿಗೆ ಸಿಗುತ್ತಿಲ್ಲ.
ಸ್ವತಂತ್ರ ಭಾರತಕ್ಕೆ ಬೇಕಾದ ಅದರಲ್ಲೂ ಜಾತ್ಯಾತೀತ ರಾಷ್ಟ್ರವೂ ಆದ ಭಾರತ ದೇಶವನ್ನು ಒಂದೇ ಕಾನೂನಿನ ಕೆಳಗೆ ತರುವ ಕಾರ್ಯ ಸುಲಭದ ಮಾತಲ್ಲ. ಅದಕ್ಕೆ ಭಾರತೀಯರು ಸಜ್ಜಾದರು. ಅದು ಭಾರತೀಯ ಸಂವಿಧಾನದ ಉಗಮಕ್ಕೆ ಕಾರಣ ಆಯಿತು. ವಿವಿಧ ಭಾಷೆ, ಹಲವಾರು ಜಾತಿ, ಮತ, ಧರ್ಮದ ಜನ, ವಿವಿಧ ವೇಷ ಭೂಷಣ ಕಲೆ ಸಂಸ್ಕೃತಿಗಳ ದೇಶ. ಶ್ರೀಯುತ ಜವಾಹರಲಾಲ ನೆಹರೂ ಅವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಶ್ರೀ ಭೀಮರಾವ್ ಅಂಬೇಡ್ಕರ್ ಅವರನ್ನು ಅವರ ಜ್ಞಾನದ ಮಹತ್ವ ಅರಿತು ನೇಮಿಸಿದರು. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ ಎಂ ಮುನ್ಶಿ, ಎನ್. ಗೋಪಾಲ ಸ್ವಾಮಿ ಅಯ್ಯಂಗಾರ್, ಅಡ್ವೈಸರ್ ಬಿ ಎನ್ ರಾವ್ ಮೊದಲಾದವರ ತಂಡ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವ ಮತ್ತು ಜ್ಞಾನದ ಸಹಾಯದಿಂದ ಭಾರತಕ್ಕೆ ಬೇಕಾದ ಉತ್ತಮವಾದ ಒಂದು ಸಂವಿಧಾನವನ್ನು ಜಾರಿಗೆ ತಂದರು. ಇದಕ್ಕೆ ಮೊದಲು ಅಂಬೇಡ್ಕರ್ ಅವರು ಅಮೇರಿಕಾದಂತಹ ಹಲವಾರು ದೇಶಗಳ ಸಂವಿಧಾನವನ್ನು ಓದಿ, ಮನನ ಮಾಡಿದ್ದರು.
ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ರಾಷ್ಟ್ರೀಯ ಹಬ್ಬವಿದು. ಇಡೀ ದೇಶಕ್ಕೆ ಬೇಕಾದ ಏಕ ರೀತಿಯ ಸಂವಿಧಾನವನ್ನು ಡಾಕ್ಟರ್ ಬಿ ಆ ಅಂಬೇಡ್ಕರ್ ಅವರ ಮಾರ್ಗದರ್ಶನ ಹಾಗೂ ಅಧ್ಯಕ್ಷತೆಯಲ್ಲಿ ಭಾರತ ಸಂವಿಧಾನದ ಕರಡು ಸಮಿತಿ ಹಲವಾರು ದೇಶಗಳ ಸಂವಿಧಾನವನ್ನು ಅಭ್ಯಸಿಸಿ ತನ್ನದೇ ಆದ ಮಹಾನ್ ದೇಶಕ್ಕೆ ಸರಿ ಹೊಂದುವಂತಹ ಅಚ್ಚುಕಟ್ಟಾದ ಒಂದು ಸಂವಿಧಾನವನ್ನು ತಯಾರಿಸಿ ಅದನ್ನು ನವೆಂಬರ್ 26 1949ರಂದು ಅದನ್ನು ಜಾರಿಗೊಳಿಸಿ ತದ ನಂತರ ಅದು ಸಾಧ್ಯ ಎಂದು ಅರಿತು 1950 ಜನವರಿ 26ರಂದು ಅದನ್ನು ಇಡೀ ದೇಶ ಅಂಗೀಕರಿಸಿದ ಶುಭದಿನವಿದು. ಭಾರತ್ ಮಾತಾ ಕೀ ಜೈ ಎನ್ನುವ ಭಾರತೀಯ ಕಂದರಿಗೆಲ್ಲ ಸಂತಸ ಸಂಭ್ರಮದ ದಿನ. ಈ ದಿನದ ರಾಷ್ಟ್ರದ ಹಬ್ಬಕ್ಕೆ ಜಾತಿ, ಮತ, ಧರ್ಮ, ವಿವಿಧ ಆಚರಣೆ, ಸಂಸ್ಕೃತಿ, ವೇಷ - ಭೂಷಣಗಳ ಹಂಗಿಲ್ಲ. ಆಚರಣೆ, ದೇಶಾಭಿಮಾನ, ಸಂತಸ ಅಷ್ಟೇ. ಜಗತ್ತಿನ ಮಗಳೆ ಜೈ ಭಾರತಿ ಎನ್ನಬೇಕು ನಾವೆಲ್ಲಾ. ಭಗತ್ ಸಿಂಗ್, ನೇತಾಜಿ, ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವೀರ ರಾಣಿ ಅಬ್ಬಕ್ಕ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ತಾಂತ್ಯ ಟೋಪೆ, ಕಿತ್ತೂರು ಚನ್ನಮ್ಮ, ಅರುಣಾ ಅಸಫ್ ಅಲಿ, ಬಾಲ ಗಂಗಾಧರ ತಿಲಕ್, ಲಾಲಾ ಲಜಪತ ರಾಯ್ ಮೊದಲಾದ ಅನೇಕ ನಾಯಕರ ಮುಂದಾಳತ್ವದಲ್ಲಿ ಜೀವವನ್ನೇ ತೊರೆದು ಹೋರಾಡಿ ಕೊನೆಯ ಕ್ಷಣದವರೆಗೂ ತಮ್ಮ ದೇಶಕ್ಕಾಗಿ ಹೋರಾಡಿ ಮಡಿದ, ದುಡಿದ ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರನ್ನೂ ನೆನೆಯೋಣ, ಗೌರವಿಸೋಣ. ಅನೇಕ ಮಹನೀಯರು , ಮಹಿಳೆಯರು ವೀರ ಮರಣಕ್ಕೆ ಬಲಿಯಾದರೆ, ಸ್ವಾತಂತ್ರ್ಯಕ್ಕೆ ಹೋರಾಡಿದ ತಪ್ಪಿಗೆ ಜೈಲಲ್ಲೇ ಊಟ ತಿಂಡಿ ಇಲ್ಲದೆ ಸತ್ತ ಭಾರತೀಯರು ಅದೆಷ್ಟೋ, ಗುಂಡಿನ ದಾಳಿಗೆ ಸಿಕ್ಕಿ ಸತ್ತವರ ಲೆಕ್ಕವೇ ಇಲ್ಲ. ಅಂತೆಯೇ ಮಕ್ಕಳನ್ನು ದೇಶಕ್ಕಾಗಿ ಕಳೆದುಕೊಂಡ ಮಾತೆಯರ ಆಕ್ರಂದನ ಅದೇನೋ. ಎಲ್ಲವೂ ದೇಶದ ಒಳಿತಿಗಾಗಿ, ಸ್ವತಂತ್ರ ಭಾರತಕ್ಕಾಗಿ. ಈ ದೇಶಭಕ್ತಿ ನಮ್ಮಲ್ಲಿ ಮತ್ತೆ ಉದಿಸಬೇಕಾಗಿದೆ. ನಾನು ಹಿಂದೂ, ನಾನು ಮುಸ್ಲಿಂ, ನಾನು ಕ್ರೈಸ್ತ,ನಾನು ಸಿಖ್, ನಾನು ಪಾರ್ಸಿ, ನಾನು ಬೌದ್ಧ ಎಂಬ ಹೆಮ್ಮೆ ಮನೆಯಲ್ಲೂ ಮನದಲ್ಲೂ ಖಂಡಿತಾ ಇರಲಿ, ಪ್ರತಿಯೊಬ್ಬರಲ್ಲೂ ತಮ್ಮ ಜಾತಿ, ಮತ, ಧರ್ಮದ ಬಗ್ಗೆ ಗೌರವವೂ ಇರಲಿ, ಆದರೆ ಭಾರತ ಮಾತೆಯ ಹೆಸರು ಬಂದಾಗ ಮೇಲಿನ ಎಲ್ಲವನ್ನೂ ಬದಿಗೊತ್ತಿ ನಾವೆಲ್ಲಾ ಭಾರತೀಯರಾಗಿ ಒಂದಾಗೋಣ. "ಸಾವಿರ ಮೈಲುಗಳ ಪ್ರಯಾಣವು ಕೂಡಾ ಒಂದೇ ಒಂದು ಮೊದಲ ಹೆಜ್ಜೆಯಿಂದ ಪ್ರಾರಂಭಗೊಳ್ಳುತ್ತದೆ" ಎಂದು ಸ್ವಾಮಿ ವಿವೇಕಾನಂದರು ಹೇಳಿರುವಂತೆ ದೇಶಭಕ್ತಿಯ ಈ ಸಂದೇಶ ಹಾಗೂ ಪಾಲನೆ ನಮ್ಮಿಂದಲೇ ಪ್ರಾರಂಭವಾಗಲಿ ಅಲ್ಲವೇ?ಇದೇ ಇಂದು ನಾವು ಕಲಿಯಬೇಕಾದ, ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ನಾವು ಕಲಿಸಬೇಕಾದ ದೊಡ್ಡ ಗುಣ. ತನ್ನನ್ನೂ ತನ್ನ ಧರ್ಮವನ್ನು ಆಚರಿಸಿಕೊಂಡು ಇತರ ಧರ್ಮದ ಜನರನ್ನು ಗೌರವಿಸುವ ಉದಾರ ಮನಸ್ಸಿoದು ಪ್ರತಿಯೊಬ್ಬ ಭಾರತೀಯ ಕಂದನಲ್ಲಿ ಮೊಳೆತು ಹೆಮ್ಮರವಾಗಿ ಬೆಳೆಯಬೇಕಿದೆ. ಸೈನಿಕರಿಗೆ ಗೌರವ, ಹೆಚ್ಚಿನ ಸ್ಥಾನಮಾನ ಸಿಗಬೇಕಿದೆ. ಕಷ್ಟ ಎಂದವನಿಗೆ ಸಹಾಯ ಒದಗಬೇಕಿದೆ. ಆಗಲೇ ಭಾರತದ ಉದ್ಧಾರ. ಅಂತೆಯೇ ರಾಷ್ಟ್ರ ಲಾಂಛನ, ರಾಷ್ಟ್ರ ಗೀತೆ, ದೇಶದ ಬಗ್ಗೆ ಪ್ರೀತಿ ಉಕ್ಕಿ ಹರಿಯಬೇಕಿದೆ. ದೇಶದ ಬಡತನ ದೂರವಾಗಿ ಪ್ರತಿ ಭಾರತೀಯ ನೆಮ್ಮದಿಯಿಂದ ಬದುಕಬೇಕು. ಅದರ ಜೊತೆ ಜೊತೆಗೆ ಭಾರತೀಯ ಸಂವಿಧಾನ, ರಾಷ್ಟ್ರೀಯ ಹಬ್ಬಗಳು, ಮತದಾನ, ದೇಶದ ಗೌರವ ಎಲ್ಲರ ಹಕ್ಕು. ಪ್ರತಿ ಕೆಲಸವನ್ನು ಬದಿಗೊತ್ತಿ ಇದನ್ನು ಗೌರವಿಸ ಬೇಕಿದೆ. ಪ್ರತಿಯೊಬ್ಬ ದೇಶದ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ತಾಯ್ನಾಡು, ತವರುಮನೆಯ ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯ ಇಲ್ಲ. ಇದು ಪರದೇಶದಲ್ಲಿ ದುಡಿದು ಕಷ್ಟ ಪಡುತ್ತಾ ಇರುವವರಿಗೆ ಗೊತ್ತು. ಆದಕಾರಣ ದೇಶ ಭಕ್ತಿಯನ್ನು, ಮಾತಾ ಪಿತೃಗಳಲ್ಲೂ ಶ್ರದ್ಧಾ ಭಕ್ತಿ, ಪ್ರೀತಿಯನ್ನು ಇರಿಸಿಕೊಳ್ಳೋಣ. ಎಲ್ಲರೊಂದಿಗೆ ಬೆರೆತು ಬಾಳುವ ವಿವಿಧತೆಯಲ್ಲಿ ಏಕತೆ ಪಾಲಿಸುವ ಮಂತ್ರ ಕಲಿಯೋಣ. ನಮೆಲ್ಲರ ಬೇರೆ ಬೇರೆ ಹೆಸರುಳ್ಳ ದೇವರಲ್ಲಿ ನಮಗೆ ಜನ್ಮ ಕೊಟ್ಟು, ಅನ್ನ ಕೊಟ್ಟು, ಜಾಗ ಕೊಟ್ಟು, ಸಾಕಿ ಸಲಹುತ್ತಿರುವ ದೇಶಕ್ಕೂ, ಪ್ರಕೃತಿಗೂ ಒಳಿತಾಗಲಿ ಎಂದು ಬೇಡಿಕೊಳ್ಳೋಣ ಅಲ್ಲವೇ? ದೇವರು ಒಬ್ಬನೇ, ನಾಮ ಹಲವು ಎನ್ನುತ್ತಾರೆ. ಯಾವ ದೇವರಾದರೂ ಸರಿ, ದೇಶಕ್ಕೂ, ಜನಕ್ಕೂ ಒಳಿತಾಗಲಿ ಎಂಬ ಹಾರೈಕೆ ನಮ್ಮ ಎಲ್ಲರ ಅಲ್ಲವೇ?
ಹೀಗೆ ಬಹಳ ಕಷ್ಟದಿಂದ ಹಾಗೂ ಧನ್ಯತೆಯಿಂದ ತಯಾರಾದ ಭಾರತದ ಸಂವಿಧಾನವನ್ನು , ಅದಕ್ಕೆ ಕಾರಣಕರ್ತರಾದರನ್ನೂ, ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ನೆನೆದು ಅವರಿಗೆ ಗೌರವವನ್ನು ಕೊಡುವ ಜೊತೆಗೆ ನಮ್ಮ ದೇಶದ ಸಂವಿಧಾನವನ್ನು ಗೌರವಿಸಿ ಅದನ್ನು ಪರಿಪಾಲಿಸುವ ಕರ್ತವ್ಯವನ್ನು ಕೂಡಾ ಮಾಡಬೇಕಾಗುತ್ತದೆ. ಅದರ ಜೊತೆ ಜೊತೆಗೆ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯ ದಿನವನ್ನು ಕೂಡಾ ಭಾರತೀಯರಾಗಿ, ಜಾತಿ ಮತ ಧರ್ಮ ಮರೆತು ಆಚರಿಸಿ ಗೌರವಿಸಬೇಕಿದೆ ಎಂದು ಎಲ್ಲರಿಗೂ ಅನ್ನಿಸುವುದಿಲ್ಲವೇ? ನೀವೇನಂತೀರಿ?
@ಹನಿಬಿಂದು@
13.01.2023