ಭಾನುವಾರ, ಫೆಬ್ರವರಿ 12, 2023

ಒಂದಿಷ್ಟು....170

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -170

ವೇದನೆಯನ್ನು ಮರೆಯಿರಿ. ನೋವಿನ ಬಗ್ಗೆ ಕಷ್ಟಗಳ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡಿರಿ. ಕಷ್ಟ ಮನುಷ್ಯನಿಗೆ ಅಲ್ಲದೆ ಮರಕ್ಕೆ ಬರುತ್ತದೆಯೇ? ಕಷ್ಟದ ಹಿಂದೆ ಸುಖ ಇದೆ. ಪ್ರತಿ ಕಷ್ಟದ ಮುಂದೆಯೂ ಸುಖದ ಸರಮಾಲೆ ಇದೆ, ಕೈ ಕೆಸರಾದರೆ ಬಾಯಿ ಮೊಸರು. ಆಳಾಗಿ ದುಡಿದವ ಅರಸಾಗಿ ಬಾಳುವ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಇದೆಲ್ಲ ಹಳೆಯ ಗಾದೆಗಳು. ಈಗ ಕಾಲ ಬದಲಾಗಿದೆ ಅಲ್ಲವೇ? ಕಾಲ ಬದಲಾಗಿದೆಯೇ, ನಾವು ಬದಲಾಗಿದ್ದೇವೆಯೇ ಅಥವಾ ನಾವೇ ಕಾಲವನ್ನು ಬದಲಾಯಿಸಿ ಬಿಟ್ಟಿದ್ದೇವೆಯೇ ಅದು ನಮಗೂ ಆ ದೇವರಿಗೂ ಗೊತ್ತು. ಆದರೆ ಮನುಷ್ಯರ ಸಂಖ್ಯೆ ಪ್ರಪಂಚದ ಎಲ್ಲಾ ಪ್ರಾಣಿಗಳ ಸಂಖ್ಯೆಗಿಂತ ಹೆಚ್ಚಾಗಿ, ತಿನ್ನಲು ಏನೂ ಇಲ್ಲದೆ ಬರ ಬಂದು, ಇದೀಗ ಹೆಚ್ಚಿನ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಅಷ್ಟೇ ಅಲ್ಲದೆ ಕೋಳಿ, ಕುರಿ, ಆಡು, ಹಂದಿ, ದಾನ, ಬಾತುಕೋಳಿ, ಉಡ, ನವಿಲು ಹೀಗೆ ಅನೇಕ ಪ್ರಾಣಿಗಳನ್ನು ತಿನ್ನುವ ಮಾನವ ಸಸ್ಯಗಳನ್ನು ಕೂಡಾ ಕಬಳಿಸುತ್ತಾ ಮಿಶ್ರಹಾರಿಯಾಗಿ ಮೆರೆದು ಉಳಿದ ಪ್ರಾಣಿಗಳ ಜೀವಕ್ಕೆ ಧಕ್ಕೆ ತರುವ ವಿಷಕಾರಿ ವಸ್ತುಗಳನ್ನು ಬಳಸುವುದು ಮಾತ್ರ ಅಲ್ಲ ಬದಲಾಗಿ ಇಡೀ ಜೈವಿಕ ವ್ಯವಸ್ಥೆಯ ಕೊಂಡಿಯನ್ನೆ ಕಳಚಿ ಬಿಟ್ಟಿದ್ದಾನೆ. ಇದರಿಂದ ಹಲವಾರು ಪ್ರಾಣಿ, ಪಕ್ಷಿ ಕೀಟಗಳ ಪ್ರಬೇಧಗಳು ಅಳಿವಿನ ಅಂಚಿನಲ್ಲಿವೆ. ಅಷ್ಟೇ ಯಾಕೆ? ಮಾನವರ ಮಕ್ಕಳೇ ಇಂದು ಹುಟ್ಟುವಾಗಲೇ ರೋಗ ಪೀಡಿತರಾಗಿ ಹುಟ್ಟುತ್ತಿದ್ದಾರೆ. ಕಾರಣ ವಿಷಕಾರಿ ವಸ್ತುಗಳ ಬಳಕೆ. 

ಮನುಜ ಬೇರೆ ಪ್ರಾಣಿ, ಪಕ್ಷಿ ಜೀವಿಗಳನ್ನು ಮಾತ್ರವಲ್ಲ, ತನ್ನನ್ನೇ ತಾನು ನಿತ್ಯ ವ್ಯಾವಹಾರಿಕ ಬುದ್ಧಿಯಿಂದಾಗಿ ತನ್ನನ್ನು ತಾನು ಸಾಯಿಸಿಕೊಳ್ಳುತ್ತಾ, ತನ್ನ ವಂಶವನ್ನು ಕೂಡಾ ರೋಗಿಷ್ಟರಾಗಿ ಮಾಡುತ್ತಾ, ಮುಂದೊಂದು ದಿನ ತಾನೂ ವಿಷಪೂರಿತನಾಗಿ ನೀರಿಲ್ಲದೆ ಸಾಯುವ ಪರಿಸ್ಥಿತಿ ಬಂದೀತು. ಕಾರಣ ಭೂಮಿಗೆ ಬೆರೆಸಿದ ವಿಷ ಸೇರುವುದು ನೀರು ಮತ್ತು ಆಹಾರದ ಮೂಲಕ ತನ್ನದೇ ಹೊಟ್ಟೆಗೆ. ನೀರಿಗೆ ಬೆರೆಸಿದ ವಿಷ ಸಾಗರ ಸೇರಿ ಮತ್ತೆ ಅಲ್ಲಿನ ಮೀನುಗಳ ಮೂಲಕ ನಮ್ಮ ಹೊಟ್ಟೆಯ ಒಳಗೆಯೇ ಸೇರುತ್ತದೆ ಅಲ್ಲವೇ? ಮಾಡಿದ್ದುಣ್ಣೋ ಮಹರಾಯ! ಮನುಜರಿಗೆ ಅದೇ ಮದ್ದು! ಪಾಕಿಸ್ತಾನ, ಲಿಬಿಯಾ, ಶ್ರೀಲಂಕಾದ ಜನರ ಪಾಡನ್ನು ನೋಡಿ ನಾವು ಕಲಿಯ ಬೇಕಾದುದು ಬಹಳಷ್ಟು ಇದೆ. 

ಈಗಂತೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಯುಗ. ತಾಂತ್ರಿಕ, ವೈಜ್ಞಾನಿಕ ಯುಗ. ಹಾಸಿಗೆ ಇದ್ದಷ್ಟು ಕಾಲು ಚಾಚುವ ಯುಗವಲ್ಲ ಇದು, ಸಾಲ ಮಾಡಿ ಹೊಸ ದೊಡ್ಡ ಹಾಸಿಗೆ ತರುವ ಯುಗ. ಅಲ್ಲದೆ ಬಜಾಜ್ ಫೈನಾನ್ಸ್, ಕ್ರೆಡಿಟ್ ಬೀ, ಮಹೀಂದ್ರ ಫೈನಾನ್ಸ್ ನಂತಹ ಸಾವಿರಾರು ಫೈನಾನ್ಸ್ ಕಂಪನಿಯವರು ತಾವೇ ಕಾಲ್ ಮಾಡಿ ನಿಮ್ಮ ಕಷ್ಟಕ್ಕೆ ನಾವು ಸಹಾಯ ಮಾಡುತ್ತೇವೆ, ಹೇಳಿ ನಿಮಗೆ ಎಷ್ಟು ಲೋನ್ ಬೇಕು ನಾವು ಕೊಡುತ್ತೇವೆ. ಇಪ್ಪತ್ತೈದು ಶೇಕಡಾ ಬಡ್ಡಿ ಕೊಟ್ಟರೆ ಸಾಕೆಂದು ದಿನ ದಿನ ಅವರೇ ಫೋನ್ ಮಾಡಿ ನಿಮ್ಮ ನಮ್ಮೆಲ್ಲರನ್ನೂ ವಿಚಾರಿಸಿ ಕೊಳ್ಳುತ್ತಾ ಇರುವಾಗ, ಮಲ್ಯ, ಅಂಬಾನಿ, ಅದಾನಿ ಎಲ್ಲರೂ ಕೋಟ್ಯಾಧಿಪತಿಗಳು ಕೋಟಿ ಕೋಟಿ ಲೋನ್ ಗಳಲ್ಲೆ ಬದುಕುತ್ತಿರುವಾಗ ಇನ್ನು ನಾವು ಸಾವಿರಗಳಲ್ಲಿ ತಿಂಗಳಿಗೆ ಒಂದು ದಿನ ಸಂಬಳ ಪಡೆಯುವವರು ಯಾವ ಲೆಕ್ಕ ಬಿಡಿ! 

ಇನ್ನು ಸಾಲ ಮಾಡಿ ಆದ್ರೂ ತುಪ್ಪ ತಿನ್ನು, ಸುಳ್ಳು ಹೇಳಿ ಆದ್ರೂ ಮದುವೆ ಮಾಡು ಎಂಬ ಈ ಕಾಲ, ಒಂದೆರಡು ಅಷ್ಟೇ ಅಲ್ಲ, ಸುಳ್ಳು ಹೇಳಿ ಹತ್ತಾರು ಮದುವೆ ಆದವರೂ ಇದ್ದಾರೆ. ಅಷ್ಟೇ ಅಲ್ಲ, ಸುಳ್ಳು ಹೇಳಿಯೇ ಬದುಕುವ, ಆ ಮೂಲಕ ಹಣ ಮಾಡುವ ಅದೆಷ್ಟೋ ಫೇಕ್ ಎನ್ನುವ ಸಂಘ ಸಂಸ್ಥೆಗಳು, ಜನರು, ಆಪ್ ಗಳು, ವೆಬ್ ಸೈಟ್ ಗಳು ನಿಮಗೆ ಚಂದ್ರನಲ್ಲಿ ಬೇಕಾದರೂ ಸೈಟ್ ತೆಗೆದು ರಿಜಿಸ್ಟರ್ ಮಾಡಿ ಕೊಡುತ್ತಾರೆ. ಹಣ ಕೊಟ್ಟರೆ ಸಾಕು ಜೊಮ್ಯಾಟೋದವ ಊಟದ ಜೊತೆ ನಿಮ್ಮ ಮನೆ ಮುಂದೆ ನೀವು ಇಷ್ಟ ಪಟ್ಟ ಶವರ್ಮಾದ ಡಬ್ಬಿ ಹಿಡಿದು ನಿಮ್ಮ ಮನೆ ಬಾಗಿಲು ಬಡಿಯುವ ಕಾಲದಲ್ಲಿ, ಜೇನು ತುಪ್ಪ ಎಲ್ಲಾ ಜನರಿಗೆ ಬೇಕಾದಷ್ಟು ಸಿಗಲು ಸಾಧ್ಯ ಇಲ್ಲ, ಕಾರಣ ಜೇನು ನೊಣಗಳ ಸಂಖ್ಯೆ ಕಡಿಮೆ ಆಗಿರುವುದು ಮತ್ತು ಹೂವುಗಳ ಸಂಖ್ಯೆ ಕಡಿಮೆ ಆದ ಕಾರಣ ಹಲವಾರು ಕಿಣ್ವಗಳನ್ನು ಬಳಸಿ ಲ್ಯಾಬ್ ನಲ್ಲಿ ಜೇನುತುಪ್ಪ ತಯಾರಿಸುವ ಕಾರ್ಯ ಮಾಡುವ ವಿಜ್ಞಾನಿಗಳು ಇರುವ ಈ ಕಾಲದಲ್ಲಿ, ಶಿಕ್ಷಕರೇ ಇಲ್ಲದೆ ಆನ್ ಲೈನ್ ನಲ್ಲಿ ಮೊಬೈಲ್ ನೋಡಿಯೇ ತಮ್ಮಷ್ಟಕ್ಕೆ ತಾವೇ ಕಲಿತು ಹಣ ಮಾಡುವ, ಹೆಸರು ಮಾಡುವ ಈ ಕಾಲದಲ್ಲಿ ಇನ್ನೂ ನಾವು ಮನೆ ಗೆದ್ದು ಮಾರು ಗೆಲ್ಲು, ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂಬ ಗಾದೆಗಳನ್ನು ಹಿಡಿದು ಕುಳಿತರೆ ಆದೀತೆ? 

ಇದೀಗ ಆ ದೇವರೇ ನಮ್ಮ ಮನೆಗೆ ಬರ ಬೇಕಾದರೂ ಮೊದಲು ಫೋನ್ ಮಾಡಿ, ನೀವು ಗೇಟಿನ ಬೀಗ ತೆಗೆದು ನಂತರ ಬಾಗಿಲಿನ ಶಟ್ಟರ್ ಬಾಗಿಲಿನ ಬೀಗ ತೆಗೆದು, ನಂತರ ಬಾಗಿಲು ತೆರೆದು " ಒಳಗೆ ಬನ್ನಿ" ಎಂದು ಅನುಮತಿ ಇತ್ತರೆ ಮಾತ್ರ ಒಳಗೆ ಬರಲು ಸಾಧ್ಯ ಆಗುವ ಈಗಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಮಾಡಿದ ಎಲ್ಲಾ ವಸ್ತುಗಳನ್ನು ತಿನ್ನಲು ಮನೆಗೆ ಬಂದವರಿಗೆ ಸಾಧ್ಯ ಇಲ್ಲ, ಕಾರಣ ಅವರು ಬಿಪಿ , ಶುಗರ್ ಪೇಷೆಂಟ್ ಗಳು! ಯಾವ ಬಡಪಾಯಿ ಮಕ್ಕಳು ಆಸೆಯಿಂದ ಎಲ್ಲವನ್ನೂ ತಿನ್ನಲು ಕಾಯುತ್ತಿರುವರೋ ಅವರನ್ನು ನೆಂಟರ, ಬಂಧುಗಳ ಹಾಗೆ ಮನೆಗೆ ಕರೆಯುವರು ಯಾರೂ ಇಲ್ಲ! ಹಲ್ಲಿದ್ದವನಿಗೆ ತಿನ್ನಲು ಕಡ್ಲೆ ಇಲ್ಲ! ಮನೆಯಲ್ಲಿ ಕಡ್ಲೆ ಇದ್ದವನ ಬಾಯಲ್ಲಿ ಹಲ್ಲುಗಳೆ ಇಲ್ಲ! ಇದುವೇ ಜೀವನ!ನೀವೇನಂತೀರಿ? 

ಮಕ್ಕಳಿಗೆ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಮೊಬೈಲ್ ಗಳು ರಾತ್ರಿ ಬೆಳಗಾಗುವವರೆಗೆ ಮತ್ತೆ ಬೆಳಗ್ಗೆ ರಾತ್ರಿ ಆಗುವವರೆಗೆ ಎಲ್ಲಾ ಮಕ್ಕಳ ಕೈಯಲ್ಲೂ ರಾರಾಜಿಸುತ್ತಿವೆ. ಇನ್ನು ಓದು ಎಲ್ಲಿಂದ ಬರಬೇಕು? ಬೇಸಿಗೆ ಬಂತು, ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಬರ. ಮನೆಯ ಮುಂದೆಯೋ ಟೆರೇಸ್ ಮೇಲೆಯೋ ಪಕ್ಷಿಗಳಿಗಾಗಿ ಸ್ವಲ್ಪ ನೀರು ಇಡೋಣ. ಮನೆಯ ನಾಯಿ ಹೆಣ್ಣಾಗಿದ್ದರೆ ಅದಕ್ಕೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ. ಅದರ ಬದಲು ಎಳೆಯ ಹಾಲು ಕುಡಿಯುವ ನಾಯಿ ಮರಿಗಳನ್ನು ನಿರ್ದಾಕ್ಷಿಣ್ಯವಾಗಿ ತಂದು ರಸ್ತೆಯಲ್ಲಿ ಬಿಟ್ಟರೆ, ಮುಂದಿನ ಜನ್ಮದಲ್ಲಿ ಆ ಮರಿಗಳು ನಿಮ್ಮ ಮಕ್ಕಳಾಗಿ ಹುಟ್ಟಿ ವೃದ್ಯಾಪ್ಯದಲ್ಲಿ ನಿಮ್ಮನ್ನು ರಸ್ತೆಯಲ್ಲಿ ಬಿಟ್ಟು ಬರುವರು ಇಲ್ಲವೇ  ವೃದ್ಧಾಶ್ರಮದಲ್ಲಿ ನೂಕಿ ಬರುವರು. ನೆನಪಿರಲಿ , ನಿಂತು ತಲೆಗೆ ಹಾಕಿದ ನೀರು ಕಾಲಿಗೇ ಸುರಿದು ಬರುವುದು ಮತ್ತು ನಾಳಿನ ನಮ್ಮ ಬೆನ್ನು ನಮಗೆ ಕಾಣದು. ಜಾಗ್ರತೆ. ನೀವೇನಂತೀರಿ?
@ಹನಿಬಿಂದು@
04.02.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ