ಭಾನುವಾರ, ಫೆಬ್ರವರಿ 12, 2023

ಒಂದಿಷ್ಟು....171

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -171

ಚಳಿಗಾಲ ಹೋಗಿ ಬೇಸಿಗೆ ಕಾಲ ಬರುತ್ತಿದೆ. ವಿಪರೀತ ಸೆಕೆ ನಮ್ಮ ದೇಹವನ್ನು ನಿರ್ಜಲೀಕರಣ ಮಾಡಿ ಬಿಡುತ್ತದೆ. ತಾಜಾ ಹಣ್ಣು, ತರಕಾರಿಗಳನ್ನು ನಾವು ಬಳಸಬೇಕಿದೆ. ಸಾಧ್ಯವಾದಷ್ಟು ಮನೆಯ ಸುತ್ತಮುತ್ತ ಬೆಳೆಯುವ ಹಣ್ಣು, ತರಕಾರಿ, ಸೊಪ್ಪು ಇವುಗಳನ್ನು ಬಳಸಿದರೆ ಆರೋಗ್ಯ ಹಿತವಾಗಿ ಇಟ್ಟುಕೊಳ್ಳಲು ಸಾಧ್ಯ. ಇತ್ತೀಚೆಗಂತೂ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಹೆಚ್ಚಿನ ಜನರು ಹೃದಯಾಘಾತದಿಂದ ಸಾವನ್ನಪ್ಪುವ ದುರಂತವನ್ನು ದಿನನಿತ್ಯ ಪತ್ರಿಕೆಯಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ, ವಾರ್ತೆಗಳಲ್ಲಿ ನೋಡುತ್ತಿದ್ದೇವೆ. ಇದನ್ನು ಕರೋನ ಲಸಿಕೆ ಪಡೆದು ಹೀಗಾಗಿದೆ ಎಂದು ಕೆಲವು ಜನ ಗೊತ್ತಿಲ್ಲದೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕರೋನಾ ಲಸಿಕೆ ಹಲವಾರು ನುರಿತ ವೈದ್ಯರು, ವೈದ್ಯ ವಿಜ್ಞಾನಿಗಳು ಹಲವಾರು ತಿಂಗಳುಗಳ ಕಾಲ ರಾತ್ರಿ ಹಗಲೆನ್ನದೆ, ಊಟ - ನಿದ್ರೆ ಬಿಟ್ಟು ಜನರನ್ನು ಆ ವೈರಸ್ ನಿಂದ ರಕ್ಷಿಸಲು ಕಂಡು ಹಿಡಿದುದೇ ಹೊರತು ಜನರ ಜೀವವನ್ನು ಬಲಿ ಪಡೆಯಲಿಕ್ಕೆ ಅಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಲಸಿಕೆಯನ್ನು ಎಲ್ಲರೂ ಪಡೆಡಿರುವರು. ಸುಳ್ಳು ಸುದ್ದಿ ಹಬ್ಬಿಸುವ ಕಾರ್ಯ ಸುಲಭ. ಅದರ ಸಮರ್ಥನೆ ಕಷ್ಟ. ಸರಿಯಾದ ಮಾಹಿತಿ  ಇಲ್ಲದೆ ಸಾಮಾಜಿಕ ಕಾಲ ತಾಣಗಳು ಕೊಟ್ಟ ಸುಳ್ಳು ಸುದ್ದಿಗಳನ್ನು ಕೇಳದೆ ನಮ್ಮ ನಿತ್ಯದ ಆರೋಗ್ಯದ ಕಡೆ ಗಮನ ಹರಿಸಬೇಕು. 

ಎಲ್ಲಾ ಹಣ್ಣು ತರಕಾರಿಗಳನ್ನು ನಾವು ಅಂಗಡಿ ಹಾಗೂ ಸಂತೆಗಳಲ್ಲಿ ಕೊಳ್ಳುವಾಗ ಎಚ್ಚರ ವಹಿಸಬೇಕು. ಹಲವಾರು ದಿನ ಕೆಡದಂತೆ ಇಡಲು ಅವುಗಳ ಮೇಲೆ ರಾಸಾಯನಿಕಗಳನ್ನು ಸುರಿದಿರುತ್ತಾರೆ. ಅಷ್ಟೇ ಅಲ್ಲದೆ ಅವು ಬೆಳೆಯುವಾಗ ಹುಳ ಬೀಳ ಬಾರದು ಎಂದು ಕೂಡಾ ಹಲವಾರು ಕೀಯ ನಾಶಕಗಳನ್ನು ರೈತರು ಸಿಂಪಡಿಸುತ್ತಾರೆ. ಎಲ್ಲವೂ ವಿಷಮಯವಾಗಿ ಮಾರ್ಪಟ್ಟ ಕಾರಣ ನಮ್ಮ ಹೊಟ್ಟೆಯೊಳಗೆ ನಿತ್ಯ ವಿಷದ ಶೇಖರಣೆ ಆಗುತ್ತಿದೆ. ಒಂದು ಕಡೆಯಿಂದ ದೇಹ ತನ್ನ ನೈಸರ್ಗಿಕ ಕಾರ್ಯ ಸರಿಯಾಗಿ ಮಾಡಲು ಆಗದೆ ವಿಷಕ್ಕೆ ಹೊಂದಿಕೊಂಡು ಬದುಕುತ್ತಿರುತ್ತದೆ. ಒಂದು ಸರಿಯಾದ ಕ್ಷಣದಲ್ಲಿ ನಮ್ಮ ದೇಹದಲ್ಲಿ  ಬೇಡವಾದ ಬೇರೆಯೇ ಕೋಶಗಳ ಬೆಳವಣಿಗೆ ಆಗಿ ಅದುವೇ ಕ್ಯಾನ್ಸರ್ ಗಡ್ಡೆ ಆಗಿ ಬದಲಾಗಿರುತ್ತದೆ. ನಮ್ಮ ದೇಹ ಅದನ್ನು ತಾಳಿಕೊಳ್ಳುವವರೆಗೆ ನಮಗೆ ಅದರ ಇರುವು ಗೊತ್ತೇ ಇರುವುದಿಲ್ಲ. ಗೊತ್ತಾಗುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಇದು ಇಂದಿನ ಹಲವಾರು ಜನರ ಪರಿಸ್ಥಿತಿ. ಯಾವುದೇ ದುಶ್ಚಟಗಳು ಇಲ್ಲದೆ ಇರುವವರಿಗೂ ಅದು ಹೇಗೆ ಹೀಗಾಯ್ತು ಎಂದು ಜನ ಬೇಸರಿಸುತ್ತಾರೆ. ಅವರು ತಿನ್ನುವ ಆಹಾರದ ಬಗ್ಗೆ ಅವರಿಗೆ ಗೊತ್ತೇ ಇರುವುದಿಲ್ಲ. 

ಈಗಿನ ಆಹಾರಗಳ ಬಣ್ಣ ಗಾಢವಾಗಿ ಎದ್ದು ಕಾಣುತ್ತಿರುತ್ತದೆ. ಗೋಬಿ ಮಂಚೂರಿ, ಚಿಕನ್ ಕಬಾಬ್, ಚಿಕನ್ ಟಿಕ್ಕಾ, ಬಟಾಟೆಯ ರೋಲ್ಸ್, ಮೀನು ಫ್ರೈ ಇದರ ಎಲ್ಲದರ ಬಣ್ಣ ಅಚ್ಚ ಕೆಂಪಾಗುತ್ತದೆ. ಬ್ಯಾಡಗಿ ಮೆಣಸಿನ ಕಾಯಿಯನ್ನು ಬಿಸಿನೀರಿಗೆ ಹಾಕಿ ತಕ್ಷಣ ರುಬ್ಬಿ ಹಾಕಿದರೂ ಆ ಬಣ್ಣ ಬರಲಾರದು. ಎಲ್ಲವೂ ಆರ್ಟಿಫಿಷಿಯಲ್ ಬಣ್ಣಗಳು. ಒಳ್ಳೆಯ ಆಹಾರದ ಬಣ್ಣದ ಬೆಲೆ ದುಬಾರಿ. ರಸ್ತೆ ಬದಿಯ ವ್ಯಾಪಾರಿಗಳು, ಹೋಟೆಲ್ ನವರು ಕಡಿಮೆ ಬೆಲೆಯ ವಸ್ತುಗಳನ್ನು ಖರೀದಿಸುವ ಕಾರಣ ಅದು ದೇಹಕ್ಕೆ ಒಳ್ಳೆಯದಲ್ಲ. ಆದ ಕಾರಣ ತಿನ್ನುವ ಮೊದಲು ಅದಕ್ಕೆ ಬಳಸಿದ ಬಣ್ಣದ ಬಗ್ಗೆ ತಿಳಿದುಕೊಳ್ಳಬೇಕು, ಅಷ್ಟೇ ಅಲ್ಲ ಅದರ ರುಚಿಗಾಗಿ ಬಳಸುವ ಟೇಸ್ಟ್ ಪೌಡರ್ ಅಜಿನಮೋಟೋ ಕೂಡಾ ಆರೋಗ್ಯಕ್ಕೆ ಕೆಟ್ಟದು. ಮನೆಗಿಂತ ಹೊರಗಿನ ಆಹಾರ ರುಚಿ ಕೊಡುವುದು ಈ ಟೇಸ್ಟಿಂಗ್ ಪುಡಿಯಲ್ಲೆ. ಅದರ ಜೊತೆ ಆಹಾರ ಮೆದುವಾಗಲು ಬಳಸುವ ಸೋಡಾ ಕೂಡಾ ಆರೋಗ್ಯಕ್ಕೆ ತುಂಬಾ ಕೆಟ್ಟದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಿಂದಿನ ಕಾಲದಲ್ಲಿ ಜನ ಇಡ್ಲಿ, ದೋಸೆಯ ಹಿಟ್ಟು ಹುಳಿ ಬರಲು ನೈಸರ್ಗಿಕ ವಿಧಾನ ಅನುಸರಿಸುತ್ತಿದ್ದರು. ತೆಂಗಿನ ಕಾಯಿ ನೀರು, ತೆಂಗಿನ ಕಳ್ಳು, ಅಥವಾ ನೀರಾ ಇವುಗಳನ್ನು ದೋಸೆ, ಆಪ, ಇಡ್ಲಿ ಹಿಟ್ಟು ಹದವಾಗಿ ಬರಲು ಉಪಯೋಗಿಸುತ್ತಿದ್ದರು. 

ಈಗಂತೂ ಪಟಾಪಟ್ ಜೀವನ. ಯಾರಿಗೂ ಯಾವುದಕ್ಕೂ ಕಾಯಲು ಸಮಯ ತಾಳ್ಮೆ ಎರಡೂ ಇಲ್ಲ! ಮಕ್ಕಳೂ ಬೇಗನೆ ದೊಡ್ಡವರಾಗಬೇಕು ಎಂದು ಜನ ಬಯಸುವ ಕಾಲ.ಫಾಸ್ಟ್ ಮೂವಿಂಗ್, ಫಾಸ್ಟ್ ಕೆಲಸ, ಫಾಸ್ಟ್ ಬೆಳವಣಿಗೆ, ಫಾಸ್ಟ್ ಫುಡ್..ಸಾಯುವುದೂ ಕೂಡಾ ಫಾಸ್ಟ್ ಅದಾಗಿ ಅದೇ ಆಗಿದೆ. ಇದನ್ನು ತಪ್ಪಿಸಲು ಹಿಂದಿನ ಜನರ ಪದ್ಧತಿಯಲ್ಲಿ ಬದುಕುವುದು ಕಷ್ಟ. ಮತ್ತೆ ಜೀವನವನ್ನು ಹಿಂದೆ ತಳ್ಳಲು ಅಸಾಧ್ಯ. ಆದರೆ ಆರೋಗ್ಯ ಕಾಳಜಿ ಮಾಡಿಕೊಳ್ಳ ಬಹುದು. ಕಿಚನ್ ಗಾರ್ಡನ್ ನಲ್ಲಿ ಬೆಳೆದ ಸೊಪ್ಪು ತರಕಾರಿಗಳ ಸೇವನೆ. ಮನೆಯ ಟೆರೆಸ್ ಮೇಲೆ ಹಣ್ಣು ತರಕಾರಿಗಳನ್ನು ಸಾವಯವ ಗೊಬ್ಬರ ಹಾಕಿ ಬೆಳೆಸುವುದು, ಎಲ್ಲಾ ರೀತಿಯ ಸೊಪ್ಪು ಗಳನ್ನೂ ನಾವೇ ಬೆಳೆಯಲು ಪ್ರಯತ್ನಿಸುವುದು ಮತ್ತು ನಮ್ಮ ಆಹಾರದಲ್ಲಿ ಅವುಗಳನ್ನೇ ಬಳಸುವುದು ಇವು ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ಪ್ರಿವೆನ್ಶನ್ ಇಸ್ ಬೆಟರ್ ದೆನ್ ಕ್ಯೂರ್ ಅಂತಾರಲ್ಲ, ರೋಗ ಬಂದ ಮೇಲೆ ಮದ್ದು ಮಾಡುವುದಕ್ಕಿಂತ ರೋಗ ಬರದ ಹಾಗೆ ತಡೆಯುವುದು ಒಳ್ಳೆಯದು. ಫ್ರಿಜ್ ನಿಂದ ಹೊರ ತೆಗೆದ ನೀರು ಮತ್ತು ಆಹಾರವನ್ನು ಆಗಲೇ ತಿನ್ನುವುದು ಅಥವಾ ಕುಡಿಯುವುದು ಕೂಡಾ ನಮ್ಮ ದೇಹಕ್ಕೆ ದುಷ್ಪರಿಣಾಮ ಉಂಟು ಮಾಡುತ್ತದೆ. ಹಾಗೆಯೇ ನಿತ್ಯ ನಾವು ಸೇವಿಸುವ ಹೊರಗಿನ ಆಹಾರ, ಬೇಕರಿ ತಿನಿಸುಗಳು ಕೂಡಾ ದೇಹಕ್ಕೆ ಕೆಟ್ಟ ಪರಿಣಾಮ ಬೀರುತ್ತವೆ. 

ತಿಂಡಿ ಕರಿಯುವಾಗ   ಒಗ್ಗರಣೆಯಲ್ಲಿ ಬಳಸುವ ಎಣ್ಣೆಯ ಬಗ್ಗೆಯೂ ನಾವು ಕಾಳಜಿ ವಹಿಸದೆ ಹೋದರೆ ಹೃದಯದ ಆರೋಗ್ಯ ಕೆಡುತ್ತದೆ. ಪ್ಯಾರಾಫಿನ್ ಎಂಬ ಬಣ್ಣ, ರುಚಿ ಇಲ್ಲದ ರಾಸಾಯನಿಕವನ್ನು ಹೆಚ್ಚುತ್ತಿರುವ ದೈನಂದಿನ ಬೇಡಿಕೆಗೆ ಸಾಕಷ್ಟು ಉತ್ತಮ ಎಣ್ಣೆ ಕೊಡಲು ಸಾಧ್ಯ ಆಗದೆ ಇರುವ ಕಾರಣ ಹೆಚ್ಚಿನ ಎಲ್ಲಾ ಎಣ್ಣೆ ತಯಾರಿಕಾ ಕಂಪೆನಿಗಳು ಉಪಯೋಗಿಸುವುದು ನಮ್ಮ ಹೃದಯದ ಸ್ತಂಭನ, ಖಾಯಿಲೆಗಳಿಗೆ ಕಾರಣ. ಕಡಿಮೆ ಹಣಕ್ಕೆ ಸಿಗುವ ಹೊರಗಿನ ಆಹಾರವನ್ನು ಈ ಎಣ್ಣೆಗಳನ್ನು ಬಳಸಿ ಕರಿದಿರುತ್ತಾರೆ, ನಾವು ತಿನ್ನುವ ಆಹಾರದಲ್ಲಿ ಈ ರೀತಿಯ ಕಡಿಮೆ ಗುಣಮಟ್ಟದ ಎಣ್ಣೆ ಬಳಸಿದರೆ ಅಮ್ಮನ ಕೈರುಚಿಯ ಅಡುಗೆಯೂ ನಮ್ಮ ದೇಹಕ್ಕೆ ಒಳ್ಳೆಯದಲ್ಲ! ಆದ ಕಾರಣ ಎಲ್ಲರಿಗೂ ಗೊತ್ತಿದ್ದೂ ಮಾಡುವ ನಿತ್ಯ ಸೇವನೆಯ ಯಾವುದೋ ಚರಂಡಿಯ, ಕೊಳಕು ನೀರು ಬಳಸಿ ತಯಾರಿಸಿದ ಪಾನಿ ಪೂರಿ, ಮಸಾಲ ಪೂರಿ, ಟೇಸ್ಟ್ ಪೌಡರ್ ಹಾಗೂ ರಾಸಾಯನಿಕ  ಬಣ್ಣಗಳನ್ನು ಹಾಕಿ ತಯಾರಿಸಿದ ಫ್ರೈ, ನೂಡಲ್ಸ್ ಇವನ್ನೆಲ್ಲ ತಿನ್ನದೆ ಇರುವುದು ಉತ್ತಮ. ಜಂಕ್ ಫುಡ್ ಅಂತ ಇವುಗಳನ್ನೇ ಹೇಳುವುದು. ನಮ್ಮ ನಾಲಗೆ ಇದನ್ನೇ ಕೇಳುತ್ತದೆ. ಕಾರಣ ಟೇಸ್ಟ್ ಪೌಡರ್. 

ಹಲವಾರು ವೈದ್ಯರ, ಆಹಾರ ತಜ್ಞರ ಸಲಹೆಯ ಅಂಕಣಗಳನ್ನು ಓದಿ, ಟಿಪ್ಸ್ ಕೇಳಿ , ಪರರ ಬದುಕನ್ನು ನಾನು ನಿಮಗೆ ಇದನ್ನು ಹೇಳುತ್ತಿರುವೆ. ನಿಮಗೂ ನಮಗೂ ಒಂದು ಕಿವಿಮಾತು ಎಲ್ಲಾ ಸೊಪ್ಪು, ಹಣ್ಣು,ತರಕಾರಿಗಳನ್ನು ಬಳಸುವ ಮೊದಲು ಉಪ್ಪು ಹಾಗೂ ಅರಶಿಣ ಪುಡಿ ಬಳಸಿದ ಬಿಸಿ ನೀರಿನಲ್ಲಿ ತೊಳೆಯುವುದು ಉತ್ತಮ. ಆರೋಗ್ಯವೇ ಭಾಗ್ಯ ಅಲ್ಲವೇ? ಹೆಚ್ಚು ನೀರು ಕುಡಿಯಬೇಕು. ದೇಹದ ಹೊರಗೆ ಸ್ನಾನ ಆದ ಹಾಗೆ ದೇಹದ ಒಳಗಿನ ಮಲಿನವನ್ನೂ ಕೂಡಾ ಸ್ವಲ್ಪ ಮಟ್ಟಿಗೆ ತೊಳೆದು ಹಾಕಬಹುದು. ಕುಡಿಯುವ ನೀರು ಕೂಡಾ ಶುದ್ಧ ಹಾಗೂ ಬಿಸಿ ಮಾಡಿ ಆರಿಸಿದ ನೀರಾದರೆ ಉತ್ತಮ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
11.02.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ