ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -203
ಹಿಂದಿನ ದಿನಗಳ ನೆನೆಸಿಕೊಂಡರೆ ಕೆಲವೊಮ್ಮೆ ನಗು ತರಿಸುತ್ತದೆ, ಇನ್ನೂ ಕೆಲವೊಮ್ಮೆ ಕ್ಯೂರಿಯಾಸಿಟಿಯ ಬಗ್ಗೆ ನೆನಪಾಗುತ್ತದೆ. ಸಾಧಾರಣವಾಗಿ ಮಧ್ಯಮ ವರ್ಗದ ಕುಟುಂಬದಲ್ಲಿ ಅದರಲ್ಲೂ ಹಳ್ಳಿಯಲ್ಲಿ ಹುಟ್ಟಿದ ಮಕ್ಕಳಿಗೆ ಈ ಕಾತರ, ಬೇಸರ, ಕಾಯುವಿಕೆಯ ಅನುಭವ ಇರಬಹುದು.
ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು..
ಮುಂದೆ...
ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ...
ಹೌದು, ಅಮ್ಮಂದಿರು ಪ್ರತಿ ತಿಂಗಳು ಆ ಮುಟ್ಟಿನ ದಿನಗಳಲ್ಲಿ ಅಡುಗೆ ಮನೆ ಹಾಗೂ ಮಲಗುವ ಕೋಣೆ, ದೇವರ ಕೋಣೆ, ಒಳಗಿನ ಕೋಣೆಗಳಿಗೆ ಬರುವ ಹಾಗೆ ಇರಲಿಲ್ಲ. ಬದಲಾಗಿ ಹೊರಗಿನ ಕೋಣೆ ಅಥವಾ ಕೊಟ್ಟಿಗೆಯಲ್ಲಿ ಇರಬೇಕಿತ್ತು. ಅವರಿಗೆ ಅಲ್ಲಿಗೇ ಊಟ ತಿಂಡಿ ಸಪ್ಲೈ ಮಾಡುತ್ತಿದ್ದರು. ಅತ್ತೆ ಅತ್ತಿಗೆ ನಾದಿನಿ ಯಾರೂ ಇಲ್ಲದ ಮನೆಯಲ್ಲಿ, ಮಕ್ಕಳು ಇಲ್ಲದಾಗ ಗಂಡನೇ ಕುಕ್! ಆಗ ಹೆಚ್ಚಿನ ಎಲ್ಲಾ ಗಂಡಸರೂ ಅಡುಗೆ ಅಲ್ಪ ಸ್ವಲ್ಪ ಆದರೂ ಕಲಿತಿರುತ್ತಿದ್ದರು. ಕಲಿಯದೆ ಇದ್ದವರ, ಸೋಮಾರಿಗಳ ಆ ಎರಡು ದಿನದ ಪಡಿಪಾಟಲು ಹೇಳ ತೀರದು.
ಉಪ್ಪಿಲ್ಲ, ಮೆಣಸಿಲ್ಲ, ದಾಲ್ಚಿನ್ನಿ ಚೂರಿಲ್ಲ
ಏನ್ ಮಾಡಲಿ ನಾನು ಏನ್ ಮಾಡಲಿ . ಎನ್ನುತ್ತಾ ಕೈಗೆ ಸಿಕ್ಕಿದ್ದು ಹಾಕಿ ಏನೋ ಒಂದು ಮಾಡಿ, ಮೂರು ದಿನಗಳ ಬಳಿಕ ಒಳ ಬಂದ ಮಡದಿಗೆ ಇಡೀ ದಿನ ತಳ ಸುಟ್ಟು ಹಾಕಿದ ಪಾತ್ರೆಗಳನ್ನು ತೊಳೆಯುವುದೇ ಕೆಲಸ. ಅಡುಗೆ ಮನೆ ಸ್ವಚ್ಚ ಮಾಡಲು ಒಂದೆರಡು ದಿನಗಳೇ ಬೇಕಿತ್ತು. ಯಾರು ಮಾಡಿರುವರೋ ಈ ರೂಲ್ ಅಂತ ಬೇಸತ್ತು ಕ್ಲೀನ್ ಮಾಡುವ ಸರದಿ ಮಹಿಳೆಯರದ್ದು ಆಗಿತ್ತು! ಮತ್ತೆ ಉಳಿದ ಕೋಣೆಗಳ ಸ್ವಚ್ಛತೆ. ಬೆಡ್ ಶೀಟ್, ಬೆಡ್ ಸ್ಪ್ರೆಡ್ ಚಾಪೆ ಎಲ್ಲಾ ತೊಳೆದು ಒಣಗಿಸುವ ಕಾರ್ಯಕ್ರಮ! ಎರಡು ದಿನವಪ್ಪ ಹೇಗೆ ಹೇಗೋ ಬೇಯಿಸಿ ಮಾಡಿದ ಅಡುಗೆ ತಿಂದು ಬೇಸತ್ತ ಮಕ್ಕಳು(ಆಗ ಈಗಿನ ಹಾಗೆ ನೂಡಲ್ಸ್, ಪಾಸ್ತಾ ಇರಲಿಲ್ಲ!) ಅದೇ ಮನೆ ಊಟ, ಉತ್ತಮ ಗಾಳಿ, ಉತ್ತಮ ಆರೋಗ್ಯ, ಎರಡೇ ಒಲೆಯ ಅಡುಗೆ! (ಈಗೆಲ್ಲಾ ಅರ್ಜೆಂಟಿನ ಅಡುಗೆ ಮಾಡಲು ಮೂರು ನಾಲ್ಕು ಒಲೆಯ ಸ್ಟವ್ ಬಂದಿವೆ ಅಲ್ಲವೇ?) ಅಮ್ಮ ಅಲ್ಲಿ ಉಫ್ ಅಂತ ಊದುವುದು ಕೇಳಿ ಬರುತ್ತಿತ್ತು.
ವೈಜ್ಞಾನಿಕವಾಗಿ ಆಲೋಚನೆ ಮಾಡುವುದಾದರೆ ಅಂತಹ ಸಮಯದಲ್ಲಿ ದೈಹಿಕವಾಗಿ ತುಂಬಾ ಸುಸ್ತು, ಸಂಕಟ ಆಗುತ್ತದೆ. ಹಿಮೋಗ್ಲೋಬಿನ್ ಕಡಿಮೆ ಆಗುವ ಕಾರಣ ಕಷ್ಟದ ಕೆಲಸ ಸಾಧ್ಯ ಆಗುವುದಿಲ್ಲ. ಯಾವುದೇ ಕೆಲಸ ಮಾಡದೆ ದೈಹಿಕ ಶ್ರಮ ಸಿಗದೇ ಇರಲಿ ಎಂಬ ಉತ್ತಮ ಕಾರಣಕ್ಕೆ ಹಿರಿಯರು ಹೆಂಗಸರಿಗೆ ಹಿಂದಿನ ಕಾಲದಲ್ಲಿ ಮನೆಯ ಒಳಗೆ ಬರಲು ಬಿಡದೆ ಹೊರಗಿನ ಒಂದು ಮೂಲೆಯಲ್ಲಿ ಕುಳ್ಳಿರಿಸಿ ರೆಸ್ಟ್ ಮಾಡಲು ಬಿಡುತ್ತಿದ್ದರು. ಅದು ಅವರ ಆರೋಗ್ಯ ಉತ್ತಮ ಪಡಿಸಿಕೊಳ್ಳಲು, ವಿಶ್ರಾಂತಿ ಪಡೆಯಲು ಸುಲಭವಾಗುತ್ತಿತ್ತು. ಆದರೆ ಇಂದಿನ ಮಾಡ್ರನ್ ಟೆಕ್ನಾಲಜಿ ಕಾಲದಲ್ಲಿ ಮಹಿಳೆಯರು ಆಟೋಟ, ಪೈಲಟ್, ಎಂಜಿನಿಯರ್, ಡಾಕ್ಟರ್,ಸೈನಿಕ ಹುದ್ದೆಯಲ್ಲಿ ಮಾತ್ರ ಅಲ್ಲದೆ ಸಮಾಜದ ಸರ್ವ ಹುದ್ದೆಗಳಲ್ಲೂ ಪುರುಷರ ಹೆಗಲಿಗೆ ಹೆಗಲಾಗಿ ಅವರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುವ ಹಾಗೆ ದುಡಿಯುತ್ತಿದ್ದಾರೆ. ಅದೊಂದು ಕಾರಣಕ್ಕೆ ಮೂರು ನಾಲ್ಕು ದಿನ ರಜೆ ತೆಗೆದುಕೊಂಡು ಕೆಲಸದಿಂದ ಹೊರಗೆ ಉಳಿಯಲು ಅಸಾಧ್ಯ. ಟೈಲರ್ ಗಳು, ವಿವಿಧ ವ್ಯಾಪಾರಿಗಳು ಅವರದ್ದೇ ಕೆಲಸ ಬಿಡುವಿಲ್ಲದೆ ಮಾಡಬೇಕಾಗುತ್ತದೆ. ಹಾಗಾಗಿ ಕೆಲಸದ ಮಹತ್ವ ತುಂಬಾ ಇದ್ದು, ಕಾಲಕ್ಕೆ ತಕ್ಕಂತೆ ಬದುಕಬೇಕಾಗಿದೆ. ಹೀಗಿರಲು ನಾವು ನಮ್ಮ ಜೀವನವನ್ನು ಸಾಗಿಸುತ್ತಾ, ಎಲ್ಲರಿಗೆ ಸರಿಸಾಟಿಯಾಗಿ ಬದುಕುತ್ತಾ, ಹಿಂದಿನದನ್ನು ಮರೆಯದೆ, ಹೊಸ ಬದುಕನ್ನು ನಾವೀನ್ಯತೆಯಿಂದ ಕಟ್ಟುತ್ತಾ, ಆರೋಗ್ಯದ ಕಡೆ ಗಮನ ನೀಡುತ್ತಾ ಬದುಕಬೇಕಿದೆ. ಓಡುವ ಕಾಲದ ಜೊತೆ ನೆನಪುಗಳ ಸಿಂಹಾವಲೋಕನದ ಜೊತೆ ಓಡಬೇಕಿದೆ. ನೀವೇನಂತೀರಿ?
@ಹನಿಬಿಂದು@
23.09.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ