ಭಾನುವಾರ, ಅಕ್ಟೋಬರ್ 22, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -204

          ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -204

ಮಕ್ಕಳಿಗೆ ಶಾಲೆಯಲ್ಲಿ ಭಾಷೆ ಮತ್ತು ವಿಜ್ಞಾನ ಶಿಕ್ಷಕರು ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಮಣ್ಣಿನ ಮಾಲಿನ್ಯ ಇವುಗಳ ಬಗ್ಗೆ ತಿಳಿಸಿ ಹೇಳಿ ಕೊಡುತ್ತಾರೆ, ಹಾಗೆಯೇ ಅವರಿಂದ ಬೇರೆ ಬೇರೆ ಮಾಡೆಲ್ ರಚನೆ ಮಾಡಿಸಿ ಅವು ಹೇಗೆ ಆಗುತ್ತವೆ ಎಂಬುದನ್ನು ಹೇಳುತ್ತಾರೆ. ಪರಿಹಾರ ಎಲ್ಲರೂ ಹೇಳಿ ಕೊಟ್ಟರೂ ಕೊಡದೆ ಇದ್ದರೂ ಅದು ಒಂದೇ. ಕಾಡು ಬೆಳೆಸಿ, ನಾಡು ಉಳಿಸಿ! ಆದರೆ ಈ ಎಲ್ಲಾ ಮಾಲಿನ್ಯಗಳಿಗಿಂತ  ಭೀಕರ ಮಾಲಿನ್ಯ ಒಂದು ಇಡೀ ಪ್ರಪಂಚದಾದ್ಯಂತ ಆಗುತ್ತಿದೆ. ಅದನ್ನು ಯಾರೂ ಗಮನಿಸಿದಂತೆ ಕಾಣುತ್ತಿಲ್ಲ. 
      ಪ್ರತಿ ಮಕ್ಕಳೂ ಕೂಡ ನ್ಯಾರೋ ಮೈಂಡೆಡ್ ಆಗುತ್ತಿದ್ದಾರೆ. ನಾನು, ನನ್ನದು, ನನ್ನದು ಮಾತ್ರ. ಸ್ನೇಹಿತರ ಜೊತೆ ನೀರು, ಸ್ನಾಕ್ಸ್ ಶೇರ್ ಮಾಡುವುದು ಶಾಲೆಯಲ್ಲಿ ತಪ್ಪು. ಕರೋನ ಪರಿಣಾಮ. ಹಂಚಿ ತಿಂದರೆ ಹಸಿವಿಲ್ಲ ಎಂಬ ಗಾದೆ ಮಾತು ಇಂದಿನ ಯುಗಕ್ಕೆ ಅನ್ವಯಿಸುವುದಿಲ್ಲ. ಕಾರಣ ಹಂಚಿ ತಿಂದರೆ ಸಾಂಕ್ರಾಮಿಕ ರೋಗ ಇಂದು. ಕೈ ಕುಲುಕಿದರೂ ರೋಗ ಬರುವ ಕಾಲದಲ್ಲಿ ಒಬ್ಬ ನೀರು ಕುಡಿದ ಬಾಟಲಿಯಿಂದ ಮತ್ತೊಬ್ಬ ನೀರು ಕುಡಿಯುವ ಹಾಗಿಲ್ಲ. ಒಬ್ಬ ತಿಂದ ಬುತ್ತಿಯ ತುತ್ತು ಮತ್ತೊಬ್ಬರ ಜೊತೆ ಹಂಚಿ ತಿನ್ನುವ ಹಾಗಿಲ್ಲ. ಪ್ಲಾಸ್ಟಿಕ್ ಬ್ಯಾನ್ ಆದ ಪರಿಣಾಮ ಅದರ ಮೇಲೂ ಹಬ್ಬದೆ ಇರುವುದೇ?
             ಇನ್ನು ನಾವೆಲ್ಲಾ ಹಾಸ್ಟೆಲ್ ನಲ್ಲಿ ಓದುತ್ತಿದ್ದಾಗ ನಮ್ಮ ಬಳಿ ಸರಿಯಾದ ಬಟ್ಟೆಗಳು ಇರಲಿಲ್ಲ. ಹಾಸ್ಟೆಲ್ ನ ಗೆಳತಿಯರು ಅವರ ಬಟ್ಟೆಗಳನ್ನು ನಮಗೆ ತೊಡಿಸಿ ಕಾಲೇಜಿನ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ನೆರವಾಗುತ್ತಿದ್ದರು. ಯಾರದೇ ಗೆಳತಿಯರ ಬಟ್ಟೆಯಾಗಲಿ ಅದನ್ನು ನಾವು ನಮ್ಮದೇ ಎನ್ನುವಂತೆ ಉಪಯೋಗಿಸುತ್ತಿದ್ದೆವು. ಅಥವಾ ನಮ್ಮ ಬಟ್ಟೆಗಳಿದ್ದರೆ ಅವರು ಕೂಡ ಅದನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಬೇಕಾದಂತೆ ಉಪಯೋಗ ಮಾಡಿಕೊಳ್ಳುತ್ತಿದ್ದರು. ನಾವೆಲ್ಲ ಒಂದೇ ಮನೆಯವರ ಹಾಗೆ ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುತ್ತಾ ಬದುಕುತ್ತಿದ್ದೆವು. ಆ ಸಹಾಯ ಸಹಕಾರ ಮುಂದೆಯೂ ಕೂಡ ನಮ್ಮ ಜೀವನದಲ್ಲಿ ಅಚ್ಚಳಿಯದೆ ನಿಂತು ಯಾವಾಗ ಅವರು ಸಿಕ್ಕಿದರು ಕೂಡ ಅವರು ನಮ್ಮ ಮನೆಯವರು ಎಂಬಂತೆ ಭಾಸವಾಗುವುದಲ್ಲದೆ ಅವರ ಮೇಲಿನ ನಮ್ಮ ಪ್ರೀತಿ ಎಂದಿಗೂ ಕೂಡ ಎಂದು ಕಡಿಮೆ ಆಗಲಿಲ್ಲ. ಕುಟುಂಬದ ಹಾಗೆ ಸ್ನೇಹಿತರು ಕೂಡ ಎಂಬ ಪ್ರೀತಿ ವಾತ್ಸಲ್ಯವನ್ನು ಬೆಳೆಸಿಕೊಂಡು ಬಂದವರು ನಾವು. 
  ಆದರೆ ಇಂದಿನ ದಿನಗಳಲ್ಲಿ ಈ ರೀತಿಯ ಪ್ರೀತಿ ವಾತ್ಸಲ್ಯವನ್ನು ನಾವು ಕಾಣಲು ಸಾಧ್ಯವಿಲ್ಲ. ಗೆಳೆಯರು ಅಂದರೆ ತಕ್ಷಣಕ್ಕೆ ಆ ಕಾಲದಲ್ಲಿ ಮಾತ್ರ. ಮುಂದಿನ ದಿನಗಳಲ್ಲಿ ಅವರ್ಯಾರು ಇವರ್ಯಾರು ಅವರ ಪರಿಚಯ ಇವರಿಗಿದ್ದರೂ ಕೂಡ ಇವರು ಅವರನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ ಮತ್ತು ಅವರು ಇವರನ್ನು ಬಹಳವಾಗಿ ಹಚ್ಚಿಕೊಳ್ಳುವ ವಿಷಯವೇ ಇಲ್ಲ. ಅವರ ಜೊತೆಗಿರುವಷ್ಟು ದಿನ ಮಾತ್ರ ಪ್ರಾಧಾನ್ಯತೆ. ಅದು ಗೆಳೆತನಕ್ಕೆ ಮಾತ್ರವಾಗಿ ಉಳಿದಿಲ್ಲ ಸಂಬಂಧಕ್ಕೂ ಹಾಗೆ ಆಗುತ್ತಿದೆ. ಪೋಷಕರೆಂದರೆ ಅವರನ್ನು ಹೆತ್ತು ಹೊತ್ತು ಬೆಳೆಸಿ ಓದಿಸಿ ಒಂದು ಹಂತದವರೆಗೆ ತಂದು ನಿಲ್ಲಿಸುವವರೆಗೆ ಮಾತ್ರ ಅವರ ಜವಾಬ್ದಾರಿ. ತದನಂತರ ಬದುಕಿನಲ್ಲಿ ಸಂಗಾತಿಯ ಆಯ್ಕೆಯನ್ನು ಮಾಡಬೇಕೆಂದರೆ ಹೆಚ್ಚಿನವರು ಅವರವರೇ ತಮ್ಮ ಸಂಗಾತಿಯ ಆಯ್ಕೆಯನ್ನು ತಮಗೆ ಬೇಕಾದ ಹಾಗೆ ಮಾಡಿಕೊಂಡಿರುತ್ತಾರೆ ಮತ್ತು ಹಿರಿಯರು ಏನಾದರೂ ಅದಕ್ಕೆ ವಿರುದ್ಧವಾಗಿ ಮಾತನಾಡಿದರೆ ಮನೆಯನ್ನು ಬಿಟ್ಟು ತಮ್ಮ ಸಂಗಾತಿ ಜೊತೆ ಸೇರಿಕೊಂಡು ಬಿಡುತ್ತಾರೆ. ಇದು ಇಂದಿನ ಬದುಕಿನ ಪದ್ಧತಿ, ದುಡಿಯುವಾಗಲು ಹಾಗೆಯೆ ದುಡಿಯುತ್ತಿರುವ ಕಂಪನಿಯನ್ನು ಬಿಟ್ಟು ನಾಲ್ಕಾರು ದಿನಕ್ಕೊಮ್ಮೆ ಹೊಸ ಕಂಪನಿಗೆ ಬದಲಾಯಿಸುತ್ತಿರುತ್ತಾರೆ. ಅಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅಥವಾ ಸಂಬಳ ಕಡಿಮೆಯಾದರೆ ಹೆಚ್ಚು ಸಂಬಳವಿರುವ ಇನ್ನೊಂದು ಕಂಪನಿಗೆ ಹೋಗಿ ಕೆಲಸ ಮಾಡುತ್ತಾರೆ. ಇಷ್ಟು ದಿನ ನನಗೆ ಅನ್ನ ಕೊಟ್ಟ ಕಂಪನಿದು ಇದಕ್ಕೆ ನಾನು ನನ್ನ ಕೆಲಸವನ್ನು ನಾನು ಮಾಡಬೇಕು ಸೇವೆಯನ್ನು ಅರ್ಪಣೆ ಮಾಡಬೇಕು ಈ ರೀತಿಯ ಯಾವುದೇ ಭಾವನಾತ್ಮಕ ಸಂಬಂಧಗಳು ಈಗಿನ ಕಾಲದಲ್ಲಿ ಇಲ್ಲ. ಹಿಂದಿನ ಕಾಲದಲ್ಲಿ ಲ್ಯಾಂಡ್ ಲಾರ್ಡ್ಸ್ ಅಥವಾ ಗದ್ದೆ ತೋಟಗಳು ಹೆಚ್ಚು ಇರುವವನ ಮನೆಯಲ್ಲಿ ಕೆಲಸದಾಳುಗಳಾಗಿ ದುಡಿಯುತ್ತಿದ್ದ ಹಲವಾರು ಜನರು ವರ್ಷಂ ಪ್ರತಿ ಒಂದೇ ಮನೆಯಲ್ಲಿ ದುಡಿದು ಅವರಿಂದ ಸಂಬಳವನ್ನು ಪಡೆದು ಅವರ ಕಷ್ಟಕಾಲದಲ್ಲಿ ಸಂಬಳ ಇಲ್ಲದೆಯೂ ದುಡಿಯುವಂತಹ ಕ್ರಮವಿತ್ತು. ಕೆಲಸ ಮಾಡಿಸಿಕೊಳ್ಳುವವರು ಅಷ್ಟೇ ತಮ್ಮ ಕೆಲಸಗಾರರ ಬದುಕಿನಲ್ಲಿ ಏನಾದರೂ ಕಷ್ಟಗಳು ಅಥವಾ ತೊಂದರೆಗಳು ಬಂದಾಗ ಅವರು ಕೂಡ ಸಹಾಯ ಮಾಡುತ್ತಿದ್ದರು ಅದು ಧನಸಹಾಯವೇ ಇರಬಹುದು ಅಥವಾ ಬೇರೆ ಏನಾದರೂ ವಸ್ತುಗಳ ರೂಪದಲ್ಲಿ ಸಹಾಯವನ್ನು ಮಾಡುತ್ತಿದ್ದರು. ಈ ರೀತಿಯ ಕೊಡುಕೊಳ್ಳುವಿಕೆಯ ಸಹಾಯದಿಂದಾಗಿ ಅವರೆಲ್ಲರೂ ಹತ್ತಿರವಾಗಿರುತ್ತಿದ್ದರು. ಇದು ಸಮಾಜದಲ್ಲಿ ಭಾವನಾತ್ಮಕ ಬೆಸುಗೆಯನ್ನು ಪ್ರಾರಂಭಿಸಿತ್ತು. ಆದರೆ ಇಂದು ಹಾಗಿಲ್ಲ ಎಲ್ಲರನ್ನೂ ಹಣದ ರೂಪದಲ್ಲಿ ಅಳೆಯುತ್ತಾರೆ. ಅದರಿಂದಾದರೂ ಯಾವುದಾದರೂ ಸಹಾಯ ಬೇಕಿದ್ದಲ್ಲಿ ಅವರು ಹಣ ಕೊಟ್ಟೆ ಅದನ್ನು ಖರೀದಿಸಬೇಕು. ಹಣ ಪಡೆದುಕೊಂಡ ಮೇಲೆ ಅವರಿಬ್ಬರಿಗೂ ಯಾವುದೇ ರೀತಿಯ ಭಾವನಾತ್ಮಕತೆ ಇರುವುದಿಲ್ಲ. ಇದನ್ನೇ ಬಿಜಿನೆಸ್ ಮೈಂಡ್ ಎನ್ನುತ್ತಾರೆ. ಇದು ಪಾಶ್ಚಾತ್ಯರ ಸಂಸ್ಕೃತಿ. ಭಾರತವು ಪ್ರೀತಿ ಸ್ನೇಹ ಹೊಂದಾಣಿಕೆ ಸರ್ವೇ ಜನ: ಸುಖಿನೋ ಭವಂತು ಎನ್ನುವ ಭಾವನಾತ್ಮಕತೆಗೆ ಹೆಚ್ಚು ಒತ್ತು ಕೊಡುವ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದೆ. 
     ಆದ್ದರಿಂದ ಈಗ ನಾವು ಮನಸ್ಸಿನ ಮಾಲಿನ್ಯವಾಗಿದೆ ಎಂದು ಹೇಳಬಹುದು. ಯಾವುದೇ ಅಪಘಾತವಾಗಿ ಯಾರಾದರೂ ಕೆಳಗೆ ಬಿದ್ದಿದ್ದರೆ ಅವರನ್ನು ಸಂತೈಸುವ ಅಥವಾ ಅವರಿಗೆ ಸಹಾಯ ಮಾಡುವ ಯಾವುದೇ ಸಹಾಯ ಹಸ್ತವನ್ನು ನಾವೆಗಾ ಕಾಣಲಾರೆವು. ಯಾಕೆಂದರೆ ಅವರವರ ಕೆಲಸ ಅವರವರಿಗೆ ಬೇರೆಯವರನ್ನು ನೋಡುವ , ಅವರಿಗೆ ಸಹಾಯ ಮಾಡುವ ಮತ್ತು ಅವರಿಗೆ ಏನಾದರೂ ಬೇಕಾದನ್ನು ಕೊಡುವಂತಹ ವ್ಯವದಾನ , ಸಮಯ,  ಕಾಲ ಯಾರಿಗೂ ಈ ಸಮಯದಲ್ಲಿ ಇಲ್ಲ. ಏನಿದ್ದರೂ ನಾನು , ನನ್ನ ಕೆಲಸ,  ನನ್ನ ಕುಟುಂಬ,  ನನ್ನ ಮಕ್ಕಳು , ನನ್ನ ಜವಾಬ್ದಾರಿಗಳು ಇವಿಷ್ಟೇ ಇಂದಿನ ಜೀವನದ ಮೂಲತತ್ವಗಳು. ಯಾರೋ ಅಲ್ಲಿಲ್ಲಿ ಒಂದಿಬ್ಬರು ಸಮಾಜ ಸೇವೆ ಎಂದು ಕಷ್ಟಪಟ್ಟು ಪರರಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡಿ ಯಾರು ಬಿಟ್ಟರೆ ಉಳಿದವರು ಯಾರು ಈ ಕೆಲಸಕ್ಕೆ ಹೋಗುವುದಿಲ್ಲ. ಪರರೇನಾದರೂ ಸಹಾಯ ಕೇಳಿದರೆ ನಮ್ಮ ಸಮಯ ವ್ಯರ್ಥವಾಗುತ್ತದೆ ಮತ್ತು ಅವರಿಗೆ ಸಹಾಯ ಮಾಡಲು ಹೋದರೆ ನಮ್ಮ ಹಣವು ಖರ್ಚಾಗುತ್ತದೆ ಎಂದು ಯೋಚನೆ ಮಾಡುವ ಜನರೇ ಹೆಚ್ಚು. ಹೋಗುತ್ತಾ ಇರುವಾಗ ದಾರಿಯಲ್ಲಿ ಬಂಧುಗಳ ಮನೆ ಸಿಕ್ಕಿದರು ಇಂದಿನವರು ಅಲ್ಲಿ ನಿಲ್ಲಿಸಿ ಮಾತನಾಡಿ ಬರುವುದು ತೀರಾ ವಿರಳ.  ಕಾರಣ ಸಮಯದ ಅಭಾವ. 
    ಮನಸ್ಸು ಮತ್ತು ಆಲೋಚನೆಗಳಲ್ಲಿ ವಿಶಾಲ ಭಾವ ಮೂಡಿ ಆ ವಿಶಾಲ ಭಾವದಲ್ಲಿ ಎಲ್ಲರೂ ನಮ್ಮವರು ತಮ್ಮವರು ನಾವು ಸಹಾಯ ಮಾಡಬೇಕು ಪರರೂ ಕೂಡ ನಮ್ಮಂತೆ ಮುಂದೆ ಬರಬೇಕು ಎಂಬ ಭಾವನೆಗಳು ಜನರಲ್ಲಿ ಯಾವಾಗ ಮೊಳಕೆ ಒಡೆಯಲು ಪ್ರಾರಂಭಿಸುತ್ತದೆಯೋ ಅಂದು ದೇಶದ ಉದ್ದಾರ ಪ್ರಾರಂಭವಾಗುತ್ತದೆ. ನಾನು ಬದುಕಿ ಪರರನ್ನು ಬದುಕಲು ಬಿಡಬೇಕು ಎಂಬ ಭಾವನೆ ಬಂದಾಗ ಮಾತ್ರ ದೇಶ ಕಟ್ಟುವ ಕಾರ್ಯ ಮುಂದುವರಿಯುತ್ತದೆ. ನಾನು ನನ್ನ ಹೆಂಡತಿ ನನ್ನ ಮಗು ನನ್ನ ಮನೆ ನನ್ನ ಪರಿಸರ ಇದಿಷ್ಟೇ ಬಂದಾಗ ನನ್ನ ದೇಶ ನನ್ನ ರಾಜ್ಯ ನಮ್ಮ ಭೂಮಿ ಎನ್ನುವ ವಿಶಾಲವಾದ ಆಲೋಚನೆಗಳು ಬದಿಗೆ ನಿಲ್ಲುತ್ತವೆ. ಭಾರತ ಸ್ವತಂತ್ರವಾಗಬೇಕಾದರೆ ಅದೆಷ್ಟೋ ಮಾತೆಯರು ತಮ್ಮ ಮಕ್ಕಳ ಜೀವವನ್ನು ಅದಕ್ಕೆ ಬಲಿ ಕೊಟ್ಟಿದ್ದಾರೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಬಲಿಕೊಟ್ಟು ತಮ್ಮ ಮಕ್ಕಳ ಜೀವನವನ್ನು ಒತ್ತೆ ಇಟ್ಟು ದೇಶಕ್ಕಾಗಿ ವೀರ ಮರಣವನ್ನು ಅಪ್ಪಿಕೊಂಡಿದ್ದಾರೆ. ಅವರೆಲ್ಲ ತಮ್ಮ ಕುಟುಂಬ ತಮ್ಮ ಮಕ್ಕಳು ತಮ್ಮ ಮಡದಿಯರು ಎಂದು ಯೋಚನೆ ಮಾಡಿದ್ದಿದ್ದರೆ ಸ್ವಾತಂತ್ರ್ಯ ಹೋರಾಟದ ಸಂಗ್ರಾಮವೂ ಆಗುತ್ತಿರಲಿಲ್ಲ , ಹಲವಾರು ದಂಗೆಗಳು ನಡೆಯುತ್ತಿರಲಿಲ್ಲ , ಭಾರತಕ್ಕೆ ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ. 
  ಇಂದಿನ ಜಾತಿ ರಾಜಕೀಯಗಳು ಹಣ ಮಾಡುವ ದಂದೆಗಳು , ರಾಶಿ ರಾಶಿ ಮೂಟೆಗಟ್ಟಲೆ , ಕೋಟಿಗಟ್ಟಲೆ, ಹಣವನ್ನು ಒಬ್ಬನೇ ತಿಂದು ತೇಗುವ, 35 ರಿಂದ 40 ತಲೆಮಾರುಗಳಿಗೆ ಬೇಕಾಗುವಷ್ಟು ಹಣವನ್ನು ಇಂದೇ ಕೂಡಿಟ್ಟು ತಾನು ಸತ್ತರೂ ಪರವಾಗಿಲ್ಲ ತಮ್ಮ ಮುಂದಿನ ಪೀಳಿಗೆಯ ಸರಿ ಇರಬೇಕು ಎಂದು ಯೋಚನೆ ಮಾಡುವಂತ ಮನುಷ್ಯನು ತನ್ನ ಸುಖವನ್ನು ಮಾತ್ರ ಬಯಸಿ ಪರರಿಗೆ ನೋವು ಕೊಡುವವನು ಹೇಗೆ ತಾನೇ ಸ್ವರ್ಗಕ್ಕೆ ಹೋಗಲು ಸಾಧ್ಯ? ಚೆನ್ನಾಗಿ ಒಳ್ಳೆಯ ಆಲೋಚನೆ ಮಾಡುತ್ತಾ ಸರ್ವರಿಗೂ ಸುಖವನ್ನು ಕೊಡುತ್ತಾ ಸರ್ವರ ಬಗ್ಗೆಯೂ ಯೋಚನೆ ಮಾಡುತ್ತಾ ಬದುಕು ಅವನಿಗೆ ಭೂಲೋಕವೇ ಸ್ವರ್ಗವಂತೆ. ಇನ್ನು ಮೋಸ, ವಂಚನೆ, ಹಗೆತನ, ದ್ವೇಷ , ಹೊಟ್ಟೆಕಿಚ್ಚು , ರಾಕ್ಷಸತನ ಇವುಗಳನ್ನೇ ಬದುಕಿನಲ್ಲಿ ಮೆಚ್ಚಿಕೊಂಡವನಿಗೆ ಇಲ್ಲು ನರಕ ಸತ್ತ ಮೇಲೂ ನರಕ ಅಲ್ಲವೇ?
  ಬದುಕಿನಲ್ಲಿ ಸಾಧ್ಯವಾದರೆ ನಾಲ್ಕು ಜನಕ್ಕೆ ಸಹಾಯ ಮಾಡೋಣ. ಅಸಾಧ್ಯ ಎಂದಾದರೆ ಸುಮ್ಮನಿದ್ದು ಬಿಡೋಣ. ಪರರಿಗೆ ಉಪದ್ರ ಮಾಡದೇ ಇರೋಣ. ಇತರರನ್ನು ನಿಂದಿಸಲು ,ಜಗಳವಾಡಲು , ಬೇಸರ ಮಾಡಲು,  ಬರದ ಕಣ್ಣಲ್ಲಿ ದುಃಖ ತರಲು,  ಕಣ್ಣೀರನ್ನು ತರಲು ನಾವು ಈ ಭೂಮಿಗೆ ಬರಲಿಲ್ಲ . ದೇವರು ನಮ್ಮನ್ನು ಈ ಭೂಮಿಗೆ ಒಂದು ಉತ್ತಮ ಕಾರ್ಯಕ್ಕಾಗಿ ಕಳಿಸಿದ್ದಾನೆ.  ಆ ಕಾರ್ಯವನ್ನು ಮಾಡುತ್ತಾ,  ನಮ್ಮ ಈ ಜನ್ಮವನ್ನು ಸಾರ್ಥಕ ಗೊಳಿಸಿಕೊಳ್ಳೋಣ.  ನಮ್ಮ ಮನಸ್ಸಿನ ಮಾಲಿನ್ಯವನ್ನು ನಾವೇ ಸರಿಪಡಿಸಿಕೊಳ್ಳೋಣ. ನೀವೇನಂತೀರಿ?
@ಹನಿಬಿಂದು@
30.09.2023





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ