ನಮ್ಮ ರಾಜ್ಯ ಕರ್ನಾಟಕದ ನಾಡಹಬ್ಬ ದಸರಾ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ. ಭುವನೇಶ್ವರಿ ದೇವಿಗೆ ಗೌರವದ ನಮನ ಹಾಗೂ ನಮ್ಮ ದೇಸಿ ಸಂಸ್ಕೃತಿಯ ಅನಾವರಣ, ಕನ್ನಡ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ, ವಿಧ ವಿಧ ಕರ್ನಾಟಕ ಹಾಗೂ ದೇಶ ವಿದೇಶಗಳ ಕಲಾಕಾರರು, ಬರಹಗಾರರು, ಹಾಡುಗಾರರು, ಕವಿ ಬಂಧುಗಳಿಗೆ ಅವರವರ ಪ್ರತಿಭೆಗಳಿಗೆ ಅನಾವರಣ ಮಾಡಿಕೊಡಲು ಮೈಸೂರು ವೇದಿಕೆಯಾಗಿದೆ. ಹಾಗೆಯೇ ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಸನ್ಮಾನ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ಹೊಸ ಹೊಸ ಪ್ರತಿಭೆಗಳಿಗೆ ಕೂಡಾ ಅಲ್ಲಿ ಅವಕಾಶ ಸಿಗುತ್ತಿದೆ. ಇಷ್ಟು ಮಾತ್ರ ಅಲ್ಲ, ನಮ್ಮ ಕರ್ನಾಟಕದ ಹಲವು ವ್ಯಾಪಾರಿಗಳಿಗೂ ತಮ್ಮ ವ್ಯಾಪಾರಕ್ಕೆ ಇಲ್ಲಿ ಎಕ್ಸಿಬಿಷನ್ ನಲ್ಲಿ ಅವಕಾಶ ಇದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕಲೆಯಲ್ಪಡುವ ಮೈಸೂರು ಮಹಾರಾಣಿಯ ಹಾಗೆ ಝಗಮಗಿಸುತ್ತಿದೆ. ಎತ್ತ ನೋಡಿದರೂ ದೀಪದ ಸಾಲುಗಳು. ಅಂದವಾದ ಅರಮನೆ. ವಿಶ್ವ ವಿಖ್ಯಾತ ಜಂಬೂ ಸವಾರಿ. ಬನ್ನಿ ಪೂಜೆ. ಆನೆ ಕುದುರೆಗಳ ಸಾಲು. ತಾಲೀಮು. ಸೈಕಲ್, ಬೈಕುಗಳ ಜೊತೆ ಆಟ. ಎಲ್ಲವೂ ಚಂದವೇ. ಕುಸ್ತಿ, ಕತ್ತಿವರಸೆ ಇಂತಹ ದೇಸಿ ಕ್ರೀಡೆಗಳಿಗೆ ಅವಕಾಶ. ರಾಜರ ಆಳ್ವಿಕೆಯ ಒಂದು ಅಂಶವನ್ನು ನಾವಿಲ್ಲಿ ಮತ್ತೆ ಕಾಣಲು ಸಾಧ್ಯ ಅಲ್ಲವೇ? ಇದು ರಾಜ್ಯದ ಸಂಭ್ರಮ ಆದರೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ, ರಾಜ್ಯದ ರಾಜಧಾನಿ ಹಾಗೂ ಹಲವು ತಾಲೂಕು ಕೇಂದ್ರಗಳಲ್ಲೂ , ಹಲವು ದೇವಿ ದೇವಾಲಯಗಳಲ್ಲೂ , ಊರಿನಲ್ಲೂ, ಹಲವಾರು ಮನೆಮನೆಗಳಲ್ಲಿ ದಸರಾ ಗೊಂಬೆ ಇಟ್ಟು ಪೂಜಿಸಿ ತಮ್ಮದೇ ಆದ ಶೈಲಿಯಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.ದೇವಾಲಯಗಳಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲೂ ದೇವಿಯ ವಿವಿಧ ರೂಪಗಳಾದ ಪ್ರಥಮ ದಿನ ಶೈಲಪುತ್ರಿ ,ದ್ವಿತೀಯ ದಿನ ಬ್ರಹ್ಮಚಾರಿಣಿ , ತೃತೀಯ ದಿನ ಚಂದ್ರಘಂಟಾ , ಚತುರ್ಥಿ ದಿನ ಕೂಷ್ಮಾಂಡ ಪಂಚಮ ದಿನ ಸ್ಕಂದಮಾತಾ . ಷಷ್ಠಿ ದಿನ ಕಾತ್ಯಾಯಿನಿ, ಸಪ್ತಮಿ ದಿನ ಕಾಳರಾತ್ರಿ , ಅಷ್ಟಮಿ ದಿನ ಮಹಾಗೌರಿ ಹಾಗೂ ನವಮಿ ದಿನ ಸಿದ್ಧಿದಾತ್ರಿ ರೂಪದಲ್ಲಿ ಪೂಜಿಸಲಾಗುತ್ತದೆ. ಎಲ್ಲಾ ದೇವಿಯ ರೂಪಕ್ಕೂ ಪ್ರತ್ಯೇಕ ಕಥೆಗಳಿವೆ. ಆಯಾ ರೂಪದಲ್ಲೇ ದೇವಿಯನ್ನು ಏಕೆ ಪೂಜಿಸಬೇಕು ಎಂದು ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ. ತದ ನಂತರ ಹತ್ತನೆಯ ದಿನ ಉತ್ತಮ ದಿನ. ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ವಿಜಯ ದಶಮಿಯಷ್ಟು ಒಳ್ಳೆಯ ದಿನ ಬೇರಿಲ್ಲ. ತಮ್ಮ ತಮ್ಮ ಆಯುಧಗಳ ಪೂಜೆ, ಯಾವುದೇ ಶುಭ ಕಾರ್ಯದ ಆರಂಭ, ಬನ್ನಿ ಪೂಜೆ ಇವೆಲ್ಲ ಹತ್ತನೆ ದಿನದ ದಶಮಿಯಂದು. ಗೊಂಬೆಗಳ ವಿಸರ್ಜನೆಯ ಕಾರ್ಯವೂ ಅಂದೇ ನಡೆಯುತ್ತದೆ. ನವರಾತ್ರಿಗೆ ನವರಂಗ್ ಅಥವಾ ನವ ವಿಧವಾದ ಬಣ್ಣಗಳು ದೇವಿಯ ಶೃಂಗಾರಕ್ಕೆ ಮೀಸಲು. ಅಂತೆಯೇ ನಮ್ಮ ಮಹಿಳೆಯರು ಕೂಡಾ ಅದೇ ಬಣ್ಣ ಉಟ್ಟು ಖುಷಿ ಪಡುತ್ತಾರೆ. ಮೊದಲನೇ ದಿನ ಬಿಳಿ, ಎರಡನೇ ದಿನ ಕೆಂಪು, ಮೂರನೇ ದಿನ ನೀಲಿ, ನಾಲ್ಕನೇ ದಿನ ಹಳದಿ, ಐದನೇ ದಿನ ಹಸಿರು, ಆರನೇ ದಿನ ಊದ ಬಣ್ಣ ಅಥವಾ ಸಿಮೆಂಟ್ ಬಣ್ಣ, ಏಳನೇ ದಿನ ಕೇಸರಿ, ಎಂಟನೇ ದಿನ ನವಿಲ ಹಸಿರು ಮತ್ತು ಒಂಭತ್ತನೇ ದಿನ ಗುಲಾಬಿ ಬಣ್ಣಗಳು ದೇವಿಯ ಪೂಜಾ ಅಲಂಕಾರಕ್ಕೆ ಮೀಸಲು. ಇದೇ ಬಣ್ಣ ಎಂದು ಗುರುತಿಸಿದವರು ನಾವುಗಳೇ. ಒಟ್ಟಿನಲ್ಲಿ ದಸರೆಯ ಸಮಯದಲ್ಲಿ ಕರ್ನಾಟಕ ಹಾಗೂ ದೇಶದ ವಿವಿಧ ಭಾಗಗಳಲ್ಲಿ ವರ್ಣಮಯವಾಗಿ ಆಚರಣೆ ನಡೆಯುತ್ತದೆ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ , ಗುಜರಾತಿನಲ್ಲಿ ಗಾರ್ಭಾ ಹೀಗೇ ವಿವಿಧ ರಾಜ್ಯಗಳಲ್ಲಿ ಹೆಸರುಗಳಲ್ಲಿ ಅದು ನಡೆಯುತ್ತದೆ. ಒಟ್ಟಿನಲ್ಲಿ ಪೂಜೆ, ಅಲಂಕಾರದ ಮೂಲಕ ಶಕ್ತಿ ಸೇವೆ ಹಾಗೂ ಸಂಸ್ಕೃತಿಯ ಅನಾವರಣ ಇಲ್ಲಿ ನಡೆಯುತ್ತದೆ. ಭಾರತ ಕಲೆ ಸಂಸ್ಕೃತಿಯ ತವರೂರು. ಪ್ರತಿ ನಾಲ್ಕು ಕಿಲೋ ಮೀಟರ್ ಗೆ ಬದಲಾಗುವ ಭಾಷಾ ಶೈಲಿ, ಆಚರಣೆಗಳು, ಆಹಾರ ಪದ್ಧತಿ, ವಿವಿಧತೆಯನ್ನು ತಂದಿವೆ, ವಿವಿಧ ಪೂಜಾ ವಿಧಾನ ಭಕ್ತಿಯನ್ನು ಮೆರೆಸಿವೆ. ಶ್ರೀಮತಿ ವಾಸಂತಿ ಅಂಬಲಪಾಡಿ ಅವರ ಒಂದು ಅವಾಬಿಯ ತುಣುಕನ್ನು ಇಲ್ಲಿ ಹೇಳಬೇಕೆಂದು ಅನ್ನಿಸುತ್ತಿದೆ. ಅದರ ಭಾವಾರ್ಥ ಹೀಗಿದೆ. ಹಿಂದಿನ ಕಾಲದಲ್ಲಿ ದೇವಿಯ ಪಾತ್ರ ಮಾಡಬೇಕೆಂದಿದ್ದರೆ ವ್ರತ, ಪೂಜೆ, ಉಪವಾಸ ಮಾಡಬೇಕಿತ್ತು, ಆದರೆ ಇಂದು ಮೇಕಪ್ ಮ್ಯಾನ್ ಒಬ್ಬ ಇದ್ದರೆ ಸಾಕು. ಕಾಲ ಬದಲಾಗಿದೆ, ಪಾಶ್ಚಾತ್ಯರು ಕಾಲಿಟ್ಟ ಬಳಿಕ ಭಾರತದಲ್ಲಿ ಇಲ್ಲಿನ ಭಕ್ತಿ, ನಂಬಿಕೆ ಕಡಿಮೆಯಾಗಿ ಹೊರದೇಶದ ಫ್ಯಾನ್ಸಿ ಬದುಕು ಹೆಚ್ಚಿದೆ. ಅದರ ಜೊತೆ ಇಲ್ಲಿನ ಸಾಂಪ್ರದಾಯಿಕ ಉಡುಗೆ, ತೊಡುಗೆ, ಪದ್ದತಿ, ಆಚಾರ, ವಿಚಾರಗಳ ಮೇಲೂ ಬಲವಾದ ಅಡ್ಡ ಪರಿಣಾಮ ಬೀರಿ ತುಂಡು ತುಂಡಾದ, ಹರಿದ, ಅಲ್ಲಲ್ಲಿ ತೂತಾದ, ಮೈ ಮುಚ್ಚದ, ಮಾನ ಮರ್ಯಾದೆಯನ್ನು ಕೂಡಾ ಹರಾಜು ಹಾಕುವ ಬಟ್ಟೆಗಳು ಟಿವಿ ಶೋ ಗಳಿಂದ ಹಿಡಿದು, ವಿವಿಧ ಕಾರ್ಯಕ್ರಮಗಳು, ನಿತ್ಯ ಬದುಕು, ಅಲೆದಾಟ, ಸುತ್ತಾಟಗಳಲ್ಲೂ, ಕಾಣಿಸಿಕೊಂಡು ಕೆಲವೊಮ್ಮೆ ನೋಡುಗರ ಕಣ್ಣಿಗೆ ಹೇಸಿಗೆ ಹುಟ್ಟಿಸುತ್ತವೆ. ಅಷ್ಟು ಮಾತ್ರವಲ್ಲ, ಕೆಲವೊಂದು ಬಟ್ಟೆಗಳು ಪೋಷಕರೇ ತಮ್ಮ ಮಕ್ಕಳನ್ನು ಕಾಮದ ದೃಷ್ಟಿಯಲ್ಲಿ ನೋಡುವಂತೆ ಆಗಿದೆ. ನಮ್ಮದೇ ಸಾಂಪ್ರದಾಯಿಕ ಉಡುಗೆಯನ್ನು ಧರಿಸುವ ವಿಧಾನವೂ ಬದಲಾಗಿದೆ. ಅಲ್ಲಲ್ಲಿ ಧರ್ಮ ಸಂಸ್ಕೃತಿ ನೆಲೆಸಿ ಬೆಳೆಸಲು ಇಂತಹ ಹಬ್ಬ , ಹರಿದಿನ ಪೂಜಾ ವಿಶೇಷಗಳು ಸಹಕಾರಿ. ಹೀಗಾದರೂ ನಮ್ಮ ಸಂಸ್ಕೃತಿ ಬಿಂಬಿಸುವ ಕಾರ್ಯ ಸಾಗಲಿ ಎಂದು ಆಶಿಸೋಣ ಅಲ್ಲವೇ? ನೀವೇನಂತೀರಿ?@ಹನಿಬಿಂದು@
21.10.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ