ಶುಕ್ರವಾರ, ನವೆಂಬರ್ 17, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -210

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -210

      ನನ್ನೊಳಗಿನ ನಾನೆಂಬ ಗೆಳತಿಯ ಜೊತೆಗೆ ಒಂದಿಷ್ಟು ಹರಟೆ, ಮಾತು, ಸಿಂಹಾವಲೋಕನ, ಪರೀಕ್ಷೆ, ಸರಿ ತಪ್ಪುಗಳ ಲೆಕ್ಕಾಚಾರ, ಬೇಕಾದ್ದು ಬೇಡದರ ಚೂರು ಕ್ಲೀನಿಂಗ್.
ನಾನು ಸೌಮ್ಯ ಸ್ವರೂಪಿ. ಆದರೆ ಸ್ವಲ್ಪ ಹಠಮಾರಿ. ಯಾರಾದರೂ ನನ್ನನ್ನು ಡಿ ಗ್ರೇಡ್ ಮಾಡಿದರೆ ನಾ ಒಪ್ಪಿಕೊಳ್ಳಲಾರೆ. ಕಾರಣ ನನಗೆ ಒಳ್ಳೆ ಮನಸ್ಸಿದೆ, ಹೃದಯ ಚೆನ್ನಾಗಿದೆ. ಮನದ ಯಾವುದೇ ಮೂಲೆಯಲ್ಲಿ ದುರಾಸೆ, ಕಪಟ, ರೋಷ, ದ್ವೇಷಗಳು ಇಲ್ಲ. ಬಹಳ ಜನರಿಂದ ಆದ ನೋವಿದೆ. ಆ ನೋವಿಗೆ ನಾನು ದ್ವೇಷ ಸಾಧಿಸಲು ಹೋಗುತ್ತಿಲ್ಲ. ಬದಲಾಗಿ ಶಾಂತ, ನಿಶಬ್ದ, ಸೈಲೆಂಟ್ ಇವೇ ನನ್ನ ಅಸ್ತ್ರಗಳು.
  ಮಂಡೆ ಗಟ್ಟಿ ಇದೆ ಎಂದು ಬಂಡೆಗೆ ಗುದ್ದುವ ಸ್ವಭಾವ ನನ್ನದಲ್ಲ. ಎದುರಿನ ವ್ಯಕ್ತಿ ಹೇಗೆ ಇದ್ದಾನೆ, ಅವನ ಶಕ್ತಿಯ ಇತಿ ಮಿತಿಗಲೇನು ಎಂದು ಸದಾ ತಿಳಿಯುತ್ತೇನೆ. ಪರರ ಬಗ್ಗೆ ಅವರಿವರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಫಿಲ್ಮ್ ಆಕ್ಟರ್ಸ್, ಸೀರಿಯಲ್ ಆಕ್ಟರ್ಸ್, ಕ್ರಿಕೆಟರ್ಸ್, ಡಾನ್ಸರ್ಸ್ ಇಂಥವರ ಖಾಸಗಿ ಜೀವನದ ಬಗ್ಗೆ ಮಾತನಾಡಿ ಅವರನ್ನು ಡಿ ಗ್ರೇಡ್ ಮಾಡುವ ಸ್ವಭಾವ ನನಗಿಲ್ಲ. ಏಕೆಂದರೆ ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳು. ಯಾರು ಯಾವ ಕಾಲದಲ್ಲಿ ಯಾರೊಡನೆ ಬದುಕುತ್ತಾರೆ, ಎಲ್ಲಿ ಬದುಕುತ್ತಾರೆ, ಎಲ್ಲಿ ಸಾಯುತ್ತಾರೆ ಅಂತ ಡಿಸೈಡ್ ಮಾಡಿರುವುದು ವಿಧಿ. ನಾನಲ್ಲ ನೀವಲ್ಲ. ಪ್ರತಿ ಒಬ್ಬರ ಮನೆಯ ದೋಸೆಯು ತೂತಿರುವಾಗ ಇನ್ನು ಯಾರ ಮನೆಯ ದೋಸೆಯ ಬಗ್ಗೆ ಮಾತನಾಡಲು ಇನ್ನೇನು ಹೊಸತು ಉಳಿದಿದೆ ಅಲ್ಲವೇ?
   ಮಾನವತೆ ಇದೆ ನನ್ನಲ್ಲಿ. ಕಷ್ಟಕ್ಕೆ ಕರಗುತ್ತೇನೆ, ಇಲ್ಲದೆ ಇದ್ದರೂ ಸಹಾಯ ಮಾಡಲು ಹೋಗಿ ನಾನೇ ಸಿಕ್ಕಿ ಬೀಳುತ್ತೇನೆ. ಮತ್ತೆ ಆ ಬಲೆಯಲ್ಲಿ ಒದ್ದಾಡಿ ನೋವು ತಂದುಕೊಳ್ಳುತ್ತೇನೆ. ಪರರನ್ನು ಪಾಪ ಎಂದು ಸಹಾಯ ದೃಷ್ಟಿಯಿಂದ ನೋಡಿ, ಸಹಾಯ ಮಾಡಲು ಹೋದಾಗ ಅವರೇ ನನ್ನ ಗುಂಡಿಗೆ ನೂಕಿ ಹೋಗುತ್ತಾರೆ. ಕಷ್ಟ ಪಟ್ಟು ಎದ್ದು ಬರುತ್ತೇನೆ. ಸಡನ್ ಕೋಪದ ಕೈಗೆ ಬುದ್ಧಿ ಕೊಡುವ ಗುಣ ನನ್ನದು ಅಲ್ಲ. ಯೋಚಿದುವೆ.
  ಸ್ವಲ್ಪ ಉಡಾಫೆ ಸ್ವಭಾವ. ಮಾಡಬೇಕಾದ ಕೆಲಸವನ್ನು ಲಾಸ್ಟ್ ಡೇಟ್ ವರೆಗೆ ಪೆಂಡಿಂಗ್ ಇಟ್ಟು ಕೊನೆ ಕ್ಷಣದಲ್ಲಿ ಮಾಡಲು ಹೋಗಿ ಎಡವಟ್ ಮಾಡಿಕೊಳ್ಳೋದು ನನ್ನ ಕೆಲಸ. ಅದು ಪರೀಕ್ಷೆಯೇ ಇರಲಿ, ಜೀವನ ಪರೀಕ್ಷೆಯೇ ಇರಲಿ, ಬೇರೆ ಕೆಲಸವೇ ಇರಲಿ. 
ಮತ್ತೆ ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಕೆಟ್ಟ ಯೋಚನೆ ಮಾಡುತ್ತಾರೆ ಅಂತ ನಾನು ಅಂದುಕೊಳ್ಳುವುದಿಲ್ಲ. ಕಾರಣ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಆಲೋಚಿಸುವುದಿಲ್ಲ ಮತ್ತು ನನ್ನ ಬಗ್ಗೆ ಕೆಟ್ಟದಾಗಿ ಆಲೋಚಿಸಲು ಏನೂ ಇಲ್ಲ, ನಾನು ಸೊಳ್ಳೆ,ಇರುವೆ,  ಜಿರಳೆ, ಜೇಡದ ಹೊರತು ಯಾವ  ಪ್ರಾಣಿ, ಪಕ್ಷಿ, ಕೀಟವನ್ನು ಕೂಡಾ ಸಾಯಿಸಿಲ್ಲ. ಮನುಷ್ಯರಿಗೆ ಅನ್ಯಾಯ ಮಾಡಲಿಲ್ಲ, ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಮೋಸ ಮಾಡಲಿಲ್ಲ, ಪಾರ್ಶಿಯಾಲಿಟಿ ಅಂತೂ ಮಾಡಲೇ ಇಲ್ಲ. ಎಲ್ಲಾ ಮಕ್ಕಳಿಗೂ ತಿದ್ದಿ ಬುದ್ಧಿ ಹೇಳುತ್ತೇನೆ, ಕೇಳದೆ ಹಠ ಮಾಡಿದವನಿಗೆ ಸ್ವಲ್ಪ ಖಾರವಾಗಿಯೇ ಹೇಳುತ್ತೇನೆ. ಅದು ಅವನ ಒಳ್ಳೆಯದಕ್ಕೆ. ಎಲ್ಲರಿಗೂ ತುಂಬಾ ಪ್ರೀತಿ ಕೊಡುತ್ತೇನೆ ನನ್ನಲ್ಲಿ ಸಾಧ್ಯ ಆದಷ್ಟು. ನೋವು ಕೊಟ್ಟವರಿಗೂ ಕೆಟ್ಟದು ಬಯಸುವುದಿಲ್ಲ. ಬದಲಾಗಿ ದೇವರೇ ಅವರನ್ನು ನನ್ನ ಬದುಕಿನಿಂದ ದೂರ ಇರಿಸು ಎಂದು ಬೇಡುತ್ತೇನೆ.
  ದೇವರಲ್ಲಿ ನಾನು ಮನಸ್ಸಿಗೆ ಹಾಗೂ ದೇಹಕ್ಕೆ ಶಾಂತಿ, ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಇಷ್ಟನ್ನು ಬಿಟ್ಟು ಮತ್ತೆ ಕೇಳುವುದು ಸರ್ವೇ ಜನಾಃ ಸುಖಿನೋ ಭವಂತು ಇಷ್ಟೇ. ಎಲ್ಲರೂ ಚೆನ್ನಾಗಿರಲಿ, ಎಲ್ಲರನ್ನೂ ಚೆನ್ನಾಗಿ ಇಡಿ ಎಂದು. ಮಾನವನ ಕ್ರೂರತೆ ತೊಲಗಲಿ ಎಂದು ಬೇಡುತ್ತೇನೆ. ರಾಕ್ಷಸ ಪ್ರವೃತ್ತಿ ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರ, ಸಣ್ಣ ಮಕ್ಕಳ ಮೇಲೂ ಅತ್ಯಾಚಾರ ಇವುಗಳೆಲ್ಲ ಮನ ನೋಯಿಸುವ ಕಾರ್ಯಗಳು ಅಲ್ಲವೇ? ವಿಷ ಉಣಿಸಿ ಮಾನವ ಹಾಗೂ ಪ್ರಾಣಿ ಪಕ್ಷಿ ಮೀನುಗಳನ್ನು ಸಾಯಿಸುವುದು, ತಲ್ವಾರ್, ಚಾಕು ಚೂರಿ ಹಾಕಿ ಸಾಯಿಸುವುದು ಇವೆಲ್ಲ ಕರುಳು ಹಿಂಡುವ ನೋವುಗಳು. 
  ಎಲ್ಲಾ ಧರ್ಮಗಳ ತಿರುಳು ಒಂದೇ ಆಗಿದ್ದರೂ ಪರ ಧರ್ಮದವರನ್ನು ಹೀಗಳೆಯುವುದು ನನಗೆ ಆಗದ ವಿಷಯ. ಬೈಬಲ್, ಕುರಾನ್, ಗೀತೆ ಓದಿರುವ ನನಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಸಿಖ್ ಎಲ್ಲರ ಜೊತೆಗೂ ಗೆಳೆತನವೂ ಇದೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರನ್ನು ಕೂಲಂಕುಷವಾಗಿ ಬರಹಗಾರ್ತಿಯ ಕಣ್ಣಲ್ಲಿ ನೋಡಿದಾಗ ನನ್ನ ಅರಿವಿಗೆ ಬಂದದ್ದು ಎಲ್ಲಾ ಜಾತಿ ಧರ್ಮಗಳಲ್ಲಿ ಜನರು ಒಳ್ಳೆಯವರೂ ಇದ್ದಾರೆ, ಕೆಟ್ಟವರು ಕೂಡಾ ಇದ್ದಾರೆ. ಒಳ್ಳೆಯ ಜನರನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕೆ ಉದಾಹರಣೆ ಪುನೀತ್ ರಾಜಕುಮಾರ್, ಡಾ. ಎ.ಪೀ.ಜೆ. ಅಬ್ದುಲ್ ಕಲಾಂ, ಮದರ್ ತೆರೆಸಾ, ರಾಜ್ ಕುಮಾರ್, ಕಲ್ಪನಾ ಚಾವ್ಲಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ , ಸಾಲುಮರದ ತಿಮ್ಮಕ್ಕ, ಅಬ್ರಹಾಂ ಲಿಂಕನ್. ಜನರ ಎದೆಯಲ್ಲಿ ಇನ್ನೂ ಒಳ್ಳೆಯತನಕ್ಕೆ ಪ್ರೀತಿ, ಜಾಗ ಇದ್ದೇ ಇದೆ ಅಲ್ಲವೇ?
       ಮನುಷ್ಯರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕೆಟ್ಟವರೆ..ಕಾರಣ ಇತರರು ಬಯಸದ ಯಾವುದಾದರೂ ಕೆಟ್ಟ ಗುಣ ನಮ್ಮೊಳಗೆ ಇರಬಹುದು.  ಅಥವಾ ನನಗೆ ಇಷ್ಟ ಆದ ನನ್ನ ಗುಣ ಇತರರಿಗೆ ಇಷ್ಟ ಆಗದೆ ಇರಬಹುದು. ಎಲ್ಲರೂ ಐಶ್ವರ್ಯ ರೈ ಅವರ ಸೌಂದರ್ಯವನ್ನು ಹೊಗಳಿದರೆ "ಅವಳಿಗಿಂತ ಸುಂದರಿಯರು ಬೇರೆ ಇಲ್ವಾ?" ಎನ್ನುವವರೂ ಇರಬಹುದು. ಅದು ಅವರವರ ಭಾವಕ್ಕೆ ನಿಳುಕಿದ್ದು. ನಮ್ಮ ನಮ್ಮ ಜ್ಞಾನದ ಎತ್ತರಕ್ಕೆ ನಾವು ಮಾತನಾಡಬಲ್ಲೆವು ಅಲ್ಲವೇ! ವಿಜ್ಞಾನಿಗಳಿಗೆ ತಿಳಿದ ಮಾಹಿತಿ ಬಹುಶಃ ಕನ್ನಡ ಪ್ರಾಧ್ಯಾಪಕರಿಗೆ ಗೊತ್ತಿಲ್ಲ. ಕನ್ನಡ ಪಂಡಿತರಿಗೆ ತಿಳಿದ ಭಾಷಾಜ್ಞಾನ ಡಾಕ್ಟರಿಗೆ ಗೊತ್ತಿರಲಿಕ್ಕಿಲ್ಲ, ವ್ಯಕ್ತಿತ್ವ ಬದಲಾವಣೆ ಇದೆ. ಹಾಗಂತ ಯಾರೂ ಮೇಧಾವಿಗಳು ಅಲ್ಲ ಎಂದಲ್ಲ, ಯಾರೂ ದಡ್ಡರು ಕೂಡ ಅಲ್ಲ, ಅವರವರ ಜ್ಞಾನ ಅವರಿಗೆ ಇದೆ. ಯಾವುದೋ ಒಂದು ವಿಷಯ ಎಲ್ಲರಿಗೂ ತಿಳಿದಿರಬೇಕು ಎಂದೇನೂ ಇಲ್ಲ ಅಲ್ವಾ? 
ಇನ್ನು ಬಟ್ಟೆ ಬರೆಗಳ ವಿಷಯಕ್ಕೆ ಬಂದಾಗ ಕೆಲವೊಂದು ಮಾಡೆಲ್ ಗಳು, ಸಿನೆಮಾ ನಟರು, ನಟಿಯರು, ಟಿವಿ ಧಾರಾವಾಹಿ, ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಅವರು ಧರಿಸುವ ಅರ್ಧಂಬರ್ಧ ಮಾನವನ್ನೂ ಮುಚ್ಚಲು ಹಿಂದುಳಿದ ಬಟ್ಟೆಗಳು ನನಗೆ ಇಷ್ಟ ಆಗದು. ನಾನು ಅವುಗಳನ್ನು ಹಾಕುವುದೂ ಇಲ್ಲ, ಇಷ್ಟ ಪಡುವುದು ಕೂಡ ಇಲ್ಲ. ನಾವು ಹಿರಿಯರು ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಮಾದರಿ ಆಗಿರಬೇಕು, ಹಿರಿಯರೇ ಬಿಕಿನಿಯಲ್ಲಿ ಕುಣಿದರೆ ಕಿರಿಯರು ಬಟ್ಟೆ ಬಿಚ್ಚಿ ಕುಣಿಯುವುದರಲ್ಲಿ ತಪ್ಪಿಲ್ಲ. ಅಲ್ಲಿಗೆ ನಮ್ಮ ಸಂಸ್ಕೃತಿ ನಾಶ ಮಾಡುವುದು ನಾವೇ ಅಲ್ಲವೇ? ಅದಕ್ಕೆ ನನ್ನ ಸಹಮತ ಇಲ್ಲ. 
   ಬದುಕು ನಾಲ್ಕು ದಿನ, ಪಾಪ ಪುಣ್ಯಗಳ ನಂಬುವವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲಾ ಧರ್ಮಗಳೂ, ಧರ್ಮ ಗ್ರಂಥಗಳೂ ಇದರ ಬಗ್ಗೆ ಹೇಳಿವೆ. ಸ್ವರ್ಗ, ನರಕದ ಕಲ್ಪನೆ ಜಗತ್ತಿನ ಎಲ್ಲಾ ಮೂಲೆಯಲ್ಲೂ ಇದೆ. ಹಾಗಾಗಿ ಒಳ್ಳೆಯತನಕ್ಕೆ ನನ್ನ ಮತ. 
  ಪರಿಸರ ನನ್ನ ಲವರ್. ತುಂಬಾ ಪ್ರೀತಿಸುವೆ ಹಸಿರನ್ನು. ನನ್ನ ಕಾರ್ಯಗಳಲ್ಲಿ ಇಪ್ಪತ್ತು ವರ್ಷಗಳ ಮೊದಲೇ ಪ್ಲಾಸ್ಟಿಕ್ ಭೂಮಿಗೆ ಬಿಸಾಡಲಾರೆ ಎಂಬ ಪ್ರತಿಜ್ಞೆ ಮಾಡಿ ಅದರಂತೆ ನಡೆಯುತ್ತಿರುವ ವ್ಯಕ್ತಿ ನಾನು. ಯಾವುದೇ ಚಾಕಲೇಟು ಕವರ್, ಬಾಟಲಿಯನ್ನು ಮನೆ ತನಕ ತಂದು ಮತ್ತೆ ಕಸದ ತೊಟ್ಟಿಗೆ ಹಾಕುವ ಪರಿಪಾಠ ಇದೆ. ಅದಕ್ಕೆ ನನ್ನ ಮೇಲೆ ನನಗೆ ಹೆಮ್ಮೆ.
ನೋವಿದೆ, ನಲಿವಿದೆ, ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ಖುಷಿ ಇದೆ. ಸಾಧನೆಯ ಗೆಲುವಿದೆ , ಇನ್ನೂ ಸಾಧಿಸ ಬೇಕೆಂಬ ಛಲವಿದೆ, ಸಾಧಿಸಲು ಬಹಳ ಇದೆ ಕಲಿತದ್ದು ಏನೂ ಸಾಲದು ಎಂಬ ತಿಳಿವಿದೆ, ಕೆಲವೊಂದು ವಿಷಯದಲ್ಲಿ ಅಸಹಾಯಕಳಾಗಿ ಬಿಟ್ಟೆ ಎಂಬ ಕಣ್ಣೀರಿದೆ, ಬದುಕು ನಾವು ಅಂದುಕೊಂಡ ಹಾಗೆ ಇಲ್ಲ, ವಿಧಿ ಲಿಖಿತದಂತೆ ಇದೆ ಎಂಬ ಅರಿವಿದೆ, ಕಷ್ಟ ಪಟ್ಟರೆ ಸುಖ ಖಂಡಿತ ಎಂಬ ಜ್ಞಾನವಿದೆ, ಬದುಕಿನ ದಾರಿಯ ಎಡರು ತೊಡರುಗಳ ಬಗ್ಗೆ, ನೋವು ನಲಿವಿನ ಬಗ್ಗೆ ತಿಳಿದಿದೆ. ಪರರಿಗೆ ನೋವು ಕೊಡದೆ ಬದುಕಿದ ಸಮಾಧಾನವೂ ಇದೆ. ಮುಂದೆ ಸಾಗುವಾಗ ಇರುವ ತೊಂದರೆಗಳ ಬಗ್ಗೆ ಭಯವಿದೆ. ಪ್ರತಿ ಹೆಜ್ಜೆಯ ಮೇಲೂ ಗಮನ ಇದೆ. 
   ನನ್ನ ಗುಣವನ್ನು ನಾ ಬಹಳ ಪ್ರೀತಿಸುವೆ, ಸೋಮಾರಿತನ ದ್ವೇಷಿಸುವ ನಾನು ಪರರಿಗೆ ನೋವು ಕೊಡಲಾರೆ. ಸರ್ವರಿಗೂ ನನ್ನಲ್ಲಿ ಪ್ರೀತಿ, ಸ್ನೇಹವಿದೆ. ಮೋಸವಿಲ್ಲ. ಸಹಾಯ ಬಯಸುವವರು ಬಹಳ ಜನ , ಸಹಾಯ ಮಾಡಲಾಗದ ಅಶಕ್ತತೆಗೆ ನೋವಿದೆ. ನನ್ನತನವಿದೆ. ಪರರಿಗೆ ಸಹಾಯ ಮಾಡಿದ ಹೆಮ್ಮೆ ಇದೆ. ಬೇಡದ್ದನ್ನು ತಿರಸ್ಕರಿಸಿದ ತೃಪ್ತಿ ಇದೆ. ಒಂಥರಾ ಡೇರಿಂಗ್ ಇದೆ, ಅಳುಕುತನವೂ ಇದೆ. ಒಟ್ಟಿನಲ್ಲಿ ಮಾನವತೆ ಇರುವ ಮಾನವ ಗುಣವಿದೆ. 
ಎಲ್ಲವೂ ಸರಿ, ಎಲ್ಲವೂ ಸತ್ಯ, ಹೀಗಿದ್ದರೆ ಮನುಷ್ಯ ದೇವರಾಗಿ ಬಿಡುತ್ತಾನೆ. ಮನುಷ್ಯ ಹಾಗಿದ್ದರೆ ದೇವರಿಗೆ ರೆಸ್ಪೆಕ್ಟ್, ಮೌಲ್ಯ, ಬೆಲೆ ಇಲ್ಲ. ಆದ ಕಾರಣ ದೇವರು ಮನುಷ್ಯನನ್ನು ದೇವರಾಗಲು ಬಿಡಲಾರ ಅಲ್ಲವೇ? ತನ್ನ ಸೀಟು ಹೋದರೆ? ಭೂ ಲೋಕದಲ್ಲಿ ಎಲ್ಲಾ ಕುರ್ಚಿಗಾಗಿಯೇ ಕಾದಾಟ, ಜಗಳ, ಓಟು, ಮೃತ್ಯು ಎಲ್ಲಾ ನಡೆಯುತ್ತದೆ. ಹೆಸರು, ಖ್ಯಾತಿಗೆ ಜನ ಬೇಗ ಬಲಿಯಾಗುತ್ತಾರೆ. 
ಎಲ್ಲರ ಬದುಕಿನ ತಿರುಳು ಇಷ್ಟೇ. ಬರುವಾಗ ತರಲಿಲ್ಲ, ಹೋಗುವಾಗ ಕೊಂಡು ಹೋಗುವುದಿಲ್ಲ, ಬರಿಗೈಲಿ ಬಂದು ಹಾಗೆಯೇ ಹೋಗುವ ಬದುಕಿನಲ್ಲಿ ಆಸೆ, ಆಮಿಷ, ಅಧಿಕಾರ, ಮದ, ಮಾತ್ಸರ್ಯ, ಹೊಟ್ಟೆಕಿಚ್ಚು, ನಂಜು. 
ಹತ್ತಿರವಿದ್ದರೂ  ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ..
ಸದಾ ನಾ ನೇನೆಸುವ ಕವಿ ಸಾಲುಗಳು. ನೀವೇನಂತೀರಿ?
@ಹನಿಬಿಂದು@
16.11.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ