ಬದುಕ ಬೇರಿನ ತೊಟ್ಟಿಲೊಳಗೆ
ನರಕ ಎಂಬ ಮಂಚದೊಳಗೆ
ನಾನು ನೀನು ಎನುವ ಮನುಜನು
ನೀತಿ ಕಲಿಯಲು ಸಾಧ್ಯವೇ?
ಅಪ್ಪ ಅಮ್ಮರು ಲೆಕ್ಕಕ್ಕಿಲ್ಲ
ಹಿರಿಯ ಕಿರಿಯಗೆ ಬೆಲೆಯೇ ಇಲ್ಲ
ಗೆಳೆಯರನ್ನೂ ಕೊಲುವರಲ್ಲ
ಮಾನವತೆಯು ಎಲ್ಲಿದೆ?
ಅಕ್ಕ ತಂಗಿ ಎನುವರಿಲ್ಲ
ಹೆಣ್ಣ ಬಾಳಿಗೆ ಧೈರ್ಯವಿಲ್ಲ
ದೇಹ ಬಳಸಿ ಹೊಡೆದು ಸಾಯಿಸಿ
ಮೋರಿಗೆಸೆದು ಹೋದರಲ್ಲ!
ಗಂಡುಗಳಿಗೂ ಹೆಣ್ಣುಗಳಿಗೂ
ಮಾನವತೆಯ ಹೇಳೋರ್ಯಾರು
ನಿತ್ಯ ಸಾವನು ನೋಡುತ್ತಿದ್ದರೂ
ತಾವೇ ಎನುತ ಮೆರೆವರಲ್ಲ!!
ದಾನ ದಯೆಯ ಮರೆತ ಜನರು
ಕಾಮ ಕ್ರೋಧ ಹೆಚ್ಚಿಸಿಹರು
ಮೋಹ ಮದದಿ ಉರಿಯುತಿಹರು
ಲೋಭ ಮತ್ಸರ ಕಾರುತಿಹರು
ತಲೆಯ ಬಾಗೋ ಗುಣವೇ ಇಲ್ಲ
ಬುದ್ಧಿ ಹೇಳಲು ಕೇಳ್ವರಿಲ್ಲ
ತಾನು ತನ್ನದು ತನಗೆ ಎಂದು
ತಮ್ಮ ಮಾತನೆ ಇಡುವರಲ್ಲ!
ಸೋತ ಮನಕೆ ಬೇಕು ಸಾಂತ್ವನ
ನೋವ ಹೃದಯಕೆ ನಿತ್ಯ ತಲ್ಲಣ
ತ್ಯಾಗ ಪ್ರೀತಿ ನೀತಿ ನಿಯಮ
ಕಲಿಯಬೇಕಿದೆ ಸರ್ವ ಜನಕೆ!
ಶಿಕ್ಷಕರಿಗೂ ಶಿಕ್ಷೆ ಇಲ್ಲಿ
ವೈದ್ಯರಲ್ಲೂ ಮೋಸ ಕಳ್ಳ
ಅಣ್ಣ ತಮ್ಮನ ಕೊಲುವನಲ್ಲ
ಯಾರ ಇಂದು ನಂಬಲಿ
ಮಡದಿ ವಿಷವ ಉಣಿಸಿ ಸಾಯಿಸಿ
ಹೆಂಡತಿಯನು ಹೊಡೆದು ಉರುಳಿಸಿ
ಮಕ್ಕಳನ್ನು ತಾ ಬಾವಿಗೆ ತಳ್ಳುತ್ತಾ
ಪೋಷಕರಿಗೆ ಏನು ಹೇಳಲಿ?
ತನ್ನ ಜೀವಕು ಶಾಂತಿ ಇಲ್ಲ
ಪರರ ಮೇಲೆ ಧೈರ್ಯವಿಲ್ಲ
ಬೀಗ ಸಾಲದು ಗ್ರಿಲ್ಸ್ ಬೇಕು
ಅಷ್ಟೂ ಸಾಲದು ಬೇಲಿ ಬೇಕು
ತಂತ್ರ ಯುಗವೋ ಮಂತ್ರ ಯುಗವೊ
ಜನರ ಪ್ರಾಣವ ಕೀಳೋ ಮನವೋ
ದೇವ ದೈವಕ್ಕೆ ಸೆಲ್ಫಿ ಮರುಳೋ
ಗೌರವದ ಚಿಹ್ನೆ ಎಲ್ಲಿದೆ?
@ಹನಿಬಿಂದು@
17.05.2025
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ