ಮಂಗಳವಾರ, ಅಕ್ಟೋಬರ್ 14, 2025

ಕಥೆ


ಸೀತೆಯ ಬದುಕಿನ ಬೆಳಕು

ಸೀತಾ ಎಂಬ ಹೆಸರಿನ ಆಕೆ ಜೀವನದ ಕಠಿಣ ಪರೀಕ್ಷೆಗಳನ್ನು ಎದುರಿಸಿದವಳು. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು. ಸಂಬಳ ಅಷ್ಟೇನೂ ಹೆಚ್ಚಾಗಿರಲಿಲ್ಲ. ಆದರೆ ಆ ಕೆಲಸವೇ ಆಕೆಗೆ ಆತ್ಮ ಸಂತೋಷದ ಮೂಲವಾಗಿತ್ತು. ಹಿರಿಯರು ಜಾತಕ, ಉದ್ಯೋಗ ಎಲ್ಲಾ ನೋಡಿ ಮದುವೆ ಮಾಡಿ ಕೊಟ್ಟ ಗಂಡನು ಒಂದು ದಿನ ಎಲ್ಲವನ್ನೂ ಬಿಟ್ಟು ಬೇರೆ ಮದುವೆಯಾಗಿದ್ದ ಮತ್ತು ಎರಡನೇ ಹೆಂಡತಿಯ ಬಳಿಯೇ ನೆಲೆಸಿದ್ದ. ಅದು ಯಾವ ಮೋಡಿ ಮಾಡಿ ಬಿಟ್ಟಿದ್ದಳೋ ಆಕೆ ತಿಳಿಯದು. ಆ ದಿನದಿಂದ ಸೀತಾಳ ಜೀವನ ಬದಲಾಯಿತು. ಇಬ್ಬರು ಚಿಕ್ಕ ಮಕ್ಕಳ ಜವಾಬ್ದಾರಿ ಸಂಪೂರ್ಣವಾಗಿ ಆಕೆಯ ಹೆಗಲ ಮೇಲೆ ಬಂತು.

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆಕೆಗೆ ಆಕೆಯ ತವರು ಕುಟುಂಬದ ಸಹಕಾರವೇ ಇರಲಿಲ್ಲ. ಯಾರೂ ಆಕೆಯ ನೋವನ್ನು ಗಮನಿಸಲಿಲ್ಲ. ರಾತ್ರಿ ಹೊತ್ತು ಕಣ್ಣೀರು ಹಾಕಿಕೊಂಡು ಮಕ್ಕಳ ನಿದ್ರೆ ನೋಡುವ ಸೀತಾಳ ಮನದಲ್ಲಿ ಒಂದು ನಿರ್ಧಾರ ಮಾತ್ರ — “ನನ್ನ ಮಕ್ಕಳು ನನ್ನಂತಾಗಬಾರದು.”

ಬೆಳಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಮನೆಗೆ ಬಂದು ಅಡುಗೆ ಮಾಡುತ್ತಾ, ಮಕ್ಕಳ ಪಾಠ ಕೇಳಿಸುತ್ತಾ ಆಕೆ ತನ್ನ ಜೀವನದ ಪ್ರತಿಯೊಂದು ಕ್ಷಣವನ್ನೂ ಬಲಿದಾನ ಮಾಡಿದಳು. ಅನೇಕ ದಿನಗಳು ಹೊಟ್ಟೆ ಬಿದ್ದರೂ ಮಕ್ಕಳ ಹೊಟ್ಟೆ ಖಾಲಿ ಬಿಡಲಿಲ್ಲ. ದೇವರ ದಯೆಯಿಂದ, ಮಕ್ಕಳಿಬ್ಬರೂ ಬುದ್ಧಿವಂತರು. ಸೀತಾಳ ಪ್ರಾರ್ಥನೆ ಮತ್ತು ಶ್ರಮದಿಂದ ಅವರು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದರು.
ಕಾಲ ಕ್ರಮೇಣ, ಮಗನೊಬ್ಬ ಇಂಜಿನಿಯರ್ ಆಗಿ, ಮಗಳು ವೈದ್ಯೆಯಾಗುವಷ್ಟು ಮುನ್ನಡೆದರು. ಅವರು ದೊಡ್ಡ ನೌಕರಿಗಳಲ್ಲಿ ಸೇರಿ ತಾಯಿಯ ತಲೆ ಎತ್ತುವಂತೆ ಮಾಡಿದರು. ಒಂದು ದಿನ, ಸೀತಾಳ ಮಕ್ಕಳು ಆಕೆಯನ್ನು ಕರೆದುಕೊಂಡು ವಿದೇಶಕ್ಕೆ ಕರೆದೊಯ್ದರು. ಮತ್ತು ಅಲ್ಲಿ ಆಕೆ ಮೊದಲ ಬಾರಿಗೆ ತಾನು “ಒಂಟಿ” ಅಲ್ಲ ಎಂಬ ಭಾವನೆ ಅನುಭವಿಸಿದಳು.
ಒಮ್ಮೆ ಕಣ್ಣೀರುಗಳಿಂದ ತುಂಬಿದ ಆಕೆಯ ಕಣ್ಣುಗಳು ಈಗ ಹೆಮ್ಮೆಯಿಂದ ಕಂಗೊಳಿಸುತ್ತಿದ್ದವು. ಸೀತಾಳ ಕಥೆ ಜೀವನದ ಒಂದು ಸತ್ಯವನ್ನು ನೆನಪಿಸುತ್ತದೆ — ಒಂಟಿತನದಲ್ಲೂ ನಂಬಿಕೆ ಇರಲಿ; ಶ್ರಮ ಮತ್ತು ದೇವರ ದಯೆ ಇದ್ದರೆ ಅಸಾಧ್ಯವೆಂಬುದೇ ಇಲ್ಲ. ಎಲ್ಲರಿಗೂ ನಾಲ್ಕು ಜನರಂತೆ ಬಾಳುವ ಒಂದು ದಿನ ಬಂದೇ ಬರುತ್ತದೆ.
@ಹನಿಬಿಂದು@
13.10.2025


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ