ಭಾನುವಾರ, ಜನವರಿ 31, 2021

ಪಂಜು ಪ್ರೇಮಪತ್ರ ಸ್ಪರ್ಧೆಗೆ

ಪಂಜು ಪ್ರೇಮಪತ್ರ ಸ್ಪರ್ಧೆಗೆ

                                                  ದಿನಾಂಕ 01.02.2021
                                                     ಸ್ಥಳ: ಹೃದಯಾಂತರಾಳ

ಪ್ರಿಯ ಹೃದಯಕ್ಕೆ,
               ನನ್ನೊಲವನು ಶಾಯಿಯಾಗಿ ಸುರಿದು,  ಜೀವನರಕ್ಷೆಯೆಂಬ ಲೇಖನಿಯಲಿ ಬರೆಯುತಿಹ ಮನದಾಳದಿಂದ ಬಂದ ಅಮೃತ ಪದಗಳಿವು ಒಲವೇ. ಮೊದಲನೆಯದಾಗಿ ನಾ ಪ್ರತಿನಿತ್ಯ ಹೇಳುವ ಮಾತನ್ನು ಮತ್ತೆ ಮತ್ತೆ ನಿನ್ನ ಕಿವಿಯಲ್ಲುಸುರುವ ಆಸೆ. ಅದೇನು ಗೊತ್ತೇ? ನಾ ನಿನ್ನ ಪ್ರೀತಿಸುತ್ತಿದ್ದೇನೆ ಚೆಲುವೇ. ನಾ ನಿನ್ನೊಲವಿಗೆ ಶರಣು ಹೋಗಿರುವೆ, ನಿನ್ನ ಬಾಳ ಬಾಂದಳದಲಿ ಬಾಳ ಚಂದಿರನಾಗಿ, ನಿನ್ನ ಬಾಳ ಭವಿತವ್ಯಕೆ ಸದಾ ಬೆಳದಿಂಗಳ ಚೆಲ್ಲಲು ಅವಕಾಶ ಕೊಟ್ಟಿರುವೆಯಲ್ಲವೇ?
        ಮುದ್ದು ಪ್ರೀತಿಯೇ, ನೀನೇಕೆ ಅಷ್ಟೊಂದು ಸುಂದರವಾಗಿರುವೆ? ಶಿಲ್ಪಿ ತನ್ಮಯತೆಯಿಂದ ಕೆತ್ತಿದ ದಂತದ ಗೊಂಬೆಯಂತೆ, ಕಲಾಕಾರ ಬರೆದ ಅಮೂರ್ತ ಶಿಲ್ಪದಂತೆ, ನಾಟ್ಯ ರಾಣಿಯಂತೆ, ಕವಿಯು ಹಾಡಿದ ಅದ್ಭುತ ಪ್ರೇಮಗೀತೆ ನೀನಾಗಿರುವೆ ನನ್ನೊಲವ ಕುಸುಮವೇ. ಹಿಮಾಲಯದ ಪರ್ವತಗಳ ತಂಪಿನ ಬಿಳುಪು ನಿನಗೆ, ಹಿಮಬಿಂದುವಿನಂಥ ಬೊಟ್ಟಿಡುವಾಸೆ ನನಗೆ. ಮೇಘಗಳನೇ ಕಟ್ಟಿ ನಿನಗೆ ಸೀರೆಯುಡಿಸುವಾಸೆಯೆನಗೆ, ಚೈತ್ರ ಮಾಸದ ಕೋಗಿಲೆಯೂ ನಿನಗಾಗೇ ಹಾಡುತಿದೆಯೆನುವ ಸ್ವಪ್ನ. ದೀಪದಂತಹ ಕಣ್ಣಿನಂದಕೆ ನಾಗವೇಣಿಯ ಚೆಲುವು. ಆಹಾ..ಅದೇನು ಮೋಡಿಯಿದೆ ಆ ನಿನ್ನ ಜಡೆಗೆ! ಅತ್ತಿಂದಿತ್ತ, ಇತ್ತಿಂದತ್ತ ಓಲಾಡುತಲಿ ಕೂಗಿ ಕರೆದಂತಿಹುದೆನ್ನ ನಿನ್ನೆಡೆಗೆ! ಆ ಕೈಬಳೆಯ ಸದ್ದೋ ನಾದ ಬೀರಿ ಕಲಕುತಿದೆ ಮೈಮನವ ಹಾಡುತಲಿ ಮನದಿ ಪ್ರೇಮ ರಾಗದ ಮೋಡಿಯ! ತಡೆಯಲಾರೆ ನನ್ನೆ ನಾನು….ನಿನ್ನ ಪ್ರೇಮ ಸಾಗರದಿ ತೇಲುತಿಹ ನೌಕೆ ನಾನು ಒಲವೇ!
      
           ನಿನ್ನ ನಾನು ಅದ್ಯಾವುದಕ್ಕೆ ಹೋಲಿಸಲಿ ನನ್ನ ಪ್ರೀತಿಯ ಕೋತಿಮರಿಯೇ? ಪೃಥ್ವಿಯಂತಿಹ ನನ್ನ ಕೀರ್ತಿಯ ಬೆಳಗಬೇಕಾದ ಅಪೂರ್ವ ರವಿಕಿರಣ ನೀನು…ನನ್ನುಸಿರ ಒಳಕಳಿಸಿ ಹೊರ ಹಾಕುತಿರುವ ಶಕ್ತಿ ನೀನು…ನನ್ನೊಡಲ ಬಡಿತ ನೀನು, ನನ್ನ ನರನರಗಳ ಮಿಡಿತ ನೀನು, ನನ್ನ ಪ್ರತಿ ಕ್ಷಣಗಳ ತುಡಿತ ನೀನು, ನನ್ನ ನೋಡಿ ಪರರಿಗಾಗುವ ಕಡಿತಕೆ ಕಾರಣವೂ ನೀನೇ ಪ್ರಿಯೆ!
        
      ದೇಹ ದೇಗುಲದ ಗರ್ಭ ಗುಡಿಯಲಿ ಪೂಜಿಸಲ್ಪಡುತಿರುವ ಮೂರ್ತಿಯೇ, "ಈ ಜೀವನ ಮೂರು ದಿನಗಳದು, ಈ ಬಾಳ್ವೆ ಚಿಕ್ಕದು" ಎಂದೆಲ್ಲ ಜನ ಹೇಳುವರು, ನೀ ಬಾಳಲಿರೆ ಪ್ರತಿ ದಿನವೂ ವರುಷದಂತೆ ದೊಡ್ಡದೇ ಮನವೇ. ಪ್ರತಿ ಕ್ಷಣವೂ ಗಂಟೆ, ಪ್ರತಿ ದಿನವೂ ವರುಷ ನಮಗೆ ಸಂತಸದಲಿ! ನಿನ್ನೊಂದಿಗೆ ಯುಗವೂ ಕ್ಷಣದಂತೆ ಕಳೆವುದೆಂಬುದನು ನಾ ಬಲ್ಲೆ! ಆದರೂ ನೀ ಜತೆಗಿದ್ದರೆ ಕಿರಿಯದಾದ ಬದುಕು ಹಿರಿಯದಾಗಲಿದೆಯಲ್ಲವೇ? ನೀ ಪ್ರತಿ ಕ್ಷಣವೂ ಕೊಡುವ ಸಂತಸ, ತುಂಬುವ ಧೈರ್ಯ, ನಾ ಪಡೆವ ಆತ್ಮವಿಶ್ವಾಸದ ಮಳೆಯನು ಮತ್ತಾರು ನನ್ನೆದೆಯಲಿ  ಸ್ಪುರಿಸಲು ಸಾಧ್ಯ ಸಖಿಯೇ? 
   
          ಅಮ್ಮನ ಕೈತುತ್ತು, ಆಗಸದ ಹೃದಯದ ಅಪ್ಪನ ಗಮನ, ತಂಗಿಯ ತುಂಟಾಟ, ಅಕ್ಕನ ಪಕ್ವತೆ, ತಮ್ಮನ ತರಲೆ, ಅಣ್ಣನ ಮೊಟಕುವಿಕೆ, ಅಜ್ಜಿಯ ಮುದ್ದು, ತಾತನ ತೂಕಭರಿತ ಅನುಭವದ ನುಡಿಮುತ್ತುಗಳೆಲ್ಲವೂ ನಿನ್ನಲ್ಲೇ ಸೇರಿಕೊಂಡಿವೆಯಲ್ಲವೇ ನನ್ನಾಕಾಶವೇ? ಅಷ್ಟೇ ಯಾಕೆ, ನನ್ನ ಗುರುಗಳ ಜ್ಞಾನವೆಲ್ಲವೂ ಕೂಡಾ ನಿನ್ನೊಳದು ಹೇಗೆ ಅಡಗಿ ಕುಳಿತಿಹುದೆಂದು ಯೋಚಿಸುತ್ತಾ ಕುಳಿತರೆ ನಾ ನಿನ್ನ ಪ್ರೀತಿಯ ಹುಚ್ಚನಾಗುವೆ ನನ್ನ ರಾಣಿ ಜೇನ್ನೊಣವೇ…!
     
      ಮನದೊಳಗೊಂದು ಮನ, ಜೀವದೊಳಗೊಂದು ಜೀವ, ಹೃದಯದೊಳಗೊಂದು ಹೃದಯ, ಭಾವದೊಳಗೊಂದು ಭಾವ, ನಲಿವಿನೊಳಗೊಂದು ನಲಿವಿದ್ದರೆ ಅದು ನೀನೇ. ನನ್ನ ಜೀವನ, ಬದುಕು, ಪ್ರತಿ ಕ್ಷಣ, ಹೃದಯ ಬಡಿತ, ನಾಡಿ ಮಿಡಿತ, ಪದಗಳ ಕವಿತೆ ಸರ್ವಸ್ವವೂ ನಿನಗೇ ಮೀಸಲು ಗೆಳತೀ..ನೀ ನನ್ನ ಭಾವಗಳ ಒಡತಿ, ಧರೆಯ ಸೂರ್ಯನಂತೆ ಬೆಳಗುತಿ, ಇರುಳ ಚುಕ್ಕಿಗಳಂತೆ ಮಿನುಗುತಿ, ಬಯಲ ಚೆಂಡಿನಂತೆ ಪುಟಿಯುತಿ, ಕಂಪ ಸೂಸುವ ಮಲ್ಲಿಗೆಯಂತೆ ಪ್ರೇಮದಿ ಅರಳುತಿ…ನಾ ಇರಲಾರೆ ನಿನ್ನ ಹೊರತು…

      ನವ್ಯ, ನವೀನ ಕಾವ್ಯಗಳೊಡತಿಯೇ, ದ್ವಿಭಾಜಕದ ಒಂದು ಬದಿಯ ಮುಳ್ಳಿನಂಥ ಮಿಡಿತವೇ, ನನ್ನ ಬಾಳರಥದ ಸಾರಥಿಯೇ, ನನ್ನೊಲವ ತೇರನೆಳೆಯುತಿಹ ಅಶ್ವವೇ, ಈ ಕೃಷ್ಣನ ರಾಧೆಯೇ, ರುಕ್ಮಿಣಿಯೇ, ಸತ್ಯಭಾಮಳೇ, ಚಂದ್ರವಳ್ಳಿಯೇ, ಜಾಂಬವತಿಯೇ, ಹದಿನಾರು ಸಾವಿರದ ಎಂಟು ಕನ್ಯೆಯರಿಗೂ ಸಮನಾದ ಮುತ್ತು ನೀನು! ಬಂಗಾರ,ವಜ್ರ, ವೈಡೂರ್ಯ, ಪಚ್ಚೆ, ಹವಳ, ನೀಲ, ಪ್ಲಾಟಿನಂಗಿಂತಲೂ ಶ್ರೇಷ್ಠ ರತ್ನವಲ್ಲವೇ ನೀ ನನ್ನ ಬಾಳಿಗೆ  ನನ್ನೊಡತಿ…
ಹಸಿರುಗಿಡದ ರುಚಿಯ ಹಣ್ಣಂತೆ, ಮೊಸರಲಿ ತೇಲುತಿಹ ರುಚಿಕರ ಶ್ವೇತ ಬೆಣ್ಣೆಯಂತೆ, ಕೆಸರಲರಳಿದ ನೈದಿಲೆಯ ಹೂವಂತೆ ನಿನ್ನ ಸ್ವಚ್ಛ ಆಗಸದ ಶುಭ್ರ ಮನ ನನ್ನಾಸೆಯ ಹೂವೇ..ನಾ ನಿನಗೇ ಕಾವೇ..ಓ ನನ್ನ ಜೀವವೇ.

        ಗಾಂಡೀವಿಗೆ ಮಾಧವನು ಜೊತೆಯಾದಂತೆ ನಿನ್ನ ಬದುಕ ರಥವನೆಳೆವೆ, ಪ್ರತಿ ಕ್ಷಣದಲೂ ಸಂತಸವನುಣಬಡಿಸುವೆ ಹನಿಬಿಂದುವೇ ನಿನ್ನ ಬುತ್ತಿಯಲಿ ನಾನಮೃತದ ತುತ್ತಾಗಿ. ಬಡತನ ಸಿರಿತನಗಳ ಮರೆತು ಪ್ರಿಯತಮನೊಳಗೊಂದಾಗು, ಜಾತಿ ಮತ ಭೇದದ ಬೇರುಗಳನು ಕಿತ್ತೆಸೆದು, ಪ್ರೇಮವೆಂಬ ಸಸಿಯ ನೆಟ್ಟು ಜಗವ ಹಸಿರಾಗಿಸೋಣ. ಅದಕೆ ಪ್ರೀತಿಯ ನೀರುಣಿಸಿ, ಜತೆಯಾಗಿ ಆರೈಕೆಯ ಗೊಬ್ಬರದಿ ಪೋಷಿಸೋಣ. ಜಗವೆಲ್ಲ ಹಸಿರಾದಂತೆ ಜನಮನವೆಲ್ಲ ಪ್ರೀತಿಯ ಫಲ ತಿನ್ನುವಂತಾಗಲಿ, ಪ್ರೇಮದ ಹೂವರಳಿ ನಿನ್ನ ಮುಡಿ ಸಿಂಗಾರಗೊಳ್ಳಲಿ. ಭಾವದಲೆಗಳು ಪ್ರೇಮಸಾಗರದಲಿ ತೇಲುತಲಿ, ದ್ವೇಷ ಮುಳುಗಿ, ಸ್ನೇಹ ಈಜಾಡಲಿ ನಮ್ಮ ಬಾಳ್ವೆಯ ತೆರದಿ, ಏನಂತೀಯಾ ಮನದ ನಯನವೇ?
    ಮೋಸ-ವಂಚನೆಗಳ, ಅಂಧಕಾರಗಳೋಡಿಸಿ, ಸ್ನೇಹಬಾಂಧವ್ಯವ ಬೆಸೆದು, ದೇಶ-ದೇಶಗಳ ಗಡಿಯಲೆಲ್ಲ ಪ್ರೀತಿ ತರಂಗವನೆಬ್ಬಿಸಿ, ಗಡಿಯ ಸೈನಿಕರಿಗೊಂದಿಷ್ಟು ದಿನ ಆರಾಮದುಸಿರು ಕೊಟ್ಟು, ಹೊಲದಿ ಸರ್ವ ಜನಕೆ ಊಟವನು ಬೆಳೆಸುತಿಹ ರೈತನೆದೆಯಲಿ ಧರೆಯ ಪ್ರೀತಿಯನುಕ್ಕಿಸಿ ಲೋಕದ ಜನಕೆ ಪ್ರೀತಿಯ ತುತ್ತನುಣಬಡಿಸುವ ಕಾಯಕವನು ಮಾಡುತಲಿ ಜಗಕೆ ಪ್ರೀತಿ ಪಾಠವ ಕಲಿಸುವ ಗುರುವಿನಂತಾಗಿ, ಪ್ರೀತಿಮಹಲುಗಳ ಕಟ್ಟುವ ಅಭಿಯಂತರರಾಗಿ, ಪ್ರೇಮ ಹೃದಯಗಳ ಜೋಡಿಸುವ ವೈದ್ಯರ ತೆರದಿ ಬಾಳಲು ಬಾಳಕತ್ತಲೆಯನೋಡಿಸಲು ಸೂರ್ಯೋದಯದಂತೆ ಆಗಮಿಸುವೆಯಾ ಈ ಇಳೆಗೆ ಇನನಾಗಿ, ಈ ಕಳೆ ತೊಲಗಿಸೊ ಮಳೆಯಾಗಿ ತಂಪೆರೆಯೊ ಜಲವಾಗಿ ಓ ಪ್ರೇಮದಗಂಗೆಯೇ?
         
       ಇಂತಿ ನಿನ್ನ ಹೃದಯ.

 ಹೃದಯದಿಂದ ಹೃದಯಕ್ಕೆ…ಹೃದಯದ ಉಸಿರ ದಾರಿಯಲಿ….
@ಪ್ರೇಮ್@
01.02.2021

ಶುಕ್ರವಾರ, ಜನವರಿ 29, 2021

2020 ಅವಲೋಕನ

2020-ಅವಲೋಕನ

ಈ ಹೊಸ ವರ್ಷವಾದರೂ ಚೆನ್ನಾಗಿರಲೆಂದು ಪ್ರತಿ ಆಂಗ್ಲ ಕ್ಯಾಲೆಂಡರಿನ ಹೊಸ ವರ್ಷ ಬಂದಾಗ ಆಶಿಸುವುದು ತಪ್ಪಲ್ಲ. ಅಂತೆಯೆ 2020ನ್ನು ಬರಮಾಡಿಕೊಂಡಾಯ್ತು. ಜನವರಿಯಿಂದ ನಾವೆಲ್ಲ ಎಸ್.ಎಸ್.ಎಲ್.ಸಿ ತರಗತಿಗಳಿಗೆ ಹೆಚ್ಚು ಫೋಕಸ್ ಮಾಡ್ತೇವೆ. ಸ್ಕೋರಿಂಗ್, ಪರೀಕ್ಷಾ ತಯಾರಿ, ರಾತ್ರಿ ತರಗತಿಗಳು, ಚೆನ್ನಾಗಿ ಕಲಿಯುವವರಿಗೆ ಸ್ಕೋರಿಂಗ್ ಐಡಿಯಾಸ್, ಕಲಿಕೆಯಲ್ಲಿ ಹಿಂದುಳಿದವರಿಗೆ ಉತ್ತೀರ್ಣತೆಯ ಟಿಪ್ಸ್, ಪ್ರತಿ ವಿಷಯಗಳಲ್ಲೂ ಉತ್ತಮ ಅಂಕಗಳೊಂದಿಗೆ ಎಲ್ಲಾ ಮಕ್ಕಳನ್ನು ಪಾಸ್ ಮಾಡಿಸುವ, ಶಾಲೆಗೆ ಉತ್ತಮ ಹೆಸರು ತರುವ, ಉತ್ತಮ ಬ್ಯಾಚನ್ನು ಶಾಲೆಯಿಂದ ಹೊರಗೆ ಕಳಿಸುವ ಗುರುತರ ಜವಾಬ್ದಾರಿಯ ನೆರಳಿನಲ್ಲೆ ಪ್ರತಿ ಹೊಸ ವರುಷದಂತೆ ಇದನ್ನೂ ಎದಿರುಗೊಂಡೆವು. ಆ ಕಷ್ಟ ಪಟ್ಟ ಕೆಲಸ ಇನ್ನೇನು ಕೊನೆಗೊಳ್ಳಬೇಕು, ಪರೀಕ್ಷೆಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಮೊದಲೇ ಚೈನಾದಲ್ಲಿ ಹುಟ್ಟಿದ್ದ ಕೊರೋನಾ ವೈರಸ್ ಭಾರತ, ಕರ್ನಾಟಕಕ್ಕೂ ವಕ್ಕರಿಸಿಕೊಂಡು ಬಿಟ್ಟಿತು. ನೈಟ್ ಕರ್ಫ್ಯೂ, ಸೆಲ್ಫ್ ಕ್ವಾರೆಂಟೈನ್, ಮಧ್ಯಾಹ್ನದ ನಂತರ ಮನೆಯೊಳಗೆ ಹೀಗೆ 21 ದಿನ ಸಂಪೂರ್ಣವಾಗಿ ಒಬ್ಬಳೇ ಮನೆಯೊಳಗೆ ಕಳೆಯುವಂತಾಯ್ತು! ಆ ಇಪ್ಪತ್ತೊಂದು ದಿನಗಳು ಬದುಕಿನಲ್ಲಿ ಬಹಳ ಕಲಿತೆ. ನನ್ನ ಹವ್ಯಾಸಗಳು ನನ್ನ ಜತೆಯಾದವು. ಹಳೆ ಬಟ್ಟೆಯಿಂದ ಡೋರ್ ಮ್ಯಾಟ್ ತಯಾರಿಸುವುದು, ಬ್ಯಾಗ್ ಗಳ ತಯಾರಿಕೆ, ಟೈಲರಿಂಗ್ ಹಾಗೂ ಎಂಬ್ರಾಯ್ಡರಿಯಲ್ಲಿ ಹೊಸ ಹೊಸ ಪ್ರಯೋಗಗಳು, ಡ್ರಾಯಿಂಗ್ ಡಿಸೈನ್ ಗಳ ರಚನೆ, ಅಂಕಣ ಬರಹ, ಕವಿಗಳ ಗುಂಪಿನಲ್ಲಿ ಬರಹ, ಹರಟೆ, ಕಾಂಪಿಟೇಶನ್ ಇವು ಸಮಯವನ್ನು ಬಹಳಷ್ಟು ವೇಗದಲ್ಲಿ ಕಳೆಯುವಂತೆ ಮಾಡಿದವು. 
     ಏಪ್ರಿಲ್ 22ಕ್ಕೆ ಅಚಾನಕ್ಕಾಗಿ ನನ್ನ ಅತ್ತೆಯವರು ತೀರಿಕೊಂಡ ಸುದ್ದಿ ಬಂತು. ನಮ್ಮ ಮನೆಗೇ ನನಗೆ ಹೋಗಲು ಅನುಮತಿಯಿರಲಿಲ್ಲ. ಮೂರ್ನಾಲ್ಕು ಎಎಸ್ಐಗಳ ಸಹಾಯದಿಂದ ಹೇಗೇಗೋ ಕುಟುಂಬದ ಸ್ನೇಹಿತರ ಸಹಾಯ ಪಡೆದು ಮನೆ ಸೇರಿಕೊಂಡು ಅಂತಿಮ ವಿಧಿ ವಿಧಾನಗಳ ನೆರವೇರಿಸಿದ್ದಾಯ್ತು. ತದನಂತರ ನಮಗೆ ರಜೆಯೇನೂ ಇರಲಿಲ್ಲವಲ್ಲ, ಅಮ್ಮನ ಮನೆ ಉಡುಪಿ ಜಿಲ್ಲೆ, ಕೆಲಸ ದಕ್ಷಿಣ ಕನ್ನಡ ಜಿಲ್ಲೆ, ಗಂಡನ ಮನೆ ಚಿಕ್ಕಮಗಳೂರು ಜಿಲ್ಲೆ! ಮಗಳು ಅಜ್ಜಿ ಮನೇಲಿ, ಗಂಡ ಮನೇಲಿ, ನಾನು ಸುಳ್ಯದಲ್ಲಿ ಬಾಡಿಗೆ ಮನೇಲಿ ಬಾಕಿಯಾದ ಕಾರಣ ಆಚೀಚೆ ಹೋದಾಗೆಲ್ಲ ಕೈಗೆ ಸೀಲ್ ಹಾಕಿಸಿಕೊಂಡು ಎರಡೆರಡು ಬಾರಿ ಹದಿನಾಲ್ಕು ದಿನಗಳ ಕ್ವಾರೆಂಟೇನ್ ಮಾಡಿಕೊಂಡದ್ದಾಯ್ತು! 
      ಕೊರೋನ, ಸ್ಯಾನಿಟೈಝರ್, ಫೇಸ್ ಮಾಸ್ಕ್,ಕ್ವಾರೆಂಟೇನ್ ಎಂಬ ಹೊಸ ಹೊಸ ಪದಗಳ ಕಲಿತು ಪ್ರಾಯೋಗಿಕವಾಗಿ ಬಳಸಿದ್ದೂ ಆಯ್ತು! ಸರಕಾರದ ಆದೇಶದಂತೆ ಜೀವವನ್ನೇ ಪಣಕ್ಕಿಟ್ಟು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದ್ದೂ ಆಯ್ತು. ಪ್ರತಿನಿತ್ಯ ಇನ್ನೂರು-ಇನ್ನೂರೈವತ್ತು ಕಿಲೋಮೀಟರ್ ಜರ್ನಿ ಮಾಡಿ ಮಂಗಳೂರಿಗೆ ಹೋಗಿ ಪೇಪರ್ ಗಳ ಇವ್ಯಾಲ್ಯೂವೇಶನ್ ಮಾಡಿ ರಿಸಲ್ಟ್ ಕೊಟ್ಟದ್ದೂ ಆಯ್ತು. ಶಾಲೆಗಳಿಗೆ ಅಡ್ಮಿಶನ್ ಕೂಡಾ ಆಯ್ತು, ಮನೆಮನೆಗೆ ಹೋಗಿ ವಿದ್ಯಾಗಮ ಮಾಡಿದ್ದೂ ಆಯ್ತು. ಕೋವಿಡ್ ಡ್ಯೂಟಿ ನಿರ್ವಹಿಸಿದ್ದೂ ಆಯ್ತು. ವಿದ್ಯಾರ್ಥಿಗಳು ಇಲ್ಲದ ಕಾರಣ ಶಾಲೆಯಲ್ಲಿ ನಾವೇ ಅಡಿಗೆ, ಕ್ಲೀನಿಂಗ್, ತೊಳೆಯುವ, ಗುಡಿಸುವ ಒರೆಸುವ, ಬಲೆ ತೆಗೆಯುವ, ಗಾರ್ಡೆನಿಂಗ್ ಸರ್ವ ಕಾರ್ಯಗಳನ್ನು ಮಾಡಿದ್ದೂ ಆಯ್ತು. ಆನ್ ಲೈನ್ ಪಾಠಗಳನ್ನು ಕೊಟ್ಟದ್ದೂ ಆಯ್ತು!
ಇದೆಲ್ಲವೂ 2020ರ ಹೊಸ ಅನುಭವಗಳೇ. ಕೊರೋನದ ನಡುವೆ ವರ್ಷದ ಕೊನೆಯಲ್ಲಿ ಕೊರೋನದ ಮರಿ ಬಂದು ಹಾಹಾಕಾರ ಎಬ್ಬಿಸುತ್ತಿದ್ದರೂ ಗ್ರಾಮ ಪಂಚಾಯತ್ ಚುಣಾವಣೆ ಮಾಡಿ ಮತಗಳ ಎಣಿಸಿ ಲೆಕ್ಕಾಚಾರ ಕೊಟ್ಟದ್ದೂ ಆಯ್ತು. 
   ಕೊರೋನ ಬಂದು ಹಲವಾರು ನೀತಿ ಪಾಠ ಕಲಿಸಿತು. 
1  ಒಂದೇ ತಾಲೂಕಿನ ಸರಕಾರಿ ನೌಕರರು ಯಾವುದೇ ತೊಂದರೆ, ಗಲಾಟೆಗಳಿಲ್ಲದೆ ತಮ್ಮ ತಾಲೂಕಿನೊಳಗೆ ತಾವೇ ಚುನಾವಣೆ ನಡೆಸಿ, ಫಲಿತಾಂಶ ಕೊಡಲು ಅರ್ಹರಾಗಿರುವರು. ಶಾಂತಿಯುತ ಮತದಾನಕ್ಕಾಗಿ ಬೇರೆ ಬೇರೆ ತಾಲೂಕುಗಳಿಗೆ ಕಳುಹಿಸಿ ಸರಕಾರಿ ನೌಕರರನ್ನು ಗೋಳುಹೊಯಿಸಬೇಕಾಗಿಲ್ಲ.
2. ತಮ್ಮ ಮನೆ, ಕುಟುಂಬ ಮಕ್ಕಳ ಜೊತೆ ಹಾಯಾಗಿ ಸಮಯ ಕಳೆದು ಅವರ ಪ್ರೀತಿಯನ್ನು ಅನುಭವಿಸಿ ಜೀವನದ ಮತ್ತೊಂದು ಮುಖದ ಅನಾವರಣವಾಯ್ತು.
3. ತಿಂಗಳುಗಟ್ಟಲೆ ಡೇಶಿಫ್ಟ್, ನೈಟ್ ಶಿಫ್ಟ್ ಗುಡಿಯದಿದ್ದರೂ, ಧಾವಂತದ ಓಡಾಟವಿಲ್ಲದಿದ್ದರೂ ಯಾರ ಜೀವನವೂ ಕೊನೆಯಾಗಲಿಲ್ಲ. ಯಾವ ಬಡವನೂ ಊಟಕ್ಕಿಲ್ಲದೆ ಸಾಯಲಿಲ್ಲ.
4. ತಮ್ಮ ತಲೆ ಓಡಿಸಿ, ತಮ್ಮ ತಮ್ಮ ಮನೆಯ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವಂತಾಯ್ತು. 
5. ಕುಟುಂಬ, ಸಂಸಾರದ ಎಲ್ಲರೂ ಒಟ್ಟಾಗಲು ಸಹಾಯಕವಾಯಿತು. ಎಷ್ಟೋ ವರ್ಷಗಳಿಂದ ನೋಡದ ಬಂಧುಗಳ ಮುಖ ನೋಡುವಂತಾಯ್ತು.
6. ಮಕ್ಕಳಿಗೆ ಹಳ್ಳಿಯ ಅಜ್ಜಿಮನೆಯ ದರ್ಶನವಾಯಿತು.
7. ಮದುವೆ, ಕೋಲ, ದೈವದರ್ಶನ, ಪೂಜೆ, ಗೃಹಪ್ರವೇಶ, ನಿಶ್ಚಿತಾರ್ಥ,ಸೀಮಂತ ಮೊದಲಾದ ಸರ್ವ ಸಮಾರಂಭಗಳನ್ನೂ ಸಿಂಪಲ್ಲಾಗಿ ನಡೆಸಬಹುದೆಂಬ ಅರಿವಾಯ್ತು.
8. ಕಷ್ಟ ಕಾಲದಲ್ಲಿ ನಮ್ಮ ಕುಟುಂಬ ವರ್ಗದವರೂ ಕೂಡ ನಮ್ಮ ಸಹಾಯಕ್ಕೆ ಬರಲಾರರು, ನಮಗೆ ನಾವೇ, ನಾವು ಯಾರನ್ನೂ ಅವಲಂಬಿಸಿರಬಾರದೆಂಬ ಪಾಠ ಕಲಿತಂತಾಯ್ತು.
9. ತಾವು ಸಾಯುತ್ತೇವೆಯೆಂಬ ಭಯ ಬಂದರೆ ಮಾನವ ಯಾರ ಬಗ್ಗೆಯೂ ಚಿಂತೆ ಮಾಡಲಾರ, ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ. ತಾನು, ತನ್ನದು, ತನಗೆ ಎಂಬುದೇ ಬದುಕಿನ ಮಂತ್ರವಾಯ್ತು. ಯಾರು ಬಿದ್ದರೂ, ಕಷ್ಟದಲ್ಲಿ ನರಳಾಡಿದರೂ ಸಹಾಯ ಹಸ್ತ ಚಾಚುವವರಾರೂ ಇಲ್ಲ ಮುಂದಕ್ಕೆ ನೆನಪಿರಲಿ!
10. ಪಕ್ಕದ ಮನೆ, ಆಚೀಚೆ ಮನೆ, ಬಂಧುಗಳು ಯಾರೂ ಯಾರಿಗೂ ಸಹಾಯ ಮಾಡದ ಪರಿಸ್ಥಿತಿ ಬಂದೊದಗಿತು.
11. ರೈತ, ಕೃಷಿಯ ಬದುಕೇ ಶಾಶ್ವತವೆಂಬ ವಿಷಯ ಸರ್ವರಿಗೂ ಅರಿವಾಯ್ತು.
    2020ನೇ ಇಸವಿ ಜನಜೀವನ ಅಸ್ತವ್ಯಸ್ತವಾದರೂ ಆಯುರ್ವೇದ ಪದ್ಧತಿಯನ್ನೊಪ್ಪದ ಜನರೂ ಕಷಾಯ ಕುಡಿಯಲು ಪ್ರಾರಂಭಿಸಿದರು! ಆರೋಗ್ಯ, ಕ್ಲೀನಿಂಗ್ ಕಡೆ, ತಮ್ಮ ದೇಹದ ಕಡೆ ಗಮನ ಕೊಟ್ಟರು. ಮಾಸ್ಕ್ ಬಳಕೆಯಿಂದ ಧೂಳಿನ ಅಲರ್ಜಿ ಕಡಿಮೆಯಾಯಿತು. ವಾಹನಗಳ ನಿಲುಗಡೆಯಿಂದ ಪರಿಸರ ನಾಶ, ವಾಯುಮಾಲಿನ್ಯ ಕಡಿಮೆಯಾಗಿ, ಪೆಟ್ರೋಲ್, ಡೀಸಲ್ ಉಳಿಕೆಯಾಯ್ತು. ತನ್ನನ್ನು ತಾನು ಸರಿಪಡಿಸಿಕೊಳ್ಳಲು ಭೂಮಿಗೊಂದಿಷ್ಟು ಸಮಯ ಸಿಕ್ಕಿತು! 
  ಪರಿಸರದ ಮಾಲಿನ್ಯ ಕಡಿಮೆಯಾದಂತಾಯಿತು. ಗಾಳಿ, ನೀರು, ಮಣ್ಣು ಒಂದಷ್ಟು ದಿನ ನೆಮ್ಮದಿಯಿಂದ ಉಸಿರಾಡಿದವು. 
  ಒಟ್ಟಿನಲ್ಲಿ 2020 ಹೊಸ ಅನುಭವ ನೀಡಿದ ಮರೆಯಲಾಗದ, ಹೊಸ ಪಾಠ ಕಲಿಸಿದ, ಅತಿಯಾದರೆ ಅಮೃತವೂ ವಿಷವೆಂದು ತಿಳಿಸಿದ ವರುಷವೆಂದರೆ ತಪ್ಪಾಗಲಾರದು. ನೀವೇನಂತೀರಿ?
@ಪ್ರೇಮ್@
31.12.2020

ಶಾಯರಿಗಳು

ಶಾಯರಿ-1

ನೋಡುತ್ತಾ ಕುಳಿತಿದ್ದೆ 
ಅವಳ ಕಣ್ಣಿನ ಕಾಡಿಗೆ!
ಗಮನಿಸಲೇ ಇಲ್ಲ ಹಿಂದೆ
ಅವಳಪ್ಪ ಹಿಡಿದು ನಿಂತಿದ್ದ ಬಡಿಗೆ!!

ಶಾಯರಿ-2

ನೋಡುತ್ತಾ ಕುಳಿತಿದ್ದೆ
ಅವಳಂದದ ನಗು!
ಅರಿಯಲೇ ಇಲ್ಲ ನಾನು
ಅಂದೇ ಕಳಕೊಂಡ ನನ್ನ ನಸುನಗು!!!
@ಪ್ರೇಮ್@
11.01.2021

ಆಪ್ತ ರಕ್ಷಕ

ಆಪ್ತ ರಕ್ಷಕ

ನೆರಳಿನಂತೆ ಕೈ ಬಿಡದೆ ಕಾಯುತಿರುವ ತಂದೆ
ಶಿವನೇ ನೀನೆನ್ನ ಅನಾಥ ರಕ್ಷಕ ಗುರುವೇ..

ಪ್ರೀತಿಯ ಭಕ್ತಿಗೆ ಒಲಿಯುವೆ ಜಗದಿ
ನೀತಿಯ ಕಾರ್ಯಕೆ ಹರಸುವೆ ಮನದಿ
ಜ್ಯೋತಿಯ ಬೆಳಗಿಪೆ ಶಕ್ತಿಯ ನೀಡು
ಮುಕ್ತಿಯ  ಶಾಂತಿಯ ಪಾಡನು ಬೇಡುವೆ

ಪರರ ಬಗೆಗೆ ಉತ್ತಮ ಭಾವನೆ
ಇತರರ ಜೊತೆಗೆ ಧನಾತ್ಮಕ ಯೋಚನೆ
ಹರನಲಿ ನಂಬಿಕೆ ಕಳೆಯಲು ಬಾರದು
ಬದುಕಲಿ ಕಂದಕವಿರದೆ ಬಾಳಲಾಗದು..

ದೇವನೆ ಉತ್ತಮ ಮನವನು ಕರುಣಿಸು
ಭಾವನೆ ಅಳಿಸದೆ ಬೆಳೆಸಿ ನೀ ನಡೆಸು
ಕಾಮನೆ ಕೆರಳದೆ ಇರಲು ನೀ ಹರಸು
ಪ್ರಾರ್ಥನೆ ನಮ್ಮಯ ಸದಾ ನೀ ಆಲಿಸು..
@ಪ್ರೇಮ್@
25.01.2021

ಮ ಕಾರ ದಲಿ...

ಮಕಾರದಲಿ...

ಮಂದ ಮನದ ಮಂಗ ಕೇಳೊ
ಮಂಜಿನಂಥ ಮೊಗವ ತಾರೊ
ಮುಂದೆ ಹಿಂದೆ ನೋಡಿ ಕಲಿಯೊ
ಮೋಸ ಮಾಡಿ ಬದುಕಲಾರೆ ತಿಳಿಯೊ..

ಮಿಂದು ಮಡಿಯನುಟ್ಟು ಮತ್ತೆ
ಮೋಹದಲ್ಲಿ ಮತ್ತೆ ಮತದ  ಕಂತೆ
ಮೈಮಾಟದಿಂದ ಮಾಯ ನಿಜದ ಒರತೆ
ಮೋಸದಂತೆ ಮಿಥ್ಯ ಮರೆಯಲಾರದ ಕತೆ

ಮಗನ ಹಾಗೆ ಮಗಳು ಸಮಾನ
ಮಗಧವೆಂಬ ರಾಜ್ಯದ ಕತೆಯು ಜಮಾನ
ಮುಗುದೆಯೊಡನೆ ಮನದ ಮಾತ ಮನಸು
ಮನದ ಮಾತು ಮಸೆಯ ಬೇಡ..

ಮುದುಕರಾಗೊ ಬಯಕೆ ಇಲ್ಲ
ಮನಸಾರೆ ಬದುಕೊ ಭಯವೆ ಎಲ್ಲ
ಮಕರಂದ ಹೀರೊ ದುಂಬಿಗೆಲ್ಲ
ಮೌನವಾಗಿ ಬೀಜಕೆ ಅಣಿಯಲ್ಲ!
@ಪ್ರೇಮ್@
10.12.2020

ತ್ರಿಪದಿಗಳು

ತ್ರಿಪದಿಗಳು

ಮನುಜನೆ ನಿಜವನು ಹೇಳಲು ಜನಿಸಿಹೆ
ತನುವದು ಸನಿಹದಿ ಬಾಳಲು ತವಕಿಸೆ
ಕನಸಲು ಕಾಯಲು ದೇವನೆ ಬೇಕಿದೆ

ಮನದಲಿ ಇರುವುದ ಹೇಳಲು ಬೇಕಿದೆ
ಜನರಲಿ ಕೋಪವ ತಡೆಯಲು ಬೇಕಿದೆ
ದನಗಳ ಹಾಗೆಯೆ ಸಹಕಾರ ಬೇಕಿದೆ

ಮನೆಯಲು ಪ್ರೀತಿಯು ಸಿಗುವುದು ಬೇಕಿದೆ
ಕೊನೆಯ ವರೆಗೂ ಮನಸದು ಬೇಕಿದೆ
ತನ್ಮಯತೆ ಭವದಲಿ ಆಳಲು ಬೇಕಿದೆ..
@ಪ್ರೇಮ್@
11.12.2020

ಕುಸುಮ

ಕುಸುಮ

ಕುಸುಮವದು ಬಂದಿಹುದು
ಕಸುವ ತಾ ಮೆರೆಸುತಲಿ
ಬಸವನೂ ಬರೆಯಬಹುದೇ ತನ್ನ ನು
ಮಸೆಯುತಲಿ ಲೇಖನಿಯ
ಹಸಿಹಸಿಯೆ ಬಳಸುತಲಿ
ಕಸುವದೆಂದು ಕವಿಗೆ ಬರೆಯಲೇನು
@ಪ್ರೇಮ್@
12.12.2020